ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀತದಿಂದ ‘ಪದ್ಮಶ್ರೀ’ವರೆಗೆ...

Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
ಅಕ್ಷರ ಗಾತ್ರ

ಸೋಮಣ್ಣ ಅವರು ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ನಾಲ್ಕು ದಶಕಗಳಿಂದಲೂ ಶ್ರಮಿಸುತ್ತಾ ಬಂದಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ಕೇಂದ್ರ ಸರ್ಕಾರವು ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಅಲ್ಲದೇ ರಾಜ್ಯ ಸರ್ಕಾರ ಕೊಡುವ 2023ರ ವಾಲ್ಮೀಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

***

ಜೀತದಾಳಾಗಿದ್ದ ವ್ಯಕ್ತಿ ಅದರಿಂದ ವಿಮುಕ್ತಿ ಪಡೆದ ಮೇಲೆ ಏನು ಮಾಡಬಹುದು? ತನ್ನ ಬದುಕನ್ನಷ್ಟೇ ನೋಡಿಕೊಂಡು ಸುಮ್ಮನಿರಬಹುದಿತ್ತು. ಆದರೆ, ಸೋಮಣ್ಣ ತಮ್ಮ ಪರಂಪರೆಯ ಮೂಲ ಬೇರುಗಳಂತಿರುವ ಬುಡಕಟ್ಟು ಜನರಿಗೆ ಘನತೆಯ ಬದುಕು ಕಲ್ಪಿಸಲು ಹೋರಾಡುತ್ತಾ ಅವರ ಪಾಲಿನ ಆಶಾಕಿರಣವಾಗಿದ್ದಾರೆ.

ಸೋಮಣ್ಣ, ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಆಲತ್ತಾಳಹುಂಡಿಯವರು. ಈಗ ಮೊತ್ತ ಹಾಡಿಯಲ್ಲಿ ವಾಸವಿದ್ದಾರೆ. 66 ವರ್ಷದ ಇವರು ‘ಪದ್ಮಶ್ರೀ’ ಗೌರವಕ್ಕೆ ಭಾಜನವಾಗುವ ತನಕ ಸವೆಸಿದ ಹಾದಿ ಸುಲಭವಾದುದೇನಲ್ಲ. ನಾಲ್ಕು ದಶಕಗಳಿಂದ ಬುಡಕಟ್ಟು ಜನರ ಪರ ಧ್ವನಿ ಎತ್ತುತ್ತಾ ಬಂದಿದ್ದಾರೆ; ಅವರ ಬದುಕಿಗೆ ನೆರವಾಗುತ್ತಿದ್ದಾರೆ.

ಅವರಿಗಾಗ ಸುಮಾರು ಎಂಟು ವರ್ಷ. ತಾಯಿ ಹುಲ್ಲು ಕೊಯ್ದುಕೊಂಡು ಸರಗೂರಿಗೋ, ಎಚ್.ಡಿ. ಕೋಟೆಗೂ ತೆಗೆದುಕೊಂಡು ಹೋಗಿ ಮಾರಿ ಹಣ ತಂದರಷ್ಟೆ ಎಲ್ಲರ ಹೊಟ್ಟೆ ತುಂಬುತ್ತಿತ್ತು. ಒಮ್ಮೆ ಹೀಗೆ ಹೋಗುವಾಗ ಜಾರಿ ಬಿದ್ದರು. ಅವರ ಮೇಲೆ ಹುಲ್ಲಿನಹೊರೆ ಬಿದ್ದು ಆರೋಗ್ಯ ಹದಗೆಟ್ಟಿತು. ಆಗ ತಂದೆ ಕುನ್ನಯ್ಯ, ಸೋಮಣ್ಣನವರನ್ನು ಒಬ್ಬರ ಮನೆಗೆ ಜೀತಕ್ಕೆ ಇರಿಸಿದರು. ಒಂದು ವರ್ಷ ಊಟಕ್ಕಷ್ಟೆ ಜೀತ ಮಾಡಿದ ಸೋಮಣ್ಣಗೆ ಮುಂದಿನ ವರ್ಷ ಸಿಕ್ಕ ಕೂಲಿ ಹದಿನಾರೂವರೆ ರೂಪಾಯಿಗಳು! ಪ್ರತಿ ವರ್ಷ ಕೂಲಿ ಪ್ರಮಾಣ ಜಾಸ್ತಿಯಾಗುತ್ತಾ ಹೋಯಿತಾದರೂ ಜೀತ ನಿಲ್ಲಲಿಲ್ಲ. ಆಗ, ಜಾರಿಗೆ ಬಂದ ಜೀತ ವಿಮುಕ್ತಿ ಕಾಯ್ದೆ ಪರಿಣಾಮ ಸೋಮಣ್ಣ ಸ್ವತಂತ್ರರಾದರು. ಕೃಷಿಯೇ ಬದುಕಿಗೆ ಆಧಾರವಾಯಿತು. 

ಹೋರಾಟದ ಹಾದಿ...: ಸೋಮಣ್ಣನವರನ್ನು ತಾಯಿ ಆಗಾಗ ಹಾಡಿಗಳಿಗೆ ಕರೆದುಕೊಂಡು ಹೋಗಿ ತಮ್ಮ ಬಂಧುಗಳನ್ನು ಪರಿಚಯಿಸುತ್ತಿದ್ದರು. ಅವರು ಎದುರಿಸುತ್ತಿದ್ದ ಸಂಕಷ್ಟಗಳು ಬಾಲಕನ ಮನಸ್ಸನ್ನು ಕಲಕುತ್ತಿದ್ದವು. ಆದಿವಾಸಿಗಳು ಅರಣ್ಯಕ್ಕೆ ಹೋಗಿ ಊಟಕ್ಕೆ ಬೇಕಾದ ಸೊಪ್ಪನ್ನು ಕೊಯ್ದುಕೊಂಡು ಬರಲು ಅರಣ್ಯ ಇಲಾಖೆಯವರು ಬಿಡುತ್ತಿರಲಿಲ್ಲ. ರೈತರ ಬಳಿ ಕೇಳಲು ಹೋದರೆ ಕಳವು ಮಾಡಲು ಬಂದಿದ್ದಾರೆ ಎಂದು ತಪ್ಪಾಗಿ ಭಾವಿಸಿ ಥಳಿಸುತ್ತಾರೆಂಬ ಭಯ. ಪರಿಣಾಮ ಹಸಿವಿನಿಂದ ನರಳಬೇಕಿತ್ತು. ಇದು, ಸೋಮಣ್ಣನವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿತು. ‘ನನ್ನ ಜನರಿಗೆ ಏನಾದರೂ ಮಾಡಬೇಕು’ ಎನಿಸುತ್ತಲೇ ಇತ್ತು. ಅದಕ್ಕೆ ಅವರು ಆಯ್ದುಕೊಂಡ ಮಾರ್ಗವೇ ‘ಹೋರಾಟ’.

1970ರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಸರ್ಕಾರ ಜಾರಿಗೆ ತಂದ ನಂತರ ಬುಡಕಟ್ಟು ಜನರನ್ನು ಅರಣ್ಯದಿಂದ ಒಕ್ಕಲೆಬ್ಬಿಸುವ ಪ್ರಯತ್ನ ಆರಂಭಿಸಲಾಯಿತು. ಅದರ ವಿರುದ್ಧ ಹೋರಾಟದ ಪಣ ತೊಟ್ಟರು. ಇದಕ್ಕೆ ಬೆನ್ನೆಲುಬಾಗಲೆಂದು ದಲಿತ ಸಂಘರ್ಷ ಸಮಿತಿ ಕೂಡಿಕೊಂಡರು. ಅವರಿಗೆ ಕ್ಷೀರಸಾಗರ, ಕೋಟಿಗಾನಹಳ್ಳಿ ರಾಮಯ್ಯ, ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಲಿಂಗದೇವರು ಹಳೇಮನೆ ಮೊದಲಾದವರು ಪ್ರೇರಣೆಯಾದರು.  

ಕೆಲವು ವರ್ಷಗಳ ನಂತರ ತಮ್ಮದೇ ಆದ ಸಂಘಟನೆ ಕಟ್ಟಲು ನಿರ್ಧರಿಸಿದ ಅವರಿಗೆ ನೆರವಾದುದು ಹುಣಸೂರಿನ ಡೀಡ್‌ ಸಂಸ್ಥೆ. ಸಂಸ್ಥೆಯವರು ಸೋಮಣ್ಣ ಹಾಗೂ ಸಂಗಡಿಗರನ್ನು ಒಂದು ವರ್ಷ ಪರೀಕ್ಷೆಗೆ ಒಳಪಡಿಸಿದರು. ಮೊದಲಿಗೆ ಅನುಮಾನದಿಂದ ನೋಡಿದ್ದ ಅವರಿಗೆ ನಿಧಾನಕ್ಕೆ ವಿಶ್ವಾಸ ಮೂಡಿತು. ಆರ್ಥಿಕ ಸಹಾಯ ಮಾಡಿದರು. ಸೋಮಣ್ಣ ಹಾಗೂ ಮೂವರು ಸ್ನೇಹಿತರು ಹಾಡಿ, ಹಾಡಿಗಳಿಗೆ ಹೋದರು. ಅಲ್ಲಿನ ಬುಡಕಟ್ಟು ಜನರು ದಿನದೂಡುವುದೇ ಕಷ್ಟವಾಗಿತ್ತು. ಊಟಕ್ಕೆ ಪರದಾಡುತ್ತಿದ್ದರು. ಮಳೆಗಾಲದಲ್ಲಂತೂ ತೀವ್ರ ತೊಂದರೆ ಅನುಭವಿಸುತ್ತಾರೆ ಎನ್ನುವುದು ಗಮನಕ್ಕೆ ಬಂದಿತು. ಸಂಘಟನೆಯ ಕಿಚ್ಚು ಹೆಚ್ಚಾಯಿತು. 

‘ನಮ್ಮ ಜನರಿಗೆ ಮನೆ ಕಟ್ಟಿಸಿಕೊಡಬೇಕು, ಜಮೀನು ಒದಗಿಸಬೇಕು’ ಎಂದು ಉಪವಿಭಾಗಾಧಿಕಾರಿ  ಬಳಿಗೆ ಹೋಗಿದ್ದ ಸೋಮಣ್ಣ ಕಹಿ ಅನುಭವಿಸಿದರು. ‘ಆ ಜನರ ಬಳಿ ಹಣ ಪಡೆದುಕೊಂಡು ನಮ್ಮ ಬಳಿಗೆ ಬಂದಿದ್ದೀರಾ’ ಎಂದು ಅಧಿಕಾರಿ ನಿಂದಿಸಿದರು. ‘ಬೇಕಾದವರೇ ಕೇಳಲಿ ಬಿಡಿ’ ಎಂದಿದ್ದು ಅವರನ್ನು ಬಹುವಾಗಿ ಚಿಂತಿಸುವಂತೆ ಮಾಡಿತು. ಜನರೇ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಬೇಕು, ಇದಕ್ಕಾಗಿ ಸಂಘಟನೆ ಮಾಡಬೇಕು ಎಂಬ ಹಟಕ್ಕೆ ಬಿದ್ದರು.

‘ಸಂಘಟನೆಗಾಗಿ ಹಾಡಿಗಳ ಯಜಮಾನರನ್ನು ಸಂಪರ್ಕಿಸಿದ್ದೆವು. ಅವರು ಹೇಳುವುದನ್ನು ಯಾರೂ ಮೀರುತ್ತಿರಲಿಲ್ಲ. ಅವರ ಮೂಲಕ ಜಾಗೃತಿ ಮೂಡಿಸಲು ಆರಂಭಿಸಿದೆವು. ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲೇಬೇಕು. ಕಾಡಿನಲ್ಲೇ ಇರೋಣ, ನಮ್ಮ ಸಂಸ್ಕೃತಿ, ಆಚಾರ–ವಿಚಾರಗಳನ್ನು ಉಳಿಸಿಕೊಳ್ಳೋಣ ಎಂದು ತಿಳಿಸುತ್ತಿದ್ದೆವು. ಮೈಸೂರು, ಚಾಮರಾಜನಗರ, ಕೊಡಗು, ಉಡುಪಿ, ದಕ್ಷಿಣ ಕನ್ನಡ ಮೊದಲಾದ ಕಡೆಗಳಲ್ಲೆಲ್ಲಾ ಸಂಚರಿಸಿದೆವು. ಜಿಲ್ಲಾ ಸಮಿತಿಗಳನ್ನು ರಚಿಸಿದೆವು. ಬಳಿಕ, ರಾಜ್ಯದ ಮೂಲ ನಿವಾಸಿಗಳ ವೇದಿಕೆ ರಚನೆಯಾಯಿತು’ ಎಂದು ಹೋರಾಟದ ಹಾದಿಯನ್ನು ನೆನಪಿಸಿಕೊಳ್ಳುತ್ತಾರೆ. 

ಬುಡಕಟ್ಟು ಜನರ ಬವಣೆ ಎಲ್ಲ ರಾಜ್ಯದಲ್ಲೂ ಒಂದೇ ಎಂಬುದು ಮನವರಿಕೆಯಾಯಿತು. ಮೂಲ ನೆಲೆಗಳನ್ನು ವಾಪಸ್ ಕೊಡಬೇಕೆಂದು ಹೋರಾಟ ತೀವ್ರಗೊಳಿಸಿದರು. ದೆಹಲಿಯಲ್ಲಿ ವಿವಿಧ ರಾಜ್ಯಗಳವರೊಂದಿಗೆ ಸೇರಿ ಹೋರಾಡಿದರು. ಪರಿಣಾಮ, ರಾಷ್ಟ್ರೀಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷರಾಗಿದ್ದ ಬಿ.ಡಿ.ಶರ್ಮಾ ಅವರು ಹಾಡಿಗಳಿಗೆ ಬಂದು ಅಲ್ಲಿಯೇ ಉಳಿದುಕೊಂಡು ಸಮಸ್ಯೆಗಳನ್ನು ಆಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಸಂಘಟಿತ ಪ್ರಯತ್ನದಿಂದ ನೂರಾರು ಮಂದಿಗೆ ಅರಣ್ಯ ಪ್ರದೇಶದಿಂದ ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಡುವಲ್ಲಿ ಸೋಮಣ್ಣ ಪಾತ್ರ ಹಿರಿದು. ಕೃಷಿ ಮಾಡಲು ಕೆಲವರಿಗೆ 6ರಿಂದ 11 ಎಕರೆವರೆಗೂ ಜಮೀನು ಸಿಕ್ಕಿದೆ. 

ನರ್ಮದಾ ಬಚಾವೋ ಹೋರಾಟದಲ್ಲಿ ಮೇಧಾ ಪಾಟ್ಕರ್‌ ಜೊತೆಗೂ ಪಾಲ್ಗೊಂಡಿದ್ದರು. 2008ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸಕ್ರಿಯವಾಗಿದ್ದಾರೆ. 1991ರಲ್ಲಿ ಫಿಲಿಪೀನ್ಸ್‌ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಬುಡಕಟ್ಟು ಜನರ ಸಮಸ್ಯೆಗಳನ್ನು ಮಂಡಿಸಿದ್ದಾರೆ. 

ಕೃಷಿಗೆ ಜಮೀನು, ವಾಸಿಸಲು ಮನೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಶಾಲೆ ಬೇಕು ಎಂಬುದು ಬುಡಕಟ್ಟು ಜನರ ಪ್ರಮುಖ ಬೇಡಿಕೆ. ಎಲ್ಲಿ ಇದ್ದೇವೆಯೋ ಆ ಜಾಗ ನಮಗೇ ಬಿಟ್ಟುಕೊಡಬೇಕು ಎಂಬುದು ಅವರ ಮನವಿ. ಅದನ್ನು ಮುಂದಿಟ್ಟುಕೊಂಡು ಹೋರಾಟ ನಡೆದಿದೆ. 25 ಮಕ್ಕಳಿದ್ದರೂ ಅಲ್ಲೊಂದು ಸರ್ಕಾರಿ ಶಾಲೆ ತೆರೆಯಬೇಕು ಎಂಬ ಬೇಡಿಕೆಗೂ ಸರ್ಕಾರದಿಂದ ಸ್ಪಂದನೆ ದೊರೆಯಿತು. ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಕೊಡಿಸಲು ಹೋರಾಡಿದರು. ಹೊರಗಿನವರನ್ನು ಕಾವಲಿಗೆ ನೇಮಿಸದೇ ಕಾಡಿನ ಜ್ಞಾನವಿರುವ ಮೂಲ ಆದಿವಾಸಿಗಳನ್ನೇ ನೇಮಿಸಿಬೇಕು ಎಂಬ ಹೋರಾಟವನ್ನೂ ನಡೆಸಿದರು. ಮೂಲ ಆದಿವಾಸಿಗಳಿಗೇ ಕೆಲಸ ಸಿಗುತ್ತಾ ಹೋಯಿತು. ಹಾಡಿಗಳಿಗೆ ನ್ಯಾಯಬೆಲೆ ಅಂಗಡಿಗಳು ಮಂಜೂರಾದವು. ವಿದ್ಯಾಭ್ಯಾಸ ಮಾಡಿದವರಿಗೆ ಕೆಲಸ ಕೊಡಿಸಲು ಶ್ರಮಿಸುತ್ತಿದ್ದಾರೆ.

ಆರಂಭದಲ್ಲಿ ಕೇರಳದ ‘ಪೆಡಿನಾ’ ಟ್ರಸ್ಟ್‌ ಮೂಲಕ ಕೆಲಸ ಮಾಡುತ್ತಿದ್ದರು. ನಂತರ ‘ವಿಕಾಸ ಬುಡಕಟ್ಟು ಕೃಷಿಕರ ಸಂಘ’ವನ್ನು ರಚಿಸಿಕೊಂಡರು. ಎಚ್‌.ಡಿ.ಕೋಟೆ ತಾಲ್ಲೂಕಿನ ಚಾಮಲಾಪುರದಲ್ಲಿ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು. ಕಾವಾಡಿಗಳು–ಮಾವುತರ ಕೆಲಸ ಕಾಯಂಗೊಳಿಸುವ ಹೋರಾಟದಲ್ಲೂ ಇವರ ಪಾತ್ರವಿದೆ. ದಸರಾ ಬಹಿಷ್ಕರಿಸುವ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸಿದರು.

ಚುನಾವಣೆಯಲ್ಲಿ ಸೋಲು

1991ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರ ಹಾಗೂ 2008ರಲ್ಲಿ ಎಚ್‌.ಡಿ. ಕೋಟೆಯಲ್ಲಿ (ಪರಿಶಿಷ್ಟ ಪಂಗಡ ಮೀಸಲಾದಾಗ) ಪಕ್ಷೇತರನಾಗಿ ಸ್ಪರ್ಧಿಸಿದ್ದ ಸೋಮಣ್ಣ, ಜನಪ್ರತಿನಿಧಿಯಾಗಿ ಆಯ್ಕೆಯಾಗುವುದು ಸಾಧ್ಯವಾಗಲಿಲ್ಲ. 2016ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿತ್ತು. ಮರುದಿನ ಪಟ್ಟಿಯಿಂದ ಹೆಸರು ತೆಗೆದಿತ್ತು! ಇದನ್ನು ಖಂಡಿಸಿ ಪ್ರಗತಿಪರರು ಸೇರಿ ದೇಣಿಗೆ ಸಂಗ್ರಹಿಸಿ ಸಾಹಿತಿ ದೇವನೂರ ಮಹಾದೇವ ಸಮ್ಮುಖದಲ್ಲಿ ‘ಜನ ರಾಜ್ಯೋತ್ಸವ’ ಪ್ರಶಸ್ತಿಯನ್ನು
₹1 ಲಕ್ಷ ನಗದಿನೊಂದಿಗೆ ನೀಡಿ ಗೌರವಿಸಿದ್ದರು.

ಹೋಟೆಲ್‌ ನಿರ್ಮಿಸುವುದು ವಿರೋಧಿಸಿ

ಅದು 2008ರಿಂದ 2010ರವರೆಗಿನ ಅವಧಿ. ನಾಗರಹೊಳೆಯ ಮೂರ್ಕಲ್‌ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹೋಟೆಲ್‌ ನಿರ್ಮಾಣಕ್ಕೆ ತಾಜ್‌ ಸಮೂಹದವರು ಮುಂದಾಗಿದ್ದರು. ವಿಷಯ ತಿಳಿದ ಸೋಮಣ್ಣ, ದೊಡ್ಡದಾದ ಹೋಟೆಲ್ ಅನ್ನೇ ಕಟ್ಟಬಹುದು, ನಮಗೆ ಅಂಗನವಾಡಿಯನ್ನೋ, ಶಾಲೆಯನ್ನೋ ಕಟ್ಟಿಕೊಡಲು ಆಗುವುದಿಲ್ಲವೇ ಎಂದು ಅರಣ್ಯ ಇಲಾಖೆಯವರನ್ನು ಕೇಳಿದ್ದರು. ಸ್ಪಂದನೆ ಸಿಗದಿದ್ದಾಗ ಹೋರಾಟ ಆರಂಭಿಸಿದರು. ಆದಿವಾಸಿಗಳು ಸೇರಿಕೊಂಡರು.

ಹೋರಾಟ ಹತ್ತಿಕ್ಕಲು ವ್ಯವಸ್ಥೆಯು ಪೊಲೀಸರನ್ನು ಬಳಸಿಕೊಂಡಿತು. ಆದರೆ, ಸೋಮಣ್ಣ ಜಗ್ಗಲಿಲ್ಲ. ಕಾನೂನು ಹೋರಾಟ ನಡೆಸಿದರು. ಹಣಕ್ಕಾಗಿ ಸೋಮಣ್ಣ ತಮ್ಮ ಪತ್ನಿಯ ಓಲೆ ಅಡವಿಡಬೇಕಾಯಿತು. ಆದಿವಾಸಿಗಳ ಪರವಾಗಿ ತೀರ್ಪು ಬಂದಿತು. ಬುಡಕಟ್ಟು ಕೃಷಿಕರ ಸಂಘದವರು ಹಾಗೂ ಆದಿವಾಸಿಗಳು ಸರ್ಕಾರದ ಕಣ್ತೆರೆಸಿದರು. ಹೋಟೆಲ್‌ನವರು ಸುಪ್ರೀಂ ಕೋರ್ಟ್ ಮೊರೆ ಹೋದರು. ಅಲ್ಲೂ ಆದಿವಾಸಿಗಳ ಪರವಾಗಿಯೇ ತೀರ್ಪು ಬಂದಿತು. ಅವರ ಹೋರಾಟಕ್ಕೆ ಜಯ ಸಿಕ್ಕಿತು. 

ಸೋಮಣ್ಣ
ಸೋಮಣ್ಣ

ಹೋರಾಟ ಮುಂದುವರಿಸುವೆ...

ಕಾಡಂಚಿನಲ್ಲಿ ಇರುವ ಎಲ್ಲರಿಗೂ ತಲಾ 3 ಎಕರೆ ಜಮೀನು ಸಿಗಬೇಕು. ವಿದ್ಯಾರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡಬೇಕು. ಪರಿಶಿಷ್ಟ ಪಂಗಡಕ್ಕೆ ಸೇರಿದ ಇತರ ಜಾತಿಗಳಿಂದಾಗಿ ನಮಗೆ ಕೆಲಸ ಸಿಗುತ್ತಿಲ್ಲ. ಆದ್ದರಿಂದ ಮೂಲ ಬುಡಕಟ್ಟು ಜನರಿಗೆ ಪ್ರತ್ಯೇಕ ಯೋಜನೆ ಆಗಬೇಕು; ಒಳಮೀಸಲಾತಿ ದೊರೆಯಬೇಕು. ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು. ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯುವಂತಾಗಲು ಹೋರಾಟ ಮುಂದುವರಿಸುತ್ತೇನೆ. ಚಳವಳಿ ಒಬ್ಬರ ಮೇಲೆ ಅವಲಂಬಿತವಾಗಬಾರದು. ಆದ್ದರಿಂದ ಸಾಮೂಹಿಕ ನಾಕಯತ್ವದಲ್ಲಿ ನಂಬಿಕೆ ಇಟ್ಟವನು ನಾನು. ಎಲ್ಲವನ್ನೂ ನಾನೇ ಮಾಡಿದೆ ಎನ್ನಲಾಗದು. ಎಲ್ಲರ ಸಹಕಾರದಿಂದ ಆಗಿದೆ ಎನ್ನುತ್ತಾರೆ ಅವರು.  ನಮ್ಮವರ ಬದುಕು ಕೊಂಚ ಸುಧಾರಿಸಿದೆ. ಇನ್ನೂ ದೊಡ್ಡಮಟ್ಟದಲ್ಲಿ ಆಗಬೇಕಿದೆ. ನಮ್ಮ ಪುನರ್ವಸತಿ ಹೇಗಿರಬೇಕೆಂದರೆ ಕಾಡನ್ನು ನಾಶ ಮಾಡದೇ ಮರ–ಗಿಡ ಪ್ರಾಣಿ–ಪಕ್ಷಿಗಳ ಜೊತೆ ಜೊತೆಗೇ ಬದುಕಲು ಅವಕಾಶ ಮಾಡಿಕೊಡುವುದು ಆಗಬೇಕು ಎಂಬುದು ಸೋಮಣ್ಣನವರ ಆಸೆ. ಈಗಿನ ಯುವಕರರು ನಮ್ಮ ಮೂಲ ನೆಲೆ ಮೂಲ ಸಂಸ್ಕೃತಿ ಉಳಿಸಿಕೊಂಡು ಹೋಗಬೇಕು ಎಂಬ ಸಲಹೆಯೂ ಅವರದು.   1991ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರ ಹಾಗೂ 2008ರಲ್ಲಿ ಎಚ್‌.ಡಿ. ಕೋಟೆಯಲ್ಲಿ (ಪರಿಶಿಷ್ಟ ಪಂಗಡ ಮೀಸಲಾದಾಗ) ಪಕ್ಷೇತರನಾಗಿ ಸ್ಪರ್ಧಿಸಿದ್ದ ಅವರು ಜನಪ್ರತಿನಿಧಿಯಾಗಿ ಆಯ್ಕೆಯಾಗುವುದು ಸಾಧ್ಯವಾಗಲಿಲ್ಲ. 2016ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿತ್ತು. ಮರುದಿನ ಪಟ್ಟಿಯಿಂದ ಹೆಸರು ತೆಗೆದಿದತ್ತು! ಇದನ್ನು ಖಂಡಿಸಿ ಪ್ರಗತಿಪರರು ಸೇರಿ ದೇಣಿಗೆ ಸಂಗ್ರಹಿಸಿ ಸಾಹಿತಿ ದೇವನೂರ ಮಹಾದೇವ ಸಮ್ಮುಖದಲ್ಲಿ ‘ಜನ ರಾಜ್ಯೋತ್ಸವ‘ ಪ್ರಶಸ್ತಿಯನ್ನು ₹ 1 ಲಕ್ಷ ನಗದಿನೊಂದಿಗೆ ನೀಡಿ ಗೌರವಿಸಿದ್ದರು. 2023ರಲ್ಲಿ ರಾಜ್ಯ ಸರ್ಕಾರದಿಂದ ಕೊಡಮಾಡುವ ವಾಲ್ಮೀಕಿ ಪ್ರಶಸ್ತಿಗೆ ಭಾಜನರಾದರು. ಈಗ ಅವರನ್ನು ‘ಪದ್ಮಶ್ರೀ’ ಅರಸಿ ಬಂದಿದೆ.

ಹೋಟೆಲ್‌ ನಿರ್ಮಿಸುವುದು ವಿರೋಧಿಸಿ ಅದು 2008ರಿಂದ 2010ರವರೆಗಿನ ಅವಧಿ. ನಾಗರಹೊಳೆಯ ಮೂರ್ಕಲ್‌ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹೋಟೆಲ್‌ ನಿರ್ಮಾಣಕ್ಕೆ ತಾಜ್‌ ಸಮೂಹದವರು ಮುಂದಾಗಿದ್ದರು. ವಿಷಯ ತಿಳಿದ ಸೋಮಣ್ಣ ದೊಡ್ಡದಾದ ಹೋಟೆಲ್ ಅನ್ನೇ ಕಟ್ಟಬಹುದು ನಮಗೆ ಅಂಗನವಾಡಿಯನ್ನೋ ಶಾಲೆಯನ್ನೋ ಕಟ್ಟಿಕೊಡಲು ಆಗುವುದಿಲ್ಲವೇ ಎಂದು ಅರಣ್ಯ ಇಲಾಖೆಯವರನ್ನು ಕೇಳಿದ್ದರು. ಸ್ಪಂದನೆ ಸಿಗದಿದ್ದಾಗ ಹೋರಾಟ ಆರಂಭಿಸಿದರು. ಆದಿವಾಸಿಗಳು ಸೇರಿಕೊಂಡರು. ಹೋರಾಟ ಹತ್ತಿಕ್ಕಲು ವ್ಯವಸ್ಥೆಯು ಪೊಲೀಸರನ್ನು ಬಳಸಿಕೊಂಡಿತು. ಆದರೆ ಸೋಮಣ್ಣ ಜಗ್ಗಲಿಲ್ಲ. ಕಾನೂನು ಹೋರಾಟ ನಡೆಸಿದರು. ಹಣಕ್ಕಾಗಿ ಸೋಮಣ್ಣ ತಮ್ಮ ಪತ್ನಿಯ ಓಲೆ ಅಡವಿಡಬೇಕಾಯಿತು. ಆದಿವಾಸಿಗಳ ಪರವಾಗಿ ತೀರ್ಪು ಬಂದಿತು. ಬುಡಕಟ್ಟು ಕೃಷಿಕರ ಸಂಘದವರು ಹಾಗೂ ಆದಿವಾಸಿಗಳು ಸರ್ಕಾರದ ಕಣ್ತೆರೆಸಿದರು. ಹೋಟೆಲ್‌ನವರು ಸುಪ್ರೀಂ ಕೋರ್ಟ್ ಮೊರೆ ಹೋದರು. ಅಲ್ಲೂ ಆದಿವಾಸಿಗಳ ಪರವಾಗಿಯೇ ತೀರ್ಪು ಬಂದಿತು. ಅವರ ಹೋರಾಟಕ್ಕೆ ಜಯ ಸಿಕ್ಕಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT