ಬಂದು ಹೋಗಯ್ಯ ಗೌರಿತನಯ...

ಗಣೇಶ ಹಬ್ಬ ಬಂದಿದೆ. ಮನೆಯಲ್ಲಿ ಗಣೇಶನ ಕೂರಿಸುವವರ ಮನಗಳಲ್ಲೆಲ್ಲ ಸಂಭ್ರಮ, ಸಡಗರ. ಆದರೆ ಬೆಂಗಳೂರಿನಂತಹ ನಗರಗಳಲ್ಲಿ ವಾಸಿಸುವವರಿಗೆ ಗಣನಾಯಕನ ವಿಸರ್ಜನೆಯದೇ ಚಿಂತೆ. ನದಿ, ಸಾಗರ, ಸರೋವರ, ಹಳ್ಳ–ಕೊಳ್ಳಗಳಿಲ್ಲದ ಬೆಂಗಳೂರಲ್ಲಿ ಇರುವ ಕೆರೆಗಳೆಲ್ಲ ಬಡಾವಣೆಗಳಾಗಿವೆ. ವರುಷಕ್ಕೊಮ್ಮೆ ಗಂಗಮ್ಮನನ್ನು ಸೇರುವ ತವಕದಿಂದ ಬರುವ ಗಜಮುಖನಿಗೆ ಗಂಗಾದರ್ಶನ ಮಾಡಿಸುವುದು ಹೇಗೆಂಬುದೇ ಬಹುತೇಕರ ಕಳವಳ. 

ಎಲ್ಲಕ್ಕೂ ಮುಖ್ಯವಾಗಿ ಯಾರು ಗಂಗಮ್ಮ, ಯಾರಲ್ಲ ಅನ್ನುವುದೂ ಒಂದು  ಜಿಜ್ಞಾಸೆ. ಹಳ್ಳ–ಕೊಳ್ಳ, ನದಿಗಳಲ್ಲಿ ಹರಿಯುವವಳು ಮಾತ್ರ ಗಂಗೆಯೇ, ನಲ್ಲಿ, ಟ್ಯಾಂಕರು, ಸಂಪು, ಬಕೇಟುಗಳಲ್ಲಿ ಇರುವವಳು ಗಂಗೆ ಅಲ್ಲವೇ. ಈ ತಾಪತ್ರಯವೇ ಬೇಡ. ಒಮ್ಮೆ ಮನೆಗೆ ತರುವ ಏಕದಂತನನ್ನು ಮನೆಯಲ್ಲೇ ಉಳಿಸಿಕೊಂಡು ಪ್ರತಿವರ್ಷ ಪೂಜೆ ಸಲ್ಲಿಸಿದರೆ ಆಗದೇ...

‘ಆಗಬಹುದು, ಆದರೆ ಸುಲಭವಲ್ಲ ಎನ್ನುತ್ತಾರೆ‘ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಸೌಮಿತ್ರ ಆಚಾರ್ಯರು.

‘ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಅಧಿಕ ಪ್ರಮಾಣದಲ್ಲಿತ್ತವೆ. ಮನೆಯಲ್ಲಿ ನಿತ್ಯ ಪೂಜೆ ಮಾಡುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದಾಗ ಹೆಚ್ಚಿನ ಶಕ್ತಿ ತುಂಬುತ್ತದೆ. ಹೆಚ್ಚಿನ ನೇಮ–ನಿಷ್ಠೆಯಿಂದ ಪೂಜಿಸಬೇಕಾಗುತ್ತದ. ದಿನಂಪ್ರತಿ ಅಷ್ಟೆಲ್ಲಾ ವಿಧಿಪೂರ್ವಕವಾದ ಪೂಜೆ-ಅರ್ಚನೆಯನ್ನು ವರ್ಷಪೂರ್ತಿ ಮಾಡುವುದು ಕಠಿಣ. ಈ ಕಾರಣಕ್ಕಾಗಿಯೇ ಗಣೇಶನ ನೂತನ ಮೂರ್ತಿಯಲ್ಲಿಯೇ ಈ ಲಹರಿಗಳನ್ನು ಆವಾಹನೆ ಮಾಡಿ, ಒಂದು ದಿನ, ಮೂರು, ಐದು, ಏಳು, ಹನ್ನೊಂದು, ಹೆಚ್ಚೆಂದರೆ ಇಪ್ಪತ್ತೊಂದು ದಿನ ಪೂಜಿಸಿ ವಿಸರ್ಜನೆ ಮಾಡುತ್ತಾರೆ’ ಎನ್ನುವುದು ಅರ್ಚಕರ ವಿವರಣೆ.

ಮಣ್ಣಿನ ಗಣಪನೇ ಶ್ರೇಷ್ಠ: ಗಣೇಶ ಚತುರ್ಥಿ ಇನ್ನೂ ತಿಂಗಳಿರುವಾಗಲೇ ಮಾರುಕಟ್ಟೆಯಲ್ಲಿ ತರತರದ, ಬಣ್ಣಬಣ್ಣದ, ವಿಶಿಷ್ಟ ರೂಪಗಳ, ಹಲವು ವೇಷಗಳ ಗಣಪನ ಮೂರ್ತಿಗಳು ರಾರಾಜಿಸುತ್ತವೆ. ಆದರೆ ಅವೆಲ್ಲ ತೋರಿಕೆಗೆ ಮಾತ್ರ. ನಿಜವಾದ ಅರ್ಥದಲ್ಲಿ ಗಣಪ ಪ್ರಸನ್ನನಾಗುವುದು ನಿಮ್ಮ ಮನಸ್ಸಿನಲ್ಲಿರುವ ಭಾವಕ್ಕೇ ಹೊರತು ಆಡಂಬರಕ್ಕಲ್ಲ. ಹೀಗಾಗಿ ನಿಮ್ಮ ಶಕ್ತಾನುಸಾರ, ನಿಮಗೆ ಹೇಗೆ ಬರುತ್ತದೆಯೊ ಹಾಗೆ, ನಿಮ್ಮ ಕೈಯಾರೆ ನೀವು ಗಣಪನ ಮೂರ್ತಿ ಮಾಡಿ. ಯಾವ ಲೇಪನವೂ ಇಲ್ಲದೇ, ಶುದ್ಧವಾದ ಮಣ್ಣಿನಿಂದ ಮಾಡಿದ ಗಣೇಶ ಮೂರ್ತಿಯೇ ಶ್ರೇಷ್ಠ. ಹೀಗೆ ಮಾಡಿದ ಸಿದ್ಧಿವಿನಾಯಕನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಮತ್ತು ಪೂಜೆ ಮಾಡಿ, ಅದೇ ದಿನ ವಿಸರ್ಜನೆ ಮಾಡುವುದು ಒಳಿತು.

ಈಗ ಹೆಚ್ಚಾಗಿ ಎಲ್ಲರೂ ಮಾರುಕಟ್ಟೆಯಿಂದಲೇ ಮೂರ್ತಿಯನ್ನು ತರುತ್ತಾರೆ. ಹಾಗೆ ತರುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಮನೆಯ ಹಿರಿಯನೊಬ್ಬ, ಚತುರ್ಥಿ ದಿನವೇ ಬೆಳಿಗ್ಗೆದ್ದು ಸ್ನಾನಾದಿ ಕ್ರಿಯಾಕರ್ಮಗಳನ್ನು ಮುಗಿಸಿ, ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ, ಮನೆಯ ಇತರ ಸದಸ್ಯರೊಂದಿಗೆ ಹೋಗಿ ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ತರಬೇಕು. ಮೂರ್ತಿಗೆ ರೇಷ್ಮೆ ಅಥವಾ ನೂಲಿನ ಹೊಸ ಬಟ್ಟೆಯನ್ನು ಹಾಕಬೇಕು. ಮೂರ್ತಿಯ ಮುಖವು ತರುವವನ ಕಡೆಗೆ ಇರಬೇಕು. ಮನೆಯ ಹೊಸ್ತಿಲಿಗೆ ಬಂದ ಮೇಲೆ ಮೂರ್ತಿಯ ಮುಖವನ್ನು ತಿರುಗಿಸಬೇಕು. ಮುತ್ತೈದೆಯರು ಮೂರ್ತಿಯನ್ನು ಹಿಡಿದಿರುವವನ ಕಾಲುಗಳಿಗೆ ಹಾಲು, ನೀರು ಹಾಕಿ, ಮೂರ್ತಿಗೆ ಆರತಿ ಬೆಳಗಿ ಮನೆಯೊಳಗೆ ಕರೆಯಬೇಕು.

ಸರಳ ಪೂಜೆಗೂ ಪ್ರಸನ್ನ: ಈ ವಕ್ರತುಂಡ ಸರಳ ಆತಿಥ್ಯಕ್ಕೂ ಪ್ರಸನ್ನನಾಗುವನು. ಮನೆಗೆ ಒಬ್ಬ ಅತಿಥಿ ಬಂದಾಕ ಹೇಗೆ ಸತ್ಕರಿಸುವಿರೊ ಹಾಗೆ ಉಪಚರಿಸಿ ಬೀಳ್ಕೊಟ್ಟರೆ ಸಾಕು. ಮೊದಲು ಆವಾಹನೆ ಮಾಡುವುದು. ಅಂದರೆ ಗಣೇಶನನ್ನು ಕರೆತಂದು ಆ ಜಾಗದಲ್ಲಿ ಕೂರಿಸುವುದು. ಕೈಕಾಲು ತೊಳೆಯಲು ಹಾಗೂ ಕುಡಿಯಲು ನೀರು ಕೊಡುವುದು; ಗಂಧ, ಹೂವು, ಧೂಪ, ದೀಪದಿಂದ ಗೌರವ ಅರ್ಪಣೆ ಮಾಡುವುದು; ಅವನಿಷ್ಟದ ಖಾದ್ಯಗಳನ್ನು ಬಡಿಸುವುದು (ನೈವೇದ್ಯ), ಊಟದ ನಂತರ ಗೌರವ ಸಮರ್ಪಣೆ; ಪ್ರಾರ್ಥನೆ ಅಂದರೆ ಆರತಿ ಮಾಡುವುದು. ನಂತರ ನಿಮಗೆ ಅನುಕೂಲವಾದಷ್ಟು ದಿನ ಮನೇಲಿಟ್ಟುಕೊಂಡು ಬೀಳ್ಕೊಡುವುದು.

ಗಣೇಶನ ಪೂಜೆಯನ್ನು ಹೇಗೆ ಮಾಡುವುದೆಂದು ಅನೇಕರು ತಲೆ ಕೆಡಿಸಿಕೊಳ್ಳುತ್ತಾರೆ. ಮೊದಲ ಬಾರಿ ಗಣೇಶನ ಪೂಜೆಗೆ ತೊಡಗುವವರಂತೂ ಗುಡಿ–ಗುಂಡಾರ ತಿರುಗಿ, ಅರ್ಚಕರನ್ನು ಕಂಡು ಅವರು ಹೇಳುವ ವಿಧಗಳನ್ನೆಲ್ಲ ಬರೆದುಕೊಂಡು ಕಷ್ಟಪಡುತ್ತಾರೆ. ಈಗಿನವರು ಗೂಗಲ್‌, ಯೂಟ್ಯೂಬ್‌ ಮೊರೆ ಹೋಗುವುದೂ ಇದೆ. ಆದರೆ ಮೋದಕಪ್ರಿಯನಿಗೆ ಅಕ್ಕರೆಯಿಂದ ಕರೆದು, ಕೂಡಿಸಿ, ಭೋಜನ ನೀಡಿ, ಅರಿಕೆಯನ್ನೊಡ್ಡಿ, ಗೌರವದಿಂದ ಬೀಳ್ಕೊಟ್ಟರೆ ಸಾಕು. ಹೆಚ್ಚೇನೂ ಬೇಡ.

‌**********

ಗಣೇಶ ಮಹಾಕಾಯ. ಬ್ರಹ್ಮಾಂಡವನ್ನೇ ಹೊಟ್ಟೆಯಲ್ಲಿಟ್ಟುಕೊಂಡವನು. ಆದರೆ ಮನೆಗಳಲ್ಲಿ ಪೂಜಿಸುವಾಗ ನಮಗೆ ನಿಲುಕದಷ್ಟು ಬೃಹತ್‌ ಮೂರ್ತಿಗಳನ್ನಿಡುವುದು ಶ್ರೇಷ್ಠವಲ್ಲ. ಅಂಗೈಯಷ್ಟು ಮೂರ್ತಿಯಾದರೂ ಸಾಕು. ಈತ ಅಲಂಕಾರ ಪ್ರಿಯ. ಹಾಗೆಂದು ಅನಗತ್ಯ ಆಡಂಬರದ ಅಗತ್ಯವಿಲ್ಲ. ಸರಳವಾದ ಪೂಜೆ, ಸುಲಭವಾದ ಮಂತ್ರ, ದೀಪ–ದೂಪ, ನೈವೇದ್ಯಕ್ಕೆ ಅವನಿಗಿಷ್ಟದ ಮೋದಕವನ್ನಿಟ್ಟು ಕೈ ಮುಗಿದರೆ ಮುಗಿಯಿತು. ಮುಖ್ಯವಾಗಿ ಮನದಲ್ಲಿ ಭಕ್ತಿ ಇರಬೇಕು.

–ಸೌಮಿತ್ರ ಆಚಾರ್ಯರು,

ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಅರ್ಚಕರು

ಪ್ರಮುಖ ಸುದ್ದಿಗಳು