‘ಊರ್‌ದಕುಲು’ -ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಒಗ್ಗೂಡಿಸುವ ಪದ ಇದು. ದಕ್ಷಿಣ ಕನ್ನಡ ಜಿಲ್ಲೆಯು ಕರ್ನಾಟಕ ಮತ್ತು ಕಾಸರಗೋಡು ಜಿಲ್ಲೆ ಕೇರಳದ ಭಾಗವಾಗಿದ್ದರೂ ಈ ಎರಡೂ ಜಿಲ್ಲೆಗಳು ಸಾಂಸ್ಕೃತಿಕ ಮತ್ತು ಭಾವನಾತ್ಮಕವಾಗಿ ಪರಸ್ಪರ ಬೆಸೆದುಕೊಂಡಿವೆ. ಗಡಿ ಜಿಲ್ಲೆಗಳ ಉಭಯತ್ರರಿಗೂ ಆಚೀಚೆಯವರು ಊರುದಕುಲೇ (ಊರಿನವರೇ). ಇಲ್ಲಿನ ಭಾಷೆ, ಆಚಾರ ವಿಚಾರ, ಮದುವೆ ಸಂಬಂಧ, ವ್ಯಾಪಾರ- ಬೇಸಾಯ ಎಲ್ಲದರಲ್ಲೂ ಕೊಡುಕೊಳ್ಳುವಿಕೆ ಗಟ್ಟಿಯಾಗಿದೆ. 1956ರಲ್ಲಿ ಭಾಷಾವಾರು ಪ್ರಾಂತ್ಯ ವಿಭಜನೆಯಾಗಿ ಕಾಸರಗೋಡು ಕೇರಳಕ್ಕೆ ಸೇರಿದರೂ ಕಾಸರಗೋಡಿನ ಕನ್ನಡಿಗರು ದಕ್ಷಿಣ ಕನ್ನಡದವರನ್ನು ತಮ್ಮವರು ಎಂದೇ ಭಾವಿಸಿದ್ದಾರೆ. ಅತ್ತ ದಕ್ಷಿಣ ಕನ್ನಡದ ಜನರಿಗೂ ಕಾಸರಗೋಡು ಎಂದರೆ ನಮ್ಮದೇ ಎಂಬ ಭಾವನೆ ಇದೆ. ಆದರೆ ಯಾವಾಗ ಕೊರೊನಾ ಮಹಾಮಾರಿ ವಕ್ಕರಿಸಿತೋ ಪರಿಸ್ಥಿತಿ ಬದಲಾಗಿದೆ. ಕಾಸರಗೋಡಿನಲ್ಲಿ ಕೊರೊನಾ ಸೋಂಕು ಹರಡಲು ಶುರುವಾಗಿದ್ದೇ ತಡ ಎಲ್ಲವೂ ಏರುಪೇರಾಯಿತು.

ದೇಶವ್ಯಾಪಿ ಲಾಕ್‌ಡೌನ್ ಮಾಡುವುದಾಗಿ ಪ್ರಧಾನಿ ಘೋಷಣೆ ಮಾಡುವ ಮುನ್ನವೇ ಕೇರಳ ಸರ್ಕಾರ ರಾಜ್ಯವ್ಯಾಪಿ ಲಾಕ್‌ಡೌನ್ ಘೋಷಿಸಿತ್ತು, ಕೇರಳದ ಗಡಿಗಳನ್ನು ಮುಚ್ಚಲು ಆದೇಶವಿದ್ದರೂ ಅಗತ್ಯ ವಸ್ತುಗಳ ಸಾಗಾಣಿಕೆಗೆ ವಿನಾಯಿತಿ ನೀಡಲಾಗಿತ್ತು.ಕೊರೊನಾ ವಿರುದ್ಧ ಕೇರಳ ಹೋರಾಟ ನಡೆಸುತ್ತಿದ್ದಂತೆಯೇ ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರನೆ ಏರಿಕೆ ಆಯಿತು. ಈ ಆತಂಕದ ಹೊತ್ತಲ್ಲಿ ಕಾಸರಗೋಡಿನ ಜನ ದಕ್ಷಿಣ ಕನ್ನಡ ಜಿಲ್ಲೆಗೆ ಬರಕೂಡದು ಎಂದು ಕರ್ನಾಟಕ ಸರ್ಕಾರ ಕಟ್ಟು ನಿಟ್ಟಿನ ತೀರ್ಮಾನ ಕೈಗೊಂಡಿತು. ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಸಂಪರ್ಕ ರಸ್ತೆಗಳಿಗೆ ಮಣ್ಣು ಸುರಿದು, ಗುಂಡಿ ತೋಡಿ, ಬ್ಯಾರಿಕೇಡ್‌ಗಳನ್ನಿಟ್ಟು ಮಂಗಳೂರು ಪೊಲೀಸರು ಕೇರಳದ ವಾಹನಗಳನ್ನು ತಡೆದರು.

ಈ ದಿಗ್ಬಂಧನ ಎಷ್ಟು ಕಠಿಣವಾಗಿದೆಯೆಂದರೆ, ಕಾಸರಗೋಡಿನಿಂದ ಮಂಗಳೂರಿಗೆ ರೋಗಿಗಳನ್ನು ಕರೆದುಕೊಂಡು ಬಂದ ಆ್ಯಂಬುಲೆನ್ಸ್‌ಗಳಿಗೂ ತಡೆಯೊಡ್ಡಲಾಯಿತು. ಪರಿಣಾಮ ಮಂಗಳೂರಿಗೆ ಹೆರಿಗೆಗೆ ಹೋಗಬೇಕಿದ್ದ ಮಹಿಳೆ ಆ್ಯಂಬುಲೆನ್ಸ್‌ನಲ್ಲಿಯೇ ಮಗುವಿಗೆ ಜನ್ಮವಿತ್ತರು. ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಕೇರಳದ ಆ್ಯಂಬಲೆನ್ಸ್‌ಗೆ ತಡೆಯೊಡ್ಡಿದ ಕಾರಣ ಕುಂಜತ್ತೂರಿನ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡರು. ತುರ್ತು ಸಂದರ್ಭದಲ್ಲಿಯೂ ರೋಗಿಗಳನ್ನು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ನ್ನು ಗಡಿ ದಾಟಲು ಬಿಡಲಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಈ ಗಡಿ ದಿಗ್ಬಂಧನದಿಂದ ಪ್ರಾಣ ಕಳೆದುಕೊಂಡ ಕಾಸರಗೋಡಿನ ರೋಗಿಗಳ ಸಂಖ್ಯೆ 6. ಸುಳ್ಯ, ಪುತ್ತೂರು, ವಿಟ್ಲ, ತಲಪಾಡಿ– ಹೀಗೆ ಕೇರಳದ ಎಲ್ಲ ಸಂಪರ್ಕ ರಸ್ತೆಗಳೂ ಬಂದ್ ಆಗಿವೆ. ಉಭಯ ರಾಜ್ಯಗಳ ನಡುವಣ ’ಕೊರೊನಾ ವಿವಾದ‘ ಕೇರಳ ಹೈಕೋರ್ಟ್ ಮೆಟ್ಟಿಲನ್ನೂ ಹತ್ತಿದೆ. ಹೈಕೋರ್ಟ್, ದಿಗ್ಬಂಧನ ತೆರವಿಗೆ ಆದೇಶ ನೀಡಿದ್ದರೂ ಕರ್ನಾಟಕ ಸರ್ಕಾರ ಜಪ್ಪೆನ್ನುತ್ತಿಲ್ಲ. ಈ ಮಧ್ಯೆ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

’ಇಲ್ಯಾಕೆ ಬರ್ತೀರಾ? ನಿಮಗೇನು ಕೇರಳದಲ್ಲಿ ಚಿಕಿತ್ಸೆ ಸಿಗುವುದಿಲ್ಲವಾ?‘ ಎಂಬುದು ಕರ್ನಾಟಕದ ಗಡಿಭಾಗದಲ್ಲಿ ಕೇಳಿ ಬಂದ ವಾದ. ಕಾಸರಗೋಡಿನ ವರ್ಕಾಡಿ ಪಂಚಾಯತಿನ ಗಡಿಭಾಗದಲ್ಲಿ ಕರ್ನಾಟಕದವರು ಮಣ್ಣು ಸುರಿದು ರಸ್ತೆ ಬಂದ್ ಮಾಡಿದ್ದಾರೆ. ಇಲ್ಲಿಯ ಜನರು ಪ್ರತಿದಿನ, ಪ್ರತಿಯೊಂದಕ್ಕೂ ಆಶ್ರಯಿಸುವುದು ಕರ್ನಾಟಕವನ್ನೇ. ಅಲ್ಲಿಂದ ನಾಲ್ಕೈದು ಕಿಮೀ ಸಮೀಪದಲ್ಲೇ ಕರ್ನಾಟಕದ ಮುಡಿಪು ಗ್ರಾಮ ಸಿಗುತ್ತದೆ. ವರ್ಕಾಡಿಯ ಜನ ಪೇಟೆಗೆ ಹೋಗುವುದಾದರೆ ಮುಡಿಪು ಇಲ್ಲವೇ ವಿಟ್ಲಕ್ಕೆ ಹೋಗಬೇಕು. ಅತ್ತ ಕಾಸರಗೋಡಿನ ಜನ ಕೇರಳದ ನಗರ ಪ್ರದೇಶವನ್ನು ಆಶ್ರಯಿಸಬೇಕೆಂದಾದರೆ ಹೊಸಂಗಡಿಗೆ ಬರಬೇಕು. ಅಂದರೆ ಸುಮಾರು 20 ಕಿಮೀ ಪ್ರಯಾಣಿಸಬೇಕು.

ಕೇರಳದ ಗಡಿಯ ಸಮೀಪದಲ್ಲೇ ಯೆನೆಪೋಯ ಆಸ್ಪತ್ರೆ, ಕೆ.ಎಸ್.ಹೆಗಡೆ ಆಸ್ಪತ್ರೆ, ಫಾದರ್ ಮುಲ್ಲರ್ಸ್, ಕಣಚೂರು ಹೀಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ತಲೆಯೆತ್ತಿವೆ. ಕಾಸರಗೋಡಿನ ಆಸ್ಪತ್ರೆಗಳು ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ರೆಫರ್ ಮಾಡುವುದು ಮಂಗಳೂರಿನ ಆಸ್ಪತ್ರೆಗಳನ್ನೇ. ಮಂಗಳೂರಿನ ಆಸ್ಪತ್ರೆಗಳಲ್ಲಿರುವ ಸಾವಿರಾರು ನರ್ಸ್‌ಗಳಲ್ಲಿ ಬಹುತೇಕರು ಮಲಯಾಳಿಗಳೇ. ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಕೋಟ್ಟಯಂ ಹೀಗೆ ವಿವಿಧ ಜಿಲ್ಲೆಗಳಿಂದ ಬಂದ ನರ್ಸ್, ವೈದ್ಯರು ಮಂಗಳೂರಿನ ಆಸ್ಪತ್ರೆಗಳಲ್ಲಿದ್ದಾರೆ. ಅತ್ಯುತ್ತಮ ವೈದ್ಯಕೀಯ ಸೇವೆ ಹತ್ತಿರದ ಊರಲ್ಲೇ ಸಿಗುವಾಗ ಅಲ್ಲಿನ ಜನರು ಮಂಗಳೂರನ್ನು ಆಶ್ರಯಿಸುವುದು ಸಹಜ. ಇದು ನಿನ್ನೆ ಮೊನ್ನೆಯ ಮಾತಲ್ಲ. ಕಾಲಾಕಾಲದಿಂದಲೂ ಮಂಗಳೂರು ಅಂದರೆ ನಮ್ಮ ಪಕ್ಕದ ಊರೇ ಹೊರತು ಅದಕ್ಕಿಂತಾಚೆಗೆ ಎಂದು ಕಾಸರಗೋಡಿನ ಜನರಾರೂ ಚಿಂತಿಸಿರಲಿಲ್ಲ.

ಕಾಸರಗೋಡು- ದಕ್ಷಿಣ ಕನ್ನಡ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರತಿದಿನ ಸರಿಸುಮಾರು 250ಕ್ಕಿಂತಲೂ ಹೆಚ್ಚು ಆ್ಯಂಬುಲೆನ್ಸ್ ಗಳು ಓಡಾಟ ನಡೆಸುತ್ತವೆ. ಮಂಜೇಶ್ವರ ತಾಲೂಕಿನಿಂದ ಡಯಾಲಿಸಿಸ್‌ಗಾಗಿ ಮಂಗಳೂರಿಗೆ ಹೋಗುವವರು ನೂರಾರು ಜನರಿದ್ದಾರೆ. ಕ್ಯಾನ್ಸರ್, ಹೃದ್ರೋಗ ಕಾಯಿಲೆಯಿರುವ ರೋಗಿಗಳೇನೂ ಕಡಿಮೆ ಇಲ್ಲ. ಡಯಾಲಿಸಿಸ್ ರೋಗಿಗಳು ತಿಂಗಳಲ್ಲಿ ಎರಡು ಮೂರು ಬಾರಿ ಡಯಾಲಿಸಿಸ್‌ಗಾಗಿ ಹೋಗಲೇ ಬೇಕಾಗುತ್ತದೆ. ಹೆರಿಗೆಗೂ ಮಂಗಳೂರನ್ನೇ ಆಶ್ರಯಿಸುವ ಸಾಕಷ್ಟು ಮಹಿಳೆಯರಿದ್ದಾರೆ.ಕಾಸರಗೋಡಿನ ಸರ್ಕಾರಿ ಆಸ್ಪತ್ರೆ ಈಗ ಕೋವಿಡ್ ಆಸ್ಪತ್ರೆಯಾಗಿದೆ. ಪಕ್ಕದ ಜಿಲ್ಲೆ ಕಣ್ಣೂರಿನಲ್ಲಿರುವ ಪರಿಯಾರಂ ಮೆಡಿಕಲ್ ಕಾಲೇಜು ಕೂಡಾ ಕೋವಿಡ್‌ಗೆ ಮೀಸಲು. ಹೀಗಿರುವಾಗ ರೋಗಿಗಳು ಎಲ್ಲಿ ಹೋಗಬೇಕು?

ಮಂಗಳೂರು ಮತ್ತು ಕಾಸರಗೋಡಿನ ಜನರು ಪರಸ್ಪರ ಚೆನ್ನಾಗಿಯೇ ಇದ್ದಾರೆ. ಕಾಸರಗೋಡಿನ ಕನ್ನಡ ಪರ ಹೋರಾಟಗಳಿಗೆ ಸದಾ ಸ್ಪಂದಿಸುತ್ತಿದ್ದವರು ಕೂಡಾ ದಕ್ಷಿಣ ಕನ್ನಡದವರೇ. ಕಾಸರಗೋಡಿನ ದೈವ ನಂಬಿಕೆಗಳು, ಆಚಾರ- ಸಂಪ್ರದಾಯಗಳೂ ಕೂಡಾ ದಕ್ಷಿಣ ಕನ್ನಡದ್ದೇ. ಭೌಗೋಳಿಕವಾಗಿ ಗಡಿರೇಖೆ ಇದ್ದರೂ ಕಾಸರಗೋಡಿನ ಕನ್ನಡಿಗರಲ್ಲಿ ಕನ್ನಡ ನೆಲದ ಅಸ್ಮಿತೆ ಇದೆ. ತುಳುನಾಡಿನ ಸೊಬಗು ಇದೆ. ಹಲವಾರು ಭಾಷೆಗಳ ಸಂಗಮ ಭೂಮಿಯಾಗಿರುವ ಕಾಸರಗೋಡಿನಲ್ಲಿರುವ ನೂರಾರು ಜಾತಿ, ಸಮುದಾಯಗಳ ಮೂಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಈಗ ಕಾಸರಗೋಡಿನವರು ಒಮ್ಮಿಂದೊಮ್ಮಲೇ ’ವಿದೇಶೀ‘ಯರಾದದ್ದು ಹೇಗೆ? ಕಾಸರಗೋಡಿನ ಜನರೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನಡೆದುಕೊಳ್ಳುತ್ತಿರುವ ರೀತಿ ಉಭಯ ರಾಜ್ಯಗಳ ಸಂಬಂಧದಲ್ಲಿ ದೂರಗಾಮೀ ಗಂಭೀರ ಪರಿಣಾಮ ಬೀರಲಿದೆ.

’ಸದ್ಯ ಕಾಸರಗೋಡಿನ ಕನ್ನಡಿಗರಿಗೆ ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಎಂಬ ಅತಂತ್ರ ಸ್ಥಿತಿ. ಈಗಾಗಲೇ ಕಾಸರಗೋಡಿನಲ್ಲಿ ಕನ್ನಡ ಭಾಷೆ ಕ್ಷೀಣಿಸುತ್ತಾ ಬರುತ್ತಿದೆ. ಈಗ ಕೊರೋನಾ ಗಡಿಕಲಹ ಕಾಸರಗೋಡಿನ ಕನ್ನಡಿಗರ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಈ ದುರಿತ ಕಾಲದಲ್ಲಿ ನಮ್ಮ ಮನವಿ ಇಷ್ಟೇ– ಮಾನವೀಯತೆಯ ದೃಷ್ಟಿಯಿಂದ ಆ್ಯಂಬುಲೆನ್ಸ್ ಹೋಗಲು ಅನುಮತಿ ನೀಡಿ. ಅಲ್ಲಿಗೆ ಹೋಗುವ ಆ್ಯಂಬುಲೆನ್ಸ್‌ನಲ್ಲಿ ಕೋವಿಡ್ ರೋಗಿಗಳಿದ್ದಾರಾ ಎಂದು ಬೇಕಿದ್ದರೆ ಪರೀಕ್ಷಿಸಿದ ನಂತರ ಮುಂದೆ ಹೋಗಲು ಬಿಡಿ, ಆದರೆ ಎಮರ್ಜನ್ಸಿ ರೋಗಿಗಳನ್ನು ಹೊತ್ತ ಆಂಬುಲೆನ್ಸ್‌ಗಳನ್ನು ತಡೆಯಬೇಡಿ’ ಎನ್ನುತ್ತಾರೆ ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷದ್ ವರ್ಕಾಡಿ.

ಹಾಗೆ ನೋಡಿದರೆ ಕರ್ನಾಟಕದ ಎಲ್ಲ ಗಡಿಗಳೂ ಗಡಿಯಾಚೆಗೆ ನಿಷ್ಠ ಕನ್ನಡಿಗರನ್ನೇ ಹೊಂದಿವೆ. ಮಹಾರಾಷ್ಟ್ರದ ಸೋಲಾಪುರಕ್ಕೆ ಹೋದರೆ ವಿಜಯಪುರದ ಕನ್ನಡದ ಕಂಪು; ಊಟಿಗೆ ಹೋದರೆ ಮಂಡ್ಯಗನ್ನಡದ ಇಂಪು; ಸುಲ್ತಾನ್ ಬತೇರಿಗೆ ಹೋದರೆ ಊಟ ಹಾಕುವ ಕೈಗಳೆಲ್ಲ ಚಾಮರಾಜನಗರ ಜಿಲ್ಲೆಯದ್ದು. ಬೀದರ್, ಬೆಳಗಾವಿ, ಕೋಲಾರದ ಗಡಿಗಳಲ್ಲೂ ಕನ್ನಡದ್ದೇ ಗುಂಗು. ಕೊಡಗು ಜಿಲ್ಲೆಯ ಕುಟ್ಟ ಗ್ರಾಮವು ಕೇರಳದ್ದೇ ಎಂಬಂತಿದೆ. ಕುಟ್ಟ ಕರ್ನಾಟಕದಲ್ಲಿದ್ದರೂ ಅಲ್ಲಿನ ಜನರ ಎಲ್ಲ ಬೇಕು ಬೇಡಗಳಿಗೆ ವಯನಾಡ್ ಜಿಲ್ಲೆಯೇ ಬೇಕು! ಈ ಎಲ್ಲ ಗಡಿಗಳ ಊರುಗಳಂತೆಯೇ ಮಂಗಳೂರು ಮತ್ತು ಕಾಸರಗೋಡಿನ ನಂಟು ಅತಿ ಸಹಜ. ರಾಜಕೀಯದ ಕರಿನೆರಳು ಕೊರೊನಾದ ಹೆಸರಲ್ಲಿ ಈ ಕನ್ನಡ ಸಂಬಂಧದ ಕಳ್ಳುಬಳ್ಳಿಗೆ ನಿಧಾನವಿಷ ಉಣಿಸುತ್ತಿದೆ. ಕಾಸರಗೋಡಿನಲ್ಲಿ ಕನ್ನಡ ಐಸಿಯು ಸೇರುವ ಮುನ್ನ ಕರ್ನಾಟಕದ ಆ್ಯಂಬುಲೆನ್ಸ್‌ಗಳು ಓಡಾಟ ಆರಂಭಿಸಲಿ.

ಮನಸ್ಸಿಗೂ ರೋಗ ಬಾಧೆಯೆ?

ಕಾಸರಗೋಡು ಮತ್ತು ಮಂಗಳೂರಿನ ನಡುವಣ ಕಳ್ಳುಬಳ್ಳಿಯ ಸಂಬಂಧವನ್ನು ಬಣ್ಣಿಸುವುದು ಸುಲಭವಲ್ಲ. ಮಂಗಳೂರಿನ ಆಸ್ಪತ್ರೆಗಳಲ್ಲಿ ಶೇ. 80ರಷ್ಟು ಮಲಯಾಳಿಗಳಿದ್ದಾರೆ. ದಿನನಿತ್ಯ ಕಾಸರಗೋಡು– ಮಂಗಳೂರು ನಡುವೆ 60 ಬಸ್‌ಗಳು ಓಡಾಟ ನಡೆಸುತ್ತಿವೆ. 10 ರೈಲುಗಳು ಓಡಾಡುತ್ತಿವೆ, ಸುಮಾರು 10,000 ಜನರು ಪ್ರತಿದಿನ ಅತ್ತಿಂದಿತ್ತ ಪ್ರಯಾಣಿಸುತ್ತಿದ್ದಾರೆ. ವಿದ್ಯಾರ್ಥಿಗಳ ಓಡಾಟಕ್ಕಂತೂ ಲೆಕ್ಕವಿಲ್ಲ.

’ಕೋವಿಡ್ ರೋಗ ಬಂದಿರುವುದು ಕಾಸರಗೋಡಿನಲ್ಲಿ ಮಾತ್ರವೇ ಅಲ್ಲ. ಕೇರಳದವರನ್ನು ಅನ್ಯ ರಾಷ್ಟ್ರದವರೋ ಎಂಬಂತೆ ನಡೆಸಿಕೊಂಡು ಕರ್ನಾಟಕಕ್ಕೆ ಕಾಲಿಡದಂತೆ ಮಾಡುವುದು ಪಕ್ಕಾ ರಾಜಕೀಯ. ನಮಗೆ ಬೇರೇನೂ ಬೇಡ ರೋಗಿಗಳಿಗೆ ಹೋಗಲು ಅನುಮತಿ ಕೊಡಿ ಎಂದಷ್ಟೇ ನಾವು ಕೇಳಿರುವುದು. ಆದರೆ ಕರ್ನಾಟಕ ಪಟ್ಟು ಬಿಡುತ್ತಿಲ್ಲ. ಕೇರಳದಲ್ಲಿ ಹೊರ ರಾಜ್ಯದಿಂದ ಬಂದ ವಲಸೆ ಕಾರ್ಮಿಕರನ್ನು ಅತಿಥಿ ಎಂದು ಕರೆಯುತ್ತಾರೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಕರ್ನಾಟಕದ ಹಾವೇರಿ, ಹುಬ್ಬಳ್ಳಿ, ಶಿವಮೊಗ್ಗ ಮೊದಲಾದ ಜಿಲ್ಲೆಗಳಿಂದ ಬಂದ ನೂರಾರು ಜನ ಕಾಸರಗೋಡಿನಲ್ಲಿದ್ದಾರೆ. ಅವರಿಗೆ ಬೇಕಾದ ವ್ಯವಸ್ಥೆಗಳನ್ನು ನಾವು ಮಾಡಿಕೊಡುತ್ತಿದ್ದೇವೆ. ನಮ್ಮ ಕುಚ್ಚಲಕ್ಕಿ ಅನ್ನ ಅವರಿಗೆ ಆಗಲ್ಲ ಅಂತ ಅವರಿಗೆ ಅನ್ನ, ರೊಟ್ಟಿ ನೀಡುವ ವ್ಯವಸ್ಥೆಯನ್ನೂ ಮಾಡಿದ್ದೇವೆ. ನಾವು ಕನ್ನಡಿಗರ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವಾಗ ಕರ್ನಾಟಕದ ಸರ್ಕಾರ ನಮ್ಮ ಜತೆ ಈ ರೀತಿ ನಡೆದುಕೊಳ್ಳುತ್ತಿರುವುದು ಖೇದದ ಸಂಗತಿ‘ ಎನ್ನುತ್ತಾರೆ ಮಂಜೇಶ್ವರದ ಬ್ಲಾಕ್ ಪಂಚಾಯ್ತಿ ಸದಸ್ಯ ಜಯಾನಂದ ಕೆ.ಆರ್.

ಕೊರೊನಾ ದೇಹಕ್ಕೆ ಬಾಧಿಸುವ ರೋಗ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಮನಸ್ಸಿಗೂ ಬಾಧಿಸುವ ರೋಗವಾದರೆ ಕನ್ನಡದ ಗತಿಯೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.