ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಮರ್ಶೆ | ಉದ್ಘಾಟನಾ ಕೃತಿ ಹೆಗ್ಗಳಿಕೆಗೆ ಪಕ್ಕಾಗುವ ಕಾದಂಬರಿ

Published 2 ಸೆಪ್ಟೆಂಬರ್ 2023, 15:40 IST
Last Updated 2 ಸೆಪ್ಟೆಂಬರ್ 2023, 15:40 IST
ಅಕ್ಷರ ಗಾತ್ರ

ಘಾಂದ್ರುಕ್

ಲೇ: ಸತೀಶ್ ಚಪ್ಪರಿಕೆ

ಪ್ರ: ಅಂಕಿತ ಪುಸ್ತಕ

ಸಂ: 080-2661 7100

ಕೆಲವು ಕೃತಿಗಳಿಗೆ ಉದ್ಘಾಟನಾ ಕೃತಿಗಳ ಹೆಗ್ಗಳಿಕೆ ಸಿಗುತ್ತದೆ. ಸತೀಶ್ ಚಪ್ಪರಿಕೆಯವರ ಕಾದಂಬರಿ ‘ಘಾಂದ್ರುಕ್’ ಇಂಥ ಹೆಗ್ಗಳಿಕೆಗೆ ಸಕಾರಣವಾಗಿ ಪಾತ್ರವಾಗಬಲ್ಲ ಕಾದಂಬರಿ. ಹೊಸ ದಾರಿಯಲ್ಲಿ ತನ್ನ ಹೆಜ್ಜೆಯನ್ನು ಭದ್ರವಾಗಿ ಊರಬಲ್ಲ ಶಕ್ತಿ ಇರುವ ಕೃತಿಗಳು ಮುಂದೆ ಆ ದಾರಿಯಲ್ಲಿ ನಡೆಯಬಲ್ಲ ಸಾಧ್ಯತೆಯನ್ನು ತೆರೆಯುತ್ತವೆ, ಇಲ್ಲವೆ ಆ ದಾರಿಯಲ್ಲಿ ನಡೆಯಲು ಸಾಧ್ಯವಾಗದ ಅಪೂರ್ವ ಕೃತಿಗಳಾಗಿಯೂ ಉಳಿಯುತ್ತವೆ. ಸತೀಶರ ಈ ಕೃತಿ ಈ ಎರಡರಲ್ಲಿ ಯಾವ ಕಡೆಗೆ ವಾಲುತ್ತದೆ ಎಂದು ಹೇಳುವುದು ಕಷ್ಟ. ಇದು ಒಂದು ಅಂಶವಾದರೆ, ಇನ್ನೊಂದು ಮುಖ್ಯವಾದ ಸಂಗತಿಯೂ ಈ ಕಾದಂಬರಿಯ ವಿಷಯದಲ್ಲಿದೆ. ತನ್ನ ಕಾಲವನ್ನು ಅದರ ಮೂಲಭಿತ್ತಿಯಲ್ಲಿ ಹಿಡಿಯುವ ಪ್ರಯತ್ನವನ್ನು ಈ ಕಾದಂಬರಿ ಮಹತ್ವಾಕಾಂಕ್ಷೆಯಿಂದ, ಅದಕ್ಕೆ ಬೇಕಾದ ಎಲ್ಲ ತಯಾರಿಗಳಿಂದ, ಈ ಎರಡರಷ್ಟೇ ಮುಖ್ಯವಾದ ಉತ್ಕಟತೆಯಿಂದಲೂ ಮಾಡುತ್ತದೆ. ಮೊದಲ ಎರಡು ಯಾರಿಗಾದರೂ ಇರಬಹುದು, ಆದರೆ ಅದಮ್ಯ ಉತ್ಕಟತೆ ಮಾತ್ರ ಅಪ್ಪಟ ಬರೆಹಗಾರರಿಗೆ ಮಾತ್ರ ಸಾಧ್ಯವಾಗುವಂಥದ್ದು. ಅದು ಸತೀಶರಿಗೆ ಸಾಧ್ಯವಾಗಿದೆ ಎನ್ನುವುದು ಈ ಕೃತಿಯನ್ನು ಮುಖ್ಯವಾಗಿಸುವಲ್ಲಿ ನಿರ್ಣಾಯಕವಾದ ಪಾತ್ರ ವಹಿಸಿದೆ.

ಇರುವುದೆಲ್ಲವ ಬಿಟ್ಟು ಇರುವುದೆಂದರೆ ಏನು ಎನ್ನುವುದನ್ನು ಬೆನ್ನುಹತ್ತಿ ಹೋಗುವುದು ಎಲ್ಲ ಕಾಲದ ಹುಡುಕಾಟಗಳಲ್ಲಿ ಒಂದಾಗಿ ಸದಾ ಉಳಿದಿದೆ. ಅದು ಮನುಷ್ಯರ ಆದಿಮ ಹುಡುಕಾಟಗಳಲ್ಲಿ ಒಂದು ಎನ್ನುವುದೂ ಅಷ್ಟೇ ನಿಜ. ಅದರೆ ಇದನ್ನು ಸಾಧಿಸುವ ದಾರಿಯ ಹುಡುಕಾಟ, ಆ ದಾರಿಯಲ್ಲಿ ನಡೆಯುವ ಪ್ರಯಾಣ, ಆ ಪ್ರಯಾಣದ ಪುಳಕಗಳು ಮತ್ತು ಸಂಕಟಗಳು... ಇವುಗಳಷ್ಟೇ ಅಲ್ಲದೆ, ಆ ಪ್ರಯಾಣದುದ್ದಕ್ಕೂ ನೆರಳಿನಂತೆ ಹಿಂಬಾಲಿಸುವ ಪ್ರಶ್ನೆಯೊಂದಿದೆ. ಇದು ದಾರಿ ಹೌದಾ? ನಾನು ಹುಡುಕುತ್ತಿದ್ದುದು ಇದೇ ದಾರಿಯನ್ನೇ? ಗುರಿ ತಲುಪುವುದು ಮುಖ್ಯವೋ ಪ್ರಯಾಣವೇ ಅಂತಿಮವೋ? ಇಷ್ಟಕ್ಕೂ ಅದನ್ನು ಗುರಿ ಎನ್ನಬಹುದೆ? ಇಂಥ ಮೂರ್ತ, ಅಮೂರ್ತ ಪ್ರಶ್ನೆಗಳು ದಾರಿಗಂಟಿನಂತೆ ಹಿಂಬಾಲಿಸುವುದನ್ನು ಈ ಕೃತಿ ತಾತ್ವಿಕ ಪ್ರಶ್ನೆಯಂತೆ ಎದುರಿಸುವುದಿಲ್ಲ, ಅದು ಬದುಕುವ ಬಗೆಯೇ ಎನ್ನುವಷ್ಟು ಪ್ರಾಯೋಗಿಕ ನೆಲೆಯಲ್ಲಿಯೂ ಎದುರಿಸುತ್ತದೆ.

ಕಾದಂಬರಿಯ ನಾಯಕ ಸಿದ್ಧಾರ್ಥ, ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ ಅಥವಾ ಅಪ್ಪಟ ಬದುಕಿನ ಬಂಧನಕ್ಕೆ ವಾಪಸಾಗುವ ಭಿತ್ತಿಯನ್ನು ಹೊಂದಿದೆ. ಈ ಭಿತ್ತಿಯೂ ಹೊಸದಲ್ಲ, ಪರಿಣಾಮವೂ ಹೊಸದಲ್ಲ. ಹಾಗಾದರೆ ಸತೀಶರ ಈ ಕಾದಂಬರಿಯನ್ನು ‘ಹೊಚ್ಚ ಹೊಸದಾಗಿ’ಸಿರುವ ಅಂಶ ಯಾವುದು? ಪ್ರತಿ ಕಾಲವೂ ಬದುಕನ್ನು ಆದರ ಆದಿ–ಅಂತ್ಯವಿಲ್ಲದ ನೆಲೆಯಲ್ಲಿ ಒಪ್ಪುತ್ತಲೇ ತನ್ನ ಕಾಲದ ವ್ಯಾಖ್ಯಾನಕ್ಕೆ ಅದನ್ನು ಸಜ್ಜುಗೊಳಿಸಿಕೊಳ್ಳುವ ಪ್ರಯತ್ನವನ್ನೂ ಮಾಡುತ್ತಲೇ ಇರುತ್ತದೆ. ಆಧುನಿಕತೆಯ ಭವ ನಿಮಜ್ಜನ ಚಾತುರ್ಯದಲ್ಲಿ ನಂಬಿಕೆಯಿಟ್ಟ ಕಾಲಘಟ್ಟ ಇದು. ಭವವೆನ್ನುವುದು, ಅದರೆಲ್ಲ ಭವಾವಳಿಗಳನ್ನೂ ಒಂದೇ ಭವದಲ್ಲಿ ಉಂಡು ತೇಗ ಬಯಸುವ ದುರಾಸೆಯ ಕಾಲ ಇದು. ಅದರ ತುದಿಯಲ್ಲೇ ಮನುಷ್ಯರನ್ನು ಆ ಶಿಖರಾಗ್ರದಿಂದ ತೆಗೆದು ಬಿಸುಡವ ಶಕ್ತಿಯಿರುವುದೂ ಈ ಬದುಕಿಗೇ. ಅಸಾಧಾರಣವೆನಿಸುವ ಮಾನವ ಶಕ್ತಿಯು ಹುಲುಮಾನವರ ಕ್ಷುದ್ರ ಶಕ್ತಿಯಾಗಿಬಿಡುವ ವಿಪರ್ಯಾಸಗಳನ್ನು ಇಲ್ಲಿಯ ನಾಯಕ ಸಿದ್ಧಾರ್ಥ ಗ್ರಹಿಸುತ್ತಾನೆ. ಆದ್ದರಿಂದಲೇ ಅವನು ಈ ಕಾಲದ ಪ್ರತಿನಿಧಿ.

ಮುಂದೆ ಇವನು ಸೋಫಿಯಾಳ ಪಾಶಕ್ಕೆ ಅಥವಾ ಸೋಫಿಯಾ ಇವನ ಪಾಶಕ್ಕೆ ಸಿಕ್ಕುವುದು ಎಂದೆಲ್ಲ ಹೇಳಬಹುದು. ಆದರೆ ನಿಜದಲ್ಲಿ ಇವರಿಬ್ಬರೂ ವಾಪಸಾಗುವುದು ಬದುಕುವ ಮೋಕ್ಷದ ದಾರಿಗೆ. ಆದರೆ ಈ ಮರಳುವಿಕೆಯಲ್ಲಿಯೇ ಅವರು ಮೋಕ್ಷವನ್ನು ಪಡೆದ ಹೊಸ ಮನುಷ್ಯರಾಗಿದ್ದಾರೆ ಎನ್ನುವುದನ್ನು ಹಿಡಿಯುವಲ್ಲಿ ಈ ಕೃತಿ ಗೆದ್ದಿದೆ. ಈ ಕೃತಿಯ ಯಶಸ್ಸು ಇದು ಎನ್ನುವುದಕ್ಕಿಂತ, ತಾನು ಬದುಕುತ್ತಿರುವ ಕಾಲದ ಕನವರಿಕೆಯನ್ನು ಬಲು ಸಾಂದ್ರವಾಗಿ ಹೇಳಲು ಇದಕ್ಕೆ ಸಾಧ್ಯವಾಗಿದೆ ಎನ್ನುವುದು ಹೆಚ್ಚು ಸರಿ.

ವಾಚಾಳಿಯಾದ ಸಿದ್ಧಾರ್ಥ, ಕೆಲವೇ ಮಾತುಗಳ ಸೋಫಿಯಾ ಇವರಿಬ್ಬರೂ ಗಂಡು ಮತ್ತು ಹೆಣ್ಣುಗಳ ವ್ಯಕ್ತಿತ್ವಗಳನ್ನೇ ಘನೀಭವಿಸಿದ್ದಾರೆ. ಸಿದ್ಧಾರ್ಥನಿಗೆ ಹೋಲಿಸಿದರೆ ಅನೂಹ್ಯವಾದ ದುರಂತ, ಕ್ರೌರ್ಯ, ಹಿಂಸೆ, ಅಭದ್ರತೆಗಳ ಸರಣಿಯನ್ನೇ ಅನುಭವಿಸಿಯೂ ಸೋಫಿಯಾ ಬದುಕಿನ ಬಗೆಗಾಗಲೀ, ಸಂಬಂಧಗಳ ಬಗೆಗಾಗಲೀ ಸಿನಿಕಳಲ್ಲ, ಅವುಗಳ ಬಗೆಗೆ ತನ್ನ ನಂಬಿಕೆಯನ್ನೂ ಅವಳು ಎಂದೂ ಕಳೆದುಕೊಳ್ಳುವುದಿಲ್ಲ. ಇದಕ್ಕೆ ವಿರುದ್ಧವಾಗಿ ಸಿನಿಕತನದ ದಾರಿಗೆ ಹತ್ತಿರವಿದ್ದ ಸಿದ್ಧಾರ್ಥನನ್ನು ಅವಳು ಅದರಿಂದ ಪಾರು ಮಾಡಿ ಬದುಕಿನ ಅಪ್ಪುಗೆಗೆ ಜಾರುವಂತೆ ಮಾಡುತ್ತಾಳೆ. ಹೆಣ್ಣಿನ ಅದಮ್ಯ ಜೀವ ಜೀವನಪ್ರೀತಿಯನ್ನು ಇವಳು ಪ್ರತಿನಿಧಿಸುತ್ತಾಳೆ ಎಂದೇ ಅನ್ನಿಸುತ್ತದೆ. ಇದರ ನಡುವೆ ಸಿದ್ಧಾರ್ಥನ ಅಪ್ಪನ ಇನ್ನೊಂದು ಹೆಣ್ಣಿನ ಜೊತೆಗಿನ ಸಂಬಂಧವೂ ಅನಾವರಣಗೊಂಡು ಅದಕ್ಕೆ ಸಿದ್ಧಾರ್ಥ ಸ್ಪಂದಿಸುವ ಬಗೆಯೇ ಅವನ ಮರಳುವಿಕೆಯ ಮೊದಲ ಹೆಜ್ಜೆಯಾಗುತ್ತದೆ ಎನ್ನುವುದು ಅವನು ಅಪ್ಪಟ ಮನುಷ್ಯನಾಗುವ ಪ್ರಕ್ರಿಯೆಯೆ ಆರಂಭವೂ ಆಗುತ್ತದೆ.

ಸೋಲು, ಗೆಲುವುಗಳ ವ್ಯಾಖ್ಯಾನವೇ ಇವತ್ತಿನ ಮುಖ್ಯ ಪ್ರಶ್ನೆಗಳಲ್ಲಿ ಒಂದಾಗಿದೆ. ಸಂತೋಷ, ಸಮಾಧಾನಗಳ ಅರ್ಥವಿವರಣೆಯೂ ಇವತ್ತು ಬಹಳ ಸಂಕೀರ್ಣ. ಹಣ, ಅಧಿಕಾರ, ಸವಲತ್ತು ಇವುಗಳಿಗೆ ಬಲಿಯಾಗುತ್ತಿರುವಾಗಲೂ ಒಳಗಿನಿಂದ ಹುಟ್ಟುವ ಅನುಮಾನ, ಅಪನಂಬಿಕೆಗಳನ್ನು ಗಂಭೀರವಾಗಿ ತೆಗೆದುಕೊಂಡಾಗಲೇ ಬದುಕು ತನ್ನ ಬೆಳಕು, ಸೌಂದರ್ಯಗಳನ್ನು ಕಾಣಿಸುತ್ತದೆ. ಆದರೆ ಬೇಕಿರುವುದು ಅಂತರಾತ್ಮ ಕೇಳುವ ಈ ಪ್ರಶ್ನೆಗಳನ್ನು ಕೇಳಿಸಿಕೊಳ್ಳಬೇಕಾದ ಜಾಗರ ಸ್ಥಿತಿಯೊಂದನ್ನು ಕಾಪಿಟ್ಟುಕೊಳ್ಳಬೇಕು ಎನ್ನುವುದು.

ಈ ಎಲ್ಲವನ್ನೂ ಬಿಚ್ಚಿಹೇಳದೇ ಕಥನದ ರೂಪಕದಲ್ಲಿ, ರೂಪಕದ ಭಾಷೆಯಲ್ಲಿ ಕಟ್ಟಿಕೊಟ್ಟಿದೆ ‘ಘಾಂದ್ರುಕ್.’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT