ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮರಣೆ: ಕು ಶಿ ಹರಿದಾಸ ಭಟ್ಟರಿಗೆ ನೂರು

Published 16 ಮಾರ್ಚ್ 2024, 23:30 IST
Last Updated 16 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಕುಶಿ 'ಎಂಬ ಎರಡು ಅಕ್ಷರಗಳಿಂದ ಜನಪ್ರಿಯರಾಗಿದ್ದ ಹರಿದಾಸ ಭಟ್ಟರು ಒಂದು ಕಾಲದಲ್ಲಿ ಧಾರ್ಮಿಕ ಕೇಂದ್ರವಾಗಿ ಮಾತ್ರ ಪರಿಚಿತವಾಗಿದ್ದ ಸಣ್ಣ ಊರು ಉಡುಪಿಯನ್ನು ದೇಶದ ಒಳಗೆ ಮತ್ತು ಹೊರಗೆ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದವರು. ಸಾಹಿತಿಗಳು , ರಂಗಭೂಮಿ- ಚಿತ್ರಕಲೆ -ಸಂಗೀತ- ಶಿಲ್ಪ ಕ್ಷೇತ್ರಗಳ ಕಲಾವಿದರು , ಜಾನಪದ ಕಲಾವಿದರು ಮತ್ತು ವಿದ್ವಾಂಸರು , ಶಿಕ್ಷಣ ತಜ್ಞರು ,ಸಾಮಾಜಿಕ ಚಿಂತಕರು -ಎಲ್ಲರಿಗೂ ಉಡುಪಿ ತೆರೆದುಕೊಂಡದ್ದು ಹರಿದಾಸ ಭಟ್ಟರ ಮೂಲಕ . ಉಡುಪಿಯ ಎಂ ಜಿ ಎಂ ಕಾಲೇಜಿನಲ್ಲಿ ಮೊದಲು 15 ವರ್ಷ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ , ಬಳಿಕ 15 ವರ್ಷಗಳ ಕಾಲ ಪ್ರಿನ್ಸಿಪಾಲ್ ಆಗಿ (1964-1979) ಇದ್ದ ಕಾಲಘಟ್ಟದಲ್ಲಿ ಕುಶಿಯವರು ತಮ್ಮ ಕಾಲೇಜನ್ನು ಮಿನಿ ವಿಶ್ವವಿದ್ಯಾಲಯದ ಮಟ್ಟಕ್ಕೆ ಏರಿಸಿದರು . 1979ರಲ್ಲಿಸೇವೆಯಿಂದ ನಿವೃತ್ತರಾದ ಬಳಿಕ 2000ದಲ್ಲಿ ತಮ್ಮ ನಿಧನದ ವರೆಗೆ ಕುಶಿ ಅವರು ಪ್ರವೃತ್ತರಾಗಿ ತಮ್ಮ ಕಾಲೇಜಿನ ಆವರಣದಲ್ಲೇ ಮಾಡಿದ್ದು ವಿಶ್ವಾಮಿತ್ರ ಸೃಷ್ಟಿ . ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ , ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ ( ಆರ್ ಆರ್ ಸಿ ) , ಯಕ್ಷಗಾನ ಕೇಂದ್ರ ಎಂಬ ತ್ರಿವಳಿ ಸಂಸ್ಥೆಗಳನ್ನು ಸ್ಥಾಪಿಸಿ , ಅಲ್ಲಿ ಸಾಧಿಸಿದ ಯೋಜನೆಗಳ ಯಶಸ್ಸಿನ ಕಾರಣವಾಗಿ ಉಡುಪಿಯು ಜ್ಞಾನದ ಯಾತ್ರಾಕ್ಷೇತ್ರವಾಗಿ ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಯಿತು .

ಕುಶಿ ಅವರ ತಂದೆ ಉಡುಪಿಯ ಕುಂಜಿಬೆಟ್ಟಿನ ಶಿವ ಗೋಪಾಲ ಭಟ್ಟರು . ತಾಯಿ ಕಮಲಮ್ಮ . ಶಿವ ಗೋಪಾಲ ಭಟ್ಟರು ತಮ್ಮ ಶಿವ ಅನಂತ ಭಟ್ಟರ ಜೊತೆಗೆ ಗದುಗಿನಲ್ಲಿ ಚಹಾದಂಗಡಿ ನಡೆಸುತ್ತಿದ್ದರು . ಮುಂದೆ ಅದು ಬೆಳೆದು ಮಹಡಿಯ ಹೋಟೆಲ್ ಆಯಿತು . . ಹರಿದಾಸ ಭಟ್ಟರು ಮೊದಲು ಸೇರಿದ್ದು ಉಡುಪಿಯ ಕಡಿಯಾಳಿ ಶಾಲೆಗೆ . ಅಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಬಳಿಕ ಮುಂದಿನ ವಿದ್ಯಾಭ್ಯಾಸ ಉಡುಪಿಯ ಬೋರ್ಡ್ ಹೈಸ್ಕೂಲಿನಲ್ಲಿ . ಎಸ್ ಎಸ್ ಎಲ್ ಸಿ ಯ ಪರೀಕ್ಷೆಯಲ್ಲಿ ಹರಿದಾಸ ಭಟ್ಟರದ್ದು ಶಾಲೆಗೆ ಸರ್ವಪ್ರಥಮ ಸ್ಥಾನ .

ಹರಿದಾಸ ಭಟ್ಟರಿಗೆ ಮುಂದೆ ಕಾಲೇಜಿಗೆ ಹೋಗುವ ಆಸೆ ಬಹಳ ಇತ್ತು . ಆದರೆ ಅವರ ತಂದೆ ಗದುಗಿನ ಹೋಟೆಲನ್ನು ತಮ್ಮನ ವಶ ಕೊಟ್ಟು ಉಡುಪಿ ಮನೆಗೆ ಬಂದಿದ್ದರು .ಮನೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇರಲಿಲ್ಲ . ಕೊನೆಗೆ ಮಗನನ್ನು ಮಂಗಳೂರಿನಲ್ಲಿ ಶಿಕ್ಷಕ ವೃತ್ತಿಯ ತರಬೇತಿ ಶಾಲೆಗೆ ಕಳುಹಿಸಿದರು . ಎರಡು ವರ್ಷಗಳ(1940-42) ಆ ಶಿಕ್ಷಕ ತರಬೇತಿಯ ಅವಧಿಯಲ್ಲಿಯೇ ಹರಿದಾಸ ಭಟ್ಟರು ಸಂಜೆ ವೇಳೆ ನಡೆಯುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ಜಾಣ ' ತರಗತಿಗಳಿಗೆ ಹಾಜರಾಗಿ ಪರೀಕ್ಷೆಗೆ ಕುಳಿತು ಪಾಸಾದರು .ಅಲ್ಲಿ ಅವರಿಗೆ ಪಾಠ ಮಾಡಿದವರು ಸೇಡಿಯಾಪು ಕೃಷ್ಣ ಭಟ್ಟರು , ಕಡೆಂಗೋಡ್ಲು ಶಂಕರ ಭಟ್ಟರು ಮತ್ತು ಶಿವರಾಮ ಕಾರಂತರು . ಆ ವೇಳೆಗೆ ಪುಸ್ತಕಗಳ ಓದಿನ ಗೀಳು ಹುಟ್ಟಿ, ಕುಶಿ ಅವರು ಎರಡು ಆಣೆಗೆ ಒಂದರಂತೆ ಸಿಗುತ್ತಿದ್ದ 'ಪ್ರಬುದ್ಧ ಕರ್ನಾಟಕ'ದ ಹಳೆಯ ಸಂಚಿಕೆಗಳ ಸಹಿತ ವಿದೇಶಿ ಕಾದಂಬರಿಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡರು .

ಶಿಕ್ಷಕ ತರಬೇತಿ ಪಡೆದ ಕುಶಿ ತಾವು ಕಲಿತ ಕಡಿಯಾಳಿ ಪ್ರಾಥಮಿಕ ಶಾಲೆಯಲ್ಲಿ 1942ರಲ್ಲಿ ತಿಂಗಳ 18 ರೂಪಾಯಿ ಸಂಬಳದ ಶಿಕ್ಷಕನಾಗಿ ಸೇರಿಕೊಂಡರು . ಎರಡು ವರ್ಷಗಳ ಬಳಿಕ ಉಡುಪಿಯ ಕ್ರಿಶ್ಚನ್ ಹೈಸ್ಕೂಲ್ ನಲ್ಲಿ ಅಧ್ಯಾಪಕರಾಗಿ ನೇಮಕಗೊಂಡರು . ಅಧ್ಯಾಪಕ ವೃತ್ತಿಯ ಮೂರೂವರೆ ವರ್ಷಗಳಲ್ಲಿ ಅವರು ಕನ್ನಡದಲ್ಲಿ ಮತ್ತು ಸಂಸ್ಕೃತದಲ್ಲಿ 'ವಿದ್ವಾನ್ 'ಪರೀಕ್ಷೆಗಳನ್ನೂ ಹಿಂದಿಯಲ್ಲಿ ವಿಶಾರದ ಪರೀಕ್ಷೆಯನ್ನೂ ಪಾಸು ಮಾಡಿದರು .ಜೊತೆಗೆ ಇತಿಹಾಸ ವಿಷಯದಲ್ಲಿ 'ಇಂಟರ್ ' ಪಾಸು ಮಾಡಿಕೊಂಡರು . ಅವರ ಕನಸು ಇದ್ದದ್ದು ಕಾಲೇಜು ಕಟ್ಟೆ ಹತ್ತಬೇಕು ಎಂದು .

ಕೊನೆಗೂ ತಂದೆಯ ಒಪ್ಪಿಗೆ ಪಡೆದು ಕಾಲೇಜು ಶಿಕ್ಷಣ ಪಡೆಯಲು ಮದ್ರಾಸಿಗೆ ಪ್ರಯಾಣ . 1946ರಲ್ಲಿ ಮದ್ರಾಸ್ ಕ್ರಿಶ್ಚನ್ ಕಾಲೇಜಿಗೆ ಸೇರಿದ್ದು . ಅಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಆನರ್ಸ್ ಪದವಿ . ಅದಕ್ಕೆ ಎಂಎ ಪದವಿಯ ಅರ್ಹತೆ . ಅಲ್ಲಿ ಬಾಗಲೋಡಿ ದೇವರಾಯರ ಸಂಪರ್ಕದಿಂದ ಕುಶಿ ಅವರ ಸಾಹಿತ್ಯದ ಓದು ಇನ್ನಷ್ಟು ಬೆಳೆಯಿತು . ಡಾಸ್ಟೊವಸ್ಕಿ , ಕೋಸ್ಲರ್ , ಬಾಲ್ಝಕ್ ಮುಂತಾದವರ ಕಾದಂಬರಿಗಳ ಓದು ಅವರ ಅರಿವಿನ ವಿಸ್ತಾರವನ್ನು ಹೆಚ್ಚಿಸಿತು . ಮದ್ರಾಸಿನಲ್ಲಿ ಕುಶಿ ಅವರಿಗೆ ಗೆಳೆಯರಾಗಿ ಸಿಕ್ಕಿದ ಕನ್ನಡಿಗರು- ಕತೆಗಾರರಾಗಿದ್ದು ಮುಂದೆ ನ್ಯಾಯಾಧೀಶರಾದ ಸೇವ ನಮಿರಾಜ ಮಲ್ಲ , ಗಣಿತಶಾಸ್ತ್ರ ಅಧ್ಯಯನ ಮಾಡಿದ ಸಂಗೀತ ಪ್ರಿಯ ಜಿ ಟಿ ನಾರಾಯಣರಾಯರು

ಎಂ ಜಿ ಎಂ ಕಾಲೇಜಿನಲ್ಲಿ :

ಹರಿದಾಸ ಭಟ್ಟರು ಡಾ .ಮಾಧವ ಪೈಗಳು ಸ್ಥಾಪಿಸಿದ ಉಡುಪಿಯ ಎಂ ಜಿ ಎಂ ಕಾಲೇಜಿಗೆ ಸೇರಿದ್ದು ಆ ಕಾಲೇಜು ಸ್ಥಾಪನೆಯ ಮರುವರ್ಷ1950 ರಲ್ಲಿ ಇತಿಹಾಸ ವಿಭಾಗದಲ್ಲಿ ಪ್ರಾಧ್ಯಾಪಕನಾಗಿ. ಮುಂದೆ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ 1964ರವರೆಗೆ . ಮತ್ತೆ15 ವರ್ಷ ಪ್ರಿನ್ಸಿಪಾಲರಾಗಿ 55 ವರ್ಷ ತುಂಬಿದಾಗ 1979 ರಲ್ಲಿ ಸೇವಾನಿವೃತ್ತಿ . ಎಂ ಜಿ ಎಂ ಕಾಲೇಜಿನ ತಮ್ಮ ಸೇವಾವಧಿಯಲ್ಲಿ ಡಾ .ಮಾಧವ ಪೈಗಳು ಕೊಟ್ಟ ಪ್ರೋತ್ಸಾಹವನ್ನು ಕುಶಿ ತಮ್ಮ ಎಲ್ಲ ಬರಹಗಳಲ್ಲಿ ಮತ್ತೆ ಮತ್ತೆ ನೆನಪಿಸಿಕೊಂಡಿದ್ದಾರೆ . ಎಲ್ಲ ಸಾಹಿತ್ಯ ಕಾರ್ಯಕ್ರಮಗಳಿಗೆ ಡಾ. ಪೈ ಅವರು ಬಂದು ಭಾಗವಹಿಸುವಂತೆ ಮಾಡುತ್ತಿದ್ದದ್ದು, ಅವರ ಬಳಿಕ ಟಿ ಎ ಪೈ ಮತ್ತು ಪೈ ಬಂಧುಗಳು ತನಗೆ ಕೊಟ್ಟ ಸ್ವಾತಂತ್ರ್ಯ ಮತ್ತು ಬೆಂಬಲವನ್ನು ಸ್ಮರಿಸಿಕೊಂಡಿದ್ದಾರೆ . ಪ್ರಿನ್ಸಿಪಾಲ್ ಆಗಿ ಕುಶಿಯವರು ಸಾಹಿತ್ಯ ಉತ್ಸವಗಳ ಯುಗಕ್ಕೆ ನಾಂದಿ ಹಾಡಿದರು . ಅವುಗಳಲ್ಲಿ ಶಿಖರಪ್ರಾಯವಾದುದು ಒಂದು ಎಂ ಜಿ ಎಂ ಬೆಳ್ಳಿಹಬ್ಬ 1974ರಲ್ಲಿ . ತರುಣ ಉಪನ್ಯಾಸಕನಾಗಿ ನಾನು ಭಾಗವಹಿಸಿದ ಈ ಉತ್ಸವದಲ್ಲಿ ಕುಶಿ ಅವರ ಬಹುರೂಪಿ ಶಕ್ತಿಯನ್ನು ನಾನು ಕಂಡದ್ದು .ಐದು ದಿನಗಳ ಉತ್ಸವದಲ್ಲಿ ನಾಲ್ಕು ವಿಚಾರಗೋಷ್ಠಿಗಳು .ಕರಾವಳಿ ಕರ್ನಾಟಕದಲ್ಲಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳ ಭವಿತವ್ಯ ; ಕರ್ನಾಟಕದ ಜಾನಪದ ಅಧ್ಯಯನ ; ಕನ್ನಡ ಸಾಹಿತ್ಯ ಮತ್ತು ಸಾಮಜಿಕ ಕ್ರಾಂತಿ ; ಕರ್ನಾಟಕ ರಂಗಭೂಮಿಯ ಆಧುನಿಕ ಪ್ರವೃತ್ತಿಗಳು .ಕನ್ನಡದ ಎಲ್ಲ ಹಿರಿಯ ಮತ್ತು ತರುಣ ಸಾಹಿತಿಗಳು ಭಾಗವಹಿಸಿದ ಅಪೂರ್ವ ಸಂಗಮ ಈ ಉತ್ಸವ . ನಮ್ಮ ಜಾನಪದ ಗೋಷ್ಠಿಯಲ್ಲಿ ದೇಜಗೌ , ಗೊರೂರು , ಮೆಲ್ವಿನ್ ಹೆಲ್ ಸ್ತೀನ್ , ಗುರುರಾಜ ಭಟ್, ಜೀಶಂಪ , ಎಚ್ ಕೆ ರಂಗನಾಥ್ , ಕಂಬಾರ , ಅಮೃತ ಸೋಮೇಶ್ವರ , ಶೇಖರ ಇಡ್ಯ ,ಕುಶಿ ಮತ್ತು ನಾನು ಇದ್ದೆವು . ಹೆಚ್ಚು ಬಿಸಿಬಿಸಿ ಚರ್ಚೆ ನಡೆದದ್ದು 'ಸಾಮಾಜಿಕ ಕ್ರಾಂತಿ ' ಮತ್ತು 'ರಂಗಭೂಮಿ 'ಗೋಷ್ಠಿಗಳಲ್ಲಿ . ಶ್ರೀಕೃಷ್ಣ ಆಲನಹಳ್ಳಿ ಅವರ ಮಾತುಗಳು ಬಹಳ ಚರ್ಚೆಗೆ ಒಳಗಾದದ್ದು ನೆನಪಿದೆ . ಪ್ರತೀದಿನ ನಾಟಕ ಪ್ರದರ್ಶನಗಳ ಸುಗ್ಗಿ . ( 'ಭಾಗ್ಯದ ಬಾಗಿಲು ' ಪುಸ್ತಕದಲ್ಲಿ ಬೆಳ್ಳಿಹಬ್ಬದ ಪೂರ್ಣ ವಿವರಗಳು ಇವೆ ).

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ :

ಗೋವಿಂದ ಪೈ ಅವರ ನಿಧನದ ಬಳಿಕ ಅವರ ಅಪೂರ್ವ ಗ್ರಂಥಭಂಡಾರ ಅನಾಥವಾಗಿ ಇದ್ದಾಗ ಕುಶಿಯವರು ಪೈಯವರ ಬಂಧುಗಳಾದ ಅನಂತ ಪೈ , ತುಕಾರಾಮ ಪೈ ಅವರ ಮನವೊಲಿಸಿ 1965 ರಲ್ಲಿ ಅದನ್ನು ಎಂ ಜಿ ಎಂ ಕಾಲೇಜಿಗೆ ತಂದು ಸಂರಕ್ಷಿಸಿ ಇಟ್ಟರು .ಸುಮಾರು ಮೂವತ್ತರಷ್ಟು ಭಾಷೆಗಳಲ್ಲಿ ಇರುವ ಐದು ಸಾವಿರ ಪುಸ್ತಕಗಳ ಅಪೂರ್ವ ಭಂಡಾರವನ್ನು ಉಳಿಸಿದ ಪುಣ್ಯ ಕುಶಿ ಅವರದ್ದು .ಅದರ ಮುಂದಿನ ಹೆಜ್ಜೆಯೇ ಅದಕ್ಕಾಗಿಯೇ ಒಂದು ಸಂಸ್ಥೆ ಮತ್ತು ಕಟ್ಟಡ .ಅದೇ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಸ್ಥಾಪನೆ 1972ರಲ್ಲಿ .ಮಣಿಪಾಲ ಶಿಕ್ಷಣ ಸಂಸ್ಥೆಯ ಅಂಗವಾಗಿ ಮುಂದೆ ಅದು ಮೈಸೂರು ವಿವಿಯಿಂದ ಪಿಎಚ್ .ಡಿ .ಸಂಶೋಧನೆಯ ಕೇಂದ್ರದ ಮಾನ್ಯತೆ ಪಡೆಯಿತು . ಕನ್ನಡ ಮತ್ತು ತುಳು -ಭಾಷೆ ಸಾಹಿತ್ಯ, ಜಾನಪದ, ಇತಿಹಾಸಗಳಿಗೆ ಸಂಬಂಧಪಟ್ಟ ಸಂಶೋಧನೆ , ವಿಚಾರಸಂಕಿರಣ , ಕಮ್ಮಟ , ಪ್ರಕಟಣೆಗಳಿಂದ ಅದು ಪಡೆದಿರುವ ಮನ್ನಣೆಗೆ ಕುಶಿಯವರ ದೂರದರ್ಶಿತ್ವ ಕಾರಣ .

ತುಳು ನಿಘಂಟು ಯೋಜನೆ : ತುಳುವಿನಂತಹ ಪ್ರಾದೇಶಿಕ -ಶ್ರೀಮಂತ ಭಾಷೆಗೆ ಒಂದು ಸಮಗ್ರಸ್ವರೂಪದ ನಿಘಂಟು ಆಗಬೇಕು ಎಂದು ಕನಸು ಕಂಡ ಕುಶಿಯವರು ಅದಕ್ಕಾಗಿ ಆಫ್ರಿಕಾದ ಸೆನಗಲ್ ನಲ್ಲಿ ಪ್ರಾಧ್ಯಾಪಕರಾಗಿದ್ದ ಭಾಷಾವಿಜ್ಞಾನಿ ದಂಪತಿಗಳು ಯು ಪಿ ಉಪಾಧ್ಯಾಯ ಮತ್ತು ಸುಶೀಲಾ ಉಪಾಧ್ಯಾಯರನ್ನು ಉಡುಪಿಯ ಗೋವಿಂದ ಪೈ ಕೇಂದ್ರಕ್ಕೆ ಆಹ್ವಾನಿಸಿದರು .ಗಾಂಧಿ ಜಯಂತಿಯ ದಿನ 1979 ಅಕ್ಟೊಬರ್ 2 ರಂದು ತುಳು ನಿಘಂಟು ಯೋಜನೆಯ ಕಾರ್ಯಾರಂಭ ಆಯಿತು . ಡಾ .ಉಪಾದ್ಯಾಯ ದಂಪತಿಗಳು ತುಳು ನಿಘಂಟುವಿನ ಸಂಪಾದಕರಾಗಿ ಹಗಲಿರುಳು ತಮ್ಮ ಸೇವೆಯನ್ನು ಸಲ್ಲಿಸಿದರು .ಕುಶಿಯವರ ಅಧ್ಯಕ್ಷತೆಯ ಸಲಹಾ ಸಮಿತಿಯಲ್ಲಿ ಹಿರಿಯ ಸಾಹಿತಿಗಳು ಭಾಷಾತಜ್ಞರು -ದೇಜಗೌ , ಕಯ್ಯಾರ ಕಿಂಞಣ್ಣ ರೈ , ಏರ್ಯ ಲಕ್ಷ್ಮೀನಾರಾಯಣ ಆಳ್ವ, ಅಮೃತ ಸೋಮೇಶ್ವರ , ವೆಂಕಟರಾಜ ಪುಣಿಂಚತ್ತಾಯ , ಶ್ರೀ ರಮಣ ಆಚಾರ್ಯ ,ರಾಮಕೃಷ್ಣ ಶೆಟ್ಟಿ ಅವರ ಜೊತೆಗೆ ನಾನು ಆರಂಭದಿಂದ ಕೊನೆವರೆಗೆ ಇದ್ದೆ. 1979 ರಲ್ಲಿ ಆರಂಭವಾದ ಯೋಜನೆ 1997ರಲ್ಲಿ ಮುಕ್ತಾಯವಾಗಿ ಒಟ್ಟು ಆರು ಬೃಹತ್ ಸಂಪುಟಗಳು ಬೆಳಕು ಕಂಡವು .

1993ರಲ್ಲಿ ಗೋವಿಂದ ಪೈ ಕೇಂದ್ರದ ನಿರ್ದೇಶಕ ಜವಾಬ್ದಾರಿಯನ್ನು ಹೆರಂಜೆ ಕೃಷ್ಣ ಭಟ್ಟರಿಗೆ ಒಪ್ಪಿಸಿದ ಬಳಿಕವೂ ಕುಶಿ ಯವರು ತುಳು ನಿಘಂಟು ಕೆಲಸದಲ್ಲಿ ಸಕ್ರಿಯರಾಗಿದ್ದರು. ತುಳುವಿನಂತಹ ಪ್ರಾದೇಶಿಕ ಭಾಷೆಗೆ ಇಷ್ಟು ವ್ಯಾಪಕವಾದ ನಿಘಂಟು ರಚನೆಯಾದ ನಿದರ್ಶನ ಜಗತ್ತಿನಲ್ಲಿ ಬಹಳ ಇಲ್ಲ ಎಂದು ಜಾಗತಿಕ ನಿಘಂಟುಶಾಸ್ತ್ರಜ್ಞರು ಕೊಂಡಾಡಿದ್ದಾರೆ . ಈ ತುಳು ನಿಘಂಟು ಯೋಜನೆಗೆ ಕರ್ನಾಟಕ ಸರಕಾರದ ಅನುದಾನ ದೊರೆಯಲು ಕಾರಣಕರ್ತರಾದ ಆಗಿನ ಶಿಕ್ಷಣ ಸಚಿವ ಬಿ .ಸುಬ್ಬಯ್ಯ ಶೆಟ್ಟಿ ಮತ್ತು ಬಳಿಕ ಸಹಕರಿಸಿದ ವೀರಪ್ಪ ಮೊಯ್ಲಿ ಆದಿ ಸರಕಾರದ ವರಿಷ್ಠರಿಗೆ ಕೊನೆಯ ಸಂಪುಟದಲ್ಲಿ ಕುಶಿಯವರು ವಂದನೆ ಸಲ್ಲಿಸಿದ್ದಾರೆ .

ಯಕ್ಷಗಾನ ಕೇಂದ್ರ :

ಶಿವರಾಮ ಕಾರಂತರ ಪ್ರೇರಣೆ ಹಾಗೂ ನೇತೃತ್ವದಲ್ಲಿ ವೀರಭದ್ರ ನಾಯಕರ ಗುರುತನದಲ್ಲಿ1971 ರಲ್ಲಿ ಆರಂಭವಾದ ಯಕ್ಷಗಾನ ಶಾಲೆ ,ಮುಂದೆ ಕಾರಂತರ ಯಕ್ಷಗಾನ ಬ್ಯಾಲೆಯ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಪ್ರದರ್ಶನಗಳಿಂದ ಜಾಗತಿಕ ಯಕ್ಷಗಾನ ಕೇಂದ್ರವಾಗಿ ಖ್ಯಾತಿ ಪಡೆಯಿತು .ಕುಶಿಯವರು ಯಕ್ಷಗಾನ ಮೇಳವನ್ನು ಕಟ್ಟಿಕೊಂಡು ಜಗತ್ತಿನ ಅನೇಕ ದೇಶಗಳಲ್ಲಿ ಪ್ರದರ್ಶನ ಮಾಡಿಸುವುದರ ಜೊತೆಗೆ ಅದರ ವೈಶಿಷ್ಟ್ಯಗಳನ್ನುಕುರಿತು ಉಪನ್ಯಾಸಗಳನ್ನು ಮಾಡಿದ ಕಾರಣ ಮಾರ್ತಾ ಆಶ್ಚನ್,ಕತ್ರಿನ್ ಬಿಂದರ್ ನಂತಹ ಮಹಿಳೆಯರು ಬಂದು ಅಧ್ಯಯನ ಮಾಡಿ ಪಿಎಚ್ ಡಿ ಪದವಿಯನ್ನು ಪಡೆದಿದ್ದಾರೆ . ಯಕ್ಷಗಾನ ತರಬೇತಿ,, ಕಮ್ಮಟ,ಪ್ರದರ್ಶನಗಳ ಮೂಲಕ ' ಯಕ್ಷಗಾನ ಕೇಂದ್ರ'ವು ಮಣಿಪಾಲ ಶಿಕ್ಷಣ ಸಂಸ್ಥೆಯ ಅನನ್ಯ ಅಂಗವಾಗಿದೆ.

ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರ(ಆರ್ ಆರ್ ಸಿ ):

ತಮಗೆ ದೊರೆತ ಸಂಪರ್ಕಗಳ ಮೂಲಕ ಸಂಸ್ಥೆಗಳನ್ನು ಕಟ್ಟಿದ ಸಾಂಸ್ಕೃತಿಕ ಮಿಷನರಿ ಕುಶಿಯವರು ಆಕಸ್ಮಿಕವಾಗಿ ಒದಗಿದ ಫೋರ್ಡ್ ಫೌಂಡೇಶನ್ ಸಂಪರ್ಕದಿಂದ 1984 ರಲ್ಲಿ ಆರ್ ಆರ್ ಸಿ ಸಂಸ್ಥೆಯನ್ನು ಎಂ ಜಿ ಎಂ ಆವರಣದಲ್ಲಿ ಸ್ಥಾಪಿಸಿದರು . .ಕರ್ನಾಟಕ ಜಾನಪದದ ಬಹುರೂಪಗಳ ದಾಖಲಾತಿ ಮತ್ತು ಸಂರಕ್ಷಣೆಯ ಜೊತೆಗೆ , ಆರ್ ಆರ್ ಸಿ ನಡೆಸಿದ ಅಮೇರಿಕನ್ ಇಂಡಿಯನ್ ಅಂತಾರಾಷ್ಟ್ರೀಯ ಜಾನಪದ ಕಮ್ಮಟಗಳು( 1988-89) ಮತ್ತು 'ಫಿನ್ನಿಷ್ -ಇಂಡಿಯನ್ ಜಾನಪದ ಕ್ಷೆತ್ರಕಾರ್ಯ ಹಾಗೂ ತರಬೇತಿ ಶಿಬಿರ '(1989) : ಈ ಎರಡು ಜಾಗತಿಕ ವಿದ್ಯಮಾನಗಳು ಭಾರತದ ಜಾನಪದ ಕ್ಷೇತ್ರದಲ್ಲಿ ಚಾರಿತ್ರಿಕ ದಾಖಲೆಗಳಾದುವು . ಈ ಎರಡೂ ಅಪೂರ್ವ ಜಾನಪದ ವಿದ್ಯಮಾನಗಳಲ್ಲಿ ಕುಶಿಯವರ ಸಂಘಟನಾ ಶಕ್ತಿ , ಸಂಪರ್ಕಸೇತುತನ ಅದ್ಭುತವಾಗಿ ಅನಾವರಣಗೊಂಡದ್ದನ್ನು ನಾನು ಅಹೋರಾತ್ರಿ ಕಂಡವನು . ಅಂತಾರಾಷ್ಟ್ರೀಯ ಕಮ್ಮಟಗಳ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿಯನ್ನು ಕುಶಿ ನನ್ನ ಮೇಲೆ ಹೊರಿಸಿದ್ದರು . ಮತ್ತೆ ಕಮ್ಮಟಗಳಲ್ಲಿ ಅಧ್ಯಾಪಕನಾಗಿ ಪಾಲುಗೊಳ್ಳುವ ಅವಕಾಶ ಕಲ್ಪಿಸಿದ್ದರು . ಜಾಗತಿಕ ಜಾನಪದ ವಿದ್ವಾಂಸರಾದ ಅಲನ್ ದಂಡಸ್ , ಎ ಕೆ ರಾಮಾನುಜನ್ , ಸ್ಟುವರ್ಟ್ ಬ್ಲೇಕ್ ಬರ್ನ್ , ಪೀಟರ್ ಕ್ಲಾಸ್ , ಫ್ರಾಂಕ್ ಕೊರೊಮ್,ಬ್ರೆಂಡಾ ಬೆಕ್ , ಫಿಲಿಪ್ ಝರೇಲಿಯರ ಜೊತೆಗೆ ಕರ್ನಾಟಕದ ಜೀ ಶಂ ಪರಮಶಿವಯ್ಯ , ಬಿ ವಿ ಕಾರಂತ , ಕೆವಿ ಸುಬ್ಬಣ್ಣರು ಉಪನ್ಯಾಸಗಳನ್ನು ಕೊಟ್ಟ ನಾಲ್ಕು ಹಂತಗಳ ಕಮ್ಮಟಗಳು . ಅದರಲ್ಲಿ ತರಬೇತಿ ಹೊಂದಿದವರು ಇವತ್ತು ಕರ್ನಾಟಕದ ಹಿರಿಯ ಜಾನಪದ ವಿದ್ವಾಂಸರು ಆಗಿದ್ದಾರೆ .

ಫಿನ್ಲೆಂಡ್ ನ ತುರ್ಕು ವಿವಿಯ ಜಾನಪದ ಪ್ರಾಧ್ಯಾಪಕ ಲೌರಿ ಹಾಂಕೊರನ್ನು ಕುಶಿ 1985ರಲ್ಲಿ ಉಡುಪಿಗೆ ಆಹ್ವಾನಿಸಿ , ಫಿನ್ನಿಷ್ ರಾಷ್ಟೀಯ ಮಹಾಕಾವ್ಯ ಕಲೆವಲ ದ 150 ನೆಯ ವರ್ಷಾಚರಣೆಯನ್ನು ಮಾಡಿದರು .ಇದರಿಂದ ಪ್ರಭಾವಿತರಾಗಿ ಹಾಂಕೊ ಅವರು ಆರ್ ಆರ್ ಸಿ ಜೊತೆಗೆ ವೀರೇಂದ್ರ ಹೆಗ್ಗಡೆಯವರ ಆಶ್ರಯ ಮತ್ತು ಸಹಕಾರದೊಂದಿಗೆ ಧರ್ಮಸ್ಥಳ ಪರಿಸರದಲ್ಲಿ 'ಜಾನಪದ ಕ್ಷೇತ್ರಕಾರ್ಯ ಮತ್ತು ತರಬೇತಿ ಶಿಬಿರ 'ವನ್ನು1989ರಲ್ಲಿ ನಡೆಸಿದರು . ಫಿನ್ಲೆಂಡ್ ಮತ್ತು ನಾರ್ವೆಯ ವಿದ್ವಾಂಸರ ಜೊತೆಗೆ ನಮ್ಮ ಜಾನಪದ ವಿದ್ವಾಂಸರು ಮತ್ತು ತರುಣರು ಜೊತೆಸೇರಿ ಮಾಡಿದ ಕ್ಷೇತ್ರಕಾರ್ಯ ಎಲ್ಲರ ಪಾಲಿಗೆ ಒಂದು ಅಪೂರ್ವ ಅನುಭವ .ಕುಶಿ ಅವರು ಕೆಮರಾವನ್ನು ಹೆಗಲಿಗೆ ನೇತುಹಾಕಿ ನಮ್ಮ ಜೊತೆಗೆ ಕ್ಷೇತ್ರಕಾರ್ಯ ಮಾಡಿದ್ದು ಮರೆಯಲಾಗದ ನೆನಪು . ಹಾಂಕೊ ಅವರು ಮುಂದೆ ಸಿರಿ ಕಾವ್ಯ ದಾಖಲಾತಿ ಯೋಜನೆ ಮಾಡಲು ಈ ತರಬೇತಿ ಶಿಬಿರ ನಾಂದಿ ಆಯಿತು . ಸಿರಿ ಯೋಜನೆಯಲ್ಲಿ ಹಾಂಕೊ ಅವರ ಜೊತೆಗೆ ನಾನು ಮತ್ತು ಚಿನ್ನಪ್ಪ ಗೌಡರು ಸೇರಿಕೊಂಡು ಎಂಟು ವರ್ಷಗಳ ಕಾಲ ಕೆಲಸಮಾಡುವಲ್ಲಿ ಕುಶಿಯವರು ಕೊಟ್ಟ ಪ್ರೇರಣೆ ಪ್ರೋತ್ಸಾಹ , ಆರ್ ‌ಆರ್ ಸಿ ಯ‌ ಸಹಯೋಗ ವಿಶೇಷವಾದುದು .

ಕುಶಿಯವರ ಸಾಹಿತ್ಯ :

ಕುಶಿಯವರು ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಓದಿನ ಕಾರಣವಾಗಿ ಕನ್ನಡದಲ್ಲಿ ಬರವಣಿಗೆಯನ್ನು ಆರಂಭಿಸಿದರು . ಅವರ ಮೊದಲನೆಯ ಪುಸ್ತಕ - ಪ್ರೇಮಚಂದ್ ರ 'ಗಬನ್ 'ಕಾದಂಬರಿಯ ಅನುವಾದ 'ರಮಾನಾಥ ' ಹೆಸರಿನಲ್ಲಿ 1943ರಲ್ಲಿ ಧಾರವಾಡದಲ್ಲಿ ಪ್ರಕಟವಾಯಿತು . ಅವರ ಆರಂಭದ ಕವನಗಳು ಪ್ರಕಟವಾದದ್ದು ಮಾಸ್ತಿ ಅವರ 'ಜೀವನ ' , ಉಡುಪಿಯ ಹೊನ್ನಯ್ಯ ಶೆಟ್ಟರ 'ನವಯುಗ ' ಮತ್ತು 'ಅಂತರಂಗ ' ಪತ್ರಿಕೆಗಳಲ್ಲಿ . 'ಅಂತರಂಗ 'ಪತ್ರಿಕೆಯು 48 ಪುಟಗಳ ಪುಸ್ತಕಗಳನ್ನು ಹೊರಡಿಸಿದಾಗ ಕುಶಿಯವರ ಅನೇಕ ಕಥೆ -ಕವನಗಳು,ಅನುವಾದಗಳು ಪುಸ್ತಕರೂಪದಲ್ಲಿ ಪ್ರಕಟವಾದುವು : 'ಯುಗವಾಣಿ 'ಎಂಬ ಕವನಸಂಕಲನ ( 1949). ' ಕಾಲವೇ ಬದಲಾಗಿದೆ '(ಕಥೆ); 'ವರ್ತಮಾನ ಕಾಲದ ನಾಲ್ವರು ಮಹಾನುಭಾವರು ( ಜೀವನಚರಿತ್ರೆ) .ಅನುವಾದ‌ ಕೃತಿಗಳು : ಸಿಲೋನೆಯ ' ಫಂಟಮಾರಾ ( 1950).' ಜಾನ್ ಡ್ಯೂಯಿಯ .' ಸ್ವಾತಂತ್ರ್ಯ ಮತ್ತು ಸಂಸ್ಕೃತಿ ', ಆರ್ಥರ್ ಕೊಸ್ಲರ್ ನ 'ನಡುಹಗಲಲ್ಲಿ ಕಗ್ಗತ್ತಲೆ '; 'ಅಮೇರಿಕಾದ ಆರು ಕತೆಗಳು '.

'ಫಂಟಮಾರಾ ' ಇಟಲಿಯಲ್ಲಿ ಫ್ಯಾಸಿಸ್ಟ್ ಕಾಲಘಟ್ಟದಲ್ಲಿ ನಡೆದ ರೈತಬಂಡಾಯದ ಕಾದಂಬರಿ . ಇದರ ಲೇಖಕ ಇನ್ಸಾತಿಯೋ ಸಿಲೋನೆ ಮೊದಲು ಕಮ್ಯುನಿಸ್ಟ್ ಆಗಿದ್ದು ,ಬಳಿಕ ಮುಸೊಲಿನಿಯ ಫ್ಯಾಸಿಸ್ಟ್ ರಾಜಕೀಯವನ್ನು ವಿರೋಧಿಸಿ ದೇಶಬಿಟ್ಟು ಹೋದವನು . ಕರ್ನಾಟಕದ ನರಗುಂದದ ಬಂಡಾಯದ ವೇಳೆಗೆ ಕುಶಿ ಅವರ 'ಫಂಟಮಾರಾ ' ಅನುವಾದಕ್ಕೆ ಬೇಡಿಕೆ ಬಂತು . ಈ ಕೃತಿ ಪ್ರಕಟವಾದ ಮೂರು ದಶಕಗಳ ಬಳಿಕ 'ಸಮುದಾಯ 'ಜಾಥಾದವರು ಇದನ್ನು ತಮ್ಮ ಜೊತೆಗೆ ಕೊಂಡುಹೋಗಿ ಅಲ್ಲಲ್ಲಿ ಮಾರಿದರಂತೆ .

ಕುಶಿಯವರ ಸ್ವತಂತ್ರ ಕೃತಿಗಳಲ್ಲಿ ಮುಖ್ಯವಾದವು ಅವರ ಪ್ರವಾಸಬರಹಗಳು ಮತ್ತು ಅಂಕಣ ಸಾಹಿತ್ಯ . ಪುಸ್ತಕಗಳ ಓದು ಮತ್ತು ಪ್ರವಾಸ ಅವರ ಎರಡು ಪ್ರಿಯವಾದ ಹವ್ಯಾಸಗಳು . ಇತಾಲಿಯಾ ನಾನು ಕಂಡಂತೆ , ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯಾ , ರಂಗಾಯನ -ಅವರ ಪ್ರವಾಸಸಾಹಿತ್ಯ ಕೃತಿಗಳು .ಉದಯವಾಣಿಯಲ್ಲಿ ಅವರು ಬರೆಯುತ್ತಿದ್ದ 'ಲೋಕಾಭಿರಾಮ 'ಹೆಸರಿನ ಅಂಕಣಗಳ ಆರು ಸಂಪುಟಗಳು ಪ್ರಕಟವಾಗಿವೆ . ಅವರ ಅಂಕಣಬರಹಗಳಲ್ಲಿ ಮಾಹಿತಿ , ನಿರ್ದಾಕ್ಷಿಣ್ಯ ಅಭಿಪ್ರಾಯ , ವಿಡಂಬನೆ, ಕಾವ್ಯದ ಸ್ಪರ್ಶ ಇರುತ್ತದೆ . ಕುಶಿ ಅವರು ಬರೆದ ಜೀವನಚರಿತ್ರೆಯ ಮಹತ್ವದ ಗ್ರಂಥ 'ಕಟ್ಟಿಂಗೇರಿ ಕೃಷ್ಣ ಹೆಬ್ಬಾರ -ಕಲೆ ಮತ್ತು ಬದುಕು ' ಒಂದು ಕ್ಲಾಸಿಕ್ . ಅದಕ್ಕೆ ಸಾಕಷ್ಟು ಪುರಸ್ಕಾರಗಳು ದೊರೆತಿವೆ . ಅವರು ಸಂಪಾದಿಸಿದ ಗ್ರಂಥಗಳಲ್ಲಿ ಮುಖ್ಯವಾದ ಕೆಲವು : ಕಾರಂತ ಅರುವತ್ತು ,ಕಾರಂತ ಪ್ರಪಂಚ, ಅಭಿನಂದನ , ಅಭಿವ್ಯಕ್ತಿ ( ಗೋಪಾಲಕೃಷ್ಣ ಅಡಿಗರ ಸಮ್ಮಾನ ಸಂಸ್ಮರಣೆ ), ಮಾತೆಲ್ಲ ಜ್ಯೋತಿ ( ಬೇಂದ್ರೆ ಉಪನ್ಯಾಸಗಳು ) , ಭಾಗ್ಯದ ಬಾಗಿಲು , ಸ್ವಾತಂತ್ರ್ಯಪೂರ್ವ ತುಳು ಸಾಹಿತ್ಯ . ಕುಶಿಯವರ ಸ್ವತಂತ್ರ , ಅನುವಾದಿತ ,ಸಂಪಾದಿತ ಪುಸ್ತಕಗಳ ಒಟ್ಟು ಸಂಖ್ಯೆ ಸುಮಾರು 75 .

ಕುಶಿ ಹರಿದಾಸ ಭಟ್ಟರು ಬದುಕಿನ ಉದ್ದಕ್ಕೂ ತೆರೆದುಕೊಂಡದ್ದು ಜಾಗತಿಕ ಸಾಹಿತ್ಯದ ಓದಿನ ಮೂಲಕ ಸರ್ವಸಮಾನತೆಯ ಜೀವನದೃಷ್ಟಿಗೆ . 1949ರಲ್ಲಿ ಪ್ರಕಟವಾದ ಅವರ 'ಯುಗವಾಣಿ 'ಸಂಕಲನದ ಕವನಗಳಲ್ಲೇ ಇದು ಮೊಳಕೆಯೊಡೆದಿದೆ . ಅಲ್ಲಿನ ಕೆಲವು ಕವನಗಳು - 'ದುಡಿಮೆಯೇ ದೇವರು'. , 'ಜಾತಿ ಬಂಧನದಾಚೆ ', 'ಜಾತಿಯೊಂದೇ ' . 'ಜಾತಿ ಬಂಧನಗಳಾಚೆ ನಡೆಯೋಣ ಬಾ , ಎದೆಗಾರಿಕೆಯ ತೋರಿ ಮೀರೋಣ ಬಾ ' , ' ಜಗದಗಲ ಇಹುದು ಒಂದೇ ಜಾತಿ , ಆದಿಕಾಲದ ಬಂದ ಮನುಜ ಜಾತಿ ' . ಇವು ಆ ಕವನಗಳ ಕೆಲವು ಸಾಲುಗಳು. ಆರಂಭಕಾಲದ ಅವರ ಈ ಧೋರಣೆ ಮುಂದೆ ಸಂಸ್ಥೆಗಳನ್ನು ಕಟ್ಟುವಲ್ಲಿ ಸಕಾರಾತ್ಮಕವಾಗಿ ಕೆಲಸಮಾಡಿದೆ . ತುಳುಭಾಷೆಗೆ ಒಂದು ನಿಘಂಟನ್ನು ಸಿದ್ಧಪಡಿಸಿದುದು , ಜನಪದ ಕಲಾವಿದರ ಪಾಡ್ದನ , ಕತೆ , ಹಾಡುಗಳನ್ನು ಹಾಗೂ ಜನಪದ ಆರಾಧನೆಗಳನ್ನು ದೃಶ್ಯ ಶ್ರವ್ಯ ರೂಪಗಳಲ್ಲಿ ದಾಖಲಾತಿ ಮಾಡಿ ಸಂರಕ್ಷಿಸಿದುದು , ಸ್ಥಳೀಯ ಸಂಸ್ಕೃತಿಯ ಮಹತ್ವವನ್ನು ಜಾಗತಿಕ ವಿದ್ವಾಂಸರ ಗಮನಕ್ಕೆ ತಂದದ್ದು ,ಹಿರಿಯ ಸಾಹಿತಿಗಳನ್ನು ಮತ್ತು ಜಾನಪದ ಕಲಾವಿದರನ್ನು ಒಂದುಗೂಡಿಸಿದುದು: ಹೀಗೆ ಸದಾ ಹೊಸತನ್ನು ಕಟ್ಟುತ್ತಾ ಬಂದ 'ಕುಶಿ ' ಎನ್ನುವ ಹೆಸರು ಕರ್ನಾಟಕ ಮರೆಯಲಾರದ ಮರೆಯಬಾರದ ಒಂದು ಸಾಂಸ್ಕೃತಿಕ ಚಹರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT