ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್ ಉದ್ಯಾನದಲ್ಲಿ ಕಾವ್ಯದಾನ

Published 10 ಡಿಸೆಂಬರ್ 2023, 0:49 IST
Last Updated 10 ಡಿಸೆಂಬರ್ 2023, 0:49 IST
ಅಕ್ಷರ ಗಾತ್ರ

ಹುಡುಕಾಟ ತುಂಬಿದ ನಗು

ಮತ್ತು ಗುಳಿಗಳ ಆಳದಲ್ಲಿ ನೆಲೆಕಂಡ ಪ್ರಶ್ನೆಗಳು...

..ಪಯಣಿಸುತ್ತೇನೆ

ನಿನ್ನ ಕಣ್ಗಳಲ್ಲಿರುವ ಕನಸನ್ನು ನನಸಾಗಿಸಲು

ನನ್ನ ಕಣ್ಗಳಲ್ಲಿರುವ ಬಯಕೆಯನ್ನು ಗೆಲ್ಲಲು...

ಈ ಅರ್ಥ ಬರುವ ಇಂಗ್ಲಿಷ್‌ ಪದ್ಯವನ್ನು ನನ್ನ ಕೈಗಿತ್ತ ರೂಬಿ, ‘ಪದ್ಯ ಹೇಗಿದೆ?’ ಎಂದು ಕೇಳಿದರು. ಕಾವ್ಯದ ವಸ್ತುವಾಗುವುದೇ ಪುಳಕ ಅಲ್ಲವೇ? ನಾನೂ ಪುಳಕಿತಳಾಗಿದ್ದೆ. ಕಾವ್ಯಕ್ಕೆ ವಸ್ತುವಾದೆನೆಂಬ ಖುಷಿಯು ತೇಲಿಸಿತ್ತು. ಇದು ಅಲ್ಲಿಗೆ ಬಂದ ಎಲ್ಲರಿಗೂ ಆಗಿತ್ತು. ‘ಚೆನ್ನಾಗಿದೆ’ ಎಂದೆ.

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಅವರ ಪೂರ್ಣ ಹೆಸರು ರೂಬಿ ನಾಜ್‌. ‘ನನಗೆ ಬರೆಯುವುದೇ ಕೆಲಸ’ ಎನ್ನುತ್ತಾರೆ ಅವರು. ಪ್ರತಿ ಶನಿವಾರವೂ ಬೆಂಗಳೂರಿನ ಕಬ್ಬನ್‌ ಉದ್ಯಾನವು ಕಾವ್ಯಮಯವಾಗುತ್ತದೆ. ದೂರದ ಊರಿಂದ, ಪಕ್ಕದ ರಾಜ್ಯಗಳಿಂದಲೂ ರೂಬಿ ಅವರಲ್ಲಿ ಕವಿತೆ ಬರೆಸಿಕೊಂಡು ಹೋಗಲು ಜನರು ಬರುತ್ತಾರೆ. ರೂಬಿ ಇಂಗ್ಲಿಷ್‌ನಲ್ಲಿ ಕವಿತೆ ಬರೆಯುತ್ತಾರೆ. ಅವರಿಗೆ ಕನ್ನಡ ಮಾತನಾಡಲು ಬರುತ್ತದಷ್ಟೆ.

ರೂಬಿ ಬಳಿ ಕೂತು ಯಾರೇ ಆಗಲಿ, ಕಥೆ ಹೇಳಬಹುದು. ಮೌನವಾಗಿಯೂ ಕುಳಿತುಕೊಳ್ಳಬಹುದು. ಆಗ ಅವರೇ ಮಾತನಾಡಿಸುತ್ತಾರೆ. ಅದಕ್ಕೆ ಉತ್ತರ ಕೊಟ್ಟರೂ ಸಾಕು. ಐದು ನಿಮಿಷದ ಮಾತುಕತೆ ಅಥವಾ ಮೌನ ಸಂವಾದವೇ ಕವಿತೆಯಾಗುತ್ತದೆ. ಹತ್ತೇ ನಿಮಿಷದಲ್ಲಿ ಕವಿತೆ ತಯಾರಾಗಿ, ಕೈ ಸೇರುತ್ತದೆ. ಈ ಇಡೀ ಪ್ರಕ್ರಿಯೆಯಲ್ಲಿ ಗಮನಸೆಳೆಯುವುದು ಟೈಪ್‌ರೈಟರ್‌ನ ಸದ್ದು. ಎ4 ಹಾಳೆಯನ್ನು ಮೇಲಿಂದ ಕೆಳಗೆ ಸಮನಾಗಿ ಹರಿದು ಎರಡು ಭಾಗ ಮಾಡಿದ ಹಾಳೆಯಲ್ಲಿ ರೂಬಿ ಟೈಪ್‌ರೈಟರ್‌ನಲ್ಲಿ ಕವನ ಬರೆದುಕೊಡುತ್ತಾರೆ.

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಕವಿತೆ ಬರೆದುಕೊಟ್ಟ ಮೇಲೆ ಅದನ್ನು ಅವರ ಮುಂದೆ ಓದಬೇಕು ಎನ್ನುವುದು ರೂಬಿ ವಿಧಿಸುವ ಷರತ್ತು. ಕವಿತೆ ಓದುವುದೇ ಅವರ ‘ಪೇಮೇಂಟ್‌’. ಕವಿತೆ ಓದಿ ನಿಮಗೆ ತುಂಬಾ ಸಂತೋಷವಾಯಿತು ಎಂದಿಟ್ಟುಕೊಳ್ಳಿ, ನೀವು ಅವರನ್ನು ಹೋಗಿ ಅಪ್ಪಬಹುದು. ಅವರಿಗಾಗಿ ಚಾಕೊಲೇಟ್‌ ತಂದುಕೊಡಬಹುದು, ನಿಮಗೆ ಇಷ್ಟವೆನಿಸಿದ ಏನನ್ನೂ ಉಡುಗೊರೆಯಾಗಿ ನೀಡಬಹುದು. ಆದರೆ, ಹಣವನ್ನು ಮಾತ್ರ ಅವರು ಪಡೆದುಕೊಳ್ಳುವುದಿಲ್ಲ.

‘ಒಂದು ದಿನ ನಾನು ಮತ್ತು ನನ್ನ ಸ್ನೇಹಿತ ಉದ್ಯಾನದಲ್ಲಿ ಕುಳಿತಿದ್ದೆವು. ಮೇಲೆ ನೀಲಿ ಆಕಾಶ. ಸುತ್ತ ಹಸಿರು. ಇದ್ದಕ್ಕಿದ್ದ ಹಾಗೆ ಕವಿತೆ ಬರೆಯಬೇಕೆಸಿತು. ಬರೆದೆ ಅಷ್ಟೆ. ಸ್ನೇಹಿತರಿಗಾಗಿ ಕವಿತೆ ಬರೆದೆ. ಹೀಗೆ ಪ್ರತಿ ವಾರವೂ ಬರುವುದು, ಕವಿತೆ ಬರೆಯುವುದು ರೂಢಿಯಾಯಿತು. ನನ್ನ ಇನ್‌ಸ್ಟಾಗ್ರಾಂನಲ್ಲಿಯೂ ಈ ಬಗ್ಗೆ ಬರೆದುಕೊಂಡೆ. ಈಗ ಬೇರೆ ರಾಜ್ಯಗಳಿಂದಲೂ ಜನರು ನನ್ನ ಕವಿತೆ ಹುಡುಕಿಕೊಂಡು ಬರುತ್ತಾರೆ’ ಎಂದರು ರೂಬಿ.

ಈ ಕವಿತಾ ಪ್ರಕ್ರಿಯೆಯಿಂದಲೇ ಇಡೀ ವಾತಾವರಣದಲ್ಲಿ ಆತ್ಮೀಯತೆ ಮಡುಗಟ್ಟಿ ಬಿಡುತ್ತದೆ. ಪ್ರೀತಿ, ಗೆಳೆತನ ಕೊನೆಗೊಂಡಿದ್ದಕ್ಕೋ, ಪ್ರಿಯತಮೆಗೆ, ಪ್ರಿಯಕರನಿಗೆ ಕವಿತೆಯೊಂದನ್ನು ಉಡುಗೊರೆಯಾಗಿ ಕೊಡುವುದಕ್ಕೋ, ಹೆಂಡತಿಗೆ ಸರ್ಪ್ರೈಸ್‌ ಕೊಡುವುದಕ್ಕೋ ಜನರು ರೂಬಿ ಅವರಿಂದ ಕವಿತೆ ಬರೆಸಿಕೊಂಡು ಹೋಗಲು ಬರುತ್ತಾರೆ.

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ

ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಹೆಂಡತಿಗೆ ಸಪ್ರೈಸ್‌ ಕೊಡಬೇಕು ಎಂದು ಗಂಡ ಹಲವು ದಿನಗಳ ಹಿಂದೆಯೇ ಇನ್‌ಸ್ಟಾಗ್ರಾಂನಲ್ಲಿ ರೂಬಿ ಅವರಲ್ಲಿ ಹೇಳಿಕೊಂಡಿದ್ದರು. ಒಂದು ಶನಿವಾರ ಸಂಜೆ ಆ ದಂಪತಿ ರೂಬಿ ಮುಂದೆ ಕುಳಿತು ತಮ್ಮ ಸಮಸ್ಯೆ ಹೇಳಿಕೊಂಡರು. ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಹೆಂಡತಿ ಮಗು ಆದಮೇಲೆ ನಟಿಸುವುದನ್ನು ಬಿಟ್ಟಿದ್ದರು. ‘ಅವರು ತಮ್ಮ ನೆಚ್ಚಿನ ಕೆಲಸ ಬಿಟ್ಟು ಮನೆಯಲ್ಲಿದ್ದಾರೆ. ಹೀಗಾಗಿ ಹೆಚ್ಚು ಒತ್ತಡ ಇರುತ್ತದೆ. ನೀವು ಅವರಿಗೆ ನಟನೆ ಮಾಡಲು ಬಿಡಿ’–ಗಂಡನಿಗೆ ರೂಬಿ ಹೇಳಿದ ಮಾತಿದು.

ಬೆಂಗಳೂರಿನ ರೂಬಿ ತಮ್ಮ ಬಗ್ಗೆ ಏನನ್ನೂ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಚಕ್ಕನೆ ಹೀಗೆ ಹುಟ್ಟುವ ಕವಿತೆಗೆ ‘ಸಾಹಿತ್ಯಕ ಮೌಲ್ಯ’ ಇದೆಯೇ ಎನ್ನುವ ಪ್ರಶ್ನೆ ಮೂಡಬಹದು. ಹಾಗೆಯೇ, ಕಾವ್ಯದಿಂದ ಸಿಗುವ ಸಾಂತ್ವನಕ್ಕೆ ಇರುವ ಮೌಲ್ಯ ಯಾವುದಕ್ಕಿಂತ ಕಡಿಮೆ ಎನ್ನುವ ಪ್ರಶ್ನೆಯೂ ಹುಟ್ಟಿ, ಹೆಜ್ಜೆಗಳೂ ಮಾತನಾಡತೊಡಗುತ್ತವೆ.

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ

ಜನರೊಂದಿಗೆ ಮಾತುಕತೆಯಲ್ಲಿ ತೊಡಗಿರುವ ರೂಬಿ

ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಜೂನ್‌ನಿಂದ ಇಲ್ಲಿಯವರೆಗೆ ಸುಮಾರು 108 ಕವಿತೆಗಳನ್ನು ಬರೆದಿದ್ದೇನೆ. ಯಾರಾದರೂ ಈ ಕವಿತೆಗಳನ್ನು ಅಚ್ಚು ಮಾಡುತ್ತಾರೆಂದರೆ ನಾನು ಕವಿತೆಗಳನ್ನು ಕೊಡುತ್ತೇನೆ. ಪುಸ್ತಕದಿಂದ ಬಂದ ಬಹುಪಾಲು ದುಡ್ಡನ್ನು ನಾನು ದಾನ ಮಾಡುತ್ತೇನೆ.
ರೂಬಿ ಕವಯತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT