ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಣ್ಣು ನಿರೂಪಿಸಿದ ಮಂಟೇಸ್ವಾಮಿ ಕಾವ್ಯ

Published : 4 ಆಗಸ್ಟ್ 2024, 0:06 IST
Last Updated : 4 ಆಗಸ್ಟ್ 2024, 0:06 IST
ಫಾಲೋ ಮಾಡಿ
Comments

‘ಮಂ ಟೇಸ್ವಾಮಿ’ ದಕ್ಷಿಣ ಕರ್ನಾಟಕದ ಜನಪದ ಅನುಭಾವಿ ಕಾವ್ಯಗಳಲ್ಲೊಂದು. ಈ ಮಹಾಕಾವ್ಯವನ್ನು ಇದುವರೆಗೆ ನೀಲಗಾರರು, ಅಂದರೆ ಪುರುಷರಷ್ಟೇ ಒಟ್ಟಿಗೇ ಕುಂತು ನಿರೂಪಿಸುವ ಮಾದರಿಯೇ ಹೆಚ್ಚು ಜನಪ್ರಿಯವಾಗಿರುವುದು. ಈ ಪುರುಷ ಕೇಂದ್ರಿತ ಸಂಪ್ರದಾಯವನ್ನು ಮುರಿದು, ಅದರ ಎದುರಿಗೆ ಆಧುನಿಕ, ಭಿನ್ನ ಮಾದರಿಯನ್ನು ನಟ ಪ್ರಕಾಶ್‌ ರಾಜ್‌ ನೇತೃ‌ತ್ವದ ‘ನಿರ್ದಿಗಂತ’ ತಂಡ ಈಗ ನಿರೂಪಿಸಿದೆ.

ಅದು, ಹೆಣ್ಣೊಬ್ಬಳು ಕಾವ್ಯಕಥನವನ್ನು ನಿರೂಪಿಸುವ ಮಾದರಿ. ಒಬ್ಬ ಹೆಣ್ಣೇ ಇಡೀ ಕಾವ್ಯ ನಿರೂಪಣೆಯ ನೇತೃತ್ವ ವಹಿಸಿರುವುದು. ಇದು ಈ ಕಾಲದ, ಈ ಕಾವ್ಯದ ಅಚ್ಚರಿಯ ಸಾಧ್ಯತೆ.

ಕಾವ್ಯದಲ್ಲಿ ಬರುವ ಮಹತ್ವದ ‘ಕಲ್ಯಾಣ ಪಟ್ಟಣದ ಸಾಲು’ ಭಾಗವು, ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿದ್ದ ಪ್ರೇಕ್ಷಕರನ್ನು ಬಸವಣ್ಣ ಮತ್ತು ಮಂಟೇಸ್ವಾಮಿ ಬದುಕಿದ್ದ ಎರಡು ಭಿನ್ನ ಕಾಲಘಟ್ಟ‌ಗಳ ನಡುವಿನ ರೋಚಕ ರಂಗ ಪಯಾಣಕ್ಕೂ ಕರೆದೊಯ್ದಿತ್ತು.

ಬಸವಣ್ಣನ ಕಾಲದ ಲಿಂಗಭಕ್ತಿ, ಆ ಕಾಲಕ್ಕೆ ಚಲಿಸಿ ಮಂಟೇಸ್ವಾಮಿ ಒಡ್ಡಿದ ಧಾರ್ಮಿಕ ಪ್ರತಿರೋಧ ಮತ್ತು ಈಗಿನ ಕಾಲದ ಕಾವಿಧಾರಿಗಳ ಕಡೆಗೆ ಚುಚ್ಚುನೋಟ–ಎಲ್ಲದ್ದರ ಮೇಳವಾಗಿ ಕಾವ್ಯ ಪ್ರಸ್ತುತಿ ವಿಶೇಷ ಪ್ರಯತ್ನವೇ. ‘ಧರೆಗೆ ದೊಡ್ಡವ’ರನ್ನು ತೋರಿಸಲು ‘ಕಲ್ಯಾಣ ಪಟ್ಟಣ’ದೆಡೆಗೆ ಕರೆದೊಯ್ಯುವ ಹೊಸ ಯಾನವಿದು. ತಂಡ ಇದನ್ನು ‘ಕಾವ್ಯ ಪ್ರಯೋಗ’ ಎಂದಷ್ಟೇ ಕರೆದುಕೊಂಡಿದ್ದರೂ, ‘ಕಾವ್ಯ ರಂಗ ಪ್ರಯೋಗ’ ಎಂದು ಉದಾರವಾಗಿ ಹೇಳಬಹುದು.

ಕಾವ್ಯಾರ್ಥಿ, ಹಾಡುಗಾರ್ತಿಯೂ ಆಗಿರುವ ನಟಿ ಶಾಲೋಮ್‌ ಸನ್ನುತಾ, ತಲೆದೂಗಿಸುವ ಹಾಡುಗಾರಿಕೆ ಮತ್ತು ಅಭಿನಯ, ಅಪ್ಯಾಯಮಾನವಾದ ನೃತ್ಯ, ನಿರರ್ಗಳ ನಿರೂಪಣೆಯ ಮೂಲಕ ರಂಗಕ್ಕೆ ತಂದ ಬಗೆಯು ಕಾವ್ಯದ ಕುರಿತ ಹೊಸ ವ್ಯಾಖ್ಯಾನದ ಪ್ರಯತ್ನಕ್ಕೂ ಸಾಕ್ಷಿಯಾಗಿತ್ತು.

ಈ ಪ್ರಯೋಗವು, ಮಂಟೇಸ್ವಾಮಿಯು ಗಂಡೇ, ಹೆಣ್ಣೇ ಎಂಬ ಪ್ರಶ್ನೆಗಳಾಚೆಗೆ, ಮಹಾಗುರುವಿನ ಲಿಂಗಾತೀತ ವ್ಯಕ್ತಿತ್ವದೆಡೆಗೂ ಬಿಟ್ಟ ಹೊಸ ಟಾರ್ಚ್‌ಲೈಟ್‌ನಂತೆಯೂ ಕಾಣುತ್ತದೆ. ಇದು ಭಕ್ತಿ ಸಂಗೀತವು ಕಾಣಿಸುವ, ಕೈಹಿಡಿದು ಕರೆದೊಯ್ಯುವ ಹೊಸ ಚಿತ್ತಸ್ಥಿತಿ.

ಇದುವರೆಗೆ ಸಾಂಪ್ರದಾಯಿಕ ವೇದಿಕೆಯಲ್ಲಿ ಮಂಡನೆಯಾಗುತ್ತಿದ್ದ ಕಾವ್ಯವನ್ನು, ನೀಲಗಾರರ ಮಟ್ಟುವನ್ನು ಅನುಸರಿಸಿಯೇ ಆಧುನಿಕ ವಾದ್ಯ ಸಂಗೀತದ ಮೂಲಕ ರಂಗ ವೇದಿಕೆಗೆ ರೂಪಾಂತರಿಸುವಲ್ಲಿ ವಾದ್ಯಮೇಳದ ಕಲಾವಿದರಾದ ರೋಹಿತ್‌, ಮುನ್ನಾ, ಅನುಷ್‌ ಶೆಟ್ಟಿ ಅವರ ಕೊಡುಗೆಯೂ ಇದೆ.

ಮಂಟೇಸ್ವಾಮಿ
ಮಂಟೇಸ್ವಾಮಿ

ಅಕಾಸ್ಟಿಕ್‌ ಗಿಟಾರ್‌, ಬೇಸ್‌ ಗಿಟಾರ್‌, ಕಹೂನ್‌ನಂಥ ಆಧುನಿಕ ವಾದ್ಯಗಳು, ಜಂಬೆ, ದುಡಿಯಂಥ ದೇಸಿ ವಾದ್ಯಗಳನ್ನು ಒಟ್ಟುಗೂಡಿಸಿ ರಂಗ ಸಂಗೀತಕ್ಕಾಗಿ ಒಗ್ಗಿಸಿಕೊಂಡ ಬಗೆಯು ಕಾವ್ಯದ ಆಸ್ವಾದನೆಗೆ ಹೊಸ ರುಚಿಯನ್ನು ಸೇರಿಸುತ್ತದೆ. ‘ಅಲ್ಲಾ ಬ್ಯಾರೇ ಅಲ್ಲಾ, ಅಲ್ಲಮ ಬ್ಯಾರೇ ಅಲ್ಲಾ’ ಎಂಬಂಥ ಸನ್ನಿವೇಶಗಳಲ್ಲಿ ಸೂಫಿ ಸಂಗೀತವೂ ಹೊಳೆಯುತ್ತದೆ.

ಬಸವಣ್ಣ, ಮಂಟೇಸ್ವಾಮಿ, ನೀಲಾಂಬಿಕೆ, ಅಲ್ಲಮಪ್ರಭು ಸೇರಿದಂತೆ ಪಾತ್ರಗಳನ್ನು ಕ್ಷಣಕ್ಷಣಕ್ಕೆ ಆವಾಹಿಸಿಕೊಂಡು ಸನ್ನಿವೇಶಗಳನ್ನು ಕಟ್ಟುತ್ತಾ, ಮೊದಲಿಂದ ಕೊನೆವರೆಗೂ ಇವರೆಲ್ಲರಿಂದ ದೂರ ನಿಂತ ನಿರೂಪಕಿಯಾಗಿಯೂ ಶಾಲೋಮ್‌ ಸನ್ನುತಾ ತಾವೊಬ್ಬ ಪಳಗಿದ ನಟಿ ಎಂಬುದನ್ನು ಸಾಬೀತು ಮಾಡುತ್ತಾರೆ. ‘ಸಿದ್ದಯ್ಯಾ ಸ್ವಾಮಿ ಬನ್ನ್ಯೋ’ ಎಂದು ಉದ್ದಕ್ಕೂ ಮೆಲುನಡಿಗೆಯ ಮೋಹಕ ನೃತ್ಯದಲ್ಲಿ ಇಡೀ ರಂಗಮಂದಿರವನ್ನು ಆವರಿಸುತ್ತಾರೆ. ತಂಬೂರಿಯನ್ನು ಪಾತ್ರ–ಸನ್ನಿವೇಶಗಳಿಗೆ ತಕ್ಕಂತೆ ಶೂಲ, ದೊಣ್ಣೆ, ಕಂಡಾಯ, ಬೆರಳ ತುದಿ ಹಾಗೂ ಇಡೀ ದೇಹದ ವಿಸ್ತರಣೆಯ ಸಂಕೇತವಾಗಿ ಮಾರ್ಪಡಿಸುವ ಬಗೆಯೂ ವಿಸ್ಮಯ.

ಮಂಟೇಸ್ವಾಮಿಯ ಪೂಜೆಗೆ ಅರ್ಪಿಸಬೇಕಾದ ಬಗೆಬಗೆಯ ಹೂವುಗಳ ವರ್ಣನೆಯು ಗಮನ ಸೆಳೆಯುವ ವಿಶಿಷ್ಟ ಪ್ರಯೋಗ. ಅದೊಂದು ಪ್ರತ್ಯೇಕ ಭಾಗವೆಂಬಂತೆ ಗಮನ ಸೆಳೆಯುತ್ತದೆ. ಬಸವಣ್ಣನನ್ನು, ಆತನ ಲಿಂಗದೀಕ್ಷೆಯ ಪರಿಕಲ್ಪನೆಯನ್ನು ತಿಪ್ಪೆಗುಂಡಿ ಮೇಲೆ ಕುಳಿತು ಪ್ರಶ್ನಿಸುತ್ತಾ, ತೀವ್ರ ಪ್ರತಿರೋಧ ವ್ಯಕ್ತಪಡಿಸುವ ಮಂಟೇಸ್ವಾಮಿಯ ‘ಮಹಾಗುರು’ ವ್ಯಕ್ತಿತ್ವದ ಬಗ್ಗೆ ಹೇಳುತ್ತಲೇ, ಈ ಕಾಲದ ಡೋಂಗಿ ಸ್ವಾಮೀಜಿಗಳ ಕುರಿತ ಕಟು ಟೀಕೆ, ವ್ಯಂಗ್ಯಗಳು ಪ್ರಯೋಗಕ್ಕೆ ಸಮಕಾಲೀನ ಮಹತ್ವವನ್ನು ದೊರಕಿಸುತ್ತವೆ.

ಮಂಟೇಸ್ವಾಮಿ
ಮಂಟೇಸ್ವಾಮಿ

ಮಂಟೇಸ್ವಾಮಿಯಷ್ಟೇ ನಿರಾಡಂಬರ ಎನ್ನಿಸುವಂಥ, ಪ್ರತಿಮಾತ್ಮಕವಾದ ರಂಗ ಪರಿಕರ ಕಟ್ಟಿದ ಕಲಾವಿದ ಖಾಜು ಗುತ್ತಲ್‌, ಕಾವ್ಯದ ಚೌಕಟ್ಟಿಗೆ ಹೊಳಪು ತುಂಬುವಂಥ ನೆರಳು–ಬೆಳಕು ವಿನ್ಯಾಸ ಮಾಡಿರುವ ಗಣೇಶ್‌ ಹೆಗ್ಗೋಡು ಅವರ ಕಸಬುದಾರಿಕೆಯೂ ನಿರೂಪಣೆಯ ಪರಿಣಾಮವನ್ನು ಹೆಚ್ಚಿಸಿದೆ. ಕನ್ನಡದ ಪ್ರಮುಖ ‘ಪ್ರತಿರೋಧದ ಪಠ್ಯ’ವಾಗಿಯೇ ಮಂಟೇಸ್ವಾಮಿ ಕಾವ್ಯವನ್ನು ಗ್ರಹಿಸಿರುವ ನಿರ್ದೇಶಕ ಶ್ರೀಪಾದ ಭಟ್‌, ಆಳ ಅಧ್ಯಯನ ಮತ್ತು ಒಳನೋಟಗಳಲ್ಲೇ ಅದನ್ನು ಕಂಡಿರಿಸಿದ್ದಾರೆ.

ಮಂಟೇಸ್ವಾಮಿ ಕಾವ್ಯದ ಹಲವು ಆಕರಗಳೂ, ಕಾವ್ಯ ಪ್ರಸ್ತುತಿಯ ಟ್ಯೂನ್‌ಗಳು ಈ ಪ್ರಯೋಗದ ಸ್ವರೂಪ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ಇದು ಅಂಥ ಕಾವ್ಯ ಸಂಕಲನ–ಟ್ಯೂನ್‌ಗಳ ಒಂದು ಹೊಸ ಎರಕ. ಸ್ವಂತದ್ದು ಎನ್ನುವಂಥದ್ದು ಅಲ್ಪ.

ಇಂಥ ವಿಶಿಷ್ಟ ಪ್ರಯೋಗವನ್ನು ಮೈಸೂರಿನ ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT