ಖಳನಾಗುವ ಕನವರಿಕೆ

ತೀಕ್ಷ್ಣ ಕಣ್ಣೋಟ ಮತ್ತು ಖಡಕ್ ದನಿ ನಟ ಅರವಿಂದ್ ಅವರಿಗೆ ಪ್ಲಸ್ ಪಾಯಿಂಟ್. ಕಾಲುದಾರಿಯಲ್ಲಿ ನಡೆಯುತ್ತಿದ್ದ ಅವರನ್ನು ‘ರಂಗೀ ತರಂಗ’ ಸಿನಿಮಾ ಹೆದ್ದಾರಿಗೆ ಸೇರಿಸಿದೆ. ನಾಯಕನ ಚಹರೆಯ ಅವರಿಗೆ ಖಳನಾಯಕನಾಗುವ ಬಯಕೆ.

ಆತನದ್ದು ತಣ್ಣನೆಯ ಕ್ರೌರ್ಯ. ಮಾತು ಮಾತಿಗೂ ನಾಯಕನನ್ನು ಚುಚ್ಚು ಮಾತುಗಳಿಂದಲೇ ಘಾಸಿಗೊಳಿಸುವ ತಣ್ಣನೆಯ ಖಳ.  ಸಿನಿಮಾದ್ದು ಒಂದು ತೂಕವಾದರೆ ಆ ಪಾತ್ರದ್ದೂ ಅಷ್ಟೇ ತೂಕ. ಆತ ಪೊಲೀಸ್. ಆದರೆ ‘ಕಳ್ಳಪೊಲೀಸ್’! ಇಷ್ಟೆಲ್ಲಾ ಬಿಲ್ಡಪ್ ಕೊಟ್ಟಿದ್ದು ‘ರಂಗಿತರಂಗ’ದ ಪೊಲೀಸ್ ಅಧಿಕಾರಿಯ ಬಗ್ಗೆ. ಅಂದಮೇಲೆ ನಿಮ್ಮ ಕಣ್ಣೆದರು ಕಂಡ ಆ ಪೊಲೀಸ್ ಪಾತ್ರಧಾರಿ ಅರವಿಂದ್ ರಾವ್. ಕಿರುತೆರೆಯಲ್ಲಿ ಹಂತಹಂತವಾಗಿ ಅವಕಾಶ ಗಿಟ್ಟಿಸಿಕೊಂಡ ಅರವಿಂದ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದು ‘ರಂಗಿತರಂಗ’ ಸಿನಿಮಾ.

ಅರವಿಂದ್ ಹಿರೀಕರದ್ದು ಮೂಲತಃ ಉಡುಪಿ. ಆದರೆ ಬದುಕು ಬೆಳೆದಿದ್ದು ಕೆ.ಆರ್. ಪೇಟೆಯ ಪಟ್ಟಣದಲ್ಲಿ. ‘ನಿನ್ನೊಲುಮೆ’ ಧಾರಾವಾಹಿಯಲ್ಲಿ ನಾಯಕಿಯ ಗೆಳಯನಾಗಿ ಆಕೆಯ ಕಷ್ಟ–ಸುಖಗಳಿಗೆ ಸ್ಪಂದಿಸುವ ಅರವಿಂದ್ ಪಾತ್ರವನ್ನು ಮೆಚ್ಚದವರು ಯಾರು ಹೇಳಿ. ಆ ಇಮೇಜಿನಲ್ಲಿ ಅವರನ್ನು ಮೆಚ್ಚಿ ಅಭಿಮಾನಿಯಾದ ಹೆಂಗಳೆಯರ ಸಂಖ್ಯೆ ಅಪಾರ. ‘ಜೋಗುಳ’, ‘ಕೋಗಿಲೆ’ ಮತ್ತಿತರ ಧಾರಾವಾಹಿಗಳಲ್ಲೂ ಅಷ್ಟೇ. ಮೂಲತಃ ಪತ್ರಕರ್ತರಾಗಿದ್ದ ಅರವಿಂದ್ ಅವರನ್ನು ಕಿರುತೆರೆಗೆ ಕರೆತಂದಿದ್ದು ನಿರ್ದೇಶಕ ಎಂ.ಕೆ. ಮಠ. ಅವರ ‘ಮಹಾಮಾಯಿ’ಯಲ್ಲಿ ಬಣ್ಣ ಹಚ್ಚಿದರು.

‘ನಾನು ಜರ್ನಲಿಸಂ ಮುಗಿಸಿ ರಾಜ್ಯ ಮಟ್ಟದ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದೆ. ಈ ನಡುವೆ ನಾನೇ ‘ಸುದ್ದಿ ಸಮರ’ ಎನ್ನುವ ವಾರ ಪತ್ರಿಕೆ ಆರಂಭಿಸಿದೆ. ಆಗ ಎಂ.ಕೆ. ಮಠ, ‘ನೀವು ಒಂದು ಪಾತ್ರ ಮಾಡಿ’ ಎಂದು ನನ್ನನ್ನು ಒತ್ತಾಯಿಸಿದರು. ಆ ನಂತರ ಪಯಣ ಮುಂದುವರಿಯಿತು. ಉತ್ತಮ ಪಾತ್ರಗಳು ಸಿಕ್ಕವು. ಮಠ ಅವರೇ ನಾನು ಕ್ಯಾಮೆರಾ ಮುಂದೆ ಕಾಣಿಸಲು ಕಾರಣಕರ್ತರಾದ ಗುರು’ ಎಂದು ಸಿನಿಮಾ ಸಂಪರ್ಕಕ್ಕೆ ಬಂದ ಹಿನ್ನೆಲೆಯನ್ನು ವಿವರಿಸುವರು. ಸಾಯಿಕುಮಾರರ ‘ಮಡಿವಾಳ ಮಾಚಿದೇವ’ ಚಿತ್ರದಲ್ಲಿ ಅವರಿಗೆ ರಾಜನ ಪಾತ್ರವಿದೆ.

ಪ್ರೇಕ್ಷಕರು ಅಪೇಕ್ಷಿಸುವ ಅಂದ ಚೆಂದ ಅರವಿಂದ್ ಅವರಿಗೆ ಇದ್ದರೂ ಅವರ ಆಸೆಯ ಕಣ್ಣೋಟ ವಿಲನ್ ಪಾತ್ರಗಳಿಗೆ! ಇದು ‘ರಂಗಿತರಂಗ’ ಗಳಿಸಿಕೊಟ್ಟ ಇಮೇಜಿನ ಪರಿಣಾಮ  ಎಂದುಕೊಳ್ಳುವಂತೇನೂ ಇಲ್ಲ.

‘ನನಗೆ ವಯಸ್ಸಾಯಿತು. ಹೀರೊ ಪಾತ್ರ ಮಾಡುವುದಕ್ಕೆ ಸಾಧ್ಯವಿಲ್ಲ. ಖಳನ ಪಾತ್ರಗಳಲ್ಲಿ ನಟಿಸೋಣ ಎಂದುಕೊಂಡಿರುವೆ’ ಎಂದು ನಗುತ್ತಾರೆ. ವಿಲನ್ ಪಾತ್ರಗಳೇ ಏಕೆ ಇಷ್ಟ? ಎನ್ನುವ ಪ್ರಶ್ನೆ ಎದುರಿಗಿಟ್ಟರೆ ಅವರಿಂದ ಸಿಕ್ಕುವ ಉತ್ತರ ಇದು: ‘ನಮ್ಮಲ್ಲಿ ಪರಭಾಷೆಯಿಂದ ವಿಲನ್‌ಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಕೂಗಾಡುವ ಅಬ್ಬರಿಸುವ ಖಳನಾಯಕನ ಮುಖದಲ್ಲಿ ಒಂದು ಕುರ್ಪು ಇರುತ್ತಿತ್ತು. ಮಚ್ಚು, ಲಾಂಗು ಎನ್ನುವುದು ಒಂದು ಕಾಲದ ಸಿನಿಮಾಕ್ಕೆ ಹೆಚ್ಚು ಹೊಂದುತ್ತಿತ್ತು.

ಇಂದು ಬದಲಾವಣೆ ಅನಿವಾರ್ಯ. ಅಬ್ಬರಿಸಿ ಬೊಬ್ಬಿರಿಯುವುದಕ್ಕಿಂತ ಸೈಲೆಂಟ್ ಕಿಲ್ಲರ್ ಆಗಿರುತ್ತಾನೆ ಖಳ. ಭೂಗತ ಜಗತ್ತಿನಲ್ಲಿ ಇದ್ದವರು ಸೈಲೆಂಟ್ ವಿಲನ್‌ಗಳು. ಈ ಪರಿಕಲ್ಪನೆಗಳನ್ನು ಮತ್ತಷ್ಟು ಗಟ್ಟಿಯಾಗಿ ಅಳವಡಿಸಿಕೊಂಡರೆ ಕನ್ನಡ ಚಿತ್ರರಂಗ ಚೆಂದಗೊಳ್ಳುತ್ತದೆ. ಪರಭಾಷೆಯ ವಿಲನ್‌ಗಳಿಗೆ ನಾವು ಹಸಿರು ಹಾಸು ಹಾಸುತ್ತೇವೆ. ಅವರಿಗೆ ಕೊಡುವ ಸಂಭಾವನೆಗಿಂತಲೂ ನಮ್ಮವರದ್ದು ಕಡಿಮೆ. ನಮ್ಮಲ್ಲಿಯೂ ಅತ್ಯುತ್ತಮ ಖಳನಾಯಕ ಪಾತ್ರಧಾರಿಗಳು ಇದ್ದಾರೆ’.

ಡಿಸೆಂಬರ್‌ನಿಂದ ಕಿರುತೆರೆಯ ನಟನೆಗೆ ವಿರಾಮ ನೀಡಿರುವ ಅರವಿಂದ್, ಸಿನಿಮಾಗಳತ್ತ ಮುಖಮಾಡಿದ್ದಾರೆ.  ‘ಕೋಗಿಲೆ’ಯ ನಂತರ ಅರವಿಂದ್ ಧಾರಾವಾಹಿಗಳಲ್ಲಿ ನಟಿಸಲಿಲ್ಲ. ‘ನಿನ್ನೊಲುಮೆಯಿಂದಲೇ’ ಧಾರಾವಾಹಿ ಲವರ್‌ಬಾಯ್ ಇಮೇಜು ಕೊಟ್ಟಿತ್ತು. ತುಂಬಾ ಜನರು ಅವರಿಗೆ ಮೆಸೇಜ್ ಮಾಡಿದ್ದರು, ನಿಮ್ಮಂಥ ಒಬ್ಬ ಗೆಳೆಯ ಇರಬೇಕು ಎಂದು. ‘ಆ ಪಾತ್ರ ನನ್ನ ವೃತ್ತಿ ಬದುಕಿಗೆ ಮಹತ್ವದ ಮೈಲೇಜ್ ಕೊಟ್ಟಿತ್ತು’ ಎನ್ನುವುದು ಅವರ ವಿಶ್ಲೇಷಣೆ.

ಈ ಹಿಂದೆ ‘ಜೊತೆಗಾರ’, ‘ವಿಮುಕ್ತಿ’ ‘ಜೋಗಯ್ಯ’, ‘ಯೋಧ’, ‘ಕೆಂಪೇಗೌಡ’ ಮತ್ತಿತರ ಸಿನಿಮಾಗಳಲ್ಲಿ ಸಣ್ಣ–ಪುಟ್ಟ ಪಾತ್ರಗಳಲ್ಲಿ ಕಾಣಿಸಿದ್ದರು. ಆದರೆ ಹೆಸರುಗಳಿಸಿಕೊಟ್ಟಿದ್ದು ‘ರಂಗಿತರಂಗ’. ‘ಮಡಿವಾಳ ಮಾಚಿದೇವ’, ‘ನೋ ಎಂಟ್ರಿ’ ಮತ್ತಿತರ ಚಿತ್ರಗಳು ಸದ್ಯ ತೆರೆ ಕಾಣುವ ಹಂತದಲ್ಲಿವೆ.

ರಂಗೀ ರಂಗೀ
ರಂಗಿತರಂಗಕ್ಕೆ ಅರವಿಂದ್ ಅಚಾನಕ್ಕಾಗಿ ಆಯ್ಕೆಯಾದವರು. ಸಿನಿಮಾದ ಡಾಕ್ಟರ್ ಪಾತ್ರಕ್ಕೆ ಆಯ್ಕೆಯಾಗಬೇಕಿದ್ದ ಅವರಿಗೆ ಸಿಕ್ಕಿದ್ದು ಪೊಲೀಸ್ ಪಾತ್ರ. ‘ಯು ಟೀವಿ ಕಚೇರಿಗೆ ಹೋಗಿದ್ದೆ. ಆಗ ಸ್ನೇಹಿತರಾದ ಜಗದೀಶ್ ಪಾಟೀಲ್‌, ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಪರಿಚಯಿಸಿ ಡಾಕ್ಟರ್ ಪಾತ್ರ ಮಾಡಿಸಬಹುದು ಎಂದರು. ಅನೂಪ್ ಹೇಳುವೆ ಎಂದಷ್ಟೇ ಹೇಳಿದರು.

ಆ ಚಿತ್ರತಂಡದಲ್ಲಿದ್ದ ಪ್ರಾಣ್ ಅವರು ‘ಇವರು ಕಿರುತೆರೆಯಲ್ಲಿ ಚೆನ್ನಾಗಿ ನಟಿಸಿದ್ದಾರೆ. ಅವರ ಜೋಗುಳ ಧಾರಾವಾಹಿ ನಾನು ನೋಡಿದ್ದೇನೆ ಎಂದಿದ್ದಾರೆ. ನಂತರ ಆಡಿಷನ್ ನಡೆಯಿತು. ನೇರವಾಗಿ ಬಂದ ನಿರೂಪ್ ನೀವು ಪೊಲೀಸ್ ಪಾತ್ರ ಮಾಡಿ ಎಂದು ನನ್ನ ಪಾತ್ರದ ಬಗ್ಗೆ ಹೇಳಿದರು. ನಿಮ್ಮದೇ ಲೈನ್ ಹಾಕಿಕೊಂಡು ಸಂಭಾಷಣೆ ಮಾಡಿ ಎಂದರು. ಅವರಿಗೆ ನಾನು ಒಮ್ಮೆ ನಕ್ಕ ವಿಕಟ ನಗೆ ಬಹಳ ಇಷ್ಟ ಆಯಿತು. ಈ ನಗು ಚಿತ್ರದಲ್ಲಿ ನೈಜವಾಗಿರಬೇಕು ಎಂದರು’ ಎಂದು ಮಂದಹಾಸ ಬೀರುವರು.

ಪ್ರಮುಖ ಸುದ್ದಿಗಳು