ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಸ್ಟ್‌ ಕಾರ್ಡಲ್ಲ... ಕ್ಯಾನ್ವಾಸ್‌

Published 9 ಸೆಪ್ಟೆಂಬರ್ 2023, 23:35 IST
Last Updated 11 ಸೆಪ್ಟೆಂಬರ್ 2023, 5:39 IST
ಅಕ್ಷರ ಗಾತ್ರ

‘ಆಗಿನ್ನೂ ಟೆಲಿಫೋನ್‌ ಅಷ್ಟಾಗಿ ಚಾಲ್ತಿಯಲ್ಲಿ ಇಲ್ಲದ ಕಾಲ. ನಾನು ಹಿಮಾಲಯಕ್ಕೆ ಟ್ರೆಕ್ಕಿಂಗ್‌ ಹೊರಟಿದ್ದೆ. ಆ ಸಂದರ್ಭದಲ್ಲಿ ತಂದೆ 15 ಪೋಸ್ಟ್‌ ಕಾರ್ಡ್‌ಗಳನ್ನು ತಂದು ನನ್ನ ಕೈಯಲ್ಲಿಟ್ಟಿದ್ದರು. ಎಲ್ಲಾ ಕಾರ್ಡ್‌ಗಳಲ್ಲಿ ವಿಳಾಸ ಆಗಲೇ ಬರೆದಿದ್ದರು. ‘ಖಾಲಿಯಾದರೂ ಸರಿ, ಹೋಗುವ ದಾರಿಯಲ್ಲಿ ಸಿಗುವ ಪೋಸ್ಟ್ ಬಾಕ್ಸ್‌ಗೆ ಒಂದೊಂದು ಪತ್ರವನ್ನು ಹಾಕುತ್ತಾ ಹೋಗು’ ಎನ್ನುವ ಆಜ್ಞೆ. ಹೀಗೆ ಅಪ್ಪನ ಆಜ್ಞೆಯನ್ನು ಪಾಲಿಸುತ್ತಾ, ಖಾಲಿ ಕಾರ್ಡ್‌ ಹಾಕದೆ ಅದರಲ್ಲಿ ತಲುಪಿದ ಸ್ಥಳ, ದಿನ, ಪಯಣದ ವಿವರವನ್ನು ಬರೆದು ಅಂಚೆ ಡಬ್ಬಿಗೆ ಹಾಕುತ್ತಿದ್ದೆ...’ ಹೀಗೆ ಪೋಸ್ಟ್‌ ಕಾರ್ಡ್‌ಗಳ ನೆನಪಿನ ಸಾಗರದಲ್ಲಿ ಕುತೂಹಲಕಾರಿ ಘಟನೆಯೊಂದನ್ನು ತೇಲಿಬಿಟ್ಟವರು ಕಲಾ ವಿಮರ್ಶಕ ಗಿರಿಧರ್‌ ಖಾಸನೀಸ್‌.

ಅಂದಿನ ಕಾಲದ ‘ಇನ್‌ಸ್ಟಾಗ್ರಾಂ’ ಆಗಿದ್ದ ಬಣ್ಣಬಣ್ಣದ ಛಾಯಾಚಿತ್ರಗಳಿದ್ದ ಪೋಸ್ಟ್‌ ಕಾರ್ಡ್‌ಗಳು ಇತ್ತೀಚೆಗೆ ಕಾಣಸಿಗುವುದೂ ಅಪರೂಪ. ದೊಡ್ಡ ದೊಡ್ಡ ಕ್ಯಾನ್ವಾಸ್‌ಗಳಲ್ಲಿ ಕಲಾವಿದರು ಮೂಡಿಸಿದ ಬಣ್ಣಗಳನ್ನು ಅಗಲಗಣ್ಣುಗಳಿಂದ ನೋಡಿದ ನಾವೀಗ ದೃಷ್ಟಿಯನ್ನು ಕೊಂಚ ಸೂಕ್ಷ್ಮಗೊಳಿಸಿ ನೋಡುವ ಕ್ಷಣ. ಪೋಸ್ಟ್‌ ಕಾರ್ಡ್‌ಗಳೇ ಕ್ಯಾನ್ವಾಸ್‌ಗಳಾಗಿ ಕಥೆ ಹೇಳುವ ಸಮಯ...

ಆರಂಭದಲ್ಲಿ ಮುದ್ರಿತ ಕೇವಲ ಸ್ಟ್ಯಾಂಪ್‌ ಇದ್ದ ಪೋಸ್ಟ್‌ ಕಾರ್ಡ್‌ಗಳು ಬಂದವು. ಕ್ರಮೇಣ ಅವುಗಳ ಒಂದು ಬದಿಯಲ್ಲಿ ವರ್ಣಚಿತ್ರಗಳ ಯುಗ ಆರಂಭವಾಯಿತು. ಸಂದರ್ಭಕ್ಕೆ ಅನುಗುಣವಾಗಿ ಬಗೆಬಗೆಯ ಪೋಸ್ಟ್‌ ಕಾರ್ಡ್‌ಗಳು ಬಂದವು. ದೀಪಾವಳಿ, ಜನ್ಮದಿನಕ್ಕೆ ಹಾರೈಸುವ ಛಾಯಾಚಿತ್ರಗಳುಳ್ಳ ಕಾರ್ಡ್‌ಗಳು ಹೆಚ್ಚು ಜನರನ್ನು ಆಕರ್ಷಿಸಿದವು. ಅಷ್ಟೇ ಅಲ್ಲ ಕೆಲ ಹವ್ಯಾಸಿ, ವೃತ್ತಿಪರ ಚಿತ್ರಕಲಾವಿದರು ಇಂತಹ ಕಾರ್ಡ್‌ಗಳಲ್ಲಿ ಸ್ವತಃ ಚಿತ್ರಗಳನ್ನು, ರೇಖಾಚಿತ್ರಗಳನ್ನು ಬಿಡಿಸಿ ತಮ್ಮ ಬಳಗಕ್ಕೆ ಕಳುಹಿಸುತ್ತಿದ್ದರು. ‘ತನ್ನ ಸರಳ ರೂಪದಲ್ಲಿ ಕಲಾವಿದರಿಗೆ ಕಲಾಕೃತಿಗಳನ್ನು ರಚಿಸಲು ಪೋಸ್ಟ್‌ಕಾರ್ಡ್‌ ಒಂದು ಅಗ್ಗ ಹಾಗೂ ಆಕರ್ಷಕ ಮಾಧ್ಯಮವಾಯಿತು. ಆಧುನಿಕ ಭಾರತೀಯ ಕಲೆಯ ಪ್ರವರ್ತಕರಲ್ಲಿ ಒಬ್ಬರಾದ ನಂದಲಾಲ್ ಬೋಸ್ (1882-1966) ಈ ಸಂಪ್ರದಾಯವನ್ನು ಪ್ರಾರಂಭಿಸಿದರು ಎನ್ನಲಾಗುತ್ತದೆ. ಪೋಸ್ಟ್‌ಕಾರ್ಡ್‌ಗಳಲ್ಲಿ ಕಲೆಯನ್ನು ರಚಿಸಿದ್ದು ಮಾತ್ರವಲ್ಲದೆ ನಂದಲಾಲರು ಸಹ ಕಲಾವಿದರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅದೇ ರೀತಿ ಮಾಡಲು ಪ್ರೇರೇಪಿಸಿದರು ಕೂಡ’ ಎನ್ನುತ್ತಾರೆ ಗಿರಿಧರ್‌. 

ಇಂತಹ ಪರಿಕಲ್ಪನೆಯನ್ನು ಜೀವಂತವಾಗಿರಿಸುವ ಪ್ರಯತ್ನ ಈ ಪ್ರದರ್ಶನದ್ದು. ಇಲ್ಲಿರುವ ಕಲಾವಿದರು ವಿದೇಶಿಗರಲ್ಲ. ನಮ್ಮದೇ ರಾಜ್ಯದ ಹಲವು ಹಳ್ಳಿಗಳಿಂದ ಬಂದವರು. ಧಾರವಾಡ, ಗದಗ, ಚಿತ್ರದುರ್ಗ, ಬಿಜಾಪುರ, ಕೊಪ್ಪಳ, ಉಡುಪಿಯವರು. ತಮ್ಮೊಳಗಿನ ಕಲ್ಪನೆಯನ್ನು ಈ ಪುಟ್ಟ ಆಯತಾಕಾರದೊಳಗೆ ಬಿಚ್ಚಿಟ್ಟು, ಜಗತ್ತಿನೆದುರಿಗಿರಿಸಿದವರು. ಇವರಲ್ಲಿ ವೇಣುಗೋಪಾಲ ಎಚ್‌.ಎಸ್‌., ವಾಮನ ಪೈ ಅವರಂತಹ ಹಿರಿಯ ಕಲಾವಿದರೂ ಇದ್ದಾರೆ; 20–25 ವರ್ಷ ವಯಸ್ಸಿನ ಬೆರಗುಗಣ್ಣಿನ ಕಲಾವಿದರೂ ಇದ್ದಾರೆ. ಅವರು ದೊಡ್ಡ ದೊಡ್ಡ ನಗರವನ್ನು, ಪ್ರಸ್ತುತ ಸನ್ನಿವೇಶ/ಸಂದರ್ಭಗಳನ್ನು ನೋಡುವ ಬಗೆ ಇಲ್ಲಿ ಮಿನಿಯೇಚರ್‌ ರೂಪ ಪಡೆದಿವೆ.

ಮನೆಯಲ್ಲಿ ಪ್ರದರ್ಶನ!

ಈ ಪೋಸ್ಟ್‌ ಕಾರ್ಡ್‌ ಪೇಂಟಿಂಗ್‌ ಪ್ರದರ್ಶನ ಸಂಜಯನಗರದ ರಂಗಾಭರಣ ಕಲಾಕೇಂದ್ರದ ಸಮೀಪ ಇರುವ ಮೀತಾ ಜೈನ್ ಅವರ ಮನೆಯಲ್ಲಿ ನಡೆಯಲಿದೆ. ಪ್ರದರ್ಶನದಲ್ಲಿ 11 ಕಲಾವಿದರು ರಚಿಸಿದ ಸುಮಾರು 120 ಪೋಸ್ಟ್‌ ಕಾರ್ಡ್‌ ಪೇಂಟಿಂಗ್‌ಗಳ ಪ್ರದರ್ಶನವಿರಲಿದೆ. ಶನಿವಾರ(ಸೆ.9) ಈ ಪ್ರದರ್ಶನ ಆರಂಭವಾಗಿದ್ದು ಭಾನುವಾರ(ಸೆ.10)ಸಂಜೆ 6ರವರೆಗೂ ತೆರೆದಿರಲಿದೆ. ಸೆ.10ರ ಸಂಜೆ 4 ಗಂಟೆಗೆ ಕಲಾವಿದರನ್ನು ಭೇಟಿಯಾಗುವ ಅವಕಾಶವೂ ಸಿಗಲಿದೆ. ಸಂಪರ್ಕ: ಗಿರಿಧರ್ ಖಾಸನೀಸ್‌– 94482 57518 ವಿಳಾಸ: ನಂ.6 2ನೇ ಅಡ್ಡ ರಸ್ತೆ ಎಂ.ಆರ್. ಗಾರ್ಡನ್ ಕೆಇಬಿ ಲೇಔಟ್ 1ನೇ ಹಂತ (ರಂಗಾಭರಣ ಕಲಾಕೇಂದ್ರದ ಸಮೀಪ) ಸಂಜಯನಗರ ಬೆಂಗಳೂರು.

ಕಲೆ: ರುದ್ರಗೌಡ ಎಲ್ ಇಂಡಿ
ಕಲೆ: ರುದ್ರಗೌಡ ಎಲ್ ಇಂಡಿ
ಕಲೆ: ಪ್ರದೀಪ್ ಕುಮಾರ್ ಡಿಎಂ
ಕಲೆ: ಪ್ರದೀಪ್ ಕುಮಾರ್ ಡಿಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT