ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕೃತಿರಚನೆಗೂ ಬಂತು ‘ಕ್ರೌಡ್‌ ಫಂಡಿಂಗ್‌’!

Last Updated 15 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಒಂದು ಸೃಜನಶೀಲ ಸಾಹಿತ್ಯ ಕೃತಿ ರಚಿಸುವಾಗ ಇರುವ ಖುಷಿ ಅದನ್ನು ಓದುಗರನ್ನು ತಲುಪಿಸುವ ವೇಳೆಗೆ ಮಾಯವಾಗಿರುತ್ತದೆ. ಓದುಗರನ್ನು ಆಕರ್ಷಿಸುವುದರ ಜೊತೆಗೆತಮ್ಮ ಕೃತಿಗಳಿಗೆ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಕನ್ನಡ ಸಾಹಿತಿಗಳಿಗೆ ದೊಡ್ಡ ಸವಾಲು. ಬರೆದೇ ಬದುಕು ಕಟ್ಟಿಕೊಳ್ಳುತ್ತೇನೆ ಎಂದುಕೊಳ್ಳುವವರು ಮಾರುಕಟ್ಟೆ ಜ್ಞಾನವನ್ನು ಸಂಪಾದಿಸಿಕೊಳ್ಳಲೇಬೇಕಿದೆ. ಅದರೊಂದಿಗೆ ಪುಸ್ತಕ ಮುದ್ರಿಸಲು ಹಣವನ್ನೂ ಹೊಂದಿಸಿಕೊಳ್ಳಲು ಲೇಖಕ ಮತ್ತು ಕವಿ ಕಷ್ಟಪಡಬೇಕಾಗಿದೆ.

ಇಂತಹ ಸಂದರ್ಭದಲ್ಲಿ, ಕೆಲವು ಯುವಸಾಹಿತಿಗಳು ಕೃತಿ ರಚನೆಗೂ ಮೊದಲೇ, ಆಸಕ್ತ ಓದುಗರಿಂದ ಹಣ ಸಂಗ್ರಹಿಸುವ ಯೋಜನೆ ರೂಪಿಸಿಕೊಂಡಿದ್ದಾರೆ. ತಮ್ಮ ಕೃತಿಯಲ್ಲಿನ ‘ಸತ್ವವೇ’ ಸಾಹಿತಿಗಳ ಈ ಧೈರ್ಯಕ್ಕೆ ಬಂಡವಾಳ. ವಿವಿಧ ಕ್ಷೇತ್ರಗಳಲ್ಲಿ ಚಾಲ್ತಿಯಲ್ಲಿದ್ದ ‘ಕ್ರೌಡ್‌ ಫಂಡಿಂಗ್‌’ ಕಲ್ಪನೆ ಈ ಮೂಲಕ ಸೃಜನಶೀಲ ಕೃತಿರಚನೆಗೂ ಕಾಲಿಟ್ಟಿದೆ.

ಕೇಂದ್ರ ಅಥವಾ ರಾಜ್ಯ ಸಾಹಿತ್ಯ ಅಕಾಡೆಮಿಗಳಲ್ಲಾಗಲಿ, ವಿಶ್ವವಿದ್ಯಾಲಯಗಳಲ್ಲಾಗಲಿ ಸಂಶೋಧನಾ ಕೃತಿ, ಪ್ರವಾಸ ಕಥನ ಮುಂತಾದ ಸೃಜನೇತರ ಕೆಲಸಗಳಿಗೆ, ಸೃಜನಶೀಲ ಪ್ರದರ್ಶನಕ್ಕೆ, ಸಮುದಾಯ ಅಭಿವೃದ್ಧಿ ಚಟುವಟಿಕೆಗಳಿಗೆ ಹಣದ ಸಹಾಯವಿದೆ. ಆದರೆ, ಸೃಜನಶೀಲ ಕೃತಿರಚನೆಗೆ ಪ್ರೋತ್ಸಾಹ ನೀಡಲು ಹಣದ ನೆರವು ನೀಡುವಂತಹ ಯೋಜನೆ ಇಲ್ಲ. ವಿದೇಶಗಳಲ್ಲಿ ಸೃಜನಶೀಲ ಕೃತಿ ರಚನೆಗೂ ಸಹಾಯಧನ ನೀಡುವ ಸೌಲಭ್ಯವಿದ್ದರೂ, ಅವು ಆಯಾ ದೇಶದ ಲೇಖಕರಿಗೆ ಅಥವಾ ಇಂಗ್ಲಿಷ್‌ನಲ್ಲಿ ಬರೆಯುವವರಿಗೆ ಮಾತ್ರ ಮೀಸಲಾಗಿವೆ.

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗ ಎಂಬಂತೆ, ಯುವಸಾಹಿತಿಎಂ.ಜಿ. ವಿನಯ್‌ಕುಮಾರ್‌ ಎಂಬುವರು ‘ಕ್ರೌಡ್‌ ಫಂಡಿಂಗ್‌’ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ. ಕಾದಂಬರಿಗಾಗಿ ಊರು ಸುತ್ತಲು, ಇನ್ನಿತರ ಸಂಪನ್ಮೂಲಗಳಿಗೆ ತಗಲಬಹುದಾದ ವೆಚ್ಚವನ್ನು ಪಟ್ಟಿ ಮಾಡಿರುವ ವಿನಯ್‌, ಇದನ್ನು ಆಸಕ್ತರ ಮುಂದೆ ಇಟ್ಟಿದ್ದಾರೆ.ಈ ಕುರಿತು‘ಯೋಜನಾ ವರದಿ’ಯೊಂದನ್ನು ವಿನಯ್‌ ಸಿದ್ಧಪಡಿಸಿದ್ದಾರೆ. ತಾವು ಬರೆಯಲಿರುವ ಕಾದಂಬರಿಯ ಕೆಲವು ಅಧ್ಯಾಯಗಳನ್ನೂ ಇದರಲ್ಲಿ ಸೇರಿಸಿದ್ದಾರೆ.

‘ಸಹಾಯಕ್ಕೆ ಬದಲಾಗಿ, ಪುಸ್ತಕದ ಪುಟವೊಂದರಲ್ಲಿ ದಾನಿಗಳ ಹೆಸರನ್ನು ಮುದ್ರಿಸಿ, ಪುಸ್ತಕ ಬಿಡುಗಡೆಗೆ ಆಹ್ವಾನಿಸಿ, ನನ್ನ ಹಸ್ತಾಕ್ಷರದೊಂದಿಗೆ ಪ್ರಕಟಿತ ಪುಸ್ತಕದ ಪ್ರತಿಯೊಂದನ್ನು ಉಚಿತವಾಗಿ ನೀಡುತ್ತೇನೆ ಎಂದು ಕೆಲವು ಸಾಹಿತ್ಯಾಸಕ್ತರಲ್ಲಿ ಕೇಳಿಕೊಂಡೆ. ಆರಂಭದಲ್ಲಿ, ಬರವಣಿಗೆ ಶೈಲಿ ತೀರಾ ಹೊಸದಾಗಿದೆ, ಗಟ್ಟಿಯಾಗಿದೆ ಎಂದು ಕೆಲವರು ಖುಷಿಪಟ್ಟರು. ಪುಸ್ತಕವನ್ನು ಕೊಂಡು ಓದುವುದಕ್ಕೇ ಜನ ಸಿಗುತ್ತಿಲ್ಲ ಎನ್ನುವಂತಹ ಈ ಸಂದರ್ಭದಲ್ಲಿ, ಬರೆಯಲೂ ಹಣ ಕೇಳಬಹುದೇ ಎಂದು ಯೋಚಿಸಿದೆ. ಆಸಕ್ತರಲ್ಲಿ ಈ ಬಗ್ಗೆ ಅಭಿಪ್ರಾಯವನ್ನೂ ಹಂಚಿಕೊಂಡೆ. ಕೆಲವರು ಆಶ್ಚರ್ಯಪಟ್ಟರೆ, ಕೆಲವರು ತಲೆಕೆಡಿಸಿಕೊಳ್ಳತೊಡಗಿದರು. ಕೃತಿಯಲ್ಲಿನ ಗಟ್ಟಿತನ ಗಮನಿಸಿದ ಆಪ್ತರು, ಹಣ ನೀಡಲು ಒಪ್ಪಿಕೊಂಡರು. ಪ್ರೋತ್ಸಾಹಿಸಿದರು’ ಎಂದು ವಿನಯಕುಮಾರ್‌ ಹೇಳುತ್ತಾರೆ.

‘ನಟ- ರಂಗ ನಿರ್ದೇಶಕ ಮಂಡ್ಯ ರಮೇಶ, ನಿರ್ದೇಶಕ- ನಿರ್ಮಾಪಕ ಬಿ. ಸುರೇಶ, ಕಾದಂಬರಿಕಾರ ಹನುಮಂತ ಹಾಲಿಗೇರಿ, ಚಿತ್ರ ಕಲಾವಿದೆ ಚರಿತಾ ಮೈಸೂರು, ಪ್ರೊ. ನಾಗರಾಜ್‌, ತ್ಯಾಗರಾಜ ಮೂರ್ತಿ ಮತ್ತಿತರರು ಆರ್ಥಿಕ ನೆರವು ನೀಡಿದ್ದಾರೆ.ಐದು ತಿಂಗಳಲ್ಲಿ ₹1.34 ಲಕ್ಷ ಸಂಗ್ರಹವಾಗಿದೆ.ಇನ್ನೆರಡು ಮೂರು ತಿಂಗಳಲ್ಲಿ ‘ಪಾತ್ರ’ ಎಂಬ ಕಾದಂಬರಿಯನ್ನು ಪೂರ್ಣಗೊಳಿಸುತ್ತೇನೆ’ ಎಂದು ವಿವರಿಸಿದ್ದಾರೆ.

ಏನಿದು ಕ್ರೌಡ್‌ ಫಂಡಿಂಗ್‌ ?

ಕ್ರೌಡ್‌ಫಂಡಿಂಗ್ ಎಂದರೆ, ಯಾವುದಾದರೊಂದು ಕೆಲಸಕ್ಕೆ ಒಬ್ಬರು ಹಣ ಹೂಡುವ ಬದಲಾಗಿ ಹಲವು ಮಂದಿ ಹಣ ಹೂಡುವ ವ್ಯವಸ್ಥೆ. ಈ ವ್ಯವಸ್ಥೆ ಯೋಜನೆಯೊಂದರ ಹೊಣೆಗಾರಿಕೆಯನ್ನು ವೈಯಕ್ತಿಕ ನೆಲೆಯಿಂದ ಸಾಮುದಾಯಿಕ ನೆಲೆಗೆ ವಿಸ್ತರಿಸುತ್ತದೆ. ಇದು, ಒಂದು ರೀತಿಯಲ್ಲಿ ಹೂಡಿಕೆಯಾಗಿದ್ದು ನಷ್ಟ ಹಾಗೂ ಲಾಭಗಳೆರಡೂ ವ್ಯಕ್ತಿಯೊಬ್ಬ ಪಡೆದ ಪಾಲುಗಾರಿಕೆಗೆ ಅನುಗುಣವಾಗಿ ವಿತರಣೆಯಾಗುತ್ತದೆ. ಚಲನಚಿತ್ರ, ಬಿಸಿನೆಸ್, ಕಂಪನಿ ಮುಂತಾದವುಗಳನ್ನು ಈ ರೀತಿಯಲ್ಲಿ ನಡೆಸುವ ಪರಿಪಾಠವಿದೆ.

ಇದರೊಂದಿಗೆ, ಕ್ರೌಡ್‌ಫಂಡಿಂಗ್‌ ಸ್ಪಾನ್ಸರ್‌ಶಿಪ್‌ ಎನ್ನುವ ಯೋಜನೆಯೊಂದನ್ನು ಯುವ ಲೇಖಕರು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇಲ್ಲಿ, ಲಾಭರಹಿತ, ವ್ಯಾವಹಾರಿಕವಲ್ಲದ ಕ್ರಿಯಾಶೀಲ ಕೆಲಸಕ್ಕೆ ಹಣ ಸಹಾಯ ಮಾಡಲಾಗುತ್ತದೆ. ಚಾರಿಟಿ ಕೆಲಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂತಾದವು ಈ ಪರಿಧಿ ಅಡಿಯಲ್ಲಿ ಬರುತ್ತವೆ. ಇಲ್ಲಿ ತೊಡಗಿಸಿದ ಹಣವನ್ನು ಸಂಪೂರ್ಣ ಸಹಾಯ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ, ಸಹಾಯಕ್ಕೆ ಬದಲಾಗಿ ಯಾವುದೇ ರೀತಿಯ ಹಣ ಅಥವಾ ಪ್ರತಿಫಲವನ್ನು ದಾನಿಗಳಿಗೆ ವಾಪಸ್ಸು ಮಾಡಬೇಕಾದ ನಿಯಮವಿಲ್ಲ.

ಪುಸ್ತಕ ಓದುಗರು, ಸಾಹಿತ್ಯಾಸಕ್ತರು ಕಡಿಮೆಯಾಗುತ್ತಿದ್ದಾರೆ ಎನ್ನುವ ಆತಂಕಗಳು ಬರಹಗಾರರಾಗಿ, ಸಾಹಿತ್ಯ ಸಂಘಟಕರಾಗಿ ನಾವು ಮಿತಿಗಳನ್ನು ಹೇರಿಕೊಂಡು ಕುಳಿತಿರುವುದರಿಂದಲೇ ಸೃಷ್ಟಿಯಾಗಿರಬೇಕು ಎನಿಸುತ್ತದೆ ಎನ್ನುತ್ತಾರೆ ಯುವ ಲೇಖಕರು.

ಫೇಸ್‌ಬುಕ್ ಪೇಜ್, ವೆಬ್‌ಸೈಟ್, ವಾಟ್ಸ್ಆ್ಯಪ್‌ ಮೂಲಕ ಪುಸ್ತಕ ಪ್ರಚಾರಕ್ಕೆ ಚಾಲನೆ ನೀಡುವುದು, ಸಾಂಸ್ಕೃತಿಕ ಕೇಂದ್ರಗಳು, ವಿಶ್ವವಿದ್ಯಾಲಯಗಳು, ಹಳ್ಳಿಗಳು ಮಾತ್ರವಲ್ಲದೆ ಜನ ಸೇರುವ, ಮಾತಿಗೆ ಸಿಕ್ಕುವ ಎಲ್ಲ ಸ್ಥಳಗಳಲ್ಲಿ ನಿಂತು ಪುಸ್ತಕದ ಬಗ್ಗೆ ಜನರೊಂದಿಗೆ ಮಾತನಾಡಿದರೆ, ಅವರ ಅಭಿಪ್ರಾಯ ಕೇಳಿದರೆ ಕೃತಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ಓದುಗರಿಗೆ ತಲುಪಿಸಬಹುದು ಎಂಬ ಯೋಚನೆಯಲ್ಲಿ ಯುವ ಲೇಖಕರಿದ್ದಾರೆ.

ಶೀರ್ಷಿಕೆ ಬಿಡುಗಡೆ ಯೋಜನೆ

ಪುಸ್ತಕ ಬಿಡುಗಡೆಗಿಂತ ಶೀರ್ಷಿಕೆ ಬಿಡುಗಡೆಗೂ ಒಂದು ಕಾರ್ಯಕ್ರಮ ಮಾಡುವ ಮೂಲಕ ವಿನಯಕುಮಾರ್‌ ಗಮನ ಸೆಳೆದಿದ್ದಾರೆ. ಸಾಹಿತ್ಯ ಪುಸ್ತಕ ಬಿಡುಗಡೆಗೇ ಜನ ಸೇರುವುದಿಲ್ಲ. ಇನ್ನು ಶೀರ್ಷಿಕೆ ಬಿಡುಗಡೆಯೇ ಎಂದು ಹುಬ್ಬೇರಿಸಿದವರ ನಡುವೆ ಅವರು ಕಾರ್ಯಕ್ರಮ ಮಾಡಿ ತೋರಿಸಿದ್ದಾರೆ.

ನಾವು ಏನನ್ನಾದರೂ ಸೃಜಿಸಿದರೆ ಅಥವಾ ತಯಾರಿಸಿದರೆ ಅದನ್ನು ಹಲವು ಮಂದಿಗೆ ತಲುಪಿಸುವುದರಲ್ಲಿ ಶ್ರಮ ವಹಿಸುವುದಿಲ್ಲವೇ? ಪುಸ್ತಕದ ವಿಷಯದಲ್ಲಿ ಮಾತ್ರ ನಮಗೇಕೆ ಅಸಡ್ಡೆ? ಲೇಖಕನೆನಿಸಿಕೊಂಡು ಬೆಂಗಳೂರಿನಲ್ಲೋ ಅಥವಾ ನಮ್ಮ ಮನೆಯಲ್ಲೋ ಬಾಗಿಲು ಹಾಕಿಕೊಂಡು ಯಾಕೆ ಕೂರಬೇಕು? ನಮ್ಮ ಕೈಲಾದ ಎಲ್ಲ ಯೋಜನೆಗಳಿಂದ ನಾವು ಇನ್ನಷ್ಟು ಮಂದಿಗೆ ತಲುಪಬಹುದಾದರೆ ಏಕೆ ಪ್ರಯತ್ನಿಸಬಾರದು? ಎಂದು ಪ್ರಶ್ನಿಸುತ್ತಾರೆ ವಿನಯಕುಮಾರ್.

ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಅವರ ಟೆಂಟ್ ಸಿನಿಮಾ ಶಾಲೆಯಲ್ಲಿ ‘ಪಾತ್ರ’ ಶೀರ್ಷಿಕೆ ಬಿಡುಗಡೆಯಾಗಿದೆ.ಕಾದಂಬರಿಕಾರರಾದ ವಿ. ಎಂ. ಮಂಜುನಾಥ್, ವಿ. ಆರ್. ಕಾರ್ಪೆಂಟರ್, ಕವಿ ವೀರಣ್ಣ ಮಡಿವಾಳರ ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

ಓದುವ ಸುಖ ಏನು ಎಂದು ಹೊಸಬರಿಗೆ ಹೇಳುವ ಈ ಮೂಲಕ ಲೇಖಕನೊಬ್ಬ ಓದುಗರಿಗೆ ಹತ್ತಿರವಾಗುವ ಹೊಸ ಮಾರ್ಗವನ್ನು ತೆರೆಯುವ ನಿಟ್ಟಿನಲ್ಲಿ ಇಂತಹ ಹಲವು ಪ್ರಯತ್ನಗಳು ನಡೆಯುತ್ತಿವೆ.ಭಾರತದಲ್ಲಿ ಇಂಗ್ಲಿಷ್‌ನಲ್ಲಿ ಬರೆಯುತ್ತಿರುವ ಲೇಖಕರೂ ಪ್ರಾದೇಶಿಕ ಭಾಷೆಗಳ ಶ್ರೇಷ್ಠ ಬರಹಗಾರರಿಗಿಂತಲೂ ಆರ್ಥಿಕವಾಗಿ ಸಬಲರಾಗಿ, ಸಮಾಜದ ಮುಖ್ಯಭೂಮಿಕೆಯಲ್ಲಿದ್ದಾರೆ. ಆದರೆ,ಪ್ರಾದೇಶಿಕ ಭಾಷೆಗಳಲ್ಲಿ ಆಕರ್ಷಕವಾಗಿ ಬರೆಯುವ ಬಹಳ ಮಂದಿ ಆರ್ಥಿಕವಾಗಿ ದುರ್ಬಲವಾಗಿರುವ ಈ ಸಂದರ್ಭದಲ್ಲಿ ‘ಕ್ರೌಡ್‌ ಫಂಡಿಂಗ್‌‘ನಂತಹ ಯೋಚನೆ ಊರುಗೋಲಾಗಬಹುದು.

ಆಧುನಿಕೋತ್ತರ ಮನಃಸ್ಥಿತಿಯಲ್ಲಿ ಲೇಖಕರು ಕೇವಲ ಫೇಸ್‌ಬುಕ್‌ನಲ್ಲಿ ಕ್ರಿಯಾಶೀಲರಾಗಿದ್ದು, ಮುಖಾಮುಖಿ ಭೇಟಿಗೆ ಸಿಗದೇ ಹೋಗುತ್ತಿರುವುದು ತಪ್ಪಿ, ಲೇಖಕ– ಓದುಗರ ಮುಖಾಮುಖಿ ಭೇಟಿಗೆ ಈ ‘ಕ್ರೌಡ್‌ ಫಂಡಿಂಗ್‌’ ಎಂಬ ಕಲ್ಪನೆ ವೇದಿಕೆ ಕಲ್ಪಿಸಬಹುದು.

ಕನ್ನಡದಲ್ಲಿ ಕಷ್ಟ

ಇಂಗ್ಲಿಷ್‌ ಸಾಹಿತ್ಯ ವಲಯದಲ್ಲಿ ‘ಕ್ರೌಡ್‌ ಫಂಡಿಂಗ್‌’ನಂತಹ ಕಲ್ಪನೆಗಳು ಜಾರಿಯಲ್ಲಿರಬಹುದು. ಆದರೆ, ಕನ್ನಡದಲ್ಲಿ ಈ ಕಲ್ಪನೆ ಕಾರ್ಯರೂಪಕ್ಕೆ ತರುವುದು ಕಷ್ಟವಾಗುತ್ತದೆ ಎಂದು ಕೆಲವು ಸಾಹಿತಿಗಳು ಅಭಿಪ್ರಾಯಪಡುತ್ತಾರೆ.

‘ಕೃತಿ ರಚನೆಗೂ ಮೊದಲೇ ಧನಸಹಾಯ ಮಾಡುವ ಆಸಕ್ತರ ಸಂಖ್ಯೆ ತೀರಾ ಕಡಿಮೆ ಇದೆ. ಕೆಲವರಿಗೆ ಇದು ಹೊರೆಯೂ ಎನಿಸಬಹುದು ಮತ್ತು ಅನುಮಾನವನ್ನೂ ಮೂಡಿಸಬಹುದು. ಆದರೆ, ಇದೇ ಮಾದರಿಯಲ್ಲಿ ಈಗಾಗಲೇ ನಾವು ಬೇರೆ ವಿಧಾನ ಅನುಸರಿಸುತ್ತಿದ್ದೇವೆ. ಅದೇನೆಂದರೆ, ಕೃತಿ ಪ್ರಕಟಣಾ ಪೂರ್ವದಲ್ಲಿ ದರ ನಿಗದಿ ಮಾಡುವುದು ಮತ್ತು ಮುಂಗಡ ಕಾಯ್ದಿರಿಸುವವರಿಗೆ ರಿಯಾಯಿತಿ ನೀಡುವುದು. ಈ ಯೋಜನೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎನ್ನುತ್ತಾರೆ ಪ್ರಕಾಶಕರೂ ಆಗಿರುವ ಸಾಹಿತಿ ಬಸವರಾಜ ಸೂಳಿಭಾವಿ.

ಕೃತಿಗೂ ಮೊದಲು ಕೂಪನ್‌ಗಳನ್ನು ಮುದ್ರಿಸುವುದು. ಆ ಕೂಪನ್‌ಗಳನ್ನು ಮಾರಾಟ ಮಾಡುವುದು. ಮಧ್ಯವರ್ತಿಗಳಿಗೆ ಅಥವಾ ಏಜೆಂಟರಿಗೆ ಶೇ 40ರಷ್ಟು ಕಮಿಷನ್‌ ಕೊಡಬೇಕಾಗುತ್ತದೆ. ಅದರ ಬದಲು ಓದುಗರಿಗೇ ಈ ರಿಯಾಯಿತಿ ಕೊಡುವುದು. ಪುಸ್ತಕದ ಬೆಲೆ ₹400 ಇದ್ದರೆ,ಕೂಪನ್‌ ಖರೀದಿಸಿದವರಿಗೆ, ₹250ಕ್ಕೆ ಕೊಡಬಹುದು. ಇದರಿಂದ ಓದುಗರಿಗೂ ಹೊರೆ ಕಡಿಮೆಯಾಗುತ್ತದೆ. ಲೇಖಕನಿಗೂ ಪುಸ್ತಕ ಮುದ್ರಿಸಲು ಹಣ ದೊರೆಯುತ್ತದೆ ಎಂದು ಅವರು ಹೇಳುತ್ತಾರೆ.

ಹೋರಾಟದ ನಡುವೆ ಪುಸ್ತಕ ಮಾರಾಟ

ಮಹದಾಯಿ ನದಿ ನೀರಿಗಾಗಿ ಸತತ ಹೋರಾಟಕ್ಕೆ ಸಾಕ್ಷಿಯಾಗಿದ್ದವು ನರಗುಂದ ಮತ್ತು ನವಲಗುಂದ. ರೈತ ಭವನದಲ್ಲಿ ಕಾಯಂ ವೇದಿಕೆ ಹಾಕಿಕೊಂಡಿದ್ದ ಹೋರಾಟಗಾರರು ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಮಹದಾಯಿ ಹಿನ್ನೆಲೆ, ಕಳಸಾ– ಬಂಡೂರಿ ನಾಲಾ ಜೋಡಣೆಯಿಂದ ರೈತರಿಗೆ ಆಗುವ ಅನುಕೂಲಗಳು ಮತ್ತು ಈ ವಿಷಯದಲ್ಲಿ ನಡೆಯುತ್ತಿರುವ ರಾಜಕಾರಣದ ಕುರಿತು ಸಾಹಿತಿ ಬಸವರಾಜ ಸೂಳಿಭಾವಿ ಬರೆದಿದ್ದ ‘ಕಳಸಾ ಬಂಡೂರಿ: ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ’ ಪುಸ್ತಕ ಆ ಸಂದರ್ಭದಲ್ಲಿ ರೈತರ, ಹೋರಾಟಗಾರರ ಕೈ ಅಲಂಕರಿಸಿತ್ತು. ಸ್ವತಃ ಸೂಳಿಭಾವಿಯವರು ಪ್ರತಿಭಟನಾ ಸ್ಥಳದಲ್ಲಿ ಓಡಾಡಿ ಈ ಪುಸ್ತಕ ಮಾರಾಟ ಮಾಡಿದ್ದರು.

‘ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿದ ಕೃತಿಗಳು ಓದುಗರನ್ನು ಬೇಗ ತಲುಪುತ್ತವೆ. ನಿತ್ಯದ ಬದುಕಿನ ಆಗು–ಹೋಗುಗಳಿಗೆ ಸ್ಪಂದಿಸುವಂತಹ ಕೃತಿಗಳಿಗೆ ಬೇಡಿಕೆ ಇದ್ದೇ ಇರುತ್ತದೆ’ ಎಂದು ಬಸವರಾಜ ಹೇಳುತ್ತಾರೆ.

‘ಜನ ಸಾಮಾನ್ಯರು ಪುಸ್ತಕ ಕೊಳ್ಳಲು ಅಂಗಡಿಗೆ ಬರುವುದಿಲ್ಲ. ಆದರೆ, ಅವರಿದ್ದಲ್ಲಿಗೇ ಹೋಗಿ ಪುಸ್ತಕ ಮಾರಾಟ ಮಾಡಿದರೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಇದೇ ಪುಸ್ತಕದ ಎರಡು ಸಾವಿರ ಪ್ರತಿ ಮಾರಲು ನಾಲ್ಕು ವರ್ಷಗಳು ಬೇಕಾಗುತ್ತಿದ್ದವು. ಆದರೆ, ನಾನೇ ಪ್ರತಿಭಟನಾ ಸ್ಥಳಕ್ಕೆ ಹೋಗಿ ನೇರವಾಗಿ ಓದುಗರಿಗೆ ಮಾರಾಟ ಮಾಡಿದ್ದರಿಂದ ಕೇವಲ ಆರೇಳು ತಿಂಗಳ ಅವಧಿಯಲ್ಲಿ ನಾಲ್ಕು ಸಾವಿರ ಪ್ರತಿಗಳು ಮಾರಾಟವಾದವು’ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಸ್ಮಶಾನದಲ್ಲಿ ಜೀವ ಪಡೆದಿದ್ದ ‘ಖಾಲಿ ಶಿಲುಬೆ’

ಒಂದು ಸಿನಿಮಾ ಪ್ರೇಕ್ಷಕರನ್ನು ತಲುಪಬೇಕಾದರೆ ಪ್ರಾರಂಭದಲ್ಲಿ ಅದಕ್ಕೆ ಪ್ರಚಾರ ಬೇಕು. ಅದೇ ರೀತಿ ಒಂದು ಪುಸ್ತಕ ಓದುಗರನ್ನು ತಲುಪಬೇಕಾದರೂ ವಿಭಿನ್ನ ಪ್ರಚಾರ ತಂತ್ರ ಅಳವಡಿಸಿಕೊಳ್ಳಬೇಕು ಎನ್ನುತ್ತಾರೆ ಸಾಹಿತಿ ಚಕ್ರವರ್ತಿ ಚಂದ್ರಚೂಡ್‌.

ತಮ್ಮ ‘ಖಾಲಿ ಶಿಲುಬೆ’ ಕೃತಿಯನ್ನು 2014ರಲ್ಲಿ ಸ್ಮಶಾನದಲ್ಲಿ ಬಿಡುಗಡೆ ಮಾಡಿ ಅವರು ಗಮನ ಸೆಳೆದಿದ್ದರು. ತಮ್ಮದೇ ಸಮಾಧಿ ನಿರ್ಮಿಸಿಕೊಂಡು ಆ ಸಮಾಧಿ ಒಡೆದು ಕೃತಿ ಹೊರಗೆ ಬರುವ ಹಾಗೆ ಮಾಡಿದ್ದರು. 2,600ಕ್ಕೂ ಹೆಚ್ಚು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಹರಿಕಿಶನ್‌ ಪಾವಾಜಿ ಅವರಿಂದ ಗಜಲ್‌ಗಳನ್ನು ಕೂಡ ಹಾಡಿಸಿದ್ದರು. ಅಂದೇ 1,607 ಪ್ರತಿಗಳನ್ನು ಅವರು ಮಾರಾಟ ಮಾಡಿದ್ದರು.

‘ಈ ಕಾರ್ಯಕ್ರಮ ಮಾಧ್ಯಮದವರ ಗಮನವೂ ಸೆಳೆದಿತ್ತು. ನೇರಪ್ರಸಾರ ಮಾಡಿದ್ದರು. ಸ್ಮಶಾನಕ್ಕೆ ಮಹಿಳೆಯರು, ಗರ್ಭಿಣಿಯರು, ಮಕ್ಕಳು ಎಲ್ಲರೂ ಬಂದಿದ್ದರು. ಹೀಗೆ, ಆಯಾ ಕೃತಿಯ ವಿಷಯ ವಸ್ತು ಆಧರಿಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದರೆ ಖಂಡಿತ ಓದುಗರ ಗಮನ ಸೆಳೆಯಬಹುದು’ ಎಂದು ಚಂದ್ರಚೂಡ್ ಹೇಳುತ್ತಾರೆ.

ಕವನ ಸಂಕಲನಗಳು ಎಂದರೆ, ಪುಸ್ತಕದ ಅಂಗಡಿಯವರು ಅದನ್ನು ಒಳಗಡೆಯೇ ಇಡುತ್ತಾರೆ. ಆದರೆ, ‘ಖಾಲಿ ಶಿಲುಬೆ’ಯನ್ನುಎಲ್ಲರಿಗೂ ಕಾಣುವಂತೆ ಅಂಗಡಿಯ ಮುಂದೆ ಇಡಲಾಯಿತು. ನಂತರ, ಮೂರು ಬಾರಿ ಮರುಮುದ್ರಣ ಮಾಡಲಾಯಿತು. ಒಟ್ಟು 5,000 ಪ‍್ರತಿಗಳು ಮಾರಾಟವಾದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಧೋಬಿ ಘಾಟ್‌ನಲ್ಲಿ ಬೆಳಕು ಕಂಡ ‘ಮೈಲು ತುತ್ತ’:ಅಗಸರ ಬದುಕು ಆಧರಿಸಿ ಚಂದ್ರಚೂಡ್‌ ರಚಿಸಿದ ‘ಮೈಲು ತುತ್ತ’ ಕೃತಿಯನ್ನು 2017ರಲ್ಲಿ ಇದೇ ರೀತಿ ವಿಭಿನ್ನವಾಗಿ ಲೋಕಾರ್ಪಣೆ ಮಾಡಲಾಗಿತ್ತು. ಧೋಬಿ ಘಾಟ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಏಷ್ಯಾದ ಮೊದಲ ಮಹಿಳಾ ವೀರಬಾಹು ಎನಿಸಿರುವ ಶಿವಮೊಗ್ಗದ ಅನಸೂಯಮ್ಮ ಅವರಿಂದ ಕೃತಿಯನ್ನು ಬಿಡುಗಡೆ ಮಾಡಿಸಲಾಗಿತ್ತು. ಅಲ್ಲದೆ,ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಬಟ್ಟೆ ಒಗೆಯುತ್ತಿರುವ ಹಿರಿಯ ಅಗಸರನ್ನು ಕರೆದು ಸನ್ಮಾನಿಸಲಾಗಿತ್ತು.

ಆ ಸಂದರ್ಭದಲ್ಲಿ ಇಡೀ ವೇದಿಕೆಯನ್ನು ಚರಕದ ರೀತಿಯಲ್ಲಿ ರೂಪಿಸಿದ್ದು 3,500 ಜನ ಸೇರಿದ್ದರು. ನಂತರ, ಒಟ್ಟು 25 ಜಿಲ್ಲೆಗಳಲ್ಲಿ ‘ಮೈಲು ತುತ್ತ’ ಕೃತಿಯನ್ನು ಬಿಡುಗಡೆ ಮಾಡಲಾಗಿತ್ತು ಎಂದು ಚಂದ್ರಚೂಡ್‌ ನೆನಪಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT