ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಕೃಷಿಯಲ್ಲಿ ಯಶಸ್ವಿಯಾದ ಅಶೋಕ

ಕಡಣಿ ಭಾಗಕ್ಕೆ ರೇಷ್ಮೆ ಪರಿಚಯಿಸಿದ ಕೃಷಿಕ; ಹೊಸತನದಲ್ಲಿ ಯಶಸ್ವಿ ಪಥದಲ್ಲಿ..!
Last Updated 8 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಆಲಮೇಲ:‘ಎಲ್ಲರೂ ಬೆನ್ನತ್ತುವ ಬೆಳೆಗೆ ಜೋತು ಬೀಳದೆ ಹೊಸ ಬೆಳೆ ಬೆಳೆಯಬೇಕು ಎಂಬ ಆಲೋಚನೆ ಮೂಡಿತು. ತಕ್ಷಣ ಕಾರ್ಯ ಪ್ರವೃತ್ತನಾದೆ. ಈ ಭಾಗಕ್ಕೆ ಪರಿಚಯವಿಲ್ಲದ ರೇಷ್ಮೆ ಕೃಷಿ ಆರಂಭಿಸಿದೆ. ಎರಡು ಎಕರೆಯಲ್ಲಿ ಸಮೃದ್ಧ ಬೆಳೆಯಿದೆ... ಇದೀಗ ನಾನೂ ಒಬ್ಬ ಯಶಸ್ವಿ ರೇಷ್ಮೆ ಕೃಷಿಕ.’

ಆಲಮೇಲ ಸಮೀಪದ ಕಡಣಿ ಗ್ರಾಮದ ರೈತ ಅಶೋಕ ತಾಂಬೆ ಅವರ ನುಡಿಗಳಿವು.

ತಾಂಬೆ ಜಮೀನು ನ್ಯಾಯಕ್ಕೆ ಬಿದ್ದು ಬೀಳು ಬಿದ್ದಿದೆ. ಇದರ ಬೆನ್ನತ್ತಿದರೆ ಬದುಕು ಕಷ್ಟ ಎಂಬುದನ್ನರಿತು ಬೇರೆಯವರ ನಾಲ್ಕು ಎಕರೆ ಜಮೀನನ್ನು ಗುತ್ತಿಗೆ ಪಡೆದು, ತಲಾ ಎರಡು ಎಕರೆಯಲ್ಲಿ ಕಬ್ಬು, ರೇಷ್ಮೆ ಬೆಳೆದು ಯಶಸ್ವಿಯಾಗಿದ್ದಾರೆ.

ರೇಷ್ಮೆ ಕಡಣಿ ಭಾಗದ ರೈತರಿಗೆ ಪರಿಚಯವಿಲ್ಲದ ಬೆಳೆ. ಇದಕ್ಕೆ ಕೈ ಹಾಕುವ ಮೊದಲು ರಾಮನಗರದಲ್ಲಿ ತರಬೇತಿ ಪಡೆದ ಅಶೋಕ, ವಿವಿಧೆಡೆ ಅಧ್ಯಯನ ಪ್ರವಾಸ ಕೈಗೊಂಡು ಬೆಳೆಯ ಮಾಹಿತಿ ಪಡೆದ ಬಳಿಕವಷ್ಟೇ ರೇಷ್ಮೆ ಕೃಷಿಗೆ ಇಳಿದದ್ದು. ಇಲಾಖೆಯೂ ತಾಂಬೆ ಬೆನ್ನಿಗೆ ನಿಂತಿದೆ.

ಸುಸಜ್ಜಿತ ಶೆಡ್:

₹ 1.20 ಲಕ್ಷ ವೆಚ್ಚದಲ್ಲಿ 30X40 ಅಳತೆಯಲ್ಲಿ ರೇಷ್ಮೆಹುಳುಗಳಿಗಾಗಿ ಸುಸಜ್ಜಿತ ಶೆಡ್‌ ನಿರ್ಮಿಸಲಾಗಿದೆ. ಗಾಳಿ–ಬೆಳಕಿನ ವ್ಯವಸ್ಥೆಯಿದೆ. ಎರಡು ಎಕರೆಯಲ್ಲಿ ರೇಷ್ಮೆ ಬೆಳೆದರೆ, ಶೆಡ್‌ನಲ್ಲಿ ಹುಳು ಸಾಕಿದ್ದಾರೆ. ರೇಷ್ಮೆ ಗಿಡದ ಸೊಪ್ಪನ್ನು ಇವುಗಳಿಗೆ ಆಹಾರವಾಗಿ ಪೂರೈಸುತ್ತಾರೆ.

ಹುಳುಗಳು ಗೂಡು ಕಟ್ಟಿವಿಕೆ ಆರಂಭಿಸಿದ 21 ದಿನಗಳಲ್ಲಿ ತನ್ನ ಸುತ್ತ ಕೋಶವನ್ನು ರಚಿಸಿಕೊಳ್ಳುತ್ತವೆ. ಗೂಡಿನೊಳಗೆ ರೇಷ್ಮೆ ಉತ್ಪಾದಿಸುವ ಹುಳು ಅದರೊಳಗೆ ಅಂತಿಮ ವಿದಾಯ ಹೇಳುತ್ತದೆ. ಇದು ರೇಷ್ಮೆ ಬೆಳೆಯ ಪದ್ಧತಿ.

ಒಂದು ಲಕ್ಷ ರೇಷ್ಮೆ ಹುಳಗಳು ಗೂಡು ಕಟ್ಟುತ್ತಿದ್ದು, ಇನ್ನೂ ಕೆಲ ದಿನಗಳಲ್ಲಿ ಗೂಡು ಮಾರುಕಟ್ಟೆಗೆ ಹೋಗಲಿದೆ. ಕೈಗೆ ಕಾಸು ಸಿಗಲಿದೆ ಎಂಬ ಖುಷಿ ಪಾರ್ವತಿ–ಅಶೋಕ ದಂಪತಿಯದ್ದು.

ಶೆಡ್‌ನೊಳಗೆ ಹುಳುಗಳು ಗೂಡು ಕಟ್ಟುವ ಪ್ರಕ್ರಿಯೆಯಲ್ಲಿವೆ. ಯಾವುದೇ ಖರ್ಚಿಲ್ಲ. ಇಲ್ಲಿಗೆ ಸಮೀಪದ ಅಹಿರಸಂಗ, ಗೊಬ್ಬೂರಿನ ರೇಷ್ಮೆ ಕೇಂದ್ರಗಳಿಂದ ಹುಳು ತಂದು ಸಾಕುತ್ತಿರುವೆ. 50% ಸಬ್ಸಿಡಿಯಿದೆ. ಶೆಡ್‌ ನಿರ್ಮಾಣಕ್ಕೂ ₹ 21000 ಸಬ್ಸಿಡಿ ದೊರಕಿದ್ದು, ರೇಷ್ಮೆ ಅಧಿಕಾರಿಗಳು ಫಾರಂಗೆ ಭೇಟಿ ನೀಡಿ, ಸಲಹೆ ನೀಡುತ್ತಾರೆ ಎಂದು ಅಶೋಕ ತಮ್ಮ ಬೆಳೆ ಬಗ್ಗೆ ಮಾಹಿತಿ ನೀಡಿದರು.

ಎರಡು ಎಕರೆಯಲ್ಲಿ ಫೀ 1, ವಿಶಾಲ ತಳಿಯ ರೇಷ್ಮೆ ಬೆಳೆದಿದ್ದೇನೆ. ಎಂಟು ಅಡಿವರೆಗೆ ಗಿಡ ಸಮೃದ್ಧವಾಗಿ ಬೆಳೆದಿವೆ. ಇದಕ್ಕೆ ತಿಪ್ಪೇ ಗೊಬ್ಬರ ಮಾತ್ರ ಹಾಕಿದ್ದೇನೆ. ಯಾವುದೇ ಕ್ರಿಮಿನಾಶಕ, ರಸಗೊಬ್ಬರ ಬಳಸಿಲ್ಲ. ಇವೆರಡರ ವಾಸನೆ ಹುಳುಗೆ ತಾಕಿದರೆ ಸಾಕು ಸಾಯುತ್ತವೆ. ಎಕರೆಗೆ ₹ 15000 ಖರ್ಚಾಗಿದೆ. ಇದೊಂದು ಸರಳ ಬೆಳೆ ಎಂದು ತಾಂಬೆ ಹೇಳಿದರು.

ಕೃಷಿ ಉಪಕರಣ ಶೋಧಕ

ಎತ್ತರದ ರೇಷ್ಮೆ ಗಿಡದ ತಪ್ಪಲು ಕತ್ತರಿಸಲು ತಾಂಬೆ ತಾನೇ ಒಂದು ಯಂತ್ರ ಶೋಧಿಸಿದ್ದಾರೆ. 12 ವೋಲ್ಟ್ಸ್‌ ಬ್ಯಾಟರಿ ಸಹಾಯದಿಂದ ಈ ಯಂತ್ರ ಕಾರ್ಯ ನಿರ್ವಹಿಸುತ್ತದೆ. ಎಲೆಯ ತುದಿಗಳನ್ನು, ರೋಗ ಬಂದ ಬೆಳೆಯ ಎಲೆಯನ್ನು ಸರಿಯಾಗಿ ಕತ್ತರಿಸಲು ಅನುಕೂಲವಾಗುವಂತೆ ತಾವೇ ವಿನ್ಯಾಸ ಮಾಡಿಕೊಂಡಿದ್ದಾರೆ.

ಇದರ ಜತೆಗೆ ರೇಷ್ಮೆಗೂಡುಗಳನ್ನು ಪ್ರತ್ಯೇಕ ಮಾಡಲು, ಸ್ವಚ್ಛಗೊಳಿಸುವುದಕ್ಕಾಗಿಯೂ ಯಂತ್ರವನ್ನು ಶೋಧಿಸಿದ್ದಾರೆ. ಇದೇ 16ರ ಮಂಗಳವಾರ ಹೊಲದಲ್ಲೇ ರೈತರಿಗಾಗಿ ಪ್ರದರ್ಶನ ಹಮ್ಮಿಕೊಂಡಿದ್ದಾರೆ.

ಮಾರುಕಟ್ಟೆ

ರೇಷ್ಮೆ ಹುಳುಗಳು 21 ದಿನಕ್ಕೆ ಗೂಡು ಕಟ್ಟುತ್ತವೆ. ಈ ಗೂಡುಗಳನ್ನು ರಾಮನಗರ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ವ್ಯಾಪಾರಿಗಳು ಹೊಲಕ್ಕೆ ಬಂದು ಖರೀದಿಸುತ್ತಾರೆ. ಸದ್ಯ ಮಾರುಟಕ್ಟೆಯಲ್ಲಿ ಒಂದು ಕೆ.ಜಿ. ರೇಷ್ಮೆ ಗೂಡಿನ ಧಾರಣೆ ₹ 500 ಇದೆ. ಒಮ್ಮೊಮ್ಮೆ ₹ 700 ಸಿಗಲಿದೆ ಎನ್ನುತ್ತಾರೆ ಅಶೋಕ.

ಈಗ ಮೊದಲ ಗೂಡು ಕಳಿಸಿದ್ದೇನೆ. ₹ 25000 ಸಿಕ್ಕಿದೆ. ಇನ್ಮುಂದೆ ಪ್ರತಿ ಮೂರು ವಾರಕ್ಕೊಮ್ಮೆ ರೇಷ್ಮೆಗೂಡು ಮಾರುಕಟ್ಟೆಗೆ ಹೋಗುತ್ತದೆ. ವರ್ಷಕ್ಕೆ ಕನಿಷ್ಠ ಏನಿಲ್ಲವೆಂದರೂ; ಒಂದು ಎಕರೆಗೆ ₹ 1 ಲಕ್ಷ ಲಾಭ ಸಿಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT