ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಶಿಬಿರ; ಅನೇಕತೆಯ ಆಗರ

Published 22 ಏಪ್ರಿಲ್ 2023, 20:20 IST
Last Updated 22 ಏಪ್ರಿಲ್ 2023, 20:20 IST
ಅಕ್ಷರ ಗಾತ್ರ

ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹಲವು ಕ್ಷೇತ್ರಗಳ ಆಸಕ್ತಿಯ ರೆಕ್ಕೆ–ಪುಕ್ಕ ಮೂಡಿಸುತ್ತವೆ. ನಮ್ಮ ನಾಡಿನಲ್ಲಿ ನಡೆಯುವ ಅಂತಹ ಕೆಲವು ಪ್ರಮುಖ ಶಿಬಿರಗಳ ರೂಪುರೇಷೆ ಆಸಕ್ತಿಕರವಾಗಿದೆ.

ಶಾಲೆ, ಹೋಮ್‌ವರ್ಕ್‌, ಟ್ಯೂಷನ್‌ಗಳಿಗೆ ಒಂದು ಅಲ್ಪವಿರಾಮ ಬಿದ್ದ ಸಮಯವಿದು. ವಾರ್ಷಿಕ ಪರೀಕ್ಷೆ ಬರೆದು ಫಲಿತಾಂಶ ಬಂದ ತಕ್ಷಣ ಪೋಷಕರ ಚಿಂತೆ...ಮಕ್ಕಳನ್ನು ರಜೆಯಲ್ಲಿ ಏನು ಮಾಡುವುದು? ಅಜ್ಜ–ಅಜ್ಜಿ, ಸಂಬಂಧಿಕರ ಮನೆಗಳಿಗೆ ಹೋಗಲು ಇಚ್ಛೆ ಇಲ್ಲದಿರುವವರು, ಅವಕಾಶ ಇಲ್ಲದಿರುವವರಿಗೆ ಅಲ್ಲಲ್ಲಿ ನಡೆಯುವ ‘ಬೇಸಿಗೆ ರಜಾ ಶಿಬಿರ’ಗಳೇ ಮಕ್ಕಳ ಮನರಂಜಿಸುವ ತಾಣವಾಗಿ ಕಾಣುತ್ತವೆ.

ಎಂಥ ರಜಾ ಶಿಬಿರ ಮಕ್ಕಳಿಗೆ ಉತ್ತಮ ಎಂಬ ಪ್ರಶ್ನೆಯಂತೂ ಎಲ್ಲ ಪೋಷಕರಿಗೂ ಇದ್ದೇ ಇರುತ್ತದೆ. ಕಲೆ–ನೃತ್ಯ–ನಾಟಕ–ಚಿತ್ರಕಲೆ ಸೇರಿ ವಿವಿಧ ವಿಷಯಗಳನ್ನು ಸೇರಿಸಿ ನಡೆಸುವ ಶಿಬಿರ ಹೆಚ್ಚಿನ ಎಲ್ಲ ಕಡೆ ಕಂಡುಬರುತ್ತಿದೆ. ಒಂದೇ ವಿಷಯದ ಮೇಲೆ ಮಾಡುವ ಶಿಬಿರಗಳೂ ಈಚೆಗೆ ಟ್ರೆಂಡ್‌ ಆಗಿವೆ. ಮೈಸೂರಿನ ನಟನ ಸಂಸ್ಥೆಯ ‘ರಜಾ ಮಜಾ’ ಶಿಬಿರ, ಕುಪ್ಪಳಿಯಲ್ಲಿ ನಡೆಯುವ ‘ಮಳೆಬಿಲ್ಲು’ ಬೇಸಿಗೆ ಶಿಬಿರ, ತುಮಕೂರು ವಿಜ್ಞಾನ ಕೇಂದ್ರ ನಡೆಸುವ ಬೇಸಿಗೆ ವಿಜ್ಞಾನ ಶಿಬಿರ, ಮೈಸೂರು ಮೃಗಾಲಯದಿಂದ ನಡೆಯುವ ‘ಬೇಸಿಗೆ ಶಿಬಿರ’, ಹಾವಂಜೆಯಲ್ಲಿ ನಡೆಯುವ ‘ಬಾಲ–ಲೀಲಾ’ ಶಿಬಿರಗಳು ಮಕ್ಕಳಿಗೆ ಮರೆಯದ ಅನುಭವ ಬುತ್ತಿಯನ್ನು ಕಟ್ಟಿಕೊಡುತ್ತವೆ. ರಂಗಾಯಣ ನಡೆಸುವ ಬೇಸಿಗೆ ಶಿಬಿರಕ್ಕೆ ಮಕ್ಕಳು ಧಾವಿಸಿ ಬರುವಂತಾಗುತ್ತದೆ. ರಾಜ್ಯದಾದ್ಯಂತ ಇಂಥದ್ದೇ ಹಲವು ಶಿಬಿರಗಳು ತಮ್ಮ ವಿಷಯ–ವಸ್ತುಗಳಿಂದಾಗಿ ಮನೆಮಾತಾಗಿವೆ.

ಕುವೆಂಪು ಅವರ ಜನ್ಮಸ್ಥಳ ಕುಪ್ಪಳಿಯ ಸುಂದರ ಪರಿಸರದಲ್ಲಿ ಮಕ್ಕಳಿಗಾಗಿ ನಡೆಯುವ ‘ಮಳೆಬಿಲ್ಲು’ ಬೇಸಿಗೆ ಶಿಬಿರ ಪೂರ್ಣವಾಗಿ ರಂಗ ಚಟುವಟಿಕೆಯನ್ನೇ ಕೇಂದ್ರವಾಗಿರಿಸಿಕೊಂಡಿರುವ ಅಪರೂಪದ ಕಾರ್ಯಕ್ರಮ. ಸಾಗರದ ಎಂ.ವಿ. ಪ್ರತಿಭಾ ಅವರು 11 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಈ ಶಿಬಿರಕ್ಕೆ ರಾಜ್ಯದಾದ್ಯಂತ ಮನ್ನಣೆಯಿದೆ.

‘ಕುವೆಂಪು ಸಾಹಿತ್ಯ ಆಧಾರಿತ ನಾಟಕಗಳನ್ನು ಹೇಳಿಕೊಡುತ್ತೇವೆ. ಈ ಬಾರಿ ‘ನನ್ನ ಗೋಪಾಲ’ ಹಾಗೂ ‘ಕಿಂದರ ಜೋಗಿ’ ನಾಟಕಗಳಿವೆ. ಡೊಳ್ಳುಕುಣಿತದ ತರಬೇತಿಯೂ ಇದೆ. ಮಕ್ಕಳು ಸ್ವತಂತ್ರ ಮನೋಭಾವ ರೂಢಿಸಿಕೊಳ್ಳಲಿ, ಮೊಬೈಲ್‌, ಟಿ.ವಿಗಳ ಆಕರ್ಷಣೆಯಿಂದ ಹೊರಬರಲಿ, ಬದುಕಿನಲ್ಲಿ ಶಿಸ್ತು ಕಲಿಯಬೇಕೆನ್ನುವವರು, ಕನ್ನಡದ ಬಗ್ಗೆ ಆಸ್ಥೆ ಇರುವವರು, ಆಂಗ್ಲ ಮಾಧ್ಯಮದ ಮಧ್ಯೆ ಕನ್ನಡ ಕಳೆದು ಹೋಗದಿರಲಿ ಎಂಬ ಕಳಕಳಿ ಇರುವಂಥ ಹಲವರು ಶಿಬಿರಕ್ಕೆ ಮಕ್ಕಳನ್ನು ಕರೆತರುತ್ತಾರೆ. ನಾಟಕ ಕಲೆಯಲ್ಲಿ ಶಿಸ್ತು, ರಿಹರ್ಸಲ್‌, ಸಮಯ ಪಾಲನೆ, ಅಬ್ಸರ್ವೇಶನ್‌ ಪ್ರಮುಖ ಅಂಶಗಳು. ಇದನ್ನು ಕಲಿಯುವ ಮಕ್ಕಳು ಇದನ್ನು ತಮ್ಮ ಶೈಕ್ಷಣಿಕ ಬದುಕಿನಲ್ಲೂ ಅಳವಡಿಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಚಿಂತನಾ ಸಾಮರ್ಥ್ಯವೂ ಬೆಳೆಯುತ್ತದೆ’ ಎಂದು ಪ್ರತಿಭಾ ವಿವರಿಸಿದರು.

ಶಾಲೆಗಳಲ್ಲಿ ಯಾಂತ್ರಿಕವಾಗಿ ಕಲಿಯುವ ಮಕ್ಕಳನ್ನು ಸೃಜನಾತ್ಮಕವಾಗಿ ಯೋಚಿಸಿ ಕಾರ್ಯತತ್ಪರರಾಗುವಂತೆ ಮಾಡುತ್ತಿದೆ ತುಮಕೂರು ವಿಜ್ಞಾನ ಕೇಂದ್ರ. ಈ ಕೇಂದ್ರದವರು ಪ್ರತಿ ಬೇಸಿಗೆ ರಜೆಯಲ್ಲಿ ನಡೆಸುವ ‘ಬೇಸಿಗೆ ವಿಜ್ಞಾನ ಶಿಬಿರ’ವು ವಿಜ್ಞಾನ ಜಗತ್ತಿನ ಕಡೆ ಮಕ್ಕಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. 36ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶಿಬಿರದಲ್ಲಿ ಮಕ್ಕಳನ್ನು ಮೂಲವಿಜ್ಞಾನದ ಕಡೆ ಆಕರ್ಷಿಸುವುದು, ಸಂಶೋಧನಾ ಚಟುವಟಿಕೆಯಲ್ಲಿ ತೊಡಗಿಸುವುದು, ಪ್ರಶ್ನೆ ಮಾಡುವಂತೆ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ.

‘ಈ ಬಾರಿ ನಾವು ‘ವ್ಯೋಮಯಾನ’ ಎಂಬ ವಿಷಯವನ್ನು ಪ್ರಧಾನವಾಗಿರಿಸಿ ಶಿಬಿರ ಆಯೋಜಿಸಿದ್ದೇವೆ. ದೂರದರ್ಶಕದ ಮೂಲಕ ಆಕಾಶಕಾಯಗಳ ವೀಕ್ಷಣೆ ನಡೆಯಲಿದೆ. ಸಾವಯವ ತೋಟಕ್ಕೆ ಮಕ್ಕಳನ್ನು ಕರೆದೊಯ್ದು ಸಾವಯವ ಕೃಷಿಯ ಮಹತ್ವದ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಮಕ್ಕಳಿಂದಲೂ ಕೆಲವು ಕೃಷಿ ಕೆಲಸಗಳನ್ನು ಮಾಡಿಸಲಾಗುತ್ತದೆ. ಹಕ್ಕಿಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಮಕ್ಕಳಿಂದಲೇ ಆಟಿಕೆ, ವಿಜ್ಞಾನದ ಮಾದರಿಗಳನ್ನು ಮಾಡಿಸಲಾಗುತ್ತದೆ’ ಎಂದು ವಿಜ್ಞಾನ ಕೇಂದ್ರದ ಮಧುಸೂದನ್‌ ರಾವ್‌ ಕೆ.ಎನ್‌. ತಿಳಿಸಿದರು.

ವನ್ಯಜೀವಿಗಳು, ಅರಣ್ಯ, ಪರಿಸರ, ಹಕ್ಕಿ, ಕೀಟಗಳು ಇವುಗಳ ಬಗ್ಗೆ ಸವಿವರವಾಗಿ ನೋಡುತ್ತ ಆಹ್ಲಾದಕರ ಅನುಭವ ಒದಗಿಸುವ ಬೇಸಿಗೆ ಶಿಬಿರವನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಕಳೆದ 30 ವರ್ಷಗಳಿಂದ ಆಯೋಜಿಸುತ್ತಿದೆ. ‘ಮೃಗಾಲಯದಲ್ಲಿ ಪ್ರಾಣಿಗಳನ್ನು ಯಾವ ರೀತಿ ಸಾಕಲಾಗುತ್ತದೆ, ಪ್ರಾಣಿಗಳ ವರ್ತನೆ, ವನ್ಯಪ್ರಾಣಿಗಳ ರಕ್ಷಣೆ’ ಹೀಗೆ ಆಸಕ್ತಿಕರ ವಿಷಯಗಳ ಲೋಕ ಇಲ್ಲಿ ತೆರೆದುಕೊಳ್ಳುತ್ತದೆ. ಮೃಗಾಲಯದ ಆವರಣ, ಕಾರಂಜಿಕೆರೆ, ಮ್ಯೂಸಿಯಂಗಳಿಗೆ ಮಕ್ಕಳನ್ನು ಕರೆದೊಯ್ಯಲಾಗುತ್ತದೆ’ ಎಂದು ಮೃಗಾಲಯದ ಸಿಇಒ ಅಜಿತ್‌ ಕುಲಕರ್ಣಿ ವಿವರಿಸಿದರು.

ಮೈಸೂರಿನ ನಟನ ಸಂಸ್ಥೆಯಿಂದ ನಡೆಯುತ್ತಿರುವ ‘ರಜಾ ಮಜಾ’ ಬೇಸಿಗೆ ಶಿಬಿರದ ಒಂದು ನೋಟ
ಮೈಸೂರಿನ ನಟನ ಸಂಸ್ಥೆಯಿಂದ ನಡೆಯುತ್ತಿರುವ ‘ರಜಾ ಮಜಾ’ ಬೇಸಿಗೆ ಶಿಬಿರದ ಒಂದು ನೋಟ

ಅಪರೂಪಕ್ಕೆಂಬಂತೆ ಕೆಲವೇ ಹಳ್ಳಿಗಳಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತಿವೆ. ಉಡುಪಿ ನಗರದಿಂದ 20 ಕಿ.ಮೀ. ದೂರದಲ್ಲಿರುವ ಹಾವಂಜೆ ಗ್ರಾಮದಲ್ಲಿ ಭಾವನಾ ಫೌಂಡೇಶನ್‌ ಪ್ರತಿ ವರ್ಷ ನಡೆಸುವ ಬೇಸಿಗೆ ಶಿಬಿರ ‘ಬಾಲ ಲೀಲಾ’ ವಿಷಯ ವೈಶಿಷ್ಟ್ಯದಿಂದ ಗಮನ ಸೆಳೆಯುತ್ತದೆ.

‘ನಶಿಸಿ ಹೋಗುತ್ತಿರುವ ಕಲೆಗಳ ಬಗ್ಗೆ ನಾವು ವಿಶೇಷ ಮಹತ್ವ ನೀಡುತ್ತೇವೆ. ನಮ್ಮ ಬಳಿ 1,500ರಷ್ಟು ದೇಸಿ ಆಟಗಳ ಖಜಾನೆಯಿದೆ. ನೆನಪಿನ ಶಕ್ತಿ ಹೆಚ್ಚಿಸುವ ಇಂಥ ಆಟಗಳ ಬಗ್ಗೆ ಇಂದಿನ ಮಕ್ಕಳಿಗೆ, ಪೋಷಕರಿಗೆ ಗೊತ್ತೇ ಇಲ್ಲ. ಇಂಥ ಕೆಲವು ದೇಸಿ ಆಟಗಳ ಕಲಿಕೆ ಇಲ್ಲಿ ಸಾಧ್ಯ. ಕಳೆದ ವರ್ಷ ಬಿದಿರಿನ ಬುಟ್ಟಿಗಳನ್ನು ಮಾಡುವುದನ್ನು ಕಲಿಸಲಾಗಿತ್ತು. ಮಕ್ಕಳಿಗೆ ಹಾವುಗಳ ಬಗ್ಗೆ ಭಯ ಹೋಗಲಾಡಿಸಲು ಹಾಗೂ ಅವುಗಳನ್ನು ಹತ್ತಿರದಿಂದ ತೋರಿಸುವುದಕ್ಕಾಗಿ ಉರಗತಜ್ಞರನ್ನು ಕರೆಸಿ ಪ್ರಾತ್ಯಕ್ಷಿಕೆ ಕೊಡಿಸಲಾಗುತ್ತದೆ’ ಎಂದು ವಿವರಿಸುತ್ತಾರೆ ಶಿಬಿರ ನಡೆಸುವ ವಿಶು ರಾವ್‌. ಸಹೋದರ ಜನಾರ್ದನ್ ಹಾವಂಜೆ ಹಾಗೂ ಉದಯ ಕೊಟ್ಯಾನ್‌ ಅವರೊಂದಿಗೆ ಇವರು ನಡೆಸುವ ಈ ಶಿಬಿರದ ಮತ್ತೊಂದು ವೈಶಿಷ್ಟ್ಯವೆಂದರೆ ಬಟ್ಟೆಗಳ ಮೇಲೆ ಪ್ರಿಂಟ್‌ ಹಾಕುವ ಕಲೆ, ಸೀರೆಗಳ ಮೇಲೆ ವರ್ಲಿ ಆರ್ಟ್‌ ಮೂಡಿಸುವ ಕಲೆಯನ್ನು ಪ್ರಖ್ಯಾತ ಕಲಾವಿದರಿಂದಲೇ ಕೊಡಿಸುವುದು. ಮುಖಕ್ಕೆ ಬಣ್ಣ ಮಾಡುವುದೂ ಮತ್ತೊಂದು ಆಕರ್ಷಣೆ.

‘ನಾವು ಚಿಕ್ಕವರಿರುವಾಗ ಬೇಸಿಗೆ ರಜೆ ಎಂದರೆ ಅಜ್ಜ–ಅಜ್ಜಿ ಮನೆಯ ವಾಸ, ಊರು ಸುತ್ತುವುದು, ಮರ ಹತ್ತುವುದು ಹೀಗೆ ವಿವಿಧ ಚಟುವಟಿಕೆ ಇರುತ್ತಿತ್ತು. ಈಗ ವಿಭಕ್ತ ಕುಟುಂಬ, ಮೊಬೈಲ್‌, ಟಿ.ವಿ...ಪೋಷಕರಿಬ್ಬರೂ ಉದ್ಯೋಗಸ್ಥರಾದ ಕಾರಣ ಮಕ್ಕಳು ರಜಾ ಅವಧಿಯಲ್ಲಿ ಒಂಟಿಯಾಗುತ್ತಾರೆ. ಹೀಗಾಗಿ ಬೇಸಿಗೆ ರಜಾ ಶಿಬಿರಗಳು ಮಕ್ಕಳಿಗೆ ಅಗತ್ಯ ಎನಿಸಿವೆ. ಇಂಥ ಶಿಬಿರಗಳು ಮಕ್ಕಳಿಗೆ ಜೀವನ ಮೌಲ್ಯ ಕಲಿಸಿದರೆ, ಸಂಬಂಧಗಳ ಮಹತ್ವವನ್ನು ಅರಿವು ಮಾಡಿಕೊಟ್ಟು ಅರ್ಥಪೂರ್ಣವಾದರೆ ಖಂಡಿತವಾಗಿಯೂ ಮಕ್ಕಳ ಜೀವನದಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತವೆ’ ಎನ್ನುತ್ತಾರೆ ಅವರು.

ನಾಟಕ, ಚಿತ್ರಕಲೆ, ನೃತ್ಯ, ಸ್ವಿಮಿಂಗ್‌, ವಿವಿಧ ಕ್ರೀಡೆಗಳ ಬಗ್ಗೆ ರಜಾ ಶಿಬಿರಗಳು ಎಲ್ಲೆಡೆ ನಡೆಯುವುದು ಸಾಮಾನ್ಯವಾಗಿವೆ. ಈಚೆಗೆ ರೊಬೊಟಿಕ್ಸ್‌, ಧಾರ್ಮಿಕ ಪಠಣಗಳು, ಶ್ಲೋಕ ಕಂಠಪಾಠ ಸೇರಿದಂತೆ ಹಲವು ವಿಷಯಗಳ ಮೇಲೆ ಸಮರ್‌ ಕ್ಯಾಂಪ್‌ಗಳು ಮಕ್ಕಳನ್ನು, ಪೋಷಕರನ್ನು ಆಕರ್ಷಿಸುತ್ತಿವೆ. 

ಮಕ್ಕಳ ಆಸಕ್ತಿಗೆ ತಕ್ಕಂಥ ಶಿಬಿರ ಉತ್ತಮ

ಮಕ್ಕಳಿಗೆ ಏಪ್ರಿಲ್‌–ಮೇ ರಜೆಯಲ್ಲಿ ಬೇಸಿಗೆ ರಜಾ ಶಿಬಿರಗಳಿಗೆ ಸೇರಿಸುವ ಅವಶ್ಯಕತೆಯೇನೂ ಇಲ್ಲ. ಮಕ್ಕಳು ಶೈಕ್ಷಣಿಕ ಒತ್ತಡದಿಂದ ಹೊರಬರಲೆಂದೇ ಈ ರಜೆ ನೀಡಲಾಗುತ್ತದೆ. ಅಜ್ಜ–ಅಜ್ಜಿ, ಸಂಬಂಧಿಕರ ಮನೆಗಳಿಗೆ ಹೋಗುವುದೇ ಮಕ್ಕಳಿಗೆ ಉತ್ತಮ ಬದಲಾವಣೆ ನೀಡುತ್ತದೆ. ಇದು ಸಾಧ್ಯವಿಲ್ಲದವರು ಮಕ್ಕಳ ಆಸಕ್ತಿಗಳನ್ನು ಗಮನಿಸಿ ಅದಕ್ಕೆ ತಕ್ಕಂಥ ತರಗತಿಗಳಿಗೆ ಸೇರಿಸಿದರೆ ಉತ್ತಮ. ಮೊಬೈಲ್‌, ಟಿ.ವಿ.ಗಳಿಂದ ದೂರವಿಡಲು ಸಮರ್‌ ಕ್ಯಾಂಪ್‌ಗಳಿಗೆ ಕಳುಹಿಸುತ್ತಾರಾದರೂ ಅಲ್ಲಿ ಎಲ್ಲ ವಿಧದ ಕಲೆಗಳನ್ನು ಸೇರಿಸಿ ಕಲಿಸಿದರೆ ಪ್ರಯೋಜನವಿಲ್ಲ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ನೋಡಿ ಅಂಥ ಕಲೆ ಅಥವಾ ಕ್ರೀಡಾ ಶಿಬಿರಗಳಿಗೆ ಸೇರಿಸಿದರೆ ಉತ್ತಮ.

– ಡಾ.ಗಂಗಮ್ ಸಿದ್ದಾರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ, ದಾವಣಗೆರೆ

ರಂಗಗೀತೆ, ನಾಟಕ ಕೇಂದ್ರಿತ ‘ರಜಾ ಮಜಾ’

ಮೈಸೂರಿನ ನಟನ ಸಂಸ್ಥೆ ನಡೆಸುವ ‘ರಜಾ ಮಜಾ’ ಶಿಬಿರ ರಂಗಭೂಮಿ ಕೇಂದ್ರಿತವಾಗಿದೆ. 20 ವರ್ಷಗಳಿಂದ ನಡೆಯುತ್ತಿರುವ ಈ ಶಿಬಿರದಲ್ಲಿ ಈ ವರ್ಷ ಬಂದಿರುವ ಮಕ್ಕಳ ಸಂಖ್ಯೆ 300.

‘ಕಂಸಾಳೆ, ವೀರಗಾಸೆ, ಪಟದ ಕುಣಿತ, ಡೊಳ್ಳು ಕುಣಿತ, ಮಲ್ಲಕಂಬ ಸೇರಿದಂತೆ ಎಲ್ಲ ಪ್ರಕಾರಗಳ ಜಾನಪದ ನೃತ್ಯಗಳ ತರಬೇತಿಗೆ ಆದ್ಯತೆ ನೀಡಲಾಗಿದೆ. ಇದನ್ನು ಕಲಿಯುವುದರಿಂದ ಮಕ್ಕಳ ಶಕ್ತಿ ವೃದ್ಧಿಯಾಗುತ್ತದೆ. ಕಾರಂತ, ಕಂಬಾರ, ಕಾರ್ನಾಡ ಪರಂಪರೆಯ ನಾಟಕಗಳ ಕಲಿಕೆಯಿಂದ ಮಕ್ಕಳಲ್ಲಿ ಕನ್ನಡ ಪದಗಳ ಬಳಕೆ ವೃದ್ಧಿಯಾಗುತ್ತದೆ’ ಎಂದು ನಟನ ಸಂಸ್ಥೆಯ ಮಂಡ್ಯ ರಮೇಶ್‌ ತಿಳಿಸಿದರು.ರಂಗಗೀತೆ, ನಾಟಕ ಕೇಂದ್ರಿತ ‘ರಜಾ ಮಜಾ’

ಮೈಸೂರಿನ ನಟನ ಸಂಸ್ಥೆ ನಡೆಸುವ ‘ರಜಾ ಮಜಾ’ ಶಿಬಿರ ರಂಗಭೂಮಿ ಕೇಂದ್ರಿತವಾಗಿದೆ. 20 ವರ್ಷಗಳಿಂದ ನಡೆಯುತ್ತಿರುವ ಈ ಶಿಬಿರದಲ್ಲಿ ಈ ವರ್ಷ ಬಂದಿರುವ ಮಕ್ಕಳ ಸಂಖ್ಯೆ 300.

‘ಕಂಸಾಳೆ, ವೀರಗಾಸೆ, ಪಟದ ಕುಣಿತ, ಡೊಳ್ಳು ಕುಣಿತ, ಮಲ್ಲಕಂಬ ಸೇರಿದಂತೆ ಎಲ್ಲ ಪ್ರಕಾರಗಳ ಜಾನಪದ ನೃತ್ಯಗಳ ತರಬೇತಿಗೆ ಆದ್ಯತೆ ನೀಡಲಾಗಿದೆ. ಇದನ್ನು ಕಲಿಯುವುದರಿಂದ ಮಕ್ಕಳ ಶಕ್ತಿ ವೃದ್ಧಿಯಾಗುತ್ತದೆ. ಕಾರಂತ, ಕಂಬಾರ, ಕಾರ್ನಾಡ ಪರಂಪರೆಯ ನಾಟಕಗಳ ಕಲಿಕೆಯಿಂದ ಮಕ್ಕಳಲ್ಲಿ ಕನ್ನಡ ಪದಗಳ ಬಳಕೆ ವೃದ್ಧಿಯಾಗುತ್ತದೆ’ ಎಂದು ನಟನ ಸಂಸ್ಥೆಯ ಮಂಡ್ಯ ರಮೇಶ್‌ ತಿಳಿಸಿದರು.

ರಂಗಶಿಬಿರಗಳ ಔಚಿತ್ಯ

ಮನೋವೈದ್ಯೆಯಾದ ನನಗಂತೂ ನಾಟಕವೆಂದರೆ ಮಕ್ಕಳ ಮಟ್ಟಿಗೆ ಅದೊಂದು ‘Empathy Gum’- ‘ಆತ್ಮಾನೂಭೂತಿಯ ವ್ಯಾಯಾಮ ಶಾಲೆ’. ಇಮೋಜಿಗಳ, ಚ್ಯಾಟ್ ಜಿಪಿಟಿಗಳ ಯುಗದಲ್ಲಿ ಬದುಕುವ ನಮ್ಮ ಮಕ್ಕಳಿಗೆ ದೈಹಿಕ ವ್ಯಾಯಾಮದಷ್ಟೇ ಬೇಕಾಗಿರುವುದು ಭಾವನೆಗಳ ವ್ಯಾಯಾಮ. ಮಕ್ಕಳ ರಂಗಭೂಮಿಯ ಬಗೆಗಿರುವ ಜಾಗತಿಕ ವೈಜ್ಞಾನಿಕ ಅಧ್ಯಯನಗಳು ನೂರಾರು. ಅವೆಲ್ಲವೂ ರಂಗಕಲೆ, ಜೀವನಕಲೆಯನ್ನು ಸುಲಭವಾಗಿ, ಸುಲಲಿತವಾಗಿ, ಸುಭದ್ರವಾಗಿ ಕಲಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿವೆ. ಆದರೂ ಚುನಾವಣೆಗಳಿಗೆ ಕೋಟಿಗಟ್ಟಲೆ ಹಣ ವ್ಯಯಿಸುವ ನಮ್ಮ ಪ್ರಜಾಪ್ರಭುತ್ವ ಮಕ್ಕಳಲ್ಲಿ ರಂಗಶಿಕ್ಷಣವನ್ನು ಸುಲಭಸಾಧ್ಯ ಮಾಡುವುದಿಲ್ಲ. ಅಪ್ಪ-ಅಮ್ಮ ಅಂಕಗಳ ಹಿಂದೆ ಓಡುವುದನ್ನು ಕ್ಷಣ ಕಾಲ ನಿಲ್ಲಿಸಿ ‘ನಾಟಕ ನೋಡೋಣ’ ಎಂದು ಮಕ್ಕಳನ್ನು ಕರೆದೊಯ್ಯುವುದಿಲ್ಲ. ಬೇಸಿಗೆ ಶಿಬಿರಗಳ ಮೂಲಕ ಇಂಥೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮಕ್ಕಳೊಂದಿಗೆ ಹಿರಿಯರೂ ಪ್ರಯತ್ನಿಸಬಹುದಲ್ಲವೆ?

–ಡಾ.ಕೆ.ಎಸ್. ಪವಿತ್ರ

ಮಕ್ಕಳಿಗೆ ಏಪ್ರಿಲ್‌–ಮೇ ರಜೆಯಲ್ಲಿ ಬೇಸಿಗೆ ರಜಾ ಶಿಬಿರಗಳಿಗೆ ಸೇರಿಸುವ ಅವಶ್ಯಕತೆಯೇನೂ ಇಲ್ಲ. ಮಕ್ಕಳು ಶೈಕ್ಷಣಿಕ ಒತ್ತಡದಿಂದ ಹೊರಬರಲೆಂದೇ ಈ ರಜೆ ನೀಡಲಾಗುತ್ತದೆ. ಬೇಸಿಗೆ ಶಿಬಿರಗಳಲ್ಲಿ ಎಲ್ಲ ವಿಧದ ಕಲೆಗಳನ್ನು ಸೇರಿಸಿ ಕಲಿಸಿದರೆ ಪ್ರಯೋಜನವಿಲ್ಲ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ನೋಡಿ ಅಂಥ ಕಲೆ ಅಥವಾ ಕ್ರೀಡಾ ಶಿಬಿರಗಳಿಗೆ ಸೇರಿಸಿದರೆ ಉತ್ತಮ.
ಡಾ.ಗಂಗಮ್ ಸಿದ್ದಾರೆಡ್ಡಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT