ಕೊಂಡ ಡೋರ್ ಪಕ್ಕದ ಸೀಟಿನ ಕಿಟಕಿಯಲ್ಲಿ ಕಂಡಿದ್ದೆ ಹುರುಪುಹುಟ್ಟಿ ಜೋರಾಗಿ ಅವನ ಹೆಸರು ಕೂಗಿದೆ. ಬಸ್ಸು ಹತ್ತಲು ನನ್ನ ಜೊತೆ ನಿಂತಿದ್ದವರಿಗೆ ಇವನಿಗೆ ಕಾಮನ್ಸೆನ್ಸ್ ಇಲ್ಲ ಎಂದೆನಿಸಿರಬಹುದು. ಯಾರನ್ನೂ ಅಷ್ಟಾಗಿ ಮಾತಾಡಿಸದ ನನ್ನ ಬಗ್ಗೆ ಬಾಗಿಲಲ್ಲಿ ನಿಂತಿದ್ದ ನಮ್ಮ ಕೇರಿ ಹುಡುಗನಿಗೆ ಈ ದೃಶ್ಯದಿಂದ ಗಲಿಬಿಲಿಯಾಯಿತು. ಮತ್ತು ನನಗೇ ನನ್ನ ಕೂಗು ವಿಚಿತ್ರವೆನಿಸಿತು. ಸೀಟು ಸಿಗದೆ ಸೀಟಿಗೊರಗಿ ನಿಂತೆ. ಕೊಂಡ ತನ್ನ ಪಕ್ಕ ಖಾಲಿಯಿದ್ದ ಸೀಟು ನನಗಾಗಿ ಹಿಡಿಯುತ್ತಾನೆ ಎಂದುಕೊಂಡಿದ್ದೆ. ಅಷ್ಟರಲ್ಲಿ ಹೆಂಗಸ್ಸೊಂದು ಬಂದು ಕೂತರೂ ಅವನು ಸುಮ್ಮನೆ ಬಿಟ್ಟುಕೊಟ್ಟಿದ್ದು ಒಂದು ರೀತಿ ಸಿಟ್ಟು ತರಿಸಿತ್ತು. ‘ಕೊಂಡ’ ಅಂತ ಕರೆಯಲೆ ‘ಯಲ್ಲಪ್ಪಾ’ ಅಂತ ಕರೆಯಲೆ ಎಂದು ಒಂದು ಕ್ಷಣ ಚಡಪಡಿಕೆಯಲ್ಲಿರುವಾಗಲೆ ಇದ್ದಕ್ಕಿದ್ದ ಹಾಗೆ ಮೊದಲ ಬಾರಿಗೆ ಅವನ ಅಡ್ಡಹೆಸರು ಬಾಯಿಗೆಬಾರದೆ ‘ಯಲ್ಲಪ್ಪಾ’ ಎಂಬ ಕೂಗು ಹೊರಬಿದ್ದಿತ್ತು. ಅವನು ತಣ್ಣಗೆ “ಶಿಮೊಗ್ಗಕ್ಕಾ” ಎಂದಷ್ಟೆ ಕೇಳಿದ. ನಾನಷ್ಟು ಕೂಗಿದ ಜೋರಿನಲ್ಲಿ ‘ಆ ಪಕ್ಕದ ಸೀಟು ಹಿಡಿಯೊ’ ಎಂಬ ಇಂಗಿತವೂ ಇತ್ತು.
ಬಸ್ಸು ಸ್ವಲ್ಪ ದೂರ ಸಾಲಬಾಳು ಹತ್ತಿರ ಹೋಗುತ್ತಿರುವಾಗ ಕೊಂಡ “ಜೀನಳ್ಳಿ ಕಾಲೇಜ್ನಗೇ ಐದೀಯಾ” ಅಂದ.
“ಹ್ಞುಂ ನೀನು..”
“ಅದೇ ಕಾಲೇಜು” ಅಂದಷ್ಟೆ ಸುಮ್ಮನಾದ.
ಲೆ ಇವ್ನಾ.. ಪಕ್ಕೂಕ್ಕೆ ಕೂತ್ಕಂದ್ದು ಭರ್ಜರಿ ಹರಟೆಹೊಡೆಯೋಣ ಅನ್ಕಂದಿದ್ದೆ....ಇವ್ನು ನೋಡಿದ್ರೆ ಮಾತಾಡಿದ್ರೆ ಮುತ್ತು ಸುರೀತಾವೆ ಅನ್ನಂಗೆ ಮಾಡ್ತಾ ಐದಾನಲ್ಲಾ... ಪಕ್ಕದಾಗೆ ಹೆಂಗಸ್ಸಿರೋದರಿಂದ ಹಂಗೆ ಮಾಡ್ತಾ ಐದಾನಾ... ಹೆ ಅದ್ನೋಡಿದ್ರೆ ಇನ್ನೊಂದು ಸ್ವಲ್ಪ ದಿನೂಕೆ ಮುದುಕಿಯಾಗಂಗೈತಿ... ಪಾಪ ಅದಾಗ್ಲೆ ನಿದ್ದೆ ಹೋಗೇತಿ...
“ಅದೇ ಕಾಲೇಜು ಅಂದ್ರೆ ಯಾವ್ದು? ವರ್ಷಕ್ಕೊಂದು ಚೇಂಜ್ ಮಾಡ್ತಾ ಇರ್ತಿಯಾ....”
“ಅದೇ ಸೊರಬ”
ಎಂದೂ ನನ್ನನ್ನು ಮಾತಾಡಿಸದ ನಮ್ಮ ಕೇರಿ ಹುಡುಗ ನನ್ನ ನೋಡಿ ನಕ್ಕ. ನಾನು ನಗಲಿಲ್ಲ. ಅವನು ಡ್ರೈವರ್ ಕಡೆ ತಿರುಗಿದ. ನನ್ನ ಮುಂದೆ ನಿಂತಿದ್ದ ಇಬ್ಬರು, “ಆ ಸ್ವಾಮೆಣ್ಣುಂದು ಭಾನ್ಗೇಡಿ ಗೊತ್ತಾತಾ... ಮೊನ್ನೆ...” “ಊರಾಗ್ಯಲ್ಲ ಅದೇ ಸುದ್ದಿ ಬಿಡು.. ಜನ್ಗುಳಿಗೂ ಬುದ್ಧಿ ಇರ್ಲಿಲ್ಲ... ಅವನನ್ನೇನು ಹೊತ್ತು ಮೆರೆಸಿದ್ರು...”. ಅಷ್ಟರಲ್ಲೆ ಕಂಡಕ್ಟರ್ ಕೂಗಿ ಜನನ್ನ ಆಕಡೆ ಸರಿಯಲು ಹೇಳಿದ. ಅವರಿಬ್ಬರು ನನ್ನ ದಾಟಿ ಆಕಡೆ ಹೋದರು. ಮೊದಲೆಲ್ಲ ಸಾಕುಸಾಕೆನಿಸುವಷ್ಟು ಗಂಟುಬಿದ್ದು ಮಾತಾಡಿಸುತ್ತಿದ್ದ ಕೊಂಡ ಇವತ್ತು ಇಷ್ಟು ಗಂಭೀರನಾಗಿರುವುದು ನನ್ನಿಂದ ಸಹಿಸಿಕೊಳ್ಳಲಾಗುತ್ತಿರಲಿಲ್ಲ. ಯಾವುದಾದರು ಮದುವೆ, ಟೂರ್ಗಳಿಗೆ ನಾವು ಗೆಳೆಯರೆಲ್ಲ ಹೋಗುವಾಗ ಕೊಂಡನನ್ನು ಬಿಟ್ಟು ಹೋಗುತ್ತಿರಲಿಲ್ಲ. ಅವನ ಖರ್ಚನ್ನೂ ನಾವೇ ಹಾಕಿಕೊಂಡು ಕರೆದೊಯ್ಯುತ್ತಿದ್ದೆವು. ಅವನನ್ನು ಇಡೀ ರಾತ್ರಿ ಚೇಷ್ಟೆ ಮಾಡುತ್ತ ಗೋಳೋಯ್ದುಕೊಳ್ಳುತ್ತಿದ್ದೆವು. ಕೊಂಡನೊ ಪೆಕರುಪೆಕರಾಗಿ ಏನೇನೊ ಮಾತಾಡುತ್ತಿದ್ದದ್ದನ್ನೇ ಮಜವಾಗಿ ಆಡಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ಅವನ ಮಾತುಗಳಿಗೆ ಅರ್ಥ ಹುಡುಕುವುದೆ ಕಷ್ಟವಾಗುತ್ತಿತ್ತು. ಅವನ ಚೈಲ್ಡೀಶ್ ವರ್ತನೆ ನಮ್ಮ ಹುಡುಗಾಡಿಕೆಗೆ ಪ್ರೇರೇಪಿಸುತ್ತಿತ್ತು. ನಾವೆಷ್ಟೇ ಗೇಲಿ ಮಾಡಿದರೂ ಅದು ಕೊಂಡನಿಗೆ ಅರ್ಥವಾಗುತ್ತಿರಲಿಲ್ಲವೊ ಏನೊ, ಮನಸ್ಸಿಗೆ ತೆಗೆದುಕೊಳ್ಳುತ್ತಿರಲಿಲ್ಲ.
ಸವಳಂಗದಲ್ಲಿ ಸೀಟು ಸಿಗಬಹುದು ಎಂದುಕೊಂಡಿದ್ದೆ. ಆದರೆ ಯಾರೂ ಇಳಿಯಲಿಲ್ಲ, ಬದಲಿಗೆ ಮತ್ತಷ್ಟು ಜನ ಹತ್ತಿದರು. ಬೆಳಗ್ಗಿನ ಸಮಯ ಅಲ್ವಾ... ಶಿಮೊಗ್ಗಕ್ಕೆ ಕಾಲೇಜಿಗೆ ಹೋಗುವವರು, ಆಫೀಸ್ಸಿಗೆ ಹೋಗುವವರು, ಅದು ಇದು ಖರೀದಿಗೆ ಹೋಗುವವರು, ಫುಲ್ ರಷ್. ಕೊಂಡನಿಗೆ ಬೈದುಕೊಂಡೆ. ಸೀಟು ಆ ದಢೂತಿ ಹೆಂಗಸ್ಸಿನ ಪಾಲುಮಾಡಿದ್ನಲ್ಲಾ. ಇದ್ದಕ್ದಿದ್ದ ಹಾಗೆ ಒಬ್ಬ ಹುಡುಗ “ನಮಸ್ಕಾರ ಸಾರ್” ಅಂದ. ನಾನು ಅವನನ್ನೇ ನೋಡಿದೆ. “ಗೊತ್ತಾಗ್ಲಿಲ್ವಾ ಸಾರ್... ನಾನ್ ಹೇಮಂತ ನಿಮ್ಮ ಸ್ಟೂಡೆಂಟು”. “ಹೌದಾ ಏನ್ ಮಾಡ್ತಾ ಐದೀಯಾ” “ಬಿಯೆಸ್ಸಿ ಸಾರ್”. ಕೊಂಡ ಕಿಟಕಿ ಆಚೆ ಏನನ್ನೊ ನೋಡುತ್ತಿದ್ದ. ನನಗೇಕೊ ಇವನು ನಮ್ಮ ಕೊಂಡನೇ ಅಲ್ಲ ಅನಿಸಲು ಶುರುವಾಯಿತು. ಕಾಲೇಜಿಗೆ ಶಿಮೊಗ್ಗಕ್ಕೆ ಓಡಾಡುತ್ತಿರುವಾಗ ಒಮ್ಮೆ ಹೀಗೆ ಕೊಂಡನಿಗೆ ಮಾತ್ರ ಅದೂ ಹುಡುಗಿ ಪಕ್ಕ ಸೀಟು ಸಿಕ್ಕು ನಾವು ಫ್ರೆಂಡ್ಸೆಲ್ಲ ನಿಂತಿದ್ದೆವು. ಆಗ ನಾವೆಲ್ಲ ಹಿಂದೆ ನಿಂತಿದ್ದ ಅಜ್ಜಿಯೊಂದನ್ನು ಕೂಗಿ ಕರೆದು “ಲೇ ಕೊಂಡ, ನಿಂಗೆ ಮನುಷ್ಯತ್ವ ಐತೇನ್ಲಾ, ಪಾಪ ಅಜ್ಜಿ ನಿಂತ್ಕಂದೈತಿ. ನೀನು ಸೀಟ್ನಾಗೆ ಆರಾಮಾಗೆ ಕುಂತ್ಕಂದೀಯಾ, ನಿಂಗೆ ಪಾಪ ಪುಣ್ಯ ಏನೂ ಇಲ್ಲೇನ್ಲಾ...” ಅಂತ ಅವನು ಎದ್ದೇಳುವತನಕ ಬಿಟ್ಟಿದ್ದಿಲ್ಲ. ಈಗಲೂ ಹಾಗೆ ಮಾಡೋಣ ಅನಿಸಿತು. ಆದರೆ ಪಕ್ಕದಲ್ಲೆ ನನ್ನ ಸ್ಟೂಡೆಂಟ್ ಇದ್ದನಲ್ಲ... ನಾನು ಲೆಕ್ಚರ್ರು ಹಾಗೆಲ್ಲ ಮಾಡಲಾದೀತೆ ಎಂಬ ಸೋಗಲಾಡಿತನ ಬೇರೆ. ಅಲ್ಲದೆ ಅವಾಗ ಬಸ್ಸಿನಲ್ಲಿ ಓಡಾಡುತ್ತಿದ್ದ ಯಾವ ಫ್ರೆಂಡ್ಸು ಈಗ ಈ ಬಸ್ಸಲ್ಲೂ ಇಲ್ಲ, ನಮ್ಮೂರಲ್ಲೂ ಇಲ್ಲ. ಎಲ್ಲ ದಿಕ್ಕಪಾಲಾಗಿ ತಮ್ಮ ತಮ್ಮ ರೀತಿಯಲ್ಲೆ ಬದುಕು ಕಟ್ಟಿಕೊಂಡು ಕಾಣೆಯಾಗಿದ್ದಾರೆ.

ಕುಂಚೇನಳ್ಳಿ ತಾಂಡ. ಎಲ್ಲ ಲಂಬಾಣಿ ಹುಡುಗಿಯರು ಪ್ಯಾಂಟು ಬ್ಲೇಜರು ಹಾಕಿಕೊಂಡು ಬಿಬಿಎನೋ, ಬೀಸಿಯೇನೊ ಓದುತ್ತಿರಬೇಕು, ಒಮ್ಮೆಲೆ ಹತ್ತಿದಾಗ ಬಸ್ಸು ಮತ್ತಷ್ಟು ಉಸಿರುಗಟ್ಟಿತು. ಆಗೆಲ್ಲ ಈ ಕುಂಚೇನಳ್ಳಿ ಬಂತೆಂದರೆ ಬಸ್ಸಿನ ಡ್ರೈವರು ಕಂಡಕ್ಟರು ಹೆದರುತ್ತಿದ್ದರು ಈ ಲಂಬಾಣಿ ಹೆಂಗಸರಿಗೆ. ಯಾವುದ್ಯಾವುದೊ ಕಾರಣಕ್ಕೆ ವ್ಯಾಜ್ಯ ತೆಗೆದು ಬಸ್ಸು ನಿಲ್ಲಿಸಿ ದಂಡ ಕಟ್ಟಿಸುತ್ತಿದ್ದರು ಬಸ್ಸಿನವರ ಹತ್ತಿರ. ಈಗ ಎಷ್ಟೊಂದು ಬದಲಾವಣೆ. ಜೋಪಡಿಗಳಿದ್ದ ಜಾಗದಲ್ಲಿ ದೊಡ್ಡದೊಡ್ಡ ಮನೆಗಳು, ಟ್ರ್ಯಾಕ್ಟರ್ ಕಾರುಗಳು. ಲಂಬಾಣಿ ಹುಡುಗಿಯೊಬ್ಬಳು ಅಂಥ ರಷ್ನಲ್ಲೂ ಮೊಬೈಲು ಹಿಡಿದು ಇಂಗ್ಲಿಷ್ನಲ್ಲಿ ಮಾತಾಡುತ್ತಿದ್ದಳು. ಮತ್ತೊಬ್ಬಳು ಮತ್ತಿನ್ನೇನೊ ಟೈಪಿಸುತ್ತಿದ್ದಳು. ಕೊಂಡ ಈಗ ಕಣ್ಣುಮುಚ್ಚಿದ್ದ. ನಾನೇನಾದರು ಅಪ್ಪಿತಪ್ಪಿ ಸಿಕ್ಕರೆ ಸಾಕಾಗಿತ್ತು, “ಲೇ ಮನೂ ಹಂಗೆ ಕಣ್ಲಾ ಹಿಂಗೆ ಕಣ್ಲಾ’’ ಅಂತ ನ್ಯಾಮತಿಯಿಂದ ಶಿಮೊಗ್ಗ ತನಕ ಬಿಡುತ್ತಿರಲಿಲ್ಲ. ಆ ಎಳನೀರಿನ ಘಟನೆಗೆ ಮೂಲ ನಾನೇ ಅಂತ ಇವ್ನಿಗೇನಾರ ಗೊತ್ತಾತಾ... ಇವತ್ತೂ ನಾವು ಫ್ರೆಂಡ್ಸ್ ಸೇರಿಕೊಂಡಾಗ ಆ ಘಟನೆ ನೆನೆಸಿಕೊಂಡು ನಗುತ್ತೇವೆ. ಯಾರಿಗೂ ಆ ಐಡಿಯಾ ಕೊಟ್ಟವನು ನಾನೇ ಎಂಬುದು ನೆನಪಿಲ್ಲ. ಇಪ್ಪತ್ತು ವರ್ಷ ಆಗಿರಬೇಕು ಅದು ಆಗಿ. ಕೊಂಡನಿಗೆ ನನ್ನ ಬಗ್ಗೆ ಸ್ವಲ್ಪ ಅಭಿಮಾನ ಜಾಸ್ತಿ, ಬೇರೆ ಫ್ರೆಂಡ್ಸ್ನಂತೆ ಅಲ್ಲ, ಸ್ವಲ್ಪ ಸೈಲೆಂಟು ಅಂತ. ನನಗೆ ಗೌರ್ಮೆಂಟ್ ಕೆಲಸ ಸಿಕ್ಕು ಶಿಮೊಗ್ಗದಲ್ಲಿ ಕೊಂಡನಿಗೆ ನಾನ್ವೆಜ್ ಊಟ ಕೊಡಿಸಿದಾಗ “ನೀನೊಬ್ಬನೆ ನೋಡು ಕೊಡಿಸಿದ್ದು, ಬೇರೆ ಫ್ರೆಂಡ್ಸ್ಗೆಲ್ಲ ಎಂಥೆಂಥ ದೊಡ್ ಕೆಲ್ಸ ಸಿಕ್ರು ನಂಗೆ ಕೊಡ್ಸಿರಿಲಿಲ್ಲ..” ಅಂತ ಹಲುಬಿದ್ದ. ಅವನಿಗೆ ನಾನ್ವೆಜ್ ಅಂದರೆ ಎರಡುಹೊಟ್ಟೆ. ಸುತ್ತ ಎಲ್ಲೆ ಮಾರಿಜಾತ್ರೆ ನಡೆದರೂ ಕರೆಯಲಿ ಬಿಡಲಿ ಹಾಜರಿರುತ್ತಾನೆ.

ನಾನೇ ಆ ಎಳನೀರಿನದ್ದಕ್ಕೆ ಐಡಿಯಾ ಕೊಟ್ಟಿದ್ದು ಅಂದರೂ ನಂಬುವುದಿಲ್ಲ ಕೊಂಡ. ರಾಣೆಬೆನ್ನೂರಲ್ಲಿ ಸೀನನ ತಂಗಿ ಮದುವೆ. ನಮ್ಮವೆಲ್ಲ ಪೀಜಿ ಮುಗಿದಿತ್ತು ಅನಿಸುತ್ತೆ. ಇನ್ನು ಕೆಲ್ಸ ಸಿಕ್ಕಿರಲಿಲ್ಲ. ಖಾಲಿ ಇದ್ದೆವು. ಕಲ್ಯಾಣಮಂದಿರದಲ್ಲಿ ರಾತ್ರಿ ಊಟ ಮುಗಿಸಿಕೊಂಡು ಬಸ್ಸ್ಟ್ಯಾಂಡ್ ಹತ್ತಿರ ಇರುವ ಲಾಡ್ಜ್ನಲ್ಲಿ ಮಲಗಲು ಬರುತ್ತಿದ್ದೆವು. ನಾನು ಅಯೂಬ ಮಂಜ ಸ್ವಲ್ಪ ಬೇಗ ಬಂದೆವು. ಉಳಿದವರು ಅದು ಇದು ಮಾತಾಡುತ್ತಾ ನಿಧಾನಕ್ಕೆ ಬರುತ್ತಿದ್ದರು. ಅಯೂಬ ಗ್ಯಾಸ್ಟ್ರಿಕ್ ಅಂತ ದಾರಿಯಲ್ಲಿ ಒಂದು ಎಳನೀರನ್ನ ಕೊಂಡುತಂದ್ದಿದ್ದ. ಅರ್ಧ ಕುಡಿದ. ತಕ್ಷಣ ಕೊಂಡನನ್ನು ಕುರಿಮಾಡುವ ಐಡಿಯಾ ರೂಪುಗೊಂಡಿತು. ಅರ್ಧ ಉಳಿದಿದ್ದ ಎಳನೀರಿನ ಕಾಯಿಯನ್ನು ಮಂಜ ಟಾಯ್ಲೆಟ್ ರೂಮಿಗೆ ಒಯ್ದು ಪೂರ್ತಿ ಮಾಡಿಕೊಂಡು ಬಂದು ಅಲ್ಲೆ ಬಿದ್ದಿದ್ದ ಕಾಯಿಯ ಮುಚ್ಚಳವನ್ನು ಹಾಗೆ ಮುಚ್ಚಿಟ್ಟ. ಎಲ್ಲಾ ಫ್ರೆಂಡ್ಸ್ ಲಾಡ್ಜಿಗೆ ಬಂದರು. ಅಯೂಬ ಕೊಂಡನಿಗೆ ತಿಳಿಯದಂತೆ ಉಳಿದವರಿಗೆಲ್ಲ ನಮ್ಮ ಕುತಂತ್ರವನ್ನು ಕಣ್ಣಲ್ಲೆ ಸೂಕ್ಷ್ಮವಾಗಿ ತಿಳಿಸಿದ. ಅವರು ರೂಮ್ ಒಳಗೆ ಕಾಲಿಡುತ್ತಿದ್ದಂತೆ ಅಯೂಬ ಮಂಜ ಜಗಳಕ್ಕೆ ಬಿದ್ದರು. ಒಬ್ಬ “ನಾನು ಎಳನೀರು ಕುಡಿಯುತ್ತೇನೆ” ಅಂತ, ಮತ್ತೊಬ್ಬ “ನಾನು ಕುಡಿಯುತ್ತೇನೆ” ಅಂತ. ಹೀಗೆ ಒಬ್ಬರಿಗೊಬ್ಬರು ವಾಚಾಡುವಾಗ ಕೊಂಡ “ಇಬ್ಬರ ಜಗಳ ಮೂರನೆಯವನಿಗೆ ಲಾಭ” ಅಂದಿದ್ದೆ ಅಲ್ಲಿ ಗೋಡೆಗೆ ಒರಗಿಸಿಟ್ಟ ಕಾಯಿಯನ್ನು ಗಟಗಟ ಎತ್ತಿಯೇ ಬಿಟ್ಟ! ಅಲ್ಲಿಗೆ ನಮ್ಮ ಪ್ಲ್ಯಾನ್ ಸಕ್ಸಸ್ ಆಗಿತ್ತು.

ಇವಾಗಲೂ ಅದನ್ನು ಹೇಳಿದರೆ ಕೊಂಡ ನಂಬುವುದಿಲ್ಲ. “ಅದು ಸೀ ಇತ್ತು ಉಪ್ಪಿರಲಿಲ್ಲ” ಅಂತ ವಾದಿಸುತ್ತಾನೆ. ತೀರಾ ನಾವೂ ವಾದಕ್ಕಿಳಿದರೆ “ಮೂತ್ರಪಾನ ಆರೋಗ್ಯಕ್ಕೆ ಒಳ್ಳೇದು.... ಅಂಥ ಮೊರಾರ್ಜಿ ದೇಸಾಯೀನೆ ಕುಡಿತ್ತಿರಲಿಲ್ವಾ” ಅಂದು ಒಂದು ಪೆಕರುನಗು ನಗುತ್ತಾನೆ.

ನನಗೇನು ಇವತ್ತು ಸೀಟು ಸಿಗಲ್ಲ ಅಂತ ಕಾಣಿಸುತ್ತೆ. ಮಗಳ ಇಂಜಿನಿಯರ್ ಕಾಲೇಜಿಗೆ ಫೀಜು ಕಟ್ಟಬೇಕಿತ್ತು. ಕಾಲೇಜಿಗೆ ರಜೆ ಹಾಕಿ ಬಂದಿದ್ದೆ. ಅಬ್ಬಲಗೆರೆ ಬಂದಾಗ ಕೊಂಡ ಕಣ್ಣುಬಿಟ್ಟ. ಅವನು “ಅದೇ ಕಾಲೇಜು, ಸೊರಬ” ಅಂದನಲ್ಲಾ ಸೊರಬಕ್ಕೆ ಹೋಗೋದುಬಿಟ್ಟು ಶಿಮೊಗ್ಗಕ್ಯಾಕೆ ಹೋಗುತ್ತಿದ್ದಾನೆ... ಕೇಳಬೇಕು ಅನಿಸಿತು. ಕೇಳಲಿಲ್ಲ. ಅವನು ಬುರುಡೆ ಬಿಡೋದರಲ್ಲಿ ಎತ್ತಿದಕೈ ಅಂತ ನಮಗೆಲ್ಲ ಗೊತ್ತಿರೋದೆ. ಮೂರುವರ್ಷದ ಹಿಂದೆ ಅನಿಸುತ್ತೆ. ಭೋಜೇಗೌಡರ ಪರ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ನಮ್ಮ ಕಾಲೇಜಿಗೆ ಬಂದ ದೊಡ್ಡ ಗುಂಪಿನ ಜತೆ ಕೊಂಡನೂ ಬಂದಿದ್ದ. “ಭೋಜೇಗೌಡರು ಫೋನ್ ಮಾಡ್ತಾ ಇರ್ತಾರೆ, ಈ ಎಲೆಕ್ಷನ್ನಾಗೆ ಓಡಾಡಿ ಮಾಡು...ಮುಂದೆಬರುವ ಪದವೀಧರ ಕ್ಷೇತ್ರದ ಎಲೆಕ್ಷನ್ನಿಗೆ ನಮ್ ಪಕ್ಷದಿಂದ ನೀನೇ ನಿಲ್ಲಂತೆ ಅಂತ ಹೇಳಿದ್ದಾರೆ” ಅಂತ ಪುಂಗಿದ್ದ. ಆಮೇಲೆ ಎಲೆಕ್ಷನ್ ಬಂದಾಗ ಕೊಂಡನ ಸುದ್ದಿಯೇ ಇರಲಿಲ್ಲ. ಆಮೇಲೆ ಗೊತ್ತಾಯ್ತು, ಭೋಜೇಗೌಡರಿಗೆ ಈ ಕೊಂಡ ಯಾರು ಅಂತಾನು ಗೊತ್ತಿಲ್ಲ. ನ್ಯಾಮತಿ ಬಸ್ಸ್ಟ್ಯಾಂಡ್ನಲ್ಲಿ ಕೊಂಡ ತನ್ನೂರು ಕುದುರೆಕೊಂಡಕ್ಕೆ ಹೋಗಲು ಅವತ್ತು ಯಾರದೊ ಬೈಕಿಗೆ ಕಾಯುತ್ತಿರುವಾಗ ಭೋಜೇಗೌಡರ ಬೆಂಬಲಿಗನೊಬ್ಬ “ಏ ಕೊಂಡ” ಅಂತ ಮಾತಾಡಿಸಿದ್ದೇ ಅವನ ಬೈಕ್ಹಿಂದೆ ಕೊಂಡ ಹತ್ತಿಕೂತ ಅಷ್ಟೆ, ಊಟಗೀಟ ಸಿಗುತ್ತೆ ಅಂತ.

ಯಾವುದಕ್ಕೂ ಅಷ್ಟು ತಲೆಕೆಡಿಸಿಕೊಳ್ಳದ ಕೊಂಡ ಇವತ್ಯಾಕೆ ಹಿಂಗೈದಾನೆ... ಮದ್ವೆ ವಿಷಯಕ್ಕೇನರ ತಲೆಕೆಡಿಸಿ ಕೊಂಡಿದ್ದಾನೆಯೆ... ಖಾಯಂ ಕೆಲಸವಿಲ್ಲ ಅಂತ ಯಾರೂ ಕೊಂಡನಿಗೆ ಹೆಣ್ಣು ಕೊಡುತ್ತಿರಲಿಲ್ಲ. “ಐದೆಕರೆ ಜಮೀನೈತಿ, ನಮ್ಮೊಲ್ದಾಗೆ ಚಿನ್ನದ ಗಣಿ ಹೋಗಿರೋದು, ಮುಂದೆ ಭಾರಿ ಡಿಮ್ಯಾಂಡು ಬರ್ತತಿ... ಕೊಟಿಗಟ್ಟಲೆ ಬೆಲೆ ಬರ್ತತಿ... ಅದಲ್ದೆ ಐವತ್ತು ಲಕ್ಷ ಎಲ್ಐಸಿ ಮಾಡ್ಸಿದ್ದೀನಿ” ಅಂತ ಹೆಣ್ಣು ನೋಡೋಕೆ ಹೋದಕಡೆಯೆಲ್ಲೆಲ್ಲ ಕೊಂಡ ಹೇಳಿಕೊಳ್ಳುತ್ತಿದ್ದ. ಆದರೆ ವರ್ಷಕ್ಕೊಂದು ಡಿಗ್ರಿ ಕಾಲೇಜು ಬದಲಾಯಿಸುವ ಈ ಗೆಸ್ಟ್ ಲೆಕ್ಚರರ್ ಕೊಂಡನ ಬಗ್ಗೆ ಅಲ್ಲಿಇಲ್ಲಿ ವಿಚಾರಿಸುವ ಹೆಣ್ಣಿನಕಡೆಯವರು ಕೊನೆಗೆ ರಿಜೆಕ್ಟ್ ಮಾಡುತ್ತಿದ್ದರು.

ಹತ್ತುವರ್ಷದ ಹಿಂದಿರಬೇಕು. ಅದಾಗಲೆ ಕೊಂಡನಿಗೆ ಮದುವೆ ವಯಸ್ಸು ಮೀರಿತ್ತು. ಯಾವುದೊ ಹೆಣ್ದೇವತೆಯ ಪೂಜಾರಿ ಮೂರು ನಿಂಬೆಹಣ್ಣು ಕೊಟ್ಟು “ಪ್ರತಿ ಮಂಗಳ್ವಾರ ಆ ಹೆಣ್ಣಿನ ಮನೆಯ ಹೊಸ್ಲಲ್ಲಿ ಇಟ್ಟುಬಾ ಬೆಳ್ಗಿಂಜಾವುಕೆ ಹೋಗಿ ಮೂರು ವಾರನೂ... ಮೂರು ವಾರ ಆಗ್ತಿದ್ದಂಗೆ ಅವ್ರೆ ನಿಮ್ಮನೆ ಬಾಕ್ಲಿಗೆ ಹೆಣ್ಣು ಕೊಡ್ತೀನಿ ಅಂತ ಬರ್ತಾರೆ” ಅಂದಿದ್ದ. ಒಂದು ಮಂಗಳವಾರ ಕೊಂಡ ನಸುಕಿಗೇ ಎದ್ದು ಆ ಮನೆಯ ಹೊಸಲಿಗೆ ಆ ನಿಂಬೆಹಣ್ಣು ಕುಂಕುಮ ಎಲ್ಲ ಇಟ್ಟು ಯಾರಿಗೂ ಕಾಣದಂತೆ ಬಂದ. ಹೀಗೆ ಎರಡುವಾರ ಸುಸೂತ್ರವಾಗಿ ಮುಗಿಸಿದ ಕೊಂಡ ಮೂರನೇ ನಿಂಬೆಹಣ್ಣು ಇಡಬೇಕು. ಕೇರಿಯ ಎಲ್ಲ ಜನ ಮೊದಲೇ ಮಾತಾಡಿಕೊಂಡಂತೆ ಕೊಂಡನನ್ನು ಹಿಡಿದು ಹಿಗ್ಗಾಮುಗ್ಗಾ ತದುಕಿ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟರು. ಅಷ್ಟೆ ಕೊಂಡನಿಗೆ ನೆನಪಿರೋದು... ಮುಂದೆ ನೋಡಿದರೆ ಕೊಂಡ ಮೆಗ್ಗಾನ್ ಆಸ್ಪತ್ರೆಯ ಹಾಸಿಗೆ ಮೇಲೆ ಇದ್ದ! ಅದಾಗಿ ಒಂದೆರಡು ದಿನ ಬಿಟ್ಟು ನಾವೆಲ್ಲ ಹೋಗಿ ಮಾತಾಡಿಸಿಕೊಂಡು ಬಂದೆವು. ಒದೆಗಳ ಬಗ್ಗೆ ಅವನಿಗೆ ಕಿಂಚಿತ್ತೂ ಬೇಜಾರು ಇರಲಿಲ್ಲ. “ತೂ ಇನ್ನೊಂದು ನಿಂಬೆಹಣ್ಣು ಕಣ್ರೊ.. ಮೂರನೇದು ಅದೊಂದು ಇಟ್ಟುಬಿಟ್ಟಿದ್ರೆ ನಂದಿಷ್ಟೊತ್ತಿಗಾಗ್ಲೆ ಮದ್ವೆ ಆಗಿರೋದು..” ಅಂತ ಒದ್ದಾಡುತ್ತಿದ್ದ.

ರಾತ್ರಿ ಮನೆಯವಳು ಮಟನ್ ಸಾರು ಮುದ್ದೆ ತಂದಿಟ್ಟಾಗ ಕೊಂಡ ನೆನಪಾದ ಮತ್ತೆ. ಹಲ್ಕ ನನ್ ಮಗ ಬಸ್ಸಿಳಿಯುವಾಗ ಒಂದ್ಮಾತು ಹೇಳ್ದಂಗೆ ಇಳಿದೋಗಿದ್ನಲ್ಲಾ... ಯಾವುದಾದ್ರು ಪೂಜಾರಿ ಯಾರ ಜೊತೆಗೂ ಮಾತಾಡ್ದಂಗೆ ಬಾ ಮದ್ವೆ ಆಗೋಂಗೆ ಕಟ್ಳೆ ಕಾಯಿ ಮಾಡ್ಕೊಡ್ತೀನಿ ಅಂತ ಏನಾರ ಹೇಳಿದ್ನೊ ಏನೊ.... ಈಗಲೂ ಮದುವೆ ಪ್ರಯತ್ನ ಬಿಟ್ಟಂಗಿಲ್ಲ ಕೊಂಡ. ಒಂದು ಮೂರು ತಿಂಗಳಿಂದೆ ಫೋನ್ ಮಾಡಿದ್ದನಲ್ಲ.

“ಲೇ ಮನು ನಿಮ್ಮನೆ ರೋಡಲ್ಲಿ ಒಂದು ಜ್ಯೂಸಿನಂಗಡಿ ಐತಲ್ಲೊ, ಆ ಅಂಗಡ್ಯಾಗೆ ಒಂದುಡುಗಿ ಕುಂತ್ಕಂತತಲ್ಲಾ ಅದು ಹೆಂಗೊ” ಅಂದಿದ್ದ.
“ಯಾಕೊ ಏನ್ವಿಷಯಾ...”
“ಏನಿಲ್ಲ... ಮೊನ್ನೆ ನ್ಯಾಮ್ತಿಗೆ ಯಾತುಕ್ಕೊ ಬಂದಿದ್ದೆ, ಆಕಿ ನೋಡಿ ನಮಸ್ಕಾರ ಸಾರ್ ಅಂದ್ಲು”
“ಆಕಿಯೆಂಗೆ ಪರಿಚಯನೊ”
“ಹೆ ನ್ಯಾಮ್ತಿ ಡಿಗ್ರಿ ಕಾಲೇಜ್ನಾಗೆ ಆಕಿ ನನ್ ಸ್ಟೂಡೆಂಟು, ಏನ್ ಮಾಡಿದ್ರು ಬಿಡ್ಲಿಲ್ಲ, ಒಳಗೆ ಕುಂದ್ರಿಸಿ ಜ್ಯೂಸ್ ಕೊಟ್ಳು”
“ಪಾಡಾತು, ಏನೊ ಮೇಷ್ಟ್ರಂತ ಮಾತಾಡಿಸಿರ್ತಾಳೆ....ಇವಗೇನೇಳು”
“ಲೇ ಮನು ಆಕಿಗೆ ನಾನಂದ್ರೆ ಭಾರಿ ಇಷ್ಟ ಅನ್ಸುತ್ತೆ... ಇಲ್ಲಂದ್ರೆ ಯಾಕೆ ಒಳಗೆ ಕರೆದು ಜ್ಯೂಸ್ ಕೊಡ್ತಿದ್ಲು...ಅವರಪ್ಪವ್ವಗೇಳಿ ನೀನು ಒಪ್ಸಕಾಗ್ತತಾ..”
“ಲೇ ಲೋಫರ್ ನನ್ಮಗನೆ, ಆಕಿ ನೋಡಿದ್ರೆ ಫಿಲ್ಮ ಸ್ಟಾರ್ ಇದ್ದಂಗೈದಾಳೆ, ನಿನ್ ವಯಸ್ಸೇನು ಆಕಿ ವಯಸ್ಸೇನು, ನೀನೇರ ಕರೆಕ್ಟ್ ವಯಸ್ಸಿಗೆ ಮದ್ವೆ ಆಗಿದ್ರೆ ನಿನಗೆ ಅಂತಳೊಬ್ಳು ಮಗಳು ಇರ್ತಿದ್ಲು ಕಣ್ಲಾ”
“ಅದೇನರ ಇರ್ಲಿ, ಒಂದ್ಮಾತು ಕೇಳಾಕೆ ನಿಂಗೇನು”
“ಅಪಾ ನಿಮ್ಮಂಥೋರ ಕಾಟುಕ್ಕೆ ಆಕೀನ ಫಸ್ಟ್ ಇಯರ್ಗೆ ಕಾಲೇಜು ಬಿಡ್ಸಿ ಮೊನ್ನೆ ಯಾರೊ ಸಾಫ್ಟ್ವೇರ್ ಇಂಜಿನಿಯರ್ ಜತೆ ಎಂಗೇಜ್ಮೆಂಟು ಮಾಡಿದ್ರು”
“ಹೌದಾ, ಆಕಿ ಅವತ್ತು ಏನು ಹೇಳ್ಲಿಲ್ಲ, ಮೋಸ್ಟ್ಲಿ ಆಕಿಗೆ ಅವ್ನು ಇಷ್ಟ ಇಲ್ಲ ಅಂತ ಕಾಣ್ಸುತ್ತೆ..”
“ ಅಪಾ ಅವರಿಬ್ರು ಒಂದ್ ವರ್ಷದಿಂದ ಲವ್ ಮಾಡ್ತಾ ಇದ್ರಂತೆ...”

ಆ ಹುಡುಗಿ ವಿಷಯಕ್ಕೆ ಫೋನ್ ಮಾಡಿದಾಗ ನ್ಯಾಮತಿ ಕಾಲೇಜು ಅಂದೋನು ಈಗ ಸೊರಬ ಕಾಲೇಜು ಅಂದನಲ್ಲ... ಯಾವನಿಗೊತ್ತು ಇವನ ಮರ್ಮ. ಅವನಿಗೆ ಫೋನ್ ಮಾಡೋಣ ಅನಿಸಿ ಮಾಡಿದ್ರೆ ಅವನ ನಂಬರ್ ಚಾಲ್ತಿಯಲ್ಲಿ ಇಲ್ಲ ಎಂದು ಫೋನ್ ಉಸುರಿತು.
ಮರೆತೆ ಹೋದ ಕೊಂಡ ಮತ್ತೆ ನೆನಪಾದಿದ್ದು ಅವನ ಸ್ಟೂಡೆಂಟು ಒಬ್ಬರು ಹೊಸದಾಗಿ ನಮ್ಮ ಕಾಲೇಜಿಗೆ ಕನ್ನಡ ಲೆಕ್ಚರರ್ ಆಗಿ ಅಪಾಯಿಂಟ್ ಆಗಿಬಂದಾಗ. ಅದುಇದು ಮಾತಾಡುತ್ತಾ ಕೊಂಡನ ವಿಷಯ ಬಂತು. ಅವರ ಪ್ರಕಾರ ಯಲ್ಲಪ್ಪ ಹಿಸ್ಟರಿ ಪಾಠ ತುಂಬಾ ರೋಚಕವಾಗಿ ಚೆನ್ನಾಗಿ ಮಾಡುತ್ತಿದ್ದನಂತೆ. ಕ್ಲಾಸ್ರೂಮಿನಲ್ಲಿ “ನನ್ನ ಸ್ಟೂಡೆಂಟುಗಳೆಲ್ಲ ಏನೆಲ್ಲ ಆಗಿದ್ದಾರೆ ಗೊತ್ತಾ... ಎಸಿ, ಡೀಸಿ...ಈಗಿರೊ ಹೊನ್ನಾಳಿ ಸರ್ಕಲ್ ಇನ್ಸ್ಪೆಕ್ಟರೂ ನನ್ ಸ್ಟೂಂಡೆಟ್ಟೇ... ಇವಾಗ ಫೋನ್ಮಾಡಿದ್ರು ‘ಏನ್ಸಾರ್’ ಅಂತ ಓಡಿ ಬರ್ತಾನೆ...” ಅಂತ ಹೇಳುತ್ತಿದ್ದನಂತೆ. ಒಮ್ಮೆ ಕಾಲೇಜಿನಲ್ಲಿ ಯಾವುದೊ ಕಾರಣಕ್ಕೆ ಜಗಳವಾಗಿ ಪೋಲಿ ಹುಡುಗರೆಲ್ಲ ಕಾಲೇಜಿಗೆ ನುಗ್ಗಿ ಧ್ವಂಸ ಮಾಡುವಾಗ ಸ್ಟೂಡೆಂಟೆಲ್ಲ ಯಲ್ಲಪ್ಪನ ಹತ್ತಿರಹೋಗಿ “ಸಾರ್ ನಿಮ್ಮ ಸ್ಟೂಡೆಂಟು ಸರ್ಕಲ್ ಇನ್ಸ್ಪೆಕ್ಟರ್ರಿಗೆ ಫೋನ್ ಮಾಡ್ರಿ” ಅಂದರೆ “ಹೆ ಹೀಗಿರೋನು ನನ್ ಸ್ಟೂಡೆಂಟ್ಟಲ್ಲ... ಅವ್ನು ಬೇರೆಕಡೆ ಟ್ರಾನ್ಸಫರ್ ಆಗಿ ಹೋಗಿದ್ದಾನೆ” ಅಂದು ಅಲ್ಲಿಂದ ಕಾಲ್ಕಿತ್ತನಂತೆ.

ಕೊಂಡ ಬಸ್ಸಿನಲ್ಲಿ ಸಿಕ್ಕು ನಾಕೈದು ತಿಂಗಳಾಗಿತ್ತು. ಕುದುರೆಕೊಂಡದ ಕೊಂಡನ ಸಂಬಂಧಿಕನೊಬ್ಬ ತನ್ನ ಮಗಳನ್ನು ನಮ್ಮ ಜೀನಳ್ಳಿ ಕಾಲೇಜಿಗೆ ಪಿಯುಸಿಗೆ ಸೇರಿಸಲು ಬಂದಿದ್ದ. ಕುದುರೆಕೊಂಡ ಅಂದಿದ್ದೆ ನಾನು ಕೊಂಡನ ಬಗ್ಗೆ ಕೇಳಿದೆ.

“ಅವನ್ದೇನು ಕೇಳ್ತೀರಿ ಸಾರ್, ಅವ್ನು ಊರ್ಬಿಟ್ಟೋಗಿ ನಾಕೈದು ತಿಂಗಳಾಯ್ತು... ಎಲ್ಲೂ ಪತ್ತೆ ಇಲ್ಲ...ಪಾಪ ರಂಡ್ಮುಂಡೆ ಹೆಂಗ್ಸು ಅವರವ್ವ ಅದೊಂದೇ ಊರಾಗೆ ಕೂಲಿ ಮಾಡ್ಕಂದು ತಿಂತೈತಿ..” ಅಂತ ಒಂದು ದೊಡ್ಡ ಕಥೆನೆ ಹೇಳಿದ-
ಕೊಂಡನಿಗೆ ಇದ್ದುದ್ದು ಐದೆಕರೆ ಹೊಲ ಅಲ್ಲ, ಒಂದೆಕರೆ. ಅವನ ದೊಡ್ಡಪ್ಪ ಚಿಕ್ಕಪ್ಪರದ್ದೆಲ್ಲ ಸೇರಿಸಿ ಜನಗಳ ಹತ್ತಿರ ಕೊಂಡ ಐದೆಕರೆ ಅಂತ ಹೇಳಿಕೊಳ್ಳುತ್ತಿದ್ದ. ಎಲ್ಐಸಿ ಏಜೆಂಟ್ರು ಕೊಂಡನ ಹೆಸರಿಗೆ ಪಾಲಿಸಿ ಮಾಡಿಸುವಾಗ ಅವರೆ ತಮ್ಮ ಕೈಯಿಂದ ಮೊದಲೆರಡು ಕಂತು ಕಟ್ಟಿರೋದು ಬಿಟ್ಟರೆ ಮುಂದೆ ಕೊಂಡ ಯಾವ ಎಲ್ಐಸಿಯ ಪ್ರೀಮಿಯಮ್ಮನ್ನು ಕಟ್ಟಿ ಮುಂದುವರೆಸಿರಲಿಲ್ಲ. ಕೊಂಡನಿಗೆ ಈ ನಡುವೆ ನ್ಯಾಮತಿಯ ಚೀಟಿ ಸ್ವಾಮೆಣ್ಣ ಹತ್ತಿರವಾಗಿದ್ದ. ಅವನೊ ತಿಂಗಳಿಗೆ ಹತ್ತಾರು ಚೀಟಿ ನಡೆಸುತ್ತಿದ್ದ. ತಿಂಗಳಿಗೆ ಐದು ಪರ್ಸೆಂಟು ಬಡ್ಡಿ ಕೊಡುತ್ತಿದ್ದ ಅವನ ಹತ್ತಿರ ದುಡ್ಡು ಇಟ್ಟವರಿಗೆ. ‘ತುಂಬಾ ನಿಯತ್ತಾಗಿ ಸ್ವಾಮೆಣ್ಣ ಬಡ್ಡಿ ಕೊಡ್ತತಿ’ ಎಂದು ಫೇಮಸ್ ಆಗಿದ್ದ. ಬ್ಯಾಂಕ್ನಲ್ಲೂ ಇಡದೆ ಜನ ಇವನ ಹತ್ತಿರ ದುಡ್ಡು ಇಡುತ್ತಿದ್ದರು. ಕೊಂಡ ಅವರವ್ವನಿಗೆ ಇನ್ನೊಂದು ಸ್ವಲ್ಪ ದಿನದೊಳಗೆ ಚಿನ್ನದ ಮೈನಿಂಗ್ ನಮ್ಮ ಕುದುರೆಕೊಂಡದಲ್ಲಿ ಶುರುವಾಗುತ್ತೆ, ಆಗ ಸರ್ಕಾರದವರು ನಮ್ಮ ಹೊಲವನ್ನು ವಶಪಡಿಸಿಕೊಳ್ಳುತ್ತಾರೆ ಕಡಿಮೆ ದುಡ್ಡಿಗೆ. ನಾವು ಈಗ ಮಾರಿದರೆ ಅದರ ಹತ್ತುಪಟ್ಟು ದುಡ್ಡು ಬರುತ್ತೆ, ಅದನ್ನ ಬಡ್ಡಿಗೆ ದುಡಿಸಿ ಬಂದ ದುಡ್ಡಿಂದ ಬೇರೆಕಡೆ ಮೂರೆಕರೆ ಹೊಲ ತಗಂಬೋದು, ನನ್ನ ಮಾತು ಕೇಳು ಎಂದೆಲ್ಲ ಪುಸಲಾಯಿಸಿ ಹದೆನೆಂಟು ಲಕ್ಷಕ್ಕೆ ಒಂದೆಕೆರೆ ಹೊಲ ಮಾರಿಸಿದ್ದ. ಸೆಕೆಂಡ್ ಹ್ಯಾಂಡ್ ಬೈಕು ಟೀವಿ ಮೊಬೈಲು ಮನೆರಿಪೇರಿ ಬಟ್ಟೆಬರೆ ಇನ್ಯಾವುವುದಕ್ಕೊ ಸೇರಿ ಮರ್ನಾಕು ಲಕ್ಷ ಖರ್ಚು ಮಾಡಿ ಉಳಿದ ಹಣವನ್ನು ಸ್ವಾಮೆಣ್ಣನಿಗೆ ಬಡ್ಡಿಗೆಂದು ಕೊಟ್ಟಿದ್ದ. ಅವನು ಕೊಟ್ಟು ಸ್ವಲ್ಪ ದಿನಕ್ಕೇ ಸ್ವಾಮೆಣ್ಣ ಅದೆಷ್ಟೊ ಜನರ ಅದೆಷ್ಟೊ ಗಂಟು ಹಾಕಿಕೊಂಡು ಊರುಬಿಟ್ಟಿದ್ದ!

ಕೊಂಡನ ನೆನಪಿನಲ್ಲೇ ಅವತ್ತು ಮಲಗಿದೆ.... ಎದುರಿಗೆ ರೂಪಾ! ಕಣ್ಣಲ್ಲೆ ಏನೇನೊ ಕೇಳುತ್ತಿದ್ದಾಳೆ. “ಲೇ ಮನೂ, ನಾನು ಯಲ್ಲಪ್ಪನನ್ನು ಮದುವೆ ಆಗುತ್ತೇನೆ ಎಂದು ಅವತ್ತು ಹೇಳಿದಾಗ ನೀನೇಕೆ ಬೇಡವೆಂದೆ ಎಂಬುದು ನನಗೆ ಗೊತ್ತಿಲ್ಲ ಅಂತ ತಿಳಿದಿದ್ದೀಯಾ... ಮಕ್ಕಳಾಗಲಿಲ್ಲಂತಾನೇ ಕುಡಿಕುಡಿದು ನನ್ನ ಗಂಡ ಸತ್ತ ದಿನ ನೀನು ಅಷ್ಟೆಲ್ಲ ಓಡಾಡಿ ಮಾಡಿದ್ದು ನೋಡಿ ನಿನ್ನನ್ನು ನಾನು ಅಣ್ಣ ಅಂತನೇ ಅಂದುಕೊಂಡಿದ್ದೆ.... ಆದರೆ ನೀನು ಅಂದುಕೊಂಡಿದ್ದು.... ನಾವೆಲ್ಲಾ ಹೈಸ್ಕೂಲಿಂದಲೂ ಫ್ರೆಂಡ್ಸ್ ತಾನೆ... ಆ ಪವಿತ್ರ ಬಾಂಧವ್ಯವನ್ನೂ ಮರೆತುಬಿಟ್ಟೆಯೆಲ್ಲಾ ನೀನು... ಗಂಡಸತ್ತ ನಾನು ಯಲ್ಲಪ್ಪನನ್ನು ಮದುವೆ ಆಗುತ್ತೇನೆ ಅಂದಿದ್ದು ಬೇರೆ ಯಾವುದೇ ಮೋಹದಿಂದಲ್ಲ. ಪಾಪ ಯಲ್ಲಪ್ಪ ಮುಗ್ಧ, ಅವನಿಗೆ ಕೆಲಸ ಇರಲಿಲ್ಲ. ನನಗಾದರೊ ಟ್ರಜುರಿಯಲ್ಲಿ ಗೋರ್ಮೆಂಟ್ ಕ್ಲರ್ಕ್ ಕೆಲಸ....ಅವನಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ, ಮದುವೆ ವಯಸ್ಸು ಅದಾಗಲೆ ಮೀರಿಹೋಗಿತ್ತು. ಬದುಕು ಒಂದು ದಡ ಸೇರಬಹುದೇನೊ ಈ ಮದುವೆಯಿಂದ ಅಂತ ಯೋಚಿಸಿದ್ದೆ. ಪಾಪ ಯಲ್ಲಪ್ಪ ಸಿಕ್ಕಾಗೆಲ್ಲ ನಿನ್ನನ್ನು ಎಷ್ಟು ಅಭಿಮಾನದಿಂದ ಹೊಗಳುತ್ತಿದ್ದ. ಆದರೆ ನೀನು ಅವನೊಬ್ಬ ತೆಪರ, ಪೆಕರ, ಕುದುರೆಕೊಂಡದ ಕತ್ತೆಕೊಂಡ ಅಂತೆಲ್ಲ ಹೀಗಳೆಯುತ್ತಿದ್ದೆ. ನಾನೇ ಅವನನ್ನು ನೇರವಾಗಿ ಕೇಳಬಹುದಿತ್ತೇನೊ... ಆದರೆ ನಿನ್ನ ನಯವಾದ ವ್ಯಕ್ತಿತ್ವದಲ್ಲಿ ನಿನ್ನ ಇನ್ನೊಂದು ಮುಖ ಕಂಡು ಆಘಾತವಾಗಿತ್ತು, ಜೀವನೋತ್ಸಾಹ ಹಿಂಗಿಹೋಗಿತ್ತು... ಹೊರಗೆ ನಿನೆಷ್ಟು ಒಳ್ಳೆಯವನು... ತುಂಬಾ ಸೈಲೆಂಟು, ಆದರೆ ಒಳಗೆ...

ಥಟ್ಟನೆ ಎದ್ದುಕೂತೆ. ಜಲಜಲ ಬೆವೆತಿದ್ದೆ. ಪಕ್ಕದಲ್ಲಿ ಹೆಂಡತಿ ನಿದ್ದೆಹೋಗಿದ್ದಳು. ಹಾಲಿಗೆ ಬಂದು ಆರಾಮು ಚೇರಿನಲ್ಲಿ ಕೂತೆ. ಅಲ್ಲೆ ಇದ್ದ ನೀರನ್ನು ಕುಡಿದೆ. ನಿದ್ದೆಯೇ ಬರಲಿಲ್ಲ ಎಷ್ಟೊ ಹೊತ್ತಿನತನಕ. ನಿದ್ದೆಬಂದಾಗ, ಮುಂದೆ ನೀರಿನ ಜಗ್ಗಿರಲಿಲ್ಲ, ಅಲ್ಲಿ ತೆಂಗಿನಕಾಯೊಂದು “ಬಾ ಎಳನೀರು ಕುಡಿ ಬಾ...ಅಲ್ಲಲ್ಲ ಮೂತ್ರ ಕುಡಿ ಬಾ..” ಅಂದಿತು. ಕೊಂಡ ಅದೆಲ್ಲಿದ್ದನೋ ಓಡಿಬಂದು “ಎಳನೀರು ನಂದು, ಯಾರಿಗೂ ಕೊಡಲ್ಲ” ಅಂದವನೆ ಅದನ್ನೆತ್ತಿಕೊಂಡು ಓಡಲು ಶುರುಮಾಡಿದ. ಅವನು ಓಡುತ್ತಿದ್ದಂತೆ ಎಲ್ಲರೂ ರೂಪಾ ಮಗಳು ಹೆಂಡತಿ ಎಲ್ಲ ನನ್ನ ಕಂಡು ಭಯಬಿದ್ದವರಂತೆ ಒಂದೊಂದು ದಿಕ್ಕಿಗೆ ಓಡಿದರು... ನನ್ನನ್ನು ಒಬ್ಬನ್ನೇ ಬಿಟ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.