ಶನಿವಾರ, ಜುಲೈ 2, 2022
21 °C
₹15 ಸಾವಿರ ಖರ್ಚು, ಅರ್ಧ ಎಕರೆಯಲ್ಲಿ ₹1 ಲಕ್ಷ ಆದಾಯ

ಅವರೆ ಬೆಳೆದು ಲಾಭ ಗಳಿಸಿದ ರೈತ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಸಮೀಪದ ಸಿಂದಬಂದಗಿ ಗ್ರಾಮದ ಯುವ ರೈತ ಮಲ್ಲಿಕಾರ್ಜುನ ಸ್ವಾಮಿ ತಮ್ಮ ಅರ್ಧ ಎಕರೆ ಹೊಲದಲ್ಲಿ ಅವರೆ ಬೆಳೆದಿದ್ದು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದಾರೆ.

ಕೇವಲ ಮೂರು ತಿಂಗಳಲ್ಲಿ ಕಟಾವಿಗೆ ಬರುವ ಅವರೆ ಬೆಳೆಗೆ ಔಷಧ ಸಿಂಪಡಣೆ, ರಸಗೊಬ್ಬರ ಇನ್ನಿತರ ಖರ್ಚು ವೆಚ್ಚ ಸೇರಿ ₹15 ಸಾವಿರ ಆಗಿದೆ. ಆದರೆ ಆದಾಯ ಮಾತ್ರ ಲಕ್ಷಕ್ಕಿಂತ ಹೆಚ್ಚು ಲಭಿಸುತ್ತಿದೆ ಎಂದು ರೈತ ಮಲ್ಲಿಕಾರ್ಜುನ ಸಂತಸ ವ್ಯಕ್ತಪಡಿಸುತ್ತಾರೆ.

‘ಡಿಸೆಂಬರ್ ತಿಂಗಳಲ್ಲಿ ಬಿತ್ತನೆ ಮಾಡಿದ ಅವರೆಯನ್ನು ಸದ್ಯ ಮಾರುಕಟ್ಟೆಗೆ ಕಳುಹಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಅವರೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ ಇದೆ. ಹೀಗಾಗಿ ನನಗೆ ನಿರೀಕ್ಷೆಗೂ ಮೀರಿ ಲಾಭ ಸಿಗುತ್ತಿದೆ’ ಎಂದು ರೈತ ಮಲ್ಲಿಕಾರ್ಜುನ ಪ್ರಜಾವಾಣಿಗೆ ತಿಳಿಸಿದರು.

ಅವರೆ ಬೆಳೆಯ ಜತೆಗೆ ಆಲೂಗಡ್ಡೆ ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದು. ಇದರಿಂದ ಒಂದೇ ಖರ್ಚಿನಲ್ಲಿ ಎರಡು ಆದಾಯ ಪಡೆಯುವುದರ ಜೆತೆಗೆ ಅವರೆ ಬೆಳೆಯುವುದರಿಂದ ಭೂಮಿ ಫ‌ಲವತ್ತಾಗುವುದು ಎಂದು ತಿಳಿಸಿದರು.

ಅವರೆಕಾಯಿ ಬೆಳೆಗೆ ಕೀಟಬಾಧೆಯ ಕಾಣಿಸಿಕೊಂಡರೆ ರೈತರು ಎದೆಗುಂದದೆ ಒಂದು ಲೀಟರ್ ನೀರಿಗೆ ಅರ್ಧ ಎಂ.ಎಲ್ ಫೇಮ್ ಮಿಶ್ರಣವನ್ನು ಸೇರಿಸಿ ಸಿಂಪಡಿಸಬೇಕು. ಅಥವಾ 1 ಲೀಟರ್ ನೀರಿಗೆ ಅರ್ಧ ಗ್ರಾಂ ಪ್ರೋಕ್ಲೆಮ್‌ ಬೆರೆಸಿ ಸಿಂಪಡಿಸಬೇಕು ಎಂದು ತೋಟಗಾರಿಕಾ ವಿಜ್ಞಾನಿ ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ತಿಳಿಸುತ್ತಾರೆ.

ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್‌ ಘೋಷಣೆ ಮಾಡಲಾಗಿತ್ತು. ಇದರಿಂದ ವ್ಯಾಪಾರ ವಹಿವಾಟು ನಡೆಯದ ಸಮಯದಲ್ಲಿ ಮಲ್ಲಿಕಾರ್ಜುನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡರು. ವಿದ್ಯಾವಂತರಾದ ಮಲ್ಲಿಕಾರ್ಜುನ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಕಾಣುತ್ತಿದ್ದಾರೆ ಎಂದು ಗ್ರಾಮದ ಯುವ ರೈತ ಶಿವಕುಮಾರ ರೆಡ್ಡಿ ತಿಳಿಸುತ್ತಾರೆ.

ಯುವಕರು ಕೆಲಸ ಹುಡುಕಿಕೊಂಡು ದೊಡ್ಡ ದೊಡ್ಡ ಪಟ್ಟಣಕ್ಕೆ ತೆರಳುವುದು ಸಾಮಾನ್ಯವಾಗಿದೆ. ಆದರೆ ಮಲ್ಲಿಕಾರ್ಜುನ ಕಡಿಮೆ ಭೂಮಿಯಲ್ಲಿ ಕೈ ತುಂಬಾ ಆದಾಯ ಪಡೆಯಬಹುದು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಇವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಗ್ರಾಮದ ಶಂಕರ ರೆಡ್ಡಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು