ನಾನೊಬ್ಬ ಸಾಹಿತಿಯಾಗಬೇಕು ಎಂಬ ಆಕಾಂಕ್ಷೆಯನ್ನು ಹುಟ್ಟಿಸಿದ್ದು ರವೀಂದ್ರನಾಥ ಟಾಗೋರರ ‘ನನ್ನ ಬಾಲ್ಯ’ ಎಂಬ ಪುಟ್ಟ ಪುಸ್ತಕ. ನಾನು ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದಾಗ ‘ನನ್ನ ಬಾಲ್ಯ’ ಉಪಪಠ್ಯವಾಗಿತ್ತು. ಪ್ರಧಾನ ಪಠ್ಯ- ಎ.ಆರ್. ಕೃಷ್ಣ ಶಾಸ್ತ್ರಿಯವರ ‘ವಚನ ಭಾರತ’. ಈ ಎರಡೂ ಕೃತಿಗಳ ಪ್ರಭಾವ ವಿಭಿನ್ನ ಆಯಾಮಗಳಲ್ಲಿ ನನ್ನ ಮೇಲೆ ಆಗಿದೆ. ಆದರೆ ‘ನನ್ನ ಬಾಲ್ಯ’ ಕೃತಿಯ ವ್ಯಾಸಂಗದಿಂದಲೇ ನಾನು ಸಾಹಿತಿಯಾಗಬೇಕೆಂಬ ಹಂಬಲಕ್ಕೆ ಬಿದ್ದೆ. ಆ ಕೃತಿಯಲ್ಲಿರುವ ಕೆಲವು ವಿವರಗಳೊಂದಿಗೆ ಹೋಲಿಸಿಕೊಳ್ಳುತ್ತಾ ಎದುರು ಬದರಾಗುತ್ತ ನಾನೇಕೆ ಅವರಂತೆ ಆಗಬಾರದು ಎಂಬ ಪ್ರಶ್ನೆ ಹಾಕಿಕೊಳ್ಳುತ್ತ, ಪ್ರಶ್ನೆಯನ್ನೇ ಸವಾಲಾಗಿಸಿಕೊಳ್ಳುತ್ತ ಪೆನ್ನು ಕೈಗೆತ್ತಿಕೊಂಡೆ.
ನಾನು ಪೆನ್ನನ್ನು ಕೈಗೆತ್ತಿಕೊಂಡದ್ದು ಎರಡು ಬಗೆಯಲ್ಲಿ. ಒಂದು- ಪೆನ್ಸಿಲ್‌ನಿಂದ ಬಡ್ತಿ ಪಡೆದು ಪೆನ್ನಿನಲ್ಲಿ ಬರೆಯತೊಡಗಿದ ಸಹಜ ಸ್ಥಿತ್ಯಂತರ. ಇದೊಂದು ಸಂಭ್ರಮದ ಸ್ಥಿತ್ಯಂತರ. ಯಾಕೆಂದರೆ ‘ಪೆನ್ನು’ ಎನ್ನುವುದು ನನಗೆ- ನನ್ನಂಥವರಿಗೆ- ಬರವಣಿಗೆಯ ಮತ್ತೊಂದು ಸಾಧನ ಮಾತ್ರವಲ್ಲ. ಪ್ರಾಥಮಿಕ ಶಾಲೆಯಲ್ಲಿ ಸ್ಲೇಟಿನ ಮೇಲೆ ಬಳಪದಿಂದ ಬರೆಯತೊಡಗಿದ್ದೂ ನಮಗೆ ಒಂದು ಸಂಭ್ರಮವೇ. ನನ್ನ ವಾರಿಗೆಯ ಎಷ್ಟೋ ಹುಡುಗರು ನನ್ನಂತೆಯೇ ದನ ಕಾಯಲು ಹೋಗುತ್ತಿದ್ದು ಅವರು ಅಲ್ಲೇ ಉಳಿದರು. ನಾನು ಶಾಲೆಗೆ ಬಂದವನು ಬಳಪ ಹಿಡಿದಿದ್ದೇನೆಂಬ ಸಂತೋಷ. ಎರಡು ವರ್ಷದ ನಂತರ ಬಳಪದ ಜಾಗಕ್ಕೆ ‘ಸೀಸದ ಕಡ್ಡಿ’ (ಪೆನ್ಸಿಲ್) ಬಂದಾಗ ಅದೆಂಥ ಆನಂದ ಗೊತ್ತ? ಉದ್ಯೋಗಿಯೊಬ್ಬನಿಗೆ ಬಡ್ತಿ ಸಿಕ್ಕಿದ ಅನುಭವ! ಪೆನ್ಸಿಲ್‌ನಿಂದ ಪೆನ್ನಿಗೆ ಬಡ್ತಿ ಸಿಗಬೇಕಾದರೆ ಮಾಧ್ಯಮಿಕ ಶಾಲೆಗೆ ಸೇರಬೇಕು- ಅಂದರೆ- ಐದನೇ ತರಗತಿಗೆ ಸೇರಬೇಕು. ಆಗ ಪೆನ್ಸಿಲ್ ಜಾಗಕ್ಕೆ ಪೆನ್ನು ಬರುತ್ತೆ. ಕನ್ನಡ ಪಠ್ಯಗಳ ಜೊತೆಗೆ ಎ,ಬಿ,ಸಿ,ಡಿ ಆಂಗ್ಲ ಅಕ್ಷರಗಳ ಕಲಿಕೆ ಶುರುವಾಗುತ್ತೆ. ನಿಜ ಹೇಳಬೇಕೆಂದರೆ ಈ ಎರಡೂ ಅಂಶಗಳ ಅನುಭವಕ್ಕಾಗಿ ನಾನು ಕಾದದ್ದುಂಟು. ಕನ್ನಡವನ್ನು ಚೆನ್ನಾಗಿ ಕಲಿತು ಪ್ರಾಥಮಿಕ ಶಾಲೆಯಲ್ಲಿ ಪ್ರಥಮದರ್ಜೆ ಪಡೆಯುತ್ತಿದ್ದ ನಾನು ಇಂಗ್ಲಿಷನ್ನೂ ಹಾಗೆಯೇ ಕಲಿಯಬಲ್ಲೆ ಎಂದು ತೋರಿಸಿಕೊಳ್ಳುವ ಆಸೆ; ಹೌದು ‘ತೋರಿಸಿಕೊಳ್ಳುವ’ ಆಸೆ. ಹೀಗೆ ತೋರಿಸಿಕೊಳ್ಳುವ ಮೂಲಕ ಊರಲ್ಲಿ ಬೀಗುವ ಆಸೆ; ‘ನಮ್ಮ ಚಂದ್ರಣ್ಣ ಏನೇ ಕೊಟ್ರೂ ಚಂದಾಗ್ ಕಲೀತಾನೆ’ ಅಂತ ಊರವರು ಮಾತಾಡಬೇಕು, ನಾನು ಕೇಳಿಸಿಕೊಂಡು ಉಬ್ಬಿಹೋಗಬೇಕು ಅನ್ನೊ ಹಂಬಲ. ಈಗ ಅನ್ನಿಸುತ್ತೆ ಇದು ವೈಯಕ್ತಿಕ ನೆಲೆಯ ಹಂಬಲವಲ್ಲ ಅಂತ. ಯಾಕೆಂದರೆ ನನ್ನನ್ನು ಊರವರು ಗುರುತಿಸಿ ಮತ್ತು ಹೆಸರಿಸಿ ಪ್ರೀತಿ ತೋರಿಸಬೇಕೆಂಬ ಸಾಮಾಜಿಕ ಮನ್ನಣೆಯ ಹಂಬಲ. ಇದು ಕೇವಲ ಇಂಗ್ಲಿಷ್ ಅಕ್ಷರ ಕಲಿಕೆಗೆ ಸಂಬಂಧಿಸಿದ್ದಲ್ಲ. ಅದಕ್ಕಿಂತ ಮುಖ್ಯವಾಗಿ ಪೆನ್ನು ಹಿಡಿದ ಸಂಕೇತಕ್ಕೆ ಸಂಬಂಧಿಸಿದ್ದು. ಪೆನ್ಸಿಲ್‌ನಿಂದ ಪೆನ್ನಿಗೆ ಬಡ್ತಿ ಪಡೆಯೋದು ಸಾಮಾನ್ಯವೆ? ಅದೂ ಕನ್ನಡದೊಂದಿಗೆ ಇಂಗ್ಲಿಷ್ ಅಕ್ಷರ ಕಲಿತು ‘ವಿಜೃಂಭಿಸುವುದು!’ ಈ ಕಾರಣಕ್ಕೆ ನಾನು ಇಂಗ್ಲಿಷ್ ಪರ ಅಂತ ಹೇಳೋವಷ್ಟು ಕನ್ನಡ ಮನಸ್ಸು ಕೆಟ್ಟಿಲ್ಲ ಅಂದುಕೊಳ್ತೀನಿ. ಯಾಕೆಂದರೆ ಇದು ಇಂಗ್ಲಿಷ್ ಪರದ ಪ್ರಶ್ನೆ ಅಲ್ಲವೇ ಅಲ್ಲ. ಆದ್ದರಿಂದ ಈ ವಿಷಯ ಇಲ್ಲಿಗೇ ಬಿಟ್ಟು ಪೆನ್ನಿನ ವಿಷಯಕ್ಕೆ ಬರ‍್ತೇನೆ. ಪೆನ್ನು ನನಗೆ ಎಂಥ ಸಂಭ್ರಮ ತಂದಿತ್ತು ಎಂದು ಮನವರಿಕೆ ಮಾಡಲು ಒಂದು ಪ್ರಸಂಗ ಹೇಳಲೇಬೇಕು.
ನಾನು ಪೆನ್ನಲ್ಲಿ ಬರೆಯೋಕೆ ಶುರುಮಾಡಿದಾಗ ಈಗಿನ ರೀಫಿಲ್‌ಗಳು ಇರಲಿಲ್ಲ. ‘ಮಸಿ ಬುಡ್ಡಿ’ (ಇಂಕಿನ ಬಾಟಲ್) ಖರೀದಿಸಬೇಕಿತ್ತು. ಅದರಿಂದ ಪೆನ್ನಿಗೆ ಇಂಕನ್ನು ಹಾಕಿಕೊಳ್ಳಬೇಕಿತ್ತು. ಪೆನ್ನಿನ ‘ಮುಳ್ಳು’ (ತುದಿಯಲ್ಲಿ ಹಾಕುತ್ತಿದ್ದ ಸಾಮಗ್ರಿ) ಚೆನ್ನಾಗಿಲ್ಲದಿದ್ದರೆ ಗಾರೆ ನೆಲಕ್ಕೆ ಉಜ್ಜಿ ನುಣುಪು ಮಾಡಿಕೊಳ್ಳಬೇಕಿತ್ತು. ಒಟ್ಟಿನಲ್ಲಿ ಒಂದು ಸಾರಿ ನಮ್ಮ ಮನೆ ಹಜಾರದ ಮೇಲೆ ಕುಳಿತುಕೊಂಡು ಮಸಿಬುಡ್ಡಿಯಿಂದ ಪೆನ್ನಿಗೆ ಇಂಕನ್ನು ಹಾಕತೊಡಗಿದೆ. ಸರಿಯಾಗಿ ಹಾಕಲು ಬಾರದೆ ಇಂಕು ನನ್ನ ಬನೀನಿನ ಮೇಲೆ ಬಿದ್ದು ಬಿಟ್ಟಿತು. ಬನೀನು ಬಟ್ಟೆ ಮೇಲೆ ಅಲ್ಲಲ್ಲೇ ಇಂಕಿನ ಅವತಾರ! ಕೊಳಕಾದ ಬನೀನು! ಹಾಗಂತ ನಾನು ಬನೀನನ್ನು ಬಿಚ್ಚಿ ಹಾಕಲಿಲ್ಲ. ಅಪ್ಪ, ಅಮ್ಮ ನೋಡಿದರೆ ಬೈದಾರು ಎಂದು ಭಯಪಡಲಿಲ್ಲ. ಒಂದು ಮಾತು ಇಲ್ಲೇ ಹೇಳಿಬಿಡ್ತೇನೆ. ಬನೀನೆಂದರೆ ನೆಟ್ ಬನೀನ್ ಅಲ್ಲ. ಮೊಣಕೈವರೆಗಿನ ತೋಳು ಇದ್ದ, ಹೊಲೆಸಿಕೊಂಡ ಅಂಗಿ. ಒಳಗೆ ನೆಟ್ ಬನೀನು ನಮಗೆಲ್ಲಿ ಬಂದೀತು? ಇದ್ದ ಈ ಬನೀನೂ ಈಗ ಇಂಕಿನಿಂದ ಕೊಳೆಯಾಗಿದೆ. ಕೊಳೆಯಾಗಿದ್ದರೇನಂತೆ, ನಾನು ಠಾಕುಠೀಕಾಗಿ ಅದೇ ಬನೀನಿನಲ್ಲಿ ಊರಿನ ಬೀದಿ ಬೀದಿಯಲ್ಲಿ ಓಡಾಡಿದೆ! ಅಂಗಿ ಮೇಲಿನ ಇಂಕನ್ನು ಗಮನಿಸಿದ ಕೆಲವರು ‘ಇದೇನಪ್ಪ ಮೈಮ್ಯಾಲೆಲ್ಲ ಮಸಿ ಸುರ‍್ಕಂಡಿದ್ದೀಯ?’ ಎಂದು ಕೇಳಿದಾಗ ಈ ಮಾತಿಗಾಗಿಯೇ ಕಾಯುತ್ತಿದ್ದಂತೆ ‘ನಾನು ಪೆನ್‌ನಲ್ಲಿ ಬರೀತಿನಲ್ಲ, ಇಂಕ್ ಹಾಕ್ಕೊಳ್‌ವಾಗ ಹಿಂಗಾತು. ಅಷ್ಟೆ’ ಎಂದು ವಿವರಿಸಿ ಉಬ್ಬಿನಿಂದ ಇನ್ನೊಂದು ಬೀದಿಗೆ ಹೊರಡುತ್ತಿದ್ದೆ. ಒಟ್ಟಿನಲ್ಲಿ ನಾನೀಗ ಪೆನ್ನಿನಲ್ಲಿ ಬರೀತಿದ್ದೀನಿ ಅಂತ ಊರವರಿಗೆ ಗೊತ್ತಾಗಬೇಕು; ಗೊತ್ತಾಯ್ತು ಅಂತ ನನಗೆ ಗೊತ್ತಾಗಿ ಸಂಭ್ರಮಿಸಬೇಕು- ಇದು ನನ್ನ ಆಸೆ; ಹಂಬಲ! ಬನೀನು ಕೊಳೆಯಾಗಿದೆ ಅಂತ ಒಂದು ಕ್ಷಣ ಮಾತ್ರವೂ ಚಿಂತಿಸದ ಈ ಸಂಭ್ರಮಕ್ಕೆ ಏನೆನ್ನಬೇಕು! ಅವತ್ತು ಆದದ್ದು ಕೊಳೆಯಲ್ಲ ಕಳೆ!
ಚಂದ್ರಕಳೆ!
ಅವತ್ತು ನಾನು ಯಾಕೆ ಹಾಗೆ ವರ್ತಿಸಿದೆ? ಈಗ ಈ ಪ್ರಶ್ನೆ ಹಾಕಿಕೊಂಡಾಗ ನನಗನ್ನಿಸುತ್ತೆ- ಅದು ನನ್ನ ಐಡೆಂಟಿಟಿಯ ಸಮಸ್ಯೆ; ಐಡೆಂಟಿಟಿ ಅನ್ನೋದು ನನ್ನೊಳಗೆ ಬುಸ್ಸೆಂದು ಹೆಡೆ ಎತ್ತಿದಾಗ ಅದನ್ನು ಸಮಾಧಾನಿಸಲು ಸಹಜವಾಗಿಯೇ ಮೂಡಿದ ಸಾಮಾಜಿಕ ದಾರಿಯೇ ನನ್ನ ಬೀದಿಬೀದಿಯ ಪಯಣ!
ಹೌದು; ಈ ಐಡೆಂಟಿಟಿ ಅನ್ನೋದು ಬುಸ್ಸೆನ್ನುವ ಹೆಡೆ ಇದ್ದಂತೆ. ಅನ್ಯರ ಎದುರು ಹೆಡೆ ಎತ್ತಿ ಸದೆಬಡಿಯುವ ಐಡೆಂಟಿಟಿಗಳೇ ಇದ್ದಾಗ, ನಾವೂ ಬುಸ್ಸೆನ್ನುವಷ್ಟಾದರೂ ಶಕ್ತಿ ಪಡೆಯಲು ಏನಾದರೂ ಬೇಕಲ್ಲ? ಎದುರು ಇರೋರನ್ನ ಕಚ್ಚೋದು ಬೇಡ; ವಿಷ ಉಣಿಸೋದಂತೂ ಬೇಡವೇ ಬೇಡ. ಆದರೆ ಎದುರಿಗೆ ಬುಸ್ಸೆನ್ನುವ ಹೆಡೆಗಳೇ ಇದ್ದಾಗ ನನ್ನೊಳಗೂ ಏನೋ ಇದೆ ಎಂದು ತೋರಿಸಲು ಹೆಡೆಯೊಂದು ಹುಟ್ಟತೊಡಗುತ್ತೆ. ಆದರೆ ಅದು ಹೊರಬರದೆ ಒಳಗೇ ಉಳಿಯುವಂತೆ ಒತ್ತಿಹಿಡಿದು ಸಮಾಧಾನಿಸಿ ಬೇರೊಂದು ರೂಪದ ‘ಐಡೆಂಟಿಟಿ’ಗೆ ನನ್ನಂಥವರು ಹಂಬಲಿಸಿದಾಗ ಹೆಡೆಯನ್ನು ಅದುಮಿಟ್ಟು ಹೊರಬಂದ ಅಕ್ಷರವೇ ಐಡೆಂಟಿಟಿಯಾಗುತ್ತದೆ; ಬಳಪದಿಂದ ಪೆನ್ಸಿಲ್ಲಿಗೆ, ಪೆನ್ಸಿಲ್ಲಿನಿಂದ ಪೆನ್ನಿಗೆ ಪಡೆದ ‘ಬಡ್ತಿ’ ಬಡ ಹುಡುಗನ ಐಡೆಂಟಿಟಿಯ ಸಂಕೇತವಾಗುತ್ತದೆ. ಹೆಡೆಗಳ ಎದುರು ಹೆಡೆಯಾಗದೆ ಗಳಿಸಬೇಕಾದ ಐಡೆಂಟಿಟಿಯ ಸಮಸ್ಯೆ; ಎಂಥ ಸಾಮಾಜಿಕ ವಿಸ್ಮಯ!
ಇಷ್ಟೆಲ್ಲ ಯಾಕೆ ಹೇಳಿದೆ, ಗೊತ್ತಾ? ನಾನು ಸಾಮಾಜಿಕವಾಗಿ ಬಲಾಢ್ಯ ವಲಯದವನಲ್ಲ; ಆರ್ಥಿಕವಾಗಿ ಶ್ರೀಮಂತ ಮನೆತನದವನಲ್ಲ; ಹಾಗಾದರೆ ಹುಟ್ಟಿದ ಊರಲ್ಲಿ ನಾನು ಗಮನಾರ್ಹನಾಗುವುದು ಹೇಗೆ? ನನಗೊಂದು ಐಡೆಂಟಿಟಿ ಬರೋದು ಹೇಗೆ? ಮಾಧ್ಯಮಿಕ ಶಾಲೆಗೆ (ಈಗಿನ ಹಿರಿಯ ಪ್ರಾಥಮಿಕ ಶಾಲೆಗೆ) ಬಂದು ಪ್ಯಾಂಟು ಹಾಕಿಕೊಂಡೆ. ಅದೂ ಅಪರೂಪಕ್ಕೆ ಅಪ್ಪ ಹೊಲೆಸಿಕೊಟ್ಟ ಒಂದೇ ಒಂದು ಪ್ಯಾಂಟು- ನಾಲ್ಕು ವರ್ಷಗಳ ನನ್ನ ವಸ್ತ್ರಸಂಗಾತಿ! ಅದು ಕೊಳೆಯಾದಾಗ ಪಟಾಪಟ್ಟಿ ನಿಕ್ಕರು-ಇದೇ ಶಾಶ್ವತ ಸಂಗಾತಿ! ಸದಾ ಬನೀನಿನ ಜೇಬಿನಲ್ಲಿ ಎದ್ದುಕಾಣುವ ಪೆನ್ನು- ನನ್ನ ನಿಜವಾದ ಆತ್ಮಸಂಗಾತಿ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.