‘ದಲಿತ’ ಪದ ಬಳಕೆ ನಿಷೇಧ ಸಲ್ಲ

ಬೆಂಗಳೂರು: ದಲಿತ ಪದ ಬಳಕೆ ನಿಲ್ಲಿಸುವುದು ಅಸಾಧ್ಯ. ಅದು ಎಲ್ಲ ಜಾತಿಗಳನ್ನು ಒಳಗೊಳ್ಳುವ, ಒಂದು ಮಾಡಿದ ಪದ. ಹಾಗಾಗಿ ಅದರ ಬಳಕೆ ಮಾಡಬೇಕು ಎಂದು ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಚಿಂತಕರು ಒಮ್ಮತ ವ್ಯಕ್ತಪಡಿಸಿದರು. 

ಸಮತಾ ಸೈನಿಕ ದಳದ ಆಶ್ರಯದಲ್ಲಿ ನಡೆದ ‘ದಲಿತ’ ಪದ ಬಳಕೆ ವಿವಾದ; ಒಂದು ಸಂವಾದದಲ್ಲಿ ಈ ಅಭಿಮತ ವ್ಯಕ್ತವಾಯಿತು. 

ದಳದ ರಾಜ್ಯ ಘಟಕದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ‘ದೇಶದಲ್ಲಿ ದಲಿತ ಚಳವಳಿ ಆರಂಭವಾದಂದಿನಿಂದಲೂ ಆ ಪದ ಪ್ರಖರವಾಗಿ ಚಾಲ್ತಿಯಲ್ಲಿದೆ. ಅಸ್ಪಶ್ಯತೆ ಆಚರಣೆಯ ಕಠೋರತೆಗೆ  ಬಲಿಪಶುಗಳಾದವರಿಗೆ ಅನ್ವರ್ಥವಾಗಿ ಈ ಪದವನ್ನು ಬಳಸಲಾಗುತ್ತದೆ. ಅಮೆರಿಕದಲ್ಲಿ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿದ್ದ ಕರಿಯರು ಸ್ಥಾಪಿಸಿದ್ದ ಬ್ಲ್ಯಾಕ್‌ ಪ್ಯಾಂಥರ್ಸ್‌ ಶಬ್ದದ ಸ್ಫೂರ್ತಿ ಪಡೆದು ಮೊದಲ ಬಾರಿಗೆ ದಲಿತ್‌ ಪ್ಯಾಂಥರ್ಸ್‌ ಎಂಬ ಸಂಘಟನೆ ಆರಂಭವಾಯಿತು. ರಾಜ್ಯದಲ್ಲಿ ಅಸ್ಪಶ್ಯ ಜನಾಂಗದವರು ಆರಂಭಿಸಿದ ಹೋರಾಟದ ಸಂಘಟನೆಗಳಿಗೆ ದಲಿತ ಎಂಬ ಪದ ಬಳಕೆಯಾಗುವಂತಾಯಿತು. ದಾಖಲೆಗಳಲ್ಲಿ ಆ ಪದವನ್ನು ಇಲ್ಲವಾಗಿಸಬಹುದಾದರೂ ಜನಮಾನಸದಲ್ಲಿ ಉಳಿದ ಪದವನ್ನು ಅಳಿಸಲಾಗದು. ಸಂವಿದಾನದಲ್ಲಾಗಲಿ ಅಥವಾ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಬರಹಗಳಲ್ಲಾಗಲಿ ದಲಿತ ಎಂಬ ಪದ ಇಲ್ಲ ಎಂದು ಹೇಳಬಹುದು. ಆದರೆ, ದೇಶದ ದಲಿತ ಚಳುವಳಿಗಳು ಅಂಬೇಡ್ಕರ್‌ ಅವರ ಚಿಂತನೆ ಮತ್ತು ಹೋರಾಟಗಳನ್ನೇ ಮುಂದುವರಿಸಿವೆ. ಇದನ್ನು ಅಲ್ಲಗಳೆಯಲಾಗದು. ಅಸ್ಪಶ್ಯ ಪದ ಬಳಕೆ ನಿಷೇಧಿಸಿದಂತೆ ದಲಿತ ಪದಬಳಕೆ ನಿಷೇಧಿಸಲಾಗದು ಎಂದು ಅವರು ಹೇಳಿದರು. 

ಚಿಂತಕ ಡಾ.ಎಂ.ನಾರಾಯಣಸ್ವಾಮಿ ಮಾತನಾಡಿ, ‘ದಲಿತ ಅನ್ನುವುದು ಜಾತಿಯಾಚೆಗಿನ ಪದ. ಎಲ್ಲ ಜಾತಿಯ ಬಡವರು ದಲಿತರು. ಸಾಹಿತ್ಯದಿಂದ ‘ದಲಿತ’ ಪದವನ್ನು ತೆಗೆಯಲಾಗದು. ದಲಿತ್‌ ವಾಯ್ಸ್‌, ದಲಿತ್‌ ದಸ್ತಕ್‌ ಎಂಬ ಮಾಧ್ಯಮಗಳು ತಮ್ಮ ಹೆಸರಿನಲ್ಲೇ ಆ ಪದ ಬಳಸಿವೆ. ಅದನ್ನು ತೆಗೆಯಲಾಗದು. ಈ ಪದ ಬಳಕೆಯ ಗೊಂದಲದಿಂದ  ದಲಿತರೇ ದಿಕ್ಕುತಪ್ಪುವ ಸಂಭವ ಇದೆ. ಕೋರ್ಟ್‌ ಸೀಮಿತ ಅರ್ಥದಲ್ಲಿ ತನ್ನ ತೀರ್ಪು ಕೊಟ್ಟಿದೆ ಎಂದರು.

ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ.ಎಂ.ಸುಮಿತ್ರಾ ಮಾತನಾಡಿ, ‘ಮಾಧ್ಯಮಗಳಲ್ಲಿ ಈ ಪದ ಬಳಕೆಯಾಗದಂತೆ ಮಾಡಬಹುದು. ಆದರೆ, ಜನರ ಬಾಯಿ ಮುಚ್ಚಿಸಲು ಸಾಧ್ಯವೇ? ದಲಿತ ಪದ ಬಳಕೆ ನಿಷೇಧಿಸಿದರೆ ಒಂದೊಂದು ಜಾತಿಯವರು ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕಾಗುತ್ತದೆ. ಹಾಗಾದಾಗ ನಮ್ಮನ್ನು ಯಾರೂ ಕೇಳುವವರಿರುವುದಿಲ್ಲ. ಒಂದು ವೇಳೆ ಆ ಪದ ಬಳಸಬಾರದೆಂದಾದರೆ ಅದಕ್ಕೆ ಪರ್ಯಾಯ ಪದ ಯಾವುದು ಎಂಬುದನ್ನು ಸೂಚಿಸಬೇಕು ಎಂದು ಅವರು ಒತ್ತಾಯಿಸಿದರು. 

ಪ್ರಮುಖ ಸುದ್ದಿಗಳು