ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂಗಪ್ಪ ಮುದೇನೂರು ಅವರ ಕವಿತೆ: ಅರಿವಿನ ಹಾಡ ಬಿತ್ತಲು

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

 ನೀನು ಶಿಲುಬೆಗೇರುವ ಮುನ್ನವೇ
 ಪ್ರೀತಿಯೂ ಶಿಲುಬೆಗೇರಿತು
 ಶಾಂತಿಯೂ ಶಿಲುಬೆಗೇರಿತು

 ನೀನು ಹುಟ್ಟುವಾಗ ಹುಟ್ಟಿದ
 ಶಾಂತಿ ಪ್ರೀತಿಯೂ
 ಜೀವಂತ ಶಿಲುಬೆಗೇರುವಾಗಲೇ
 ಮಣ್ಣುಪಾಲಾಯಿತು
 ನಮ್ಮ ಕನಸು ನಿಮ್ಮ ಕನಸು
 ನಮ್ಮೆಲ್ಲರ ಕನಸು
 ಕೊಂದವರ ಕನಸು
 ಮಣ್ಣುಗೂಡಿದವು
 ಅಂದು

 ಬುದ್ಧ ಬಸವ ಗಾಂಧಿ ಅಂಬೇಡ್ಕರ್
 ಸಾಕ್ರೆಟಿಸ್
 ಎಲ್ಲರೂ ಜಗದ ಕುಲುಮೆಯಲ್ಲಿ ಕುದ್ದೇ
 ಬೆಳಕಾದರು
 ಹಸಿರಾದರು ಮತ್ತೆ ಬೇಯಿಸಿದ ಮನಕೇ

 ದನಗಳ ಕೊಟ್ಟಿಗೆಯಲ್ಲೋ
 ಕುರಿದೊಡ್ಡಿಯಲ್ಲೋ ಹುಟ್ಟಿದ ಮಗುವೊಂದು
 ಪ್ರವಾದಿಯಾಗುವುದು, ಸಂತನಾಗುವುದು ಕಡುಕಷ್ಟ
 ಲೋಕದಲ್ಲಿ

 ಕಷ್ಟಗಳನ್ನುಂಡೇ ಎದೆಯೊಡ್ಡಿ ಬೆಳೆಯಬೇಕು ಮರ
 ತಂಪಾಗಬೇಕು
 ಹೂ ಹಣ್ಣು ಬೀಜವಾಗಿ
 ಫಲದ ಗೂಡಾಗಬೇಕು ಮನಕೆ

 ಅವರೆಲ್ಲಾ ಏನಾದರು?
 ವಿಷವನ್ನು ಅಮೃತದಂತೆ, ರಕ್ತವನ್ನು ಹಾಲಿನಂತೆ
 ಹರಿಯಬಿಟ್ಟು ಆ ಹೊಳೆಯಲ್ಲಿಯೇ ಕರಗಿ ನಿಂತರು!
 ‘ನನ್ನ ಶಿಲುಬೆಗೇರಿಸಿದವರ ಕ್ಷಮಿಸು ದೇವರೇ’ಎಂದ ಯೇಸುವೂ ಈಗ ದೇವರಾಗಿ
 ಬಂದು ಜಗದ ಪಾಪಗಳ
 ತೊಳೆಯುತ್ತಿರುವನಂತೆ
 ಎಲ್ಲೆಲ್ಲೂ ಶಾಂತಿ ಪ್ರೀತಿಯ ಹಂಚುತ್ತಿರುವನಂತೆ

 ನಮಗೆ ಯೇಸುವಿನಂತಹ
 ಬುದ್ಧ ಬಸವ ಗಾಂಧಿ ಅಂಬೇಡ್ಕರ್
 ಸಾಕ್ರೆಟಿಸ್‌ರಂತಹ ಮಕ್ಕಳು ಬೇಕು
 ಶಾಂತಿ ಪ್ರೀತಿಯ ಹಂಚಲು
 ಜಾತಿ ಮತ ಧರ್ಮಗಳ ಮೀರಿದ
 ಸಮಸಮಾಜದ ಒಕ್ಕಲಾಗಲು

 ಧೂಳು ಕೊಡವಿ
 ಹೊಸಹೊಸದೆನ್ನುವ
 ದೇಶ ಕೋಶಗಳ ಸುತ್ತಲು
 ಅರಿವಿನ ಹಾಡ ಬಿತ್ತಲು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT