ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಪುಸ್ತಕ ಓದು: ನಟಿ ಮಧುಬಾಲ ಘನತೆಯ ಜೀವನ ಕಥನ

Last Updated 21 ಆಗಸ್ಟ್ 2022, 0:30 IST
ಅಕ್ಷರ ಗಾತ್ರ

ದುಮಧುಬಾಲ ಅವರ ಜೀವನಚರಿತ್ರೆಯಲ್ಲ. ಜೀವನಚರಿತ್ರೆಯನ್ನು ಇಡಿಯಾಗಿ ಕಟ್ಟಿಕೊಡುವಷ್ಟು ಮಾಹಿತಿಯೂ ಲಭ್ಯವಿಲ್ಲ. ಹಲವು ಮೂಲಗಳಿಂದ ಸಿಕ್ಕ ಮಾಹಿತಿಯ ಮೂಲಕ ಮಧುಬಾಲಳ ಬದುಕಿನ ಬಿಡಿ ಚಿತ್ರಗಳನ್ನು ನಮ್ಮ ಮುಂದಿಡುವ ಪ್ರಯತ್ನವನ್ನು ರಮೇಶ ಮಾಡಿದ್ದಾರೆ.

ಹಿಂದಿ ಚಿತ್ರರಂಗ ರಸಿಕರೆದೆಯಲ್ಲಿ ಅಚ್ಚಳಿಯದಂತೆ ಹಾಕಿದ ಕೆಲವೇ ಸಹಿಗಳಲ್ಲಿ ಒಂದಕ್ಕೆ ಇರುವ ಹೆಸರು ‘ಮಧುಬಾಲ’. ಸ್ವಾತಂತ್ರ್ಯಪೂರ್ವದಲ್ಲಿಯೇ ಹುಟ್ಟಿ, ಆಗಿನ್ನೂ ಬೆಳೆಯುತ್ತಿದ್ದ ಹಿಂದಿ ಚಿತ್ರರಂಗದಲ್ಲಿ ಉಜ್ವಲವಾಗಿ ಬೆಳಗಿದ ಅಸಾಧಾರಣ ಚೆಲುವಿನ ಖನಿ, ಅಸೀಮ ಪ್ರತಿಭೆಯ ಬನಿ ಮಧುಬಾಲ. ಅವರ ಚೆಲುವಿನ ಚಹರೆಗಳಷ್ಟೇ ಅಲ್ಲ, ನಟನೆಯ ಪಾತ್ರಗಳು ಅಸಂಖ್ಯ ಅಭಿಮಾನಿಗಳ ಎದೆಯಲ್ಲಿ ಇಂದಿಗೂ ಜೀವಂತಿಕೆಯಿಂದ ನಳನಳಿಸುತ್ತಿವೆ. ಬದುಕಿದ ಮೂವತ್ತಾರು ವರ್ಷಗಳಲ್ಲಿ, ಬಣ್ಣದ ಲೋಕದಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಲ್ಲಿ, ನಟಿಸಿದ ಎಪ್ಪತ್ತೆರಡು ಸಿನಿಮಾಗಳಲ್ಲಿ ಅವರು ಕೊಟ್ಟಿದ್ದು, ಬಿಟ್ಟುಹೋಗಿದ್ದು ಮಾತ್ರ ಅಗಾಧವಾದದ್ದು. ಹಲವು ಕಥೆಗಳನ್ನು ತೆರೆಯ ಮೇಲೆ ತೆರೆದಿಟ್ಟ ಈ ನಟಿಯ ಬದುಕಿನ ಕಥೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಕವಿ ರಮೇಶ ಅರೋಲಿ, ‘ಮಧುಬಾಲ: ಬೆಳ್ಳಿಪರದೆಗೆ ಕಾಲ ಬರೆದ ಕಾಗದ’ ಎಂಬ ಕೃತಿಯಲ್ಲಿ ಮಾಡಿದ್ದಾರೆ.

ಇದು ಮಧುಬಾಲ ಅವರ ಜೀವನಚರಿತ್ರೆಯಲ್ಲ. ಜೀವನಚರಿತ್ರೆಯನ್ನು ಇಡಿಯಾಗಿ ಕಟ್ಟಿಕೊಡುವಷ್ಟು ಮಾಹಿತಿಯೂ ಲಭ್ಯವಿಲ್ಲ. ಹಲವು ಮೂಲಗಳಿಂದ ಸಿಕ್ಕ ಮಾಹಿತಿಯ ಮೂಲಕ ಮಧುಬಾಲಳ ಬದುಕಿನ ಬಿಡಿ ಚಿತ್ರಗಳನ್ನು ನಮ್ಮ ಮುಂದಿಡುವ ಪ್ರಯತ್ನವನ್ನು ರಮೇಶ ಮಾಡಿದ್ದಾರೆ. ಅಜ್ಜ ಪೆದ್ದಿಂಟಿ ಪೆದ್ದ ಹನುಮಂತಪ್ಪ ಅವರು ಹೇಳಿದ ಕಥೆಗಳಿಂದ ಹಿಡಿದು, ಹಲವು ಪುಸ್ತಕಗಳು, ಪತ್ರಿಕಾ ಸುದ್ದಿಗಳು ಹೀಗೆ ಬಗೆಬಗೆಯ ಮೂಲಗಳಿಂದ ತೆಗೆದುಕೊಂಡ ಮಾಹಿತಿಯ ಮೂಲಕ ಈ ಕೃತಿ ಜೀವತಳೆದಿದೆ. ಹಾಗೆಂದು ಸಿಕ್ಕ ಸುದ್ದಿಗಳನ್ನೆಲ್ಲ ನಿಜವೆಂದು ಗಾಳಿಸುದ್ದಿಗಳನ್ನು ತುರುಕಿಡುವ ತೆವಲಿನ ಬರವಣಿಗೆ ಇದಲ್ಲ. ಬದಲಿಗೆ ಪ್ರತಿಭಾವಂತ ನಟಿಯೊಬ್ಬಳ ಬದುಕು–ಚಿತ್ರಬದುಕಿನ ಪ್ರಯಾಣವನ್ನು ಅರಿತುಕೊಳ್ಳುವ ಕುತೂಹಲದಿಂದ ಹುಟ್ಟಿಕೊಂಡ ಕೃತಿ ಇದು. ಈ ಅರಿಕೊಳ್ಳುವಿಕೆಯಲ್ಲಿ ಆ ನಟಿಯ ಬದುಕಿನ ಘನತೆಗೆ ಮುಕ್ಕಾಗದಂತೆ ನೋಡಿಕೊಳ್ಳಬೇಕು ಎಂಬ ವಿವೇಕವೂ ಇಲ್ಲಿ ಎದ್ದು ಕಾಣಿಸುತ್ತದೆ.

ಈ ಕೃತಿ ಮಧುಬಾಲ ಅವರ ಬದುಕಿನ ವಿವರಗಳ ಮೇಲಷ್ಟೇ ರೂಪುಗೊಂಡಿಲ್ಲ. ಅವರು ನಟಿಸಿದ ಮುಖ್ಯ ಸಿನಿಮಾಗಳು, ಪ್ರಮುಖ ಹಾಡುಗಳನ್ನು ಉಲ್ಲೇಖಿಸಿ, ಅದನ್ನು ವಿಶ್ಲೇಷಿಸಿ, ಸಹನಟರ ಕುರಿತಾಗಿಯೂ ಚರ್ಚಿಸುತ್ತ ಅದರ ಮೂಲಕವೂ ಮಧುಬಾಲ ಅವರ ಬದುಕನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಇಲ್ಲಿದೆ. ಜೊತೆಗೆ ಸೊಗಸಾದ ಪೋಟೊಗಳ ಸಾಂಗತ್ಯವೂ ಇದೆ. ಆದರೆ ಈ ಚಿತ್ರಗಳ ವಿನ್ಯಾಸವನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಬಹುದಿತ್ತು. ಅಧ್ಯಾಯವೊಂದರ ನಡುವಿನಲ್ಲಿಯೇ ನುಸುಳುವ ಎರಡು ಮೂರು ಪುಟಗಳ ಫೋಟೊಗ್ಯಾಲರಿ ಕೆಲವೊಮ್ಮೆ ಓದಿನ ಓಘಕ್ಕೆ ಅಡ್ಡಿಮಾಡುತ್ತದೆ. ಕೆಲವು ಕಡೆಗಳಲ್ಲಿ ಮಾಹಿತಿಯ ಪುನರಾವರ್ತನೆಯನ್ನೂ ತಪ್ಪಿಸಬಹುದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT