ಗುರುವಾರ , ಏಪ್ರಿಲ್ 2, 2020
19 °C

‘ವಾಣಿಜ್ಯ’ದತ್ತ ಒಂದೆಲಗ

ಸಿ.ಎಸ್.ನಿರ್ವಾಣಸಿದ್ದಯ್ಯ Updated:

ಅಕ್ಷರ ಗಾತ್ರ : | |

Prajavani

ಒಂದೆಲಗ ಸಸ್ಯದ ಹೆಸರು ಕೇಳಿದ್ದೀರಾ? ಅದು ಹೇಗಿದೆ ಎಂದು ನೋಡಿದ್ದೀರಲ್ಲವಾ? ಎಂದು ಕೇಳಿದರೆ, ಕರಾವಳಿ, ಮಲೆನಾಡಿಗರು, ‘ಓ.. ಅದರ ತಂಬುಳಿ ಅದ್ಭುತವಾಗಿರುತ್ತದೆ’ ಎನ್ನುತ್ತಾರೆ. ಸ್ವಲ್ಪ ಹಿರಿಯನ್ನು ಕೇಳಿದರೆ, ಅದರ ಎಲೆ ಯಾವ್ಯಾವ ಔಷಧವಾಗಿ ಬಳಕೆಯಾಗುತ್ತದೆ ಎಂಬ ವಿವರ ನೀಡುತ್ತಾರೆ. ಬಯಲುಸೀಮೆಯವರಿಗೆ ‘ಒಂದೆಲಗ ನೋಡಿದ್ದೀರಲ್ಲಾ’ ಎಂದು ಕೇಳಿದರೆ ಸಾಕು. ‘ಹೌದು, ಅದೇ ಬೇಲಿಯಲ್ಲಿರುತ್ತದಲ್ಲಾ, ಆ ಸಸ್ಯ ತಾನೇ. ನೋಡಿದ್ದೀವಿ, ಬಿಡಿ’ ಎನ್ನುತ್ತಾರೆ. ಹೀಗೆ ಬೇಲಿ ಬದಿಯಲ್ಲಿ ಸಾಮಾನ್ಯವಾಗಿ ಬೆಳೆಯುವ ಈ ಸಸ್ಯ, ಚಿರಪರಿಚಿತವಾಗಿದೆ.

ಆದರೆ, ‘ಇಂಥ ಬೇಲಿ ಬದಿ ಸಸ್ಯಕ್ಕೆ ವಾಣಿಜ್ಯಮೌಲ್ಯವಿದೆ. ಅದನ್ನು ಆಯುರ್ವೇದ ಔಷಧ ತಯಾರಿಕೆ ಸಂಸ್ಥೆಗಳು ಖರೀದಿಸುತ್ತಿವೆ. ಹೀಗಾಗಿ, ಈ ಒಂದೆಲಗವನ್ನು ವಾಣಿಜ್ಯ ವಾಗಿಯೂ ಬೆಳೆಯಬಹುದು’ ಎನ್ನುತ್ತಾರೆ ಬೆಂಗಳೂರು ಸಮೀಪದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್‌ಆರ್‌) ವಿಜ್ಞಾನಿಗಳು. ಸಂಸ್ಥೆಯ ವಿಜ್ಞಾನಿಗಳಾದ ಹಿಮಾಬಿಂದು ಮತ್ತು ರೋಹಿಣಿಯವರು ವಾಣಿಜ್ಯ ದೃಷ್ಟಿಯಿಂದ ಬೆಳೆಸುವುದಕ್ಕಾಗಿ ‘ಅರ್ಕಾ ದಿವ್ಯ ಮತ್ತು ಅರ್ಕಾ ಪ್ರಭಾವಿ’ ಎಂಬ ಎರಡು ಒಂದೆಲಗ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಅರ್ಕಾ ದಿವ್ಯ ಆಹಾರಕ್ಕೆ ಬಳಸುವ ತಳಿಯಾದರೆ, ಅರ್ಕಾ ಪ್ರಭಾವಿ ಔಷಧಕ್ಕೆ ಉಪಯೋಗಿಸುವ ತಳಿ. ಈ ತಳಿಗಳ ಅಭಿವೃದ್ದಿಗೂ ಮುನ್ನ ಅವರು ಭಾರತದಲ್ಲಿರುವ ಸುಮಾರು 38 ಬಗೆಯ ತಳಿಗಳನ್ನು ಅಧ್ಯಯನ ಮಾಡಿದ್ದಾರಂತೆ. ಸಾಮಾನ್ಯ ಒಂದೆಲಗದಲ್ಲಿ ಆಹಾರ ಮತ್ತು ಔಷಧ ಗುಣ ಒಂದರಲ್ಲೇ ಇರುತ್ತದೆ. ಐಐಎಚ್‌ಆರ್ ಅಭಿವೃದ್ಧಿಪಡಿಸಿರುವುದರಲ್ಲಿ ಆಹಾರ ಮತ್ತು ಔಷಧ ಗುಣ ಬೇರೆ ಬೇರೆ ತಳಿಗಳಲ್ಲಿವೆ.

ಈ ಒಂದೆಲಗಕ್ಕೆ ಇಂಗ್ಲಿಷ್‌ನಲ್ಲಿ ಇಂಡಿಯನ್‌ ಪೆನ್ನಿವರ್ಟ್‌ (Indian Penny wort) ಎನ್ನುತ್ತಾರೆ. ಸಸ್ಯ ಶಾಸ್ತ್ರೀಯ ಹೆಸರು ಸೆಂಟೆಲ್ಲಾ ಅಸಿಯಾಟಿಕ (Centella asiatica).

ಬೆಳೆಯುವ ವಿಧಾನ

ಮಳೆಗಾಲದಲ್ಲಿ ನಾಟಿ ಮಾಡುವುದು ಹೆಚ್ಚು ಸೂಕ್ತ. ಸಾಮಾನ್ಯವಾಗಿ ಈ ಸಸಿಯನ್ನು ಅಡಿಕೆ ಮತ್ತು ತೆಂಗಿನಮರದ ಮಧ್ಯ ಸಾಲಿನಲ್ಲಿ ಬೆಳೆಯಬಹುದು. ಇಲ್ಲವೇ ಏರು ಮಡಿಗಳನ್ನು ಮಾಡಿ, ಅದರ ಮೇಲೆ ನಾಟಿ ಮಾಡಬಹುದು.

ಗಿಡಕ್ಕೆ ಹೆಚ್ಚು ತೇವಾಂಶವಿರಬೇಕು. ಹಾಗಾಗಿ ಹೆಚ್ಚು ನೆರಳು ಇರುವ ಪ್ರದೇಶದಲ್ಲೇ ಬೆಳೆಯಬೇಕು. ಪರದೆಗಳನ್ನು ಹಾಕಿ ಇಲ್ಲವೇ ಚಪ್ಪರವನ್ನು ಹಾಕಿ ಸಸಿಗಳಿಗೆ ನೆರಳು ಬೀಳುವ ವ್ಯವಸ್ಥೆ ಮಾಡಬೇಕು.

ಇದು 90 ದಿನಗಳ ಬೆಳೆ. ಇಷ್ಟು ದಿನಗಳ ನಂತರ, ಪ್ರತಿ ತಿಂಗಳು ಎಲೆಗಳನ್ನು ಕೊಯ್ಯಬಹುದು. ಎಲೆಗಳನ್ನು ಕತ್ತರಿಸಿದ ಹಾಗೆ ಗಿಡವು ಸಮೃದ್ಧಿಯಾಗಿ ಬೆಳೆಯುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ರೋಗ ಬಾಧೆ, ನಿವಾರಣೆ

ಮಳೆಗಾಲದಲ್ಲಿ ಈ ಬೆಳೆಗೆ ಫಂಗಸ್ ಬರುತ್ತದೆ. ಅಷ್ಟು ಬಿಟ್ಟರೆ ಯಾವುದೇ ಕೀಟ, ರೋಗಬಾಧೆ ಇಲ್ಲ. ಹೀಗಾಗಿ, ಶ್ರಮವಿಲ್ಲದೇ ಒಂದೆಲಗವನ್ನು ಬೆಳೆಸಬಹುದು. ಒಂದು ಎಕರೆ ಒಂದೆಲಗ ಬೆಳೆಯಲು ನೂರು ಕೆ.ಜಿ.ಯಷ್ಟು ಸಸಿಗಳು ಬೇಕಾಗುತ್ತದೆ. ಇಷ್ಟು ಸಸಿಗಳು ಬೆಳೆದರೆ, ಒಂದು ಸಾವಿರ ಕೆ.ಜಿ.ಯಷ್ಟು ಎಲೆಗಳು ಸಿಗುತ್ತವೆ.  

ಮಾರುಕಟ್ಟೆ ಹೇಗೆ?

ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಿ ರುವ ತಳಿಗಳನ್ನು ರೈತರಿಗೆ ವಿತರಿಸಬೇಕಾಗಿದೆಯಂತೆ. ‘ಸದ್ಯದಲ್ಲಿ ಕೇಂದ್ರದಲ್ಲೇ ಬೆಳೆಸಿರುವ ಸಸಿಗಳನ್ನು ಹಿಮಾಲಯ ಡ್ರಗ್ ಹೌಸ್ ಮತ್ತು ನೇಚರ್‌ ರೆಮಿಡೀಸ್ ಕಂಪನಿಗಳು ಖರೀದಿಸುತ್ತಿವೆ. ಕೆಲವು ಆಹಾರೋತ್ಪನ್ನ ಸಂಸ್ಥೆಗಳು ಸಸಿಗಳಿಗೆ ಬೇಡಿಕೆ ಸಲ್ಲಿಸಿವೆ‘ ಎನ್ನುತ್ತಾರೆ ವಿಜ್ಞಾನಿ ರೋಹಿಣಿ.

ಒಂದೆಲಗಕ್ಕೆ ವಿಶ್ವದಾದ್ಯಂತ ಬೇಡಿಕೆ ಇದೆ. ಈ ಸಸ್ಯದ ಒಣಗಿದ ಎಲೆಗಳಿಗೆ ಉತ್ತಮ ಬೆಲೆ ಇದೆ. ಒಂದು ಕೆ.ಜಿ ಒಣಗಿದ ಎಲೆಗೆ ₹100, ತಾಜಾ ಎಲೆಗಳಿಗೆ ₹25. ಬೇರು ಸಮೇತ ಮಾರುವ ಗಿಡಕ್ಕೆ ₹200.

‘ಕರ್ನಾಟಕದಲ್ಲಿ ಒಂದೆಲಗ ಬೆಳೆಯುವರ ಸಂಖ್ಯೆ ವಿರಳ. ಹಾಗಾಗಿ ಹೊರ ರಾಜ್ಯಗಳ ಬೆಳೆಗಾರರಿಂದ ಖರೀದಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಬೆಂಗಳೂರಿನ ನೇಚರ್ ರೆಮಿಡೀಸ್ ಕಂಪನಿಯ ಮಹೇಶ್ವರ್.

ಹೊಸದಾಗಿ ಅಭಿವೃದ್ದಿಪಡಿಸಿರುವ ಒಂದೆಲಗ ತಳಿಗಳು ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆಯಲ್ಲಿ ಲಭ್ಯವಿವೆ. ತಳಿ ಹಾಗೂ ಅವುಗಳನ್ನು ಕೃಷಿ ಮಾಡುವ ಕುರಿತು ಹೆಚ್ಚಿನ ಮಾಹಿತಿಗಾಗಿ 080-23086100/251 ಸಂಪರ್ಕಿಸಬಹುದು. (ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ, ಬೆಳಿಗ್ಗೆ 9 ರಿಂದ ಸಂಜೆ 4ರವರೆಗೆ ಸಂಪರ್ಕಿಸಬಹುದು). (ಮಾರುಕಟ್ಟೆ ವಿವರಗಳಿಗಾಗಿ : 99452-32116).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು