ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ: ಎರಡು ಚಿತ್ರ–ಕಥೆ, ನೂರಾರು ಹಾಡು!

Published : 18 ಸೆಪ್ಟೆಂಬರ್ 2021, 17:01 IST
ಫಾಲೋ ಮಾಡಿ
Comments

ಸಾಹಿತ್ಯ ಮತ್ತು ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆದ ವಿರಳ ಉದಾಹರಣೆಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ ಅವರ ಹೆಸರು ಮುಖ್ಯವಾದುದು. ಕಥೆ–ಕಾದಂಬರಿಕಾರರಾಗಿ ಅಪಾರ ಜನಪ್ರಿಯತೆ ಗಳಿಸಿದ್ದ ಅವರು, ಕಿರುತೆರೆ ಧಾರಾವಾಹಿ ಮತ್ತು ಸಿನಿಮಾ ನಿರ್ದೇಶನದಲ್ಲೂ ಯಶಸ್ಸನ್ನು ಗಳಿಸಿದರು. ಹೀಗೆ ಎರಡು ದೋಣಿಯ ಪ್ರಯಾಣದಲ್ಲಿ ಸಮಾನ ಯಶಸ್ಸನ್ನು ಗಳಿಸಿದ ಉದಾಹರಣೆಗಳು ಕನ್ನಡದಲ್ಲಿ ಅಪರೂಪ ಅಥವಾ ಇಲ್ಲವೆಂದರೂ ನಡೆದೀತು.

ಈಗ ಪೂರ್ಣಾವಧಿ ಸಿನಿಮಾ ನಿರ್ದೇಶಕರಾಗಿರುವ ನಾಗತಿಹಳ್ಳಿ ಚಂದ್ರಶೇಖರ್‌, ತಮ್ಮ ಸಾಹಿತ್ಯದ ಹಿನ್ನೆಲೆಯ ಕಾರಣದಿಂದಲೋ ಏನೋ ಸಿನಿಮಾ ಕೃತಿಗಳನ್ನು ಸಾಹಿತ್ಯ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ತಮ್ಮ ಜನಪ್ರಿಯ ಸಿನಿಮಾಗಳಾದ ‘ಅಮೃತಧಾರೆ’ ಮತ್ತು ‘ಕೊಟ್ರೇಶಿ ಕನಸು’ಗಳ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ್ದಾರೆ. ನಾಗತಿಹಳ್ಳಿಯವರ ಸಿನಿಮಾಜೀವನದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾದ ಈ ಎರಡು ಸಿನಿಮಾಗಳು, ಮಧುರಸ್ವಪ್ನಗಳನ್ನು ನೆನಪಿಸುವಂತೆ ಈಗ ಕೃತಿರೂಪದಲ್ಲಿ ಸಹೃದಯರ ಮುಂದಿವೆ.

‘ಕಾದಂಬರಿಯನ್ನು ಚಿತ್ರಕಥೆ ಯಾಗಿಸುವುದು ಹೇಗೆ?’ ಎನ್ನುವ ‘ಕೊಟ್ರೇಶಿ ಕನಸು’ ಕೃತಿಯ ಅಡಿ ಟಿಪ್ಪಣಿ ಹಾಗೂ ‘ನೈಜ ಘಟನೆಯನ್ನು ಚಿತ್ರಕಥೆಯಾಗಿಸುವುದು ಹೇಗೆ?’ ಎನ್ನುವ ‘ಅಮೃತಧಾರೆ’ ಪುಸ್ತಕದ ವಿಶೇಷಣ, ಈ ಸಿನಿಮಾ ಪುಸ್ತಕಗಳು ಸಿನಿಮಾ ವಿದ್ಯಾರ್ಥಿಗಳಿಗೆ ಉಪಯುಕ್ತ ಎನ್ನುವುದನ್ನು ಹೇಳುವಂತಿವೆ. ಕನ್ನಡದಲ್ಲಿ ಸಿನಿಮಾ ಪಠ್ಯಗಳು ಅಪರೂಪವಾಗಿರುವ ಹಿನ್ನೆಲೆಯಲ್ಲಿ, ಈ ಕೃತಿಗಳು ಚಲನಚಿತ್ರದ ವ್ಯಾಕರಣ ಮತ್ತು ಬರವಣಿಗೆಯನ್ನು ತಿಳಿಯಬಯಸುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿವೆ.

ಸಿನಿಮಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಸಾಮಾನ್ಯ ಓದುಗರಿಗೂ ನಾಟಕ ಕಥನದ ರೂಪದಲ್ಲಿ ನಾಗತಿಹಳ್ಳಿಯವರ ಸಿನಿಮಾ ಕಥನದ ಕೃತಿಗಳು ಇಷ್ಟವಾಗುವಂತಿವೆ. ‘ಅಮೃತಧಾರೆ’ ಸಿನಿಮಾ, ಬದುಕಿನ ಬಗ್ಗೆ ಆಸೆ ಹುಟ್ಟಿಸುವ ಪ್ರೇಮ ಹಾಗೂ ಅನಿವಾರ್ಯ ವಾಸ್ತವವಾದ ಸಾವನ್ನು ಎದುರುಗೊಳ್ಳುವ ದಿಟ್ಟ ಹೆಣ್ಣು ಹಾಗೂ ಆಕೆಯ ಸಂಗಾತಿಯ ಕಥೆ. ಒಲವಿನ ಅಮೃತಧಾರೆಯನ್ನು ಸಹೃದಯರಿಗೆ ಉಣಬಡಿಸಿದ ಈ ಸಿನಿಮಾ ಕನ್ನಡ ಸಿನಿಮಾ ಪರಂಪರೆಯ ಸುಂದರ ಹಾಗೂ ಅರ್ಥಪೂರ್ಣ ಪ್ರೇಮಕಥೆಗಳಲ್ಲೊಂದು. ‘ಕೊಟ್ರೇಶಿ ಕನಸು’ ಚಿತ್ರದ ಆಶಯ ಭಿನ್ನವಾದುದು. ದಲಿತ ಹುಡುಗನೊಬ್ಬನ ಅಕ್ಷರ ಆಕಾಂಕ್ಷೆ ಹಾಗೂ ಅದಕ್ಕೆ ಎದುರಾಗುವ ಅಡೆತಡೆಗಳನ್ನು ‘ಕೊಟ್ರೇಶಿ ಕನಸು’ ಸೊಗಸಾಗಿ ಚಿತ್ರಿಸಿದೆ. ಕುಂ. ವೀರಭದ್ರಪ್ಪನವರ ಕಥನ ಆಧರಿಸಿದ ಈ ಸಿನಿಮಾ, ಶಿಕ್ಷಣದ ಮೂಲಕ ದಲಿತವರ್ಗ ಸಾಧಿಸಿಕೊಳ್ಳಬಹುದಾದ ವಿಮೋಚನೆಯ ಸಾಧ್ಯತೆಯನ್ನು ಸಹೃದಯರ ಮುಂದಿಡುತ್ತದೆ.

ಎಲ್ಲರಿಗೂ ಬೇಕಾದ ಪ್ರೇಮ ಹಾಗೂ ಸಮಾಜದ ಆರೋಗ್ಯಕ್ಕೆ ಬೇಕಾದ ಮಾನವೀಯ ಸ್ಪಂದನವನ್ನು ನಾಗತಿಹಳ್ಳಿಯವರ ಈ ಎರಡು ಸಿನಿಮಾಗಳು ನಮ್ಮ ಮುಂದಿಡುತ್ತವೆ. ಪ್ರೇಕ್ಷಕರೂ ಇಷ್ಟಪಟ್ಟ ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನೂ ಗಳಿಸಿದ ಈ ಸಿನಿಮಾಗಳನ್ನು ಮತ್ತೆ ನೆನಪಿಸಿಕೊಳ್ಳಲು ಪ್ರಸಕ್ತ ‍ಪುಸ್ತಕಗಳು ಅವಕಾಶ ಕಲ್ಪಿಸಿವೆ. ಬರಹರೂಪದ ಕಥನ ದೃಶ್ಯರೂಪ ತಳೆದಾಗ ಪಡೆಯುವ ಹೊಸ ಬಣ್ಣಗಳನ್ನು ಅರಿಯು ವುದಕ್ಕೂ ಈ ಪುಸ್ತಕಗಳು ಉಪಯುಕ್ತ.

ಆಯಾ ಸಿನಿಮಾಗಳಿಗೆ ಬಂದ ಪತ್ರಿಕಾ ವಿಮರ್ಶೆಗಳು ಹಾಗೂ ಸಿನಿಮಾದ ಛಾಯಾಚಿತ್ರಗಳನ್ನು ಪುಸ್ತಕಗಳ ಕೊನೆಯಲ್ಲಿ ನೀಡಲಾಗಿದೆ. ‘ಕೊಟ್ರೇಶಿ ಕನಸು’ ಕೃತಿಯ ಕೊನೆಯಲ್ಲಿ, ಆ ಚಿತ್ರಕ್ಕೆ ಪ್ರೇರಕಶಕ್ತಿಯಾದ ಸಿ. ಅಶ್ವತ್ಥ್‌ರ ಬಗೆಗಿನ ಬರಹ ಆಪ್ತವಾಗಿದೆ.

‘...ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು’ ಕೃತಿ ನಾಗತಿಹಳ್ಳಿ ಅವರು ತಮ್ಮ ಸಿನಿಮಾಗಳಿಗೆ ಹಾಗೂ ಬೇರೆಯವರ ಸಿನಿಮಾಗಳಿಗಾಗಿ ಬರೆದ ಗೀತೆಗಳ ಸಂಕಲನ. ಸಿನಿಮಾ ಮಾತ್ರವಲ್ಲದೆ, ಬೇರೆ ಬೇರೆ ಕಾರಣಗಳಿಗಾಗಿ ಬರೆದ ಕೆಲವು ಗೀತೆಗಳೂ ಇಲ್ಲಿವೆ. ಬರೀ ಗೀತೆಗಳ ಸಂಕಲನವಾಗಿದ್ದರೆ, ಇದು ಸಿನಿಮಾದ ಹಾಡಿನ ಪುಸ್ತಕಗಳ ಸಾಲಿಗೆ ಸೇರುತ್ತಿತ್ತು. ಆದರೆ, ಹಾಡಿಗೆ ಸಂಬಂಧಿಸಿದ ವಿವರ–ವಿಶೇಷಗಳ ಟಿಪ್ಪಣಿಗಳೂ ಇರುವುದು ಈ ಕೃತಿಗೆ ಹೊಸ ರೂಪು ತಂದುಕೊಟ್ಟಿದೆ.

ಕವಿತೆ ಬರೆಯುವುದು ಹೇಗೆ ಎಂದು ಸಾಹಿತ್ಯದ ವಿದ್ಯಾರ್ಥಿಗಳಿಗೆ ಕಮ್ಮಟ ಮಾಡಿದಂತೆ, ಸಿನಿಮಾ ಸಾಹಿತಿಗಳಿಗೆ ‘ಚಿತ್ರಗೀತೆ ಬರೆಯುವುದು ಹೇಗೆ?’ ಎನ್ನುವ ಪ್ರಶ್ನೆಗೆ ಉತ್ತರದ ರೂಪದಲ್ಲಿ ಈ ಕೃತಿಯನ್ನು ಗಮನಿಸಬಹುದು.

ಹೊಸ ತಲೆಮಾರಿನ ತರುಣ ತರುಣಿಯರು ದೊಡ್ಡ ಸಂಖ್ಯೆಯಲ್ಲಿ ದೃಶ್ಯ ಮಾಧ್ಯಮದತ್ತ ಆಕರ್ಷಿತರಾಗುತ್ತಿದ್ದಾರೆ. ಆದರೆ, ಅವರಿಗೆ ಕನ್ನಡ ಸಿನಿಮಾಪಠ್ಯಗಳು ಬರವಣಿಗೆಯ ರೂಪದಲ್ಲಿ ದೊರೆಯುವುದು ತುಂಬಾ ಕಡಿಮೆ. ಈ ಕೊರತೆಯನ್ನು ಸ್ವಲ್ಪಮಟ್ಟಿಗೆ ನೀಗಿಸುವ ದೃಷ್ಟಿಯಿಂದ ನಾಗತಿಹಳ್ಳಿಯವರ ಮೂರೂ ಕೃತಿಗಳಿಗೆ ಮಹತ್ವವಿದೆ. ಸಿನಿಮಾ ದಿನಗಳಿಗೆ ಮುನ್ನ ಉಪನ್ಯಾಸಕರಾಗಿದ್ದ, ಈಗ ‘ಟೆಂಟ್‌ ಶಾಲೆ’ಯ ಮೂಲಕ ಸಿನಿಮಾ ವ್ಯಾಕರಣ ಕಲಿಸುತ್ತಿರುವ ನಾಗತಿಹಳ್ಳಿಯವರ ಮೇಷ್ಟ್ರು ಮನಸ್ಸನ್ನು ಈ ಕೃತಿಗಳ ಹಿನ್ನೆಲೆಯಲ್ಲಿ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT