ಮಂಗಳವಾರ, ಜನವರಿ 21, 2020
29 °C
ಇಲಾಖೆಗಳ ಮೂಲಕ ರಾಜ್ಯದಾದ್ಯಂತ ಇ–ಸ್ಯಾಪ್ ತಂತ್ರಾಂಶ ಅನುಷ್ಠಾನ

ಬೆರಳ ತುದಿಯಲ್ಲಿ ಬೆಳೆ ರಕ್ಷಣೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಶಿರಸಿ: ಕೃಷಿ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬಳಕೆಯಾಗುತ್ತಿದ್ದ ಕೃಷಿ, ತೋಟಗಾರಿಕಾ ಬೆಳೆ ಸಂರಕ್ಷಣೆಯ ‘ಇ–ಸ್ಯಾಪ್’ (e–Solutions against Agricultural Pests) ತಂತ್ರಾಂಶವು, ಪ್ರಸ್ತುತ ಸರ್ಕಾರಿ ಇಲಾಖೆಗಳ ಮೂಲಕ ರಾಜ್ಯದಾದ್ಯಂತ ಕಾರ್ಯನಿರ್ವಹಿಸಲಾರಂಭಿಸಿದೆ.

ಕೃಷಿ ಇಲಾಖೆಯ 1000 ಅಧಿಕಾರಿಗಳು, ತೋಟಗಾರಿಕಾ ಇಲಾಖೆಯ 800 ಅಧಿಕಾರಿಗಳು ಮೊಬೈಲ್‌ ಮೂಲಕವೇ, ರೈತರ ಜಮೀನಿನಲ್ಲಿ ಬೆಳೆಗಳಿಗೆ ತಗಲುವ ಕೀಟ, ರೋಗ ಬಾಧೆ, ಪೋಷಕಾಂಶ ಕೊರತೆ, ಹೊಲದಲ್ಲಿ ಕಳೆ ನಿವಾರಣೆಗೆ ಈ ತಂತ್ರಾಂಶ ಆಧರಿಸಿ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಅಡಿಕೆ, ತೆಂಗು, ಹಣ್ಣಿನ ಬೆಳೆಗಳು, ತರಕಾರಿ ಸೇರಿದಂತೆ 20 ತೋಟಗಾರಿಕಾ ಬೆಳೆಗಳು, ಭತ್ತ, ಮೆಕ್ಕೆಜೋಳ ಸೇರಿದಂತೆ 20 ಕೃಷಿ ಬೆಳೆಗಳ ಸಮಗ್ರ ಮಾಹಿತಿಯನ್ನು ಈ ತಂತ್ರಾಂಶ ಒಳಗೊಂಡಿದೆ.

‘ಎಂಟು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ್ದ ಈ ತಂತ್ರಾಂಶವನ್ನು ರಾಯಚೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿತ್ತು. ನಂತರ ಬೇರೆ ಕೃಷಿ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡವು. ಪ್ರಸಕ್ತ ವರ್ಷ ಕೃಷಿ ಹಂಗಾಮಿನಿಂದ ರಾಜ್ಯ ಸರ್ಕಾರ, ಇಲಾಖೆಗಳ ಮೂಲಕ ಇದನ್ನು ಜಾರಿಗೊಳಿಸಿದೆ. ತಂತ್ರಾಂಶ ಬಳಕೆ ಸಂಬಂಧ ಅಧಿಕಾರಿಗಳಿಗೆ ಎರಡು ಸುತ್ತಿನ ತರಬೇತಿ ನೀಡಲಾಗಿದೆ’ ಎನ್ನುತ್ತಾರೆ ತಂತ್ರಾಂಶದ ಪ್ರಧಾನ ಸಂಶೋಧಕರಾಗಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೀಟವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎ.ಪ್ರಭುರಾಜ್.

‘ಆಫ್‌ಲೈನ್‌ನಲ್ಲೂ ಕೆಲಸ ಮಾಡುವ ಈ ತಂತ್ರಾಂಶ, ಎಲ್ಲರಿಗೂ ಲಭ್ಯವಿಲ್ಲ. ಬಳಕೆ ಮಾಡುವಾಗ ಕೊಂಚ ಎಡವಿದರೂ, ಬೆಳೆ ನಿರ್ವಹಣೆಯ ಕ್ರಮವೇ ತಪ್ಪಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ತರಬೇತಿ ಪಡೆದ ಅಧಿಕಾರಿಗಳ ಮೊಬೈಲ್‌ನಲ್ಲಿ ಮಾತ್ರ ಅಳವಡಿಸಲಾಗಿದೆ. ಈ ತಂತ್ರಾಂಶ ಹೊಂದಿರುವ ಅಧಿಕಾರಿಗಳು ಬೆಳೆಗಳ ವೈದ್ಯರಿದ್ದಂತೆ. ರೈತರ ಹೊಲದಲ್ಲಿ ನಿಂತು, ಬೆಳೆಗೆ ಬಂದಿರುವ ರೋಗ ಅಥವಾ ಕೀಟ ಬಾಧೆ, ರೋಗದ ಹಂತ, ಪೋಷಕಾಂಶದ ಕೊರತೆ ಇನ್ನಿತರ ಅಗತ್ಯ ಸಂಗತಿಗಳನ್ನು ಅಪ್‌ಲೋಡ್ ಮಾಡಿದರೆ, ಈ ಸಮೀಕ್ಷೆ ಆಧರಿಸಿ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಂತ್ರಾಂಶ ಮಾಹಿತಿ ನೀಡುತ್ತದೆ. ರೋಗ ಗುರುತಿಸಲು ಸಾಧ್ಯವಾಗದಿದ್ದಲ್ಲಿ ಚಿತ್ರ ಮತ್ತು ಧ್ವನಿ ಸಹಾಯದಿಂದ ಇದೇ ಅಪ್ಲಿಕೇಷನ್ ಮೂಲಕ ತಜ್ಞರಿಗೆ ಕಳುಹಿಸಬಹುದು. ಅವರು ನೀಡುವ ಶಿಫಾರಸು ನೇರವಾಗಿ ರೈತರ ಮೊಬೈಲ್‌ಗೆ ಬರುತ್ತದೆ’ ಎಂದು ವಿವರಿಸಿದರು.

‘ಈವರೆಗೆ 30 ಸಾವಿರ ರೈತರ ಒಂದು ಲಕ್ಷಕ್ಕೂ ಅಧಿಕ ಬೆಳೆ ಸಮಸ್ಯೆಗಳಿಗೆ ತಂತ್ರಾಂಶದ ಮೂಲಕ ಪರಿಹಾರ ಒದಗಿಸಲಾಗಿದೆ.

ರಾಜ್ಯವ್ಯಾಪಿ ಅನುಷ್ಠಾನಗೊಂಡ ಮೂರ್ನಾಲ್ಕು ತಿಂಗಳುಗಳಲ್ಲಿ 1000ಕ್ಕೂ ಅಧಿಕ ಬೆಳೆ ಸಮಸ್ಯೆ ಪರಿಹರಿಸಲಾಗಿದೆ. ಇಲ್ಲಿ ಬರುವ ಮಾಹಿತಿಯನ್ನು ವಿಜ್ಞಾನಿಗಳು, ನೀತಿ ನಿರೂಪಕರು ಪರಿಶೀಲಿಸ
ಬಹುದು. ರೈತರಿಂದ ಸಚಿವರವರೆಗೆ ಇದು ಸಂಪರ್ಕಕೊಂಡಿ ಬೆಳೆಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.

ಇ–ಸ್ಯಾಪ್ ತಂತ್ರಾಂಶದ ಬಗ್ಗೆ ರೈತರಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕು. ಕೃಷಿ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ವಿಜ್ಞಾನಿಗಳ ಶ್ರಮ ಸಾರ್ಥಕವಾಗುತ್ತದೆ.

- ಡಾ.ಪ್ರಭುರಾಜ್ ಎ. ತಂತ್ರಾಂಶದ ಪ್ರಧಾನ ಸಂಶೋಧಕ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು