ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸೂರು ತಾಲ್ಲೂಕಿನಲ್ಲಿ ಸಮೃದ್ಧ ಶುಂಠಿ

ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸುವಂತೆ ತಾಲ್ಲೂಕಿನ ರೈತರ ಆಗ್ರಹ
Last Updated 4 ಸೆಪ್ಟೆಂಬರ್ 2020, 3:06 IST
ಅಕ್ಷರ ಗಾತ್ರ

ಹುಣಸೂರು: ವಾಣಿಜ್ಯ ಬೆಳೆ ಶುಂಠಿ ಈ ಬಾರಿ ಸಮೃದ್ಧವಾಗಿ ಬೆಳೆದಿದ್ದು, ತಾಲ್ಲೂಕಿನ ರೈತರು ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನ ರೈತರು ತಂಬಾಕಿಗೆ ಪರ್ಯಾಯವಾಗಿ ಶುಂಠಿ ಬೇಸಾಯಕ್ಕೆ ಒಲವು ತೋರಿದ್ದಾರೆ. 2019ರಲ್ಲಿ 980 ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿತ್ತು, 2020ರಲ್ಲಿ 2,400 ಹೆಕ್ಟೇರ್‌ ಪ್ರದೇಶಕ್ಕೆ ಅದು ವಿಸ್ತರಣೆಯಾಗಿದೆ.

‘ದಶಕದ ಹಿಂದೆ ಅಲ್ಪ ಪ್ರಮಾಣದಲ್ಲಿ ರೈತರು ಶುಂಠಿ ಬೆಳೆದು ಸ್ಥಳೀಯವಾಗಿ ಮಾರುತ್ತಿದ್ದರು. ನಂತರ ಶುಂಠಿ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಎಚ್‌.ಡಿ.ಕೋಟೆ, ಹುಣಸೂರು, ಕೆ.ಆರ್‌.ನಗರ ಹಾಗೂ ಪಿರಿಯಾಪಟ್ಟಣ ಭಾಗದಲ್ಲಿಅಂದಾಜು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಇದಕ್ಕೆ ಪೂರಕವಾದ ಮಾರುಕಟ್ಟೆ ವ್ಯವಸ್ಥೆ ಬೇಕಾಗಿದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸುತ್ತಾರೆ.

‘ಮುಂಬೈ, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಶುಂಠಿ ಮಾರುಕಟ್ಟೆ ಇದ್ದು, ಸ್ಥಳೀಯ ಬೆಳೆಗಾರರು ದಲ್ಲಾಳಿಗಳ ಮೂಲಕ ಮಾರಬೇಕಾಗಿದೆ. ಮಾರುಕಟ್ಟೆ ದರ ತಿಳಿಯದೇ ಎಲ್ಲವೂ ನಂಬಿಕೆ ಮೇಲೆ ವ್ಯವಹರಿಸುವ ಪರಿಸ್ಥಿತಿ ಇದೆ’ ಎಂದು ರೈತ ಸದಾಶಿವ ಹೇಳುತ್ತಾರೆ.

‘ಹೆಕ್ಟೇರ್‌ಗೆ ಸುಮಾರು ₹ 3 ಲಕ್ಷ ಬಂಡವಾಳ ಹಾಕಿ ಬೆಳೆದ ಶುಂಠಿಗೆ ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದೇವೆ. ಕಳೆದ ಸಾಲಿನಲ್ಲಿ 60 ಕೆ.ಜಿ ಚೀಲ ಹಸಿ ಶುಂಠಿಗೆ ಕನಿಷ್ಠ ₹3,000 ದಿಂದ ₹3600 ಇತ್ತು. ಈ ಬಾರಿ ₹ 850 ರಿಂದ ₹1,000ಕ್ಕೆ ಕುಸಿದಿದೆ. ದರ ಹೆಚ್ಚಾದಲ್ಲಿ ರೈತ ಬದುಕುತ್ತಾನೆ. ಒಂದು ರೀತಿಯಲ್ಲಿ ಇದು ಕುದುರೆ ಜೂಜು ಇದ್ದಂತೆ’ ಎಂದು ಶುಂಠಿ ಬೆಳೆಗಾರ ಈಶ್ವರೇಗೌಡ ಮಾಹಿತಿ ನೀಡಿದರು.

‘ಹನಗೋಡು ಭಾಗದಲ್ಲಿ ಶುಂಠಿ ಬಂಪರ್ ಇಳುವರಿ ಬಂದಿದ್ದು, ಹೆಕ್ಟೇರ್‌ಗೆ ಕನಿಷ್ಠ 300 ಚೀಲ ಇಳುವರಿ ಬರಲಿದೆ ಎಂಬ ಲೆಕ್ಕಾಚಾರವಿದೆ’ ಎಂದು ನೇರಳಕುಪ್ಪೆ ಮಹದೇವ್ ತಿಳಿಸಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ಮಾತನಾಡಿ, ‘ಶುಂಠಿ ಬೆಳೆಗೆ ಬೆಂಬಲ ಬೆಲೆ ಇಲ್ಲ. ಎಪಿಎಂಸಿಯಲ್ಲಿ ಮಾರುವ ಬೆಳೆಗೆ ಮಾತ್ರ ಸರ್ಕಾರ ಬೆಂಬಲ ಬೆಲೆ ನೀಡುತ್ತಿದ್ದು, ಈ ಬೆಳೆಗೆ ಸ್ಥಳೀಯ ಮಾರುಕಟ್ಟೆ ಇಲ್ಲವಾದ ಕಾರಣ ಬೆಂಬಲ ಬೆಲೆ ನಿಗದಿಯಾಗಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT