ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Raja Parba in Odisha | ಭೂಮ್ತಾಯಿಗೆ ಮುಟ್ಟಿನ ರಜೆ

Published 19 ಮೇ 2024, 0:30 IST
Last Updated 19 ಮೇ 2024, 0:30 IST
ಅಕ್ಷರ ಗಾತ್ರ

ಒಡಿಶಾ ರಾಜ್ಯದಲ್ಲಿ ರಜಾ ಪರ್ಬ ಎನ್ನುವ ವಿಶಿಷ್ಟ ಆಚರಣೆ ಇದೆ. ಇಲ್ಲಿನ ಜನರು ವರ್ಷಕ್ಕೊಮ್ಮೆ ಭೂಮಿಗೆ ಮುಟ್ಟಿನ ರಜೆ ಕೊಟ್ಟು ಸಂಭ್ರಮಿಸುತ್ತಾರೆ....

ಒಡಿಶಾದ ಮನೆಗಳ ಮುಂದೆಲ್ಲ ಸಿಂಗಾರಗೊಂಡ ಉಯ್ಯಾಲೆಗಳು ಇಡೀ ವಾತಾವರಣಕ್ಕೆ ಹೊಸ ಕಳೆ ತಂದಿದ್ದವು. ಭುವನೇಶ್ವರದ ಪಾರ್ಕ್‌ಗಳಲ್ಲೂ ಮತ್ತದೇ ಉಯ್ಯಾಲೆ-ಅಲಂಕಾರ ಕಂಡಾಗ ಕುತೂಹಲ ಹೆಚ್ಚಾಯಿತು. ಕಾರು ಚಾಲಕ ರಂಜಿತ್‌ನನ್ನು ಕೇಳಿದಾಗ ‘ರಜಾ ಪರ್ಬದ ತಯಾರಿ ನಡೆಯುತ್ತಿದೆ’ ಎಂದು ಹೇಳಿದ. 

ಸಕಲ ಜೀವರಾಶಿಗಳಿಗೆ ಆಧಾರವಾಗಿರುವ, ಪೊರೆಯುವ ಭೂಮಿತಾಯಿಯನ್ನು ಹೆಣ್ಣು ಎಂದೇ ಪರಿಗಣಿಸಿ ಗೌರವಿಸಲಾಗುತ್ತದೆ. ಭೂಮಿಯಂತೆಯೇ ಮಹಿಳೆಯೂ ಜೀವದಾಯಿನಿ; ಹುಡುಗಿ ಹೆಣ್ಣಾಗುವ ನಂತರ ತಾಯಿಯಾಗುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಋತುಚಕ್ರ. ಮೊಗ್ಗು ಅರಳಿ ಹೂವಾಗುವಷ್ಟೇ ಸಹಜ ನೈಸರ್ಗಿಕ ಕ್ರಿಯೆ ಮುಟ್ಟು. ಹಾಗಾಗಿಯೇ ಮುಟ್ಟು ಫಲವತ್ತತೆ-ಜೀವಂತಿಕೆಯ ಸಂಕೇತ. ಆದರೆ ಮುಟ್ಟು ಎಂದೊಡನೆ ಅಪವಿತ್ರ-ಮೈಲಿಗೆ ಎನ್ನುವ ನಂಬಿಕೆ, ಆಚರಣೆಗಳು ಭಾರತದಲ್ಲಿ ಬಲವಾಗಿ ಬೇರೂರಿವೆ. ಹೀಗಿರುವಾಗ ಮುಟ್ಟು ಮತ್ತು ಹೆಣ್ತನವನ್ನು ಸಂಭ್ರಮಿಸುವ ಒಡಿಶಾದ ಈ ಹಬ್ಬ ಅಪರೂಪದ್ದು!

ಮೂರು ದಿನಗಳ ಈ ಹಬ್ಬವನ್ನು ಭೂದೇವಿಯ ವಾರ್ಷಿಕ ಮುಟ್ಟಿನ ಅವಧಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳನ್ನು ಮಾಡುವುದಿಲ್ಲ. ಸತತವಾಗಿ ಬಿತ್ತನೆಗೆ ತನ್ನನ್ನು ತಾನು ತೊಡಗಿಸಿಕೊಂಡ ಭೂಮಿಗೆ ವಿಶ್ರಾಂತಿಯನ್ನು ನೀಡುವುದು ಇದರ ಉದ್ದೇಶ. ಈ ದಿನಗಳಲ್ಲಿ ಭೂಮಿಯನ್ನು ಉಳುಮೆ ಮಾಡುವುದು, ಹದಗೊಳಿಸುವುದನ್ನು ಮಾಡಲಾಗುವುದಿಲ್ಲ. ನಾಲ್ಕನೇ ದಿನ ಭೂಮಿತಾಯಿ ಸ್ನಾನ ಮಾಡುತ್ತಾಳೆ. ಅಂದರೆ ವಾರ್ಷಿಕ ಋತುಚಕ್ರ ಮುಗಿದು ಕ್ಷೇತ್ರ ಹದವಾಗುತ್ತದೆ. ಮಳೆರಾಯನ ಆಗಮನದೊಂದಿಗೆ ಮುಂಬರುವ ಕೃಷಿ ಚಟುವಟಿಕೆಗಳಿಗೆ ಆಕೆ ಸಿದ್ಧವಾಗುತ್ತಾಳೆ. ಆ ಸಿದ್ಧತೆಯನ್ನು ಸಡಗರದೊಂದಿಗೆ ಆಚರಿಸುವ ಕೃಷಿ ಸಂಸ್ಕೃತಿಯ ಹಬ್ಬವಿದು. ಅದರೊಂದಿಗೆ ಒಡಿಶಾದ ಜನರ ಪಾಲಿಗೆ ಭೂದೇವಿಯು ಜಗದ್‌ರಕ್ಷಕನಾದ ಪುರಿಯ ಜಗನ್ನಾಥನ ಪತ್ನಿ. ಹಾಗಾಗಿ ಧಾರ್ಮಿಕ ಆಯಾಮವನ್ನೂ ಇದು ಹೊಂದಿದೆ.

ಆ ಮೂರು ದಿನಗಳು!

ರಜಾ ಪರ್ಬವನ್ನು ಆಷಾಢ ಮಾಸದ ಆರಂಭದಲ್ಲಿ ಜೂನ್ ತಿಂಗಳಲ್ಲಿ (ಈ ವರ್ಷ ಜೂನ್ 14 ರಿಂದ) ಮೂರುದಿನ ಆಚರಿಸಲಾಗುತ್ತದೆ. ಹಬ್ಬ ಆರಂಭವಾಗುವ ಮುನ್ನಾ ಪೂರ್ವ ತಯಾರಿ ದಿನ. ಅಂದು, ಇಡೀ ಮನೆಯನ್ನು ವಿಶೇಷವಾಗಿ ಅಡುಗೆ ಮನೆಯನ್ನು ಶುಚಿಯಾಗಿರಿಸಲಾಗುತ್ತದೆ. ಮುಂದಿನ ಮೂರು ದಿನಗಳವರೆಗೆ ಮನೆಯಲ್ಲಿ ಅಡುಗೆ ಕೆಲಸವನ್ನು ಮಹಿಳೆಯರು ಮಾಡುವಂತಿಲ್ಲ. ಹಾಗಾಗಿ ಬೇಕಾದ ಮಸಾಲೆಗಳನ್ನು ಮೊದಲೇ ಪುಡಿ ಮಾಡಿ ಹುರಿದು ಸಿದ್ಧಗೊಳಿಸುತ್ತಾರೆ. ಮೊದಲ ದಿನ ಪಹಿಲಿ ರಜಾ. ಅಂದು ನಸುಕಿನಲ್ಲೇ ಹೆಣ್ಣುಮಕ್ಕಳು ಎದ್ದು ಮೈಗೆ ಅರಿಸಿನ-ಎಣ್ಣೆ ಹಚ್ಚಿ ನಂತರ ನದಿಯಲ್ಲಿ ಶುದ್ಧೀಕರಣ ಸ್ನಾನ ಮಾಡುತ್ತಾರೆ. ನಂತರದ ಎರಡು ದಿನಗಳು ಸ್ನಾನ ಮಾಡುವಂತಿಲ್ಲ. ಎರಡನೇ ದಿನ ಮಿಥುನ ಸಂಕ್ರಾಂತಿ, ಮೂರನೇ ದಿನ ಬಸಿ ರಜಾ. ಈ ಮೂರು ದಿನಗಳ ಕಾಲ ಹುಡುಗಿಯರು ಮತ್ತು ಮಹಿಳೆಯರಿಗೆ ಸಂಪೂರ್ಣ ವಿಶ್ರಾಂತಿ. ಈ ಸಮಯದಲ್ಲಿ ನೀರು ಹೊರುವ, ಮನೆಗಳನ್ನು ಗುಡಿಸಿ ಒರೆಸುವ, ತರಕಾರಿ ಕತ್ತರಿಸುವ, ಧಾನ್ಯವನ್ನು ಪುಡಿ ಮಾಡುವ, ಬಟ್ಟೆ ತೊಳೆಯುವ ಹೀಗೆ ಯಾವುದೇ ಕೆಲಸ ಮಾಡುವುದಿಲ್ಲ. ಬರಿಗಾಲಿನಲ್ಲಿ  ನಡೆಯುವಂತೆಯೂ ಇಲ್ಲ. ನಾಲ್ಕನೇ ದಿನ ಬಸುಮತಿ ಸ್ನಾನ. ಅಡುಗೆ ಮನೆಯಲ್ಲಿರುವ ಅರೆಯುವ, ರುಬ್ಬುವ ಕಲ್ಲನ್ನು ಭೂದೇವಿಯ ಪ್ರತೀಕವಾಗಿ ಪೂಜಿಸುತ್ತಾರೆ. ಕಲ್ಲಿಗೆ ಅರಿಸಿನ-ಕುಂಕುಮ ಹಚ್ಚಿ ನೀರನ್ನೆರೆದು ಸ್ನಾನ ಮಾಡಿಸುತ್ತಾರೆ. ಆಯಾ ಋತುಕಾಲಕ್ಕೆ ತಕ್ಕದಾದ ಹಣ್ಣು–ತರಕಾರಿಯನ್ನು ನೈವೇದ್ಯವಾಗಿಟ್ಟು ಪೂಜಿಸುತ್ತಾರೆ. ಕೆಂಪುಬಣ್ಣದ ದಾಸವಾಳಗಳಿಂದ ಕಲ್ಲನ್ನು ಅಲಂಕರಿಸಲಾಗುತ್ತದೆ.

