ಶನಿವಾರ, ಅಕ್ಟೋಬರ್ 16, 2021
22 °C

ಕೃಷಿ ಬೆಳೆಯ ರೇಟು ಬೇಕಾದರೆ ಡೇಟಾ ಬೇಕು!

ಕೃಷ್ಣ ಭಟ್ Updated:

ಅಕ್ಷರ ಗಾತ್ರ : | |

Prajavani

ಡೇಟಾ ತೀರಾ ಇತ್ತೀಚಿನವರೆಗೂ ತಂತ್ರಜ್ಞಾನವನ್ನು ಆಧರಿಸಿದ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿತ್ತು. ನಗರದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಡೇಟಾ, ಆತನನ್ನು ವಿವಿಧ ಕಂಪನಿಗಳ ಕೈಯಲ್ಲಿ ವಿವಿಧ ಸೇವೆ, ಉತ್ಪನ್ನಗಳಿಗೆ ಸಂಭಾವ್ಯ ಗಿರಾಕಿಯನ್ನಾಗಿಸಿದೆ. ವ್ಯಕ್ತಿಯೊಬ್ಬನ ಹಣಕಾಸು ಸ್ಥಿತಿಗತಿಯ ಡೇಟಾಗೆ ಕಾಳಮಾರುಕಟ್ಟೆಯಲ್ಲಿ ₹0.5 ಪೈಸೆಯಿಂದ ₹2 ವರೆಗೆ ಮಾರಾಟವಾಗುತ್ತದೆ. ಒಂದೊಂದು ಕಂಪನಿಗಳೂ ಹತ್ತಾರು ಕೋಟಿ ಜನರ ನಂಬರುಗಳನ್ನು ಇಟ್ಟುಕೊಂಡು ಕೂತಿವೆ. ಅವುಗಳನ್ನು ಡೇಟಾ ಸೈಂಟಿಸ್ಟ್‌ಗಳು ಕುಳಿತು ವಿಶ್ಲೇಷಿಸಿ ತಮ್ಮ ತಮ್ಮ ಉತ್ಪನ್ನಗಳನ್ನು ಯಾರಿಗೆಲ್ಲ ತಲುಪಿಸಬಹುದು ಎಂದು ಹೊಂಚುಹಾಕುತ್ತಿರುತ್ತಾರೆ. ಇವೆಲ್ಲದರ ಜೊತೆಗೆ, ಈ ಡೇಟಾದಿಂದ ಆದ ಅನುಕೂಲವೆಂದರೆ ಹೊಸ ಹೊಸ ಉತ್ಪನ್ನಗಳು, ಸೇವೆಗಳು ಮಾರುಕಟ್ಟೆಗೆ ಬಂದಿವೆ. ಇವೆಲ್ಲವೂ ಗ್ರಾಹಕನಾಗಿ ಸಾಮಾನ್ಯ ವ್ಯಕ್ತಿಯ ಜೀವನವನ್ನು ಸುಧಾರಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ತಲೆತಪ್ಪಿಸಿಕೊಂಡಿದ್ದವರು ಎಂದರೆ ಕೃಷಿಕರು. ಯಾಕೆಂದರೆ, ಕೃಷಿಕರ ಆದಾಯ ಕಡಿಮೆ. ಇತ್ತೀಚಿನ ಅಧ್ಯಯನದ ಪ್ರಕಾರ ಸಾಮನ್ಯ ಕೃಷಿಕನೊಬ್ಬ ದಿನಕ್ಕೆ ಗಳಿಸುವ ಆದಾಯ ₹27. ಅಂಥ ಒಬ್ಬ ಸಾಮಾನ್ಯ ಕೃಷಿಕನಿಗೆ ಏನನ್ನು ತಾನೆ ಮಾರಾಟ ಮಾಡಲು ಸಾಧ್ಯ? ಹೀಗಾಗಿ, ಬಹುತೇಕ ಖಾಸಗಿ ಕಂಪನಿಗಳು ಈ ವಲಯಕ್ಕೆ ಕಾಲಿಟ್ಟಿರಲಿಲ್ಲ. ಅಷ್ಟೇ ಅಲ್ಲ, ಇಲ್ಲಿ ಡೇಟಾ ಸಂಗ್ರಹ ಕೂಡ ಸರ್ಕಾರದ ಇಲಾಖೆಗಳನ್ನು ಹೊರತುಪಡಿಸಿ, ಖಾಸಗಿ ಸಂಸ್ಥೆಗಳೂ ಮಾಡಿಲ್ಲವೆಂದೇ ಹೇಳಬಹುದು. ಅಪವಾದವೆಂಬಂತೆ, ಕೆಲವು ಸಣ್ಣ ಪುಟ್ಟ ಕಂಪನಿಗಳು ಮಾಡಿರಬಹುದಾದರೂ, ದೇಶದಾದ್ಯಂತ ಈ ಕಾರ್ಯ ನಡೆದಿಲ್ಲ. ರೈತರ ಆದಾಯವನ್ನು ಹೆಚ್ಚಿಸಬೇಕು ಎಂದು ಸರ್ಕಾರಗಳು ಪ್ರಯತ್ನಿಸುತ್ತಿರುವ ಈ ಹೊತ್ತಿನಲ್ಲಿ ರೈತರ ಡೇಟಾ ಇಟ್ಟುಕೊಂಡು ಅದನ್ನು ವಿಶ್ಲೇಷಿಸಿ, ಅವರ ದಕ್ಷತೆಯನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡಬಹುದು ಎಂಬುದನ್ನು ನೋಡುವುದು ಸದ್ಯದ ಅಗತ್ಯವಾಗಿತ್ತು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಅಮೆಜಾನ್, ಮೈಕ್ರೊಸಾಫ್ಟ್, ಸಿಸ್ಕೋ, ರಿಲಾಯನ್ಸ್‌ನಂತಹ ದೊಡ್ಡ ದೊಡ್ಡ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಸರ್ಕಾರ ಸಂಗ್ರಹಿಸಿದ ಡೇಟಾಗಳನ್ನು ಈ ಖಾಸಗಿ ಕಂಪನಿಗಳಿಗೂ ಒದಗಿಸಲಿದೆ.

ಕೃಷಿಕರಿಗೆ ಡೇಟಾದ ಉಪಯೋಗವೇನು?

ಈ ಕಂಪನಿಗಳು ಇಂತಹ ಡೇಟಾ ಇಟ್ಟುಕೊಂಡು ರೈತರಿಗೆ ಅಗತ್ಯದ ಮಾಹಿತಿ ಕೊಡಲಿವೆ. ಯಾವಾಗ ಬೆಳೆ ಬೆಳೆಯಬೇಕು, ಹವಾಮಾನದ ಪರಿಸ್ಥಿತಿ, ಯಾವ ಸಮಯದಲ್ಲಿ ಯಾವ ಔಷಧ ಸಿಂಪಡಿಸಬೇಕು ಎಂಬ ಎಲ್ಲ ಮಾಹಿತಿಯನ್ನು ರೈತರಿಗೆ ನೀಡುತ್ತವೆ. ಅಲ್ಲದೆ, ಈ ಡೇಟಾ ಇಟ್ಟುಕೊಂಡು ಈ ಕಂಪನಿಗಳು ರೈತರ ಜೀವನ ಸುಧಾರಿಸಲು ಹಲವು ಸೇವೆಗಳನ್ನೂ ಉತ್ಪನ್ನಗಳನ್ನೂ ಸಿದ್ಧಪಡಿಸಬಹುದು.

ಈ ಡೇಟಾ ಹಂಚಿಕೊಳ್ಳುವ ಮೂಲ ಉದ್ದೇಶವೇ, ಬೆಳೆಯ ವಿಧ, ಮಣ್ಣಿನ ಆರೋಗ್ಯ, ವಿಮೆ, ಸಾಲ ಮತ್ತು ಹವಾಮಾನ ಪರಿಸ್ಥಿತಿಗಳನ್ನೆಲ್ಲ ಒಂದೇ ಡೇಟಾಬೇಸ್‌ಗೆ ಸೇರಿಸಿ, ಅದನ್ನು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಡೇಟಾ ಅನಾಲಿಟಿಕ್ಸ್ ಬಳಸಿ ವಿಶ್ಲೇಷಣೆ ಮಾಡುವುದಾಗಿದೆ. ಈ ಕಂಪನಿಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ ಮತ್ತು ಡೇಟಾ ಅನಾಲಿಟಿಕ್ಸ್‌ನಲ್ಲಿ ಪರಿಣತಿ ಹೊಂದಿರುವುದರಿಂದ ಡೇಟಾ ವಿಶ್ಲೇಷಣೆ ಅತ್ಯಂತ ದಕ್ಷವಾಗಿ ನಡೆಯುತ್ತದೆ. ಇದರಿಂದ ರೈತರಿಗೆ ತಮ್ಮ ಬೆಳೆ ಕುರಿತ ನಿರ್ಧಾರ ಮಾಡಲು ಸಹಾಯವಾಗುತ್ತದೆ.

ಜಾರಿಯಲ್ಲಿದೆ ಪ್ರಯೋಗ

ಸದ್ಯ ಸುಮಾರು ಐದು ಕೋಟಿ ರೈತರ ಡೇಟಾವನ್ನು ಸರ್ಕಾರ ಕೆಲವು ಸಂಸ್ಥೆಗಳ ಜೊತೆಗೆ ಹಂಚಿಕೊಳ್ಳುತ್ತಿದೆ. ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿರುವ ಡೇಟಾವನ್ನೇ ಸರ್ಕಾರ ಈ ಸಂಸ್ಥೆಗಳ ಜೊತೆಗೆ ಹಂಚಿಕೊಳ್ಳುತ್ತಿದೆ. ಸ್ಟಾರ್‌ ಅಗ್ರಿಬಝಾರ್ ಟೆಕ್ನಾಲಜಿ, ಇಎಸ್‌ಆರ್‌ಐ ಇಂಡಿಯಾ ಟೆಕ್ನಾಲಜೀಸ್, ಪತಂಜಲಿ ಆರ್ಗ್ಯಾನಿಕ್ ರಿಸರ್ಚ್‌ ಇನ್‌ಸ್ಟಿಟ್ಯೂಟ್ ಮತ್ತು ನಿಂಜಾಕಾರ್ಟ್‌ ಜೊತೆಗೆ ಹಂಚಿಕೊಳ್ಳುತ್ತಿದೆ. ಆದರೆ, ಈ ಬಾರಿ ಸರ್ಕಾರ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಅಮೆಜಾನ್‌, ಮೈಕ್ರೋಸಾಫ್ಟ್‌ನಂತಹ ವಿದೇಶಿ ಮೂಲದ ಕಂಪನಿಗಳಿಗೂ ಈ ಡೇಟಾಗಳನ್ನು ಒದಗಿಸಲು ನಿರ್ಧರಿಸಿದೆ.

ಇನ್ನೊಂದೆಡೆ, ಒಂದು ಪ್ರಾಯೋಗಿಕ ಯೋಜನೆ ಕೂಡ ಜಾರಿಯಲ್ಲಿದ್ದು, 100 ಹಳ್ಳಿಗಳನ್ನು ಮೈಕ್ರೋಸಾಫ್ಟ್ ಆಯ್ಕೆ ಮಾಡಿಕೊಂಡು, ಅಲ್ಲಿ ಎಐ, ಮಶಿನ್ ಲರ್ನಿಂಗ್‌ ಅನ್ನು ಬಳಸಿ ಪ್ಲಾಟ್‌ಫಾರಂ ರೂಪಿಸುವ ಯೋಜನೆಯನ್ನು ನಡೆಸುತ್ತಿದೆ. ಇನ್ನು ಅಮೆಜಾನ್ ಕೂಡ ತನ್ನ ಮೊಬೈಲ್ ಆ್ಯಪ್ ಮೂಲಕ ಸಲಹೆ ಮತ್ತು ಮಾಹಿತಿಯನ್ನು ರೈತರಿಗೆ ಒದಗಿಸುತ್ತಿದೆ. ಅಲ್ಲದೆ, ತನ್ನ ಕ್ಲೌಡ್ ಸೇವೆಯನ್ನೂ ರೈತರಿಗೆ ಒದಗಿಸುತ್ತಿದೆ.

ಅಪಾಯವೂ ಇದೆ!

ಖಾಸಗಿ ಕಂಪನಿಗಳಿಗೆ ಡೇಟಾ ನೀಡುವಲ್ಲಿ ಕೆಲವು ಅಪಾಯವೂ ಇದೆ. ಖಾಸಗಿ ಕಂಪನಿಗಳು ತಮ್ಮ ಉತ್ಪನ್ನಗಳನ್ನು ರೈತರಿಗೆ ಮಾರಿ, ಲಾಭ ಮಾಡಿಕೊಳ್ಳುವ ದೃಷ್ಟಿಯಿಂದ ಮಾತ್ರವೇ ಯೋಚಿಸಬಹುದು. ಅಲ್ಲದೆ, ಈ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೂ ಒಂದು ಐಡಿ ಒದಗಿಸುವ ಚಿಂತನೆ ಇದ್ದು, ಇದರಿಂದ ರೈತರ ಮಾಹಿತಿ ಗೌಪ್ಯತೆಯ ಆತಂಕವೂ ಉಂಟಾದೀತು. ಆದರೆ, ಇದರಲ್ಲಿರುವ ಲಾಭ, ಅನುಕೂಲದ ಅಂಶಗಳನ್ನು ಗಮನಿಸಿದರೆ, ಅಪಾಯ ಕಡಿಮೆಯೆಂದೇ ಹೇಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು