ಶಿವಮೊಗ್ಗ ಜಿಲ್ಲೆಯ ಮೇಲಿನ ಹನಸವಾಡಿ ಗ್ರಾಮ ಗ್ರಂಥಾಲಯದ ಗೋಡೆಗಳ ಮೇಲೆ ಸುಂದರವಾದ ಚಿತ್ತಾರಗಳು ಗಮನ ಸೆಳೆಯುತ್ತಿದ್ದವು. ಒಳಗೆ ಒಂದಷ್ಟು ಮಕ್ಕಳು ಕೇರಂ ಆಡುತ್ತಿದ್ದರು. ಅಲ್ಲಿ ಕೇರಂ ಪಾನ್ಗಳ ಸದ್ದಷ್ಟೇ ಕಿವಿಗಳಿಗೆ ತಾಕುತ್ತಿತ್ತು. ಪಕ್ಕದ ಕೊಠಡಿಯಲ್ಲಿ ಕೆಲವು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದರು. ಇತ್ತ ಜಗುಲಿಯ ಮೇಲೆ ಊರಿನ ಹಿರಿಯರು, ಕಿರಿಯರು ಕುಳಿತು ದಿನಪತ್ರಿಕೆ ತಿರುವಿ ಹಾಕುತ್ತಾ, ಹಲವು ವಿಷಯಗಳ ಕುರಿತು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿದ್ದರು.

ಅಂದು ಭಾನುವಾರ. ಆದರೂ ಗ್ರಂಥಾಲಯ ತೆರೆದಿತ್ತು. ಹೊಲಕ್ಕೆ ಹೊರಟ್ಟಿದ್ದ ರೈತರೊಬ್ಬರು ಗ್ರಂಥಾಲಯದ ಮೇಲ್ವಿಚಾರಕಿಯನ್ನು ಹೊರಗಿನಿಂದಲೇ ಕೂಗಿ ‘ಇವತ್ತು ಮಳೆ ಬರೋ ಸಾಧ್ಯತೆ ಇದೆಯಾ’ ಎಂದು ಕೇಳಿದರು. ‘ಮಧ್ಯಾಹ್ನದ ನಂತರ ಸ್ವಲ್ಪ ಬೀಳಬಹುದು’ ಎಂದು ಅವರು ಮಾಹಿತಿ ನೀಡಿದರು.

ಹೌದು; ಈಗ ಗ್ರಾಮೀಣ ಗ್ರಂಥಾಲಯಗಳು ಪುಸ್ತಕಗಳನ್ನು ಜೋಡಿಸಿಟ್ಟ ಕೇಂದ್ರಗಳಾಗಿ ಉಳಿದಿಲ್ಲ. ಅವು ಗ್ರಾಮದ ಮಕ್ಕಳು, ವಿದ್ಯಾರ್ಥಿಗಳು, ರೈತರು, ಹಿರಿಯರು, ಮಹಿಳೆಯರು ಸೇರಿದಂತೆ ಇಡೀ ಸಮುದಾಯವನ್ನು ಒಳಗೊಳ್ಳುವ ಮಾಹಿತಿ ಕಣಜಗಳಾಗಿ ಪರಿವರ್ತನೆಗೊಂಡಿವೆ. ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದು ಸಾಧ್ಯವಾಗಿದ್ದು ಸರ್ಕಾರದ ದೂರದೃಷ್ಟಿಯಿಂದ. ಅದನ್ನು ಈ ಮಟ್ಟಕ್ಕೆ ಸಾಕಾರಗೊಳಿಸಿದ್ದು ಗ್ರಾಮೀಣಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಉಮಾ ಮಹಾದೇವನ್ ದಾಸ್ಗುಪ್ತ ಅವರ ಇಚ್ಛಾಶಕ್ತಿ.

‘ಕರ್ನಾಟಕದ ಹಳ್ಳಿಗಳು ಜೀವಸೆಲೆಯ ತಾಣಗಳು. ಹಳ್ಳಿಯ ಮಕ್ಕಳಿಗೆ ಅನುಕೂಲ ಮತ್ತು ಅವಕಾಶಗಳನ್ನು ಕಲ್ಪಿಸಿದರೆ ಜ್ಞಾನದ ಜತೆಗೆ, ದೇಶಕ್ಕೆ ನಾಯಕತ್ವವನ್ನೂ ನೀಡಬಲ್ಲರು. ಅದರಲ್ಲೂ ಅಡುಗೆಮನೆಗೆ ಸೀಮಿತ ಎನ್ನುವ ಭಾವನೆ ಇರುವ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ತಮಗಾಗಿಯೇ ಸ್ವಲ್ಪ ಸಮಯ ಬಳಸಿಕೊಳ್ಳುವಂತಾಗಬೇಕು. ನಿವೃತ್ತರಿಗೆ, ಹಿರಿಯರಿಗೆ ಜೀವನೋತ್ಸವ ಪಡೆಯುವ ತಾಣಗಳಾಗಬೇಕು. ಊರಿನ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಬೇಕು ಎಂಬ ಆಶಯಗಳನ್ನು ಸಾಕಾರಗೊಳಿಸುವ ಬೆಳಕಿನ ಕಿರಣಗಳಾಗಿ ಗೋಚರಿಸಿವೆ ಗ್ರಾಮೀಣ ಗ್ರಂಥಾಲಗಳು’ ಎನ್ನುತ್ತಾರೆ ಉಮಾ ಮಹಾದೇವನ್.

ಕೊಡಗು ಜಿಲ್ಲೆಯ ತಿತಿಮತಿ ಗ್ರಾಮ ಗ್ರಂಥಾಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಬುಡಕಟ್ಟು ಸಮುದಾಯದ ಮಕ್ಕಳು, ಅನುಕೂಲಸ್ಥ ಕೊಡವರ ಮಕ್ಕಳು ಒಟ್ಟಿಗೆ ಚೆಸ್ ಆಡುತ್ತಿದ್ದರು. ಆ ಸನ್ನಿವೇಶವನ್ನು ನೋಡಿದಾಗ ಸಮಾಜದ ಜಾತಿ ವ್ಯವಸ್ಥೆ, ಅಸಮಾನತೆಯ ಗೋಡೆ ಕಳಚುತ್ತಿರುವಂತೆ ಭಾಸವಾಯಿತು. ಗ್ರಂಥಾಲಯಗಳ ಪುನರುಜ್ಜೀವನದ ಆಶಯಗಳು ಸಾಕಾರಗೊಂಡ ತೃಪ್ತಿ ಸಿಕ್ಕಿತು’ ಎಂದು ಉಮಾ ಸಂತಸ ವ್ಯಕ್ತಪಡಿಸಿದರು.

ಗ್ರಂಥಾಲಯಗಳ ವಿಶಾಲವಾದ ಗೋಡೆಗಳು ಮಕ್ಕಳ ಕಲಿಕೆಯನ್ನು ಪ್ರೇರೇಪಿಸುವ ಫಲಕಗಳಾಗಿವೆ. ಕನ್ನಡದ ಲೇಖಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮೇರು ಸಾಹಿತಿಗಳು, ಬ್ರಿಟಿಷರ ವಿರುದ್ಧ ಹೋರಾಡಿದ ವೀರಯೋಧರು, ವನ್ಯಸಂಪತ್ತು, ಪರಿಸರ ಮಾಹಿತಿ, ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿ ಒಳಗೊಂಡ ಚಿತ್ರಗಳು, ಪೂರಕ ಮಾಹಿತಿ ಒಳಗೊಂಡ ಬರಹಗಳು ಕಂಗೊಳಿಸುತ್ತವೆ. ವಿಭಿನ್ನ ಸಸ್ಯ, ಹೂವುಗಳನ್ನು ಒಳಗೊಂಡ ಕೈತೋಟ, ಪರ್ಗೋಲಾ, ಆರಾಮಾಗಿ ಕುಳಿತು ಹರಟೆ ಹೊಡೆಯುವ ಟೆರೇಸ್ ಇದೆ. ಒಳಭಾಗದಲ್ಲಿ ಬಣ್ಣದ ಪರದೆಗಳು, ಸಾಕಷ್ಟು ಗಾಳಿ ಮತ್ತು ಬೆಳಕು, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳಿವೆ. ಓದುಗರಿಗೆ ಆರಾಮದಾಯಕವಾದ ಪೀಠೋಪಕರಣಗಳು, ಆಯಾ ವಯೋಮಾನದವರಿಗೆ ತಕ್ಕಂತೆ ಮೇಜು, ಕುರ್ಚಿಗಳು ಓದುಗರನ್ನು, ಆಸಕ್ತರನ್ನು ಸಾಕಷ್ಟು ಸಮಯ ಹಿಡಿದಿಟ್ಟುಕೊಳ್ಳುತ್ತವೆ.

ದಿನಪತ್ರಿಕೆ, ನಿಯತಕಾಲಿಕಗಳ ಸ್ಟ್ಯಾಂಡ್, ಸೂಚನಾ ಫಲಕ, ಕಂಪ್ಯೂಟರ್ ಟೇಬಲ್, ಮಕ್ಕಳಿಗಾಗಿ ಚಿತ್ರಕಥೆಗಳ ಪುಸ್ತಕ ವಿಭಾಗ, ಸಂವಿಧಾನದ ಪ್ರತಿಗಳು, ನಿಘಂಟು, ಗ್ಲೋಬ್, ವಾಟರ್ ಫಿಲ್ಟರ್, ಕಂಪ್ಯೂಟರ್, ಅಲೆಕ್ಸಾ, ಚೆಸ್, ಕೇರಂ ಬೋರ್ಡ್ಗಳು ಜ್ಞಾನದ ವಿಸ್ತಾರದ ಜತೆಗೆ ಸಮಯದ ಪರಿವೇ ಇಲ್ಲದಂತೆ ಮಾಡುತ್ತವೆ. ರಾಜ್ಯದ ಆರು ಸಾವಿರ ಗ್ರಂಥಾಲಯಗಳು ಹೀಗೆ ತಮ್ಮ ಸ್ವರೂಪವನ್ನೇ ಬದಲಾಯಿಸಿಕೊಂಡಿವೆ ಎನ್ನುವುದು ಸಾಮಾನ್ಯ ಮಾತಂತೂ ಅಲ್ಲ.

ಫಲಿತಾಂಶ ಸುಧಾರಣೆ

ಶಿಕ್ಷಣದ ಗುಣಮಟ್ಟ ಹೆಚ್ಚಳ, ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆಗೆ ಶಾಲಾ ಶಿಕ್ಷಣ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಎಲ್ಲೆಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ವಿದ್ಯಾರ್ಥಿ ಸ್ನೇಹಿಯಾಗಿ ರೂಪಿಸಲಾಗಿದೆಯೋ, ಆ ಪ್ರದೇಶಗಳ ಪ್ರೌಢಶಾಲೆಗಳಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಗಣನೀಯವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳ ಹಾಜರಾತಿಯಲ್ಲೂ ಏರಿಕೆಯಾಗಿದೆ.

ಇದಕ್ಕೊಂದು ನಿದರ್ಶನ ಇಲ್ಲಿದೆ. ಮಂಡ್ಯ ಜಿಲ್ಲೆಯ ಉಮ್ಮಡಹಳ್ಳಿ ಗ್ರಂಥಾಲಯ ರಾಜ್ಯದಲ್ಲೇ ಮಾದರಿಯಾಗಿ ರೂಪುಗೊಂಡಿದೆ. ಸಮೀಪದ ಶಾಲೆಗಳ ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಅದರ ಫಲವಾಗಿ ಅಲ್ಲಿನ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಚೇತರಿಕೆ ಕಂಡಿದ್ದು, 2024 ಮತ್ತು 2025 ರಲ್ಲಿ ನೂರರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ ಫಲಿತಾಂಶದಲ್ಲಿ ಶೇಕಡ 12 ರಷ್ಟು ಹೆಚ್ಚಳವಾಗಿದೆ. ಶಾಲಾ ಅವಧಿ ಮುಗಿದ ನಂತರ ರಾತ್ರಿ 8.30 ರ ವರೆಗೂ ಗ್ರಂಥಾಲಯದಲ್ಲಿ ಕುಳಿತು ಓದಿದ ಫಲವಾಗಿ ಹತ್ತು ವಿದ್ಯಾರ್ಥಿಗಳು ಶೇಕಡ 90ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ. ‘ಶಾಲೆಯಲ್ಲೂ ಉತ್ತಮವಾಗಿ ಪಾಠ ಮಾಡುತ್ತಾರೆ. ಶಾಲಾ ಅವಧಿಯ ನಂತರ ನೇರವಾಗಿ ಮನೆಗೆ ತೆರಳಿದ್ದರೆ ಇಷ್ಟು ಅಂಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಸಾಧನೆಯಲ್ಲಿ ಗ್ರಂಥಾಲಯದ ಕೊಡುಗೆಯನ್ನು ಮರೆಯುವಂತಿಲ್ಲ’ ಎನ್ನುವ ವಿದ್ಯಾರ್ಥಿನಿ ರಶ್ಮಿ, ಶೇಕಡ 95 ಅಂಕಗಳನ್ನು ಗಳಿಸಿದ್ದಾರೆ.

ಉಮ್ಮಡಹಳ್ಳಿಯಲ್ಲಿ ಎ.ಎಸ್.ಆರ್.ರಂಗನಾಥ್ ಬಯಲು ಗ್ರಂಥಾಲಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಿಟೋರಿಯಂ, ಅಬ್ದುಲ್ ಕಲಾಂ ಮಕ್ಕಳ ವಿಭಾಗ ಗಮನ ಸೆಳೆಯುತ್ತವೆ. ಮಕ್ಕಳ ವಿಭಾಗದಲ್ಲಿ ಕನ್ನಡ, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಕಥೆ ಪುಸ್ತಕಗಳು, ಮೊಬೈಲ್ ಆ್ಯಪ್ ಆಧಾರಿತ ಶಿಕ್ಷಣ, ಪಠ್ಯಪುಸ್ತಕಗಳ ವಿಷಯ ಕುರಿತ ಆಡಿಯೊ–ವಿಡಿಯೊ ಪಾಠಗಳು ಇದ್ದು, ಕಂಪ್ಯೂಟರ್ ಕಲಿಕೆಗೂ ವ್ಯವಸ್ಥೆ ಮಾಡಲಾಗಿದೆ. 40 ಆಸನಗಳ ಈ ಆಡಿಟೋರಿಯಂನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅಗತ್ಯವಾದ ವಿಷಯಗಳನ್ನು ಪ್ರೊಜೆಕ್ಟರ್ ಮೂಲಕ ಪ್ರಸ್ತುತಪಡಿಸಲಾಗುತ್ತದೆ.

‘ಗ್ರಂಥಾಲಯದ ಅಭಿವೃದ್ಧಿಗೆ ಸರ್ಕಾರದ ಜತೆಗೆ ಶಿಕ್ಷಣ ಫೌಂಡೇಷನ್, ಅಜೀಂ ಪ್ರೇಮ್ಜಿ ಫೌಂಡೇಷನ್ ನೆರವಾಗಿವೆ. ಮಕ್ಕಳ ಡಿಜಿಟಲ್ ಕಲಿಕೆಗಾಗಿ ಮೊಬೈಲ್ ಫೋನ್ಗಳು, ಟಿ.ವಿ ಹಾಗೂ ಕಂಪ್ಯೂಟರ್ಗಳನ್ನು ಶಿಕ್ಷಣ ಫೌಂಡೇಷನ್ ದೇಣಿಗೆ ನೀಡಿದೆ. ಆರಾಮದಾಯಕ ಕುರ್ಚಿಗಳು ಸೇರಿದಂತೆ ₹20 ಲಕ್ಷ ದೇಣಿಗೆ ನೀಡಿದೆ. ಗ್ರಂಥಾಲಯದ ಪ್ರಗತಿ ಅಧ್ಯಯನಕ್ಕೆ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದಾರೆ’ ಎನ್ನುತ್ತಾರೆ ಉಮ್ಮಡಹಳ್ಳಿಯ ಗ್ರಂಥಪಾಲಕ ಪಿ.ಯೋಗೇಶ್.

ಕೋವಿಡ್ ತಂದ ಬದಲಾವಣೆ!

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯಗಳು ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದ್ದರೂ ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಗ್ರಂಥಾಲಯಕ್ಕೆ ಬರಲು ಆರಂಭಿಸಿದರು. ಲಾಕ್ಡೌನ್ ಮಾಡಿ ಶಾಲಾ ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಪ್ರಾಥಮಿಕ ಹಂತದಿಂದ ಕಾಲೇಜುವರೆಗಿನ ವಿದ್ಯಾರ್ಥಿಗಳು ತಮ್ಮೂರಿನ ಗ್ರಂಥಾಲಯ
ವನ್ನು ಅವಲಂಬಿಸಿದರು. ನಾಲ್ಕು ಗೋಡೆಗಳ ನಡುವೆ ಇದ್ದ ಶಿಕ್ಷಣದ ಸ್ವರೂಪವನ್ನು ಕೋವಿಡ್–19 ಬದಲಾಯಿಸಿಬಿಟ್ಟಿತು. ಉತ್ಸಾಹದ ಚಿಲುಮೆಗಳಾದ, ಕುತೂಹಲದ ಆಗರವಾಗಿರುವ ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಪೋಷಿಸುವುದು, ಮಕ್ಕಳ ಜ್ಞಾನದಾಹವನ್ನು ತಣಿಸುವುದು ಪೋಷಕರಿಗೆ ಸವಾಲಾಗಿ ಪರಿಣಮಿಸಿತು. ಶಾಲೆಯಿಂದ ದೂರವಾದ ಮಕ್ಕಳು ಕಲಿಕೆಯಿಂದಲೂ ದೂರವಾಗುವ ಅಪಾಯ ಎದುರಾಯಿತು. ಇಂಥ ಸಮಯದಲ್ಲಿ ಅವರನ್ನು ಪಾರು ಮಾಡಿದ್ದು ಇದೇ ಗ್ರಂಥಾಲಯಗಳು.

ಆದರೆ, ಅಲ್ಲಿಗೆ ತೆರಳುವ ಮಕ್ಕಳಿಗೆ ಅಗತ್ಯ ಸೌಕರ್ಯ ಇರಲಿಲ್ಲ. ಅವರನ್ನು ಹೆಚ್ಚು ಸಮಯ ಕೂರಿಸುವ ಪರಿಕರಗಳ, ಸಾಮಗ್ರಿಗಳ ಕೊರತೆ ಇತ್ತು. ಇಂತಹ ಸಮಯದಲ್ಲೇ ರೂಪುಗೊಂಡದ್ದು ‘ಓದುವ ಬೆಳಕು’ ಅಭಿಯಾನ.

ಅಭಿಯಾನ ಆರಂಭವಾಗಿ ಐದು ವರ್ಷಗಳಲ್ಲೇ 50 ಲಕ್ಷ ಮಕ್ಕಳನ್ನು ಗ್ರಂಥಾಲಯಗಳು ಸೆಳೆದಿವೆ. ಅಷ್ಟೂ ಮಕ್ಕಳು ತಮ್ಮ ವ್ಯಾಪ್ತಿಯ ಗ್ರಾಮ ಗ್ರಂಥಾಲಯಗಳ ಸದಸ್ಯರಾಗಿ ನೋಂದಣಿ ಮಾಡಿಕೊಂಡಿರುವುದು ಭವಿಷ್ಯದ ಪರಿವರ್ತನೆಯ ಸಂಕೇತದಂತಿದೆ. ಉಮಾ ಮಹದೇವನ್ ಅವರ ಮಾತಿನಲ್ಲೇ ಹೇಳುವುದಾದರೆ ‘ಗ್ರಂಥಾಲಯ ಕಾರ್ಡ್ ಎನ್ನುವುದು ಮತ್ತೊಂದು ಪ್ರಪಂಚದ ಬಾಗಿಲು’.

ನೋಂದಾಯಿತರಾದ ಮಕ್ಕಳಿಗೆ ಪುಸ್ತಕ ಪರಿಚಯ, ಗಟ್ಟಿ ಓದು, ಪತ್ರ ಬರವಣಿಗೆ, ಕಥೆ ಹೇಳುವುದು ಮುಂತಾದ ಚಟುವಟಿಕೆಗಳನ್ನು ಸ್ಥಳೀಯವಾಗಿ ಮೇಲ್ವಿಚಾರಕರು ಹಮ್ಮಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಗ್ರಂಥಾಲಯಗಳು ಗ್ರಾಮೀಣ ಭಾಗದ ಶಿಕ್ಷಣದಲ್ಲೂ ಮಹತ್ವದ ಪಾತ್ರ ವಹಿಸುವಂತಾಗಿವೆ. ‘ಗ್ರಾಮೀಣ ಗ್ರಂಥಾಲಯಗಳ ಪುನರುಜ್ಜೀವನ ಮಕ್ಕಳ ಕಲಿಕೆಯ ಆಸಕ್ತಿಯನ್ನು ದ್ವಿಗುಣಗೊಳಿಸಿದೆ. ಇದು ಕಲಿಕಾ ಮಟ್ಟದ ಹೆಚ್ಚಳಕ್ಕೂ ನಾಂದಿ ಹಾಡಿದೆ’ ಎಂದು ಧಾರವಾಡದ ಸರ್ಕಾರಿ ಶಾಲೆಯ ಶಿಕ್ಷಕಿ ಸುಧಾ ಹೇಳುತ್ತಾರೆ.

ಉಮ್ಮಡಹಳ್ಳಿ ಗ್ರಂಥಾಲಯದಲ್ಲಿ ಅಲೆಕ್ಸಾ ಎಲೆಕ್ಟ್ರಾನಿಕ್ ಸಾಧನ ಅಳವಡಿಸಲಾಗಿದೆ. ಅಂಧ ಮಕ್ಕಳು ಅಲೆಕ್ಸಾ ಎಂದು ಸಂಬೋಧಿಸಿ ತಮ್ಮ ಪ್ರಶ್ನೆ ಕೇಳುತ್ತಾರೆ. ಅಲೆಕ್ಸಾ ಸಮರ್ಪಕ ಉತ್ತರ ನೀಡುತ್ತದೆ. ಬ್ರೈಲ್ ಲಿಪಿ ಮತ್ತು ಉಬ್ಬು ಚಿತ್ರವುಳ್ಳ ಪುಸ್ತಕಗಳಿಗೂ ಆದ್ಯತೆ ನೀಡಲಾಗಿದೆ. ದಾವಣಗೆರೆ ಜಿಲ್ಲೆ ತಣಿಗೆರೆ ಗ್ರಾಮ ಗ್ರಂಥಾಲಯದ ಮೇಲ್ವಿಚಾರಕ ಮಲ್ಲೇಶಪ್ಪ ಹೇಳುವಂತೆ, ‘ಹೊಸರೂಪ ಪಡೆಯುತ್ತಿರುವ ಗ್ರಂಥಾಲಯಗಳು ಲಿಂಗಭೇದ, ವಯಸ್ಸಿನ ಅಂತರ, ಜಾತಿ, ಧರ್ಮಗಳ ಗಡಿಗಳನ್ನು ಅಳಿಸುತ್ತಿವೆ’.

ಇ–ಗ್ರಂಥಾಲಯ

ಹಲವು ಗ್ರಂಥಾಲಯಗಳು ಡಿಜಿಟಲೀಕರಣಗೊಂಡಿವೆ. ಪುಸ್ತಕ, ದಿನಪತ್ರಿಕೆ, ನಿಯತಕಾಲಿಕ, ಸದಸ್ಯತ್ವ ನೋಂದಣಿ ಇತ್ಯಾದಿಗಳನ್ನು ಲೈಬ್ರರಿ ಅಟೊಮೇಶನ್ನಲ್ಲಿ ಅಳವಡಿಸಲಾಗಿದೆ. ಪುಸ್ತಕ ಎರವಲು, ದಾಸ್ತಾನು ಪರಿಶೀಲನೆ, ಅವಶ್ಯ ಇರುವ ಅಂಕಿಅಂಶ ಪಡೆಯಲು ಈ ಯೋಜನೆ ಅನುಕೂಲವಾಗಿದೆ.

ಬೆಳಗಾವಿ ಜಿಲ್ಲೆ ಕಿತ್ತೂರು ಸಮೀಪದ ಬೈಲೂರು ಗ್ರಂಥಾಲಯದ ಮಕ್ಕಳಿಗೆ ಬ್ರಿಟಿಷ್ ಕೌನ್ಸಿಲ್ ಇಂಗ್ಲಿಷ್ ಭಾಷಾ ಕೌಶಲ ಕಲಿಸುತ್ತಿದೆ. ಕೆಲ ಗ್ರಂಥಾಲಯಗಳಲ್ಲಿ ರೋಟರಿ ಕ್ಲಬ್ ಯೂಟ್ಯೂಬ್ ಕಾರ್ಯಕ್ರಮ, ವಿಜ್ಞಾನ ಗ್ಯಾಲರಿ, ರಾಷ್ಟ್ರೀಯ ಆಧುನಿಕ ಕಲೆಗಳ ಸಂಗ್ರಹಾಲಯ, ಡೆಲ್ ಟೆಕ್ನಾಲಜೀಸ್, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ವಿಜ್ಞಾನ ಸಂಗ್ರಹಾಲಯ ವಿಜ್ಞಾನ, ಕಲೆ, ಪರಿಸರ ಕುರಿತು ವಿವಿಧ ಸಂಸ್ಥೆಗಳು ಕಾರ್ಯಾಗಾರಗಳನ್ನು ನಡೆಸುತ್ತಿವೆ.

ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಲು ಓದುಗರ ಕೂಟವನ್ನು ರಚಿಸಿರುವುದು ಭವಿಷ್ಯದಲ್ಲೂ ಓದುವ ಹವ್ಯಾಸವನ್ನು ಜೀವಂತವಾಗಿಡುವ ಒಂದು ಪ್ರಯತ್ನ ಇದಾಗಿದೆ.

‘ಗ್ರಾಮ ಪಂಚಾಯಿತಿ ನಿಧಿ, ಗ್ರಂಥಾಲಯ ಅನುದಾನ, ಸರ್ಕಾರ, ಜನಪ್ರತಿನಿಧಿಗಳ ನಿಧಿಯಿಂದ ಒಂದಷ್ಟು ಆರ್ಥಿಕ ನೆರವಿನ ಜತೆಗೆ ಕೆಲ ಕಂಪನಿಗಳು, ಸಾರ್ವಜನಿಕ ದೇಣಿಗೆಯಿಂದ ಗ್ರಂಥಾಲಯ ಯಜ್ಞ ಸಾಧ್ಯವಾಗಿದೆ’ ಎನ್ನುತ್ತಾರೆ ಉಮಾ ಮಹಾದೇವನ್.

ಈಗ ಇರುವ ಇಂತಹ ಉತ್ತಮ ವ್ಯವಸ್ಥೆ ಮುಂದುವರಿಯಬೇಕು, ಸಾಧ್ಯವಾದರೆ ಇನ್ನಷ್ಟು ಉತ್ತಮಗೊಳ್ಳಬೇಕು. ಈ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು.

ಮಹಿಳಾ ಸ್ವಾವಲಂಬನೆ

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ ಗ್ರಂಥಾಲಯದ ಬಯಲಿನಲ್ಲಿ ಹೆಣ್ಣುಮಕ್ಕಳು ಸೇರಿದ್ದರು. ಅವರಲ್ಲಿ ಬಹುತೇಕರು ಚನ್ನಪಟ್ಟಣ ಬೊಂಬೆಗಳನ್ನು ತಯಾರಿಸುವ ಕಲೆ ಕರಗತ ಮಾಡಿಕೊಳ್ಳುತ್ತಿದ್ದರು. ಗ್ರಂಥಾಲಯದಲ್ಲಿದ್ದ ಕಂಪ್ಯೂಟರ್ನಲ್ಲಿ ಮಹಿಳೆಯೊಬ್ಬರು ರವಿಕೆಯ ಹೊಸ ಡಿಸೈನ್ ಹುಡುಕುತ್ತಿದ್ದರು. ಮತ್ತೊಬ್ಬರು ಹೊಸದಾಗಿ ಮಾರುಕಟ್ಟೆಗೆ ಬಂದ ಸೀರೆಗಳ ವಿವರ ಕಲೆ ಹಾಕುತ್ತಿದ್ದರು. ಹೀಗೆ ಹುಡುಕುತ್ತಿದ್ದ ಅವರಿಗೆ ಅದು ಹವ್ಯಾಸವಾಗಿರಲಿಲ್ಲ, ಬದುಕಾಗಿತ್ತು. ಹೊಸ ಮಾದರಿಯ ಸೀರೆಗಳನ್ನು ಆನ್ಲೈನ್ನಲ್ಲಿ ತರಿಸಿಕೊಂಡು ಒಂದಿಷ್ಟು ಹೆಚ್ಚಿದ ಬೆಲೆಗೆ ಹಳ್ಳಿಗಳಲ್ಲಿ ಮಾರಾಟ ಮಾಡುವ ಮೂಲಕ ಹಣ ಗಳಿಸಿ ಮಕ್ಕಳ ಓದು, ಕುಟುಂಬ ನಿರ್ವಹಣೆಯ ದಾರಿ ಮಾಡಿಕೊಂಡಿದ್ದಾರೆ.

ರೈತರು, ಮಹಿಳೆಯರಿಗೂ ನೆಚ್ಚಿನ ತಾಣ

ಬೆಳೆಗಳು, ಅಧಿಕ ಇಳುವರಿ, ರೋಗಬಾಧೆ, ಕೀಟನಾಶಕ, ಗೊಬ್ಬರದ ಮಾಹಿತಿ ಪಡೆಯಲು ರೈತರು, ಕಸೂತಿ, ಆಹಾರ ವೈವಿಧ್ಯ ಸೇರಿದಂತೆ ವಿವಿಧ ಮಾಹಿತಿ ಪಡೆಯಲು ಮಹಿಳೆಯರು ಗ್ರಂಥಾಲಯಗಳಿಗೆ ಭೇಟಿ ನೀಡಲು ಆರಂಭಿಸಿದ್ದಾರೆ. ಗ್ರಂಥಾಲಯಗಳಲ್ಲಿ ಎಲ್ಲರಿಗೂ ಉಚಿತ ಸದಸ್ಯತ್ವ ನೀಡಲಾಗುತ್ತಿದೆ. ವಾರಾಂತ್ಯ ಸೇರಿ ದಿನ ಸಾಯಂಕಾಲ 4 ರಿಂದ 8 ಗಂಟೆಗಳವರೆಗೆ ತೆರೆಯಲಾಗುತ್ತದೆ. ಪುಸ್ತಕ ಸಂಗ್ರಹಣಾ ಅಭಿಯಾನದಲ್ಲಿ 10 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಹಿರಿಯರಿಗೆ ಬೆಳಿಗ್ಗೆ ಸೇರಿಕೊಳ್ಳುವ ಸ್ಥಳವಾದರೆ, ಸ್ವಸಹಾಯ ಗುಂಪುಗಳಿಗೆ ಸಭಾಂಗಣವಾಗಿವೆ, ಅಂಗನವಾಡಿ-ಆಶಾ ಕಾರ್ಯಕರ್ತರ ದಾಖಲೆಗಳ ಕಣಜ, ಮಕ್ಕಳಿಗೆ ಜ್ಞಾನಾರ್ಜನೆಯ ತಾಣಗಳಾಗಿವೆ. ಹುಡುಗಿಯರಿಗೆ ಮನೆ ಕೆಲಸದ ಒತ್ತಡದಿಂದ ಮುಕ್ತಿ ಪಡೆದು ಹೊಸ ಪ್ರಪಂಚದತ್ತ ಚಿತ್ತ ಹರಿಸಲು ಅವಕಾಶದ ಬಾಗಿಲು ತೆರೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.