ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ: ನಾದ ಲೋಕದಲ್ಲಿ ಮಹಿಳೆಯರ ಮೊಹರು..

ಗಾಯನ– ವಾದನಗಳಲ್ಲಿ ಮುಂಚೂಣಿಯಲ್ಲಿರುವ ಕೆಲ ಸಂಗೀತ ಸಾಧಕಿಯರ ಗಾನ–ಯಾನದ ಟಿಪ್ಪಣಿ, ನಾದಜಗತ್ತಿನಲ್ಲಿ ವಿಹರಿಸುವ ಸಹೃದಯರಿಗೆ ಒಂದಷ್ಟು ಮಾಹಿತಿ..
Published 29 ಸೆಪ್ಟೆಂಬರ್ 2023, 23:56 IST
Last Updated 29 ಸೆಪ್ಟೆಂಬರ್ 2023, 23:56 IST
ಅಕ್ಷರ ಗಾತ್ರ

ಲೇಖನ– ಉಮಾ ಅನಂತ್

––

ಪುರುಷ ಪ್ರಧಾನ ವಾದ್ಯ ಎಂದು ಪರಿಗಣಿಸಲಾಗಿದ್ದ ಸಾಥಿ ವಾದ್ಯ ತಬಲಾ, ಪಕ್ಕವಾದ್ಯ ಮೃದಂಗ, ತಂತಿವಾದ್ಯ ಸರೋದ್‌, ಸಿತಾರ್‌, ಸುಷಿರ ವಾದ್ಯ ಕೊಳಲು, ಹಾರ್ಮೋನಿಯಂಗಳಲ್ಲಿ ಮಹಿಳೆಯರು ಮೂಡಿಸುತ್ತಿರುವ ಹೆಜ್ಜೆಗುರುತು ವಿಶಿಷ್ಟವಾದುದು.

ಗಾಯನ– ವಾದನಗಳಲ್ಲಿ ಮುಂಚೂಣಿಯಲ್ಲಿರುವ ಕೆಲ ಸಂಗೀತ ಸಾಧಕಿಯರ ಗಾನ–ಯಾನದ ಟಿಪ್ಪಣಿ, ನಾದಜಗತ್ತಿನಲ್ಲಿ ವಿಹರಿಸುವ ಸಹೃದಯರಿಗೆ ಒಂದಷ್ಟು ಮಾಹಿತಿ..

ಸರೋದ್‌ ಸಹೋದರಿಯರ ಯುಗಳ

ಮನೆಗಳೇ ಇಲ್ಲದ ತಂತಿವಾದ್ಯ ಸರೋದ್‌. ಪುರುಷರೇ ಈ ವಾದ್ಯದಲ್ಲಿ ಪರಿಣತರೆಂಬುದು ಹಲವರ ಭಾವನೆ. ಕೋಲ್ಕತ್ತದ ಸರೋದ್‌ ಸಹೋದರಿಯರು ಎಂದೇ ಖ್ಯಾತರಾದ ವಿದುಷಿ ಟ್ರೊಯ್ಲಿ ದತ್ತಾ– ವಿದುಷಿ ಮೊಯ್ಸಿಲಿ ದತ್ತಾ ಸರೋದ್‌ ವಾದನ ಕೇಳುಗರು ನಾದನದಿಯಲ್ಲಿ ಮಿಂದೇಳುವಂತೆ ಮಾಡುತ್ತದೆ. ಸೇನಿಯಾ-ಮೈಹಾರ್ ಘರಾಣೆಯಲ್ಲಿ ನುಡಿಸುವ ಈ ಇಬ್ಬರು ವಾದಕಿಯರು, ಉಸ್ತಾದ್‌ ಅಲಿ ಅಕ್ಬರ್‌ ಖಾನ್, ಪಂ. ಶ್ಯಾಮ ಗಂಗೂಲಿ ಹಾಗೂ ಪಂ. ಕಮಲ್‌ ಮಲ್ಲಿಕ್‌ ಅವರಿಂದ ಸರೋದ್‌ ನುಡಿಸಾಣಿಕೆ ಕಲಿತವರು. ಸದ್ಯ ಖ್ಯಾತ ಸರೋದ್‌ ವಾದಕ ಪಂ. ಪಾರ್ಥೊ ಸಾರಥಿ ಅವರ ಬಳಿ ಸರೋದ್‌ನ ಉನ್ನತ ಅಭ್ಯಾಸ ನಡೆಸುತ್ತಿರುವ ಇವರು, ಸರೋದ್‌ ವಾದನದಲ್ಲೂ ಸೈ ಎನಿಸಿ ಸಂಗೀತ ಕ್ಷೇತ್ರವನ್ನು ಧೀಮಂತಗೊಳಿಸಿದ ಭರವಸೆಯ ವಾದಕಿಯರು.

ಸಿತಾರ್‌ ಖಬರ್!

ತಂತಿವಾದ್ಯ ಸಿತಾರ್ ಕೇಳುವುದು ಎಂದಿಗೂ ಸಹೃದಯರಿಗೆ ಪರಮಾನಂದ. ಪಂ. ರವಿಶಂಕರ್‌ ಹಾದಿಯಲ್ಲಿ ಅನೌಷ್ಕಾ ಶಂಕರ್‌ ಸಿತಾರ್‌ ಅನ್ನು ಜನಪ್ರಿಯಗೊಳಿಸಿದರು. ಸಿತಾರ್‌ನಲ್ಲಿ ಗಮನಸೆಳೆಯುವ ವಾದಕಿಯರಲ್ಲಿ ವಿದುಷಿ ಸಹನಾ ಬ್ಯಾನರ್ಜಿ ಅವರ ಹೆಸರು ಕೂಡ ಕೇಳುಗರ ಮನದಾಳದಲ್ಲಿ ಇದ್ದೇ ಇದೆ. ರಾಂಪುರ ಸೇನಿಯಾ ಘರಾಣೆಯ ಸಹನಾ ಬ್ಯಾನರ್ಜಿ ಅವರದು ಮನೆತನವೇ ಸಂಗೀತದ್ದು. ಕೋಲ್ಕತ್ತದ ಖ್ಯಾತ ಸಿತಾರ್‌ ಹಾಗೂ ಸುರ್‌ಬಹಾರ್‌ ವಾದಕ ಸಂತೋಷ್‌ ಬ್ಯಾನರ್ಜಿ ಅವರ ಪುತ್ರಿ. ತಾಯಿ ಗಾಯಕಿ. ಸಹಜವಾಗಿಯೇ ಒಲಿದ ಸಂಗೀತ, ಸಹನಾ ಅವರನ್ನು ದೇಶದ ಮುಂಚೂಣಿಯಲ್ಲಿರುವ ಸಿತಾರ್‌ ವಾದಕಿಯಾಗಿ ರೂಪಿಸಿದೆ.

ಸಂವಾದಿನಿಯಲ್ಲಿ ಪಾರುಪತ್ಯ

ಗಾಯನಕ್ಕೆ ಅತ್ಯಂತ ಸನಿಹವಾದ ನಾದ ಕೊಡುವ ‘ಪೇಟಿ’ಯಲ್ಲಿ ಮಹಿಳೆಯರ ಹೆಸರು ಕೇಳಿಬರುವುದೇ ಅಪರೂಪ. ದೆಹಲಿಯ ಪಾರೊಮಿತಾ ಮುಖರ್ಜಿ ಇದಕ್ಕೆ ಅಪವಾದವೆಂಬಂತೆ ‘ಸಂವಾದಿನಿ’ಯಲ್ಲಿ ಸಾಧನೆಯ ಶಿಖರಕ್ಕೇರುತ್ತಿದ್ದಾರೆ. ಆಕಾಶವಾಣಿಯ ಎ ಶ್ರೇಣಿಯ ಕಲಾವಿದೆಯಾಗಿರುವ ಪಾರೊಮಿತಾ, ಪಂ. ಜಸರಾಜ್, ಪಂ. ರಾಜನ್‌–ಸಾಜನ್‌ ಮಿಶ್ರಾ, ಅಜಯ ಚಕ್ರವರ್ತಿ, ಪಂ. ರಶೀದ್‌ ಖಾನ್‌, ಪರ್ವೀನ್‌ ಸುಲ್ತಾನಾ ಅಶ್ವಿನಿ ಭಿಡೆ ಮುಂತಾದ ದೇಶದ ದಿಗ್ಗಜರ ಗಾಯನಗಳಿಗೆ ಹಾರ್ಮೋನಿಯಂ ಸಹಕಾರ ನೀಡಿ ಸೈ ಎನಿಸಿದವರು. ಹಾರ್ಮೋನಿಯಂ ಮಾತ್ರವಲ್ಲದೆ ಪಿಟೀಲಿನಲ್ಲೂ ಕೈಚಳಕ ತೋರಿಸಿರುವ ಈ ಕಲಾವಿದೆ, ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಗಳಿಸಿದ್ದಾರೆ.

ಜ್ಯೋತ್ಸ್ನಾ ಹೆಬ್ಬಾರ್ ಮೃದಂಗ ವಾದಕಿ

ಜ್ಯೋತ್ಸ್ನಾ ಹೆಬ್ಬಾರ್ ಮೃದಂಗ ವಾದಕಿ

ತಬಲಾ–ಸಾವನಿ ಚಮತ್ಕಾರ

ಧಾ ಧಿನ್‌ ಧಿನ್‌ ಧಾ... ಲಯವಾದ್ಯ ತಬಲಾದಲ್ಲಿ ತೀನ್‌ತಾಲ್‌ನ ಈ ಬೋಲ್‌ ಕೇಳುವುದೆ ಖುಷಿ. ಪುರುಷ ಪ್ರಧಾನವಾದ ತಬಲಾ–ಡಗ್ಗಾಗಳನ್ನು ಮಹಿಳೆಯರು ಕೈಗೆತ್ತಿಕೊಂಡರೆ? ಅದು ತೀನ್‌ತಾಲ್‌ ಆಗಿರಲಿ, ರೂಪಕ್‌, ಏಕ್‌, ದಾದ್ರಾ.. ಯಾವುದೇ ತಾಳಗಳಾಗಿರಲಿ. ತಬಲಾ ಲಯದಲ್ಲಿ ತುಕುಡ, ಮುಕುಡ, ಚಕ್ರಧಾರ, ಠೇಕಾ, ತಿಹಾಯ್‌ ಮಹಿಳೆಯರ ಬೆರಳುಗಳಲ್ಲಿ ಮಾರ್ದನಿಸುತ್ತಿವೆ. ಪುಣೆಯ ಸಾವನಿ ತಲ್ವಾಲ್‌ಕರ್‌ ತಬಲಾ ವಾದನದಲ್ಲಿ ತಮ್ಮ ಪ್ರಬುದ್ಧತೆ ತೋರಿಸುತ್ತಿದ್ದಾರೆ. ಸಂಗೀತಗಾರರ ಮನೆತನದಲ್ಲೇ ಜನಿಸಿದ ಸಾವನಿ ತಂದೆ ಪ್ರಸಿದ್ಧ ತಬಲಾ ವಾದಕ ಸುರೇಶ್‌ ತಲ್ವಾಲ್‌ಕರ್‌ ಮಾರ್ಗದರ್ಶನವಿದೆ. ತಂದೆ, ತಾಯಿ, ಅಣ್ಣನಸಂಗೀತ ಜ್ಞಾನ, ಸಾವನಿ ಅವರನ್ನೂ ಚಿಕ್ಕ ವಯಸ್ಸಿನಲ್ಲೇ ತಬಲಾ ವಾದಕಿಯನ್ನಾಗಿ ರೂಪಿಸುವಲ್ಲಿ ಸಫಲವಾಗಿದೆ. ತಬಲಾದಲ್ಲಿ ಸಾಥಿ, ಸೋಲೊ ಎರಡರಲ್ಲೂ ಸಾವನಿ ಚಾಕಚಕ್ಯತೆ ಅದ್ಭುತ.

‘ಸೊಗಸುಗಾ ಮೃದಂಗ ತಾಳಮು...’

ಮೃದಂಗ ನಾದ ಕರ್ನಾಟಕ ಸಂಗೀತ ಪ್ರಿಯರನ್ನು ಎಂದಿಗೂ ತಟ್ಟುವಂಥದ್ದು. ಲಯ ಮಾಧುರ್ಯದಲ್ಲಿ ಮೃದಂಗ ಹೃದಯಕ್ಕೆ ಸನಿಹವಾದದ್ದು. ಈ ವಾದನದಲ್ಲೂ ಪುರುಷರೇ ಪ್ರಾಬಲ್ಯ ಮೆರೆ ದಿದ್ದರೂ ಮಹಿಳೆಯರು ಸರಿಸಮನಾಗಿ ಮೃದಂಗದಲ್ಲಿ ಕೇಳು ಗರನ್ನು ದಂಗಾಗಿಸುತ್ತಿದ್ದಾರೆ. ಜ್ಯೋತ್ನ್ಸಾ ಹೆಬ್ಬಾರ ನಾಡಿನ ಭರವಸೆಯ ಮೃದಂಗ ವಾದಕಿ. ವಿದ್ವಾನ್‌ ಎಚ್‌.ಎಸ್‌. ಸುಧೀಂದ್ರ ಅವರ ಬಳಿ ಮೃದಂಗ ಅಭ್ಯಾಸ ಮಾಡಿದ ಇವರು ವೀಣಾವಾದನದಲ್ಲೂ ಪಳಗಿದವರು.

ರುಚಿರಾ

ರುಚಿರಾ

ರಾಗ ರುಚಿವರ್ಧನೆಯ ರುಚಿರಾ

ರುಚಿರಾ ಮೂಲತಃ ಪುಣೆಯವರಾದ ಈ ವಿದುಷಿ ಹತ್ತನೇ ವಯಸ್ಸಿಗೇ ತಂದೆ ದಿಲೀಪ ಕಾಳೆ ಅವರಿಂದ ಕಲಿಕೆ ಆರಂಭಿಸಿದರು.  ಪುಣೆಯ ಅಲಕಾದೇವ್ ಮರೂಳ್ಕರ ಅವರಿಂದ ಆಳವಾದ ಸಂಗೀತ ಜ್ಞಾನ ಪಡೆದುಕೊಂಡರು. ಮುಂಚೂಣಿ ಗಾಯಕ ಉಲ್ಲಾಸ ಕಶಾಳ್ಕರ ಅವರಿಂದ ಹೆಚ್ಚಿನ ಮಾರ್ಗದರ್ಶನ ಪಡೆದ ಇವರ ಗಾಯನದಲ್ಲಿ ಮಿಂಚಿನ ಸೆಳೆತವಿದೆ. ಉತ್ತಮ ಮನೋಧರ್ಮ, ಆಕರ್ಷಕ ಕಂಠ, ಸ್ವರವಿಸ್ತಾರದಲ್ಲಿ ನೈಪುಣ್ಯ, ಅದ್ಭುತ ಉಸಿರು ನಿಯಂತ್ರಣ ಸಾಮರ್ಥ್ಯ, ತಾರಕ, ಅತಿತಾರಕ ಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಹೊಮ್ಮುವ ಸ್ವರ, ಆಕಾರಗಳಿಂದ ಸಂಗೀತದಲ್ಲಿ ‘ಗಟ್ಟಿಕುಳ’ವಾಗಿ ರೂಪುಗೊಂಡಿದ್ದಾರೆ.

ಸಾವನಿ

ಸಾವನಿ

‘ವಸುಂಧರಾ’ ಸಂಗೀತ ಹಬ್ಬ

ಸಂಗೀತ ನಾದ ರಸದೌತಣ ಉಣಬಡಿಸಲು ‘ವಸುಂಧರಾ’ ಬೆಂಗಳೂರಿನಲ್ಲಿ ಸಜ್ಜಾಗಿದೆ. ಹಿಂದೂಸ್ತಾನಿ ಸಂಗೀತ ದಿಗ್ಗಜ ಪಂ. ಭೀಮಸೇನ ಜೋಶಿ ನೆನಪಿನ ’ಭೀಮಪಲಾಸ್‌‘ ನ ಮುಂದುವರಿದ ಭಾಗವಾಗಿ ಧಾರವಾಡದ ‘ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್’ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಗಳು ಮಹಿಳಾ ವಿದ್ವನ್ಮಣಿಗಳ ಸಂಗೀತ ಆಯೋಜನೆಗೊಂಡಿದೆ. ಅಕ್ಟೋಬರ್‌ 2ರಂದು ಬೆಂಗಳೂರಿನ ಜಯನಗರದ ಯುವಪಥ ಸಭಾಂಗಣದಲ್ಲಿ ಈ ಸಂಗೀತ ಹಬ್ಬವಿದೆ. ಕರ್ನಾಟಕ– ಹಿಂದೂಸ್ತಾನಿ ಎರಡೂ ಶೈಲಿಯ ಸಂಗೀತವನ್ನು ಒಂದೇ ವೇದಿಕೆಯಲ್ಲಿ ಕೇಳುವ ಸುಯೋಗ ಇಲ್ಲಿ ಒದಗಲಿದೆ. ಸಾಥಿದಾರರಾಗಿಯೂ ಮಹಿಳೆಯರೇ ಮಿಂಚಲಿರುವ ಈ ಹಬ್ಬದ ತಾರೆಯರ ಪರಿಚಯ ಇಲ್ಲಿದೆ.

ಧಾರವಾಡದ ಮನೋಹರ ಗ್ರಂಥ ಮಾಲಾ ಸಂಸ್ಥಾಪಕ ಜಿ.ಬಿ. ಜೋಶಿ ನೆನಪಿನಲ್ಲಿ ಸ್ಥಾಪಿಸಿರುವ ‘ಜಿ.ಬಿ. ಜೋಶಿ ಮೆಮೋರಿಯಲ್‌ ಟ್ರಸ್ಟ್’ ಸಾಹಿತ್ಯದ ಜೊತೆಗೆ ಸಂಗೀತವನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ‘ಇದೀಗ ‘ವಸುಂಧರಾ’ ಸಂಗೀತ ಕಾರ್ಯಕ್ರಮ ಆಯೋಜಿಸಿ ಕೇಳುಗರಿಗೆ ಸಂಗೀತ ರಸದೌತಣ ನೀಡುವುದು ನಮಗೆ ಹೆಮ್ಮೆಯ ವಿಚಾರ’ ಎನ್ನುತ್ತಾರೆ ಟ್ರಸ್ಟ್‌ನ ಮುಖ್ಯಸ್ಥ ಹುಬ್ಬಳ್ಳಿಯ ಸಮೀರ್‌ ಜೋಶಿ.

ಸಹನಾ

ಸಹನಾ

ಬೆರಗಿನ ಗಾನ, ಪೂರ್ಣಿಮಾ ಯಾನ

ರಾಗ ‘ದೇವಗಾಂಧಾರ...‘ ಶುದ್ಧ ಗಾಂಧಾರ, ಕೋಮಲ ಗಾಂಧಾರ ಎರಡೂ ಸ್ವರಗಳನ್ನು ಮಡಿಲಲ್ಲಿ ಇಟ್ಟುಕೊಂಡ ಸುಪ್ರಸಿದ್ಧ ರಾಗವಿದು. ಈ ರಾಗವನ್ನು ವಿದುಷಿ ಪೂರ್ಣಿಮಾ ಭಟ್‌ ಕುಲಕರ್ಣಿ ಅವರ ಕಂಠದಲ್ಲಿ ಕೇಳಲು ಅದೆಷ್ಟು ಸೊಗಸು! ಕಳೆದ ವರ್ಷ ಆಗಸ್ಟ್‌ನಲ್ಲಿ ಪೂರ್ಣಿಮಾ ಭಟ್‌ ಅವರ ಗುರು ಪಂ. ಮುರಳಿ ಮನೋಹರ ಶುಕ್ಲ ಅವರು ನಾದಲೋಕ ತ್ಯಜಿಸಿದಾಗ ಅವರ ಶಿಷ್ಯಂದಿರೆಲ್ಲ ಸೇರಿ ಗುರು ನಮನ ಸಲ್ಲಿಸಿದ್ದರು. ಈ ಕಾರ್ಯಕ್ರಮದಲ್ಲಿ ಪೂರ್ಣಿಮಾ ಅವರ ಹಿಂದೂಸ್ತಾನಿ ಗಾಯನದಲ್ಲಿ ‘ದೇವಗಾಂಧಾರ’ ರಾಗ ಕೇಳುಗರನ್ನು ಮಂತ್ರಮುಗ್ಧಗೊಳಿಸಿತ್ತು. ಇವರ ಗುರುಗಳೇ ರಚಿಸಿದ ಬಂದೀಶ್‌ ಅನ್ನು ಮನದುಂಬಿ ಹಾಡಿದ್ದರು. ಮಧ್ಯಲಯ ರೂಪಕ್‌ ತಾಲ್‌ ಹಾಗೂ ಧೃತ್‌ ಏಕ್‌ತಾಲ್‌ನಲ್ಲಿ ನಾದದ ಹೊನಲನ್ನು ಹರಿಸಿದ್ದು. ಕೇಳುಗರ ಮನಸ್ಸಿನಾಳಕ್ಕೆ ಇಳಿದಿತ್ತು.

ಪೂರ್ಣಿಮಾ ಅವರ ಗಾಯನವೇ ಹಾಗೆ. ಅಲ್ಲಿ ಒಂದು ರೀತಿಯ ‘ಮ್ಯಾಜಿಕಲ್‌ ಸ್ಪಿರಿಟ್‌’ ಇರುತ್ತದೆ. ಮೂಲತಃ ಧಾರವಾಡದವರಾದ ಪೂರ್ಣಿಮಾ ಭಟ್ ನಾಡಿನ ಹೆಸರಾಂತ ಹಿಂದೂಸ್ತಾನಿ ಗಾಯಕಿ. ತಮ್ಮ 12ನೇ ವಯಸ್ಸಿನಲ್ಲಿ ವಿದುಷಿ ಉಷಾ ದಾತಾರ ಅವರಲ್ಲಿ ಪ್ರಾರಂಭಿಕ ಶಿಕ್ಷಣ, ಬಳಿಕ ‘ಸುರ್ ಸಿಂಗಾರ್’ ಸಂಸ್ಥೆಯಲ್ಲಿ ಮುಂದುವರಿಸಿದ್ದೇ ಅವರ ಭಾಗ್ಯದ ಬಾಗಿಲು ತೆರೆಯಿತು, ಪಂ. ಬಸವರಾಜ ರಾಜಗುರು ಅವರ ಬಳಿ ಕಲಿಯುವ ಅವಕಾಶವನ್ನೂ ದಕ್ಕಿಸಿತ್ತು. ಗ್ವಾಲಿಯರ್, ಕಿರಾನಾ, ಜೈಪುರ-ಅತ್ರೌಲಿ ಘರಾಣೆಗಳ ಮಿಶ್ರ ಶೈಲಿಯಲ್ಲಿ ಹಾಡುವ ಈ ಗಾಯಕಿಯ ಮನೋಧರ್ಮ, ಸ್ವರತಾನ್‌, ಆಕಾರ್‌ ತಾನ್‌ಗಳ ಪ್ರಸ್ತುತಿ ಬೆರಗು ಹುಟ್ಟಿಸುವಂತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT