ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಮೀಸಲಾತಿ ಅರಿವಿನ ಕೈಪಿಡಿ

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಜಾತಿ ಮತ್ತು ಅದರ ಸಂರಚನೆಯನ್ನು ಹೊರತುಪಡಿಸಿ ಭಾರತವನ್ನು ಕಲ್ಪಿಸಿಕೊಳ್ಳಲಾಗದು. ಸಾಮಾಜಿಕ ಶ್ರೇಣೀಕರಣವನ್ನು ಹುಟ್ಟುಹಾಕಿರುವ ಜಾತಿ ವ್ಯವಸ್ಥೆಯು ಮೇಲು–ಕೀಳು ಭಾವನೆ ಸೃಷ್ಟಿಸಿ ಅಸಮಾನತೆಗೆ ಕಾರಣವಾಗಿದೆ. ಈ ಅಸಮಾನತೆಯ ಪರಿಹಾರಕ್ಕಾಗಿ ಸಂವಿಧಾನದ ಮೂಲಕ ರೂಪುಗೊಂಡಿದ್ದು ಮೀಸಲಾತಿ ವ್ಯವಸ್ಥೆ.

ವಿಸ್ತಾರವಾದ ವ್ಯಾಪ್ತಿ ಹೊಂದಿರುವ ಮೀಸಲಾತಿಯ ಕುರಿತು ಕನ್ನಡದಲ್ಲಿ ಬಂದಿರುವ ಕೃತಿಗಳು ವಿರಳ. ಆ ಕೊರತೆಯನ್ನು ನೀಗಿಸುವಂತಿದೆ ‘ಮೀಸಲಾತಿ ಅಂತರಂಗ’ ಕೃತಿ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರೂ ಆಗಿರುವ ಲೇಖಕ ಕೆ.ಎನ್. ಲಿಂಗಪ್ಪ ಅವರ ಅನುಭವ ಹಾಗೂ ಆಳವಾದ ಅಧ್ಯಯನದ ಫಲಿತವಾಗಿರುವ ‘ಮೀಸಲಾತಿ ಅಂತರಂಗ’ ಕೃತಿಯು ಮೀಸಲಾತಿ ಕುರಿತು ಇರುವ ಗೊಂದಲಗಳ ನಿವಾರಣೆಯ ಜೊತೆಗೆ ಖಚಿತವಾದ, ಸ್ಪಷ್ಟವಾದ ಅರಿವು ಮೂಡಿಸುತ್ತದೆ.

ರಾಜ್ಯದಲ್ಲಿ ಕೆಲವು ವರ್ಷಗಳಿಂದ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗದವರು ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಆಧರಿಸಿದ ಹಾಗೂ ಆಯಾ ಸಂದರ್ಭಕ್ಕೆ ಅನುಗುಣವಾಗಿ ಬರೆದಿರುವ ಒಟ್ಟು 36 ಲೇಖನಗಳು ಇಲ್ಲಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೀಸಲಾತಿ ಅನುಷ್ಠಾನದ ಕುರಿತು ಹೊಂದಿರುವ ಧೋರಣೆಗಳೂ ಇಲ್ಲಿ ಅನಾವರಣವಾಗಿವೆ. ಅಂತೆಯೇ ಮುಸ್ಲಿಮರ ಮೀಸಲಾತಿ, ಮಹಿಳಾ ಮೀಸಲಾತಿ, ಇಡಬ್ಲ್ಯುಎಸ್ ಕುರಿತಂತೆ ಕೃತಿ ಒಳನೋಟ ಬೀರುತ್ತದೆ. ಮುಖ್ಯವಾಗಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸಲು ಇರುವ ಮಾನದಂಡಗಳನ್ನು ಈಗ ಸ್ಪಷ್ಟಪಡಿಸಿಕೊಳ್ಳಬೇಕಾದ ಅಗತ್ಯದ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.

‘ರಾಜಕೀಯ ಪಕ್ಷಗಳ ಸ್ಥಾನ ಹಂಚಿಕೆಯೂ, ಸಾಮಾಜಿಕ ನ್ಯಾಯವೂ’ ಲೇಖನದಲ್ಲಿ, ‘ಸಾಮಾಜಿಕ ಅನ್ಯಾಯವನ್ನು ತೊಲಗಿಸಬೇಕೆಂದರೆ, ಬಲಾಢ್ಯ ಜಾತಿಗಳ ಸಹಕಾರ– ಕಾರುಣ್ಯ ಬೇಕೇ ಬೇಕು. ಇಲ್ಲವಾದರೆ ಶತಶತಮಾನಗಳೇ ಸಂದು ಹೋದರೂ ಅಸಮಾನತೆ ಎಂಬುದು ಅಳಿಯದೆ, ಸಾಮಾಜಿಕ ನ್ಯಾಯದ ಕನಸಿನ ದಾರಿ ದೂರದಲ್ಲೆಲ್ಲೋ ಉಳಿದುಬಿಡುತ್ತದೆ’ ಎನ್ನುವ ಲೇಖಕರ ಮಾತು ಮೀಸಲಾತಿಯ ಅಗತ್ಯವನ್ನು ಮನಗಾಣಿಸುತ್ತದೆ.

ಮೀಸಲಾತಿಯ ಆಳ–ಅಗಲ, ಅದರ ಹಿಂದಿನ ಉದ್ದೇಶ, ಕಾಲಕಾಲಕ್ಕೆ ರೂಪುಗೊಂಡ ಆಯೋಗಗಳ ವರದಿಗಳಷ್ಟೇ ಅಲ್ಲ, ಇತರ ರಾಜ್ಯ ಮತ್ತು ವಿದೇಶಗಳಲ್ಲಿನ ಮೀಸಲಾತಿಯ ಬಗೆಗಿನ ಮಾಹಿತಿಯೂ ಇಲ್ಲಿದೆ. ಅಧ್ಯಯನಕಾರರಿಗಷ್ಟೇ ಅಲ್ಲ, ಜನಸಾಮಾನ್ಯರೂ ಮೀಸಲಾತಿಯ ಕುರಿತು ಅರಿಯಲು ಈ ಕೃತಿ ಕೈಪಿಡಿಯಂತಿದೆ.

ಮೀಸಲಾತಿ ಅಂತರಂಗ

ಲೇ: ಕೆ.ಎನ್. ಲಿಂಗಪ್ಪ
ಪ್ರ: ಅಭಿರುಚಿ ಪ್ರಕಾಶನ
ಸಂ: 99454 99588.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT