ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರನ್ನು ಅಧಿಕಾರ ಕೇಂದ್ರಕ್ಕೆ ತರಲು ಹಿಂಜರಿಯುವ ‘ಪುರುಷ ಮೇಲಾಧಿಪತ್ಯದ ರಾಜಕಾರಣ’ಕ್ಕೆ ಅವರ ಮತಗಳು ಮಾತ್ರ ಬೇಕೆನಿಸುತ್ತಿದೆ. ವಿಧಾನಸೌಧದ ಮೊಗಸಾಲೆಯಲ್ಲಿ ಅವರ ದಿಟ್ಟ ಹೆಜ್ಜೆಗಳ ರಿಂಗಣ ಯಾವಾಗ? ಸ್ತ್ರೀಮತಕ್ಕೆ ಉತ್ತರಿಸೀತೇ ಹಾಲಿ ಮನಸ್ಥಿತಿ?
ನಾಡ ತುಂಬ ನಡೆಯುವ ಜಾತ್ರೆಗೆ ಹರಕೆ ಹೊರುವವರು, ಅಣಿನೆರೆಯುವವರು, ತೇರನೆಳೆಯುವವರು, ಸಡಗರ ತುಂಬುವವರು, ಅಡುಗೆ–ಊಟೋಪಚಾರ ನೋಡಿಕೊಳ್ಳುವವರ ಪೈಕಿ ಮಹಿಳೆಯರೇ ಹೆಚ್ಚಿರುತ್ತಾರೆ. ರಥದೊಳಗೆ ಪೀಠವೇರಿದ ದೇವರು ಹೆಣ್ಣಾದರೂ ಜಾತ್ರೆಯ ಮೇಲುಸ್ತುವಾರಿ ನೋಡಿಕೊಳ್ಳುವವರು, ಕಾಣಿಕೆಯ ಕಾಸು ಎಣಿಸುವವರು, ತೇರನೇರಿ ದೇವರ ಪಕ್ಕ ಕೂರುವವರು, ಸ್ವಾಗತ ಕೋರುವ ಭಿತ್ತಿಪತ್ರಗಳಲ್ಲಿ ರಾರಾಜಿಸುವವರು ಊರ ಗಂಡಸರೇ ಆಗಿರುತ್ತಾರೆ...
ನಾಡಿನಲ್ಲೀಗ ಚುನಾವಣೆ ಜಾತ್ರೆಯನ್ನು ಎದುರುಗೊಳ್ಳುವ ಹೊತ್ತು. ಊರ ಜಾತ್ರೆಯಂತೆ ಮತಜಾತ್ರೆಯಲ್ಲಿಯೂ ಮಹಿಳೆಯರೇ ಕೇಂದ್ರಬಿಂದು. ಎಲ್ಲ ರಾಜಕೀಯ ಪಕ್ಷಗಳ ಆಶ್ವಾಸನೆಗಳು, ಗೆಲ್ಲುವ ಉಮೇದಿನಲ್ಲಿರುವ ಅಭ್ಯರ್ಥಿಗಳ ಭರಪೂರ ಕೊಡುಗೆಗಳು, ಕನಸು ಬಿತ್ತುವ ಹುಸಿಮಾತಿನ ಘೋಷಣೆಗಳು ಮತದಾರರ ಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡಿವೆ. ಮನೆಯ ಯಜಮಾನ್ತಿಯ ಮಾತು ಮತ ಹಾಕುವಲ್ಲಿ ನಿರ್ಣಾಯಕವಾಗುವುದಿಲ್ಲವಾದರೂ ಅವರನ್ನು ಓಲೈಸಿ ಮತಗಿಟ್ಟಿಸುವ ಹುನ್ನಾರ ರಾಜಕೀಯ ನಾಯಕರ ತಲೆಯಲ್ಲಂತೂ ಹೊಕ್ಕಿದೆ. ಮತಕ್ಕೆ ಬೇಕಾದ ಮಹಿಳೆಯರು ಅಧಿಕಾರ ಕೇಂದ್ರಕ್ಕೆ ಬರುವುದು ಮಾತ್ರ ಯಾವ ರಾಜಕೀಯ ಪಕ್ಷಗಳಿಗೂ ಬೇಕಾಗಿಲ್ಲ. ಮತ ಹಾಕಲು ನೀವು, ವಿಧಾನಸೌಧದ ಮೂರನೇ ಮಹಡಿ, ವಿಧಾನಸಭೆ ಸಭಾಂಗಣದಲ್ಲಿ ನಮ್ಮದೇ ಪಾರುಪತ್ಯ ಇರಬೇಕು ಎಂಬುದು ಎಲ್ಲ ರಾಜಕೀಯ ನೇತಾರರ ನಿಲುವು.
ಮತಕ್ಕೆ, ಪ್ರಚಾರಕ್ಕೆ, ರಾಷ್ಟ್ರೀಯ ನಾಯಕರ ಎದುರು ‘ಬೃಹತ್’ ಪ್ರದರ್ಶನಕ್ಕೆ ಮಹಿಳೆಯರೇ ಆಸರೆ. ಪೂರ್ಣಕುಂಭ ಸ್ವಾಗತಕ್ಕೆ, ಆರತಿ ಎತ್ತಲು, ಮನೆಮನೆಗೆ ಕರಪತ್ರ ಹಂಚಲು ಸ್ತ್ರೀಯರ ಕೈಗಳೇ ಬೇಕು. ಟಿಕೆಟ್ ಹಂಚಿಕೆಯ ವಿಷಯ ಬಂದಾಗ, ಗೆಲ್ಲುವವರಿಗೆ ಆದ್ಯತೆ ಎಂಬ ನೆಪವೊಡ್ಡಿ ಮಹಿಳೆಯರನ್ನು ಮತ್ತೆ ಅಡುಗೆ ಮನೆಗೋ ಹಿತ್ತಲಿಗೋ ಅಟ್ಟುವುದು ರಾಜಕೀಯ ರೂಢಿ. 2018ರ ವಿಧಾನಸಭೆ ಚುನಾವಣೆಯ ಅಂಕಿ ಅಂಶದತ್ತ ದಿಟ್ಟಿ ಹಾಯಿಸಿದರೆ, 223 ಕ್ಷೇತ್ರಗಳಿಗೆ (ಒಂದು ಕ್ಷೇತ್ರಕ್ಕೆ ನಡೆದಿರಲಿಲ್ಲ) ನಡೆದ ಚುನಾವಣೆಯಲ್ಲಿ 2,636 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರಲ್ಲಿ 219 ಮಹಿಳಾ ಅಭ್ಯರ್ಥಿಗಳಿದ್ದರು. ಅವರಲ್ಲಿ 7 ಮಂದಿ ಆಯ್ಕೆಯಾದರು. 200 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, 12 ಅಭ್ಯರ್ಥಿಗಳಿಗಷ್ಟೇ ಠೇವಣಿ ಉಳಿದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ, ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಉಪಚುನಾವಣೆಯಲ್ಲಿ ಗೆದ್ದುಬಂದರು. 224 ಶಾಸಕರ ಪೈಕಿ ಒಟ್ಟು ಸಂಖ್ಯೆ 9ಕ್ಕೆ ಏರಿತಾದರೂ ಮಹಿಳಾ ಸದಸ್ಯರ ಬಲ ಶೇ 5 ಅನ್ನೂ ದಾಟಲಿಲ್ಲ.
ಮತಕ್ಕಷ್ಟೇ ಮಹಿಳೆ: ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಅದ್ಧೂರಿ ಯಾಗಿ ಆಚರಿಸುತ್ತಿದ್ದೇವೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಕೊಡಲು ಮಾತ್ರ ಪುರುಷರ ಕಪಿಮುಷ್ಟಿಯಲ್ಲಿರುವ ರಾಜಕೀಯ ಪಕ್ಷಗಳು ಒಪ್ಪುತ್ತಿಲ್ಲ. ‘ಆಕಾಶದ ಅರ್ಧ ನಕ್ಷತ್ರಗಳು ನಾವು; ಈ ಭೂಮಿಯಲರ್ಧ ಕೇಳುವೆವು’ ಎಂದು ಸ್ತ್ರೀವಾದಿ ಹೋರಾಟಗಾರರು ಏರಿದ ಧ್ವನಿಯಲ್ಲಿ ಬೇಡಿಕೆ ಮಂಡಿಸುತ್ತ ಮೂರು ದಶಕಗಳು ಕಳೆದೇ ಹೋದವು. ‘ನೀವು ಆಕಾಶದಲ್ಲಿ ನಕ್ಷತ್ರಗಳಾಗಿಯೇ ಇರಿ; ಭೂಮಿಯಲ್ಲಿನ ಪಾಲು ಕೇಳಲು ಬರಬೇಡಿ’ ಎಂಬ ಹಮ್ಮು ಪುರುಷ ರಾಜಕಾರಣಿಗಳಲ್ಲಿದೆ. ‘ಆರತಿಗೊಬ್ಬ ಮಗಳು, ಕೀರುತಿಗೆ ಒಬ್ಬ ಮಗ’ ಎಂಬ ಹಳೆಯ ರಿವಾಜಿನ ಮೇಲೆಯೇ ರಾಜಕಾರಣಿಗಳಿಗೆ ಹೆಚ್ಚು ನಂಬಿಕೆ ಇದ್ದಂತಿದೆ.
12ನೇ ಶತಮಾನದಲ್ಲಿ ಕಾಯಕ ಜೀವಿಗಳ ಚಳವಳಿ ಕಟ್ಟಿದ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳಾ ವಚನಕಾರ್ತಿಯರ ಪಾಲು ದೊಡ್ಡದಿತ್ತು. ದುಡಿಯುವ ಜಾತಿಗಳಿಗೆ ಸೇರಿದ ಮಹಿಳೆಯರೇ ಚಳವಳಿಯ ಮುಂಚೂಣಿಯಲ್ಲಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲೂ ನಮ್ಮ ಮಹಿಳೆಯರ ತ್ಯಾಗ ಕಡಿಮೆ ಏನೂ ಇರಲಿಲ್ಲ. ನಂತರದ ದಿನಗಳಲ್ಲಿ ಮಹಿಳೆಯನ್ನು ಎರಡನೇ ಶ್ರೇಣಿಯ ಪ್ರಜೆಯಾಗಿ ಕಾಣತೊಡಗಿದ್ದಕ್ಕೆ ಹೆಣ್ಣನ್ನು ಪಳಗಿಸಿ ತನ್ನ ಅಡಿಯಾಳಾಗಿಸಿಕೊಳ್ಳುವ ಗಂಡಿನ ಧಿಮಾಕೇ ಕಾರಣ.
1949ರಲ್ಲಿ ‘ದಿ ಸೆಕೆಂಡ್ ಸೆಕ್ಸ್’ ಎಂಬ ಪುಸ್ತಕ ಬರೆದ ಸೀಮನ್ ದ ಬೋವಾ, ಮಹಿಳಾ ಚಳವಳಿಗೆ ಹೊಸ ಭಾಷ್ಯ ಬರೆದರು. ಅಲ್ಲಿಂದೀಚೆಗೆ ಹಕ್ಕುಗಳನ್ನು ಪ್ರತಿಪಾದಿಸುವ ‘ಸ್ತ್ರೀಪರಂಪರೆ’ಯೊಂದು ಶುರುವಾಯಿತು. ಸೀಮನ್ ದ ಬೋವಾ ಅವರು, ಮಹಿಳೆಯರನ್ನು ಎರಡನೇ ದರ್ಜೆಯವರು ಎನ್ನುವುದಕ್ಕಿಂತ ಎರಡನೇ ಲಿಂಗದವರು ಎಂದು ಹೇಳುತ್ತಾ ‘ಸ್ತ್ರೀ ವ್ಯಕ್ತಿತ್ವ’ಕ್ಕೆ ವ್ಯಾಖ್ಯೆಯೊಂದನ್ನು ಕಟ್ಟಿಕೊಟ್ಟರು. ‘ಎರಡನೇ ಲಿಂಗದಲ್ಲಿ ಹುಟ್ಟಿದ ಬಳಿಕ ಅದರ ವರ್ತುಲದಿಂದ ಹೊರಬರಲು ಸಾಧ್ಯವಿಲ್ಲ. ಮಹಿಳೆ ಪುರುಷನಾಗಲು ಸಾಧ್ಯವಿಲ್ಲ; ಅದರ ಅಗತ್ಯವೂ ಇಲ್ಲ. ಮಹಿಳೆ ಎರಡನೇ ಲಿಂಗ ಏಕೆಂದರೆ, ಅವರ ಸಾಮಾಜಿಕ, ಆರ್ಥಿಕ, ರಾಜಕೀಯ ಚೌಕಟ್ಟು ಬೇರೆಯದೇ ಆಗಿರುತ್ತದೆ. ಸ್ತ್ರೀ ವಿಮೋಚನೆಯಾಗದೇ ಕ್ರಾಂತಿಯಾಗದು; ಕ್ರಾಂತಿಯಾಗದೇ ಸ್ತ್ರೀವಿಮೋಚನೆಯಾಗದು’ ಎಂದು ಸ್ತ್ರೀ ಅಸ್ಮಿತೆ ಮತ್ತು ವ್ಯಕ್ತಿತ್ವದ ಕುರಿತು ಹೊಸ ಹೊಳಹನ್ನು ಅವರು ನೀಡಿದರು.
ಆಸೆ, ಆಮಿಷವೊಡ್ಡಿ, ಬೆದರಿಕೆ, ದೌರ್ಜನ್ಯದ ದಂಡ ಪ್ರಯೋಗಿಸಿ ಅಥವಾ ‘ಶೀಲ’ವನ್ನು ಮುಂದಿಟ್ಟು ಸ್ತ್ರೀಸಂಕುಲವನ್ನೇ ಗುಲಾಮರಾಗಿಸಿಕೊಂಡ ಪುರುಷ ಮೇಲಾಧಿಪತ್ಯ, ಸ್ತ್ರೀಗೆ ಮನೆಯೊಳಗೆ ಸ್ವಾತಂತ್ರ್ಯಕೊಡಲು ಸಿದ್ಧವಿಲ್ಲ. ಅದರಲ್ಲೂ ಮನುವಾದವನ್ನೇ ‘ಆದರ್ಶ’ವೆಂದು ಭಾವಿಸುವ ಬಲಿಷ್ಠರ ಭಾರತ, ‘ನಃಸ್ತ್ರೀ ಸ್ವಾತಂತ್ರ್ಯಮರ್ಹತಿ’ (ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ) ಎಂಬ ಮಾತಿಗೆ ಆತುಕೊಂಡಂತಿದೆ.
ಅಂತಹ ದೇಶದೊಳಗೆ ಇಂದಿರಾಗಾಂಧಿ ಅವರಂತಹ ಮಹಿಳೆಯೊಬ್ಬರು ರಾಷ್ಟ್ರವನ್ನು ದಶಕಗಳ ಕಾಲ ಮುನ್ನಡೆಸಿದ್ದು, ಅಭಿವೃದ್ಧಿಯ ಕಡೆಗೆ ಕೊಂಡೊಯ್ದಿದ್ದೇ ಒಂದು ಸೋಜಿಗ. ಅದಾದ ಬಳಿಕ, ಆ ಮಟ್ಟಿಗಿನ ನಾಯಕಿಯನ್ನು ನಾಡು ಕಾಣಲಿಲ್ಲ; ಕಾಣಲು ಪುರುಷ ವ್ಯವಸ್ಥೆ ಬಿಡಲೂ ಇಲ್ಲ.
ಕಲ್ಪನೆಯಲ್ಲಿದ್ದ ಸ್ತ್ರೀ–ಪುರುಷ ಸಮಾನತೆಯನ್ನು ವಾಸ್ತವವಾಗಿಸಿದ್ದು ಕರ್ನಾಟಕದ ಒಡಲಿನಲ್ಲೇ ಬಸವಣ್ಣನವರು ಕಟ್ಟಿದ್ದ ಅನುಭವ ಮಂಟಪ. ರಾಜಕೀಯ ಮೀಸಲಾತಿಯ ಮೊಗ್ಗರಳಿ, ಫಲ ನೀಡಲು ಕಾರಣವಾಗಿದ್ದು ಕೂಡ ನಮ್ಮದೇ ನೆಲದ ಸೊಬಗು. ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡರು, ತಾಲ್ಲೂಕು, ಜಿಲ್ಲಾ ಪಂಚಾಯಿತಿ, ನಗರಸಭೆ, ಪಾಲಿಕೆಗಳಲ್ಲಿ ಶೇ 50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡುವ ಕ್ರಾಂತಿಕಾರಕ ಹೆಜ್ಜೆಯನ್ನು ಇಟ್ಟರು.
ಪ್ರಧಾನಿ ಹುದ್ದೆಗೇರುವ ಅವಕಾಶ ಸಿಕ್ಕಿದಾಗ ಅಲ್ಲೂ ತಮ್ಮ ಕಾಳಜಿ ಮೆರೆದ ದೇವೇಗೌಡರು, ಲೋಕಸಭೆ, ವಿಧಾನಸಭೆಗಳಲ್ಲಿ ಶೇ 33ರಷ್ಟು ಮೀಸಲಾತಿ ಕಲ್ಪಿಸಲು ಮಹಿಳಾ ಮೀಸಲಾತಿ ಮಸೂದೆಯನ್ನು 1996ರಲ್ಲಿ ಮಂಡಿಸಿದರು. ಸಂವಿಧಾನಕ್ಕೆ 108ನೇ ತಿದ್ದುಪಡಿ ತರುವ ಈ ಮಸೂದೆಗೆ ಲೋಕಸಭೆಯಲ್ಲಿ ಬೆಂಬಲ ಸಿಗಲಿಲ್ಲ. ಮತ್ತೆ ಎನ್‌ಡಿಎ, ಯುಪಿಎ ಸರ್ಕಾರದ ಯುಗದಲ್ಲೂ ಈ ಮಸೂದೆಗೆ ಒಪ್ಪಿಗೆ ಸಿಗಲಿಲ್ಲ. 2004ರಿಂದ 2014ರವರೆಗೂ 10ವರ್ಷ ಸೋನಿಯಾಗಾಂಧಿ ಅಧ್ಯಕ್ಷರಾಗಿದ್ದ ಯುಪಿಎ ಅಧಿಕಾರ ನಡೆಸಿತ್ತು. ಮಹಿಳೆಯೊಬ್ಬರು ಕೇಂದ್ರ ಸರ್ಕಾರದ ನಿರ್ಣಯಗಳನ್ನು ನಿಯಂತ್ರಿಸುವ ಹುದ್ದೆಯಲ್ಲಿದ್ದರೂ ಮಹಿಳಾ ಮೀಸಲಾತಿ ಜಾರಿಗೊಳ್ಳಲೇ ಇಲ್ಲ. 2009ರಲ್ಲಿ ಮತ್ತೆ ಇದು ಮುನ್ನೆಲೆಗೆ ಬಂದು ರಾಜ್ಯಸಭೆಯಲ್ಲಿ ಮಂಡನೆ ಮಾಡುವ ಯತ್ನವನ್ನು ಅಂದಿನ ಯುಪಿಎ ಸರ್ಕಾರ ಮಾಡಿತು. 2010ರಲ್ಲಿ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿತಾದರೂ 26 ವರ್ಷ ಕಳೆದರೂ ಲೋಕಸಭೆಯಲ್ಲಿ ಇದಕ್ಕೆ ಒಪ್ಪಿಗೆ ಸಿಗಲೇ ಇಲ್ಲ.
2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಅವರು ಮತದಾರರಿಗೆ ಕೊಟ್ಟಿದ್ದ
ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲಾತಿಯೂ ಪ್ರಧಾನವಾಗಿತ್ತು. ದೇಶವನ್ನು ‘ವಿಶ್ವಗುರು’ವಾಗಿಸುವ ಕಾತರದಲ್ಲಿರುವ ಮೋದಿ ಅವರು ಪ್ರಧಾನಿಯಾದ 9ವರ್ಷದಲ್ಲಿ ಎರಡು ಬಾರಿ ತಮ್ಮನ್ನೇ ಗೆಲ್ಲಿಸಿದ ಮಹಿಳೆಯರಿಗೆ ‘ಉಜ್ವಲ’ ಸಿಲಿಂಡರ್ ಕೊಟ್ಟರೆ ವಿನಃ ಮೀಸಲಾತಿಯ ಗೋಜಿಗೆ ಹೋಗಲಿಲ್ಲ.
ಅನುಕಂಪಕ್ಕೆ ಮಹಿಳೆ: ಬಹುತೇಕ ರಾಜಕೀಯ ಪಕ್ಷಗಳಿಗೆ ಮಹಿಳೆಯರಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡುವುದು ಆದ್ಯತೆಯಾಗಿರುವುದೇ ಇಲ್ಲ. ಸೋನಿಯಾಗಾಂಧಿ ಅಧ್ಯಕ್ಷೆಯಾಗಿದ್ದ ಹೊತ್ತಿನಲ್ಲೂ ಕಾಂಗ್ರೆಸ್ ಪಕ್ಷ ಶೇ 10ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಕೊಟ್ಟಿಲ್ಲ. ತೃಣಮೂಲ ಕಾಂಗ್ರೆಸ್ ಕಟ್ಟಿದ ಮಮತಾ ಬ್ಯಾನರ್ಜಿ ಮಾತ್ರ ಮಹಿಳೆಯರಿಗೆ ಆದ್ಯತೆ ಮೇರೆಗೆ ಟಿಕೆಟ್ ಕೊಟ್ಟು, ಸ್ತ್ರೀಶಕ್ತಿಯನ್ನು ಸಾಕ್ಷಾತ್ಕರಿಸಿದ್ದಾರೆ. ಪಶ್ಚಿಮ ಬಂಗಾಳದ 296 ಕ್ಷೇತ್ರಗಳ ಪೈಕಿ 40 ಅನ್ನು ಮಹಿಳೆಯರಿಗೆ ಕೊಟ್ಟಿದ್ದರು. ಅವರಲ್ಲಿ 28 ಜನ ಗೆದ್ದು ಶಾಸಕಿಯಾಗಿದ್ದಾರೆ.
ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್ ನೀಡದೇ ಇದ್ದರೂ ಅನುಕಂಪದ ಮತಕ್ಕೆ ಮಹಿಳೆಯೇ ಬೇಕು ಎಂಬುದು ದೊಡ್ಡ ಚೋದ್ಯ. ಕರ್ನಾಟಕದಲ್ಲಿ ಶಾಸಕ, ಸಂಸದರಾಗಿದ್ದ ಪುರುಷರು ನಿಧನರಾದ ಸಂದರ್ಭದಲ್ಲಿ ನಡೆಯುವ ಉಪಚುನಾವಣೆಯಲ್ಲಿ ಅನುಕಂಪದ ಮತ ಗಿಟ್ಟಿಸಲು ಮೃತರ ಪತ್ನಿಯನ್ನು ಕಣಕ್ಕೆ ಇಳಿಸುವುದು ಅನೂಚಾನವಾಗಿ ನಡೆದು ಬಂದಿದೆ.
ಎಚ್.ಎಸ್. ಮಹದೇವಪ್ರಸಾದ್ ನಿಧನರಾದಾಗ ಅವರ ಪತ್ನಿ ಗೀತಾಗೆ, ಎಸ್.ಎಸ್. ಶಿವಳ್ಳಿ ಮರಣಹೊಂದಿದಾಗ ಅವರ ಪತ್ನಿ ಕುಸುಮಾಗೆ, ಖಮರುಲ್ ಇಸ್ಲಾಂ ಮೃತಪಟ್ಟಾಗ ಪತ್ನಿ ಕೆ. ಫಾತಿಮಾಗೆ ಟಿಕೆಟ್ ನೀಡಲಾಗಿತ್ತು. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನರಾದಾಗ ಅವರ ಪತ್ನಿ ಮಂಗಳಾ ಅಂಗಡಿಗೆ ಟಿಕೆಟ್ ಕೊಡಲಾಗಿತ್ತು. ಅನುಕಂಪದ ಅಲೆಯ ಮೇಲೆ ತೇಲಿ ಶಾಸನಸಭೆಯಲ್ಲಿ ಪಕ್ಷವನ್ನು ಉಳಿಸಿಕೊಳ್ಳಲು ಮಾತ್ರ ಮಹಿಳೆ ಬೇಕು. ನೇರ ಚುನಾವಣೆಯಲ್ಲಿ ಗೆಲ್ಲಲು ಮಾತ್ರ ಮಹಿಳೆಯರು ಬೇಡ ಎಂಬ ಕೊಂಕು ಬುದ್ಧಿ ಎಲ್ಲ ಪಕ್ಷಗಳಲ್ಲೂ ಇದೆ.
ಇದೆಲ್ಲವನ್ನು ನೋಡುವಾಗ, ಕುಮಾರ ವ್ಯಾಸ ಭಾರತದಲ್ಲಿನ ಪ್ರಸಂಗವೊಂದು ನೆನಪಾಗುತ್ತದೆ. ದ್ಯೂತದಲ್ಲಿ ತನ್ನನ್ನೇ ಪಣವಿಟ್ಟು ಸೋತ ಧರ್ಮರಾಯ ತನ್ನ ಪತ್ನಿ ದ್ರೌಪದಿಯನ್ನು ಪಣಕ್ಕಿಡಲು ಮುಂದಾಗುತ್ತಾನೆ. ಆಗ, ‘ನೀನೇ ಸೋತ ಮೇಲೆ ನನ್ನನ್ನು ಅಡವಿಡಲು ನಿನಗೆಲ್ಲಿ ಅಧಿಕಾರವಿದೆ’ ಎಂಬರ್ಥದಲ್ಲಿ ಪ್ರಶ್ನಿಸುವ ದ್ರೌಪದಿ, ದ್ಯೂತಸಭೆಯಲ್ಲಿದ್ದ ಹಿರಿಯರ ಬಗ್ಗೆ ‘ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿ, ಸಭೆಯಲ್ಲ; ಮೂರ್ಖರು ಹಿರಿಯರಲ್ಲ ಯಥಾರ್ಥ ಭಾಷಣ ಭೀತಚೇತನರು, ಹಿರಿಯರಿದೆ ಸಾಮಾಜಿಕರು ಸಚ್ಚರಿತದೆಲಾ ಸ್ತ್ರೀಮತವನುತ್ತರಿಸಲಾಗದೆ ಧರ್ಮಶಾಸ್ತ್ರದೊಳು’ ಎಂದು ಹಂಗಿಸುತ್ತಾಳೆ. ಐದು ಶತಮಾನಗಳ ಹಿಂದೆ ಕುಮಾರವ್ಯಾಸ ದ್ರೌಪದಿಯ ಬಾಯಿಂದ ಹೇಳಿಸಿದ ಮಾತುಗಳು ಇಂದಿನ ಪರಿಸ್ಥಿತಿಗೂ ಹೊಂದಿಕೊಳ್ಳುವಂತಿವೆ.
ಗಿಲೀಟು ಕಳೆದುಕೊಂಡ ಮೂಗುಬೊಟ್ಟು
2018ರ ಚುನಾವಣೆಗೆ ಮೊದಲು ಮಧ್ಯಕರ್ನಾಟಕದ ಮಾಜಿ ಶಾಸಕರೊಬ್ಬರು ಎಲ್ಲ ಮಹಿಳೆಯರಿಗೂ ಮೂಗುಬೊಟ್ಟು, ಓಲೆ ಕೊಟ್ಟಿದ್ದರು. ಅದು ಫಳಫಳ ಹೊಳೆಯುತ್ತಿದ್ದರಿಂದ ಜನರೂ ಖುಷಿಯಾಗಿದ್ದರು. ಚಿನ್ನದ ಹಂಗಿಗೆ ಮತದಾರರ ಕೆಡವಿದ ಅಭ್ಯರ್ಥಿ ಗೆದ್ದು ಬಿಟ್ಟರು. ಚಿನ್ನದ ರಂಗು ಕರಗಿ, ಮೋಸ ಹೋಗುವಷ್ಟರಲ್ಲಿ ಕಾಲ ಮಿಂಚಿತ್ತು. ಮನೆಯಲ್ಲಿ ಕಷ್ಟವೆಂದು ಮೂಗುಬೊಟ್ಟನ್ನು ಅಡವಿಡಲು ಹೋದಾಗ, ಅದನ್ನು ಕೆರೆದು ನೋಡಿದ ಅಕ್ಕಸಾಲಿಗ ಇದು ಪೂರ್ತಿ ಬಂಗಾರವಲ್ಲ. ಒಂದು ಗ್ರಾಂ ಬಂಗಾರ ಎಂದಾಗಲಷ್ಟೇ ಅವರಿಗೆ ಪೇಚುಬಿದ್ದಿದ್ದು ಗೊತ್ತಾಗಿತ್ತು.
ಈಚಿನ ವರ್ಷಗಳಲ್ಲಿ ಮತ್ತೊಂದು ಹೊಸಬಗೆ ಶುರುವಾಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರನ್ನು ತಿರುಪತಿ, ಓಂ ಶಕ್ತಿ, ಧರ್ಮಸ್ಥಳಗಳಿಗೆ ಬಸ್ ಮಾಡಿ ಕಳುಹಿಸುವ ಪದ್ಧತಿ ಚಾಲೂ ಆಗಿದೆ. ಇದರ ಜತೆಗೆ, ಗೌರಿ–ವರಮಹಾಲಕ್ಷ್ಮೀ ಹಬ್ಬದಲ್ಲಿ ಬಾಗಿನ, ಶ್ರೀನಿವಾಸ ಕಲ್ಯಾಣೋತ್ಸವ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶಿವರಾತ್ರಿ ಜಾಗರಣೆ ನೆಪದಲ್ಲಿ ಒಂದು ಕಡೆ ಸೇರಿಸಿ ಮಹಿಳೆಯರಿಗೆಲ್ಲ ಸೀರೆ–ಕುಬುಸದ ಕಣ ಉಡುಗೊರೆ ನೀಡಿ, ಮತ ಖಾತ್ರಿಪಡಿಸಿಕೊಳ್ಳುವ ಕೆಲಸವನ್ನೂ ಮಾಡುತ್ತಿದ್ದಾರೆ.
ಮಹಿಳೆಯರ ಮೇಲೆ ‘ವ್ಯಾಮೋಹ’
ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮಹಿಳೆಯರ ಮೇಲಿನ ವ್ಯಾಮೋಹ ಎಲ್ಲ ಪಕ್ಷಗಳಲ್ಲೂ ಉಕ್ಕಿ ಹರಿಯುತ್ತಿದೆ. ಮಹಿಳಾ ಸಬಲೀಕರಣ, ಸುರಕ್ಷತೆ, ದುಡಿಯುವ ಮಹಿಳೆಗೆ ಅವಕಾಶಗಳ ಸೃಜನೆಗಿಂತ ಚುನಾವಣೆ ಹೊತ್ತಿನಲ್ಲಿ ಮತ ಗಿಟ್ಟಿಸುವ ತವಕ ರಾಜಕೀಯ ಪಕ್ಷಗಳಿಗೆ ಅಂಟಿದ ಜಾಡ್ಯವಾಗಿದೆ.
ಚುನಾವಣೆ ಸಮೀಪವಿದೆ ಎನ್ನುವಾಗ ಕಾಂಗ್ರೆಸ್ ಪಕ್ಷ, ಮನೆಯ ಒಡತಿಗೆ ತಿಂಗಳಿಗೆ ₹ 2 ಸಾವಿರ ಹಾಗೂ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ವಾಗ್ದಾನ ಮಾಡಿತು. ಅನ್ನಭಾಗ್ಯದಡಿ ತಿಂಗಳಿಗೆ 10 ಕೆ.ಜಿ ಅಕ್ಕಿ ನೀಡುವ ಭರವಸೆ ಕೊಟ್ಟಿತು. ತಿಂಗಳ ಕರೆಂಟ್ ಬಿಲ್ ಕಟ್ಟುವುದಲ್ಲದೇ, 10 ಕೆ.ಜಿ ಅಕ್ಕಿ ಜತೆಗೆ ಎರಡು ಸಾವಿರ ಸಿಗುತ್ತದೆ ಎಂದರೆ ಕಾಂಗ್ರೆಸ್ ಮೇಲಿನ ಪ್ರೀತಿ ಒಂದು ಗುಲಗಂಜಿಯಷ್ಟಾದರೂ ಹೆಚ್ಚಾಗುತ್ತದೆ ಎಂಬುದು ಆ ಪಕ್ಷದವರ ನಂಬಿಕೆ.
ಕಾಂಗ್ರೆಸ್‌ನ ‘ಗೃಹಲಕ್ಷ್ಮಿ’ಯ ಸುಳಿವು ಸಿಗುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ಗೃಹಶಕ್ತಿ’ ಎಂಬ ಯೋಜನೆಯನ್ನು ದಿಢೀರ್ ಪ್ರಕಟಿಸಿದರು. ಕೃಷಿಕಾರ್ಮಿಕ ಮಹಿಳೆಗೆ ಪ್ರತಿ ತಿಂಗಳು ₹500 ನೀಡುವ ಶ್ರಮಶಕ್ತಿ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದರು. ಕಾಂಗ್ರೆಸ್‌ನವರ ₹2 ಸಾವಿರ ‘ಆಮಿಷ’ದ ಮುಂದೆ ತಮ್ಮದು ₹500 ಲೆಕ್ಕಕ್ಕೆ ಬರುವುದಿಲ್ಲ ಎಂದರಿತ ಬೊಮ್ಮಾಯಿಯವರು, ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವಾಗ, ಈ ಮೊತ್ತವನ್ನು ₹ 1 ಸಾವಿರಕ್ಕೆ ಹೆಚ್ಚಿಸಿದರು. ಇದರ ಜತೆಗೆ, ದುಡಿಯುವ ಮಹಿಳೆಯರಿಗೆ ಉಚಿತ ಬಸ್‌ಪಾಸ್ ಕೊಡುಗೆ ಕೊಟ್ಟರು.
ಹೀಗೆ ಚುನಾವಣೆ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಮುಂದಿಟ್ಟು ತಮ್ಮ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಯತ್ನಕ್ಕೆ ಕೈಹಾಕಿವೆ. ಟಿಕೆಟ್ ಕೇಳಬೇಡಿ; ಉಚಿತ ಅಕ್ಕಿ, ವಿದ್ಯುತ್, ದುಡ್ಡಿಗಷ್ಟೇ ನೀವು ಅರ್ಹರು ಎಂಬಂತಿದೆ ರಾಜಕಾರಣಿಗಳ ವರಸೆ.
ಇದು ರಾಜಕೀಯ ಪಕ್ಷಗಳ ನಿಲುವಾದರೆ, ಅಭ್ಯರ್ಥಿಗಳು ಅಥವಾ ಶಾಸಕರು ಮಹಿಳಾ ಮತದಾರರನ್ನು ಸೆಳೆಯಲು ನಿರಂತರವಾಗಿ ಶ್ರಮಿಸುತ್ತಲೇ ಇದ್ದಾರೆ.
ಮನೆಯ ಯಜಮಾನ್ತಿಯ ಮೂಲಕ ಕುಟುಂಬದ ಮೆಚ್ಚುಗೆ ಪಡೆಯಲು ಶಾಸಕರು ಹಲವು ತಂತ್ರಗಳನ್ನು ಅನುಸರಿಸುತ್ತಲೇ ಇದ್ದಾರೆ. ಹಬ್ಬ ಬಂದರೆ ಮನೆಮಂದಿಗೆ, ಬಂದ ಅತಿಥಿಗಳಿಗೆ ಒಬ್ಬಟ್ಟು, ಪಾಯಸ, ಹೊಟ್ಟೆ ತುಂಬ ಊಟ ಹಾಕುವುದು ಮನೆಯೊಡತಿಗೆ ಸವಾಲು. ಈ ಕಷ್ಟ ತೀರಿದರೆ, ಅವರಿಗೂ ನೆಮ್ಮದಿ. ತಮ್ಮ ಮನೆಯಲ್ಲಿ ದವಸ ಧಾನ್ಯ–ಬೇಳೆಕಾಳು ಇದೆಯೋ ಇಲ್ಲವೋ ಎಂಬುದು ಶಾಸಕರಿಗೆ ಗೊತ್ತಿರುತ್ತದೆಯೋ ಇಲ್ಲವೋ; ಆದರೆ ಮತದಾರನ ಮನೆಯಲ್ಲಿ ಹಬ್ಬದ ಅಡುಗೆಗೆ ಬೇಕಾದ ಪದಾರ್ಥಗಳಿಲ್ಲ ಎಂಬ ರಾಜಕೀಯ ಲೆಕ್ಕಾಚಾರ ಗೊತ್ತಿರುತ್ತದೆ. ಹಾಗಾಗಿಯೇ, ಯುಗಾದಿ, ದೀಪಾವಳಿ, ಸಂಕ್ರಾಂತಿ, ರಂಜಾನ್, ಈದ್, ಓಣಂ, ಪೊಂಗಲ್ ಹಬ್ಬಗಳಲ್ಲಿ ಅಕ್ಕಿ, ಬೇಳೆ, ಎಣ್ಣೆ, ಬೆಲ್ಲ ಮತ್ತಿತರ ಪದಾರ್ಥಗಳಿರುವ ಪ್ಯಾಕೆಟ್‌ಗಳನ್ನು ಬಹುತೇಕ ಮನೆಗಳಿಗೆ ಹಂಚುವುದನ್ನು ಶಾಸಕರು ರೂಢಿಸಿಕೊಂಡಿದ್ದಾರೆ. ದುಡ್ಡು ಕೊಟ್ಟಿದ್ದನ್ನು ಜನ ಮರೆಯಬಹುದು. ಆದರೆ, ಹಸಿವಿನಲ್ಲಿರುವಾಗ ಅನ್ನಕೊಟ್ಟವರನ್ನು ಮರೆಯಲಾರರು ಎಂಬುದು ಶಾಸಕರ ನಂಬುಗೆ.
ಇತ್ತೀಚೆಗೆ ಮತ್ತೊಂದು ಹೆಜ್ಜೆ ಮುಂದೆ ಹೋದ ಬೆಂಗಳೂರಿನ ಶಾಸಕರು, ಸಾಮೂಹಿಕ ಸೀಮಂತ ನಡೆಸಿ ಊರ ತುಂಬ ಜಾಹೀರಾತು ಫಲಕ ಹಾಕಿಕೊಂಡಿದ್ದರು. ಕೆಲವು ಶಾಸಕರು ಕುಕ್ಕರ್, ಸ್ಟವ್ ಹಂಚುತ್ತಿದ್ದಾರೆ. ಬೆಂಗಳೂರಿನ ಮತ್ತೊಬ್ಬ ಶಾಸಕರು, ಮನೆಮನೆಗೆ ಟಿ.ವಿ. ಕೊಡುತ್ತಿದ್ದಾರೆ. ಪ್ರತಿಬಾರಿ ಟಿ.ವಿ. ಆನ್ ಮಾಡಿದಾಗಲೂ ಆ ಶಾಸಕರು ಹೆಸರು, ಮಾಡಿದ ಸಾಧನೆಯ ಕಿರುಚಿತ್ರ ತೆರೆಯ ಮೇಲೆ ಬರುತ್ತದೆ; ಸಿನೆಮಾ ಆರಂಭಕ್ಕೆ ಮೊದಲು ಚಿತ್ರಮಂದಿರದಲ್ಲಿ ಧೂಮಪಾನ–ಮದ್ಯಪಾನ ಹಾನಿಕರ ಎಂಬ ಸಂದೇಶ ಬರುವುದನ್ನು ಇದು ನೆನಪಿಸುವಂತಿದೆ.
ಮತ ತಮಗೇ ಹಾಕಬೇಕು ಎಂಬ ಷರತ್ತು ಒಡ್ಡುವ ಬದಲು, ಮತದಾನಕ್ಕೆ ಕೆಲವು ದಿನಗಳ ಮೊದಲು ಸೀರೆ ಅಥವಾ ಕುಬುಸದ ಕಣ, ಅರಿಶಿನ–ಕುಂಕುಮದ ಪೊಟ್ಟಣ, ವೀಳ್ಯದೆಲೆ–ಅಡಿಕೆಯ ಮೇಲೆ ಹಣ ಇಟ್ಟು, ಆಣೆ ಮಾಡಿಸಿಕೊಳ್ಳುವ ರೀತಿಯಲ್ಲಿ ಕೈಯಲ್ಲಿಡುವ ‘ಸಂಪ್ರದಾಯ’ವೂ ಇದೆ. ಅರಿಶಿನ–ಕುಂಕುಮದ ಮೇಲೆ ಕೈ ಇಟ್ಟು ಹಣ ಪಡೆದು, ವಂಚಿಸಿದರೆ ಮಾಂಗಲ್ಯಭಾಗ್ಯಕ್ಕೆ ಕುತ್ತು ಬಂದೀತೆಂಬ ಭಯ ಹುಟ್ಟಿಸಲು ಹೀಗೆ ಮಾಡಲಾಗುತ್ತದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ. ಮತ ವ್ಯಾಪಾರಕ್ಕಾಗಿ ಏನೆಲ್ಲ ಕಸರತ್ತುಗಳು ನಡೆಯುತ್ತಲೇ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.