ಈ ಹಬ್ಬದ ಮತ್ತೊಂದು ವಿಶೇಷ ಉಯ್ಯಾಲೆ. ಮನೆ ಮುಂದೆ, ಉದ್ಯಾನಗಳಲ್ಲಿ ದೊಡ್ಡಮರಗಳಿಗೆ ವಿವಿಧ ಬಗೆಯ ಉಯ್ಯಾಲೆ ಕಟ್ಟಿ ಅದರಲ್ಲಿ ಕುಳಿತು ತೂಗುವುದು ಮುಖ್ಯ ಆಚರಣೆ.

ಪಾರ್ಕ್‌ನಲ್ಲಿ ಉಯ್ಯಾಲೆ ಸಿಂಗರಿಸುತ್ತಿದ್ದ ಸೀಮಾರಾಣಿ ‘ನಮಗಿದು ದೊಡ್ಡಹಬ್ಬ. ಹೊಸಬಟ್ಟೆ ತೊಟ್ಟು, ಆಭರಣಗಳನ್ನು ಧರಿಸಿ, ಕೆಂಪಗಿನ ಅಲ್ತಾ ಬಣ್ಣವನ್ನು ಕಾಲುಗಳಿಗೆ ಹಚ್ಚಿ, ಕೂದಲನ್ನು ಬಾಚಿ ಹೂ ಮುಡಿದು ಅಲಂಕರಿಸಿಕೊಳ್ಳುತ್ತೇವೆ. ದೊಡ್ಡವರು ಬೆಳ್ಳಿಗೆಜ್ಜೆಯನ್ನು ಉಡುಗೊರೆಯಾಗಿ ಕೊಡುತ್ತಾರೆ. ಚೆಂದದ ಹುಡುಗಿಯರು ಉಯ್ಯಾಲೆಗಳಲ್ಲಿ ತೂಗುತ್ತಾ ಹಾಡುವುದೇ ಈ ಹಬ್ಬದ ಮುಖ್ಯ ಆಕರ್ಷಣೆ. ಹಬ್ಬದಲ್ಲಿ ರಜಾಗೀತೆಗಳನ್ನು ಹಾಡಲಾಗುತ್ತದೆ. ತವರು ಮನೆ–ಗಂಡನ ಮನೆಯಲ್ಲಿ ಹೇಗಿರಬೇಕು, ರೀತಿ-ನೀತಿ, ಬುದ್ಧಿಮಾತು–ಹೀಗೆ ರಜಾಗೀತೆಗಳು ಸಾಂಸಾರಿಕ ಜೀವನದ ಬಗ್ಗೆ ಹದಿಹರೆಯದ ಹುಡುಗಿಯರಿಗೆ ಪಾಠಗಳಿದ್ದಂತೆ. ಆದರೆ ಈಗಿನವರು ಅದನ್ನೆಲ್ಲಾ ಕೇಳುವುದಿಲ್ಲ..ಅಲಂಕಾರಕ್ಕಷ್ಟೇ ಸರಿ’ ಎಂದು ನಕ್ಕರು.

ಹೀಗೇಕೆ?

ಭೂದೇವಿಯ ವಾರ್ಷಿಕ ಋತುಚಕ್ರವನ್ನು ಸಂಭ್ರಮಿಸಿದ್ದು ಸರಿ; ಆದರೆ ದೇವಿಯರಲ್ಲದ ಮಾಸಿಕ ಋತುಚಕ್ರ ಇರುವ ಹೆಣ್ಣಿನ ಪರಿಸ್ಥಿತಿ ಅಲ್ಲಿ ಹೇಗಿದೆ ಎಂದು ಗೆಳತಿ ಡಾ.ಅಲಕಾಳನ್ನು ಕೇಳಿದಾಗ ‘ಮುಟ್ಟಾದ ಹೆಣ್ಣು ಮೂರುದಿನಗಳ ಕಾಲ ಪ್ರತ್ಯೇಕವಾಗಿ ಇರಬೇಕು, ದನಕರುಗಳನ್ನು ಮುಟ್ಟುವಂತಿಲ್ಲ, ಗಿಡಗಳಿಗೆ ನೀರೆರೆಯಬಾರದು ಎನ್ನುವ ಕಟ್ಟುಪಾಡುಗಳು ಇಂದಿಗೂ ಹಳ್ಳಿಗಳಲ್ಲಿ ಇವೆ. ಅದರೊಂದಿಗೆ ಆ ಸಂದರ್ಭದಲ್ಲಿ ವಹಿಸಬೇಕಾದ ಸ್ವಚ್ಛತಾಕ್ರಮಗಳ ಕುರಿತು ತಿಳಿವಳಿಕೆ ತೀರಾ ಕಡಿಮೆ. ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡುವುದೂ ನಿಷಿದ್ಧ. ವರ್ಷಕ್ಕೊಮ್ಮೆ ಭೂದೇವಿಯ ಮುಟ್ಟನ್ನು ಹಬ್ಬವನ್ನಾಗಿ ಆಚರಿಸಿ, ಸಂಭ್ರಮಿಸುವಾಗ ಆಕೆಯದ್ದೇ ಅಂಶವಾದ ಹೆಣ್ಣಿನ ಬಗ್ಗೆ ಈ ಧೋರಣೆ ನಿಜಕ್ಕೂ ಸರಿಯಲ್ಲ’ ಎಂದು ಬೇಸರಿಸಿದರು.

ಹೆಣ್ತನ ಸಂಭ್ರಮಿಸುವ ರಜಾಪರಬಾ ಭೂದೇವಿ, ರೈತಾಪಿ ಜನ, ಮಳೆ–ಹೀಗೆ ನಿಸರ್ಗವನ್ನು ಪ್ರೀತಿ-ಭಕ್ತಿಯಿಂದ ಆರಾಧಿಸುವ ಹಬ್ಬ ನಿಜ; ಅದರೊಂದಿಗೆ ಮುಟ್ಟಿನ ಕುರಿತ ಮೂಢನಂಬಿಕೆಗಳನ್ನು ತೊಲಗಿಸಿ, ಸಹಜಕ್ರಿಯೆಯಾಗಿ ಅದನ್ನು ಪರಿಗಣಿಸುವ ಮನೋಭಾವ ಮೂಡಿಸಿದರೆ ನಿಜಕ್ಕೂ ಅರ್ಥಪೂರ್ಣವಾಗುತ್ತದೆ.

ಪೋಡೊ ಪಿತಾ

ರಜಾಪರ್ಬದಲ್ಲಿ ಬೇಯಿಸಿದ ಹಾಗೂ ಪೌಷ್ಟಿಕಾಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದು ರೂಢಿ. ಋತುಮತಿಯಾದಾಗ ನಡೆಯುವ ದೈಹಿಕ ಬದಲಾವಣೆಗೆ ತಕ್ಕಂತೆ, ಸದೃಢ ದೇಹಕ್ಕೆ ಪುಷ್ಟಿ ನೀಡುವ ಆಹಾರ ಸೇವನೆ ಇದರ ಹಿಂದಿನ ಆಶಯ. ಉದ್ದು, ತುಪ್ಪ, ಬೆಲ್ಲ ಪ್ರಮುಖವಾಗಿ ಬಳಕೆಯಾಗುತ್ತದೆ. ಈ ಹಬ್ಬದಲ್ಲಿ ಮಾಡುವ ವಿಶೇಷ ಖಾದ್ಯ ಪೊಡೋಪಿತಾ (ಪೋಡೋ-ಸುಟ್ಟಿದ್ದು, ಪಿತಾ – ದಪ್ಪ ರೊಟ್ಟಿ). ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ನೆನೆಸಿಟ್ಟು, ನಂತರ ಅದನ್ನು ಗಟ್ಟಿ ಮಿಶ್ರಣವಾಗಿ ರುಬ್ಬಿಕೊಳ್ಳಲಾಗುತ್ತದೆ. ರಾತ್ರಿಯಿಡೀ ಅದನ್ನು ಹುದುಗು ಬರಿಸಿ, ನಂತರ ಪಾಕ ತರಿಸಿದ ಬೆಲ್ಲ, ತೆಂಗಿನಕಾಯಿ ಚೂರುಗಳನ್ನು ಸೇರಿಸಲಾಗುತ್ತದೆ. ನಂತರ ಬೆರೆಸುವ ಗೋಡಂಬಿ, ಏಲಕ್ಕಿ-ಕಾಳು ಮೆಣಸಿನ ಪುಡಿ, ದ್ರಾಕ್ಷಿ ಸ್ವಾದವನ್ನು ಹೆಚ್ಚಿಸುತ್ತದೆ. ತುಪ್ಪ ಸವರಿದ ಬಾಳೆಎಲೆಯಲ್ಲಿ ಈ ಮಿಶ್ರ ಣ ಸುರಿದು ಸುತ್ತಿ ಅದನ್ನು ಕೆಂಡದೊಲೆಯ ಮೇಲೆ ಬೇಯಿಸಿ ತುಪ್ಪದಲ್ಲಿ ಹುರಿಯಲಾಗುತ್ತದೆ. ಸಣ್ಣ ಉರಿಯಲ್ಲಿ ರಾತ್ರಿಯಿಡೀ ಹದವಾಗಿ ಬೆಂದು ಮೇಲೆ ಸುಟ್ಟ ಭಾಗ ಹೊಂದಿ ಒಳಗೆ ಸಿಹಿ ಹೂರಣ ಇರುವ ಸಾಂಪ್ರದಾಯಿಕ ಪೋಡೊಪಿತಾ ರುಚಿಕರ ಮತ್ತು ಪೌಷ್ಟಿಕ ಆಹಾರ. ಆದರೆ ಮಾಡಲು ಸಾಕಷ್ಟು ಸಮಯ, ಸಲಕರಣೆ ಮತ್ತು ಸಹನೆ ಬೇಕು. ಕಾಲ ಬದಲಾದರೂ ಮಿಕ್ಸಿ- ಕುಕ್ಕರ್ ಬಳಸಿ ಪ್ರತಿ ಮನೆಯಲ್ಲೂ ಪೊಡೋಪಿತಾ ಮಾಡುವುದು ಮುಂದುವರಿದಿದೆ. ಇದರಲ್ಲಿ ಬಿರಿ, ಲವಂಗ, ಗೋಕುಲ್, ಚುಟ್ಕಿ, ನಕ್ಷಿ, ತೇಜ್‌ಪಟ್ಟ ಎನ್ನುವ ಬೇರೆ ಬೇರೆ ವೈವಿಧ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT