ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮೆಕ್ಕೆಜೋಳದ ‘ಚಂಡಿ’ ಮುರಿವ ಕಥೆ..!

Last Updated 5 ಸೆಪ್ಟೆಂಬರ್ 2020, 10:24 IST
ಅಕ್ಷರ ಗಾತ್ರ

'ದಾವಣಗೆರೆ, ಹರಿಹರದ ಕಡೆ ರೈತರು ಮೆಕ್ಕೆಜೋಳದ ಚಂಡಿ ಮುರಿಯುತ್ತಿದ್ದಾರೆ‘ ಎಂದರು ಗೆಳೆಯ ಮಾಲ್ತೇಶ್. ‘ಚಂಡಿ ಮುರಿಯೋದಾ ? ಏನು ಹಾಗಂದ್ರೆ, ಅರ್ಥವಾಗಲಿಲ್ಲವಲ್ಲಾ‘ ಅಂದೆ. ಅದಕ್ಕವರು ‘ಒಂದು ವಿಡಿಯೊ ಕಳಿಸಿದ್ದೇನೆ ನೋಡಿ‘ ಅಂತ ಹೇಳಿ, ವಿಡಿಯೊ ತುಣುಕೊಂದನ್ನು ಕಳಿಸಿದರು.

ಆ ವಿಡಿಯೊದಲ್ಲಿ ರೈತರೊಬ್ಬರು ಸೊಂಪಾಗಿ ಬೆಳೆದಿದ್ದ ಮೆಕ್ಕೆಜೋಳದ ಸೆಪ್ಪೆಯ ತುದಿಯನ್ನು ಸರಕ್ ಸರಕ್ ಅಂತ ಕತ್ತರಿಸುತ್ತಾ, ರಾಶಿ ಮಾಡುತ್ತಿದ್ದ ದೃಶ್ಯವಿತ್ತು. ‘ಹೀಗೆ ಸೆಪ್ಪೆಯ ತುದಿ ಕಟ್ ಮಾಡುವುದನ್ನೇ, ಇಲ್ಲಿ ಚಂಡಿ ಮುರಿಯುವುದು ಎನ್ನುತ್ತಾರೆ‘ ಎಂದು ವಿವರಿಸಿದರು ಮಾಲ್ತೇಶ್.

‘ಚಂಡಿ‘ ಅಂದರೆ ಕೆಲವು ಕಡೆ ಗ್ರಾಮ್ಯ ಭಾಷೆಯಲ್ಲಿ ಕುತ್ತಿಗೆ ಎಂದು ಅರ್ಥ. ಮೆಕ್ಕೆಜೋಳದ ಸೆಪ್ಪೆಯ ತುದಿಯನ್ನು ‘ಚಂಡಿ‘ ಎಂತಲೂ, ತುದಿಯನ್ನು ಕತ್ತರಿಸುವುದಕ್ಕೆ ಚಂಡಿ ಮುರಿಯುವುದು ಎನ್ನುತ್ತಾರೆಂದು ಆನಂತರ ಅರ್ಥವಾಯಿತು.

ಮಧ್ಯ ಕರ್ನಾಟಕದ ಈ ಭಾಗದಲ್ಲಿ ಮೆಕ್ಕೆಜೋಳದಲ್ಲಿ ಚಂಡಿ ಮುರಿಯುವ ಪದ್ಧತಿ ಇದೆ. ತುಮಕೂರು ಜಿಲ್ಲೆ ಹಾಗೂ ಮೆಕ್ಕೆಜೋಳ ಬೆಳೆಯುವ ಬಯಲುಸೀಮೆ ಪ್ರದೇಶಗಳಲ್ಲೂ ಅಲ್ಲಲ್ಲಿ ಈ ಪದ್ಧತಿ ಇದೆಯಂತೆ. ಆ ಭಾಗಗಳಲ್ಲಿ ’ಚಂಡೆ’ ಮುರಿಯುವುದು ಎನ್ನುತ್ತಾರೆ. ಈ ಪದ್ಧತಿ ಯಾವಾಗಿನಿಂದ ಚಾಲ್ತಿಯಲ್ಲಿದೆ ಎಂಬುದು ಈ ತಲೆಮಾರಿನವರಿಗೆ ತಿಳಿಯದು. ಆದರೆ, ಇದು ರೈತರೇ ಹೇಳುವಂತೆ ‘ಅನುಭವದ ಜ್ಞಾನ‘.

ಇದರಿಂದ ಏನು ಪ್ರಯೋಜನ ?

ಮೆಕ್ಕೆಜೋಳವನ್ನು ಕೆಲವರು ಹೊಲದಲ್ಲಿ ಬೆಳೆದರೆ, ಇನ್ನೂ ಕೆಲವರು ಅಡಿಕೆ, ತೆಂಗಿನ ಸಸಿಗಳನ್ನು ನಾಟಿ ಮಾಡಿರುವ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಯುತ್ತಾರೆ. ಮೆಕ್ಕೆಜೋಳದ ಚಂಡಿ ಮುರಿಯುವುದರಿಂದ ದೊಡ್ಡ ಪ್ರಮಾಣದಲ್ಲಿ ಉತ್ಕೃಷ್ಟ ಮೇವು ಸಿಗುತ್ತದೆ. ಜತೆಗೆ, ಬೆಳೆಗೆ ತಗುಲುವ ರೋಗ ನಿಯಂತ್ರಣಕ್ಕೂ ಅನುಕೂಲವಾಗುತ್ತದೆಎಂಬುದು ರೈತರ ಅನುಭವದ ಮಾತು.

ಬಹಳ ವರ್ಷಗಳಿಂದ ಈ ವಿಧಾನವನ್ನು ಅನುಸರಿಸುತ್ತಿರುವ ಬೇತೂರಿನ ಕೃಷಿಕ ರವಿಕುಮಾರ್, ‘ಚಂಡಿ ಕೊಯ್ಯೋದ್ರಿಂದ ತೆನೆ ಬೇಗ ಒಣಗುವುದಕ್ಕೆ ಅನುಕೂಲವಾಗುತ್ತದೆ. ರೋಗ–ರುಜಿನ ಇರುವ ಸೆಪ್ಪೆಯ ಗರಿಗಳನ್ನೆಲ್ಲ ಕೊಯ್ಯುವುದರಿಂದ ಬೆಳೆಗೆ ರೋಗ ಬಾಧೆ ತಗುಲುವುದು ಕಡಿಮೆಯಾಗುತ್ತದೆ. ತೆನೆ ಕೊಯ್ಯುವುದಕ್ಕೂ ಸುಲಭವಾಗುತ್ತದೆ‘ ಎನ್ನುತ್ತಾರೆ. ಅಡಿಕೆ ಸಸಿಗಳ ನಡುವೆ ಮೆಕ್ಕೆಜೋಳವನ್ನು ಅಂತರಬೆಳೆಯಾಗಿ ಬೆಳೆದಿರುವ ಅವರು, ‘ಸೆಪ್ಪೆಯ ತುದಿ ಕತ್ತರಿಸುವುದರಿಂದ, ಅಡಿಕೆ ಸಸಿಗಳಿಗೆ ಹೇರಳವಾಗಿ ಗಾಳಿ ಬೆಳಕು ಲಭ್ಯವಾಗಿ, ಅವುಗಳ ಬೆಳವಣಿಗೆಗೂ ಸಹಕಾರಿಯಾಗುತ್ತದ‘ ಎನ್ನುತ್ತಾರೆ ಅವರು.

ಜಾನುವಾರುಗಳಿಗೆ ಉತ್ತಮ ಮೇವು

ಮೆಕ್ಕೆಜೋಳದ ಈ ಸೀಸನ್‌ನಲ್ಲಿ ಜಾನುವಾರು ಸಾಕಿರುವವರಿಗೆ ಭರಪೂರ ಮೇವು ಸಿಗುವುದರಿಂದ, ಈ ಅವಧಿಯಲ್ಲಿ ಕೆಲವರಿಗೆ ಮೇವಿನ ಖರ್ಚು ಉಳಿಯುತ್ತದೆಯಂತೆ. ಜಾನುವಾರುಗಳಿಲ್ಲದ ಮೆಕ್ಕೆಜೋಳ ಬೆಳೆಗಾರರು, ಮೇವು ಅಗತ್ಯವಿರುವ ರೈತರಿಗೆ ಸೆಪ್ಪೆಯ ಚಂಡಿ ಮುರಿದುಕೊಂಡು ಹೋಗುವಂತೆ ಹೇಳುತ್ತಾರೆ. ‘ಒಂದು ಎಕರೆ ಜೋಳದ ಚಂಡಿ ಕತ್ತರಿಸಿದರೆ ಮೂರ್ನಾಲ್ಕು ಗಾಡಿಯಷ್ಟು ಮೇವು ಸಿಗುತ್ತದೆ. ಇದು ಒಂದೆರಡು ರಾಸುಗಳಿಗೆ ಹತ್ತು – ಹದಿನೈದು ದಿನಗಳ ಮೇವಾಗುತ್ತದೆ‘ ಎನ್ನುತ್ತಾರೆ ನಾಗರಕಟ್ಟೆಯ ರೈತ ಶಂಕರನಾಯಕ. ಮೇವು ಕತ್ತರಿಸುವಾಗ ಜಾಗ್ರತೆಯಿಂದ ತುದಿಯನ್ನೇ ಕತ್ತರಿಸಬೇಕು. ತೆನೆಯನ್ನೂ ಗಮನಿಸುತ್ತಿರಬೇಕು. ಇಲ್ಲಾಂದ್ರೆ, ಕೊಯ್ಯುವ ರಭಸದಲ್ಲಿ ತೆನೆಗೆ ತೊಂದರೆಯಾದರೆ, ಫಸಲಿಗೆ ತೊಂದರೆಯಾಗುತ್ತದೆ. ಇದರಿಂದ ಹೊಲದ ಮಾಲೀಕರಿಗೆ ನಷ್ಟವಾಗುತ್ತದೆ‘ ಎಂದ ಅವರು ಎಚ್ಚರಿಸುತ್ತಾರೆ.

ಮೆಕ್ಕೆಜೋಳದ ಸೆಪ್ಪೆಯ ಚಂಡಿ ಕತ್ತರಿಸಿದ ಮೇಲೆ, ಅದನ್ನು ಮೇವಾಗಿ ಬಳಸಲು ಸಾಧ್ಯವಾಗದಿದ್ದರೆ ಹಸಿರೆಲೆ ಗೊಬ್ಬರದ ರೀತಿ ಮಣ್ಣಿಗೆ ಸೇರಿಸುತ್ತಾರೆ. ಅಡಿಕೆ ತೋಟದಲ್ಲಿ ಇದೇ ಸೆಪ್ಪೆಯನ್ನು ಮುಚ್ಚಿಗೆ ಬೆಳೆಯಾಗಿಯೂ ಬಳಸುತ್ತಾರೆ. ‘ಸೆಪ್ಪೆ ಕೊಯ್ದುಕೊಂಡು ಹೋಗಿ ಅಂತ ದನಗಳನ್ನು ಸಾಕಿರುವ ರೈತರಿಗೆ ಹೇಳುತ್ತೇವೆ. ಯಾರೂ ಬರಲಿಲ್ಲ ಎಂದರೆ, ನಾವೇ ಸೆಪ್ಪೆ ತುದಿ ಕತ್ತರಿಸಿ ತೋಟದಲ್ಲಿ ಹೊದಿಕೆ ಮಾಡುತ್ತೇವೆ‘ ಎನ್ನುತ್ತಾರೆ ರವಿಕುಮಾರ್.

‘ಚಂಡಿ ಮುರಿಯುವಾಗ ರೋಗ ತಗುಲಿರುವ ಎಲೆಗಳೆಲ್ಲ ಕತ್ತರಿಸುವುದರಿಂದ, ರೋಗ ಹರಡುವುದು ತಪ್ಪುತ್ತದೆ‘ ಎಂಬುದು ರೈತರ ನಂಬಿಕೆ. ಅಷ್ಟೇ ಅಲ್ಲ, ಸೆಪ್ಪೆಯ ಎಲೆಗಳನ್ನು ಸವರುವುದರಿಂದ, ತೆನೆ ಮೇಲೆ ಬಿಸಿಲು ಬಿದ್ದು, ಬೇಗ ಮಾಗುವುದಕ್ಕೂ ಕಾರಣವಾಗುತ್ತದೆ ಎಂದು ಹೇಳುತ್ತಾರೆ ರೈತರು.

‘ಚಂಡಿ‘ ಯಾವಾಗ ಮುರೀತಾರೆ ?

ಮೆಕ್ಕೆಜೋಳವನ್ನು ಬಿತ್ತನೆ ಮಾಡಿ 70 ರಿಂದ 75 ದಿನಗಳ ನಂತರ ಸೆಪ್ಪೆಯ ಚಂಡಿ ಕತ್ತರಿಸಲು ಶುರು ಮಾಡುತ್ತಾರೆ. ಈ ಹಂತದಲ್ಲಿ ಸೆಪ್ಪೆಯ ತುದಿ ಸೊಂಪಾಗಿ ಬೆಳೆದಿರುತ್ತದೆ. ತೆನೆ ಒಡೆಯುತ್ತಾ, ಕಾಳುಕಟ್ಟುತ್ತಿರುತ್ತದೆ. ತೆನೆಯ ತುದಿಯಲ್ಲಿರುವ ರೇಷ್ಮೆ ನೂಲಿನಂತೆ ಕಾಣುವ ಕುಚ್ಚು/ಕುಂಚಿಗೆ ಒಣಗಿರುತ್ತದೆ. ತೆನೆಯ ಮೇಲ್ಭಾಗದ ಮುಸುಕು ಸರಿದು ಕೆಂಪನೆಯ ಕಾಳು ಕಾಣಿಸುತ್ತಿರುತ್ತದೆ. ‘ಕುಂಚಿಗೆ ಒಣಗಿದ್ದು, ತೆನೆಯ ಮುಂಭಾಗದಲ್ಲಿ ಕೆಂಪನೆಯ ಕಾಳು ಕಾಣ್ತಿರಬೇಕು, ಆಗ ಚಂಡಿ ಮುರಿತೀವಿ‘ ಎಂದು ವಿವರಿಸಿದರು ರವಿಕುಮಾರ್.

‘ತೆನೆ ಚೆನ್ನಾಗಿ ಬಲಿಯುತ್ತಿರುವಾಗ ಸೆಪ್ಪೆಯ ತುದಿ ಕತ್ತರಿಸಿಬಿಟ್ಟರೆ, ಬೆಳೆಗೆ ಹಾನಿಯಾಗುವುದಿಲ್ಲವೇ. ಇಳುವರಿ ಕಡಿಮೆಯಾಗುವುದಿಲ್ಲವೇ‘ ಅಂತ ಕೇಳಿದರೆ, ‘ಅಂಥದ್ದೇನೂ ಆಗಿಲ್ಲ. ಇದೆಲ್ಲ ಬಹಳ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದೇವೆ‘ ಎನ್ನುತ್ತಾರೆ ರೈತರು.

ಒಂದಷ್ಟು ಅರಿವು, ಎಚ್ಚರಿಕೆಯೂ ಅಗತ್ಯ..

ಒತ್ತೊತ್ತಾಗಿ ಮೆಕ್ಕೆಜೋಳ ಬೆಳೆಯುವ ತಾಕುಗಳಲ್ಲಿ ಗಾಳಿ ಬೆಳಕು ಕಡಿಮೆಯಾಗಿ, ತೇವಾಂಶದೊಂದಿಗೆ ಆರ್ದ್ರತೆ ಹೆಚ್ಚಾಗಿ ಶಿಲೀಂಧ್ರ ರೋಗಗಳು ತಗಲಬಹುದು. ಈಗ ಚಂಡಿ ಕತ್ತರಿಸುವುದರಿಂದ, ಸೆಪ್ಪೆಯ ಬುಡಕ್ಕೆ ಉತ್ತಮ ಗಾಳಿ ಬೆಳಕು ಲಭ್ಯವಾಗಿ, ಇಂಥ ರೋಗ ರುಜಿನದಿಂದ ಬೆಳೆ ರಕ್ಷಿಸಬಹುದು ಎನ್ನುತ್ತಾರೆ ದಾವಣಗೆರೆಯ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ವಿ. ಚಿಂತಾಲ್.

ರೈತರು ಬೇರೆ ಬೇರೆ ಹೈಬ್ರಿಡ್‌ ತಳಿಗಳ ಮೆಕ್ಕೆಜೋಳ ಬೆಳೆಯುವುದರಿಂದ, ಪರಾಗಸ್ಪರ್ಶ ಕ್ರಿಯೆಯಲ್ಲಿ ವತ್ಯಾಸವಾಗುವುದರಿಂದ ಇಂತಿಷ್ಟೇ ದಿನಕ್ಕೆ ಚಂಡಿ ಕತ್ತರಿಸಬಹುದೆಂದು ಶಿಫಾರಸು ಮಾಡಲು ಆಗುವುದಿಲ್ಲ. ಆದರೆ, ಯಾವುದೇ ತಳಿಯಾಗಲಿ ಕುಂಚು (ಸಿಲ್ಕ್) ಒಣಗಿ ಪುಡಿ ಪುಡಿಯಾಗುವ ಹಂತದಲ್ಲಿದ್ದಾಗ ಈ ವಿಧಾನ ಅನುಸರಿಸಬಹುದು ಎನ್ನುತ್ತಾರೆ ಅವರು. ’ತೆನೆಯ ಭಾಗದಿಂದ ಸ್ವಲ್ಪ ಜಾಗಬಿಟ್ಟು, ತುದಿಯನ್ನಷ್ಟೇ ಕತ್ತರಿಸುವುದು ಒಳ್ಳೆಯದು. ಇಲ್ಲದಿದ್ದರೆ, ಬೆಳೆಗೆ ತೀವ್ರ ತೊಂದರೆಯಾಗುವ ಸಾಧ್ಯತೆಯೂ ಇರುತ್ತದೆ’ ಎಂದು ಅವರು ಎಚ್ಚರಿಸುತ್ತಾರೆ.

‘ಚಂಡಿ ಕತ್ತರಿಸುವ ಮೆಕ್ಕೆಜೋಳದ ಹೊಲಗಳಲ್ಲಿ ರೋಗ ರುಜಿನಗಳು ಹರಡುವುದು ಕಡಿಮೆಯಾಗಿರುವುದನ್ನು ಗಮನಿಸಿದ್ದೇನೆ‘ ಎನ್ನುತ್ತಾರೆ ನಿವೃತ್ತ ಜಂಟಿ ಕೃಷಿ ನಿರ್ದೇಶಕ ಆರ್‌.ಜಿ.ಗೊಲ್ಲರ್. ಈ ವಿಧಾನ ಅನುಸರಿಸುವುದರಿಂದ ಶೇ 10 ರಿಂದ 20ರಷ್ಟು ಇಳುವರಿ ಕಡಿಮೆಯಾಗಬಹುದು. ಆದರೆ ಒತ್ತೊತ್ತಾಗಿ ಬೆಳೆ ಬೆಳೆಯುವ ತಾಕಿನಲ್ಲಿ ಚಂಡಿ ಕತ್ತರಿಸುವುದರಿಂದ ರೋಗ ಹರಡುವ ಪ್ರಮಾಣ ಕಡಿಮೆಯಾಗಿ, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು‌.

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನಲ್ಲೂ ರೈತರು ಮೆಕ್ಕೆಜೋಳದ ಚಂಡೆ (ಚಂಡಿ) ಕತ್ತರಿಸುವ ಪದ್ಧತಿ ಅನುಸರಿಸುತ್ತಾರೆ ಎಂದು ನೆನಪಿಸಿಕೊಳ್ಳುತ್ತಾರೆ ಗೆಳೆಯ ಮಲ್ಲಿಕಾರ್ಜುನ ಹೊಸಪಾಳ್ಯ. ’ಈ ವಿಧಾನದಿಂದ ಬೆಳೆ ಬೀಳುವುದಿಲ್ಲ. ಚಂಡೆ ಕತ್ತರಿಸಿದಾಗ ಗರಿಗಳನ್ನು ತೆಗೆಯುವುದರಿಂದ, ತೆನೆ ಕೊಯ್ಯುವವರಿಗೆ ಸಾಲುಗಳ ನಡುವೆ ಸುಲಭವಾಗಿ ಓಡಾಡುತ್ತಾ ಬೇಗ ಬೇಗ ತೆನೆ ಕಟಾವು ಮಾಡಬಹುದು’ ಎನ್ನುತ್ತಾರೆ ಅವರು.

ಒಟ್ಟಾರೆ, ಮುಸುಕಿನ ಜೋಳದ ಸೆಪ್ಪೆಯ ಚಂಡಿ ಮುರಿಯುವ ಕಥೆಯಲ್ಲಿ ಇಷ್ಟೆಲ್ಲ ಉಪಯೋಗಗಳ ‘ಉಪಕಥೆ‘ಗಳಿವೆ!

ಚಿತ್ರಗಳು: ಮಾಲ್ತೇಶ್ ಪುಟ್ಟಣ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT