ಬುಧವಾರ, ಮಾರ್ಚ್ 29, 2023
28 °C

ತೋಟಗಾರಿಕಾ ಮೇಳ: ನೋಡ ಬನ್ನಿ ‘ಮಣ್ಣುರಹಿತ ಕೃಷಿ’

ಖಲೀಲಅಹ್ಮದ ಶೇಖ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರಿನ ಹೆಸರಘಟ್ಟದಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ‘ರಾಷ್ಟ್ರೀಯ ತೋಟಗಾರಿಕೆ ಮೇಳ’ಕ್ಕೆ ಇಂದು ತೆರೆಬೀಳಲಿದೆ.

‘ಸ್ವಾವಲಂಬನೆಗೆ ನವೀನ ತೋಟಗಾರಿಕೆ’ ವಿಷಯದಡಿ ಫೆ. 22ರಿಂದ ಆರಂಭವಾದ ಮೇಳದಲ್ಲಿ ತೋಟಗಾರಿಕೆ ವಿಜ್ಞಾನಿಗಳ ಪ್ರಯೋಗಗಳು, ಕೃಷಿಯ ಹೊಸ ಅವಕಾಶಗಳನ್ನು ಪರಿಚಯಿಸುತ್ತಿವೆ. 

ಮನೆಗಳ ತಾರಸಿ ಹಾಗೂ ಮನೆಯಂಗಳದಂತಹ ಚಿಕ್ಕ ಜಾಗದಲ್ಲೂ ತರಕಾರಿ, ಹೂವು, ಹಣ್ಣು ಬೆಳೆಯಬಹುದಾದ ಮಣ್ಣುರಹಿತ ಕೃಷಿ ಪದ್ಧತಿಯು ಮೇಳದಲ್ಲಿ ಗಮನ ಸೆಳೆಯುತ್ತಿದೆ. ನಗರವಾಸಿಗಳು, ತಮ್ಮ ಮನೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಕೃಷಿ ಕೈಗೊಳ್ಳುವ ಕುರಿತು ವಿಜ್ಞಾನಿಗಳು ಸಲಹೆ ನೀಡುತ್ತಿದ್ದಾರೆ.

ಗ್ರೋ ಬ್ಯಾಗ್‌ ಹಾಗೂ ಟ್ರೇ ಗಳಲ್ಲಿ ಮಣ್ಣಿಲ್ಲದೇ, ಕೇವಲ ಕೊಕೊಪಿತ್‌ (ತೆಂಗಿನ ನಾರಿನ ಹುಡಿ)ನಲ್ಲೇ ಸೊಪ್ಪು, ತರಕಾರಿ, ಹಣ್ಣಿನ ಗಿಡಗಳನ್ನು ಬೆಳೆಸುವ ‘ಕೊಕೊಫೋನಿಕ್ಸ್‌‘ ವಿಧಾನವನ್ನು ಮೇಳದಲ್ಲಿ ಪರಿಚಯಿಸಲಾಗುತ್ತಿದೆ. ಈ ವಿಧಾನದಲ್ಲಿ ಕೊತ್ತಂಬರಿ, ಪಾಲಕ್ ಸೇರಿದಂತೆ ದಿನಬಳಕೆ ಸೊಪ್ಪುಗಳನ್ನು ಬೆಳೆಯುವ ಪ್ರಾತ್ಯಕ್ಷಿಕೆಯ ಪರಿಚಯ ಮೇಳದಲ್ಲಿದೆ.

ಕಣ್ಮನ ಸೆಳೆಯುತ್ತಿದೆ ಹೂವಿನ ಲೋಕ: ಗುಲಾಬಿ, ಚೆಂಡು ಹೂವು, ಜರ್ಬೇರಾ, ಗ್ಲ್ಯಾಡಿಯಸ್ ಸೇರಿ ಹಲವು ಹೂವುಗಳ ತಾಕುಗಳು, ಮೇಳದ ಪ್ರಮುಖ ಆಕರ್ಷಣೆ. ಈ ತಾಕುಗಳು ರೈತರಿಗೆ ಪುಷ್ಪಕೃಷಿಯ ಮಾಹಿತಿ ನೀಡಿದರೆ, ಸಾಮಾನ್ಯ ಜನರಿಗೆ ಇದೊಂದು ಸೆಲ್ಫಿ ಕ್ಲಿಕ್ಕಿಸುವ, ಫೋಟೊಗ್ರಫಿ ತಾಣವಾಗಿದೆ.

ವಿಶ್ವಸಂಸ್ಥೆ 2023ಅನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ತೋಟಗಾರಿಕಾ ಬೆಳೆಗಳ ಜೊತೆಗೆ, ನವಣೆ, ಸಾಮೆಯಂತಹ ಸಿರಿಧಾನ್ಯಗಳನ್ನು ಸೇರಿಸಿ, ತಯಾರಿಸುವ ಮೌಲ್ಯವರ್ಧಿತ ಉತ್ಪನ್ನಗಳೂ ಮೇಳದಲ್ಲಿವೆ.

ಹಣ್ಣಿನ ಬೆಳೆ ಪ್ರಾತ್ಯಕ್ಷಿಕೆ: ದ್ರಾಕ್ಷಿ, ಮಾವು, ದಾಳಿಂಬೆ, ಕಮಲ ಹಣ್ಣು (ಡ್ರ್ಯಾಗನ್ ಫ್ರೂಟ್‌), ಖರ್ಬೂಜ ತಳಿಗಳ ಪ್ರಾತ್ಯಕ್ಷಿಕೆ ಇದೆ. ಮೆಣಸಿನಕಾಯಿ, ಬದನೆಕಾಯಿ, ಕ್ಯಾರೆಟ್, ಈರುಳ್ಳಿ, ಟೊಮೆಟೊ ಹಾಗೂ ಇತರೆ ತರಕಾರಿಯನ್ನು ಲಾಭದಾಯಕ ರೀತಿಯಲ್ಲಿ ಬೆಳೆಯುವುದು ಹೇಗೆ? ಎಂಬ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡುತ್ತಿದ್ದಾರೆ.

ತಾರಸಿ ಕೃಷಿ ಪರಿಕರಗಳು: ಮೇಳದಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಬೀಜ, ಸಸಿಗಳು, ಗೊಬ್ಬರ, ಕೃಷಿ ಉಪಕರಣ, ದಿನೋಪಯೋಗಿ ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಮಳಿಗೆಯಲ್ಲಿ ಲಭ್ಯ ಇವೆ. ಮೇಳಕ್ಕೆ ಬರುವವರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಆಹಾರ ಮಳಿಗೆಗಳನ್ನೂ ತೆರೆಯಲಾಗಿದ್ದು, ಬಗೆ ಬಗೆಯ ತಿಂಡಿ–ತಿನಿಸು–ಊಟ ಲಭ್ಯವಿದೆ. 

ಯಶವಂತಪುರ ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣಗಳಿಂದ ಹೆಸರಘಟ್ಟಕ್ಕೆ ಬಿಎಂಟಿಸಿ ಬಸ್‌ಗಳ ವ್ಯವಸ್ಥೆ ಇದೆ. ಜೊತೆಗೆ, ಖಾಸಗಿ ವಾಹನಗಳಿಗೆ ಸಂಸ್ಥೆಯ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಹ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು