ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸತು: ಜೋಹಾನ್ಸ್‌ಬರ್ಗ್‌ನಲ್ಲಿ ಪಾಟೀಲರ ಅನುಭವ

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಆತ್ಮಕಥನ ‘ಕಳೆದ ಕಾಲ ನಡೆದ ದೂರ’ ಜನವರಿ 21ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಬಿಡುಗಡೆಯಾಗಲಿದೆ. ಅವರ ಬಾಲ್ಯಕಾಲದಿಂದ ಬದುಕಿನಲ್ಲಿ ಏಣಿ ಹತ್ತುತ್ತಾ, ಅಲ್ಲಲ್ಲಿ ನಿಂತು ಆಯಾ ಕಾಲವನ್ನು ಮರುಕಾಣಿಸಿದಂತಹ ಲೇಖನಗಳು ಇದರಲ್ಲಿ ಇವೆ. ಅಂತಹ ಒಂದು ಲೇಖನದ ಓದು ಇಲ್ಲಿದೆ...

ಸುಪ್ರೀಂ ಕೋರ್ಟ್ ನ್ಯಾಯಾಧೀಶನಾಗಿರುವಾಗಲೇ ದಕ್ಷಿಣ ಆಫ್ರಿಕಾಗೆ ಹೋಗುವ ಅವಕಾಶ ನನಗೆ ಒದಗಿಬಂತು. ಆ ದೇಶದ ಸ್ವಾತಂತ್ರ್ಯದ ದಶಮಾನೋತ್ಸವದ ಆಚರಣೆಯ ಸಂದರ್ಭದಲ್ಲಿ 2004ರ ಮಾರ್ಚ್ 18ರಿಂದ 22ರವರೆಗೆ ಜಗತ್ತಿನ ಅನೇಕ ದೇಶಗಳ ಸುಪ್ರೀಂ ಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶ ಅಲ್ಲಿ ಏರ್ಪಾಡಾಗಿತ್ತು. ನಮ್ಮ ಸುಪ್ರೀಂ ಕೋರ್ಟ್‌ನಿಂದ ಮುಖ್ಯ ನ್ಯಾಯಮೂರ್ತಿಗಳ ಪರವಾಗಿ ಪಾಲ್ಗೊಳ್ಳುವ ಅವಕಾಶ ನನಗೆ ಸಿಕ್ಕಿತ್ತು. ಸಮಾವೇಶದಲ್ಲಿ ನಡೆದ ವಿಚಾರ ಸಂಕಿರಣದ ಒಂದು ಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಭಾರತ ಸಂವಿಧಾನದಲ್ಲಿನ ಸಾಮಾಜಿಕ ದೃಷ್ಟಿಕೋನ ಮತ್ತು ಸಾಮಾಜಿಕ ನ್ಯಾಯವನ್ನು ಇತರ ದೇಶಗಳ ಸಂವಿಧಾನಗಳ ಜೊತೆ ತುಲನೆ ಮಾಡುವ ಗೋಷ್ಠಿ ಅದಾಗಿತ್ತು. ಆಗ ದಕ್ಷಿಣ ಆಫ್ರಿಕಾದ ಮುಖ್ಯ ನ್ಯಾಯಾಧೀಶರಾಗಿದ್ದವರು ಜಸ್ಟೀಸ್ ಜಾಕಲ್ಸನ್‌ ಎಂಬುವವರು. ಅವರು ಬಿಳಿಯರು, ಅಂದರೆ ಆಂಗ್ಲರು. ಆಗಿನ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ಮನಸ್ಸು ಮಾಡಿದ್ದರೆ ಕರಿಯರಲ್ಲೇ ಮುಖ್ಯ ನ್ಯಾಯಾಧೀಶರ ಹುದ್ದೆಗೆ ಆಯ್ಕೆ ಮಾಡಬಹುದಾಗಿತ್ತು. ಅವರು ನಿಷ್ಪಕ್ಷಪಾತವಾಗಿ ಆಯ್ಕೆ ಮಾಡಿದ್ದು ಜಾಕಲ್ಸನ್‌ ಅವರಂತಹ ಪ್ರಾಮಾಣಿಕ ಮತ್ತು ಸಮರ್ಥ ಬ್ರಿಟಿಷ್ ನ್ಯಾಯಾಧೀಶರನ್ನು.

ಆ ಸಮಾವೇಶದ ಕೊನೆಯಲ್ಲಿ ಮಾಧ್ಯಮಗೋಷ್ಠಿಯೊಂದನ್ನು ಹಮ್ಮಿಕೊಂಡಿದ್ದರು. ಒಬ್ಬ ವರದಿಗಾರ ‘ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಬಹುಮತ ಪಡೆದ ಆಡಳಿತಾರೂಢ ರಾಜಕೀಯ ಪಕ್ಷ ಸಂವಿಧಾನದ ಯಾವುದೇ ಭಾಗ (ಮೂಲಭೂತ ಹಕ್ಕುಗಳನ್ನು ಒಳಗೊಂಡು) ತಿದ್ದುಪಡಿ ಮಾಡಬಹುದೇ?’ ಎಂದು ಪ್ರಶ್ನಿಸಿದ. ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದ ಬಹುತೇಕ ಮುಖ್ಯ ನ್ಯಾಯಾಧೀಶರು, ‘ಸರಿಯಾದ ಕ್ರಮದಲ್ಲಿ ಮತ್ತು ನಿಗದಿತ ಬಹುಮತವಿದ್ದರೆ ಮೂಲಭೂತ ಹಕ್ಕುಗಳನ್ನೂ ಕೂಡ ತಿದ್ದುಪಡಿ ಮಾಡಬಹುದು’ ಎಂದು ಉತ್ತರಿಸಿದರು.

ಕೊನೆಯಲ್ಲಿ ನಾನು, ‘ನಮ್ಮ ದೇಶದ ಸಂವಿಧಾನದ ವಿಧಿ 368ರ ಪ್ರಕಾರ, ಸಂವಿಧಾನದ ಯಾವುದೇ ವಿಧಿಯ ತಿದ್ದುಪಡಿ ಮಾಡಲು ಅವಕಾಶವಿದೆ’ ಎಂದು ಪ್ರತಿಕ್ರಿಯಿಸಿ, ಆದರೆ ವಿಷಯಗಳ ಆಧಾರದ ಮೇಲೆ ಸರಿಯಾದ ಕ್ರಮವನ್ನು ಜರುಗಿಸಿ, ಅವಶ್ಯಕತೆ ಇದ್ದ ಬಹುಮತದ ಆಧಾರದ ಮೇಲೆ ಅಂತಹ ತಿದ್ದುಪಡಿಗಳನ್ನು ಮಾಡಬಹುದು ಎಂದು ಪ್ರತಿಕ್ರಿಯಿಸಿದೆ.

ನಾನು ಮುಂದುವರಿದು ಹೇಳಿದೆ. ನಮ್ಮ ದೇಶದ ಸುಪ್ರೀಂ ಕೋರ್ಟಿನ ಕೇಶವಾನಂದ ಭಾರತಿ V/s ಕೇರಳ ರಾಜ್ಯದ ಕೇಸಿನಲ್ಲಿ ಬಹಳ ಮಹತ್ವದ, ಅರ್ಥಪೂರ್ಣವಾದ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ದೃಷ್ಟಿಯಿಂದ ಸಂವಿಧಾನದ ಯಾವುದೇ ವಿಧಿಗೆ ಆರ್ಟಿಕಲ್ 368ರ ಮೇರೆಗೆ ತಿದ್ದುಪಡಿ ತರಬಹುದು. ಆದರೆ, ಅದರ ಮೂಲ ಗುಣಲಕ್ಷಣಗಳಿಗೆ ಧಕ್ಕೆಯಾಗದಂತಿರಬೇಕು ಎಂದು, ತೀರ್ಪನ್ನು ನೀಡಿದೆ. ಹೀಗಾಗಿ, ಸಂವಿಧಾನ ಪೀಠದ ಮಹತ್ವದ ಪ್ರಕರಣಗಳ ಪೈಕಿ ಇಡೀ ದೇಶದ ಗಮನ, ಕುತೂಹಲ ಸೆಳೆದಿದ್ದ ಪ್ರಕರಣವಿದು. ದಕ್ಷಿಣ ಆಫ್ರಿಕಾದ ಆ ಮಾಧ್ಯಮಗೋಷ್ಠಿಯಲ್ಲಿ ನಾನು ಈ ತೀರ್ಪಿನ ಬಗ್ಗೆ ವಿವರಿಸಿ, ‘ದೇಶದ ನಾಗರಿಕರು ಆಸ್ತಿ ಹೊಂದುವುದು ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬುದು ಈ ಕೇಸಿನ ಮುಖ್ಯ ವಸ್ತುವಾಗಿತ್ತು. ಅಲ್ಲದೆ, ಅದು ಮೂಲಭೂತ ಹಕ್ಕುಗಳ ಮಾನ್ಯತೆ ಬಗ್ಗೆ ವಿಸ್ತೃತ ಚರ್ಚೆಗೆ ನಾಂದಿಯಾದ ಕೇಸೂ ಹೌದು. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತ ಸಂವಿಧಾನದ ಕುರಿತಾದ ಮಹತ್ವದ ಮೈಲಿಗಲ್ಲಿನಂತಹ ತೀರ್ಪು ಈ ಪ್ರಕರಣದಲ್ಲಿ ಪ್ರಕಟವಾಗಿದೆ. ಈ ತೀರ್ಪಿನಿಂದಾಗಿ ಸಂವಿಧಾನದ ಮೂಲಭೂತ ಗುಣಲಕ್ಷಣಗಳನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗಿದೆ’ ಎಂದು ಹೇಳಿದಾಗ, ನಮ್ಮ ಸುಪ್ರೀಂ ಕೋರ್ಟ್‌ನ ಬಗ್ಗೆ ಆ ಮಾಧ್ಯಮಗೋಷ್ಠಿಯಲ್ಲಿ ಎಲ್ಲರಿಂದಲೂ ಮೆಚ್ಚುಗೆಯು ವ್ಯಕ್ತವಾಯಿತು.

ಸಾಮಾನ್ಯವಾಗಿ, ಸಂವಿಧಾನಪೀಠದಲ್ಲಿ ಐವರು ನ್ಯಾಯಾಧೀಶರಿದ್ದರೆ, ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಎಲ್ಲ 13 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠ ಈ ವಿಚಾರಣೆಯನ್ನು ಕೈಗೊಂಡಿದ್ದು ದೇಶದ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಒಂದು ದಾಖಲೆಯಾಯಿತು. ಈ ಪೀಠದ ಮುಂದೆಯೇ 68 ದಿನಗಳ ವಾದ– ಪ್ರತಿವಾದಗಳು ನಡೆದಿದ್ದವು. 1972ರ ಅಕ್ಟೋಬ‌ರ್ 31ರಂದು ಆರಂಭವಾದ ಈ ಪ್ರಕರಣದ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕಟವಾದದ್ದು 1973ರ ಮಾರ್ಚ್‌ 23ರಂದು. 700 ಪುಟಗಳ ತೀರ್ಪು ಇದು. ಮೂಲಭೂತ ಹಕ್ಕುಗಳ ಕೇಸು ಎಂದೇ ಗುರುತಿಸಿಕೊಂಡ ಈ ಪ್ರಕರಣದ ತೀರ್ಪನ್ನು ಇಂದಿಗೂ ‘ಕೇಶವಾನಂದ ಭಾರತಿ ತೀರ್ಪು’ ಎಂದೇ ಹೇಳಲಾಗುತ್ತದೆ. ದೇಶದ ಪ್ರಭಾವಿ ಮತ್ತು ಹೆಸರಾಂತ ವಕೀಲರಾಗಿದ್ದ ನಾನಾ ಭಾಯ್ ಪಾಲ್ಕಿವಾಲಾ (ನಾನಿ ಪಾಲ್ಕಿವಾಲಾ) ಅವರು, ಫಾಲಿ ನಾರಿಮನ್, ಸೋಲಿ ಸೊರಾಬ್ಜಿ ಹಾಗೂ ಇತರ ಹಿರಿಯ ನ್ಯಾಯವಾದಿಗಳ ಸಹಕಾರದೊಂದಿಗೆ ಈ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

ಅಲ್ಲಿನ ಮಾಧ್ಯಮ ಪ್ರತಿನಿಧಿಗಳು ಕೇಳಿದ ಎರಡನೇ ಪ್ರಶ್ನೆ ಏನೆಂದರೆ, ‘ಮರಣದಂಡನೆ ಶಿಕ್ಷೆ ಇರಬೇಕೇ? ಇರಬಾರದೇ?’ ಎಂಬುದು. ಇದಕ್ಕೂ ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದರು. ನನ್ನ ಸರದಿ ಬಂತು. ‘ನಮ್ಮ ದೇಶದಲ್ಲಿ ಭಾರತೀಯ ದಂಡಸಂಹಿತೆ(ಇಂಡಿಯನ್ ಪೀನಲ್ ಕೋಡ್) ಪ್ರಕಾರ ಮರಣದಂಡನೆ ಶಿಕ್ಷೆ ಕೊಡಬಹುದು ಎಂದೇ ಇದೆ. ಆದರೆ, ಈ ಬಗ್ಗೆ ಜನರಲ್ಲಿ ಎರಡು ಭಿನ್ನ ದೃಷ್ಟಿಕೋನಗಳಿವೆ- ‘ಮರಣದಂಡನೆ ವಿಧಿಸುವುದು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಮರಣದಂಡನೆಯಂತಹ ಕಠಿಣ ಶಿಕ್ಷೆ ಇಲ್ಲದೇ ಇದ್ದರೆ ದೇಶದ ಮತ್ತು ಸಮಾಜದ ಸುರಕ್ಷತೆಗೆ ಧಕ್ಕೆಯುಂಟಾಗಬಹುದು.’ ಆದ್ದರಿಂದ, ಪ್ರಕರಣದ ತೀವ್ರತೆ ಮತ್ತು ಕ್ರೌರ್ಯವನ್ನು ಗಮನದಲ್ಲಿಟ್ಟುಕೊಂಡು, ವಿರಳಾತಿ ವಿರಳ ಪ್ರಕರಣಗಳಲ್ಲಿ ನಮ್ಮ ಸುಪ್ರೀಂ ಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಕೊಡಬಹುದು’ ಎಂದು ಹೇಳಿ ಸಮತೋಲನ ಕಾಪಾಡಿದೆ.

2001ರ ಡಿಸೆಂಬರ್ 13ರಂದು ನಮ್ಮ ಸಂಸತ್ತಿನ ಮೇಲೆ ನಡೆದ ಉಗ್ರರ ದಾಳಿ, ಪ್ರಧಾನಿ ರಾಜೀವ್ ಗಾಂಧಿಯವರನ್ನು ಮಾನವಬಾಂಬ್ ಸ್ಫೋಟದ ಮೂಲಕ ಹತ್ಯೆಗೈದ ಪ್ರಕರಣ, ಒಂದು ಇಡೀ ಕುಟುಂಬದವರನ್ನು ಹಾಡಹಗಲಲ್ಲೇ ರುಂಡ ಕತ್ತರಿಸಿ ಕೊಲೆ ಮಾಡಿದ ಪ್ರಕರಣ-ಇಂತಹ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕಾಗುತ್ತದೆ. ಮರಣದಂಡನೆಯಂತಹ ಕಠಿಣ ಶಿಕ್ಷೆ ದುಷ್ಕೃತ್ಯ ಎಸಗುವ ಜನರಲ್ಲಿ ಭಯ ಹುಟ್ಟಿಸುತ್ತದೆ. ಆದರೂ ದುಷ್ಕೃತ್ಯಗಳು ನಡೆಯುತ್ತಲೇ ಇವೆ. ಒಂದು ವೇಳೆ ಮರಣದಂಡನೆ ಶಿಕ್ಷೆಯನ್ನು ತೆಗೆದುಹಾಕಿದರೆ ಪರಿಸ್ಥಿತಿ ಹೇಗಿರಬಹುದು ಎಂದು ಯೋಚಿಸಿ, ಭಯೋತ್ಪಾದನೆ ಮತ್ತು ಆತಂಕವಾದಿಗಳಿಂದ ದುಷ್ಕೃತ್ಯಗಳು ನಡೆಯುತ್ತಿರುವ ಈ ಸಮಯದಲ್ಲಿ ಮರಣದಂಡನೆ ಶಿಕ್ಷೆಯನ್ನು ತೆಗೆದುಹಾಕುವುದು ದೇಶದ ಸುರಕ್ಷತೆಯ ದೃಷ್ಟಿಯಿಂದ ಸರಿಯಾಗುವುದಿಲ್ಲ. ಮುಂದೆ ಸರಿಯಾದ ಸಮಯ ಬಂದಾಗ ನಮ್ಮ ದೇಶದಲ್ಲಿಯೂ ಮರಣದಂಡನೆ ಶಿಕ್ಷೆಯನ್ನು ತೆಗೆದುಹಾಕಬಹುದು’ ಎಂದು ಉತ್ತರಿಸಿದೆ.

ಮಾಧ್ಯಮಗೋಷ್ಠಿ ಮುಗಿಸಿ ನಾವು ಮುಂದಿನ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ, ದಕ್ಷಿಣ ಆಫ್ರಿಕಾದ ನ್ಯಾಯಾಧೀಶರೊಬ್ಬರು ‘ಮಿಸ್ಟರ್ ಪಾಟೀಲ, ನೀವು ನಮ್ಮ ದೇಶಕ್ಕೆ ಗಾಂಧೀಜಿಯವರನ್ನು ಕಳಿಸಿಕೊಟ್ಟಿರಿ. ನಾವು ನಿಮ್ಮ ದೇಶಕ್ಕೆ ಮಹಾತ್ಮರನ್ನು ಮರಳಿ ಕಳುಹಿಸಿಕೊಟ್ಟೆವು’ ಎಂದು ಹೇಳಿದರು. ನಾನು, ‘ಹೌದು, ಆದರೆ ಗಾಂಧೀಜಿ ಮತ್ತು ಮಹಾತ್ಮ ಇಬ್ಬರೂ ಭಾರತೀಯರೇ ಎಂಬುದು ಅಭಿಮಾನದ ವಿಷಯ’ ಎಂದು ಉತ್ತರಿಸಿದೆ!

Cut-off box - ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಆತ್ಮಕಥನ ‘ಕಳೆದ ಕಾಲ ನಡೆದ ದೂರ’ ಜನವರಿ 21ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಬಿಡುಗಡೆಯಾಗಲಿದೆ. ಅವರ ಬಾಲ್ಯಕಾಲದಿಂದ ಬದುಕಿನಲ್ಲಿ ಏಣಿ ಹತ್ತುತ್ತಾ ಅಲ್ಲಲ್ಲಿ ನಿಂತು ಆಯಾ ಕಾಲವನ್ನು ಮರುಕಾಣಿಸಿದಂತಹ ಲೇಖನಗಳು ಇದರಲ್ಲಿ ಇವೆ. ಅಂತಹ ಒಂದು ಲೇಖನದ ಓದು ಇಲ್ಲಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT