ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪ್ಪಳಿ | ಚಳಿಗಾಲದಲ್ಲಿ ಕವಿ ಊರಲ್ಲಿ...

Last Updated 24 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಹಸಿರು ತೆಪ್ಪಗೇ ಮಲಗಿದ ದಾರಿಯಲ್ಲಿ ಮಂಜು ಶುಭ್ರವಾದ ಒಂದು ಕನಸಿನಂತೆ ಹರಡಿಕೊಳ್ಳುತ್ತಲೇ ಇತ್ತು, ವನರಾಶಿಗಳು ಸಣ್ಣಗೇ ತೂಕಡಿಸುತ್ತ ‘ಇನ್ನೊಂದಷ್ಟು ಹೊತ್ತು ಹಾಗೇ ಮಲಗಿರುತ್ತೇವೆ, ಸೂರ್ಯ ಎಬ್ಬಿಸಿದ ಕೂಡಲೇ ಎದ್ದುಬಿಡುತ್ತೇವೆ’ ಎಂದು ಸುರಿಯುತ್ತಿರುವ ಮಂಜಿನ ಕಂಬಳಿಯನ್ನು ಬೆಚ್ಚಗೇ ಹೊದ್ದುಕೊಂಡು ಮಲಗಿಯೇಬಿಟ್ಟವು.

ಪೀವ್ ಪೀವ್, ಟು..ಟು.. ಟುವ್ವಿ.... ಕೀ..ಕೀ ಕೀ..ಚಿಂವ್ ಚಿಂವ್ ಎಂದು ಸುತ್ತಲಿದ್ದ ಮರ, ಗಿಡಗಂಟಿ, ಪೊದೆ, ಗದ್ದೆ ಬಯಲಿನಿಂದ ಕರ್ಣರಂಜಿತವಾಗಿ ಹಾಡುತ್ತ ಕಾಜಾಣ, ಗದ್ದೆಗೊರವ, ಸಿಪಿಲೆ, ನವರಂಗ, ಬಾಲದಂಡೆ ಹಕ್ಕಿಗಳೆಲ್ಲ ‘ಮಂಜಿನ ನಡುವೆ ನಾವಿದ್ದೇವೆ’ ಎಂದು ಅಲ್ಲಿಂದಿಲ್ಲಿಗೆ ತೂಗುತ್ತ, ಹಾರುತ್ತ ಸದ್ದು ಮಾಡುತ್ತಿದ್ದವು.

ಅಷ್ಟೊತ್ತಿಗೆ ಬಿಳಿಗೊಂಡೆಬಾಲದ ನವಿರಾದ ನಾಯಿಯೊಂದು ನಮ್ಮ ಕಾಲಬಳಿ ಬಂದು ಏನನ್ನೋ ಕನವರಿಸುತ್ತ ‘ಬನ್ನಿ ಬನ್ನಿ... ಈ ಚಳಿಯಲ್ಲಿ, ಮಂಜಿನಲ್ಲಿ ಕವಿ ಊರಿಗೆ ಬಂದಿದ್ದೀರಿ, ಮಂಜು ಓಡಿ ಹೋಗುವ ಮೊದಲು ಕವಿಮನೆಯನ್ನು ನೋಡಿ, ಮಂಜಿನ ರಂಗಿನಲ್ಲಿ ಕವಿಶೈಲದಲ್ಲಿ ಕೂತು ಹೂವೂ, ಕಲ್ಲು, ನೆಲ ಎಲ್ಲವೂ ಮಂಜಾಗುವುದನ್ನು ನೋಡಿಬಿಡಿ. ನಂಗೂ ಮಂಜೆಂದರೆ ಭಾರೀ ಇಷ್ಟ, ನಿಮಗೆ ಇಡೀ ಕವಿ ಊರನ್ನು ಸುತ್ತಿಸುವೆ’ ಎಂದೆನ್ನುತ್ತಾ ನಮಗೆ ದಾರಿ ತೋರಿಸಿತು ಆ ಗೊಂಡೆಬಾಲದ ನಾಯಿ. ಸಾಕ್ಷಾತ್ ಕುವೆಂಪು ಅವರ ಗುತ್ತಿ ನಾಯಿಯೇ ಅವತರಿಸಿ ಬಂದಂತನ್ನಿಸಿ ನಮಗೆ ಪುಳಕವಾಯ್ತು.

ಕುವೆಂಪು ಅವರ ಕುಪ್ಪಳಿಯನ್ನು ಬೇರೆ ಬೇರೆ ಕಾಲದಲ್ಲಿ ಎಷ್ಟೋ ಸಲ ನೋಡಿದ್ದೆವು. ಈ ಚಳಿಗಾಲದಲ್ಲಿ, ಅದೂ ನಮ್ಮ ಹವಾಮಾನವೆಲ್ಲ ಬದಲಾಗಿ, ಮಲೆನಾಡಿನ ಕಾಡುಗಳು ಬರಡಾಗುತ್ತಿರುವ, ಅಭಿವೃದ್ಧಿ ಅನ್ನೋ ಬ್ರಹ್ಮರಾಕ್ಷಸನ ಕಬಂಧಬಾಹುಗಳು ಮಲೆನಾಡಿನ ಸುಂದರ ಪ್ರಕೃತಿಯನ್ನು ಆವರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ, ಆಧುನಿಕತೆ ಅವಸರ ಮತ್ತು ಸಾವಧಾನದ ಬೆನ್ನೇರಿಬಿಟ್ಟಂತಹ ಈ ವಿಲಕ್ಷಣ ಕಾಲದಲ್ಲಿ ಕವಿ ಊರಿನ ಮಂಜು, ಇಬ್ಬನಿ, ಹಕ್ಕಿ ಹಾಡು, ಹುಲ್ಲುಹಾದಿ, ಕಾಡಬೀದಿ ಇವೆಲ್ಲವನ್ನು ಸುಮ್ಮನೇ ಕಣ್ತುಂಬಿಕೊಂಡುಬಿಡಬೇಕು ಎನ್ನುವ ಪುಟ್ಟ ಬೆರಗಿನಿಂದ ಕವಿ ಊರಿಗೆ ಮತ್ತೆ ಬಂದಿದ್ದೆವು.

ಎಷ್ಟು ಸಲ ಬಂದರೂ ಕುಪ್ಪಳಿ ಒಂದು ನವ್ಯತೆಯ ಕವಿತೆ. ತನ್ನ ಹಳೆತನದಲ್ಲಿಯೇ ಮತ್ತೆ ಮತ್ತೆ ಹೊಚ್ಚಹೊಸತಾಗಿ ಕಾಡುವ ಎದೆಯ ಗೂಡಿನ ಹಾಡು ಕುಪ್ಪಳಿ. ಲೋಕದ ಸಂಗತಿಗಳೆಲ್ಲವನ್ನೂ ಸೂಕ್ಷ್ಮವಾಗಿ ತನ್ನೊಳಗೆ ತಂದುಕೊಂಡರೂ ತನ್ನತನ ಬಿಟ್ಟುಕೊಡದೇ ಚಂಚಲವಾಗದ ಕವಿ ಊರು ಕುಪ್ಪಳಿ.

ಕವಿ ಮನೆಯ ದಾರಿಯಲ್ಲಿ ಇನ್ನೂ ಸರಿಯಾಗಿ ಬೆಳಕಾಗಿರಲಿಲ್ಲ, ಯಾವ ಪ್ರವಾಸಿಗರೂ ಕಾಲಿಟ್ಟು ಮಾತು ಮೈಲಿಗೆ ಮಾಡಿರಲಿಲ್ಲ. ಚೆಂದುಗ ಪಾರಿವಾಳವೊಂದು ಮಂಜಿನಲ್ಲೇ ಕೂತು ಧ್ಯಾನಸ್ಥವಾಗಿಬಿಟ್ಟಿತ್ತು. ದನವೊಂದು ಅಂಬಾ ಎಂದು ಮಂಜಿನ ಹಿನ್ನೆಲೆಯಲ್ಲಿ ನಿಂತು ಕುವೆಂಪು ಬಾಳಿದ ಮುದ್ದು ಮನೆಯನ್ನು ಮುದ್ದಾಗಿ ನೋಡುತ್ತ ‘ಹೀಗೆ ಬಂದು ಕವಿಮನೆಯ ಎದುರು ಧ್ಯಾನ ಮಾಡುವುದು ನನ್ನ ನಿತ್ಯದ ದಿನಚರಿ, ನೀವೆಲ್ಲಾ ಇಲ್ಲಿ ಬಂದು ಹೋಗುವವರು, ನಾವಿಲ್ಲಿ ಅನುದಿನವೂ ಕವಿಯ ನೆನಪಲ್ಲೇ, ಕವಿಯ ಸಗ್ಗದಲ್ಲೇ ಬಾಳಿ ಬೆಳೆಯುವವರು’ ಎನ್ನುತ್ತಾ ಸುಮಾರು ಅರ್ಧ ಗಂಟೆ ನಿಂತಲ್ಲೇ ನಿಂತು ಚಳಿಗಾಲದ ದಿವ್ಯ ಬೆಳಗನ್ನು ಸಂಭ್ರಮಿಸುತ್ತಿತ್ತು.

ಗೊಂಡೆಬಾಲದ ನಾಯಿ ‘ಬನ್ನಿ ಬನ್ನಿ ಕವಿ ಮನೆಯ ಹಿಂದೆ ನೋಡಿ ಕಪಿರಾಯನ ಕಾರುಬಾರು’ ಎಂದು ಮನೆಯ ಹಿಂಬದಿಯ ಎತ್ತರದಲ್ಲಿ ಸಾಲಾಗಿ ಕೂತು ಹಂಚಿನ ಮೇಲೆ ನೆಗೆದು ಗಲಾಟೆ ಮಾಡುತ್ತಿದ್ದ ಮಂಗಗಳನ್ನು ತೋರಿಸಿತು. ನಾವು ಸುಮ್ಮನೇ ಅದನ್ನು ನೋಡಿ ನಿಂತದ್ದನ್ನು ಕಂಡು ಅದಕ್ಕೆ ಬೇಸರವಾಗಿ ‘ಕವಿಮನೆಯನ್ನು ಹಾಳು ಮಾಡಿದರೆ ಜಾಗ್ರತೆ’ ಎಂದು ಬೌ ಬೌ ಬೌ ಎಂದು ಕೂಗಿಮಂಗಗಳನ್ನು ಓಡಿಸಿತು. ಕವಿಶೈಲದ ತನಕ ಜೊತೆಗೆ ಬಂದು ಗುತ್ತಿ ನಾಯಿಯಂತೆ ಕಾಡಿದ ಈ ನಾಯಿ, ಕೊನೆಗೆ ಏನೋ ಬೇಟೆ ಹುಡುಕಿ ಪೊದೆಗಳಲ್ಲಿ ಮಾಯವಾಯ್ತು.

ಆಹಾ ಕವಿಶೈಲದ ಚಳಿಯ ಬೆಳಗಿಗಂತೂ ನೂರಾರು ಮಂಜಿನ ರೆಕ್ಕೆಗಳು ಮೂಡಿದ್ದವು. ಸುತ್ತಲೂ ಮುತ್ತಿರುವ ಹೂಗೊಂಚಲ ಮರಗಳೂ ಮಂಜಿನ ಹಾಡನ್ನೇ ಪಿಸುಗುಡುತ್ತಿದ್ದವು. ಹುಲ್ಲು ಇಬ್ಬನಿಯಾಗಿತ್ತೋ, ಇಬ್ಬನಿ ಹುಲ್ಲಾಗಿತ್ತೋ ಅಂತೂ ಕುಪ್ಪಳಿ ಮೂಡಿಸುವ ಬೆರಗು, ಸೌಂದರ್ಯ, ಸ್ವರಗಳೆಲ್ಲವನ್ನೂ ಅನುಭವಿಸುತ್ತ ಕುಪ್ಪಳಿ ಮಣ್ಣಲ್ಲಿ ಒಂದಾಗಿತ್ತು ಹೂ ಇಬ್ಬನಿ. ಕವಿ ಸಮಾಧಿಯ ಮೇಲೆ ಸಿಪಿಲೆ ಹಕ್ಕಿ ಹಾಡುತ್ತ ನಡೆಯುತ್ತಿತ್ತು, ಬೋಳು ಮರವೊಂದರ ಮೇಲೆ ಕೂತು ಚಂದ್ರಮುಕುಟ ಹಕ್ಕಿ ತನ್ನ ಮುಕುಟ ತೆರೆಯುತ್ತ ಇನ್ನೇನು ಬರುವ ಎಳೆಬಿಸಿಲನ್ನೇ ಕಾಯುತ್ತಿತ್ತು. ಇವರೆಲ್ಲರೂ ನಮ್ಮೆಲ್ಲಾ ಹಾಡುಗಳನ್ನು ರವಿ ರಸವಶವಾಗುತ ಕೇಳುತ್ತಾನೆ ಎನ್ನುವ ತೆರದಲ್ಲಿ ಅಮರ ಕವಿ ಕುವೆಂಪು ಅವರಿಗಾಗಿ ಇಬ್ಬನಿಯಂತೆ ನೂರಾರು ರಾಗಗಳನ್ನು ಪೋಣಿಸುತ್ತ ಹಾಡುತ್ತಲೇ ಇದ್ದವು.

ಮತ್ತೆ ಕವಿಶೈಲದಿಂದ ರಾಜಬೀದಿಗಿಳಿದರೆ ದನಗಳ ಹಿಂಡನ್ನು ಕಾಯುತ್ತ, ಹಿಂಡೇ ತಾನಾಗುತ್ತ ಸಾಗುವ ಗೋಪಾಲಕಿ. ಕಂಬಳಿಕೊಪ್ಪೆಯ ಮರೆಯಲ್ಲಿ ಇಡೀ ಮಲೆನಾಡಿನ ಅಸ್ಮಿತೆ, ಭವ್ಯತೆ, ಬದುಕು, ಸಂಭ್ರಮವನ್ನು ಕಾಪಿಟ್ಟುಕೊಳ್ಳುತ್ತ ನಡೆಯುವ ಹಿರಿಯಜೀವ. ಇಂತಹ ಮನೋಹರವಾದ ಮಲೆನಾಡಿನ, ಕವಿ ಊರಿನ ಚಿತ್ರಗಳನ್ನು ನೋಡುತ್ತ ಕುಪ್ಪಳಿಯ ಚಳಿಗಾಲದ ಬೆಳಗನ್ನು ಸುಖಿಸುತ್ತಿದ್ದೆವು. ಅಷ್ಟರಲ್ಲಿ ಮಂಜು ಮೈಮುರಿದು ‘ಇನ್ನು ನೀವು ಹೊರಡಿ, ನಾವೂ ನಮ್ಮ ಕೆಲಸಕ್ಕೆ ಹೋಗಿ ಇರುಳಾಗುತ್ತಲೇ ಮತ್ತೆ ಬರುತ್ತೆವೆಂದೂ ಅಲ್ಲೆಲ್ಲೋ ಹೋಗಿಕರಗಿತು. ಅಷ್ಟೊತ್ತು ಬೆಳ್ಳಗಾಗಿದ್ದ ವನರಾಶಿಗಳು ಈಗ ಹಸಿರಾಗಿ ಗಾಳಿಗೆ ತೂಗಿದವು.

ಕವಿ ಭೌತಿಕವಾಗಿ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದರೂ ಅವರು ಕಾವ್ಯವಾಗಿಸಿದ ಬಗೆ ಬಗೆಯ ಹಕ್ಕಿಗಳು, ಪ್ರಕೃತಿ, ಜೀವಜಗತ್ತು, ಮಂಜು, ಗೋವು, ತೆನೆಗಾಳಿ ಇವೆಲ್ಲವೂ ಕುವೆಂಪು ಅವರ ಕಾವ್ಯವನ್ನು, ಕವಿ ಊರನ್ನು ಮತ್ತಷ್ಟು ಧ್ಯಾನಿಸುತ್ತ ಜೀವಂತವಾಗಿರಿಸಿವೆ. ಕವಿಯ ಈ ಊರು ಜೀವಜಗತ್ತನ್ನು ಕಾಯ್ದಂತೆ, ಜೀವಜಗತ್ತು ಕವಿಯ ಕಾವ್ಯವನ್ನು ಕಾಯುತ್ತ ನಮ್ಮೊಳಗಿನ ಮಲೆನಾಡನ್ನೂ ಕೂಡ ಕಾಪಿಟ್ಟಿದೆ ಅಂತನ್ನಿಸುತ್ತದೆ. ಹೌದು, ಕವಿ ಊರಿನ ಚಳಿಗಾಲದ ಬೆಳಗುಗಳಿವೆ ಅಲ್ಲವೇ, ಅವು ನಮ್ಮ ಬದುಕಿಗೊಂದು ವಿಶಿಷ್ಟವಾದ ಅನುಭೂತಿ. ನೆಮ್ಮದಿಯ ನಾಳೆಗಳಿಗೆ ಜೀವನ ಪ್ರೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT