ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ’ಕೆರೆ ತುಂಬಿಸಿದ ಗುಡ್ಡದ ಗಂಗೆ

ಕೃಷ್ಣಕುಮಾರ ಭಾಗವತ ಎಂಬ ಚೊಚ್ಚಲೆಚ್ಚರದ ನೀರಗಂಟಿ
Last Updated 16 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

‘ನಾವು ಮನಸ್ಸು ಮಾಡಬೇಕ್ರಿ; ಅರ್ಧ ಕೆಲಸ ಅಲ್ಲೇ ಆದ್ಹಂಗ. ಬಾಕೀದ್ದು ಪ್ರಕೃತಿ ತಾನ ಕೈಜೋಡಸ್ತದ.. ಬಿತ್ತಿದ ಒಂದ ಬೀಜಾನ್ನ ನೂರ್ಮಡಿ ಮಾಡಿದ್ಹಂಗ.. ಗೆಲ್ಲಸ್ತದ. ಮನಸ್ಸಿದ್ದರೆ ನೀರ ನೆಮ್ಮದಿ ಸಾಧಿಸುವ ಮಾರ್ಗವಿದೆ’ ಎಂಬುದು ಕೆರೆಕಟ್ಟಿ ಸಾಬೀತು ಪಡಿಸಿರುವ ಕೃಷ್ಣಕುಮಾರ ಭಾಗವತ ಅವರ ಅನುಭವದ ಮಾತು. ಅವರ ಮಳೆ ನೀರ ಕೆರೆ ಒಂದು ಪ್ರಾಯೋಗಿಕ, ಪರಿಸರ ಸ್ನೇಹಿ ಮಾದರಿ.

ತಿಂಗಳುಗಳ ಹಿಂದೆ ಜಡಿ ಮಳೆಗೆ ತೋಟಪಟ್ಟಿಯ ಇಕ್ಕೆಲದ ಗುಡ್ಡಗಳಿಂದ ರಭಸವಾಗಿ ಇಳಿದು, ಅಷ್ಟೇ ವೇಗದಲ್ಲಿ ಕೊಳ್ಳಗಳ ಮೂಲಕ ನೀರು ಓಡಿ ಹೋಗುತ್ತಿತ್ತು. ಆ ಲಕ್ಷಾಂತರ ಗ್ಯಾಲನ್ ನೀರನ್ನು ಒಂದೂವರೆ ಎಕರೆ ಕೆರೆಯಲ್ಲಿ ತಡೆದು ನಿಲ್ಲಿಸಿದ್ದಾರೆ ಕುಮಾರ ಭಾಗವತ್. ಇದರಿಂದ ಮೂರು ಕೊಳವೆ ಬಾವಿಗಳಿಗೆ ಜಲ ಮರು ಪೂರಣವಾಗಿದೆ. ವರ್ಷಪೂರ್ತಿ 20 ಎಕರೆಯಲ್ಲಿ ಕೃಷಿ ಕಾಯಕವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ. ಈಗ ತಮ್ಮ ನೀರ ನೆಮ್ಮದಿ ಗಳಿಸುವ ಜಲಪಾತ್ರೆ ನಿರ್ಮಾಣದಿಂದ ಗಮನ ಸೆಳೆದಿದ್ದಾರೆ.

ಕೃಷ್ಣಕುಮಾರ ಭಾಗವತ ವೃತ್ತಿಯಿಂದ ಜೆ.ಓ.ಸಿ. ಕೋರ್ಸ್‌ ನಲ್ಲಿ ಹೈನುಗಾರಿಕೆಯ ಉಪನ್ಯಾಸಕರು. ಸದ್ಯ ನಿಗದಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರಭಾರಿ ಉಪನ್ಯಾಸಕ. ಪ್ರವೃತ್ತಿಯಿಂದ ಜೇನು ಕೃಷಿಕ. ಮುಗದ ಬಳಿಯ ಮಂಡ್ಯಾಳದಲ್ಲಿ ಅಪರ್ಣಾ ಹಾಗೂ ಪ್ರಭುಶಂಕರ ಸೊನ್ನದ ಎಂಬ ಆತ್ಮೀಯರ 52 ಎಕರೆ ಜಮೀನಿನಲ್ಲಿ ತನು-ಮನದಿಂದ ಕೃಷಿ ದೇಖ್‍ರೇಖ್‍ನಲ್ಲಿ ತೊಡಗಿರುವ ಕುಮಾರ, ಸದಾ ಪ್ರಯೋಗಶೀಲರು. ನಿಜಾರ್ಥದಲ್ಲಿ ಪ್ರಾಯೋಗಿಕ ಪರಿಸರವಾದಿ!

ಸೊನ್ನದ ಅವರು ಜಮೀನು ಖರೀದಿಸಿದ 10 ವರ್ಷಗಳಲ್ಲೇ ಅದಕ್ಕೊಂದು ಸ್ವರೂಪ ಕೊಟ್ಟಿರುವ ಕುಮಾರ, ಮಲೆನಾಡ ಸೆರಗಿನ ಹಳ್ಳಿ ಮಂಡ್ಯಾಳದಲ್ಲಿ ಕಲ್ಲು-ಕ್ವಾರಿ, ಮಟ್ಟಿ ಮಣ್ಣಿನ ಪಾತಳಿಯ ನೆಲವನ್ನು ಬಗೆದು, ಅಗೆದು ಅನ್ನ ಬೆಳೆಯುವುದನ್ನು ಸವಾಲಾಗಿ ಸ್ವೀಕರಿಸಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದ್ದಾರೆ.

ಸತತ ಪ್ರಯತ್ನದ ಫಲವಾಗಿ ತಮ್ಮ ಜಮೀನಿನ ಒಂದು ಬದಿಯಲ್ಲಿ ಹಬ್ಬಿರುವ ಸರ್ಕಾರಿ ಗೋಮಾಳ ಹಾಗೂ ನೀಲಗಿರಿ ನೆಡುತೋಪಿನ ಗುಡ್ಡದ ಸಾಲನ್ನೇ ಆಸರೆಯಾಗಿಸಿಕೊಂಡು, ಒಂದರ್ಥದಲ್ಲಿ ಗುಡ್ಡಕ್ಕೇ ಲಾಳಿಕೆ ಅಳವಡಿಸಿದಂತೆ, ತಿಂಗಳ ಪೂರ್ತಿ ಸುರಿದ ಅಡ್ಡ ಮಳೆಯನ್ನು ಯಶಸ್ವಿಯಾಗಿ ಕೆರೆಗೆ ಹರಿಸಿಕೊಂಡು ಜಮೀನನ್ನು ನಳನಳಿಸುವಂತೆ ಮಾಡಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಕೆರೆ-ಕಟ್ಟೆಗಳ ಬದು ನಿರ್ಮಿಸುವ ಕುಶಲಕರ್ಮಿಗಳನ್ನು ಬಳಸಿಕೊಂಡು, ಸತತ ಒಂದೂವರೆ ತಿಂಗಳು ಕೆರೆಯ ಬದುವನ್ನು ಭದ್ರಗೊಳಿಸಲಾಗಿದೆ. ಗುಡ್ಡದಿಂದ ಹರಿದು ಬರುವ ನೀರು ಒಂದು ಬದಿಯಿಂದ ಕೆರೆ ಸೇರಿದರೆ, ಇಂಗಿ, ಮೈದುಂಬಿ ಕೆರೆಯ ಪಾತ್ರ ಭರಿಸಿದ ಬಳಿಕ ತನ್ನ ಉದರದಲ್ಲಿ ಕನಿಷ್ಟ 10 ತಿಂಗಳು ಕಾಪಿಡುವಂತೆ ಚಿಪ್ಪುಗಲ್ಲಿನ ಬಾಂದಾರಗಳನ್ನು ನಿರ್ಮಿಸಲಾಗಿದೆ. ಕೆರೆ ಮೈದುಂಬಿದ ಬಳಿಕ ಹೆಚ್ಚುವರಿ ನೀರು ಹರಿದು ಸರಾಗವಾಗಿ ಹೋಗುವಂತೆ, ಮುಂದೆ ಕಾಲುವೆಗಳ ಮೂಲಕ ಹೊಲಕ್ಕೆ ಸರಬರಾಜಾಗುವಂತೆ, ಇಂಗುವಂತೆ ವ್ಯವಸ್ಥೆಗೊಳಿಸಲಾಗಿದೆ.

ತೋಟದ ನೆತ್ತಿಯ ಮೇಲೆ ಈ ಕೆರೆ ರೂಪುಗೊಂಡಿದ್ದು, ಇಡೀ ಹೊಲದಲ್ಲಿ ಅಂತರ್ಜಲದ ಪ್ರಮಾಣ ಮತ್ತು ಮಟ್ಟ ಏರುಪೇರಾಗದಂತೆ ಕಾಯ್ದುಕೊಳ್ಳಬೇಕು ಎಂಬ ಮುಂದಾ ಲೋಚನೆಯಿಂದ ಈ ನಿರ್ಮಿತಿ ಗಮನ ಸೆಳೆಯುತ್ತದೆ. ಹೊಲದ ಗಟ್ಟಿ ಮಣ್ಣು, ಅಲ್ಲಿಯೇ ಲಭ್ಯವಿರುವ ಕಲ್ಲಿನ ಕ್ವಾರಿಯಿಂದ ಚಿಪ್ಪುಗಲ್ಲು ಬಳಸಿ, ಭದ್ರವಾದ ಅಟ್ಟಣಿಗೆ ಮತ್ತು ಮೀನು ಸಾಕಣೆಗೂ ಅವಕಾಶ ನೀಡುವ ಹಾಗೆ ಕೆರೆ ರೂಪುಗೊಳಿಸಲಾಗಿದೆ. ಕಳೆದ 10 ವರ್ಷಗಳಿಗೆ ಹೋಲಿಸಿದರೆ, ನಮ್ಮ ಭಾಗದಲ್ಲಿ ವಾರ್ಷಿಕ ಮಳೆ ಕನಿಷ್ಟ 400-500 ಮಿಲಿ ಲೀಟರ್ ಬಿದ್ದರೂ ಕೆರೆ ವರ್ಷದುದ್ದಕ್ಕೂ ಮೈದುಂಬಿ ನಿಂತು, ಕೃಷಿ ಕಾಯಕಕ್ಕೆ ಆಸರೆಯಾಗಲಿದೆ. ಈ ಬಾರಿ ಮಳೆ ಬಂಪರ್ ಹಾಗಾಗಿ ಕೆರೆ ಸೂಪರ್..

ಜೆಸಿಬಿ ಯಂತ್ರ ಬಳಸಿ ಕೆರೆ ಅಗೆದು, ಪಾತಳಿ ವಿಸ್ತರಿಸಿದ ಖರ್ಚು ಸುಮಾರು 12 ಲಕ್ಷ ರೂಪಾಯಿ. 2.5 ಲಕ್ಷ ರೂಪಾಯಿ ಮೌಲ್ಯದ, ಬೇಡಿಕೆಗೆ ತಕ್ಕ ಕ್ವಾರಿ ಕಲ್ಲುಗಳನ್ನು ಅಗೆದು-ತೆಗೆದು ಕೆರೆಗೆ ಬಳಸಲಾಗಿದೆ. ಕಲ್ಲು ಒದಗಿಸುವ ಗುತ್ತಿಗೆದಾರನ ಖರ್ಚು ಮತ್ತು ನುರಿತ ಕಾರ್ಮಿಕ ಕೂಲಿ ಗುತ್ತಿಗೆ ಅಂದಾಜು 2.5 ಲಕ್ಷ ರೂಪಾಯಿ ಸೇರಿದಂತೆ, ಇಡೀ ತೋಟದ ನೆತ್ತಿಯಿಂದ ಹರಿದು ಬರುವ ನೀರು ಅಲ್ಲಲ್ಲಿ ಅಡ್ಡಲಾಗಿ ನಿರ್ಮಿಸಿದ ಹಾಳೆಗಳಲ್ಲಿ ನಿಂತು, ಇಂಗಿ ನಂತರ ಹೆಚ್ಚುವರಿ ಬದುಗಳನ್ನು ಹಾರಿ ಅಥವಾ ಒಡೆದು ಸಾಗಿ ಬಂದು ಈ ಕೆರೆಗೆ ಸೇರುವಂತೆ ವ್ಯವಸ್ಥೆಗೊಳಿಸುವಲ್ಲಿ 1 ಲಕ್ಷ ರೂಪಾಯಿ. ಹೀಗೆ 18 ಲಕ್ಷ ರೂಪಾಯಿ ಖರ್ಚಿನಲ್ಲಿ ಶಾಶ್ವತ ಕೆರೆಯನ್ನು ಕುಮಾರ ರೂಪಿಸಿದ್ದಾರೆ. ಲಕ್ಷಾಂತರ ಗ್ಯಾಲನ್ ನೀರು ಈಗ ಸಂಗ್ರಹವಾಗಿದೆ. ರೂಹಿ, ಕಾಟ್ಲಾ ಮತ್ತು ಸ್ಥಳೀಯ ಪ್ರಜಾತಿಯ ಮೀನು ಮರಿಗಳನ್ನು ಸಹ ಈ ಕೆರೆಯಲ್ಲಿ ಬಿಡಲಾಗಿದೆ.

ಎರಡು ತಿಂಗಳು ಕೆರೆಯಲ್ಲಿ ನೀರು ನಿಂತಿದ್ದರಿಂದ ತೋಟದ ಅಂತರ್ಜಲ ಮರುಪೂರಣಗೊಂಡಿದೆ. ಇನ್ನು ಬಿರು ಬೇಸಿಗೆಯಲ್ಲಿ 1.5 ಇಂಚು ನೀರು ಸುರಿಸುತ್ತಿದ್ದ ಕೊಳವೆ ಬಾವಿಗಳು ಈಗ 3 ಇಂಚು ಸುರಿಸಲಾರಂಭಿಸಿವೆ. ಈ ಬಾರಿಯ ಮಳೆಗಾಲದ ಬಳಿಕ 4 ರಿಂದ 5 ಇಂಚು ಅನಾಯಾಸವಾಗಿ ನೀರು ಹರಿಸುತ್ತಿವೆ ಎನ್ನುತ್ತಾರೆ ಅವರು.

ಸದ್ಯ ತೋಟದ ಹಾಳೆಗಳಿಗೆ ಅಡ್ಡಲಾಗಿ ರೂಪಿಸಿದ ಬದುವಿನಗುಂಟ ಹಾಗೂ ಕೆರೆಯ ಸುತ್ತ ಅರಿಸಿನ ಮತ್ತು ನುಗ್ಗೆ ಬೀಜವನ್ನು ಬಿತ್ತಿ, ನೈಸರ್ಗಿಕವಾಗಿಯೇ ಬದುಗಳನ್ನು ಬಿಗಿಗೊಳಿಸಿದ್ದಾರೆ ಕುಮಾರ. 5 ಬಗೆಯ ಮಾವು, ಗೋಡಂಬಿ, ತೆಂಗು, ಪೇರಲ, ಕರಿಬೇವು, ನಿಂಬೆ, ಗಜನಿಂಬೆ, ಕಂಚಿ ಕಾಯಿ ಅವರ ತೋಟದಲ್ಲಿ ನಳನಳಿಸುತ್ತಿದ್ದು, ಭತ್ತ, ಗೋವಿನಜೋಳ, ತರಹೇವಾರಿ ಕಾಯಿಪಲ್ಯೆ ಸೇರಿದಂತೆ ಸಿರಿಧಾನ್ಯ ಮತ್ತು ಆಹಾರ ಧಾನ್ಯಗಳನ್ನು ಸಂಪೂರ್ಣ ಸಾವಯವ ಕೃಷಿ ವಿಧಾನದಿಂದ ಬೆಳೆಸುವ ಪ್ರಯತ್ನ ಗಮನ ಸೆಳೆಯುತ್ತದೆ.

ಕುಮಾರ ಅವರೇ ಕೆರೆ ಅಗೆಯುವಾಗ ದೊರೆತ ಚಿಪ್ಪುಗಲ್ಲು ಬಳಸಿ ಪರಿಸರ ಸ್ನೇಹಿ ವಿಧಾನ ಹಾಗೂ ಕಡಿಮೆ ಖರ್ಚಿನಲ್ಲಿ ವಿನ್ಯಾಸಗೊಳಿಸಿದ ಎರಡು ಮನೆಗಳು ಮತ್ತು ಅತಿಥಿ ಗೃಹ ಸಹ ಗಮನ ಸೆಳೆಯುತ್ತವೆ.

‘ನೀರ ಹರಿವಿನ ಹಾದಿ, ನಕಾಶೆ ಮತ್ತು ಮಳೆ ನೀರು ಸಂಗ್ರಹದ ಜಾಣ್ಮೆ ಮಾತ್ರ ಕೃಷಿ ಮತ್ತು ಕೃಷಿಕನನ್ನು ಕಾಯಬಹುದು..’ ಎಂಬ ಭಾಗವತ್ ಅವರ ಮಾತು, ನೀರೆಚ್ಚರದ ಕರೆಗಂಟೆ. ಅವರೊಬ್ಬ ನಮ್ಮ ಮಧ್ಯದ ಚೊಚ್ಚಲೆಚ್ಚರ (ವಿಸಲ್ ಬ್ಲೋವರ್) ನೀರಗಂಟಿ!

ಕೆರೆ ನೋಡಬಯಸುವ ಆಸಕ್ತರು ಮುಂಚಿತವಾಗಿ ಸಂಪರ್ಕಿಸಿ ಭೇಟಿ ನೀಡಬಹುದು.

ಕೃಷ್ಣಕುಮಾರ ಭಾಗವತ – 9449809685 (ಸಂಜೆ 6.30 ರಿಂದ 8.30 ಮಾತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT