ನಮ್ಮ ಮನೆಯ ಬಾಲ್ಕನಿಯಲ್ಲಿ ಮಕ್ಕಳಿಗೆ ಜೋಕಾಲಿ ಹಾಕಲೆಂದು ಸರಪಳಿಯೊಂದನ್ನು ನೇತುಬಿಟ್ಟಿದ್ದೇವೆ. ಒಂದು ದಿನ ಪಕ್ಷಿಗಳೆರಡು ಆ ಸರಪಳಿಯ ಮೇಲೆ ಕುಳಿತು ಏನೋ ಚಟುವಟಿಕೆಯಲ್ಲಿ ನಿರತವಾಗಿರುವುದು ಕಂಡುಬಂತು. ಮನೆಯ ಮುಂದೆ ಮಾವು, ತೆಂಗಿನಮರಗಳು ಮತ್ತು ಹಲವಾರು ಗಿಡಗಳು ಇರುವುದರಿಂದ ಹಕ್ಕಿಗಳು ಬಂದು ಹೋಗುವುದು ಸಾಮಾನ್ಯ ಎಂದುಕೊಂಡು ಸುಮ್ಮನಾಗಿದ್ದೆವು. ಆದರೆ ಮರುದಿನ ನೋಡಿದರೆ ಇಳಿಬಿದ್ದ ಸರಪಳಿಯ ತುದಿಯಲ್ಲಿ ಹಕ್ಕಿಗಳ ಗರಿಗಳು, ನಾರು, ಜೇಡರಬಲೆಯ ಎಳೆಗಳು ಇತ್ಯಾದಿ ನೇತಾಡುತ್ತಿದ್ದವು. ಕೆಲವು ದಿನಗಳಲ್ಲಿಯೇ ಅಲ್ಲೊಂದು ಗೂಡು ನಿರ್ಮಾಣವೂ ಆಗಿಬಿಟ್ಟಿತು! ಗೂಡು ನೋಡಲೇನೂ ಆಕರ್ಷಕವಾಗಿರಲಿಲ್ಲ. ಸಿಕ್ಕ ಸಿಕ್ಕ ವಸ್ತುಗಳನ್ನು ಉಪಯೋಗಿಸಿ ಗೂಡನ್ನು ನಿರ್ಮಿಸಲಾಗಿತ್ತು.

ಹಕ್ಕಿಗಳು ಆಗಾಗ್ಗೆ ಬಂದು ಹೋಗುವುದನ್ನು ಕಿಟಕಿಯ ಹಿಂದೆ ನಿಂತು ಗಮನಿಸಿದಾಗ ಅವು ಸೂರಕ್ಕಿಗಳು ಎಂದು ತಿಳಿಯಿತು. ಸೂರ್ಯಪಕ್ಷಿ, ಹೂವಕ್ಕಿ ಇತ್ಯಾದಿ ಹೆಸರುಗಳೂ ಇವಕ್ಕೆ ಇವೆ. ಇಂಗ್ಲಿಷ್ನಲ್ಲಿ ಸನ್ ಬರ್ಡ್ (ಸಿನ್ನಿರಿಸ್ ಏಷ್ಯಾಟಿಕಸ್) ಎನ್ನಲಾಗುತ್ತದೆ. ಇಲ್ಲಿ ಗೂಡು ಕಟ್ಟಿದ್ದು ಕಡುನೀಲಿಯ ಸೂರಕ್ಕಿಗಳು (ಪರ್ಪಲ್ ಸನ್ಬರ್ಡ್).

ಒಂದೆರಡು ದಿನಗಳಲ್ಲಿಯೇ ಹೆಣ್ಣುಹಕ್ಕಿ ಸಾಕಷ್ಟು ಹೊತ್ತು ಗೂಡಿನಲ್ಲಿಯೇ ಕಾಲ ಕಳೆಯಲು ಶುರು ಮಾಡಿತು. ಬಹುಶಃ ಮೊಟ್ಟೆಗಳನ್ನು ಇಟ್ಟಿರಬಹುದೆಂದುಕೊಂಡೆ. ರಾತ್ರಿಯೆಲ್ಲಾ ಅಲ್ಲೇ ಕುಳಿತು ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಹಗಲಿನಲ್ಲಿ ಯಾವಾಗಲೋ ಸ್ವಲ್ಪ ಹೊರಗೆ ಹೋಗಿ ಹೊಟ್ಟೆ ತುಂಬಿಸಿಕೊಂಡು ಬರುತ್ತಿತ್ತು. ಗೂಡಿನ ರಚನೆ ಯಾವ ರೀತಿ ಇತ್ತೆಂದರೆ ಅದರ ಬಾಯಿ ಬಿಟ್ಟು ಇನ್ನೇನೂ ಗೋಚರಿಸುತ್ತಿರಲಿಲ್ಲ. ಒಳಗೆ ಕುಳಿತ ಹಕ್ಕಿಯ ಕತ್ತು ಮಾತ್ರ ಕಾಣುತ್ತಿತ್ತು. ಎರಡು ವಾರ ಕಳೆದ ನಂತರ ಮೊಟ್ಟೆಗಳಿಂದ ಮರಿಗಳು ಆಚೆ ಬಂದವೆನಿಸುತ್ತದೆ. ಹೆಣ್ಣು ಹಕ್ಕಿ ಹೊರಗೆ ಹೋಗಿ ಆಹಾರವನ್ನು ತಂದು ಗೂಡಿನೊಳಗೆ ಹೋಗಿ ಮರಿಗಳಿಗೆ ತಿನ್ನಿಸಿ ಬರತೊಡಗಿತು. ಹೆಣ್ಣಿನ ಸರಿಸಮಾನವಾಗಿ ಅಲ್ಲದಿದ್ದರೂ ಗಂಡು ಹಕ್ಕಿಯೂ ಮರಿಗಳಿಗೆ ಉಣಿಸುವುದರಲ್ಲಿ ಸಹಕಾರ ನೀಡುತ್ತಿತ್ತು. ಮತ್ತೊಂದೆರಡು ವಾರಗಳ ನಂತರ ಮರಿಗಳ ಕೊಕ್ಕುಗಳು ಗೂಡಿನ ದ್ವಾರದ ಬಳಿ ಕಂಡರೂ ಅವುಗಳು ಕಾಣುತ್ತಿರಲಿಲ್ಲ. ಗಂಡು ಹೆಣ್ಣು ಸೂರಕ್ಕಿಗಳು ಸತತವಾಗಿ ಹಾರಾಟ ನಡೆಸಿ ಆಹಾರವನ್ನು ಒದಗಿಸುವುದು ಮಾತ್ರ ನಡೆದೇ ಇತ್ತು.

ಹೀಗಿರುವಾಗ ಒಂದು ಬೆಳಿಗ್ಗೆ ನೋಡಿದರೆ ಗೂಡಿನ ಬಳಿ ಯಾವ ಚಟುವಟಿಕೆಯೂ ಇರಲಿಲ್ಲ. ಬಹುಶಃ ರಾತ್ರಿ ಮರಿಗಳು ಆಚೆ ಹೋಗಿರಬಹುದು. ಪೂರ್ಣ ರೆಕ್ಕೆ ಬಲಿಯದ ಮರಿಗಳು ಬಹಳ ದೂರ ಹೋಗಿರುವ ಸಾಧ್ಯತೆ ಇಲ್ಲ, ಸನಿಹದಲ್ಲಿಯೇ ಇರುವ ಮಾವಿನಮರದ ಮೇಲಿರಬಹುದೆಂದು ಹುಡುಕಿದರೂ ಕಾಣಲಿಲ್ಲ. ನಾಲ್ಕಾರು ವಾರಗಳು ನಮ್ಮ ಬಾಲ್ಕನಿಯಲ್ಲಿ ಬಾಣಂತನ ಮಾಡಿಕೊಂಡ ಸೂರಕ್ಕಿಗಳು ಮತ್ತೊಮ್ಮೆ ಬಂದಾವೆಂಬ ನಿರೀಕ್ಷೆಯಲ್ಲಿ ನಾವಿದ್ದೇವೆ.

ಹೂವಕ್ಕಿಗಳು...

ನಮ್ಮ ರಾಜ್ಯದಲ್ಲಿ ಎರಡು ರೀತಿಯ ಹೂವಕ್ಕಿಗಳು ಕಂಡು ಬರುತ್ತವೆ. ಒಂದು ಕಡುನೀಲಿಯ ಹೂವಕ್ಕಿ-ಗಂಡು ಹಕ್ಕಿಗಳು ಫಕ್ಕನೆ ಕಪ್ಪು ಬಣ್ಣದಲ್ಲಿ ಇದ್ದಂತೆ ಕಂಡರೂ ಅವುಗಳ ಮೇಲೆ ತುಸು ಬೆಳಕು ಬಿದ್ದರೂ ತಲೆಯ ಭಾಗದ ನೀಲಿಬಣ್ಣ ಗೋಚರಿಸುತ್ತದೆ. ಇನ್ನೊಂದು ನೇರಳೆಕಂಠದ ಹೂವಕ್ಕಿ-ಗಂಡಿನ ಕುತ್ತಿಗೆ ನೇರಳೆ ಬಣ್ಣ, ತಲೆ ನೀಲಿ ಬಣ್ಣ. ಎರಡೂ ವಿಧದ ಸೂರಕ್ಕಿಗಳಲ್ಲಿ ಹೆಣ್ಣುಗಳು ಕಂದು ಬಣ್ಣದ ಬೆನ್ನು ಹಾಗೂ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ಗಂಡೆರಡಕ್ಕೂ ಹೊಟ್ಟೆಯ ಭಾಗ ಬಿಳುಪು ಮಿಶ್ರಿತ ತಿಳಿ ಹಳದಿಯಾಗಿರುತ್ತದೆ.

ಹೂಗಳ ತೊಟ್ಟು ಅಥವಾ ರೆಂಬೆಗಳ ಮೇಲೆ ತಲೆಕೆಳಗಾಗಿ ಕುಳಿತು ಹೂಗಳ ಬುಡಕ್ಕೆ ಬಾಗಿದ ತಮ್ಮ ಕೊಕ್ಕನ್ನು ತೂರಿಸುವುದರ ಮೂಲಕ ಇವು ಮಕರಂದ ಕುಡಿಯುತ್ತವೆ. ಆದ್ದರಿಂದಲೇ ಇವಕ್ಕೆ ಹೂವಕ್ಕಿ ಎನ್ನುವ ಅನ್ವರ್ಥನಾಮವೂ ಇದೆ. ಈ ಹಕ್ಕಿಗಳು ಮಕರಂದ ಹೀರುವುದನ್ನು ನೋಡುವುದೇ ಚೆಂದ. ಜೇಡ ಮುಂತಾದ ಸಣ್ಣ ಸಣ್ಣ ಕ್ರಿಮಿಕೀಟಗಳನ್ನೂ ಅವುಗಳು ತಿನ್ನುವುದುಂಟು. ಹೂವಕ್ಕಿಗಳ ಗಾತ್ರ ಚಿಕ್ಕದು. ಹೀಗಾಗಿ ಹೂಗಳ ಮಧ್ಯೆ ಸರಾಗವಾಗಿ ಚಲಿಸಿ, ಮಧು ಹೀರಲು ಶಕ್ತವಾಗಿವೆ. ಹತ್ತಾರು ಹೂಗಳಿಗೆ ಎಡತಾಕುವುದರಿಂದ ಇವು ಪರಾಗಸ್ಪರ್ಶ ಕ್ರಿಯೆಯಲ್ಲಿ ಕೂಡಾ ನೆರವಾಗುತ್ತವೆ. ಕ್ಷಣಮಾತ್ರದಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹಾರುತ್ತಾ ಹಲವಾರು ಹೂಗಿಡಗಳಿಗೆ ಭೇಟಿ ಕೊಡುತ್ತಾ ಸದಾ ಚಟುವಟಿಕೆಯಿಂದ ಇರುವ ಈ ಹಕ್ಕಿಗಳನ್ನು ನೋಡುವುದೇ ಖುಷಿಯ ಸಂಗತಿ. ಸೂರಕ್ಕಿಗಳು ರಸವನ್ನು ಹೀರಲು ದಾಸವಾಳದ ಹೂಗಳಿಗೆ ಹೆಚ್ಚಾಗಿ ಭೇಟಿ ಕೊಟ್ಟಿದ್ದನ್ನು ನಾನು ಗಮನಿಸಿದ್ದೆ.

ಇವು ಗುಂಪುಗಳಲ್ಲಿ ಕಂಡುಬರುವುದಿಲ್ಲ. ಅಪರೂಪಕ್ಕೆ ಒಂಟಿಯಾಗಿ, ಹೆಚ್ಚಿನ ವೇಳೆ ಜೋಡಿಯಾಗಿಯೇ ಇರುತ್ತವೆ. ಮನುಷ್ಯರ ವಾಸಸ್ಥಳಗಳ ಬಳಿಯೇ ಜೇಡರಬಲೆ, ಹತ್ತಿ, ಬಟ್ಟೆಯ ಚೂರು, ಕಸಕಡ್ಡಿಗಳನ್ನು ಸೇರಿಸಿ ಗೂಡು ಕಟ್ಟುತ್ತವೆ. ಬಳ್ಳಿಗಳ ಅಥವಾ ಇಳಿಬಿದ್ದ ರೆಂಬೆಗಳ ತುದಿಯಲ್ಲಿ ಇವು ಗೂಡನ್ನು ಮಾಡುವುದರಿಂದ ಶತ್ರುಗಳಿಂದ ಅಪಾಯ ಕಡಿಮೆ. ಸೂರಕ್ಕಿಗಳು ಒಂದು ಸಲಕ್ಕೆ ಎರಡು ಮೊಟ್ಟೆಗಳನ್ನಿಡುವುದು ಸಾಮಾನ್ಯ. ಅಪರೂಪಕ್ಕೆ ನಾಲ್ಕರವರೆಗೂ ಇಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.