ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ಹನಿ ಜೇನ್‌ ಕಹಾನಿ: ಜೇನು ಕಾಲೋನಿಗಳ ರೋಚಕ ಕಥೆಗಳು

Last Updated 11 ಜೂನ್ 2022, 19:30 IST
ಅಕ್ಷರ ಗಾತ್ರ

ಬೆಳ್ಳಂಬೆಳಗ್ಗೆ ಸದ್ದು ಗದ್ದಲವಿಲ್ಲದೆ ಬಣ್ಣದ ಅಂಗಿ ತೊಟ್ಟು ಅಕ್ಕರೆಯ ಅತಿಥಿಗಳ ಆಗಮನಕ್ಕೆ ಅರಳಿ ನಿಂತ ಹೂಗಳು; ಹೆಚ್ಚು ಕಾಯಿಸದೆ ‘ಗುಂಯ್ಯ್’ಗುಡುತ್ತಾ ಮೌನ ಮುರಿದು ಹೂಗಳನ್ನು ಮುತ್ತುವ ದುಂಬಿಗಳು. ಮನುಷ್ಯ ಪ್ರಾಣಿಯು ಏಳುವ ಮುನ್ನವೇ ಕಾರ‍್ಯಪ್ರವೃತ್ತವಾಗಿ ಹೂವಿಂದ ಹೂವಿಗೆ ಹಾರುತ್ತಾ ಹಿಂಗಾಲಿನ ಪುಟ್ಟ ಪರಾಗ ಚೀಲದಲ್ಲಿ ಪುಷ್ಪದೂಳಿ ಸಂಗ್ರಹಿಸಿ ಮಕರಂದ ಹೀರುತ್ತಾ ಸಂಜೆಯವರೆಗೂ ಪುಷ್ಪಬೇಟೆ ನಡೆಸಿ ಮನೆಗೆ ವಾಪಸ್‌ ಆಗುವ ಇವುಗಳು ಕಷ್ಟಜೀವಿಗಳು! ಹೀಗೆ ಸಂಗ್ರಹಿಸಿ ತಂದ ಪರಾಗ, ಮಕರಂದವನ್ನು ಸಂಸ್ಕರಿಸಿ, ಗೂಡಿನ ಕೋಶಗಳಲ್ಲಿ ಇಳಿಸಿ, ಕೋಶದ್ವಾರವನ್ನು ಮುಚ್ಚುವ ನಿತ್ಯದ ಆ ಗಡಿಬಿಡಿ, ಯಾವ ಸಮರಸಿದ್ಧತೆಗೂ ಕಡಿಮೆಯಿಲ್ಲ ಬಿಡಿ. ರಾಜನ ಸೈನ್ಯದಲ್ಲಿ ಯುದ್ಧ ಮಾಡುವವರು, ಕೋಟೆ ಕಾಯುವವರು, ಆಹಾರ ಸರಬರಾಜಿಗೆ ನಿಂತವರು, ಬಿಡಾರ ಸ್ವಚ್ಛಗೊಳಿಸುವವರು ಇರುವಂತೆಯೇ ಈ ಜೇನುರಾಣಿಯ ಸೈನ್ಯದಲ್ಲಿ ಆಕೆ ಮತ್ತು ಗೂಡಿನ ಎಲ್ಲ ಮರಿಗಳ ಆರೈಕೆ ಮಾಡುವವರು, ಬಿಡಾರದ ಸ್ವಚ್ಛತೆಗೆ ಟೊಂಕಕಟ್ಟಿ ನಿಂತವರು, ಮಧುಪಾತ್ರೆಯ ಸುತ್ತ ಹಗಲು-ರಾತ್ರಿ ಪಹರೆ ಮಾಡುವವರ ಪಡೆಯೇ ಇದೆ. ಹಾಗೆಂದೇ ಜೇನು ನೊಣಗಳ ಜಗತ್ತೆಂದರೆ ಅದೊಂದು ವಿಸ್ಮಯ ಲೋಕ.

ಪರಾಗಸ್ಪರ್ಶ – ದಾವಣಗೆರೆಯ ಪಾಲಿಕೆ ಕಚೇರಿ ಬಳಿಯ ಉದ್ಯಾನವೊಂದರಲ್ಲಿ ಜೇನು ನೊಣಗಳು ಹೂವಿನಿಂದ ಮಕರಂದ ಹೀರುವುದರಲ್ಲಿ ತಲ್ಲಿನವಾಗಿರುವ ದೃಶ್ಯ ಕಂಡು ಬಂದಿದ್ದು ಹೀಗೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಪರಾಗಸ್ಪರ್ಶ – ದಾವಣಗೆರೆಯ ಪಾಲಿಕೆ ಕಚೇರಿ ಬಳಿಯ ಉದ್ಯಾನವೊಂದರಲ್ಲಿ ಜೇನು ನೊಣಗಳು ಹೂವಿನಿಂದ ಮಕರಂದ ಹೀರುವುದರಲ್ಲಿ ತಲ್ಲಿನವಾಗಿರುವ ದೃಶ್ಯ ಕಂಡು ಬಂದಿದ್ದು ಹೀಗೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಜೇನು ನೊಣಗಳ ಜಾಡು ಹಿಡಿದು

ಮೂರು ಕೋಟಿ ವರ್ಷಗಳಿಂದ ಜೀವಿಸುತ್ತಿರುವ, ಡೈನೋಸಾರ್‌ಗಳಿಗಿಂತ ಮೊದಲು ಅಸ್ತಿತ್ವ ಪಡೆದ ಈ ಪುಟ್ಟ ಜೀವಿಗಳು 25 ಲಕ್ಷ ವರ್ಷಗಳ ಹಿಂದೆ ಉಗಮಿಸಿದ ಮನುಷ್ಯನ ಕೃಷಿ ಚಟುವಟಿಕೆಗಳ ಆಧಾರವಾಗಿ ಅಲ್ಲದೇ ವನ ಸಂಪತ್ತಿನ ಕೇಂದ್ರ ಬಿಂದುವಾಗಿ ನಿರ್ವಹಿಸುತ್ತಿರುವ ಪಾತ್ರ ಅತ್ಯಂತ ಮಹತ್ವದ್ದು. ಜೇನ್ ನೊಣಗಳ ಪರಿಶ್ರಮದ ಬಗ್ಗೆ, ಪರಿಶ್ರಮದ ಫಲವಾದ ಜೇನುತುಪ್ಪದ ಬಗ್ಗೆ ಅನಾದಿ ಕಾಲದಿಂದ ಇರುವ ಪ್ರಶಂಸೆ ಹೇಳತೀರದ್ದು. ಮಧ್ಯ ಶಿಲಾಯುಗದ ಕಾಲದಲ್ಲಿಯೇ ಜೇನು ಸಂಗ್ರಹಣೆ ಮಾಡುತ್ತಿದ್ದ ಪುರಾವೆಯಾಗಿ ಭಾರತ ಮಧ್ಯ ಭೂಭಾಗದ ‘ಗೊಂಡ್ವಾನಾ’ ಪ್ರದೇಶದಲ್ಲಿ ಕಲ್ಲಿನ ಮೇಲೆ ಬಿಡಿಸಿದ ಜೇನು ಹಟ್ಟಿ ಸುತ್ತುವರೆದ ‘ಮಧುಮಕ್ಕಿ’ಗಳ ಚಿತ್ರಗಳು ಲಭ್ಯವಾಗಿವೆ.

ಜೇನೆಂದರೆ ಜನವಸತಿ ಇರದ ಘಟ್ಟದ ಕಗ್ಗಾಡು, ಮರದ ಪೊಟರೆ, ಮುಗಿಲೆತ್ತರದ ಗೋಪುರಗಳು-ಬೆಟ್ಟಗಳು, ಬೆಟ್ಟದ ಸಂಧಿನ ಕತ್ತಲ ಗವಿಗಳಲ್ಲಿ ಕಾಣುವ ಸಾಹಸಮಯ ಬದುಕಿನ ಸ್ಟರೂಪ ಎಂಬುದು ಮಲೆನಾಡಿನ ಹಳಬರ ಅನುಭವ. ಸಾಧಾರಣವಾಗಿ ಎತ್ತರದ ಕೈಗೆಟುಕದ ಜಾಗದಲ್ಲಿ ಹಗಲು ಕಂಡ ಬೃಹತ್ ಗೂಡುಗಳನ್ನು ರಾತ್ರಿ ಅರಸಿ ‘ಸೌಡಿ’ ಹಿಡಿದು ಹೊಗೆ ಎಬ್ಬಿಸುತ್ತಾ ಜೇನು ಕೊಯ್ಲಿಗೆ ಹೋದ ಇಲ್ಲಿನ ಹಿರಿಯರ ಅನುಭವದ ಕಥೆಗಳು ರೋಚಕ. ಕೆಲವೊಮ್ಮೆ ಸಾಹಸ ಫಲಿಸಿ ಡಬ್ಬಿಗಟ್ಟಲೆ ಜೇನಿನ ಶೇಖರಣೆಯಾದರೆ ಕೆಲವೊಮ್ಮೆ ಮರದ ಮೇಲಿಂದ ಬಿದ್ದು, ಕೈ ಕಾಲು ಸೊಂಟ ಮುರಿದು, ರೊಚ್ಚಿಗೆದ್ದ ಜೇನಿಂದ ಕಚ್ಚಿಸಿಕೊಳ್ಳುತ್ತಾ ಎದ್ದು ಬಿದ್ದು ಓಡಿದ ಫಜೀತಿಯ ಕಥೆಗಳು ಕೇಳಲು ಕುತೂಹಲಕಾರಿ. ಇವೆಲ್ಲಾ ಪಟಪಟನೆ ಮರ ಗುಡ್ಡ-ಬೆಟ್ಟ-ಮರ ಹತ್ತಿ ಇಳಿಯುವ ಕಾಡಿನ ಮಕ್ಕಳಾದ ಸಿದ್ದಿ, ಹಾಲಕ್ಕಿ, ಕುಣಬಿ, ಕುಮ್ರಿ ಮರಾಠೆಗಳ ಹೆಜ್ಜೇನಿನ ಕೊಯ್ಲಿನ ಕಥೆಯಾದರೆ ನಾಡಿನ ಮೇಲಿನವರದು ಮತ್ತೊಂದು. ಲಡ್ಡಾದ ಮರದ ಬೊಡ್ಡೆ, ಮನೆ ಹಿಂದಿನ ಕಟ್ಟಿಗೆ ರಾಶಿ, ಮುರುಕು ಗೋಡೆಯ ಕಂಡಿ, ಬಳಸದೆ ಬಿಟ್ಟ ಚೂಳಿ-ಬುಟ್ಟಿಗಳ ಚಿಕ್ಕ ಜಾಗದಲ್ಲಿ ಅಂಗೈ ಅಗಲದಷ್ಟೇ ಗೂಡು ಕಟ್ಟಿದ ಮಿಸರಿ ಜೇನಿನ ತುಪ್ಪವೇ ಇವರಿಗೆ ಹೆಚ್ಚು ಪ್ರೀತಿ. ತುಡುವೆ ಶೇಖರಿಸಿದ ‘ಕಾಸರಕ’ನ ಕಹಿ ತುಪ್ಪ, ‘ಮತ್ತಿ’ಯ ಹುಳಿ ತುಪ್ಪ, ‘ನೇರಳೆ’ಯ ಔಷಧಿ ತುಪ್ಪ ಯಾವುದೇ ಇರಲಿ, ಗಾಜು, ಪಿಂಗಾಣಿ, ಟಿನ್ ಬಾಕ್ಸ್‌ಗಳಲ್ಲಿ ಸಂಗ್ರಹಿಸಿಟ್ಟು ಮಾಡಿದ ಪೇಟೆ ಮೇಲಿನ ಮಾರಾಟದ ಲಾಭದಲ್ಲಿ ದೋಖಾ ಇರಲಿಲ್ಲ. ಆಗಿನ ಕಾಲದಲ್ಲಿ ಕಾಡು ಜೇನಿನ ಸವಿಯ ದಿಗ್ಬಂಧನ ಹಾಕಿ ಇಂಗ್ಲಿಷರಡಿ ಕೆಲಸ ಗಿಟ್ಟಿಸಿಕೊಂಡವರಿಗಂತೂ ಲೆಕ್ಕವಿಲ್ಲ.

ಸಮಯ ಕಳೆದಂತೆ ಬಿದಿರಿನ ಅಂಡೆ, ಹೂಜಿ, ಮಡಕೆಗಳಲ್ಲಿ ಮಜಂಟಿಯ ಪಾಲನೆಯಿಂದ ಪ್ರಾರಂಭವಾಗಿ, ನಿಧಾನಕ್ಕೆ 19ನೇ ಶತಮಾನದ ಕೊನೆಯಲ್ಲಿ ಕಿರು ಅರಣ್ಯ ಉತ್ಪನ್ನವಾಗಿ, ಜೇನು ಪೆಟ್ಟಿಗೆಗಳ ಪರಿಚಯದಿಂದಾಗಿ, ಸರ್ಕಾರದ ಸವಲತ್ತುಗಳಿಂದಾಗಿ ಜೇನು ಸಂಗ್ರಹ ‘ಸಾಕಣೆಯ’ ಹಾದಿ ಹಿಡಿದು ಇಂದು ವಾಣಿಜ್ಯಿಕವಾಗಿ ಬೆಳೆದು ನಿಂತಿದೆ.

ಒಂದೇ ಏಟಿಗೆ ಜೇನ ಹುಳುಗಳನ್ನು ಬೆದರಿಸಿ ಓಡಿಸಿ, ಜೇನು ರಟ್ಟನ್ನು ಬೇಕಾಬಿಟ್ಟಿ ಮುರಿದು ತುಪ್ಪ ಸಂಗ್ರಹಿಸುವ ಸಾಂಪ್ರದಾಯಿಕ ಅವೈಜ್ಞಾನಿಕ ವಿನಾಶಕಾರಿ ಪದ್ಧತಿ ಈಗಿಲ್ಲ. ಮನೆಯಲ್ಲಿ ಒಂದೋ ಎರಡೋ ಜೇನು ಪೆಟ್ಟಿಗೆಯಿಟ್ಟು ಸುಸ್ಥಿರವಾಗಿ ನಡೆಸುತ್ತಿದ್ದ ಜೇನು ಕೃಷಿಯೂ ಈಗ ಹಳತಾಯಿತು. ಕ್ರಮಬದ್ಧವಾಗಿ ವೈಜ್ಞಾನಿಕವಾಗಿ ‘ನ್ಯೂಟನ್’ ಮಾದರಿಯಿಂದ ಪ್ರಾರಂಭವಾದ ಪೆಟ್ಟಿಗೆಗಳ ಸ್ವರೂಪ ಇಂದು ಜೇನುತುಪ್ಪ ತಾನಾಗಿಯೇ ಬಸಿಯುವ ‘ಫ್ಲೋ ಹೈವ್’ಗಳಾಗಿ ಅಭಿವೃದ್ಧಿ ಹೊಂದಿದೆ. ರಟ್ಟನ್ನು ಹಿಂಡಿ ತುಪ್ಪ ತೆಗೆಯುತ್ತಿದ್ದ ಅಭ್ಯಾಸವನ್ನು ಯಂತ್ರಗಳು ಬದಲಿಸಿವೆ. ‘ಎರಿ ಕಟ್ಟುವ’ ಸಮಯವನ್ನು ಉಳಿಸಲು ಅರ್ಧ ಕಟ್ಟಿದ ಕೃತಕ ರಟ್ಟುಗಳು, ಮರುಬಳಕೆಗೆ ಸಾಧ್ಯವಾದ ಮೇಣದ ಹಾಳೆಗಳು ಲಭ್ಯವಿವೆ. ಆಧುನಿಕ ಜಗತ್ತು ಬರಿಯ ಜೇನುತುಪ್ಪವಲ್ಲದೆ ಮೌಲ್ಯವರ್ಧಿತ ಉಪ ಉತ್ಪನ್ನಗಳಿಗೂ ವೇದಿಕೆಯಾಗಿದೆ. ಹೂವಿನ ಅಭಾವವಿದ್ದಾಗ ‘ಸಕ್ಕರೆ ದ್ರಾವಣದ ಫೀಡಿಂಗ್’ ಪ್ರತಿ ತಿಂಗಳ ಕೊಯ್ಲಿಗೆ ಎಡೆ ಮಾಡಿಕೊಟ್ಟಿದೆ. ಮುಖಗವಸು, ಕೈಗವಸು, ಕವಚಗಳ ರಕ್ಷಣೆಯೊಂದಿಗೆ ಯಾರು ಬೇಕಾದರೂ ಜೇನಿನ ತುಪ್ಪದ ಸಂಗ್ರಹ ಮಾಡುವ ಸರಳತೆ ಈ ಜಮಾನಾದ ಕೊಡುಗೆ. ಕೋವಿಡ್ ಸಮಯದ ‘ವರ್ಕ್ ಫ್ರಮ್ ಹೋಮ್’ ಪರ್ವ ಮತ್ತಷ್ಟು ಹವ್ಯಾಸಿ ಜೇನು ಸಾಕಣೆದಾರರನ್ನು ಹುಟ್ಟಿಸಿದೆ.

‘ಮೀಠೀ’ ಕ್ರಾಂತಿ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಸಿಹಿ ಕ್ರಾಂತಿ’ಗೆ ಚಾಲನೆ ದೊರಕಿದ ಮೇಲೆ ಭಾರತ ಜಾಗತಿಕವಾಗಿ ಜೇನು ಉತ್ಪಾದಿಸುವ ‘ಟಾಪ್ ಟೆನ್’ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ರಾಷ್ಟ್ರೀಯ ಜೇನು ಮಂಡಳಿಯ ವರದಿ ಪ್ರಕಾರ 2020-21 ರಲ್ಲಿ ಭಾರತ ಒಂದು ಲಕ್ಷದ ಇಪ್ಪತೈದು ಸಾವಿರ ಮೆಟ್ರಿಕ್ ಟನ್ ಜೇನುತುಪ್ಪದ ಉತ್ಪಾದನೆ ಮಾಡಿದೆ. ಅಮೆರಿಕ, ಸೌದಿ, ಕೆನಡಾ, ಬೆಲ್ಜಿಯಂ ಸೇರಿದಂತೆ ಇತರ ರಾಷ್ಟ್ರಗಳಿಗೆ ಏಳುನೂರು ಕೋಟಿ ರೂಪಾಯಿ ಮೌಲ್ಯದ, ಅರವತ್ತು ಸಾವಿರ ಟನ್ ಜೇನುತುಪ್ಪವನ್ನು ರಫ್ತು ಮಾಡಿದೆ. ‘ಬೀ ಕೀಪಿಂಗ್ ಸೊಸೈಟಿ’ಗಳ ಸ್ಥಾಪನೆ,
ಖಾದಿ ಗ್ರಾಮೋದ್ಯೋಗ ಮಂಡಳಿ, ತೋಟಗಾರಿಕಾ ಇಲಾಖೆಯ ತಾಂತ್ರಿಕ ಹಾಗೂ ಆರ್ಥಿಕ ಸಹಾಯ, ಕಿರು ಆಹಾರ ಸಂಸ್ಕರಣೆಗೆ ಸಹಾಯಧನ, ಕೃಷಿ ವಿಜ್ಣಾನ ಕೇಂದ್ರಗಳ ಕೌಶಲ್ಯಾಭಿವೃದ್ಧಿ ತರಬೇತಿ, ‘ಹನಿ ಮಿಷನ್’, ಮುಂತಾದ ಸರ್ಕಾರದ ಯೋಜನೆಗಳಿಂದ ಜೇನು
ಸಾಕಣೆಗೆ ಮತ್ತಷ್ಟು ಒತ್ತು ಸಿಕ್ಕಿದೆ.

‘ನ್ಯಾಷನಲ್ ಬೀ ಬೋರ್ಡ್’ನಲ್ಲಿ ದಾಖಲಾದ ಜೇನು ಕಾಲೊನಿಗಳ ಆಧಾರದ ಮೇಲೆ ಅಂದಾಜು 100 ಟನ್ ತುಪ್ಪವನ್ನು ಕರ್ನಾಟಕ 2019ರಲ್ಲಿ ಉತ್ಪಾದಿಸಿತ್ತು. ಕರ್ನಾಟಕದ ಮಲೆನಾಡ ಭಾಗವಾದ ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗಮನಾರ್ಹವಾದ ಮಟ್ಟದಲ್ಲಿ ಜೇನು ಸಾಕಣೆ ಚಾಲ್ತಿಯಲ್ಲಿದೆ. ಇಲ್ಲಿನ ತೋಟಗಾರರು ಜೇನುಹುಳುಗಳ ಪರಾಗಸ್ಪರ್ಶ ಕ್ರಿಯೆಯ ಸದುಪಯೋಗದಿಂದ ತೆಂಗು-ಕಂಗುಗಳಲ್ಲಿ ಹೆಚ್ಚು ಇಳುವರಿಯನ್ನು ದಾಖಲಿಸಿದ್ದಾರೆ. ವರ್ಷವಿಡಿ ಹೂ ಬಿಡುವ ಕಾಡು ಮರಗಳು ಮತ್ತು ಸೂಕ್ತ ವಾತಾವರಣ ಇನ್ನಷ್ಟು ಸುಧಾರಣೆಗೆ ಈ ಭಾಗದಲ್ಲಿ ಅವಕಾಶವನ್ನು ಕಲ್ಪಿಸಿದೆ. ಬಯಲು ಸೀಮೆಯಲ್ಲಿಯೂ ಸೂರ‍್ಯಕಾಂತಿ, ಸಾಸಿವೆ, ವಿವಿಧ ತರಕಾರಿ ಬೆಳೆಗಳ ಹೆಚ್ಚಿನ ಇಳುವರಿಯ ಲಾಭಕ್ಕಾಗಿ ಜೇನುಪೆಟ್ಟಿಗೆ ಇಡುವ ಅಭ್ಯಾಸವನ್ನು ರೈತರು ರೂಢಿಸಿಕೊಂಡಿದ್ದಾರೆ.

ಗೂಡು ನಿರ್ಮಾಣದಲ್ಲಿ ಜೇನು ಹುಳುಗಳು
ಗೂಡು ನಿರ್ಮಾಣದಲ್ಲಿ ಜೇನು ಹುಳುಗಳು

ಜೇನೊಂದು ರೂಪ ನೂರು

‘ಫ್ರುಕ್ಟೋಸ್’ ಎಂಬ ಸಕ್ಕರೆ ಹೇರಳವಾಗಿರುವ, ಹಲವು ರೀತಿಯ ಪ್ರೋಟಿನ್, ವಿಟಮಿನ್, ಮಿನರಲ್‌ನಂತಹ 180ಕ್ಕಿಂತ ಅಧಿಕ ಪೋಷಕಾಂಶಗಳಿಂದ ಕೂಡಿರುವ ‘ಹನಿ’ ಆಹಾರವಾಗಿ, ಔಷಧವಾಗಿ ಶತಮಾನಗಳಿಂದ ಬಳಕೆಯಲ್ಲಿದೆ. ಈ ಮೊದಲುಮಾರುಕಟ್ಟೆಯಲ್ಲಿ
ಬರೀ ಜೇನು ತುಪ್ಪ ಲಭ್ಯವಿತ್ತು. ಈಗ ವಿವಿಧ ಸುವಾಸನೆ, ರುಚಿಯ ‘ಫ್ಲೇವರ್ಡ್‌ ‍ಹನಿ’ಯ ಉತ್ಪನ್ನಗಳು ದೊರಕುತ್ತವೆ.

ಅಂಟುವಾಳ, ನೇರಳೆ, ಕೋಕಂ, ಶುಂಠಿ, ನೆಲ್ಲಿ, ಅಶ್ವಗಂಧದ ಸವಿಯ ಜೇನುತುಪ್ಪಗಳಿಗೆ ಬಹಳ ಬೇಡಿಕೆ ಇದೆ ಎಂಬುದು ‘ಹನಿ ಜ್ಯಾಮ್’ ತಯಾರಿಸುವ ಶಿರಸಿ ಸಮೀಪದ ಕಲ್ಲಳ್ಳಿಯ ಮಧುಕೇಶ್ವರ ಹೆಗಡೆಯವರ ಅಭಿಪ್ರಾಯ.

ಮಧುಕೇಶ್ವರ ಹೆಗಡೆ
ಮಧುಕೇಶ್ವರ ಹೆಗಡೆ

1992ರಿಂದ ಜೇನು ಕೃಷಿಯಲ್ಲಿ ತೊಡಗಿಕೊಂಡು ಮಾರುಕಟ್ಟೆಯ ‘ಟ್ರೆಂಡ್‌’ಗೆ ತಕ್ಕಹಾಗೆ ಜೇನಿನ ಉಪ ಉತ್ಪನ್ನಗಳ ತಯಾರಿಕೆಯಲ್ಲಿ ನುರಿತರಾಗಿರುವ ಮಧುಕೇಶ್ವರ ಹೆಗಡೆಯವರು ತಮ್ಮ ‘ಮಧುಬನವನ್ನೇ’ ಜೇನು ಸಂಶೋಧನೆಗೆ, ತರಬೇತಿಗೆ, ಮೀಸಲಿಟ್ಟಿದ್ದಾರೆ. ಪುಷ್ಪ ಪರಾಗದ ಚಾಕೋಲೇಟ್, ಪರಾಗದ ಸೌಂದರ್ಯವರ್ಧಕ, ಜೇನು ಮೇಣದ ಬತ್ತಿ, ‘ರಾಯಲ್ ಜೆಲ್ಲಿ’, ‘ಕೋಕಂ-ಜೇನಿನ ಸಿಹಿ ಉಪ್ಪಿನಕಾಯಿ’, ಬಾಟಲ್‌ನಲ್ಲಿ ಬೆಳೆಸಿದ ‘ಕೊಂಬ್ ಹನಿ’, ಜೇನು-ಸಿರಿಧಾನ್ಯ-ಡ್ರೈಫ್ರೂಟ್ಸ್ ಲಡ್ಡು ಮುಂತಾದ ವಿಶಿಷ್ಟ ನವೀನ ಉತ್ಪನ್ನಗಳ ತಯಾರಿಕೆ, ಮಾರಾಟದಲ್ಲಿ ಯಶಸ್ವಿಯಾಗಿ ಹಲವಾರು ಪ್ರಸಿದ್ಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ಮಧುಮಿತ್ರ ರೈತ ಉತ್ಪಾದಕ ಸಂಸ್ಥೆ’ಯ ನಿರ್ದೇಶಕರಾಗಿ, 1,500 ಜೇನು ಪೆಟ್ಟಿಗೆಗಳನ್ನು ನಿರ್ವಹಿಸುತ್ತಾ, ತುಡುವೆ ಜೇನು ಪೆಟ್ಟಿಗೆಗಳ ತಯಾರಿಕೆ ಮತ್ತು ಮಾರಾಟವನ್ನು ಮಾಡುತ್ತಾ ಬಂದಿದ್ದಾರೆ. ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳಿಗೆ, ರೈತ ಗುಂಪುಗಳಿಗೆ ಜೇನಿನ ವಿಜ್ಞಾನ ಭೋಧಿಸುತ್ತಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ‍್ಯ ನಿರ್ವಹಿಸುತ್ತಿದ್ದಾರೆ. ಇವರ ವ್ಯವಹಾರ ಜ್ಞಾನದ ಪ್ರಕಾರ ಒಂದು ಗ್ರಾಮ್ ‘ಬೀ ವೆನಮ್’ಗೆ (ಜೇನಿನ ವಿಷ) ಎಂಭತ್ತು ಸಾವಿರ ರೂಪಾಯಿವರೆಗೂ, ಕೆ.ಜಿ. ಪರಾಗಕ್ಕೆ ಇಪ್ಪತ್ತು ಸಾವಿರದವರೆಗೂ, 20 ಗ್ರಾಮ್ ರಾಯಲ್ ಜೆಲ್ಲಿಗೆ ನಾಲ್ಕು ಸಾವಿರ ರೂಪಾಯಿವರೆಗೂ ಬೆಲೆಯಿದೆಯಂತೆ.

ಅಭಿವೃದ್ಧಿಯ ಅಡ್ಡ ಪರಿಣಾಮ

ಜೇನು ಸಾಕಣೆ ವ್ಯಾಪಾರೀಕರಣವಾದಂತೆ ಕಲಬೆರಕೆ ಏರುತ್ತಿದೆ. ಕಾಲೊನಿಗಳ ಸಂಖ್ಯೆ ಹೆಚ್ಚಾದಂತೆ ರೋಗಗಳ ಬಾಧೆಯೂ ಜೇನನ್ನು ಪೀಡಿಸುತ್ತಿದೆ. ‘ಥಾಯ್ ಸಾಕ್ ಬ್ರೂಡ್’ನಂತಹ ವೈರಲ್ ರೋಗಗಳು ಜೇನು ಕೃಷಿಕರ ಕಂಗೆಡಿಸುತ್ತಿದೆ. ತೋಟ-ಗದ್ದೆಗಳಿಗೆ ಯಥೇಚ್ಛವಾಗಿ ಬಳಸುತ್ತಿರುವ ಕೀಟನಾಶಕಗಳು ಜೇನು ಸಂಕುಲಕ್ಕೇ ಮಾರಕವಾಗಿವೆ. ಹೀಗೇ ಮುಂದುವರಿದರೆ ಜೇನಿನ ಜೀವನ ಕಷ್ಟ ಎಂಬುದು ಉತ್ತರ ಕನ್ನಡ ಭಾಗದ ಬಹುತೇಕ ರೈತರ ಖಚಿತ ಅಭಿಪ್ರಾಯ.

ಮಲೆನಾಡಿನ ಈ ಮಧುಬಟ್ಟಲಿಗೆ ಹೊಂದಿಕೊಂಡಂತೆಯೇ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯವೂ ಇದೆ. ಆ ಮಧುಕೇಶ್ವರನಿಗೂ ಈ ಮಧುವಿನ ಯೋಧರಿಗೂ ಏನಾದರೂ ಸಂಬಂಧವಿದೆಯೇ?ಅಂಟಿದ ನಂಟಿನ ಆ ಕೊನೆ ಬಲ್ಲವರಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT