ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲದ್ದಿ ಹುಳು ನಿಯಂತ್ರಣಕ್ಕೆ‘ಡಿಜಿಟಲ್’ ಜಾಗೃತಿ

ಗ್ರಾಮೀಣ ಭಾಗಗಳಲ್ಲಿ ವಾಹನ ಸಂಚರಿಸಿ ಜಾಗೃತಿ
Last Updated 16 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

‘ಹೇ ಶಿವಣ್ಣ, ರೇವಣ್ಣ, ಹೇ ರಫಿ, ಗೋಫಿ, ಸೂರಣ್ಣ, ತಿಪ್ಪಣ್ಣ ಬರ್ರ್ಲಾ ಹೊರಕ್ಕೆ, ಶ್ರಾವಣ ಬಂತು ಅಂದರೆ ಮನೆ ಸೇರ್ಕೊಂಬಿಡ್ತೀರಲ್ಲೋ ಮಾರಾಯ್ರಾ, ಮೆಕ್ಕೆಜೋಳ ಬಿತ್ತಿದ್ರಾ ಆಯ್ತು, ಕೊನೆಗೂ ಒಂದ್ಸಲ ಕೊಯ್ಲು ಮಾಡಿದ್ರಾ ಆಯ್ತು ಅಂದ್ಕೊಂಬಿಟ್ರಾ. ಮೆಕ್ಕೆಜೋಳ್ದಾಗೆ ಯಾವುದೋ ಲದ್ದಿ ಹುಳ ಸೇರ್ಕೋಂಡೈತಂತೆ...!’

ರೈತರ ನಿದ್ದೆಗೆಡಿಸಿರುವ ಲದ್ದಿಹುಳು (ಸೈನಿಕ ಹುಳು) ಬಾಧೆ ನಿಯಂತ್ರಿಸಲು ದಾವಣಗೆರೆ ಕೃಷಿ ಇಲಾಖೆ ತಯಾರಿಸಿರುವ ವಿಡಿಯೊ ದೃಶ್ಯದ ತುಣುಕು ಇದು. ಕೃಷಿ ಇಲಾಖೆ ಈ ವಿಡಿಯೊವನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರದರ್ಶಿಸುತ್ತಿದೆ. ಈ ಕಾರ್ಯಕ್ಕಾಗಿ ಎಲ್‌ಸಿಡಿ ಪರದೆಯುಳ್ಳ ವಾಹನವನ್ನು (ಟ್ಯಾಬ್ಲೊ) ಬಳಸುತ್ತಿದೆ. ದಾವಣಗೆರೆ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸೈನಿಕ ಹುಳು ಬಾಧೆ ಹೆಚ್ಚಾಗಿರುವ ಕಡೆಗಳಲ್ಲಿ ಎಲ್‌ಸಿಡಿ ಪರದೆಯ ಮೂಲಕ ಸೈನಿಕ ಹುಳುವಿನ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಮೊದ ಮೊದಲು ಹುಳುಬಾಧೆ ನಿಯಂತ್ರಣ, ಮಾಹಿತಿ ಹಂಚಲು ಇಲಾಖೆ ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೊರೆ ಹೋಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಡಿಯೊ ತಯಾರಿಸಿ, ಅದನ್ನು ಟ್ಯಾಬ್ಲೊ ಮೂಲಕ ವಿವಿಧ ಹಳ್ಳಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುತ್ತಿದೆ.

ಈ ವಿಡಿಯೊ ಪ್ರಚಾರ, ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದುಗಲ್ ಅವರ ಪರಿಕಲ್ಪನೆ. ಒಟ್ಟು 14 ನಿಮಿಷ 48 ಸೆಕೆಂಡ್‌ಗಳಿರುವ ಈ ವಿಡಿಯೊವನ್ನು ಈಗಾಗಲೇ 475ಕ್ಕೂ ಹೆಚ್ಚು ಮಂದಿ ವೀಕ್ಷಿಸಿ, 140 ಮಂದಿ ಸಬ್‌ಸ್ಕ್ರೈಬ್ ಮಾಡಿದ್ದಾರೆ.

ವಿಡಿಯೊದಲ್ಲಿ ಲದ್ದಿಹುಳುಗಳ ಹುಟ್ಟು, ಬೆಳವಣಿಗೆ, ಕೀಟಬಾಧೆಯ ಲಕ್ಷಣಗಳು, ಸಮಗ್ರ ಹತೋಟಿ ಕ್ರಮಗಳು, ಸಾಗುವಳಿ ಕ್ರಮಗಳು, ಮೇಲ್ವಿಚಾರಣಾ ಕ್ರಮಗಳು, ಯಾಂತ್ರಿಕ, ಜೈವಿಕ ನಿರ್ವಹಣಾ ಕ್ರಮಗಳು, ರಾಸಾಯನಿಕಗಳ ಬಳಕೆ, ನಿರ್ಬಂಧಗಳನ್ನು ವಿವರಿಸಲಾಗಿದೆ.

ಜನ ಸೇರುವ ಜಾಗದಲ್ಲಿ..

ದಾವಣಗೆರೆ ಜಿಲ್ಲೆಯಾದ್ಯಂತ ಹಳ್ಳಿಗಳಿಗೆ ಈ ವಾಹನ ಸಂಚರಿಸುತ್ತದೆ. ಪಂಚಾಯಿತಿ ಕಟ್ಟೆ, ದೇವಾಲಯಗಳ ಮುಂದೆ ವಾಹನ ನಿಂತು, ವಿಡಿಯೊ ಪ್ರದರ್ಶನ ಮಾಡುತ್ತಾರೆ. ಎಲ್ಲ ರೀತಿಯ ಹಳ್ಳಿಗಳಿಗೂ ಈ ವಾಹನ ಸಂಚಾರ ಮಾಡುತ್ತಿದೆ.

ಗ್ರಾಮೀಣ ಶೈಲಿಯ ಸಂಭಾಷಣೆ ಇದೆ. ರೈತರಿಗೆ ಬಹಳ ಬೇಗ ಅರ್ಥವಾಗುತ್ತದೆ. ನಿರೂಪಣಾ ಶೈಲಿ ಸೊಗಸಾಗಿದೆ. ಡಾ. ಶ್ರೀಧರ್ ಸಂಭಾಷಣೆಗೆ ದನಿಗೂಡಿಸಿದ್ದಾರೆ.

ನಾವೇಕೆ ಮಾಡಬಾರದು?

‘ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳ ಮಾರ್ಕೆಟ್‌ಗಾಗಿ ಈ ತಂತ್ರಜ್ಞಾನವನ್ನು ಬಳಸುತ್ತಿದ್ದರು. ನಾವೂ ಏಕೆ ಬಳಸಬಾರದು ಎಂಬ ಆಲೋಚನೆ ಬಂತು. ಸಾಂಪ್ರದಾಯಿಕ ವಿಧಾನಗಳಿಗೆ ಜನರಿಂದ ಪ್ರತಿಕ್ರಿಯೆ ಕಡಿಮೆ ಇರುತ್ತದೆ. ಆದರೆ ನವ ಮಾಧ್ಯಮಗಳಿಗೆ ಜನರು ಬೇಗ ಆಕರ್ಷಣೆಗೆ ಒಳಗಾಗುವುದರಿಂದ ಈ ವಿಧಾನವನ್ನು ಬಳಸಿಕೊಳ್ಳಲಾಗಿದೆ’ ಎನ್ನುತ್ತಾರೆ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಶ್ರೀಧರಮೂರ್ತಿ.

‘ಎಲ್‌ಸಿಡಿ ರಾತ್ರಿ ವೇಳೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅಲ್ಲದೇ ಬಿಡುವಿನ ಸಮಯವಾದ್ದರಿಂದ ಹೆಚ್ಚು ರೈತರು ವೀಕ್ಷಿಸುತ್ತಾರೆ. ಅನಕ್ಷರಸ್ಥರಿಗೂ ಇದು ಬೇಗ ಅರ್ಥವಾಗುವ ಮಾಧ್ಯಮವಾದ್ದರಿಂದ ಇದನ್ನು ಬಳಸಿದ್ದೇವೆ. ಟ್ಯಾಬ್ಲೊ ಹಗಲು ಹಾಗೂ ರಾತ್ರಿ ವೇಳೆಯಲ್ಲಿಯೂ ಸಂಚರಿಸುವುದರಿಂದ ಎಲ್ಲಾ ಹಳ್ಳಿಗಳಿಗೂ ತಲುಪಬಹುದು ಎಂಬುದು ಇಲಾಖೆಯ ಉದ್ದೇಶ’ ಎಂದು ಹೇಳುತ್ತಾರೆ.

ಈ ಟ್ಯಾಬ್ಲೊದಲ್ಲಿ ಲದ್ದಿಹುಳು ಕುರಿತ ಭಿತ್ತಿಪತ್ರಗಳನ್ನು ವಾಹನದ ಸುತ್ತಲೂ ಅಳವಡಿಸಿದ್ದು, ಇವುಗಳೂ ರೈತರನ್ನು ಆಕರ್ಷಿಸುತ್ತಿವೆ. ಪ್ರಚಾರ ದೃಶ್ಯಾವಳಿ ನೋಡಲು ಈ ಯೂಟ್ಯೂಬ್ ಲಿಂಕ್:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT