ಗೌರಿಗಣೇಶ ಮೂರ್ತಿ ಪ್ರತಿಷ್ಠಾಪನೆ: ಹಲವು ನಿರ್ಬಂಧ

ರಾಮನಗರ: ಗೌರಿಗಣೇಶ ಹಬ್ಬದ ಹಿನ್ನಲೆಯಲ್ಲಿ ನಗರಸಭೆ, ಪೊಲೀಸ್‌ ಇಲಾಖೆ, ಬೆಸ್ಕಾಂ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ನಿಯಮಗಳನ್ನು ರೂಪಿಸಿವೆ. ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಯಮಕ್ಕೆ ಮುಂದಾಗಿವೆ.

ಎಲ್ಲಾ ಹಳ್ಳಿ, ನಗರ, ಪಟ್ಟಣ ಪ್ರದೇಶಗಳಲ್ಲಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಸಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 550ಕ್ಕೂ ಹೆಚ್ಚು ಯುವ ಗೆಳೆಯರ ಬಳಗದವರು ಪ್ರತಿಷ್ಠಾಪಿಸುತ್ತಾರೆ. ಈ ಬಾರಿ ಪಿಒಪಿ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಂತಿಲ್ಲ. ಮಣ್ಣಿನ ಗಣೇಶಮೂರ್ತಿಯನ್ನೇ ಪ್ರತಿಷ್ಠಾಪಿಸಬೇಕು ಎಂದು ಈಗಾಗಲೇ ಸರ್ಕಾರವು ನಿರ್ಬಂಧ ಹೇರಿದೆ.

ನಿಬಂಧನೆಗಳು: ನಗರಸಭೆಯಿಂದ ಗಣೇಶ ಪ್ರತಿಷ್ಠಾಪನೆಗೆ ನಿಬಂಧನೆಗಳನ್ನು ವಿಧಿಸಲಾಗಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆಪದಲ್ಲಿ ರಸ್ತೆ ಅಗೆಯುವುದು, ಮಣ್ಣು, ಮರಳನ್ನು ಹಾಕುವುನ್ನು ಮಾಡಬಾರದು. ಸುತ್ತಲಿನ ಜಾಗದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು.

ಧ್ವನಿವರ್ಧಕ ಉಪಯೋಗಿಸಿಕೊಳ್ಳಲು ಪೊಲೀಸ್‌ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಅಗ್ನಿ ಶಾಮಕ ಠಾಣೆಯಿಂದ ಸೂಕ್ತ ಪರವಾನಗಿ ಪಡೆದುಕೊಳ್ಳಬೇಕು.

ಜೇಡಿ ಮಣ್ಣಿನಿಂದ ಮಾಡಿದ ಹಾಗೂ ನೀರಿನಲ್ಲಿ ಕರಗುವ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬೇಕು. ಸಾರ್ವಜನಿಕರು ಪ್ಲಾಸ್ಟಿಕ್‌ ಹಾಗೂ ನೀರಿನಲ್ಲಿ ಕರಗದೇ ಇರುವ ವಸ್ತುಗಳನ್ನು ಬಳಸಬಾರದು.

ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಮೂರ್ತಿ ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ, ರಸ್ತೆಯ ಪಕ್ಕ ಹಾಗೂ ಬಯಲು ಪ್ರದೇಶದಲ್ಲಿ ಪ್ರತಿಷ್ಠಾಪಿಸಬೇಕು. ನಗರಸಭೆ ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜಿಸಬೇಕು. ಅಹಿತರಕ ಘಟನೆ ನಡೆದಲ್ಲಿ ಆಯೋಜಕರೆ ಹೊಣೆಗಾರರು. ರಾತ್ರಿ 10 ಗಂಟೆಯ ನಂತರ ಧ್ವನಿವರ್ಧಕ ಉಪಯೋಗಿಸಬಾರದು. ಧ್ವನಿವರ್ಧಕದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾಗ್ರತೆ ವಹಿಸಬೇಕು.

ಗಣೇಶಮೂರ್ತಿಗಳನ್ನು ಕೆರೆಗಳಲ್ಲಿ ವಿಸರ್ಜಿಸುವಂತಿಲ್ಲ. ನಿಗದಿಪಡಿಸಿರುವ ಸ್ಥಳಗಳಲ್ಲೇ ವಿಸರ್ಜಿಸಬೇಕು. ವಿಸರ್ಜಿಸುವ ಸ್ಥಳದಲ್ಲಿ ಘನತ್ಯಾಜ್ಯ ವಸ್ತು ಸುಡುವುದಕ್ಕೆ ಅವಕಾಶ ನೀಡಬಾರದು. ಬಣ್ಣ ಇರುವ ಗಣೇಶನ ಮೂರ್ತಿಗಳನ್ನೇ ಪೂಜಿಸುವುದಾದರೇ ನೀರಿನಲ್ಲಿ ಕರಗುವ ಬಣ್ಣ ಹಾಗೂ ವಿಷಯುಕ್ತವಲ್ಲದ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿದ ಮೂರ್ತಿಗಳನ್ನು ಬಳಸುವ ಬಗ್ಗೆ ಅರಿವು ಮೂಡಿಸಬೇಕು ಎನ್ನುತ್ತಾರೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು.
ಪೊಲೀಸ್ ಇಲಾಖೆ: ಕಾರ್ಯಕ್ರಮ, ವಿಸರ್ಜನೆ ಮೆರವಣಿಗೆ ಸಾಗುವ ದಾರಿ ಬಗ್ಗೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಬೇಕು. ಗಣೇಶನ ವಿಸರ್ಜನೆ ರಾತ್ರಿ ಹತ್ತರ ವೇಳೆಗೆ ಮುಗಿಯಬೇಕು.
ಜನಸಂಚಾರದ ಒತ್ತಡ ಹೆಚ್ಚಿರುವ ಪ್ರದೇಶದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಇಲ್ಲ. ಇಲಾಖೆಯ ನಿಯಮಗಳನ್ನು ಮೀರಿದರೆ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಕಾರ್ಯಕ್ರಮಗಳು ಕಡಿಮೆ: ಮೊದಲೆಲ್ಲಾ ಗಣೇಶೋತ್ಸವ ಬಂತೆಂದರೆ ತಿಂಗಳುಗಟ್ಟಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಹಲವಾರು ನಿಯಮಗಳನ್ನು ಸರ್ಕಾರ ಆಯೋಜಕರ ಮೇಲೆ ಹೇರುತ್ತಿರುವ ಪರಿಣಾಮ ವರ್ಷದಿಂದ ವರ್ಷಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕಡಿಮೆಯಾಗುತ್ತಿವೆ ಎಂದು ಸಾಂಸ್ಕೃತಿಕ ಸಂಘಟಕ ರಾ.ಬಿ. ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ಸಹಜವಾಗಿಯೇ ಗಣೇಶೋತ್ಸವ ಎಂದರೆ ಎಲ್ಲಾ ತೆರನಾದ ಮನರಂಜನಾ ತಂಡಗಳಿಗೆ ಉದ್ಯೋಗವನ್ನು ನೀಡುವ ಹಬ್ಬ. ಆದರೆ, ಇಂತಹ ಸಂಭ್ರಮದ ಹಬ್ಬಕ್ಕೆ ಹತ್ತಾರು ನಿಯಮಗಳನ್ನು ತಂದು ಆಯೋಜಕರ ಉತ್ಸಾಹಕ್ಕೆ ಕಾನೂನಿನ ಹೆಸರಿನಲ್ಲಿ ಕಡಿವಾಣ ಹಾಕುತ್ತಿರುವುದು ಖಂಡನೀಯ ಎಂದರು.

ಕಲೆಯನ್ನು ನಂಬಿರುವ ಎಷ್ಟೋ ವೃತ್ತಿಪರ ಕಲಾವಿದರಿಗೆ ಇದರಿಂದ ತೊಂದರೆಯಾಗಿದೆ. ಬೇರೆಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ಇಲ್ಲದ ನಿಯಮಗಳು ವರ್ಷದಿಂದ ವರ್ಷಕ್ಕೆ ಗಣೇಶೋತ್ಸವಕ್ಕೆ ಮಾತ್ರ ಹೆಚ್ಚಾಗತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಯಮಗಳನ್ನು ಮಾಡಿರುವುದು ಧಾರ್ಮಿಕ ಆಚರಣೆಯನ್ನು ಸಾರ್ವಜನಿಕವಾಗಿ ಕುಗ್ಗಿಸುವ ಕ್ರಮವಾಗಿದೆ. ಗಣೇಶೋತ್ಸವ ಒಂದು ಸಾಂಸ್ಕೃತಿಕ ಸಂಭ್ರಮ. ಇಂತಹ ಕಡಿವಾಣಗಳಿಂದ ಗಣೇಶೋತ್ಸವಗಳು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿವೆ ಎಂದು ಸಾರ್ವಜನಿಕ ಗಣಪತಿ ವಿಸರ್ಜನಾ ಸಮಿತಿಯ ಸಂಚಾಲಕ ಅನಿಲ್‌ಬಾಬು ತಿಳಿಸಿದರು.

ಬೇಡಿಕೆ ಇಲ್ಲ: ಎರಡು ವರ್ಷಗಳಿಂದ ಗಣೇಶಮೂರ್ತಿಗಳಿಗೆ ಬೇಡಿಕೆ ಇಲ್ಲದಂತಾಗಿದೆ. 28 ವರ್ಷಗಳಿಂದ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಆದರೆ ಸರ್ಕಾರ ರೂಪಿಸಿರುವ ನಿಯಮಗಳಿಂದ ಬೇಡಿಕೆ ಕಡಿಮೆಯಾಗಿ, ಮಾರಾಟ ಮಂದಗತಿಯಲ್ಲಿ ಸಾಗಿದೆ ಎಂದು ಕಾಮಣ್ಣನಗುಡಿ ವೃತ್ತದ ಗಣೇಶಮೂರ್ತಿ ಮಾರಾಟಗಾರ ಎನ್. ಮಧುಸೂದನ್‌ ತಿಳಿಸಿದರು.

ವಿಸರ್ಜನೆ: ರಂಗರಾಯನದೊಡ್ಡಿ ಬಳಿ ಇರುವ ಸಿರಿಗೌರಿ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ನಗರಸಭೆಯ ಪ್ರಭಾರ ಪರಿಸರ ಅಧಿಕಾರಿ ಜಿ. ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಗಣೇಶಮೂರ್ತಿಯನ್ನು ಪ್ರತಿಷ್ಠಾಪಿಸುವವರಿಗೆ ₨100 ಶುಲ್ಕ ನಿಗದಿಪಡಿಸಲಾಗಿದೆ. ಮೊದಲನೇ ಹಾಗೂ ಮೂರನೇ ದಿನ ನಗರಸಭೆ ವತಿಯಿಂದ ಮೂರು ವಾಹನಗಳು ನಗರ ವ್ಯಾಪ್ತಿಯಲ್ಲಿ ಸಂಜೆ 4 ಗಂಟೆಯಿಂದ ರಾತ್ರಿ ಎಂಟು ಗಂಟೆಯವರೆಗೆ ಸಂಚರಿಸಲಿವೆ. ಆ ಸಮಯದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಬಹುದು ಎಂದರು.

* ಸಾರ್ವಜನಿಕರಿಗೆ ತೊಂದರೆಯಾಗುವ ಅನೇಕ ಕಾರ್ಯಕ್ರಮಗಳು ನಡೆಯಬಹುದಾದರೆ, ಒಂದು ಧಾರ್ಮಿಕ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕುವುದು ಏಕೆ?
–ರಾ.ಬಿ. ನಾಗರಾಜ್‌, ಸಾಂಸ್ಕೃತಿಕ ಸಂಘಟಕ

* ಸರ್ಕಾರದ ಹಲವು ನಿಬಂಧನೆಗಳು ಗಣೇಶಮೂರ್ತಿ ಪ್ರತಿಷ್ಠಾಪಿಸುವ ಯುವಕರು ಹಾಗೂ ಮಕ್ಕಳ ತಂಡಗಳಿಗೆ ತೊಂದರೆಯಾಗಿ ಪರಿಣಮಿಸಿವೆ
–ಅನಿಲ್ ಬಾಬು, ಸಾರ್ವಜನಿಕ ಗಣಪತಿ ವಿಸರ್ಜನಾ ಸಮಿತಿ

* ಗಣೇಶ ಪ್ರತಿಷ್ಠಾಪಿಸುವವರು ಸಮೀಪದ ಪೊಲೀಸ್ ಇಲಾಖೆ, ನಗರಸಭೆ ಅಥವಾ ಗ್ರಾ.ಪಂ. ಬೆಸ್ಕಾಂ, ಅಗ್ನಿಶಾಮಕ ದಳ ಕಚೇರಿಯಿಂದ ಅನುಮತಿ ಪಡೆಯಬೇಕು
–ಜಿ. ಶ್ರೀನಿವಾಸ್
ಪ್ರಭಾರ ಪರಿಸರ ಅಧಿಕಾರಿ, ನಗರಸಭೆ

 

ಪ್ರಮುಖ ಸುದ್ದಿಗಳು