ಉಡುಪಿ: ಬಂದ್ ವೇಳೆ ಗಲಭೆ, ಕಾಂಗ್ರೆಸ್-ಬಿಜೆಪಿಯ 7 ಕಾರ್ಯಕರ್ತರ ವಿರುದ್ಧ ಪ್ರಕರಣ

ಉಡುಪಿ: ನಗರದಲ್ಲಿ ಸೋಮವಾರ ನಡೆದ ಭಾರತ್ ಬಂದ್ ವೇಳೆ ಘರ್ಷಣೆ, ಸಾರ್ವಜನಿಕರಿಗೆ ತೊಂದರೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಕಾಂಗ್ರೆಸ್ ಹಾಗೂ ಬಿಜೆಪಿಯ 7 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

ಮೂರು ಪ್ರಕರಣಗಳನ್ನು ಪೊಲೀಸರೇ ಸ್ವಯಂ ಪ್ರೇರಿತರಾಗಿ ದಾಖಲಿಸಿಕೊಂಡಿದ್ದಾರೆ. ಉಳಿದಂತೆ ಬಲವಂತದ ಬಂದ್ ಮಾಡಿಸಿದ್ದಕ್ಕೆ ಒಂದು, ಮಹಿಳಾ ದೌರ್ಜನ್ಯ ಸಂಬಂಧ ಮಹಿಳಾ ಠಾಣೆಯಲ್ಲಿ ಒಂದು, ಹಲ್ಲೆಗೆ ಸಂಬಂಧಿಸಿದಂತೆ ಮಣಿಪಾಲ ಹಾಗೂ ನಗರ ಠಾಣೆ ತಲಾ ಒಂದು ಪ್ರಕರಣ ದಾಖಲಾಗಿವೆ.

ಕಲ್ಸಂಕ ಜಂಕ್ಷನ್‌ನಲ್ಲಿ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದ್ದಕ್ಕೆ, ಕಡಿಯಾಳಿ ಬಳಿ ಘರ್ಷಣೆ, ಮಣಿಪಾಲದ ಆಟೊ ಚಾಲಕರಿಗೆ ತೊಂದರೆ ನೀಡಿದ್ದಕ್ಕೆ ಹಾಗೂ ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಘರ್ಷಣೆ ಸಂಬಂಧ ದೂರುಗಳು ದಾಖಲಾಗಿವೆ.

ಆರೋಪಿಗಳು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬಂದ್ ವೇಳೆ ಕಾರ್ಯಕರ್ತರ ಘರ್ಷಣೆಯ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಇದರ ಆಧಾರದ ಮೇಲೆ ಹಲವರನ್ನು ಬಂಧಿಸಲಾಗುವುದು. ಮುಂಜಾಗ್ರತಾ ಕ್ರಮವಾಗಿ ಉಡುಪಿಯಲ್ಲಿ ಎರಡು ಹಾಗೂ ಕುಂದಾಪುರದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿಗಳು