ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿಯಿಂದ ಗುಲ್ಕಂದ್‌ವರೆಗೆ

Last Updated 27 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

‘ಅಜ್ಜ,ರಾಜಸ್ಥಾನದಿಂದ ದಶಕಗಳ ಹಿಂದೆ ದೇವರ ಪೂಜೆಗೆ ಆಗಲೆಂದು ತಂದು ಮನೆಯ ಬಳಿ ನೆಟ್ಟಿದ್ದು ನಾಲ್ಕೇ ನಾಲ್ಕು ದೇಸಿ ಗುಲಾಬಿ ಗಿಡಗಳು; ಈಗ ನೋಡಿ ಅವು, ಐದೆಕರೆ ಹೊಲದಲ್ಲಿ ಒಂಬತ್ತು ಸಾವಿರ ಗಿಡಗಳಾಗಿ ಹೂವು ಕೊಡುತ್ತಿವೆ’ – ತಮ್ಮ ಗುಲಾಬಿ ಕೃಷಿಯ ಕಥೆಯನ್ನು ಹೀಗೆ ಶುರು ಮಾಡಿದ್ದು ಕಲಬುರ್ಗಿ ಜಿಲ್ಲೆಯ ಸೇಡಂನ ಗುಲಾಬಿ ಕೃಷಿ ದಂಪತಿ ರಮೇಶ್ ತಾಪಾಡಿಯಾ– ರಾಧಿಕಾ ತಾಪಡಿಯಾ ಹಾಗೂ ಸಹಭಾಗಿಯಾಗಿರುವ ರಮೇಶರ ಅತ್ತಿಗೆ ಸಂಗೀತಾ ಬಲದೇವ್.

ಅವರು ಮಾತು ಮುಂದುವರಿಸುತ್ತಾ, ‘ಹತ್ತು ವರ್ಷಗಳ ಹಿಂದೆ ಜಮೀನ್ ತಗೊಂಡಾಗ ಅದು ಬರಡು ನೆಲ; ಆಜ್ ಗುಲಾಬ್ ಕಾ ಬಾಗ್(ಈಗ ಗುಲಾಬಿ ತೋಟವಾಗಿದೆ)’ ಎಂದು ಸಂಭ್ರಮದಿಂದ ಹೇಳಿಕೊಂಡರು.

ಅಜ್ಜನ ಆ ಗಿಡಗಳೇ ಮೂಲ

ಈ ದಂಪತಿ ಜಮೀನು ತಗೆದುಕೊಂಡ ಮೇಲೆಆರೇಳು ತಿಂಗಳಲ್ಲಿ ಎಲ್ಲರಂತೆ ಕಾಯಿಪಲ್ಯೆ ಬೆಳೆದರು. ಹೆಚ್ಚು ನಷ್ಟ ಅನುಭವಿಸಿದರು. ಆ ಕೃಷಿ ಅಷ್ಟಕ್ಕೇ ನಿಲ್ಲಿಸಿದರು. ಈ ಬಿಸಿಲು ನಾಡಲ್ಲಿ ತಂಪು ನೀಡುವ ಬೆಳೆ ಬೆಳೆಯಬೇಕು ಎಂದು ಯೋಚಿಸಿದರು. ಆ ಯೋಚನೆಯೇ ಗುಲಾಬಿ ಕೃಷಿಗೆ ನಾಂದಿಯಾಯಿತು. ಅಜ್ಜ ನೆಟ್ಟಿದ್ದ ಗುಲಾಬಿ ಗಿಡಗಳು ಮಾರ್ಗ ತೋರಿದವು!

ನಾಲ್ಕು ಗಿಡಗಳಿಂದ ಗುಲಾಬಿ ಕೃಷಿ ವಿಸ್ತರಿಸುವಾಗ, ಇವರು ಹೊಸದಾಗಿ ಗಿಡಗಳನ್ನು ಖರೀದಿಸಲೇ ಇಲ್ಲ. ಇರುವ ಗಿಡಗಳಿಂದಲೇ ಸಿಗುವ ಕಟ್ಟಿಂಗ್ಸ್‌ ಅಥವಾ ಕಡ್ಡಿಗಳನ್ನು ಸಸಿ ಮಾಡಿ ನಾಟಿಗೆ ಬಳಸಿದರು. ಈ ಕಡ್ಡಿಗಳಿಂದ ನಾಲ್ಕು ಸಸಿಗಳು ನಲವತ್ತಾದವು. ಆಮೇಲೆ ನಾನ್ನೂರು, ನಾಲ್ಕು ಸಾವಿರ, ಈಗ ಒಂಬತ್ತು ಸಾವಿರ ಗಿಡಗಳಾಗಿವೆ. ಆಗ ಅಜ್ಜ ರಾಜಸ್ಥಾನದ ಪುಷ್ಕರ್ ಹಳ್ಳಿಯಿಂದ ದೇಸಿ (ಪಿಂಕ್) ತಳಿಯ ನಾಲ್ಕು ಗಿಡ ತಂದು ನೆಟ್ಟಿದ್ದರು. ಈಗ ಅವರಿಲ್ಲ, ಇರುವ ಎಲ್ಲ ಗುಲಾಬಿ ಗಿಡಗಳಲ್ಲಿ ಅವರು ಹೂವಾಗಿದ್ದಾರೆ ಎಂದು ಸ್ಮರಿಸುತ್ತಾರೆ ಮನೆಯವರು. ಅಂದ ಹಾಗೆ ಈ ದೇಸಿ ತಳಿಯ ಮತ್ತೊಂದು ಗುಣವೆಂದರೆ ಕಟಾವು ಮಾಡಿ ಒಂದೆರಡು ಗಂಟೆಯಲ್ಲಿ ದಳಗಳು ಹೂವಿನಿಂದ ಸುಲಭವಾಗಿ ಬೇರ್ಪಡುತ್ತವೆ.

ಬೆಳೆ ನಿರ್ವಹಣೆ ಹೀಗೆ

ಇರುವ ಗಿಡಗಳಿಂದ ಸಸಿ ಮಾಡಿ ಗುಲಾಬಿ ತೋಟ ಮಾಡಿದರು. ಆದರೆ ಬಿರು ಬಿಸಿಲಿನ ಸೇಡಂನಲ್ಲಿ ಬೇಸಿಗೆಯಲ್ಲಿ ನೀರಿಗೆ ಬಹಳ ಕಷ್ಟವಾಯಿತು. ಪ್ರಾರಂಭದ ಒಂದೆರಡು ವರ್ಷ ನೀರಿಗೆ ಕಷ್ಟವಾಗಿ, ಬಿಂದಿಗೆಯಲ್ಲಿ ನೀರುಣಿಸಿ ಗಿಡ ಬದುಕಿಸಿಕೊಂಡರು. ಈಗ ಮೂರು ಕೊಳವೆ ಬಾವಿಗಳಿವೆ, ಐದೆಕರೆಗೂ ಹನಿ ನೀರಾವರಿ ವ್ಯವಸ್ಥೆ. ಸಂಪೂರ್ಣ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಾರೆ. ಕೊಟ್ಟಿಗೆಗೊಬ್ಬರ, ಗೋಮೂತ್ರ ಬಳಸುತ್ತಾರೆ. ಇವರ ಜೊತೆ ನಾಲ್ಕು ಜನ ಕಾರ್ಮಿಕರಿದ್ದಾರೆ. ಇಬ್ಬರಿಗೆ ತೋಟದ ನಿರ್ವಹಣೆಯ ಜವಾಬ್ದಾರಿ, ಮತ್ತಿಬ್ಬರಿಗೆ ಗುಲ್ಕಂದ್ ಹಾಗೂ ಇತರ ಉತ್ಪನ್ನಗಳ ತಯಾರಿಯ ಕೆಲಸ. ‘ಆಳುಗಳ ಜೊತೆ ಆಳಾಗಿ ದುಡಿಯುತ್ತೇವೆ; ಸಂಗೀತಾ ವೈನಿ ಟ್ರ್ಯಾಕ್ಟರ್ ಓಡಿಸುತ್ತಾರೆ, ರಾಧಿಕಾ ಹೂವು ಕಟಾವಿನ ಕೆಲಸ ಮಾಡುತ್ತಾರೆ’ ಎನ್ನುತ್ತಾರೆ ರಮೇಶ.

ಹೂವಿನ ಮೌಲ್ಯವರ್ಧನೆ

ಮೊದಮೊದಲು ಎಲ್ಲರಂತೆ ಇವರು ಹೂವು ಮಾರುತ್ತಿದ್ದರು. ಆದರೆ, ಬರುತ್ತಿದ್ದ ಆದಾಯ ತೀರಾ ಕಡಿಮೆ. ಕೆಲವು ಸಲ ಬೇಡಿಕೆಯೂ ಕಡಿಮೆಯಾಗುತ್ತಿತ್ತು. ಆದರೆ, ಗುಲಾಬಿಯನ್ನು ಗುಲ್ಕಂದ್ ಮಾಡಿ ಮಾರುವಾಗ, ತುಸು ಲಾಭ ಹೆಚ್ಚಾಗಿ ಬಂತು. ‘ಒಂದು ಕೆ.ಜಿ ಗುಲ್ಕಂದ್‌ ತಯಾರಿಕೆಗೆ 300 ಗ್ರಾಂ ಮಾತ್ರ ಹೂವು ಬಳಸುತ್ತೇವೆ. ಉಳಿದಂತೆ ಕಲ್ಲುಸಕ್ಕರೆ, ಸಕ್ಕರೆ ಹಾಕುತ್ತೇವೆ. ಕೆ.ಜಿ ಗುಲ್ಕಂದ್‌ಗೆ ₹250 ದರಕ್ಕೆ ಕೊಡುತ್ತೇವೆ. ಹೀಗಾಗಿ ಹೂವು ಮಾರಾಟಕ್ಕಿಂತ ಗುಲ್ಕಂದ್‌ ಮಾರಾಟವೇ ತುಸು ಹೆಚ್ಚು ಲಾಭ’ ಎನ್ನುತ್ತಾರೆ ರಾಧಿಕಾ.ಅಂದ ಹಾಗೆ ಎಲ್ಲ ತಳಿಗಳೂ ಗುಲ್ಕಂದ್ ಮಾಡಲು ಸೂಕ್ತವಲ್ಲ.

ಈ ಇಬ್ಬರು ಮಹಿಳೆಯರು ಗುಲ್ಕಂದ್ ತಯಾರಿಕೆಗಾಗಿ ರಾಜಸ್ಥಾನದ ಮಥುರಾಗೆ ತೆರಳಿದ್ದರು. ಅಲ್ಲಿ ಹದಿನೈದು ದಿನಗಳ ಕಾಲ ಮೌಲ್ಯವರ್ಧನೆ ಹಾಗೂ ಮಾರಾಟ ಮಾಡುವುದನ್ನು ಕಲಿತು ಬಂದಿದ್ದಾರೆ. ಮೊದಲುಮನೆಯಲ್ಲೇ ಗುಲ್ಕಂದ್ ತಯಾರಿಸಿ,ತಾವೇ ತಿಂದು ನಂತರ ನೆರೆಯವರಿಗೆ ರುಚಿ ನೋಡಲು ಕೊಟ್ಟಿದ್ದಾರೆ. ರುಚಿ ನೋಡಿದವರು ಮತ್ತೆ ಮತ್ತೆ ಬೇಕೆಂದಾಗ, ಇದನ್ನು ಹೆಚ್ಚು ಮಾಡಿ ಮಾರಬಹುದೆಂಬ ನಂಬಿಕೆ ಬಂದದ್ದು. ಈಗ ಇವರ ಗುಲ್ಕಂದ್‌ ಕಂಪು, ತಂಪು ಕರ್ನಾಟಕದಲ್ಲಷ್ಟೇ ಅಲ್ಲ ಮಹಾರಾಷ್ಟ್ರ, ಮಧ್ಯಪ್ರದೇಶದವರೆಗೂ ತಲುಪಿದೆ.

ಮಳೆಗಾಲದಲ್ಲಿ ಗುಲ್ಕಂದ್ ಮಾಡಲ್ಲ

ಗುಲಾಬಿ ಮಳೆಯಲ್ಲಿ ತೋಯ್ದರೆ ಅಥವಾ ಹೆಚ್ಚು ಇಬ್ಬನಿಗೆ ತೋಯ್ದರೆ ಗುಲ್ಕಂದ್ ಮಾಡಲಾಗದು. ಏನಿದ್ದರೂ ಚಳಿಗಾಲ ಮುಗಿದ ಮೇಲೆ, ಸಂಕ್ರಾಂತಿಯ ನಂತರ ಏಪ್ರಿಲ್‍ವರೆಗೂ ಉತ್ತಮ ಗುಣಮಟ್ಟದ ಗುಲ್ಕಂದ್ ತಯಾರಿ ಸಾಧ್ಯ. ಈ ಸಮಯದಲ್ಲಿ ಮಾರುಕಟ್ಟೆಗೆ ಹೂವು ಕಳುಹಿಸಲು ಮನಸ್ಸಿರುತ್ತಿರಲಿಲ್ಲ. ಹಾಗಾದರೆ ಏನು ಮಾಡಬಹುದು? ಅಂತ ಯೋಚಿಸಿದರು. ಆಗ ಹೊಳೆದ ಉಪ ಉತ್ಪನ್ನಗಳೇ ಗುಲಾಬ್ ಜಲ್, ಅತ್ತರ್‌ (ಸೆಂಟ್), ಗುಲಾಬ್ ಸಿರಪ್, ಐ ಡ್ರಾಪ್ಸ್.

ತಡಮಾಡದೇ ಪ್ರಯೋಗಕ್ಕೆ ಮುಂದಾದರು. ಗುಲ್ಕಂದ್ ಮಾಡಿ ಮಾರಿದ ಅನುಭವ ಇಲ್ಲೂ ಉಪಯೋಗಕ್ಕೆ ಬಂತು. ಈಗ ಒಟ್ಟು ಐದು ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಆದರೆ, ದೊಡ್ಡ ಪ್ರಮಾಣದಲ್ಲಿ ಮಾಡುತ್ತಿರುವುದು ಗುಲ್ಕಂದ್ ಮಾತ್ರ.

ಆರಂಭದಲ್ಲಿ ಗುಲ್ಕಂದ್ ಮಾರಾಟ ಕಷ್ಟವೆನಿಸಿತು. ಇದಕ್ಕಾಗಿ ಇವರು ಭಾಗವಹಿಸಿದ ವಸ್ತು ಪ್ರದರ್ಶನಗಳಿಗೆ ಲೆಕ್ಕವಿಲ್ಲ. ಮೊದಲ ವರ್ಷ ಸಿಕ್ಕಿದ್ದು ಹತ್ತೇ ಸಾವಿರ ಆದಾಯ. ಅನಂತರ ಉತ್ಪಾದನೆ, ಮಾರಾಟ ವಿಸ್ತರಿಸುತ್ತಾ ಹೋದರು. ಏಳು ವರ್ಷಗಳ ನಂತರ, ಅಂದರೆ ಈಗ ಪ್ರತೀ ತಿಂಗಳು ಐದೆಕರೆಯಿಂದ ಲಕ್ಷಕ್ಕೂ ಹೆಚ್ಚು ಲಾಭ ಸಿಗುತ್ತಿದೆ. ಇನ್ನು ಮೂರು ವರ್ಷಗಳಲ್ಲಿ ತಿಂಗಳ ಲಾಭವನ್ನು ಮೂರು ಲಕ್ಷಕ್ಕೆ ಏರಿಸುವ ವಿಶ್ವಾಸ ಇವರದ್ದು.

ಇಡೀ ಉದ್ಯಮದ ಬಹುಪಾಲು ಜವಾಬ್ದಾರಿ ರಾಧಿಕಾ - ಸಂಗೀತಾರದ್ದು. ರಮೇಶ ಅವರು ಹೆಚ್ಚಾಗಿ ಮಾರಾಟದ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ಕಟ್ಟಕಡೆಗೆ ಅವರು ಹೇಳಿದ್ದು ‘ರೈತ ರೊಕ್ಕ ಮಾಡ್ಬೇಕೂ ಅಂದ್ರೆ, ಬೆಳೆದರೆ ಸಾಲ್ದು, ಮೌಲ್ಯವರ್ಧಿಸಿ ಸ್ವತಃ ಮಾರಬೇಕು’. ಗುಲಾಬಿ ಕೃಷಿ–ಮೌಲ್ಯವರ್ಧನೆ ಕುರಿತ ಹೆಚ್ಚಿನ ವಿವರಗಳಿಗೆ ರಮೇಶ ಅವರ ಸಂಕರ್ಪಕ್ಕೆ
ಮೊ. 94490 10827

ಬೇಸಿಗೆಗೆ ಗುಲ್ಕಂದ್ ಸೂಕ್ತ

‘ಬ್ಯಾಸಿಗೇಲಿ, ಗುಲ್ಕಂದ್‌ ತಿಂದ್ನೋಡಿ, ದೇಹ ತಣಿಯುತ್ತೆ;ಬಿರು ಬೇಸಿಗೆಯಲ್ಲಿ ಶರಬತ್ತು, ಹಾಲು ಅಥವಾ ಮಜ್ಜಿಗೆಯ ಜತೆ‘ಗುಲಾಬ್ ಸಿರಪ್‍ ಸೇರಿಸಿ ಕುಡಿದು ನೋಡಿ, ಆಹಾ ಅದೆಷ್ಟು ತಂಪು; ರೋಸ್ ವಾಟರ್ ಮುಖಕ್ಕೆ ಹಚ್ಚಿಕೊಂಡರೆ, ವಾಹ್; ಬಿಸಿಲು, ದಗೆ ಮರೆತೇ ಬಿಡುತ್ತೇವೆ ಎನ್ನುತ್ತಾರೆಸಂಗೀತಾ ಬಲದೇವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT