ವ್ಯಕ್ತಿ ತನ್ನ ಬದುಕಿನ ವೃತ್ತಾಂತವನ್ನು ಆತ್ಮಕತೆಯ ಮೂಲಕ ಹೇಳಿಕೊಳ್ಳಬಹುದು. ಆದರೆ, ಒಂದು ಊರು, ಒಂದು ಸಮುದಾಯ ತನ್ನ ಆತ್ಮಕತೆಯನ್ನು ಹೇಗೆ ಹೇಳಿಕೊಳ್ಳಬಹುದು? ಅಷ್ಟಕ್ಕೂ ಊರೆಂದರೆ ಏನು? ಅಲ್ಲಿನ ನೆಲವೇ, ಪರಿಸರವೇ, ಜನವೇ, ಪದವೇ, ಆಚರಣೆಗಳೇ ಅಥವಾ ಆಹಾರಪದ್ಧತಿಯೇ? ಈ ಎಲ್ಲವೂ ಸೇರಿಯೇ ಒಂದು ಊರಾಗುತ್ತದೆ. ಹಾಗಾದರೆ ಊರಿನ ಕಥೆಯನ್ನೂ ಈ ಎಲ್ಲವನ್ನೂ ಸೇರಿಸಿಯೇ ಹೇಳಬೇಕಾಯಿತಲ್ಲವೇ?

ಕುಪ್ಪಹಳ್ಳಿ ಹೇಮಗಿರಿಯೆಂಬ ಊರಿನ ಸಂಕೇತಿ ಸಮುದಾಯವೊಂದು ಹೇಳಿಕೊಂಡ ಆತ್ಮಕತೆ ಇಲ್ಲಿದೆ. ಇದರಲ್ಲಿ ಹಲವು ಧಾರೆಗಳಿವೆ; ಹಲವು ಸ್ವರಗಳಿವೆ; ಹಲವು ಧ್ವನಿಗಳಿವೆ. ಅವೆಲ್ಲವೂ ವ್ಯಕ್ತಗೊಂಡ ಒಂದು ಕಂಠವಿದೆ. ಆ ಕಂಠದ ಹೆಸರು ಪ್ರಮೀಳಾ ಸ್ವಾಮಿ.

ಪ್ರಮೀಳಾ ಸ್ವಾಮಿ ಅವರು ಒರೆದ (ಈ ಪುಸ್ತಕದ ಧಾಟಿಗೆ ಬರೆದ ಎನ್ನುವುದಕ್ಕಿಂತ ಒರೆದ ಎಂಬುದೇ ಸರಿಯಾದೀತು) ಇಲ್ಲಿನ ಕಥನ ಒಂದು ಕೇಂದ್ರದ ಸುತ್ತ ಕಟ್ಟಿದ ಕೌಶಲದ ಕಥನವಲ್ಲ. ಬದುಕು ಒಂದು ಕೇಂದ್ರದಲ್ಲಿ ನೆಲೆಯೂರಿ ಬೆಳೆಯುವ ಕಲ್ಪವೃಕ್ಷವಲ್ಲ; ನೂರು ನೂರು ಕೇಂದ್ರಗಳಲ್ಲಿ ಹರಡಿಕೊಂಡು ಚಿಗುರುವ ಸಮೃದ್ಧ ಹುಲ್ಲುಗಾವಲು ಎಂಬ ನಂಬಿಕೆಯಲ್ಲಿ ಹುಟ್ಟಿದ ಕಥನ. ಅವರ ಈ ಜೀವನದೃಷ್ಟಿಯ ಕಾರಣದಿಂದಾಗಿ ಅವರಿಗೇ ಗೊತ್ತಿಲ್ಲದೆ ಒಂದು ಸಮೂಹಸ್ವರದ ಶಕ್ತಿ ಈ ಕಥನಕ್ಕೆ ಲಭಿಸಿದೆ. ಹೇಮಗಿರಿಯ ಹತ್ತು ಹಲವು ವಿಶಿಷ್ಟ ಜನರು, ಅಲ್ಲಿನ ನದಿ, ಬೀದಿ, ಮಾವಿನ ತೋಪು, ದೀಪಾವಳಿಯ ಮತಾಪು, ಲೆಕ್ಕವಿಲ್ಲದಷ್ಟು ಬಗೆಯ ತಿನಿಸು, ತನ್ನ ಕಟ್ಟಿಹಾಕಿದ ಬೇಲಿಗೇ ಹಬ್ಬಿದ ಜೀವನ್ಮುಖಿ ಕನಸು–ಎಲ್ಲವೂ ಇವರ ಕಂಠದಲ್ಲಿ ಬಂದುಕೂತು ತಮ್ಮ ಆತ್ಮಕತೆಯನ್ನು ಉಸುರಿ ಹೋಗಿವೆ.

ತುಸು ತಮಾಷೆಯಾಗಿ ಹೇಳಬೇಕೆಂದರೆ ಹೇಮಗಿರಿಯ ಆತ್ಮ, ಪ್ರಮೀಳಾ ಸ್ವಾಮಿಯವರ ಮೈಮೇಲೆ ಬಂದು ತನ್ನ ಕಥೆಯನ್ನು ಹೇಳಿಕೊಂಡಿದೆ. ಆದರೆ, ಇಲ್ಲೊಂದು ವಿಶೇಷವಿದೆ. ಈ ಆತ್ಮಕ್ಕೆ, ಸಾಮಾನ್ಯವಾಗಿ ಅವರಿವರ ಮೈಮೇಲೆ ಬಂದು ಆರ್ಭಟಿಸುವ ದೆವ್ವಗಳ ಹಾಗೆ ಗಂಡುಧ್ವನಿಯಿಲ್ಲ. ಇದು ತನ್ನ ಕಥೆಯನ್ನು ಹೇಳಿಕೊಳ್ಳುವುದು ಹೆಣ್ಣುದನಿಯಲ್ಲಿ. ಹಾಗಾಗಿಯೇ ಹೆಣ್ಣಿಗೆ ಸಹಜವಾದ ಮೆಲ್ಲಗಿನ ಆಪ್ತಧ್ವನಿ ಮತ್ತು ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು ಒಪ್ಪನ್ನಷ್ಟೇ ಪೊರೆಯುವ ಮಮತೆಯ ಕಣ್ಣು ಈ ಕಥನಕ್ಕೆ ದಕ್ಕಿದೆ.

ಈ ಕೃತಿಯ ನಿರೂಪಣೆ ಮೂರು ಮುಖ್ಯ ವಿಧಾನಗಳಲ್ಲಿದೆ. ಒಂದು ಲೇಖಕಿ ತನ್ನ ಬಾಲ್ಯದ ದಿನಗಳಲ್ಲಿ ಕಂಡ ಪರಿಸರ, ಅಲ್ಲಿನ ಹಬ್ಬ ಹರಿದಿನಗಳು, ಅಲ್ಲಿನ ವಾತಾವರಣಗಳ ನೆನಪಿಸಿಕೊಳ್ಳುವ ವಿಧಾನ. ಇನ್ನೊಂದು ತನ್ನ ಮನಸಲ್ಲಿ ಅಚ್ಚಳಿಯದೆ ಉಳಿದ ವ್ಯಕ್ತಿಗಳ ಚಿತ್ರಣದ ಮೂಲಕ ವ್ಯಕ್ತಗೊಂಡ ವಿಧಾನ. ಮೂರನೆಯದು ಪುಸ್ತಕದುದ್ದಕ್ಕೂ ಥಟ್ಟನೆ ನೋಡಿದರೆ ಪದ್ಯಗಳಂತೆ ಕಾಣುವ ಹಾಗೆ ಹರಡಿಕೊಂಡಿರುವ ಅಡುಗೆ ತಯಾರಿಕಾ ವಿಧಾನ. ಈ ಮೂರೂ ಒಂದರಿಂದ ಒಂದು ಬೇರೆಯಾಗಿಲ್ಲ. ನೀಳ ಕೂದಲಿರುವ ಹೆಂಗಸರು ಮೂರು ಎಳೆಗಳನ್ನು ತೆಗೆದುಕೊಂಡು, ಒಂದರ ಮೇಲೆ ಇನ್ನೊಂದು ಬಿಗಿದು ಜಡೆ ಹೆಣೆಯುತ್ತಾರಲ್ಲಾ, ಹಾಗೆ ಒಂದಕ್ಕೊಂದು ಹೊಂದಿಕೊಂಡಿವೆ. ಲೇಖಕಿಯ ಬಾಲ್ಯದ ನೆನಪುಗಳಲ್ಲಿ ಬರುವ ವ್ಯಕ್ತಿಗಳು ಬದುಕಿನ ಅಭಿರುಚಿಗಳನ್ನು ರೂಪಿಸಿದರೆ, ಅವರು ಕಲಿಸಿಕೊಟ್ಟ ಅಡುಗೆ, ರುಚಿಯನ್ನು ರೂಪಿಸಿವೆ. ಈ ತಿನಿಸುಗಳು ಅಲ್ಲಿನ ಪರಿಸರದಿಂದ, ಅಲ್ಲಿನ ಜನರ ನೆನಪುಗಳಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲದ ಹಾಗೆ ಒಂದಕ್ಕೊಂದು ಬೆಸೆದುಕೊಂಡಿವೆ.

ಹದಿನೈದನೇ ವಯಸ್ಸಿಗೆ ಗಂಡನ ಕಳೆದುಕೊಂಡು, ಸಮಾಜ ಹೊರಿಸಿದ ‘ವಿಧವೆ’ಯ ಪಟ್ಟ ತಮ್ಮ ಜೀವನೋತ್ಸಾಹಕ್ಕೆ ತಡೆಯಾಗದ ಹಾಗೆ ದಿಟ್ಟವಾಗಿ ಬದುಕಿದ ಬಾಲಮ್ಮಾಮಿ ಮಾಡುವ ಸಕ್ಕರೆ ಅಚ್ಚು ಎಲ್ಲರಿಗೂ ಅಚ್ಚುಮೆಚ್ಚು. ಅಂಥ ಜೀವ, ಸಕ್ಕರೆ ಅಚ್ಚು ಮಾಡುತ್ತಲೇ, ಕೈಯಲ್ಲಿ ಸೌಟು ಹಿಡಿದೇ ಅಸುನೀಗುತ್ತದೆ. ಸುತ್ತಮುತ್ತಲೂ ಬಾಯಿ ಸಿಹಿಗೊಳಿಸುವ ಸುಮಾರು ಮುನ್ನೂರು ಸಕ್ಕರೆ ಅಚ್ಚು ಹರಡಿಕೊಂಡು, ಒಲೆಯ ಮೇಲೆ ಕರಗುತ್ತಿರುವ ಸಕ್ಕರೆ ಇಟ್ಟುಕೊಂಡು ಬದುಕಿಗೆ ವಿದಾಯಹೇಳಿದ ಆ ಜೀವವನ್ನು, ಆ ಗಾಳಿಯಾಡದ ಅಡುಗೆ ಕೋಣೆಯಿಂದ, ಆ ಸಕ್ಕರೆ ಅಚ್ಚುಗಳಿಂದ ಬೇರ್ಪಡಿಸಿ ನೋಡಲು ಸಾಧ್ಯವೇ?

ಇಲ್ಲಿರುವ ಯಾವ ಅಡುಗೆಯೂ ಲೇಖಕಿಯ ಪಾಲಿಗೆ ಬರೀ ನಾಲಿಗೆ ರುಚಿ ತಣಿಸುವ ತಿನಿಸುಗಳಲ್ಲ. ಬದಲಿಗೆ ಕಳೆದುಹೋದ ಬಾಲ್ಯವನ್ನು ಯಾವುದೇ ಹಳಹಳಿಕೆ ಇಲ್ಲದೆ –ಈಗ ಬದುಕುತ್ತಿರುವ ಕಾಲದ ಕುರಿತು ಅಸಡ್ಡೆಯೂ ಇಲ್ಲದೆ– ತನ್ನೊಳಗೇ ಪುನರುಜ್ಜೀವಗೊಳಿಸಿಕೊಳ್ಳುವ ಮಂತ್ರಗಳು. ಹೆಣ್ಣಿನ ಲೋಕಕ್ಕೆ ಮಾತ್ರವೇ ಸಿದ್ಧಿಸುವ ಮಂತ್ರಗಳು. ಹಾಗಾಗಿಯೇ ಇದು ಬರೀ ಅಡುಗೆ ಕೈಪಿಡಿಯಲ್ಲ; ಬರೀ ಆತ್ಮಕತೆಯಲ್ಲ; ಬರೀ ಜೀವನಕ್ರಮದ ದಾಖಲೆಯಲ್ಲ. ಅವೆಲ್ಲವನ್ನೂ ಒಳಗೊಂಡಿರುವ, ಅವೆಲ್ಲವನ್ನೂ ಮೀರಿದ ಸ್ತ್ರೀ ಕಣ್ಣಿನ ಸಮುದಾಯಕಥನ.

ಅಡುಗೆ ಮನೆಯನ್ನು ಹೆಣ್ಣನ್ನು ಬಂಧಿಸುವ ಜೈಲಾಗಿಸುವ ಹುನ್ನಾರವನ್ನು ಸ್ತ್ರೀಲೋಕ ಹೇಗೆ ಎದುರಿಸಿದೆ ಎಂಬುದಕ್ಕೆ ಈ ಪುಸ್ತಕವನ್ನು ಒಂದು ಉತ್ತರವಾಗಿಯೂ ನೋಡಬಹುದು. ಲೇಖಕಿ ತನ್ನ ಕೊನೆಯ ಮಾತುಗಳಲ್ಲಿ ಉಲ್ಲೇಖಿಸಿರುವ ಕೆಲವು ಸಾಲುಗಳು ಹೀಗಿವೆ ನೋಡಿ: ‘ಇದೇ ಅಡುಗೆಯೇ ಯಾರಿಗೂ ಬೇಡದ ವಿಧವೆಯರನ್ನು ಕಾಪಾಡಿದ್ದು, ಸಂಸಾರದ ಕಷ್ಟಗಳಿಂದ ನುಜ್ಜುಗುಜ್ಜಾದ ಹೆಣ್ಣು ಮಕ್ಕಳಿಗೆ ಶಕ್ತಿ ಕೊಟ್ಟಿದ್ದು. ಯಾವ ವಿಜ್ಞಾನಿಗೂ ಕಡಿಮೆ ಇಲ್ಲದಂತೆ ನಿರಂತರ ಪ್ರಯೋಗಗಳಿಂದ ರುಚಿ–ಹದ ಕಂಡುಕೊಂಡು, ಯಾವ ಕಲಾವಿದನಿಗೂ ಕಡಿಮೆ ಇಲ್ಲದಂತೆ ನಿರಂತರ ಸಾಧನೆಯಿಂದ ಕಲೆಯನ್ನು ಕರಗತಗೊಳಿಸಿಕೊಂಡ ಹೆಣ್ಣುಮಕ್ಕಳಿಗೆ ಕೊತ್ತಂಬರಿ, ಮೆಣಸು, ಮೆಂತ್ಯ, ಜೀರಿಗೆಯೇ ದೈವಗಳಾಗಿ ಕಂಡು, ಈ ದೈವಗಳು ನಿತ್ಯ ಸಾಕ್ಷಾತ್ಕರಿಸಿದ್ದರೆ ಅದರಲ್ಲಿ ಆಶ್ಚರ್ಯವೇನು?’

ಅಡುಗೆಮನೆ ಎನ್ನುವುದು ಸ್ತ್ರೀ ದಾಸ್ಯದ ಸಂಕೇತ ಎಂದು ಪುರುಷನೂ ಸ್ತ್ರೀಯೂ ಬೇರೆ ಬೇರೆ ರೀತಿಗಳಲ್ಲಿ ಸಾಬೀತುಗೊಳಿಸಲು ಹೆಣಗುತ್ತಿರುವ ಸಂದರ್ಭದಲ್ಲಿ ಈ ಕೃತಿ ಭಿನ್ನವಾದ ಇನ್ನೊಂದು ನಿಟ್ಟಿನಿಂದ ಅಡುಗೆಮನೆಯನ್ನು ನೋಡಿ, ಅದು ಬಿಡುಗಡೆಯೂ ಹೌದು ಎನ್ನುತ್ತದೆ. ಇದು ಯಾವುದೋ ಸಿದ್ಧಾಂತ, ಥಿಯರಿಗಳ ಬಲದಿಂದಲ್ಲದೆ ಬದುಕಿನ ನೆಲೆಯಿಂದ ರೂಪುಗೊಂಡ ನೋಟ ಎನ್ನುವುದು ಈ ಕೃತಿಯ ಹೆಚ್ಚುಗಾರಿಕೆ.

ಪುಸ್ತಕ: ಊರೆಂಬ ಉದರ

ಲೇಖಕಿ: ಪ್ರಮಿಳಾ ಸ್ವಾಮಿ

ಪು: 196 ಬೆ: ₹ 270

ಪ್ರಕಾಶನ: ಅಕ್ಷರ ಪ್ರಕಾಶನ ಹೆಗ್ಗೋಡು (www.aksharaprakashana.com)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.