‘ಚಿನ್ನಿಕಾಯಿ ಸಿಕ್ತಾ?’.

‘ಇಲ್ಲ... ಆಚೆ ಮನೆ ಜಯಕ್ಕಂಗೆ ಹೇಳಿನಿ. ಹ್ವಾದ್ವರ್ಷ ತಿಂಗ್ಳ್ ಮುಂಚೆ ಹೇಳಿದ್ರೂ ಸಿಗ್ಲಿಲ್ಲ. ಈ ವರ್ಷಾದ್ರೂ ತೆಗ್ದಿಡು ಅಂತ. ನೋಡ್ಬೇಕು, ಈ ಸರಿನಾದ್ರೂ ಸಿಗ್ತದೋ, ಇಲ್ಲ ಅದ್ನೂ ಯಾರಾದ್ರೂ ಕಿತ್ಕಂಡು ಹೋಗ್ತಾರೋ ಗೊತ್ತಿಲ್ಲ. ನಿಂಗೆ?’

‘ಈ ಸರಿ ನಮ್ಮನೆಯವ್ರಿಗೇ ಹೇಳ್ಬಿಟ್ಟಿನಿ. ಎಲ್ಲಿಂದನಾದ್ರೂ ಆಯ್ತು ತಗಬಾ. ತಂದ್ರೆ ಅಷ್ಟೇ ಕಡುಬು ಕಟ್ಟದು ಅಂತ. ವರ್ಸಾ ವರ್ಸಾ ನಾವೆಲ್ಲಿಂದ ಹೊಂಚ್ಕಂಡು ಹೋಗಿ ತಗಬರದು ಬಿಡು...’

‘ಭೂಮಿ ಹುಣ್ಣಿಮೆ’ ಇನ್ನೂ ವಾರ, ಹದಿನೈದು ದಿನ ಇರುವಾಗಲೇ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಚಿನ್ನಿಕಾಯಿಗೆ (ಸಿಹಿಗುಂಬಳ) ಹೀಗೆ ‘ಮುಂಗಡ ಬುಕಿಂಗ್’ ಶುರುವಾಗುತ್ತದೆ. ಹುಣ್ಣಿಮೆ ದಿನ ಎಲ್ಲರ ಮನೆಯಲ್ಲೂ ಚಿನ್ನಿಕಾಯಿಯಿಂದ ಮಾಡಿದ ‘ಕಡುಬು’ ಘಮಗುಡಲೇ ಬೇಕು. ಏಕೆಂದರೆ ಅದು ‘ಭೂಮಿತಾಯಿ’ಯ ಇಷ್ಟದ ಖಾದ್ಯವಂತೆ! ಈ ಕಡುಬಿನ ತಯಾರಿಗಾಗಿ, ಕುಂಬಳಬಳ್ಳಿ ಇದ್ದವರ ಮನೆಗೆ ಹದಿನೈದು ದಿನ, ತಿಂಗಳ ಮುಂಚಿತವಾಗೇ ‘ಆರ್ಡರ್’ಗಳು ಬರುತ್ತವೆ. ಎಲ್ಲೂ ಸಿಗದಿದ್ದರೆ ಹಬ್ಬದ ಹಿಂದಿನ ದಿನ ಕುಂಬಳಕಾಯಿಗಾಗಿ ಅಲೆದಾಟ ಶುರುವಾಗುತ್ತದೆ.

ಮಳೆಗಾಲ ಕೊನೆಗೊಳ್ಳುವ, ಚಳಿಗಾಲದ ಶುರುವಿನ ದಿನಗಳಲ್ಲಿ ಬರುವ ‘ಭೂಮಿ ಹುಣ್ಣಿಮೆ’ ಹಸಿರುಟ್ಟ ಭೂರಮೆಗೆ ಸೀಮಂತ ಮಾಡುವ ಹಬ್ಬ. ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಹಾಗೂ ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಸೀಮಂತ ಕಾರ್ಯದ ಸಂಭ್ರಮ ಮೇಳೈಸಿರುತ್ತದೆ. ಪ್ರಕೃತಿಯೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುವ ರೈತರು ಈ ಹಬ್ಬದ ಮೂಲಕ ನಿಸರ್ಗ ಪ್ರೀತಿ ಸಾರುತ್ತಾರೆ. ಮಲೆನಾಡಿನ ಭಾಗದಲ್ಲಿ ಭೂಮಣ್ಣಿ ಹಬ್ಬ, ಭೂಮಿ ಹುಣ್ಣಿಮೆ, ಭೂಮ್ತ್ಯವ್ವನ ಹಬ್ಬವೆಂದು ಜನಜನಿತ
ವಾಗಿದ್ದರೆ, ಉತ್ತರ ಕರ್ನಾಟಕದ ಮಂದಿಗೆ ಇದು ಶೀಗೆ ಹಬ್ಬ, ಸೀಗೆ ಹುಣ್ಣಿಮೆ. ಮುಂಗಾರಿನಲ್ಲಿ ಬಿತ್ತಿರುವ ಬೀಜ ಹೊಡೆ ಹಾಯುವ ಸಮಯದಲ್ಲಿ ಭೂಮಿತಾಯಿಯನ್ನು ತುಂಬು ಗರ್ಭಿಣಿ ಎಂದು ಭಾವಿಸಿ, ಆಕೆಯ ಬಯಕೆಯನ್ನು ಈಡೇರಿಸಲು ಅಂದು ಬಗೆಬಗೆ ತಿನಿಸುಗಳು ತಯಾರಾಗುತ್ತವೆ.

ಚಿನ್ನಿಕಾಯಿ ಕಡುಬು, ಕರಿಗಡುಬು, ಬಳ್ಳಿ ಹುಗ್ಗಿ, ಅಕ್ಕಿ ಹುಗ್ಗಿ, ಕೇಸರಿಬಾತ್, ಹೆಸರುಕಾಳು ಉಂಡೆ, ಮೊಸರು ಬುತ್ತಿ, ಕರಿ ಬುತ್ತಿ, ಬಿಳಿ ಬುತ್ತಿ, ಉದ್ದಿನ ವಡೆ, ಕಜ್ಜಾಯ, ಪಾಯಸ, ರೊಟ್ಟಿ, ಅನ್ನ– ಸಾಂಬಾರ್, ಮೂರ್ನಾಲ್ಕು ಬಗೆಯ ಪಲ್ಯಗಳು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ– ಸಂಡಿಗೆ; ಮಾಂಸಾಹಾರ ಸವಿಯುವವರ ಮನೆಗಳಲ್ಲಿ ಇವುಗಳ ಜೊತೆಗೆ ಮೀನಿನ ಸಾರು, ಕೋಳಿಯಿಂದ ಮಾಡಿದ ಖಾದ್ಯಗಳೂ ನೈವೇದ್ಯಕ್ಕೆ ಅಣಿಯಾಗುತ್ತವೆ.

ಇವುಗಳಲ್ಲಿ ಯಾವುದು ತಪ್ಪಿದರೂ ಅಭ್ಯಂತರ ಇಲ್ಲ, ಆದರೆ ಕುಂಬಳಕಾಯಿ ಕಡುಬಿನ ಹಾಜರಿ ಇರಲೇಬೇಕು. ಅದಿಲ್ಲದಿದ್ದರೆ ಭೂತಾಯಿಯ ಸೀಮಂತ ಕಾರ್ಯ ಪೂರ್ಣಗೊಳ್ಳದು ಎನ್ನುವ ಭಾವನೆ ಇದೆ. ಶಿವಮೊಗ್ಗದ ಶಿಕಾರಿಪುರ, ಸೊರಬ ಭಾಗದಲ್ಲಂತೂ ಈ ಕಡುಬಿನ ನೈವೇದ್ಯ ಕಡ್ಡಾಯ. ನೈವೇದ್ಯಕ್ಕೆ ಇರಿಸಿದ ಕಡುಬನ್ನು ಪೂಜೆಯೆಲ್ಲ ಸಂಪನ್ನವಾದ ಬಳಿಕ ಭೂಮಿಯಲ್ಲಿ ಗುಂಡಿ ತೆಗೆದು ಹುಗಿಯುತ್ತಾರೆ. ಅದು ಎಷ್ಟು ದಿನಗಳಾದರೂ ಕೆಡದೆ ಹಾಗೇ ಇರುತ್ತದೆ ಎನ್ನುವ ನಂಬಿಕೆಯೊಂದು ಈ ಭಾಗದಲ್ಲಿದೆ.

ಮನೆಯ ಹಿಂದಿನ ತಿಪ್ಪೆಯಲ್ಲೋ ಗದ್ದೆಯಲ್ಲೋ ಹುಟ್ಟಿ ಬೆಳೆಯುವ ಕುಂಬಳಕಾಯಿ ಬಳ್ಳಿಗೆ ಆರೈಕೆಯ ಅಗತ್ಯವಿಲ್ಲ. ಆದರೆ, ಕಾಯಿ ಬಲಿತ ನಂತರ ಅದನ್ನು ಕಾಪಿಟ್ಟುಕೊಳ್ಳುವುದೇ ಸವಾಲು. ಹಿಂದೆಲ್ಲ, ಬಳ್ಳಿಯಲ್ಲಿನ ಕುಂಬಳಕಾಯಿಗಳು ರಾತ್ರೋರಾತ್ರಿ ಮಾಯವಾಗುತ್ತಿದ್ದವು. ಇಡೀ ಊರಿಗೆ ಅಗತ್ಯವಿರುವಷ್ಟು ಕುಂಬಳಕಾಯಿ ಪೂರೈಕೆ ಆಗ ಇರುತ್ತಿರಲಿಲ್ಲ. ಈಗಾದರೆ ಮಾರುಕಟ್ಟೆಯಲ್ಲಿ ಕುಂಬಳಕಾಯಿ ಸಿಗುತ್ತದೆ. ಗ್ರಾಮೀಣ ಭಾಗದಲ್ಲಷ್ಟೇ ಈ ಚಿನ್ನಿಕಾಯಿ ಸಿಗುತ್ತಿತ್ತು. ಬಳ್ಳಿ ಹೂಬಿಟ್ಟು, ಕಾಯಿಯು ಹಿಡಿಯಷ್ಟು ದಪ್ಪವಾಗುತ್ತಿದ್ದಂತೆ ‘ಮುಂಗಡ ಬುಕಿಂಗ್’ ಶುರುವಾಗುತ್ತಿತ್ತು. ದೊಡ್ಡ ಎಲೆಗಳ ಬಳ್ಳಿಯ ಸಂದಿನಲ್ಲಿ ಯಾರಿಗೂ ಕಾಣದಂತೆ ಕಾಯಿಯನ್ನು ಮರೆಮಾಚಲಾಗುತ್ತಿತ್ತು. ಆದರೂ ಬಳ್ಳಿಯಿಂದ ಕುಂಬಳಕಾಯಿ ಮಾಯವಾಗಿರುತ್ತಿತ್ತು. ಎಷ್ಟೋ ಬಾರಿ ಹಿತ್ತಲಲ್ಲಿ ಬಳ್ಳಿ ಇದ್ದರೂ ಅದರ ಮಾಲೀಕರಿಗೇ ಒಂದು ಕಾಯಿಯೂ ದಕ್ಕದ ದೌರ್ಭಾಗ್ಯ ಒದಗುತ್ತಿತ್ತು. ಅಷ್ಟರಮಟ್ಟಿಗೆ ಈ ಕುಂಬಳಕಾಯಿಗೆ ಬೇಡಿಕೆ ಇರುತ್ತಿತ್ತು. ಕುಂಬಳಕಾಯಿ ಸಿಕ್ಕ ಬಳಿಕ ಕಡುಬಿನ ತಯಾರಿ ಶುರುವಾಗುತ್ತಿತ್ತು. ಗದ್ದೆ, ತೋಟಗಳಲ್ಲಿ ಸಿಗುತ್ತಿದ್ದ ಅರಸಿನದ ಎಲೆಗಳನ್ನು ತಂದು, ಅವಕ್ಕೆ ನೀರಿನಲ್ಲಿ ಮಜ್ಜನ ಮಾಡಿಸಿದರೆಂದರೆ ಹುಣ್ಣಿಮೆ ಹಿಂದಿನ ದಿನದ ಹಬ್ಬದ ತಯಾರಿ ಚುರುಕುಗೊಳ್ಳುತ್ತಿತ್ತು.

ಅಕ್ಕಿ ಹುರಿದು, ಬೀಸುವ ಕಲ್ಲಿನಲ್ಲಿ ರವೆ ಮಾಡಿ, ಅದನ್ನು ಸಾಣಿಸಿ, ಅದಕ್ಕೊಂದಿಷ್ಟು ಗೋಧಿ ರವೆ (ಕಾಲು ಭಾಗದಷ್ಟು) ಬೆರೆಸಿ ಬದಿಗಿಡುತ್ತಿದ್ದರು. ಕುಂಬಳಕಾಯಿಯ ದಪ್ಪ ಸಿಪ್ಪೆಯನ್ನು ಹೆರೆದು ತೆಗೆದು ತುರಿಯಬೇಕು. ಈ ತುರಿಗೆ ಹುರಿದು ಸಿದ್ಧಪಡಿಸಿದ ರವೆ, ಕರಿಎಳ್ಳು, ಏಲಕ್ಕಿ–ಶುಂಠಿ ಪುಡಿ, ರುಚಿಗೆ ತಕ್ಕಷ್ಟು ಬೆಲ್ಲ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ರವೆ ಅರಳಿಕೊಳ್ಳಲು ಅರ್ಧ ಗಂಟೆ ಹಾಗೇ ಬಿಡಬೇಕು. ಬಳಿಕ, ತೊಳೆದಿಟ್ಟ ಅರಸಿನದ ಎಲೆಯನ್ನು ಬಟ್ಟೆಯಲ್ಲಿ ಒರೆಸಿಕೊಂಡು, ಎರಡು ಎಲೆಗಳನ್ನು ಪ್ಲಸ್ ಚಿಹ್ನೆಯ ರೀತಿ ಇಟ್ಟು, ಮಧ್ಯಕ್ಕೆ ಮಿಶ್ರಣ ಇಟ್ಟು ನಾಲ್ಕೂ ಭಾಗದಿಂದ ಮಡಚಬೇಕು. ಹೀಗೆ ಮಿಶ್ರಣ ಖಾಲಿಯಾಗುವವರೆಗೂ ಎಲೆಗಳನ್ನು ಬಳಸಿ ಕಡುಬು ಕಟ್ಟಬೇಕು. ಅವುಗಳನ್ನು ಇಡ್ಲಿ ಪಾತ್ರೆ ಅಥವಾ ದಪ್ಪ ತಳದ ಪಾತ್ರೆಯಲ್ಲಿ ಕೆಳಕ್ಕೆ ನೀರು ಹಾಕಿ, ಮಧ್ಯಕ್ಕೆ ಚಿಬ್ಬಲ ಅಥವಾ ತೂತು ಇರುವ ತಟ್ಟೆ ಇಟ್ಟು ಅದರ ಮೇಲೆ ಕಡುಬುಗಳನ್ನು ಇಟ್ಟು 40ರಿಂದ 50 ನಿಮಿಷ ಬೇಯಿಸಬೇಕು. ಕಡುಬು ಬೆಂದಿರುವ ಖಾತರಿಗೆ ಕೆಲವರು ಒಂದು ಚಿಕ್ಕ ಬಟ್ಟಲಿಗೆ ಅಕ್ಕಿ ಹಾಗೂ ನೀರು ಹಾಕಿ ಕಡುಬಿನ ಮೇಲ್ಭಾಗದಲ್ಲಿ ಇಡುತ್ತಾರೆ. ಅಕ್ಕಿ ಬೆಂದು ಚೆನ್ನಾಗಿ ಅನ್ನ ಆಗಿದ್ದರೆ ಕಡುಬು ಬೆಂದಿದೆಯೆಂಬ ಖಾತರಿ. ಅರಸಿನದೆಲೆ, ಕಡುಬಿನ ಘಮ ಮನೆ ತುಂಬಾ ವ್ಯಾಪಿಸುತ್ತಿತ್ತು. ಹಬೆಯಲ್ಲಿ ಬೇಯುವ ಕಡುಬು ಸ್ವಾದಿಷ್ಟ ಹಾಗೂ ಪೌಷ್ಟಿಕಾಂಶಯುಕ್ತ ಖಾದ್ಯ. ಭೂಮಿ ಹುಣ್ಣಿಮೆ ದಿನ ಇದನ್ನು ಸವಿಯಲೆಂದೇ ಮನೆಮಂದಿಯೆಲ್ಲ ತುದಿಗಾಲಲ್ಲಿ ನಿಂತಿರುತ್ತಾರೆ.

ಕುಂಬಳಕಾಯಿಯು ಹೇರಳ ಪೌಷ್ಟಿಕಾಂಶದ ಕಾರಣಕ್ಕೆ ಈಗ ಬಹಳಷ್ಟು ಖ್ಯಾತಿ ಪಡೆದಿದೆ. ಗದ್ದೆಯಲ್ಲಿ ಇದನ್ನು ಬೆಳೆದು ರಾಜ್ಯದಿಂದ ರಾಜ್ಯಕ್ಕೆ, ವಿದೇಶಕ್ಕೆ ರವಾನಿಸುವ ಆರ್ಥಿಕ ಮೂಲವಾಗಿಯೂ ಕುಂಬಳಕಾಯಿ ಪಾರಮ್ಯ ಸಾಧಿಸಿದೆ. ಅಂತೆಯೇ ಗಾರ್ಗಿ, ಹಲ್ವಾ, ಚಟ್ನಿ, ಪಲ್ಯ, ಚೀನಿಕಾಯಿ ಕೊಟ್ಟಿಗೆ (ಇಡ್ಲಿ) ಹೀಗೆ ತರಹೇವಾರಿ ಖಾದ್ಯಗಳೂ ಇದರೊಟ್ಟಿಗೆ ಬೆಸೆದುಕೊಂಡು ಆಹಾರಪ್ರಿಯರ ಜಿಹ್ವಾಚಾಪಲ್ಯ ತಣಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.