ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡ ಹುಡುಗನ ಗಾನಯಾನ

Last Updated 31 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಹಾಡದೂ ಅಂದ್ರೆ ಪ್ರಾಣ. ಭಜನಿ ಹಾಡ್ಕೊಂತಾ ಬೆಳೆದೆ. ಬ್ಯಾಂಡ್‌ ಕಂಪೆನಿಗಳಲ್ಲಿ ಹಾಡಿದೆ. ಸಿಕ್ಕಿ ಸಿಕ್ಕಿದ ಸಮಾರಂಭದಲ್ಲೂ ಹಾಡಿ, ಹಳ್ಳಿಗಳನ್ನು ತಲುಪಿದೆ. ಈಗ ಇಡೀ ರಾಜ್ಯದ ಜನ ನನ್ನ ಗಾಯನ ಮೆಚ್ಚಿದ್ದಾರ್ರಿ..’

ಕಲರ್ಸ್‌ ಸೂಪರ್‌ ಚಾನಲ್‌ನ ಕನ್ನಡ ಟಿ.ವಿ ರಿಯಾಲಿಟಿ ಷೋ ‘ಕನ್ನಡ ಕೋಗಿಲೆ’ ಗಾಯನ ಸ್ಪರ್ಧೆಯಲ್ಲಿ ಜಯಗಳಿಸಿದ ಗಾಯಕ ದೊಡ್ಡಪ್ಪ ಮಾದಾರ, ದಶಕದ ‘ಗಾನ ಯಾನ’ವನ್ನು ಹೀಗೆ ನೆನಪಿಸಿಕೊಂಡರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಪಟ್ಟಿಹಾಳ ಕೆ.ಬಿ ಗ್ರಾಮದ ದೊಡ್ಡಪ್ಪ, ಕಡು ಬಡತನದ ಕುಟುಂಬದವರು. ಮೂವರು ಅಕ್ಕಂದಿರು ಮತ್ತು ಒಬ್ಬ ತಮ್ಮ. ಮನೆಯಲ್ಲಿ ಇದ್ದದ್ದು ಒಂದೇ ರಗ್ಗು, ಅದನ್ನೆ ಅಡ್ಡದಾಗಿ ಹೊದ್ದುಕೊಂಡು ಮಲಗಿ ದಿನಗಳನ್ನು ಕಳೆದವರು.

ಸಂಗೀತದ ಗಂಧ ಗಾಳಿ ಗೊತ್ತಿಲ್ಲದ ಇವರನ್ನು ಗುರುತಿಸಿ ಪ್ರೋತ್ಸಾಹ ನೀಡಿದ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಶೇಖರ ಭಜಂತ್ರಿ ಸರ್. ಅಂದಿನಿಂದ ಶಾಲೆ, ಸಭೆ ಸಮಾರಂಭ, ಭಜನೆ, ಬ್ಯಾಂಡ್‍ ಕಂಪನಿಗಳಲ್ಲಿ ಹಾಡಲು ಆರಂಭಿಸಿದರು. ಹಾಡುತ್ತಲೇ ಸುತ್ತಲಿನ ಹಳ್ಳಿಗರ ಮನ ತಲುಪಿದರು. ಖೂದಾನಪೂರ ಶಿವಾ ಮ್ಯೂಸಿಕಲ್ ಬ್ಯಾಂಡ್‍ನಲ್ಲಿ ಒಂಬತ್ತು ವರ್ಷ ಹಾಡಿದರು. ಹಾಡಿನಲ್ಲೇ ಜೀವನ ನಡೆಸುವುದು ಕಷ್ಟ ಎನ್ನಿಸಿದಾಗ, ಗೌಂಡಿ ಕೆಲಸಕ್ಕೆ ಸೇರಿದರು.

ಅಂದಾಜಿನ ಮೇಲೆ ಹಾಡುತ್ತಿದ್ದ ದೊಡ್ಡಪ್ಪರಿಗೆ, ಸಂಗೀತ ಕಲಿಯಲು ಬೆಳವಡಿಗೆ ಹೋದರು. ಆದರೆ ಅಲ್ಲಿಯೂ ಸಂಗೀತಾಭ್ಯಾಸ ಅಪೂರ್ಣವಾಯಿತು. ಕಲಿಯಲು ಹೋದವರಿಗೆ ಕಲಿಸುವ ಜವಾಬ್ದಾರಿ ಹೆಗಲೇರಿತು. ಕೊನೆಗೆ ಯೂಟ್ಯೂಬ್ ನೋಡಿಕೊಂಡು ರಾಗದ ಕುರಿತು ನೋಟ್ಸ್ ಮಾಡಿಕೊಂಡು, ಸಂಗೀತ ತರಗತಿ ಆರಂಭಿಸಿದರು. ಕೊನೆಗೇ ಯೂಟ್ಯೂಬ್‌ ಅವರಿಗೆ ಗುರುವಾಯಿತು. ಅದರಿಂದ ಕಲಿತ 19 ರಾಗಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಸದ್ಯ ಆ ವಿದ್ಯಾರ್ಥಿಗಳನ್ನು ಜ್ಯೂನಿಯರ್ ಸಂಗೀತ ಪರೀಕ್ಷೆಗೆ ಕುಳಿತುಕೊಳ್ಳುವ ಹಂತಕ್ಕೆ ತಲುಪಿಸಿದ್ದಾರೆ.

ಗಡಿನಾಡಲ್ಲಿ ಹಾಡುತ್ತಿದ್ದ ದೊಡ್ಡಪ್ಪಗೆ ‘ಕನ್ನಡ ಕೋಗಿಲೆ’ ರಿಯಾಲಿಟಿ ಶೋದ ಆಡಿಷನ್‌ಗೆ ಆಯ್ಕೆಯಾದರು. ಪರಿಶ್ರಮದ ಅಭ್ಯಾಸದಿಂದ ಎಲ್ಲ ಹಂತಗಳಲ್ಲೂ ಯಶಸ್ವಿಯಾದರು. ಗಾಯನದ ಮೂಲಕವೇ ನಾಡಿನ ಜನರ ಮನಗೆದ್ದರು. ಕೊನೆಗೆ ‘ಕನ್ನಡ ಕೋಗಿಲೆ’ಯಾಗಿ ಹೊರ ಹೊಮ್ಮಿದರು.

ಈಗ ದೊಡ್ಡ ಅವರನ್ನು ಅವಕಾಶಗಳು ಹುಡುಕಿ ಬರುತ್ತಿವೆ. ಆದರೂ ಉತ್ತಮ ಸಂಗೀತ ಗುರುವಿನ ಬಳಿ ಶಾಸ್ತ್ರೀಯ ಸಂಗೀತ ಕಲಿತು, ಸಂಗೀತದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕೆಂಬ ಹಂಬಲ ಅವರಲ್ಲಿದೆ. ಮಾತ್ರವಲ್ಲ, ನನ್ನಂತೆ ಸಂಗೀತ ಕಲಿಯಲು ಕಷ್ಟಪಡುತ್ತಿರುವ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕೆಂದು ಈ ಹೊಸ ವರ್ಷಕ್ಕೆ ಸಂಕಲ್ಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT