ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹಲಸಿನ ತಳಿ ಕೃಷಿಕ ‘ಜಾಕ್’ ಅನಿಲ್

ಮನೆಯ ಅಂಗಳ, ಟೆರಸ್‌ನಲ್ಲೂ ಹಣ್ಣು ಬೆಳೆಸುವ ತಜ್ಞತೆ
Last Updated 6 ಅಕ್ಟೋಬರ್ 2020, 6:13 IST
ಅಕ್ಷರ ಗಾತ್ರ
ADVERTISEMENT
"ಜಾಕ್‌’ ಅನಿಲ್"

ಹಲಸಿನ ಹಣ್ಣು ಎಂದಾಗ, ಹಣ್ಣು ಇಷ್ಟ; ಮರ ಬೆಳೆಸುವುದು ಕಷ್ಟ ಎಂಬ ಭಾವ ಹಲವರಲ್ಲಿ ಮೂಡುತ್ತದೆ. ಆದರೆ, ಮನೆ ಅಂಗಳ, ಟೆರಸ್‌ನಲ್ಲೂ ಹಲಸಿನ ಮರ ಬೆಳೆಸಿ ನಿಮ್ಮ ಇಷ್ಟದ ಹಣ್ಣು ತಿನ್ನುವ ಅವಕಾಶವನ್ನು ಜಾಕ್ ಅನಿಲ್ ಕಲ್ಪಿಸಿಕೊಡುತ್ತಿದ್ದಾರೆ. ಇದು ಹೇಗೆ? ಅವರೇ ವಿವರಿಸುತ್ತಾರೆ ಓದಿ...

ಇವರು ಅನಿಲ್; ‘ಜಾಕ್‌’ ಅನಿಲ್ ಎಂದೇ ಹೆಸರುವಾಸಿ. ಹಲಸಿನ ತಳಿ ವಿಷಯದಲ್ಲಿ ಇವರದು ವಿಶೇಷ ತಜ್ಞತೆ. ಆಯಾ ಪ್ರದೇಶದ ಹವಾಗುಣಕ್ಕೆ ಬೇಕಾದ ಗಿಡಗಳನ್ನು ಕಸಿ ಕಟ್ಟುವಲ್ಲಿ ಎತ್ತಿದ ಕೈ.

ಅನಿಲ್‌ ಮೂಲತಃ ಕೇರಳದವರು. 20 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕಬಕ ವಿಟ್ಲದ ಅಳಕ–ಮಜಲು ಬಳಿಯ ನಿನ್ನಿಕಲ್ಲಿನಲ್ಲಿ ನೆಲೆಸಿದ್ದಾರೆ. ಇಲ್ಲಿಯೇ ಇವರ ವಿಸ್ತಾರದ ನರ್ಸರಿ ಇದೆ.

ಅನಿಲ್‌ ಬಳಿ ಒಂದೂವರೆ ವರ್ಷದಲ್ಲಿ ಫಲ ಕೊಡುವ ಹಲಸಿನ ಗಿಡನೂ ಸಿಗುತ್ತದೆ. ವರ್ಷದ ಎಲ್ಲಾ ಕಾಲದಲ್ಲೂ ಕಾಯಿ ಬಿಡುವ ಗಿಡಗಳೂ ಇವೆ. ಹಾಗೆಯೇ ಮಳೆಗಾಲ ಆರಂಭಕ್ಕೂ ಮೊದಲೇ ಹಣ್ಣಾಗುವ ತಳಿಗಳೂ ಲಭ್ಯವಿವೆ.

ದಕ್ಷಿಣ ಭಾರತದ ಹಲವು ವಿಶ್ವವಿದ್ಯಾಲಯಗಳಿಗೆ ಇವರು ಸಂಪನ್ಮೂಲ ವ್ಯಕ್ತಿ. ಕೃಷಿ ವಿಜ್ಞಾನ ಸಂಸ್ಥೆಗಳಿಗೆ ಇವರು ಅನಧಿಕೃತ ತಳಿ ಬೋಧಕರು. ಹಲವು ಕಾಲೇಜು, ಸಂಸ್ಥೆಗಳಿಗೆ ಹಲಸಿನ ತೋಟಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಜಿಕೆವಿಕೆಗೆ ಕಸಿ ಕಟ್ಟಿ ಕೊಟ್ಟಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೂ 80 ತಳಿಗಳನ್ನು ನೀಡಿದ್ದಾರೆ.

ಅನಿಲ್‌ ಅವರ ಈ ವಿಶೇಷ ಪರಿಣತಿಯನ್ನು ಕರ್ನಾಟಕ ಹಾಗೂ ಕೇರಳ ಸರ್ಕಾರಗಳು ಗುರುತಿಸಿವೆ. ಸಾಕಷ್ಟು ಪ್ರಶಸ್ತಿ–ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಜಿಕೆವಿಕೆ, ಐಎಚ್‌ಆರ್‌ಗಳ ಪುರಸ್ಕಾರಗಳು ದೊರೆತಿವೆ. ದೆಹಲಿಯ ಜೈವಿಕ ತಂತ್ರಜ್ಞಾನದ ವಿಭಾಗದಿಂದಲೂ ಪ್ರಶಸ್ತಿ ಸಿಕ್ಕಿದೆ.

‘ನಾನೇ ಯಾವುದೇ ತಳಿ ಅಭಿವೃದ್ಧಿಪಡಿಸಿಲ್ಲ. ಆದರೆ, ತಳಿಗಳನ್ನು ಆಯ್ಕೆ ಮಾಡಿ ಬ್ರ್ಯಾಂಡ್‌ ಮಾಡುತ್ತಿದ್ದೇನೆ. ಹಲಸಿನಲ್ಲಿ ಹೈಬ್ರಿಡ್ ತಳಿ ಸೃಷ್ಟಿಸಲು ಸಾಧ್ಯವಿಲ್ಲ. ಎಲ್ಲಾ ತಳಿಗಳೂ ಎಲ್ಲಾ ಪ್ರದೇಶಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಯಾವ ತಳಿ, ಯಾವ ಪ್ರದೇಶಕ್ಕೆ ಸೂಕ್ತವಾಗುತ್ತೆ ಎಂಬುದನ್ನು ಸತತ ಅಭ್ಯಾಸ ಮಾಡಿ, ಅದನ್ನು ನೀಡುವುದೇ ನನ್ನ ವಿಶೇಷತೆ’ ಎನ್ನುತ್ತಾ ಮಾತಿಗೆ ಕುಳಿತರು ‘ಜಾಕ್‌’ ಅನಿಲ್.

ಗಿಡದ ಬುಡದಲ್ಲೇ ಹಲಸಿನ ಕಾಯಿ

‘ನನ್ನಲ್ಲಿ ಒಂದೂವರೆ ವರ್ಷದಲ್ಲಿ ಫಲ ಕೊಡುವ ಹಲಸಿನ ಗಿಡ ಸಿಗುತ್ತೆ. 12 ಅಡಿ ಎತ್ತರ ಬೆಳೆಯುವ ಈ ತಳಿಯನ್ನು ನಿಮ್ಮ ಮನೆಯ ಅಂಗಳದಲ್ಲೂ ನೆಡಬಹುದು. ಗಾರ್ಡನ್‌ನಲ್ಲೂ ಹಾಕಬಹುದು; ಮನೆಯ ಟೆರಸ್‌ ಮೇಲೂ ಬೆಳೆಯಬಹುದು. ಇನ್ನೂ ವರ್ಷದ ಎಲ್ಲಾ ಸೀಸನ್‌ಗಳಲ್ಲೂ ಕಾಯಿ ಬಿಡುವ ಗಿಡಗಳೂ ಲಭ್ಯವಿವೆ. ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಮೇಲಿದ್ದರೆ ಹಲಸಿನ ಗಿಡಗಳು ಬೆಳೆಯುವುದು ಸ್ವಲ್ಪ ಕಷ್ಟ. ಆದರೆ, ಹದ ಒಣ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತವೆ. ಹೆಚ್ಚು ನೀರು ಕೊಟ್ಟರೂ ಗಿಡಗಳಿಗೆ ಕಷ್ಟ’ ಎಂದರು ಅನಿಲ್.

‘ಮಡಿಕೇರಿ, ಚಿಕ್ಕಮಗಳೂರು, ಮೂಡಿಗೆರೆಯಂತಹ ತಂಪಿನ ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುಂಚೆಯೇ ಹಣ್ಣು ಬರುವ ತಳಿಗಳನ್ನು ಹಾಕಬೇಕು. ಸಣ್ಣ ಗಿಡಗಳಿಗೆ ಎರಡು ವರ್ಷ ನೀರು ಕೊಟ್ಟು ಸರಿಯಾಗಿ ನೋಡಿಕೊಂಡರೆ ಸಾಕು, ಮುಂದೆ ಯಾವುದೇ ಆರೈಕೆ ಬೇಡ. ಒಣ ಭೂಮಿಯಲ್ಲಿ ಸಸಿಯನ್ನು ನೇರವಾಗಿ ನೆಡದೆ ನರ್ಸರಿಯಲ್ಲಿ ಹಾಕಿ, 2 ಅಡಿ ಎತ್ತರ ಬೆಳೆದ ಮೇಲೆ ನೆಟ್ಟರೆ ಅದು ಬೇಗ ಬೆಳೆಯುತ್ತದೆ’

‘ಸಾಮಾನ್ಯವಾಗಿ ಹಲಸಿನ ಮರಗಳು ನಾಲ್ಕರಿಂದ ಐದು ವರ್ಷದ ಒಳಗೆ ಫಸಲು ನೀಡುತ್ತವೆ. ‘ನಿನ್ನಿತಾಯಿ’ ತಳಿ ಒಂದೂವರೆ ವರ್ಷಗಳಲ್ಲಿ ಫಸಲು ಕೊಡುತ್ತದೆ. ಒಂದು ಎಕರೆಗೆ 350 ಗಿಡಗಳನ್ನು ಹಾಕಬಹುದು. ಆದರೆ, ಈ ಮರಗಳ ಆಯಸ್ಸು ಮಾತ್ರ 20 ವರ್ಷಗಳು ಮಾತ್ರ’

‘ನಮ್ಮಲ್ಲಿ ನೂರಾರು ತಳಿಗಳು ಇದ್ದರೂ ರೈತರಿಗೆ ವ್ಯವಹಾರಿಕವಾಗಿ ಅನುಕೂಲವಾಗುವ ತಳಿಗಳನ್ನು ಮಾತ್ರ ನೀಡಲಾಗುತ್ತದೆ. ಹಲಸಿನ ತೋಟ ಮಾಡುವವರು ಹತ್ತೆಂಟು ತಳಿಗಳನ್ನು ಬೆಳೆಸುವುದು ವ್ಯವಹಾರಿಕವಾಗಿ ಲಾಭದಾಯಕ ಅಲ್ಲ. ಮೂರ್ನಾಲ್ಕು ತಳಿಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅವುಗಳನ್ನು ಬೆಳೆಸಿದರೆ ಅನುಕೂಲ. ಅದರಲ್ಲೂ ಸೀಜನ್‌ ಅಲ್ಲದ ಸಮಯದಲ್ಲಿ ಫಲ ನೀಡುವ ತಳಿಗಳನ್ನು ಹೆಚ್ಚು, ಹೆಚ್ಚು ನೆಡಬೇಕು. ರುದ್ರಾಕ್ಷಿ, ಪಾಲೂರು, ಜೇನು ಬಕ್ಕೆ, ಸ್ವರ್ಣ, ಸದಾನಂದ, ಎನ್‌ಎಸ್‌ಪಿ ಹೀಗೆ ಉತ್ತಮ ತಳಿಯ ಹಲಸಗಳು ಅನೇಕ ಇವೆ’

‘ಹಲಸಿನ ತೋಟ ಮಾಡುವುದಕ್ಕೆ ಖರ್ಚು ಕಡಿಮೆ. ಅಲ್ಲದೇ, ಗಿಡ 5 ಅಡಿ ಎತ್ತರ ಬೆಳೆಯುತ್ತಿದ್ದಂತೆ ಕಾಳುಮೆಣಸಿನ ಬಳ್ಳಿ ಎಬ್ಬಿಸಬಹುದು. ಇದು ಇನ್ನೊಂದು ಆದಾಯ ತರುವ ಕೃಷಿ’ ಎಂದು ಮಾತು ಸೇರಿದರು ಅನಿಲ್.

ಹಲಸಿನಲ್ಲೂ ರೆಡಿ ಟು ಈಟ್:

‘ಹಲಸಿನಲ್ಲೂ ರೆಡಿ ಟು ಈಟ್ ಫುಡ್‌ಗೆ ಬೇಡಿಕೆ ಇದೆ. ಎಳೆಯ ಗುಜ್ಜು ಹಲಸಿನ ಕಾಯಿಗಳನ್ನು ತುಂಡು ಮಾಡಿ ಬೇಯಿಸಿ, ಪ್ಯಾಕ್‌ ಮಾಡಿದರೆ ಮ್ಯಾಗಿ ರೀತಿಯಲ್ಲಿ ಬಳಸಬಹುದು. ನಮಗೆಲ್ಲ ಹಲಸಿನ ಕಾಯಿಯಿಂದ ಚಿಪ್ಸ್‌ ಮಾಡುವುದು ಗೊತ್ತು. ಆದರೆ, ಹಣ್ಣನ್ನೇ ಡ್ರೈ ಮಾಡಿ ಚಿಪ್ಸ್ ಮಾಡುವ ವಿಧಾನ ಬಂದಿದೆ. ಇದಕ್ಕೂ ಬಹಳ ಬೇಡಿಕೆ ಇದೆ. ಹಲಸಿನಿಂದ ಇದುವರೆಗೂ 200ಕ್ಕೂ ಉತ್ಪನ್ನಗಳನ್ನು ಕಂಡುಹಿಡಿಯಲಾಗಿದೆ’

‘ನಮ್ಮಲ್ಲಿ ಬಹುತೇಕ ಹಣ್ಣಿನ ಗಿಡಗಳನ್ನು ರಸಾಯನಿಕ ಹಾಕಿಯೇ ಬೆಳೆಸಲಾಗುತ್ತದೆ. ಆದರೆ, ಹಲಸಿಗೆ ಯಾವ ಹಂತದಲ್ಲೂ ರಸಾಯನಿಕ ಬಳಸಲ್ಲ. ಇದು ಸಹಜ ನೈಸರ್ಗಿಕ ಹಣ್ಣು. ಇದರ ಹಣ್ಣು ಮಾತ್ರವಲ್ಲ ಬೀಜ, ಕಾಯಿ, ಎಲೆ ಪ್ರತಿಯೊಂದರಲ್ಲೂ ಔಷಧೀಯ ಗುಣಗಳಿವೆ’ ಎನ್ನುತ್ತಾರೆ ಅನಿಲ್.

ಅನಿಲ್‌ ಅವರ ‘ನಿನ್ನಿಕಲ್ಲು’ ನರ್ಸರಿಯಲ್ಲಿ ಕೇವಲ ಹಲಸಿನ ಗಿಡಗಳಷ್ಟೇ ಅಲ್ಲ; ವಿವಿಧ ಜಾತಿಯ ಹಣ್ಣಿನ ಗಿಡಗಳೂ ಲಭ್ಯ. ತೆಂಗಿನಕಾಯಿ, ಅಡಿಕೆ ಸಸಿಗಳೂ ಸಿಗುತ್ತವೆ. ಅನಿಲ್ ಅವರ ಸಂಪರ್ಕಕ್ಕೆ ಮೊ: 94487 78497.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT