ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಯ್‌ ಕುಮಾರ್‌ ಎಂ.ಜಿ. ಅವರ ಕಥೆ: ಬೋರ

Published 9 ಸೆಪ್ಟೆಂಬರ್ 2023, 23:30 IST
Last Updated 9 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಲೇಖಕರು : ವಿನಯ್ ಕುಮಾರ್ ಎಂ.ಜಿ.

“ಮೈಸೂರ್ನಾಗೆ ದೊಡ್ಡು ವಸ್ತು ಪ್ರದರ್ಸನುವಂತೆ. ದಸರಾ ಟೇಮ್ನಲ್ಲಿ ಶ್ಯಾನೆ ಚಂದಾಗಿರ್ತೈತಂತೆ. ನಮ್ಮ್ಯಾಡಮ್ಮು ಯೋಳ್ತಿದ್ರು ನನ್ನೂ ಕರ್ಕಂಡೋಗವ್ವೋ.... ಅವ್ವೋ.. ಅವ್ವೋ.. ಪ್ಲೀಸವ್ವೋ.. ಪ್ಲೀಸು” ಎಂದು ಮೂರು ದಿನದಿಂದ ಲಕ್ಷ್ಮವ್ವನನ್ನು ಪೀಡಿಸುತಿದ್ದ ಬೋರ. ಇಡೀ ದಿನ ದುಡಿಯುವುದು ಹೊಟ್ಟೆ ಬಟ್ಟೆಗೇ ಸಾಲುವುದಿಲ್ಲ ಇನ್ನು ಜುಟ್ಟಿಗೆ ಮಲ್ಲಿಗೆ ಹೂವಿನಂತಾ ಬೋರನ ಆಸೆಯನ್ನು ಹೇಗೆ ಪೂರೈಸುವುದೆಂದು ಲಕ್ಷ್ಮವ್ವ ಚಿಂತೆಗೆ ಬಿದ್ದಳು. ನಾಲ್ಕನೆಯ ದಿನಕ್ಕೆ “ಅವ್ವೋ ಆ ವಸ್ತು ಪ್ರದರ್ಸನದಲ್ಲಿ ಏನೇನೋ ಸಿಕ್ತೈತಂತವ್ವೋ. ಅವ್ಯಾವ್ನೂ ನಾ ಕೇಳಾಕಿಲ್ಲ. ಆದ್ರೆ ಅಲ್ಲೊಂದು ಮರಿ ಟ್ರೇನೈತಂತವ್ವೋ ಅದ್ರಾಗೆ ಒಂದಪ್ಪ ಕುಂತ್ಕಬುಡ್ತಿನಿ ಅಷ್ಟೇ. ಆಮೇಕೆ ಬಂದ್ಬುಡುಮ್ಮ ಕಣವ್ವೋ. ಅವ್ವೋ..” ಎನ್ನುತ್ತಾ ಪೀಡಿಕೆಯ ಪ್ರಮಾಣವನ್ನು ದ್ವಿಗುಣಗೊಳಿಸಿದ. ಬೋರ ವಸ್ತು ಪ್ರದರ್ಶನ ನೋಡಬೇಕೆಂಬ ತನ್ನ ಆಸೆಗೆ ರೈಲಿನಲ್ಲಿ ಕೂರಬೇಕೆಂಬುದನ್ನೂ ಸೇರಿಸಿದ್ದು “ಇದೊಂದ್ ಬ್ಯಾರೆ ಅಗುತ್ಕತಲ್ಲಪ್ಪ” ಅನಿಸಿತು ಲಕ್ಷ್ಮವ್ವಗೆ. ಆದರೆ ಅವಳಿಗೆ ಬೋರನಲ್ಲದೆ ಯಾರಿದ್ದಾರೆ? ಗಂಡ ಸತ್ತ ಮೇಲೆ ಊರಿನಲ್ಲಿರುವ ಪುಟ್ಟೆಗೌಡರ ಮೋಟು ಗಣಿಯಲ್ಲಿ ಕಲ್ಲು ಹೊಡೆಯುತ್ತಾ ಮಗನನ್ನು ಸಾಕುತ್ತಿರುವವಳು ಅವಳು. ಬೋರನೇ ಅವಳ ಜಗತ್ತು, ಸರ್ವಸ್ವ. ಅವನಿಗಾಗಿ ಸಾಲ ಮಾಡಿದರೂ ಚಿಂತೆಯಿಲ್ಲ. ವಸ್ತು ಪ್ರದರ್ಶನಕ್ಕೆ ದುಡ್ಡು ಹೊಂದಿಸುವುದೆಂದು ತೀರ್ಮಾನಿಸಿಯೇ ಮನೆಯಿಂದ ಹೊರಬಿದ್ದಳು. ಸಂಜೆ ಕೆಲಸ ಮುಗಿಸಿ ಪುಟ್ಟೇಗೌಡನ ಬಳಿ ಕಾಸಿಗೆ ನಿಂತಳು. ಕಾನೂನು ಉಲ್ಲಂಘಿಸಿ ನಾಲ್ಕು ಹೆಕ್ಟೇರು ಹೆಚ್ಚು ಜಾಗದಲ್ಲಿ ಕಲ್ಲು ಒಡೆಸಿದರೂ ಕೆಲಸಗಾರರ ಹೊಟ್ಟೆಯ ಮೇಲೆ ಹೊಡೆವ ಆಳಲ್ಲ ಅವನು. ಲಕ್ಷ್ಮವ್ವ ಹಣ ಕೇಳುತ್ತಲೂ ಕಾರಣ ಕೇಳಿ ನಗುತ್ತಲೇ ಅವಳ ಪಾಲಿನ ಇನ್ನೂರು ರೂಪಾಯಿಯ ಜತೆ ತನ್ನ ಐವತ್ತೂ ಸೇರಿಸಿ ಇನ್ನೂರೈವತ್ತು ತೆಗೆದುಕೊಟ್ಟ. ಲಕ್ಷ್ಮವ್ವ ಶಾನೆ ಖುಷಿಯಾಗಿ ಹಣವನ್ನು ಸೆರಗಲ್ಲಿ ಗಂಟು ಕಟ್ಟಿ ಒಂದೇ ಉಸಿರಿಗೆ ಮನೆ ತಲುಪಿಕೊಂಡಳು.

ಕಾಲು ತೊಳೆದು ಅಡುಗೆ ಮನೆಯೊಳಕ್ಕೆ ಬಂದಾಗ ಒಲೆಗೆ ಒಂದಿಷ್ಟು ಸೌದೆ ಒಟ್ಟು ಮಾಡಿ ಬೋರ ಹಲಸಿನ ಬೀಜ ಸುಡುತ್ತಿರುವುದು ಕಂಡಿತು. ನಿಧಾನಕ್ಕೆ ಅವನ ಬಳಿಸಾರಿ ಕೂತಳು. ಅಮ್ಮನತ್ತ ತಿರುಗಿ ಒಂದು ನಗುವೆಸೆದು ಮತ್ತೆ ಬೀಜ ಸುಡುತ್ತಾ, ಸಿಪ್ಪೆ ಸುಲಿಯುತ್ತಾ ಕೂತ. ವಸ್ತು ಪ್ರದರ್ಶನದ ಆಸೆಯನ್ನು ಬೋರನೇ ತೆಗೆದು ಮತ್ತೆ ತನ್ನನ್ನು ಪೀಡಿಸುವ ಖುಷಿ ಅನುಭವಿಸುವ, ಮಗನನ್ನು ಸತಾಯಿಸುವ ಅವಳ ಆಸೆ ಯಶಸ್ವಿಯಾಗಿ ಈಡೇರಲಿಲ್ಲ. ಮಗನ ಮುಖದಲ್ಲಿದ್ದ ಪ್ಲಾಸ್ಟಿಕ್ ಹೂವಿನ ನಗೆಯನ್ನು ಗುರ್ತಿಸಿ “ಯಾಕೆ ಏನಾಯ್ತು?” ಎಂದು ಎರಡೆರಡು ಬಾರಿ ವಿಚಾರಿಸಿದರೂ ಬೋರ ಮಾತಾಡಲಿಲ್ಲ. ನಿಧಾನಕ್ಕೆ ತಡೆದು ಸಾವರಿಸಿ “ಆ ಮ್ಯಾಗಣ ಮನೆ ಪಿಂಟುನುವೇ, ಗೌಡ್ರು ಮನೆ ಕವಿತಾನುವೇ ವಸ್ತು ಪ್ರದರ್ಸನಕ್ಕೋಗಿದ್ರಂತೆ. ಅವ್ಳು ಅಲ್ಲಿಂದ ಗಿರಗಿಟ್ಲೆ ತಗಬಂದು ಇಸ್ಕೂಲಲ್ಲೆಲ್ಲಾ ಓಡಾಡುಸ್ತಿದ್ಲು. ಅವ ಐಕ್ಳನ್ನೆಲ್ಲಾ ಗುಡ್ಡುದಲ್ಲಿ ಕುಂಡುಸ್ಕಂಡು ಸ್ವಾಪ್ ನೊರೆ ಗುಳ್ಳೆ ಬುಡ್ತಾ ಪೀಪಿ ಊದ್ತಿದ್ದ. “ನೀನ್ ಈ ಜಲ್ಮುದಲ್ಲಿ ಎಜ್ಜಿಮಿಷನ್ ಓಗಾದಿಲ್ಲ ಕಣ್ಲಾ” ಅಂತ ನನ್ನೋಡಿ ಆಡ್ಕ ನಗ್ತಿದ್ರು ಕವ್ವೋ” ಎಂದು ಹೇಳಿ ದಡಕ್ಕನೆ ಮೇಲಕ್ಕೆದ್ದು “ನಾನು ಒಲುದ್ತಕ್ಕ್ ಓಗಿ ಆಟ ಆಡ್ಕಂಡ್ ಬತ್ತೀನಿ” ಎನ್ನುತ್ತಾ ಬಾಗಿಲು ದಾಟಿದ. ಅವನನ್ನೇ ನೋಡುತ್ತಿದ್ದ ಲಕ್ಷ್ಮವ್ವ “ನಾಳೇದು ಸೇರ್ಸಿ ಇವತ್ತೇ ಆಡ್ಕಂಬುಡು. ನಾಳೆ ವಸ್ತುಪ್ರದಸ್ರ್ನಕ್ಕೋಯ್ತಿವಲ್ಲ ಆಟ ಆಡಕ್ಕಾಗಕಿಲ್ಲ” ಅಂದಳು. ಕ್ಷಣ ಅವಕ್ಕಾಗಿ ನಿಂತ ಬೋರ ತನ್ನ ಕಿವಿ ತಾನೇ ನಂಬುವುದಕ್ಕಾಗದೆ ಒಂದೇ ನೆಗೆತಕ್ಕೆ ಓಡಿಬಂದು ಅವ್ವನನ್ನು ತಬ್ಬಿಹಿಡಿದ. ಖುಷಿಯಾದ ಲಕ್ಷ್ಮವ್ವ ಸುಟ್ಟ ಹಲಸಿನ ಬೀಜವನ್ನು ಅವನ ಬಾಯಿಗೆ ಹಾಕಿದಳು.

ಸರ್ಕಾರ ಕಟ್ಟಿಸಿದ ಪ್ರಯಾಣಿಕರ ತಂಗುದಾಣದಲ್ಲಿ ರಾಚಪ್ಪನ ಎತ್ತುಗಳು ಹುಲ್ಲು ಮೇಯುತ್ತಾ ಕೂತಿದ್ದವು. ಅದರ ಕಟ್ಟೆಯ ಮೇಲೆ ಬಸಪ್ಪನ ಜತೆ ಸರ್ಕಾರದ ಹಗರಣಗಳ ಹರಟೆ ಕೊಚ್ಚುತ್ತಾ, ಬೀಡಿ ಸೇದುತ್ತಾ ಕೂತ ರಾಚಪ್ಪ ಲಕ್ಷ್ಮವ್ವನನ್ನು ನೋಡಿದ್ದೇ ತುಟಿಗೆ ಬೀಡಿ ಸುಟ್ಟುಕೊಂಡ. ಅವಳು ಆ ಸೀರೆ ಉಟ್ಟರೆ ಊರಿನಲ್ಲಿ ಏನಾದರೂ ವಿಶೇಷವಿದೆಯೆಂದೇ ಅರ್ಥ. “ಇವತ್ಯಾರ ಮನೇಲಿ ಇಸೇಸನಪ್ಪಾ?” ಎಂದು ರಾಚಪ್ಪ ಬಸಪ್ಪನನ್ನು ವಿಚಾರಿಸಿದ. ಆ ಪ್ರಶ್ನೆಗೆ ರಾಚಪ್ಪನಷ್ಟೇ ಹೊಸಬನಾದ ಬಸಪ್ಪ “ನಾ ಕಾಣಿ ಕಪ್ಪ. ಇರು ಅವುಗೊಳ್ನೆ ಕೇಳುಮ್ಮ” ಎನ್ನುತ್ತಾ “ಇದೇನ್ರುಲಾ.. ಅವ್ನು ಮಗ್ನುವೆ ಈ ಪಾಟಿ ಸ್ರುಂಗಾರ ಮಾಡ್ಕಂಡು ಎಲ್ಲುಗ್ರುಲಾ ಒಂಟ್ರಿ?” ಎಂದ. ಆ ಚಟಾಕಿಗಳಿಂದ ವರ್ಷಗಟ್ಟಲೆ ಬೇಸತ್ತಿದ್ದ ಲಕ್ಷ್ಮವ್ವ ಏನೂ ಉತ್ತರಿಸದೆ ಸುಮ್ಮನಿದ್ದಳು. ಆ ಸಮಯಕ್ಕೆ ಬೋರನಿಗೆ ಎತ್ತಲಿಂದಲೋ ಸೋಪು ನೊರೆ ಹಾರಿಬಿಡುತ್ತಾ ಅತ್ತ ನಡೆದು ಬರುತ್ತಿರುವ ಪಿಂಟು ಕಾಣಿಸಿದ. ಅವನಿಗೆ ಕೇಳಿಸಲೆಂಬ ಉದ್ದೇಶದಲ್ಲಿ “ವಸ್ತುಪ್ರದಸ್ರ್ನಕ್ಕೋಯ್ತಾ ಇವಿ ಮೈಸೂರ್ಗೆ. ಎಜ್ಜಿಮಿಸನ್..” ಎಂದು ಜೋರು ದನಿಯಲ್ಲಿ ಕೂಗಿದ ಬೋರ. ಅದನ್ನು ಕೇಳಿದ್ದೇ ಪಿಂಟು, ಬಿಸಿ ಬಿಸಿ ಸುದ್ದಿಯನ್ನು ಹರಡಲು ಒಂದೇ ಸಮನೆ ಶಾಲೆಯತ್ತ ಓಡತೊಡಗಿದ. ಬಸಪ್ಪ-ರಾಚಪ್ಪ ಇಬ್ಬರೂ “ಸರಿ.. ಸರಿ..” ಎನ್ನುತ್ತಾ ಬೊಚ್ಚು ಬಾಯಿ ಅಗಲಿಸಿ ನಕ್ಕರು.

ಸರ್ಕಾರಿ ಬಸ್ಸಿಗಾಗುವ ತಲೆಮೇಲಿನ ಹಣ ಕೊಡಲಾಗದೆ ಖಾಸಗಿ ಬಸ್ಸೊಂದನ್ನು ಹಿಡಿದು ಇಬ್ಬರೂ ಮೈಸೂರು ತಲುಪಿಕೊಂಡರು. ದಾರಿಯುದ್ದಕ್ಕೂ ಖರ್ಚಿಗೆ ಸಾಕಷ್ಟು ಕಾಸಿಲ್ಲವೆನ್ನುವುದನ್ನು ಪರಿಪರಿಯಾಗಿ ಮಗನಿಗೆ ವಿವರಿಸಿದಳು ಲಕ್ಷ್ಮವ್ವ. ಕಾಸು ಉಳಿಸಿ ಕೊನೆಗೆ ಅವನಿಗೆ ಸಾಕಷ್ಟು ಸೋಪು ನೊರೆ ಡಬ್ಬಿ, ಬಿಸ್ಕತ್ತುಗಳನ್ನು ಕೊಡಿಸುವ ಯೋಚನೆ ತಲೆಯಲ್ಲಿತ್ತಾದರೂ ಅದನ್ನು ಅವಳು ತೋರಗೊಡಲಿಲ್ಲ. ಅವಳ ಎಲ್ಲ ಮಾತಿಗೂ ಮೌನ ಸಮ್ಮತಿ ಸೂಚಿಸಿದ ಬೋರ ಪ್ರೌಢ ವ್ಯಕ್ತಿಯಂತೆ ಅವಳಿಗೆ ಕಂಡ. ಬಸ್ಸು ನಿಂತಲ್ಲಿಂದ ಒಂದು ಫರ್ಲಾಂಗು ನಡೆಯುವುದರೊಳಗೆ ವಸ್ತು ಪ್ರದರ್ಶನ ಸಿಕ್ಕಿತು. ಜಾತ್ರೆಯ ಸಮಯದಲ್ಲಿ ಸಿಂಗದಳ್ಳಿಗೆ ಬರುತ್ತಿದ್ದ ಮೂರ್ನಾಲ್ಕು ಆಟಿಕೆಗಳೇ ಜಗತ್ತಿನ ವಿಸ್ಮಯಗಳೆಂದು ನಂಬಿದ್ದ ಲಕ್ಷ್ಮವ್ವಳಿಗೆ ಕನಸಿನ ಊರೇನೋ ಎನಿಸುವಷ್ಟು ದೊಡ್ಡದಾದ ಆ ಜಾಗ ನೋಡಿ ಗಾಬರಿಯಾಯ್ತು. ಒಮ್ಮೆಗೇ ವಾಪಸ್ಸು ಓಡಿಬಿಡೋಣವೆಂದು ಯೋಚಿಸಿದ ಅವಳ ಕೈಯ್ಯನ್ನು ಹಿಡಿದು ಮುಂದಕ್ಕೋಡಿದ ಬೋರ.

ಅರಮನೆಯಂತಹ ದೊಡ್ಡ ಬಾಗಿಲು. ರಾಜರ ಕತೆಯ ಸಿನಿಮಾಗಳಲ್ಲಷ್ಟೇ ಕಾಣಿಸುತ್ತಿದ್ದ ಸಾರೋಟುಗಳು ಜೀವಂತವಾಗಿ ನಿಂತಿವೆ; ಬಣ್ಣ ಬಣ್ಣದ ಬಿತ್ತಿಯ ಚೌಕಟ್ಟುಗಳು, ಅಂಗಡಿ ಮುಂಗಟ್ಟುಗಳು; ಒಳಗೆಲ್ಲಾ ಗೌಜು ಗದ್ದಲ. ಎಲ್ಲಿ ನೋಡಿದರೂ ಜನ ಪಿತ ಪಿತ ಎನ್ನುತಿದ್ದರು. ಅವರೆಲ್ಲರನ್ನೂ ಕುತೂಹಲದಿಂದ ನೋಡಿ ತಮ್ಮಿಬ್ಬರನ್ನು ನೋಡಿಕೊಂಡಳು ಲಕ್ಷ್ಮವ್ವ. ತಾವು ಪಕ್ಕದ, ಬಡ ಜಗತ್ತಿನಿಂದ ಹಾರಿಬಂದಂತೆ ಅವಳಿಗೆ ಅನಿಸಿತು. ಎಲ್ಲವನ್ನೂ ಎದಿರಾಗುತ್ತಾ ಹೊರಟ ಅವಳಿಗೆ ನೈಸರ್ಗಿಕ ಅಂದ ಮರೆಮಾಚುವಂತಹ ಮೇಕಪ್ ಬಳಿದುಕೊಂಡು ಸಾಲು ಅಂಗಡಿಗಳಲ್ಲಿ ಏನೇನೋ ಕೊಳ್ಳುತ್ತಿದ್ದ ವಿಲಾಸಿ ಹೆಂಗಸರು ತನ್ನಂತೆ ಹೆಣ್ಣು ಜಾತಿಯವರೇನಾ? ಎನ್ನುವ ಸಂಶಯ ಬಂತು. ತರಹೇವಾರಿ ತಿಂಡಿ ಮುಕ್ಕುತ್ತಾ ಫಳ ಫಳ ಹೊಳೆಯುತ್ತಾ ಟಸ್ಸು ಪುಸ್ಸು ಮಾತಾಡುತ್ತಾ ಹಾಲು ಬೆಳ್ಳಗೆ ಹೊಳೆಯುತ್ತಿದ್ದ ಮಕ್ಕಳನ್ನು ಕಂಡಾಗ ನೀಲಿ ಚಡ್ಡಿಯ ಬೋರ ಅವರ ಸಮಾನ ಎನ್ನುವುದನ್ನು ತನ್ನಲ್ಲೇ ನಿರಾಕರಿಸಿದಳು. ಒಂದೊಂದು ಅಂಗಡಿಗಳನ್ನು ದಾಟುವಾಗಲೂ ಅಲ್ಲಿ ಸಿಗುವ ವಸ್ತುಗಳನ್ನು ಬೋರನಿಗೆ ಕೊಡಿಸಿದರೆ ಎಷ್ಟು ಚೆಂದ ಎನಿಸಿತು. ಆದರೆ ಬೋರನಿಗೆ ಇದ್ಯಾವುದರ ಪರಿವೆಯೇ ಇರಲಿಲ್ಲ. ಅವನ ಕಣ್ಣುಗಳು ಪುಟ್ಟ ರೈಲಿನ ತಾಣವನ್ನಷ್ಟೆ ಅರಸುತ್ತಿದ್ದವು. ಹಿಡಿದ ಕೈಯ್ಯನ್ನು ಮತ್ತಷ್ಟು ಬಿಗಿಗೊಳಿಸಿ ದುರ ದುರ ನಡೆಯತೊಡಗಿದ. ಅಂಗಡಿ ಸಾಲಿನ ಕೊನೆಯಲ್ಲಿ ಮ್ಯಾಜಿಕ್ ತಾತನ ಟೆಂಟಿನಾಚೆ ಎರಡು ಮೂರು ಕಡೆ ಸಾಧಾರಣ ಗುಂಪು ನೆರೆದಿತ್ತು. ಗುಂಪಿನ ಪಕ್ಕಕ್ಕಾದಂತೆ ರೈಲು ಟಿಕೆಟ್ ಕೊಳ್ಳಲು ನಿಂತ ಸಾಲು ಕಾಣಿಸಿತು. ಎಡಕ್ಕೆ ರೈಲ್ವೆ ಹಳಿ; ರೈಲು ಬರುವ ಸುಳಿವು ಇಲ್ಲದ್ದರಿಂದ ಬೋರನೂ ಅಮ್ಮನೊಡನೆ ಟಿಕೇಟ್ ನೀಡುವ ಸಾಲು ಸೇರಿಕೊಂಡ.

ಇಳೆಯರಾಜನ ಹಳೆಯ ಹಾಡಿನ ವಯಲಿನ್ ಸದ್ದು ಸೂಸುತ್ತಿದ್ದ ರೇಡಿಯೋ ಮುಂದಕ್ಕಾದಂತೆ ಒಂದು ಪುಟ್ಟ ಬೆಂಚು; ನೋಡಿದೊಡನೆ ಬ್ರಿಟೀಷರ ಕಾಲದ್ದೆಂದು ಯಾರೂ ಬೇಕಾದರೂ ಹೇಳಿಬಿಡಬಹುದಿದ್ದ ಅದರ ಮೇಲೆ ಹರಡಿಕೊಂಡ ಕಾರ್ಡ್‍ಬೋರ್ಡಿನಿಂದ ತಯಾರಿಸಿದ ಟಿಕೇಟುಗಳನ್ನು ಎಣಿಸುತ್ತಾ, ಕಾಸು ಪಡೆಯುತ್ತಿದ್ದ ಟಕೇಟ್ ನೀಡುಗ ಪುಟ್ಟ ಬೋರನಿಗೆ ಸ್ಪಷ್ಟವಾಗಿ ಕಾಣಿಸಲು ಸರತಿಯಲ್ಲಿ ನಿಂತ ಒಂದಿಬ್ಬರು ದಾಟುವುದು ಅನಿವಾರ್ಯವಾಗಿತ್ತು. ಆ ಹೊತ್ತಿಗೆ ಕೌಂಟರಿನ ಬಳಿ ನಿಂತಿದ್ದ ಕಾಲಿಲ್ಲದ ವ್ಯಕ್ತಿ ಟಕೇಟು ಖರೀದಿಸಿ ಕೋಲುಗಳ ಸಹಾಯದಿಂದ ಹಿಂದಕ್ಕೆ ಬರುವಾಗ ಕೈಯ್ಯಲ್ಲಿ ಹಿಡಿದುಕೊಂಡ ಟಿಕೇಟನ್ನು ಬೀಳಿಸಿಕೊಂಡ. ತಕ್ಷಣವೇ ಅದನ್ನು ಎತ್ತಿ ಆ ವ್ಯಕ್ತಿಯ ಕೈಗಿತ್ತ ಬೋರ. ನಗುತ್ತಲೇ ಆತ ಕೋಲುಗಳನ್ನು ಮುನ್ನಡೆಸಿದ. ಸರತಿಯಲ್ಲಿದ್ದ ಏಳೆಂಟು ಜನ ಟಿಕೇಟು ಕೊಂಡಾದ ಮೇಲೆ ಲಕ್ಷ್ಮವ್ವ ಮತು ಬೋರನ ಸರದಿ ಬಂತು. ಕೌಂಟರ್ ಸಂದಿಯಿಂದ “ಎಷ್ಟು?” ಎಂದ ಟಕೇಟ್ ನೀಡುಗನನ್ನು ದಿಟ್ಟಿಸಿದ ಬೋರ. ಮಧ್ಯೆ ತಲೆ ತೂರಿಸಿದ ಲಕ್ಷ್ಮವ್ವ “ಎಷ್ಟಪ್ಪ?” ಎಂಬ ಮರು ಪ್ರಶ್ನೆ ಹಾಕಿದಳು. ಸ್ವಲ್ಪ ಕಸಿವಿಸಿಗೊಂಡು “ದೊಡ್ಡವರಿಗೆ ಇಪ್ಪತ್ತು ರೂಪಾಯಿ, ಚಿಕ್ಕವರಿಗೆ ಹತ್ತು ರೂಪಾಯಿ. ಎಷ್ಟು ಕೊಡಲಿ?” ಎಂದ ಟಿಕೇಟ್ ನೀಡುಗ. ಕ್ಷಣ ಯೋಚಿಸಿದ ಲಕ್ಷ್ಮವ್ವ “ಒಂದು ಚಿಕ್ಕ ಮಗಿಂದು ಕೊಡಪ್ಪ” ಎಂದಳು. ಆ ಸಂಭಾಷಣೆಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ ಬೋರ “ಯಾಕವ್ವಾ ನಂಗ್ ಮಾತ್ರ? ನೀನೂ ತಕಾ ಒಟ್ಟಿಗೆ ಹೋಗುಮ್ಮ” ಎಂದ. ಲಕ್ಷ್ಮವ್ವನಿಗೆ ಮಗನ ಮೇಲೆ ಪ್ರೀತಿ ಉಕ್ಕಿ ಬಂತು. ತಬ್ಬಿ, “ನಾನ್ ಬೇಡ ಕಣ್ ಮಗ ನೀನೋಗ್ಬುಟ್ಟು ಬಾ. ನಾನು ನಿನ್ನ ನಿಂತ್ಕಂಡು ನೋಡ್ತೀನಿ” ಎಂದು ಹೇಳಿ “ಎಷ್ಟು ರೌಂಡು ಓಡುಸ್ತೀರಪ್ಪ?” ಎಂದು ಮತ್ತೊಮ್ಮೆ ಟಿಕೇಟ್ ನೀಡುಗನಿಗೆ ಪ್ರಶ್ನಿಸಿದಳು. ಅಮ್ಮ-ಮಗನ ಪ್ರೀತಿ ಕಂಡು ಖುಷಿಗೊಂಡ ಟಿಕೇಟ್ ನೀಡುಗ ಬೇಸರಿಸಿಕೊಳ್ಳದೆ “ಹದಿನೈದು ರೌಂಡು ಓಡಿಸ್ತೀವಿ” ಎಂದು ಉತ್ತರ ಕೊಟ್ಟ. ಹತ್ತು ರೂಪಾಯಿ ನೀಡಿ ಮಗನನ್ನು ಕರಕೊಂಡು ಪಕ್ಕಕ್ಕೆ ನಿಲ್ಲಲು ಹೊರಡುವಷ್ಟರಲ್ಲಿ ಕೊಸರಿಕೊಂಡು ಹಳಿಯ ಬಳಿಗೆ ಓಡಿದ ಬೋರ ಅಲ್ಲಿಯೇ ದೃಷ್ಟಿ ನೆಟ್ಟು ನಿಂತು ಶೆಡ್ಡಿನೊಳಗೆ ಇರುವ ರೈಲು ಎಷ್ಟು ದೊಡ್ಡದಿರಬಹುದೆಂದು ಊಹೆ ಮಾಡತೊಡಗಿದ. ಸ್ವಲ್ಪ ಪಕ್ಕಕ್ಕೆ ಬಂದ ಲಕ್ಷ್ಮವ್ವ ಆ ಸುತ್ತಲ ವಾತಾವರಣವನ್ನು ನೋಡುತ್ತಾ ನಿಂತಳು.

ಖುಷಿಯಲ್ಲಿ ಹರಟೆ ಕೊಚ್ಚುತ್ತಿದ್ದ ಪರಿವಾರದೆಡೆಗೆ ನಡೆದುಬಂದ ದಢೂತಿ ಹುಡುಗನೊಬ್ಬ ಕೈಯ್ಯಲ್ಲಿ ಎರಡು ಪೊಟ್ಟಣ ಪಾಪ್‍ಕಾರ್ನ್ ಹಿಡಿದುಕೊಂಡಿದ್ದ. ಅವನನ್ನು ರೇಗಿಸಲೆಂದೇ ಯಾರೋ ಪೊಟ್ಟಣದೊಳಕ್ಕೆ ಕೈಹಾಕಿ ಪಾಪ್‍ಕಾರ್ನ್ ತೆಗೆಯುವ ನಾಟಕ ಮಾಡಿದರು. ಅದು ತನ್ನದೆಂದು ಯಾರೂ ಮುಟ್ಟಬಾರದೆಂದು ಅವನು ಮಾಡುತ್ತಿದ್ದ ರಂಪ ಸುತ್ತಲಿದ್ದವರು ನಗುತ್ತಾ ಅವನನ್ನು ಸಮಾಧಾನಪಡಿಸಲೆತ್ನಿಸುತ್ತಿದ್ದುದನ್ನೂ ದಾಟಿ ಎಲ್ಲರಿಗೂ ಪ್ರದರ್ಶಿತವಾಯಿತು. ರೈಲಿಗಾಗಿ ಟಿಕೆಟ್ ಪಡೆದು ಕಾಯುತ್ತಿದ್ದವರೆಲ್ಲಾ ತರ ತರ ತಿಂಡಿ ತಿನ್ನುತ್ತಿರುವುದನ್ನು ಕಂಡ ಲಕ್ಷ್ಮವ್ವ ಬೋರನನ್ನು ಹತ್ತಿರ ಕರೆದು ತಾನು ಮನೆಯಿಂದ ಹುರಿದು ತಂದಿದ್ದ ಅವಲಕ್ಕಿ ಕೊಟ್ಟಳು. ವಾಪಸ್ಸು ಹೋಗುವಾಗ ಉಳಿಯುವ ಹಣದಲ್ಲಿ ಸೋಪು ಪೊಟ್ಟಣಗಳ ಜತೆಯಲ್ಲಿ ಅಂತಹ ತಿಂಡಿಗಳನ್ನು ಬೋರನಿಗೂ ಕೊಡಿಸಬೇಕೆಂದು ಮನದಲ್ಲೇ ಅಂದುಕೊಂಡಳು. ಬೋರ ರೈಲು ಇದೀಗ ಬಂದುಬಿಡಬಹುದೆನ್ನುವ ಆತುರದಲ್ಲಿ ಅವಲಕ್ಕಿಯನ್ನು ಗಬ ಗಬ ತಿನ್ನುತ್ತಿದ್ದ.
ಅವನು ಎರಡು ತುತ್ತು ತಿನ್ನುವುದರೊಳಗೆ ರೈಲಿನ ಸೈರನ್ ಸದ್ದು ಬೋರನ ಕಿವಿಗಳಿಗೆ ಆಕಾಶ ಭೂಮಿ ಒಂದು ಮಾಡುವಂತೆ ಕೇಳಿತು. ಸದ್ದು ಕೇಳುತ್ತಲೂ ಉಸಿರೂ ಬಿಡದೆ ಅಲ್ಲಿಂದಲೇ ರೈಲಿನತ್ತ ಎಗರಿ ಓಡತೊಡಗಿದ ಬೋರ. ಅವನಂತೆಯೇ ಉಳಿದ ಮಕ್ಕಳ ಚಟುವಟಿಕೆಗಳೂ ಅಸ್ತವ್ಯಸ್ತವಾದವು. ವಾಚಿನಂತೆ ಸುತ್ತುತ್ತಿದ್ದ ಬೊಂಬಾಯಿ ಮಿಠಾಯಿಗೆ ಕೈಯೇ ಸಿಗಲಿಲ್ಲ. ಮೂರು ಮರಿ ಗೆಳತಿಯರನ್ನು ಕುಳ್ಳಿರಿಸಿ ಸುತ್ತುತ್ತಿದ್ದ ಚೇರು ಗೊಂಚಲು ಹಠಾತ್ತನೆ ಬರಿದಾಯಿತು. ಮರಳಿನ ಮೇಲೆ ಓಡುತ್ತಿದ್ದ ಇಟ್ಟಿಗೆಯ ಲಾರಿಯ ಡ್ರೈವರ್ ಪರಾರಿ ಕಿತ್ತಿದ್ದ. ಬೋರನ ಜಿಗಿತಕ್ಕೆ ರೈಲಿಗೇ ಗಾಬರಿಯಾಗಿರಬೇಕು! ಕಣ್‍ಮಿಟಿಕೆಯಲ್ಲಿ ಅವನು ಡ್ರೈವರಿನ ಪಕ್ಕದ ಸೀಟು ಹಿಡಿದಾಗಿತ್ತು. ಅವನ ಮೋಟು ಸಾಹಸ ಅಲ್ಲಿದ್ದವರಲ್ಲಿ ನಗು ಉಕ್ಕಿಸಿತು. ಲಕ್ಷ್ಮವ್ವ ಎಷ್ಟೋ ದಿನದ ಮೇಲೆ ಮನಸ್ಫೂರ್ತಿಯಾಗಿ ನಕ್ಕು ಉಳಿದ ಅವಲಕ್ಕಿಯನ್ನು ಗಂಟು ಕಟ್ಟುತ್ತಾ ಬೋರನ ಅಪ್ಪನೂ ಊರಿನ ಖಾಸಗಿ ಬಸ್ಸು ಬಿಡುತ್ತಿದ್ದವನು ಹೃದಯಾಘಾತವಾಗಿ ರಸ್ತೆ ನಡುವಲ್ಲೇ ತೀರಿಕೊಂಡಿದ್ದನ್ನು ನೆನೆಯುತ್ತಾ ಕಣ್‍ಗಡಿ ದಾಟುತ್ತಿದ್ದ ಹನಿಯನ್ನು ಒತ್ತಾಯಪೂರ್ವಕ ತಡೆದಳು.

ಹತ್ತಾರು ಮಕ್ಕಳು ರೈಲಿನ ಇತರ ಭೋಗಿಗಳಲ್ಲಿ ಕುಳಿತುಕೊಂಡರು. ದಢೂತಿ ಹುಡುಗನದು ಬೋರನ ಡ್ರೈವಿಂಗ್ ಕ್ಯಾಬಿನ್ ಹಿಂದಿನದೇ ಭೋಗಿ. ಕೈಚಾಚಿದರೆ ಅವನು ಸುಲಭದಲ್ಲಿ ಸಿಗುತ್ತಿದ್ದ. ಛೇಡಿಸಲು ಪೊಟ್ಟಣದೆಡೆಗೆ ಕೈಚಾಚುತ್ತಲೂ ಟಪ್ಪನೆ ಅವನು ಆಚೆಗೆ ಕೈ ಎಳೆದುಕೊಂಡ. ಮತ್ತೆ ಎಲ್ಲರೂ ನಕ್ಕರು. ಮಕ್ಕಳೆಲ್ಲಾ ರೈಲು ಹತ್ತುವ ಸಂಭ್ರಮಕ್ಕೆ ಸಾಕ್ಷಿಯಾದ ಹಿರಿಯರೆಲ್ಲರೂ ಒಂದು ಕ್ಷಣ ಮಗುವಾದರು. ನಿತ್ಯವೂ ಇಂತಹ ಖುಷಿಯನ್ನು ಮನಸಾರೆ ಸವಿಯುತ್ತಿದ್ದ ಗಡ್ಡದಾರಿ ಸಿಗ್ನಲ್ ಆಪರೇಟರ್ ನಗುತ್ತಲೇ ಹಸಿರು ಸಿಗ್ನಲ್ ಒತ್ತಿದ. ಡ್ರೈವರ್ ಒತ್ತಿದ ಆಕ್ಸಿಲೇಟರ್ ಮಕ್ಕಳ ಖುಷಿಯ ಆಕ್ಸಿಲೇಟರ್ ಕೂಡಾ ಆಯಿತು. ರೈಲಿನ ವ್ಹಿಸಿಲ್ ಸದ್ದಿಗೆ ಮಕ್ಕಳು ಕೋರಸ್‍ನಂತೆ ಕಿರುಚಿದರು. ಎಲ್ಲರನ್ನೊಮ್ಮೆ ಹಿಂತಿರುಗಿ ನೋಡುತ್ತಾ ಎಲ್ಲರಗಿಂತ ಜೋರಾಗಿ ಕಿರುಚಲು ಬೋರನಿಗೆ ಕಾರಣವಿತ್ತು. ಎಲ್ಲರಿಗಿಂತ ಮುಂದಾಗಿ ಡ್ರೈವರ್ ಪಕ್ಕದಲ್ಲಿರುವ ಅವನೇ ಮಕ್ಕಳ ಮಟ್ಟಿಗೆ ನಾಯಕ.

ಖುಷಿಯ ರೈಲು ಪುಟ್ಟ ಜೀವಗಳನ್ನೆತ್ತಿಕೊಂಡು ಮುದ್ದಾಗಿ ಚಲಿಸತೊಡಗಿತು.
ರೈಲಿನ ಚಕ್ರಗಳ ಪ್ರತಿ ಸುತ್ತಿಗೂ ಮಕ್ಕಳ ಖುಷಿ ಗುಣಿತವಾಯಿತು. ತರ ತರ ಕೇಕೆ ಚಪ್ಪಾಳೆಗಳು ಮುಗಿಲು ಮುಟ್ಟಿದುವು. ಕೈ ಬೀಸುತ್ತಾ ನಿಂತ ಪೋಷಕರ ನಡುವಿನ ಸುಂದರ ಹೆಣ್ಣೊಬ್ಬಳ ಮಗು ರೈಲು ನೋಡುತ್ತಾ ಕಂಕುಳ ಪರಿಧಿಯಾಚೆ ಜಿಗಿಯಲು ತವಕಿಸುತಿತ್ತು. ಫುಟ್ ಬೋರ್ಡ್ ಮೇಲೆ ನಿಂತು ಇಡೀ ಭೂಮಿಯನ್ನೇ ಗೆದ್ದವನಂತೆ ಕೂಗು ಹಾಕುತ್ತಿದ್ದ ಬೋರನನ್ನು ನೋಡನೋಡುತ್ತಾ ಲಕ್ಷ್ಮವ್ವನ ಕಣ್ಣು ಮಂಜಾದವು. ಆ ಕ್ಷಣ ಅವಳಿಗೆ ತನ್ನ ಭೂತ, ಭವಿಷ್ಯ, ವರ್ತಮಾನಗಳು ಬಲು ಚೆಂದ ಕಾಣಿಸಿದುವು. ರೈಲು ಓಡುತ್ತಲೇ ಇತ್ತು. ಮಕ್ಕಳೆದೆಯಲ್ಲಿ ಬೆಚ್ಚನೆಯ ಹಾಡು ಗನುಗುತ್ತಿತ್ತು.

ಇಳೆಯನ್ನು ಮರೆಸುವ ಮಕ್ಕಳ ಆಟ ಸವಿಯುತ್ತಿದ್ದ ಜನರ ಅರಿವಿಗೆ ತಟ್ಟದೆ ಆ ಸ್ಥಳಕ್ಕೆ ಅನಾಮಿಕ ಕಾರೊಂದು ಬಂದು ನಿಂತಿತು. ಈಗಷ್ಟೇ ತೊಳೆಸಿಕೊಂಡು ಸ್ವಚ್ಛವಾಗಿದ್ದ ಅದು ಯಾವುದೋ ಸರ್ಕಾರಿ ಕಾರೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಅದರ ಮುಂಭಾಗದ ಬಂಪರ್‍ಗೆ ನೇತುಹಾಕಿದ್ದ ಹಸಿರು ಬಣ್ಣದ ಬೋರ್ಡು ಸಂಜೆಗತ್ತಲಿಗೆ ಅಸ್ಪಷ್ಟಗೊಂಡು ತನ್ನ ಪರಿಚಯವನ್ನು ನಿರಾಕರಿಸುತಿತ್ತು. ಕರಾರುವಕ್ಕಾಗಿ ಅದು ನಿಂತ ಎರಡು ಕ್ಷಣಕ್ಕೆ ಏಕಕಾಲದಲ್ಲಿ ತೆರೆದುಕೊಂಡ ಎರಡೂ ಮುಂಬಾಗಿಲುಗಳಿಂದ ಇಳಿದ ಇಬ್ಬರು ವ್ಯಕ್ತಿಗಳು ನೇರ ಮುಂದಕ್ಕೆ ದೃಷ್ಟಿ ನೆಟ್ಟರು. ಒಂದಿಷ್ಟು ಸುಕ್ಕಿಲ್ಲದೆ ನೀಟಾಗಿ ಇಸ್ತ್ರಿ ಮಾಡಿದ ಬಿಳಿಯ ಷರಟು, ಅಚ್ಚ ಕಪ್ಪು ಪ್ಯಾಂಟು, ಪಾಲೀಶ್ ಮಾಡಿದ ಶೂಗಳನ್ನು ಧರಿಸಿ ಅವರು ಬಂದಿಳಿದ ಭಂಗಿ ಯಾವ ಯೂನಿಫಾರಂ, ಬ್ಯಾಡ್ಜುಗಳಿಲ್ಲದೆಯೂ ಅವರು ಅಧಿಕಾರ ಚಲಾಯಿಸತಕ್ಕವರು ಎಂಬುದನ್ನು ಸಾರಿ ಹೇಳುತ್ತಿದ್ದವು. ಮತ್ತೆರಡು ಕ್ಷಣಕ್ಕೆ ಕಾರಿನ ಹಿಂಬಾಗಿಲ ಕದಗಳು ತೆರೆದುಕೊಂಡವು. ಸೂಟು ತೊಟ್ಟ ನೀಳಕಾಯದ ವ್ಯಕ್ತಿ ಹಾಗೂ ಬಿಸಿಲು ಕಾಣದ ಕೋಮಲ ಹೆಣ್ಣೊಬ್ಬಳು ಕಾರಿನಿಂದ ಇಳಿದರು. ಅವನು ಹಾಕಿದ್ದ ಬಾಡಿ ಸ್ಪ್ರೇ ಘಾಟು, ಅವಳ ಕಾಸ್ಮೆಟಿಕ್ಸ್ ಸ್ಮೆಲ್ಲು, ಕಾರಿನ ಓಡೋರ್ ಎಲ್ಲವೂ ಒಂದಕ್ಕೊಂದು ಕೂಡಿಕೊಂಡು ಇಡೀ ಕಾರೇ ಹೊಸತೊಂದು ವಾಸನೆ ರೂಢಿಸಿಕೊಂಡಿದೆಯೇನೋ ಅನಿಸುತ್ತಿತ್ತು. ಅನತಿ ಕ್ಷಣದಲ್ಲಿ ಸೂಟುಧಾರಿಯ ಹಿಂದಿನಿಂದ ಗುಲಾಬಿ ಬಣ್ಣದ ಫ್ರಾಕ್ ತೊಟ್ಟ ಮುದ್ದಾದ ಹೆಣ್ಣು ಮಗುವೊಂದು ಇಳಿದು ಕಂಡೂ ಕಾಣದಂತೆ ಬಗ್ಗಿನೋಡಿ ಪುನಃ ಅವಿತುಕೊಂಡಿತು. ಆಚೆ ಬದಿಯ ಬಾಗಿಲಿಂದಿಳಿದಿದ್ದ ಹೆಣ್ಣು ಸೂಟುಧಾರಿಯ ಬಳಿ ನಡೆದು ಪುಟ್ಟ ಮಗುವನ್ನು ಎತ್ತಿಕೊಂಡಳು. ಜೊತೆಯಾಗಿ ನಿಂತು ಅವರಿಬ್ಬರೂ ನಡೆದುಕೊಂಡ ರೀತಿ ಅವರು ಗಂಡ ಹೆಂಡತಿ ಎಂಬುದನ್ನು ಸಾಬೀತುಪಡಿಸುವಂತಿತ್ತು. ಆ ಮುಖಗಳಲ್ಲಿ ನಗು ಹರಡಿಕೊಂಡಿದ್ದರೂ ಅಧಿಕಾರವನ್ನರಗಿಸಿಕೊಂಡ, ಬದುಕಿನ ಭಾಗವಾಗಿಸಿಕೊಂಡ ಭಾವ ಮುಚ್ಚಿಡಲಾರದಂತೆ ಮನೆ ಮಾಡಿತ್ತು. ಅಪ್ಪ ಅಮ್ಮನ ತೋಳ ತೆಕ್ಕೆಯಲ್ಲಿದ್ದರೂ ಆ ಪುಟ್ಟ ಮಗು ರೈಲಿನಲ್ಲಿ ತಾನೂ ಕುಳಿತು ಅಲ್ಲಿನ ಮಕ್ಕಳಲ್ಲಿ ಒಂದಾಗಬೇಕೆಂದು ಕುಣಿಯುತಿತ್ತು.

ಹಳಿಗಳನ್ನು ಮರೆತುಹೋಗಿದೆಯನ್ನುವಷ್ಟು ತನ್ಮಯತೆಯಿಂದ ರೈಲು ಓಡುತ್ತಿತ್ತು.
ಈ ಜಗತ್ತಿಗೆ ಹೊರತಾದ ಮತ್ತೊಂದು ಭಾವಪ್ರಪಂಚದಲ್ಲಿ ವಿಹರಿಸುತ್ತಿದ್ದ ಅಲ್ಲಿನ ಎಲ್ಲರಿಗೆ ಯಾವುದರ ಪರಿವೆಯೂ ಇರಲಿಲ್ಲ. ರೈಲಿನ ಚಲನೆಯನ್ನೇ ನೋಡುತ್ತಾ ಅಚಾನಕ್ಕಾಗಿ ಕಾರಿನೆಡೆ ನೋಡಿದ ಆಪರೇಟರ್ ಮುಖದಲ್ಲಿ ನಗು ಸರ್ರನೆ ಇಳಿದುಹೋಗಿ ಸನಿಹದ ಭವಿಷ್ಯತ್‍ಕಾಲ ಕಣ್ಣ ಮುಂದೆ ಬಂತು. ಮೂವತ್ತು ವರುಷದ ತನ್ನ ಸುದೀರ್ಘ ಕೆಲಸದ ಅವಧಿಯಲ್ಲಿ ಇಂತಹ ಅದೆಷ್ಟು ಸನ್ನಿವೇಶಗಳನ್ನು ತಾನು ಎದುರಿಸಿಲ್ಲ? ಆದರೆ ಇವತ್ತು? ಇವತ್ತೂ ಹಾಗೆಯೇ ಆಗುವುದೇ?

ರೈಲಿಗೆ ಭವಿಷ್ಯದ ಬಗ್ಗೆ ಗೊತ್ತೇ ಇಲ್ಲ; ವರ್ತಮಾನದ ಖುಷಿ ಅದಕ್ಕೆ ದಕ್ಕಿದೆ. ಚೂರೂ ಅಳುಕದೆ ಓಡುತ್ತಿದೆ.
ಸಿಗ್ನಲ್ ಆಪರೇಟರ್‍ಗೆ ಆ ಕಾರಿನ ವ್ಯಕ್ತಿಗಳಿಂದ ಕಣ್ಣು ತಿರುಗಿಸಿ ರೈರಿನೆಡೆ ನೋಡಲಾಗಲಿಲ್ಲ. ಮುಂಭಾಗದಿಂದಿಳಿದ ಕಟ್ಟುಮಸ್ತಾದ ವ್ಯಕ್ತಿಗಳು ರೈಲನ್ನು ನಿಲ್ಲಿಸುವಂತೆ ಕಣ್ಣಲ್ಲಿಯೇ ಅವನಿಗೆ ಸೂಚಿಸಿದರು. ಅವನು ಕಳಕಳಿಯಿಂದ ಬೇಡವೆನ್ನುವಂತೆ ನೋಡಿದ ನೋಟ ಅವರನ್ನು ತಟ್ಟಲೇ ಇಲ್ಲ. ಅವರು ಮತ್ತೂ ತೀಕ್ಷ್ಣವಾಗಿ ನೋಡಿದರು. ಮತ್ತೆ ವಿನಂತಿಸುವಂತೆ ಹಿಂಬಾಗಿಲಿನವನನ್ನು ನೋಡಿದ. ಅವನ ನಿರ್ಭಾವುಕತೆ ಮುಂದಿನವರು ಸೂಚಿಸಿದ್ದು ಆತನ ಮನದಿಂಗಿತವನ್ನಷ್ಟೇ ಎಂಬುದನ್ನು ದೃಢಪಡಿಸಿತು. ಆಪರೇಟರ್ ಭಾರ ಹೃದಯದಿಂದ ಕಂಬದ ಬಳಿ ಸಾರಿ ಕೆಂಪು ಸಿಗ್ನಲ್ ಒತ್ತಿದ. ಹೊತ್ತಿಕೊಂಡ ಕೆಂಪು ದೀಪದ ಕಡೆಗೆ ನೋಡುವ ಗೊಡವೆಗೆ ಯಾರೂ ಹೋಗಲಿಲ್ಲ. ತಾನು ಡ್ರೈವರ್ ಎಂಬುದನ್ನೂ ಮರೆತು ಮಗುವಾಗಿ ಹೋಗಿದ್ದ ಚಾಲಕ ಅಚಾನಕ್ಕಾಗಿ ಸಿಗ್ನಲ್ ಟವರ್‍ನಲ್ಲಿ ಕೆಂಪು ದೀಪವನ್ನು ನೋಡಿದ ಮೇಲಷ್ಟೇ ವಾಸ್ತವ ಜಗತ್ತಿಗೆ ಬಂದದ್ದು. ಕ್ಷಣ ತಡಮಾಡದೆ “ಯಾಕೆ?” ಎನ್ನುವಂತೆ ಆಪರೇಟರ್‍ನೆಡೆಗೆ ನೋಡಿದ. ನಿರ್ಜೀವ ಗೊಂಬೆಯಂತಾಗಿದ್ದ ಆಪರೇಟರ್ ಕಾರಿನೆಡೆಗೆ ನೋಡಿದ. ತಕ್ಷಣವೇ ಡ್ರೈವರನಿಗೆ ಎಲ್ಲವೂ ಅರ್ಥವಾಗಿ ಹೋಯಿತು. ಕಾಲು ಬ್ರೇಕಿನೆಡೆ ಚಲಿಸಿತು.

ಏಳು ಬೆಟ್ಟ ಏಳು ಸಮುದ್ರಗಳನ್ನು ದಾಟಿ ಜಾನಪದ ಲೋಕಕ್ಕೆ ತಲುಪಿಬಿಡುವುದೇನೋ ಎಂಬಂತೆ ಓಡುತ್ತಿದ್ದ ರೈಲು ದಿಢೀರನೆ ಮುಗ್ಗರಿಸಿ ನಿಂತು ಹೋದದ್ದು ಅಲ್ಲಿದ್ದವರಲ್ಲಿ ದಿಗ್ಭ್ರಮೆ ಮೂಡಿಸಿತು. ಮಕ್ಕಳಂತೂ ಕಂಗಾಲಾಗಿ ಗಾಳಿ ಬಿಟ್ಟ ಬಲೂನಿನಂತೆ ಠುಸ್ಸ್ ಆಗಿಹೋದರು.

ರೈಲು ನಿಂತದ್ದೇ ತಡ ಕಾರಿನ ಮುಂಬಾಗಿಲಿಂದ ಇಳಿದ ಇಬ್ಬರು ವ್ಯಕ್ತಿಗಳು ಸೂಟುಧಾರಿಯ ಕೈಲಿದ್ದ ಮಗುವನ್ನು ಎತ್ತಿಕೊಂಡು ರೈಲಿನತ್ತ ಸರಸರ ಹೆಜ್ಜೆ ಹಾಕತೊಡಗಿದರು. ಆ ಮಗುವಿನ ಪುಟ್ಟ ಪಾದಗಳಲ್ಲಿದ್ದ ಗೆಜ್ಜೆಯ ಸದ್ದು ಆ ನೀರವ ಮೌನದಲಿÉುಲ್ಲರಿಗೂ ಸ್ಪಷ್ಟವಾಗಿ ಕೇಳುತಿತ್ತು. ರೈಲ ಬಳಿ ಬಂದವರೇ ಚಾಲಕನ ಪಕ್ಕ ನಿಂತಿದ್ದ ಬೋರನನ್ನು ಅನಾಮತ್ತು ಎತ್ತಿ ಹಿಂದಿನ ಭೋಗಿಗೆ ಎಸೆದರು. ಆ ರಭಸಕ್ಕೆ ಬೆಚ್ಚಿಬಿದ್ದು ಲಕ್ಷ್ಮವ್ವ ಭೋಗಿಯ ಬಳಿ ಓಡಿದಳು. ತಮ್ಮಲ್ಲಿದ್ದ ಪುಟ್ಟ ಮಗುವನ್ನು ಬೋರ ಆವರೆಗೂ ನಿಂತಿದ್ದ ಜಾಗದಲ್ಲಿ ನಿಲ್ಲಿಸಿ ವ್ಯಕ್ತಿಗಳು ವಾಪಸ್ಸಾದರು.

ಅಲ್ಲಿದ್ದ ಎಲ್ಲರೂ ಉಸಿರು ತುಂಬಿದ ಬೊಂಬೆಗಳೇನೋ ಎನ್ನುವಂತೆ ಸುಮ್ಮನೆ ನಿಂತಿದ್ದರು. ಹಿಂದಿನ ಭೋಗಿಗೆ ದೂಡಲ್ಪಟ್ಟ ಬೋರ ಯಾವ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ಅವನು ಕುಳಿತ ನಿರ್ಭಾವುಕ ಭಂಗಿ ನೋಡಿದರೆ ಎಂತಹವರ ಎದೆಯಲ್ಲೂ ನಡುಕ ಹುಟ್ಟುತ್ತಿತ್ತು. ಹನಿ ಕಣ್ಣೀರು, ಪ್ರತಿಭಟನೆ, ಬೇಸರ, ದುಃಖ- ಏನೂ ಇಲ್ಲ. ಯಾರಿಗೆ ಏನು ಮಾಡಬೇಕೆಂಬುದೂ ಹೊಳೆಯಲಿಲ್ಲ. ಆವೆರೆಗೆ ಯಾರಿಗೂ ಪಾಪ್‍ಕಾರ್ನ್ ನೀಡದ ದಢೂತಿ ಹುಡುಗ ಪೊಟ್ಟಣವನ್ನು ಬೋರನೆಡೆಗೆ ಚಾಚಿದರೂ ಬೋರನ ಕೈಗಳು ಮೇಲೇಳುವ ಶಕ್ತಿಯನ್ನು ಕಳಕೊಂಡಂತೆ ಸುಮ್ಮನಿದ್ದುವು. ಮಗನ ಬಳಿ ಓಡಿಬಂದ ಲಕ್ಷ್ಮವ್ವ ಆತನನ್ನು ಸಮಾಧಾನಪಡಿಸಲು ಉಳಿದ ಅರ್ಧ ಅವಲಕ್ಕಿಯನ್ನು ಅವನತ್ತ ಚಾಚಿದಳು. ಅದು ನತದೃಷ್ಟ ಅವಲಕ್ಕಿ.
ತನ್ನ ಮಗಳಿಗೆ ಸಿಕ್ಕ ಸ್ಥಾನದಿಂದ ಸಂತೃಪ್ತಿಯಾದ ಸೂಟುಧಾರಿ ರೈಲು ಚಾಲು ಮಾಡುವಂತೆ ಸೂಚಿಸಿದ. ಬೇರೆ ವಿಧಿಯಿಲ್ಲದೆ ಆಪರೇಟರ್ ಒತ್ತಿದ ಸಿಗ್ನಲ್ಲನ್ನೇ ನೋವಿನಿಂದ ನೋಡುತ್ತಾ ಚಾಲಕ ರೈಲು ನಡೆಸಿದ. ಬೋಗಿಯ ಕಂಬಿ ತಗುಲಿ ಲಕ್ಷ್ಮವ್ವನ ಕೈಲಿದ್ದ ಅವಲಕ್ಕಿ ಹಳಿಗಳ ಮೇಲೆ ಬಿತ್ತು.

ಒಂದು ಅಸಾಧ್ಯ ಮೌನದಲ್ಲಿ ರೈಲು ಮುಂಬರಿಯಿತು. ಯಾರ ಮುಖದಲ್ಲೂ ನಗುವಿಲ್ಲ. ಸೂಟುಧಾರಿ ಮತ್ತವನ ಕಡೆಯವರು ಏನನ್ನೋ ಸಾಧಿಸಿದಂತೆ ಬೀಗುತ್ತಿದ್ದರು. ಉಕ್ಕಿಬರುತ್ತಿದ್ದ ಅಳುವನ್ನು ತಡೆಯುತ್ತಾ ಸೆರಗಲ್ಲಿ ಬಾಯಿ ಮುಚ್ಚಿಕೊಂಡಳು ಲಕ್ಷ್ಮವ್ವ. ಡ್ರೈವರ್‍ನ ಪಕ್ಕ ನಿಂತ ಪುಟ್ಟ ಮಗು ಮುಗ್ಧವಾಗಿ ನಗುತಿತ್ತು. ಎಲ್ಲರ ಕಣ್ಣು ಬೋರನ ಮೇಲಿದ್ದವು. ಬೋರ ಮಾತ್ರ ಅಲುಗಾಡದೆ ತನ್ನ ದೃಷ್ಟಿಯನ್ನು ಎತ್ತಲೋ ನೆಟ್ಟಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT