ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಕೆ. ಗಂಗಾಧರನ್‌ ಅವರ ಕಥೆ: ನಾಳೆ ಪುರಭವನದಲ್ಲಿ ಕನಸಿನ ಸಂತೆ

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ತಾಯಿ ತೀರಿಕೊಂಡ ನಂತರ ಜೀವನ ಸಾಗಿಸುವುದರಲ್ಲಿ ಅಪ್ಪನಿಗೆ ಆಸಕ್ತಿ ಇರಲಿಲ್ಲ. ಸುಮಾರು ಇಪ್ಪತ್ನಾಲ್ಕು ವರ್ಷಗಳ ಕಾಲ ಅಮ್ಮನೊಂದಿಗೆ ಕಳೆದ ಮನೆಯ ಮಧುರ ನೆನಪುಗಳು ಪ್ರತಿ ನಿಮಿಷದಲ್ಲೂ ನಮ್ಮನ್ನೆಲ್ಲ ಕಾಡುತ್ತಲೇ ಇತ್ತು. ಅಮ್ಮನ ಮಂಚ, ನಿಲುವುಗನ್ನಡಿ, ಪೂಜಾವಿಗ್ರಹಗಳೆಲ್ಲವೂ ಕಣ್ಣಿಗೆ ಬೀಳುವಾಗಲೆಲ್ಲ ಅದೃಶ್ಯ ಕರಗಳು ಹಿಂದಕ್ಕೆ ಎಳೆಯುವಂತೆ ಅನುಭವವಾಗುತ್ತದೆಯೆಂದು ಅಪ್ಪ ಒಮ್ಮೆ ಹೇಳಿದ್ದರು. ಅದೃಶ್ಯಳಾಗಿ ಬಾಳಿದ ಪತ್ನಿ ತನ್ನನ್ನು ಬಲಹೀನನಾಗುವಂತೆ ಮಾಡುತ್ತಿದ್ದಳೆಂದು ಅವರು ಹೇಳಿದ್ದರು.
ಕೊನೆಗೆ, ನಾಗರಿಕತೆಯೇ ಸೋಂಕದ ಒಂದು ಹಳ್ಳಿಗೆ ನಾವು ನಮ್ಮ ನಿವಾಸವನ್ನು ಬದಲಾಯಿಸಿದೆವು. ನಾನು ಇಂಗ್ಲಿಷ್‌ ಐಚ್ಛಿಕವನ್ನಾಗಿ ತೆಗೆದುಕೊಂಡು ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದೆ. ನನ್ನ ಭವಿಷ್ಯದ ಕುರಿತು ಅಪ್ಪನಿಗೆ ಸ್ಪಷ್ಟವಾದ ನಿಲುವಿತ್ತು. ಒಬ್ಬ ಡಾಕ್ಟರ್ ನ್ನು ಕಂಡು ಹಿಡಿದು ಅವರಿಗೆ ನನ್ನನ್ನು ಮದುವೆ ಮಾಡಿಕೊಡಲು ಇಚ್ಛಿಸಿದ್ದರು. ಹಳ್ಳಿಗೆ ವಧುವನ್ನು ಹುಡುಕಿಕೊಂಡು ಡಾಕ್ಟರ್‌ಗಳು ಬರುತ್ತಾರೆಯೇ ಎಂದು ಕೆಲವು ಮಿತ್ರರು ಅನುಮಾನ ವ್ಯಕ್ತಪಡಿಸಿದ್ದರು. ಅದನ್ನು ಕೇಳಿ ಅಪ್ಪ ಗಟ್ಟಿಯಾಗಿ ನಕ್ಕುಬಿಟ್ಟರು.
"ಅಂತಹ ಯುವಕನನ್ನು ಭೇಟಿಯಾದರೆ ನೀವೆಲ್ಲರೂ ಸೇರಿ ಆತನನ್ನು ನನ್ನ ಬಳಿ ಕರೆದುಕೊಂಡು ಬರುತ್ತೀರೆಂದು ನನಗೆ ಖಚಿತವಾಗಿ ಗೊತ್ತಿದೆ" ಎಂದು ಅಪ್ಪ ಹೇಳಿದರು.
ಪಟ್ಟಣವಾಗಿ ಬೆಳೆಯುತ್ತಿರುವ ಒಂದು ಹಳ್ಳಿಯಲ್ಲಿ ನಾವು ನಮ್ಮ ನಿವಾಸವನ್ನು ಬದಲಿಸಿದೆವು. ಆ ಗ್ರಾಮದ ಆಯಕಟ್ಟಿನಲ್ಲಿ ಪ್ರಶಸ್ತವಾದ ಒಂದು ದೇಗುಲವಿತ್ತು. ಊರಿನ ಸಂಪತ್ ವ್ಯವಸ್ಥೆ ಆ ದೇಗುಲವನ್ನು ಅವಲಂಬಿಸಿತ್ತು. ದೇಗುಲದ ಮೆಟ್ಟಿಲಿನ ಸುತ್ತ ಕಲ್ಯಾಣಿ, ದೇಗುಲದಲ್ಲಿ ಕೆಲಸ ಮಾಡುವವರ ಪುಟ್ಟ ಪುಟ್ಟ ಮನೆಗಳು, ತೀರ್ಥಯಾತ್ರೆಗೆ ಬರುವವರಿಗೆ ಆಹಾರ ಸಿದ್ಧಗೊಳಿಸುವ ಪಾಕಶಾಲೆಗಳು, ಗಾಜಿನ ಬಳೆ, ಸಿಂಧೂರ ಮುಂತಾದವುಗಳನ್ನು ಮಾರುವ ಅಂಗಡಿಗಳು, ಹಲವಾರು ಆಹಾರ ಪದಾರ್ಥಗಳನ್ನು ಮಾರುವ ಅಂಗಡಿಗಳು ಹೂವಿನ ಅಂಗಡಿಗಳು...ಹಾಗೆ ಅಲ್ಲಿ ಹಲವಾರು ವ್ಯವಹಾರ ವಹಿವಾಟುಗಳಿದ್ದವು. ದೇಗುಲದ ಹಿಂಬದಿಯಲ್ಲಿ ಸಿದ್ದ ವೈದ್ಯರ, ಮರ್ಮ ವೈದ್ಯರ ದವಾಖಾನೆಯ ಫಲಕಗಳು ಪ್ರದರ್ಶಿಸುವ ಕಟ್ಟಡಗಳೂ ಇದ್ದವು. ಆಲದ ಮರದ ರೆಂಬೆಯಲ್ಲಿ ಕಾಗೆಗಳಲ್ಲದೆ ಹದ್ದುಗಳೂ ವಿಶ್ರಮಿಸುತ್ತಿದ್ದವು. ನಾವು ಉಳಿದುಕೊಳ್ಳುವುದಕ್ಕಾಗಿ ಒಂದು ಹೊಸಕಟ್ಟಡ ಬಾಡಿಗೆಗೆ ಕೊಟ್ಟಿದ್ದು ಆ ಊರಿನ ಪ್ರಮುಖ ಜಮೀನ್ದಾರ. ಆತನ ಏಕೈಕ ಪುತ್ರಿಯಾದ ಹಿರಣ್ಮಯಿಯನ್ನು ನಾನು ಗೆಳತಿಯನ್ನಾಗಿ ಸ್ವೀಕರಿಸಿದೆ.
ಅವಳು ಅಸಾಮಾನ್ಯ ಸೌಂದರ್ಯದ ಒಡತಿಯಾಗಿದ್ದಳು. ಮದುವೆಯಾಗಿ ಗಂಡ ದುಬಾಯಿಯಲ್ಲಿ ಇಂಜಿನಿಯರ್ ಆಗಿದ್ದ. ವರ್ಷದಲ್ಲಿ ಒಂದು ತಿಂಗಳು ರಜೆ ಪಡೆದು ಹೆಂಡತಿಯೊಂದಿಗಿರುತ್ತಿದ್ದ.
ಇಪ್ಪತ್ನಾಲ್ಕು ಕ್ಯಾರಟ್ಟಿನ ಅಪ್ಪಟ ಅಪರಂಜಿಯ ಬಣ್ಣ ಹಿರಣ್ಮಯಿಯದ್ದು. ಬಣ್ಣ ನೋಡಿಯೇನು ಅಪ್ಪ ಅಮ್ಮ ಅವಳಿಗೆ ಆ ಹೆಸರು ಇಟ್ಟಿದ್ದೆಂದು ನಾನು ಅವಳನ್ನು ಕೇಳಿದೆ. ತನ್ನ ತಂದೆ ಕಲ್ಕತ್ತಾದಲ್ಲಿ ಬಹಳಕಾಲ ವಾಸವಾಗಿದ್ದರೆಂದೂ ಬಂಗಾಳಿ ಕಾದಂಬರಿಯೊಂದರ ಕಥಾನಾಯಕಿಯ ಹೆಸರನ್ನು ತನಗೆ ಅವರು ಆಯ್ಕೆ ಮಾಡಿದ್ದರೆಂದೂ ಅವಳು ಹೇಳಿದಳು.


ನಗರದಲ್ಲಿರುವ ಸುಂದರಿಯರನ್ನು ಮಾತ್ರ ಕಂಡು ರೂಢಿಯಾಗಿದ್ದ ನನಗೆ ಹಿರಣ್ಮಯಿ ಒಂದು ಅದ್ಭುತದಂತೆ ತೋರಿದಳು. ಮುಖಕ್ಕೆ ಪೌಡರನ್ನಾಗಲೀ ಅಥವಾ ಬೇರೆ ಸೌಂದರ್ಯ ಲೇಪನವನ್ನಾಗಲೀ ಅವಳು ಹಚ್ಚುತ್ತಿರಲಿಲ್ಲ. ಆದರೂ ಅವಳ ಚರ್ಮ ರೇಷ್ಮೆಯಂತೆ ಹೊಳೆಯುತ್ತಿತ್ತು. ಉದ್ದನೆಯ ಹುಬ್ಬುಗಳಿರುವ ಕಣ್ಣುಗಳು ಆಳವಿಲ್ಲದ ಮಡುವನ್ನು ಜ್ಞಾಪಿಸುತ್ತಿತ್ತು. ಅವಳ ನಡಿಗೆಗೆ ನೃತ್ಯದ ಸೌಂದರ್ಯವಿತ್ತು. ನಾನೊಬ್ಬ ಯುವಕನಾಗಿದ್ದಿದ್ದರೆ ಮೊದಲ ನೋಟದಲ್ಲಿಯೇ ನಾನು ಅವಳಲ್ಲಿ ಅನುರುಕ್ತಳಾಗಿಬಿಡುತ್ತಿದ್ದೆ.
"ಹಿರಣ್ಮಯಿ ನಿನಗೆ ಒಳ್ಳೆಯ ಗೆಳತಿಯಾಗಬಲ್ಲಳು" ಅಪ್ಪ ಹೇಳಿದ್ದರು. ನಾವು ಸಮವಯಸ್ಕರೆನ್ನುವುದೇನೋ ನಿಜ. ಆದರೆ ನಮ್ಮಿಬ್ಬರ ಅಭಿರುಚಿಗಳು ಭಿನ್ನವಾಗಿದ್ದವು. ಅವಳು ಓದನ್ನು ನಿಲ್ಲಿಸಿ ಕೆಲಸವಿಲ್ಲದೆ ಸೋಮಾರಿಯಾಗಿ ಕಾಲ ಕಳೆಯುತ್ತಿದ್ದಳು. ನಾನು ಪುರಾಣ ಸಾಹಿತ್ಯವನ್ನು ಓದಿ ಅವುಗಳಲ್ಲಿ ಬರುವ ಕಥಾಪಾತ್ರಗಳೊಂದಿಗೆ ಸಂಕಲ್ಪಿತ ಚರ್ಚೆಗಳಲ್ಲಿ ತಲ್ಲೀನಳಾಗುತ್ತಿದ್ದೆ. ನಾನು ಓದಿದ ಪುಸ್ತಕದ ಕಥೆಗಳನ್ನು ನಾನು ಅವಳಿಗೆ ಹೇಳಿಕೊಡುತ್ತಿದ್ದೆ.


ಸಂಜೆಯಾಗುತ್ತಿದ್ದಂತೆಯೇ ನಾವು ಕೈ ಕೈ ಹಿಡಿದು ಸಮುದ್ರ ಕಿನಾರೆಯಲ್ಲಿ, ಗದ್ದೆ ಬಯಲುಗಳಲ್ಲಿ, ದೇವಸ್ಥಾನದ ಸುತ್ತಮುತ್ತಲೂ ನಡೆದಾಡುತ್ತಿದ್ದೆವು. ನಮ್ಮ ಸಂಭಾಷಣೆಗೆ ಹಿನ್ನೆಲೆ ಸಂಗೀತದಂತೆ ಚೆಂಡೆ ಮೇಳ ಎದ್ದು ಬಂತು. ಶಂಬೋಲಿ, ಮದುಬೋವರಿಯ, ಅನ್ನ ಕರಿನೀನಯ ದುರಂತ ಕಥೆಗಳು ಹಿರಣ್ಮಯಿಯನ್ನು ಅಳಿಸಿತು. ವ್ಯಭಿಚಾರದ ಭೀಕರ ಮನೋಹರಿತೆ ಮತ್ತು ರೊಮಾನ್ಸ್ ಅವಳು ಬಹುಶಃ ನನ್ನಿಂದಲೇ ಅರ್ಥ ಮಾಡಿಕೊಂಡಿರಬೇಕು. ಅವಳ ಚಿಂತನೆಯ ಗತಿಯನ್ನು ಬದಲಾಯಿಸಿದ್ದು ನಾನೇ ಆಗಿರಬೇಕು. ಅದರಲ್ಲಿ ನನಗೆ ದುಃಖವಿದೆ.


ಈ ನಡುವೆ ಊರಿಗೆ ಸರ್ಕಸ್ ಕಂಪನಿಯೊಂದು ಬಂದು ಠಿಕಾಣಿ ಹೂಡಿತು. ದೇವಸ್ಥಾನದ ಪ್ರದೇಶ ಸುಮಾರು ಹತ್ತು ಎಕರೆ ದೊಡ್ಡದಾಗಿತ್ತು. ಅದರ ಉತ್ತರದ ಅಂಚಿನಲ್ಲಿ ಸರ್ಕಸಿನವರು ಡೇರೆ ಹಾಕಿದರು. ಪ್ರಾಣಿಗಳ ಬೋನುಗಳನ್ನು ಕೆಳಗಿಳಿಸಿಟ್ಟರು. ಅಲ್ಲಲ್ಲಾಗಿ ಟೆಂಟ್ ಗಳನ್ನು ಕಟ್ಟಿದರು. ಸಾವಿನ ಬಾವಿಯನ್ನು ನೆಲದಲ್ಲಿ ಆಳದಲ್ಲಿ ಇಳಿಸಿ ಭದ್ರಗೊಳಿಸಿದರು.


ಟೆಂಟಿನ ಮುಂದೆ ಹಗ್ಗದ ಮಂಚಗಳಲ್ಲಿ ಅಂಗಾತ ಮಲಗಿ ಸರ್ಕಸ್ ನವರು ನಿದ್ರಿಸಿದರು. ಕೆಲವರು ಗೊರಕೆ ಹೊಡೆಯುತ್ತಾ ಮಲಗಿದರು. ಉಯ್ಯಾಲೆಯಾಡುವ ಹೆಣ್ಣುಮಕ್ಕಳು ಜೋಡಿಗಳಾಗಿ ಟೆಂಟಿನಲ್ಲಿ ಮಲಗಿದರು. ಅವರು ಗಾಢವಾಗಿ ತಬ್ಬಿ ಹಿಡಿದು ಮಲಗಿದರು. ಬಫೂನ್ ಗಳು ಶೀತವಾದವರಂತೆ ಗಟ್ಟಿಯಾಗಿ ಗೊರಕೆ ಬಿಡತೊಡಗಿದರು. ಜನರನ್ನು ನಗಿಸಲು ಅವರು ತಮ್ಮ ಧ್ವನಿಯನ್ನು ವಿಕಲವಾಗಿ ಮಾಡಿದ್ದರು. ಆ ವೈಕಲ್ಯ ನಿದ್ರೆ ಮಾಡುವಾಗ ಸ್ಪಷ್ಟವಾಗಿ ತಿಳಿಯುತ್ತಿತ್ತು. ಕ್ಲೌನುಗಳು ಮೂರು ಅಡಿ ಎತ್ತರ ಮಾತ್ರವಿರಬೇಕು.
ನಾವು ಮೊದಲು ಅಲ್ಲಿಗೆ ಹೋಗಿದ್ದು ಮಧ್ಯಾಹ್ನದ ನಂತರ. ಸಮಯ ಬಹುತೇಕ ಮೂರು ಗಂಟೆಯಾಗಿರಬೇಕು. ದೇಗುಲದ ಸುತ್ತಲಿರುವ ಹೂವಿನ ಮರದ ಕೆಳಗೆ ಕಪ್ಪು ಲುಂಗಿ ಮಾತ್ರ ಧರಿಸಿ ದೇಹದ ಬಲಿಷ್ಠವಾದ ಭಾಗಗಳನ್ನು ಪ್ರದರ್ಶಿಸುತ್ತಾ ಒಬ್ಬಾತ ನಿಂತಿದ್ದ. ಎಣ್ಣೆಯಲ್ಲಿ ಅದ್ದಿದ ಹತ್ತಿಯ ತುಣುಕುಗಳಿಂದ ತನ್ನ ಚಾಟಿ ಹಗ್ಗವನ್ನು ನಯಗೊಳಿಸುತ್ತಿದ್ದ. ಅವನ ಕಣ್ಣುಗಳು ನಮ್ಮನ್ನೇ ಹಿಂಭಾಲಿಸುತ್ತಿವೆಯೆಂದು ನನಗನ್ನಿಸಿತು. ಮುಂದಕ್ಕೆ ಕಾಲೆತ್ತಿ ಇಡುವಾಗ ನನ್ನ ಭುಜದ ಮೇಲೆ ಕೈಯಿಟ್ಟು ಯಾರೋ ಹಿಂದಕ್ಕೆಳೆಯುವಂತೆ ಭಾಸವಾಯಿತು. ಹಿಂತಿರುಗಿ ನೋಡಿದಾಗ, ಆ ಕಣ್ಣುಗಳು ನನ್ನ ದೇಹವನ್ನು ಕೊರೆದು ನುಗ್ಗುತ್ತಿದ್ದವು.
"ಆ ನೋಟ ಕಂಡೆಯಾ? ನಮ್ಮನ್ನು ಕಚ್ಚಿ ತಿನ್ನುವಂತೆ ತೋರುತ್ತದೆ. ಇಲ್ವಾ?" ನಾನು ಹಿರಣ್ಮಯಿಯನ್ನು ಕೇಳಿದೆ.
"ನೀನೇಕೆ ಈ ಬಡಪಾಯಿಗಳಿಗೆ ಹೆದರ್ತೀಯಾ? ನಾನು ಸರ್ಕಸ್ಸಿನವರಿಗಾಗಲೀ ಅದರಲ್ಲಿರುವ ಪ್ರಾಣಿಗಳಿಗಾಗಲೀ ಹೆದರೋಲ್ಲ." ಹಿರಣ್ಮಯಿ ಯಾವ ಎಗ್ಗೂ ಇಲ್ಲದೆ ಹೇಳಿದಳು. ಅವಳ ಮಾತುಗಳನ್ನು ಚಡಿಯೇಟಿನ ಸರ್ಕಸ್ಸಿನವನು ಕೇಳಿಸಿಕೊಂಡ. ಅವನು ಗಟ್ಟಿಯಾಗಿ ನಕ್ಕು ಬಿಟ್ಟ.
ಬಹುತೇಕ ಕಮಲಹಾಸನ್ ಎಂಬ ನಟನನ್ನು ಹೋಲುವ ಒಬ್ಬ ಯುವಕ ಹಗ್ಗದ ಮಂಚದ ಮೇಲೆ ಕಪ್ಪು ಸಾಕ್ಸನ್ನು ಮಾತ್ರ ಧರಿಸಿ ಮಲಗಿದ್ದ. ಅವನ ಗುಂಗುರು ಕೂದಲನ್ನು ಉಬ್ಬಿದ ಕೆನ್ನೆಗಳನ್ನು ಗಮನಿಸದೇ ಇರಲು ನನಗೆ ಸಾಧ್ಯವಾಗಲಿಲ್ಲ. ಹಿರಣ್ಮಯಿ ಅದ್ಭುತ ಸ್ತಬ್ಧಳಾಗಿ ಆ ಯುವಕನನ್ನು ನಿರೀಕ್ಷಿಸಿದಳು. ಅವಳು ಅವನ ಮಂಚದ ಸಮೀಪ ನಿಶ್ಚಲಳಾಗಿ ನಿಂತಿದ್ದನ್ನು ಚಾಟಿ ಹಗ್ಗದವನು ನೋಡಿದ. ದಿಢೀರನೆ ಆತ ತನ್ನ ಚಾಟಿಯನ್ನು ಗಾಳಿಯಲ್ಲಿ ಬೀಸಿ ಸದ್ದು ಮಾಡಿದ. ಅದು ಹಾವಿನಂತೆ ನೆಲದ ಮೇಲೆ ತೆವಳಿತು. ಅದು ಮಣ್ಣಿನಲ್ಲಿ ಹೊರಳಾಡಿತು. ನನಗೆ ಭಯವೆನಿಸಿತು.
"ಹಿರಣ್ಮಯಿ ಬೇಗ ನಡಿ....ನನಗೆ ಭಯವಾಗ್ತಾ ಇದೆ." ನಾನು ಹಿರಣ್ಮಯಿಗೆ ಹೇಳಿದೆ. ಅವಳು ತನ್ನ ಸೀರೆಗೆ ಮಣ್ಣು ಮೆತ್ತದಿರಲು ಸೀರೆಯ ಮಡಿಕೆಗಳನ್ನು ಮೇಲಕ್ಕೆ ಎತ್ತಿ ಹಿಡಿದುಕೊಂಡು ನನ್ನನ್ನು ಹಿಂಭಾಲಿಸಿದಳು. ಕಾಲುಚೈನು ಧರಿಸಿದ ಪಾದುಕೆಗಳಿಗೆ ಆಗಲೇ ಮಣ್ಣು ಮೆತ್ತಿದ್ದವು-ಕಟ್ಟಿದ ತಲೆಗೂದಲು ಹೇಗೋ ಬಿಚ್ಚಿದಂತೆ ಕಾಣಲ್ಪಟ್ಟಿತು. ಕೆನ್ನೆಗಳು ಮತ್ತಷ್ಟು ಊದಿಕೊಂಡವು.
"ನಿನಗೇನಾಯಿತು ಹಿರಣ್ಮಯಿ?" ನಾನು ಕೇಳಿದೆ.
"ಏನೂ ಆಗಿಲ್ಲವಲ್ಲ..?" ಹಿರಣ್ಮಯಿ ಪಿಸುಗುಟ್ಟಿದಳು.
"ವೃಂದಾವನದ ಕೃಷ್ಣನನ್ನು ಸಂದರ್ಶಿಸಿ ಬರುವ ರಾಧಾಳಂತೆ ಇದ್ದಿಯಾ ನೀನೀಗ. ನೀನು ಮೊದಲ ಸಲ ಗಂಡಸರನ್ನು ನೋಡ್ತಿದಿಯಾ? ಅವನನ್ನು ದುರುಗುಟ್ಟಿ ನೋಡಿ ನಿಲ್ಲುವಾಗ ನನಗೆ ವಾಸ್ತವದಲ್ಲಿ ಲಜ್ಜೆಯೆನಿಸಿತು" ಅವಳು ಅದಕ್ಕೂ ಏನೂ ಉತ್ತರಿಸಲಿಲ್ಲ. ಹಳ್ಳಿಯ ಹುಡುಗಿಯಾದುದರಿಂದ ಮುಖವಾಡ ಹಾಕಲು ಅವಳಿಗೆ ಸಾಧ್ಯವಾಗಲಿಲ್ಲ. ನಿದ್ರಿಸುವ ಯುವಕನ ಕೋಮಲ ರೂಪ ಅವಳನ್ನು ವಶೀಕರಿಸಿದೆಯೆಂದು ನನಗೆ ತಿಳಿಯಿತು.
ಸಂಜೆ ಹೊತ್ತು ಸರ್ಕಸ್ ಪ್ರಾರಂಭವಾಗುವಾಗ, ನಾವಿಬ್ಬರೂ ಅಲ್ಲಿಗೆ ತಲುಪಿದೆವು. ರೇಷ್ಮೆ ಸೀರೆ, ಗಾಳಿಯಲ್ಲಿ ಹಾರಾಡುವ ಗುಂಗುರು ಕೂದಲುಗಳು, ಅಂತರಿಕ್ಷದಲ್ಲಿ ಪಸರಿಸಿದ ಸುಗಂಧಗಳೆಲ್ಲವೂಇದ್ದ ಹಿರಣ್ಮಯಿಯನ್ನು ಕಂಡ ಜನ ಕೌತುಕದ ವಸ್ತುವಿನಂತೆ ಕಂಡರು. ಎಲ್ಲರ ಗಮನ ಅವಳತ್ತ ಸರಿಯಿತು. ಕಾಡು ಪ್ರಾಣಿಗಳನ್ನು, ಬಪೂನುಗಳನ್ನು ಯಾರೂ ನೋಡಲಿಲ್ಲ.
ಚಾಟಿ ಕೋಲಿನವನು ಸಿಂಹವನ್ನು ಪಳಗಿಸುವವನಾಗಿದ್ದ. ಹುಲಿ ಚರ್ಮದಂತಿರುವ ಬಟ್ಟೆಯನ್ನು ಮಾತ್ರ ಅವನು ಸೊಂಟಕ್ಕೆ ಸುತ್ತಿ ರಂಗವನ್ನು ಪ್ರವೇಶಿಸಿದ್ದ. ಮುಂದಿನ ಸಾಲಿನಲ್ಲಿ ಕುಳಿತಿದ್ದ ನಮ್ಮನ್ನು ಕಂಡಾಗ, ಅವನು ಮಂದಹಾಸ ಚೆಲ್ಲಿದ. ಒಂದೆರಡು ಸಲ ಚಾಟಿಕೋಲನ್ನು ಸುತ್ತಿಕೊಂಡು ಆತ ರಂಗ ಪ್ರದಕ್ಷಿಣೆ ಮಾಡಿದ. ನಮ್ಮ ಮುಂದಿನಿಂದ ಸಾಗುವಾಗ ಅವನು ಮುಖವೆತ್ತಿ ಹಿರಣ್ಮಯಿಯನ್ನು ದಿಟ್ಡಿಸಿದ. ನಾನು ಇರಿಸುಮುರಿಸಿನಿಂದ ತಲೆತಗ್ಗಿಸಿದೆ. ಅವಳು? ಅವಳು ನೆಟ್ಟಗೆ ಕುಳಿತು ಅವನನ್ನು ನೋಡಿ ಮುಗುಳ್ನಕ್ಕಳು. ಅಪ್ಸರೆಯೊಬ್ಬಳ ಆಕರ್ಷಕವಾದ ಮುಗುಳ್ನಗೆ! ಪ್ರೇಕ್ಷಕರು ಅವಳನ್ನು ನೋಡುತ್ತಿರುವುದನ್ನು ನಾನು ಕಂಡೆ.
"ನಿನ್ನ ಜೊತೆ ನಾನು ಬರುತ್ತಿರಲಿಲ್ಲ" ನಾನು ಪಿಸು ನುಡಿದೆ. ಅವಳು ನನ್ನ ಮಾತನ್ನು ಗಮನಿಸಲಿಲ್ಲ.
"ನೀನು ಒಬ್ಬ ಒಳ್ಳೆಯ ವ್ಯಕ್ತಿಯ ಪತ್ನಿ. ಸರ್ಕಸ್ಸಿನವನೊಂದಿಗೆ ಲಲ್ಲೆಯಾಡುತ್ತಿರುವುದನ್ನು ಕಂಡಾಗ ನನಗೆ ವಾಂತಿ ಬರುತ್ತದೆ" ನಾನು ಹೇಳಿದೆ. ಆ ನಿಮಿಷದಲ್ಲಿ ಅವಳು ಗಟ್ಟಿಯಾಗಿ ನಕ್ಕಳು.
ಸರ್ಕಸ್ಸಿನ ಕೊನೆಯ "ಐಟಂ" ಸಾವಿನ ಬಾವಿ. ಮಧ್ಯಾಹ್ನ ಹಗ್ಗದ ಮಂಚದ ಮೇಲೆ ಮಲಗಿದ್ದ ಯುವಕ ಚರ್ಮದ ಅಂಗಿ ತೊಟ್ಟು ಸರಾಯಿ ಮತ್ತು ಹೆಲ್ಮೆಟ್ ಧರಿಸಿ ಬೈಕಿನಲ್ಲಿ ಕುಳಿತು ರಂಗಪ್ರವೇಶ ಮಾಡಿದ. ಅವನು ಯಾರತ್ತಲೂ ನೋಡಲಿಲ್ಲ. ಸಾವಿನ ಬಾವಿಯ ಗೋಡೆಗಳಲ್ಲಿ ಬೈಕು ಓಡುವಾಗ ಗುಡಗಿನಂತೆ ಚಕ್ರಗಳ ಘರ್ಜನೆ ಮೂಡಿ ಬಂತು. ನಾನು ಅಸ್ವಸ್ಥಳಾಗಿ ಕುಳಿತ್ತಿದ್ದೆ. ಕುರ್ಚಿಯನ್ನು ಬಿಟ್ಟು ಹಿರಣ್ಮಯಿ ವೇದಿಕೆಯ ಸಮೀಪಕ್ಕೆ ಸರಿದಿದ್ದಳು. ಪ್ರೇಕ್ಷಕರು ಅವಳನ್ನು ದುರುಗುಟ್ಟಿ ನೋಡಿದರು. ಬೈಕ್ ಬಾವಿಯಲ್ಲಿ ಸುತ್ತಾಡಿತು.
ಆತ ಹೊರಗೆ ಬಂದಾಗ ಅವಳು ಅವನ ದಾರಿಗೆ ಅಡ್ಡವಾಗಿ ನಿಂತಳು.
"ಎಕ್ಸ್ ಕ್ಯೂಸ್ ಮಿ" ಆತ ಪಿಸುಗುಟ್ಟಿದ. ಅವಳ ಕಣ್ಣುಗಳು ಆತನ ಕಣ್ಣುಗಳಿಗೆ ಅಂಟಿ ನಿಂತವು. ಆತ ಬಲವಾಗಿ ಹಿರಣ್ಮಯಿಯನ್ನು ಎಳೆದು ಆಚೆ ತಳ್ಳಿದ.
"ಇನ್ನು ಮುಂದೆ ನಿನ್ನ ಜೊತೆ ನಾನು ಎಲ್ಲಿಗೂ ಬರೋಲ್ಲ" ನಾನು ಅವಳಿಗೆ ಹೇಳಿದೆ.
ಮನೆಗೆ ಬಂದು ತಲುಪುವಷ್ಟರಲ್ಲಿ ಕತ್ತಲಾಗಿತ್ತು. ದಾರಿ ಬದಿಯ ಬೋಗನ್ ವಿಲ್ಲಾಗಳು ಬೆಳದಿಂಗಳಿನಲ್ಲಿ ಬಿಳಿಚಿಕೊಂಡಿರುವಂತೆ ಕಾಣಿಸಿದವು. ಕಲ್ಲು, ಮುಳ್ಳು, ಹಾವುಗಳು ಆ ದಾರಿಯಲ್ಲಿ ಇರುತ್ತವೆ ಎಂದು ನಾನು ಭಯಪಟ್ಟೆ.
"ಸಿಂಹವನ್ನು ಪಳಗಿಸುವವನು ನಿನ್ನನ್ನೇ ದುರುಗುಟ್ಟುತ್ತಿದ್ದ." ನಾನು ಹೇಳಿದೆ.
"ಓಹ್.... ನಾನು ಅವನನ್ನು ನೋಡಲೇ ಇಲ್ಲ. ಸಾವಿನ ಬಾವಿಯವನೇ ಸುಂದರ. ಕಬ್ಬಿಣದಿಂದ ನಿರ್ಮಿಸಿದ ಬೊಂಬೆ ಅವನು." ಹಿರಣ್ಮಯಿ ಹೇಳಿದಳು.
“ಎಲ್ಲರೂ ನೋಡುತ್ತಿದ್ದಾಗ ನೀನು ಅವನನ್ನು ನೋಡಿ ನಗುವುದು ಅಷ್ಟು ಚೆನ್ನಾಗಿ ಇರೊಲ್ಲ. ನಿಮ್ಮಪ್ಪ ಇದನ್ನೆಲ್ಲ ಕೇಳಿಸಿಕೊಂಡರೆ ಕೋಪ ಮಾಡಿಕೊಳ್ಳಲ್ವಾ?" ನಾನು ಕೇಳಿದೆ.
ಎಲ್ಲಾ ಸಾಯಂಕಲವು ಹಿರಣ್ಮಯಿ ಸರ್ಕಸ್ ನೋಡಲು ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋದಳು. ಪ್ರಭಾತದಲ್ಲೂ ನಾವು ಆ ಗುಡಾರದ ಸುತ್ತಲೂ ಅಲೆದಾಡಿದೆವು. ಎಲ್ಲರೂ ನಮಗೆ ಪರಿಚಿತರಾಗಿ ಬದಲಾಯಿಸಿದರು. ಬಫೂನ್ ಗಳು ಆತ್ಮಮಿತ್ರಗಳಾದರು. ಹೆಣ್ಣುಮಕ್ಕಳು ಹಿರಣ್ಮಯಿಯನ್ನು ತೀವ್ರವಾಗಿ ಅವಗಣಿಸಿದರು. ಅವರು ನನಗೆ ಆಪ್ತರಾದರು. ತಮ್ಮ ಜೀವನದ ಕಥೆಗಳನ್ನು ನಿಸ್ಸಂಕೋಚವಾಗಿ ನನ್ನಲ್ಲಿ ಹೇಳಿಕೊಂಡರು. ಸಾವಿನ ಬಾವಿಯಲ್ಲಿ ಬೈಕ್ ಓಡಿಸುವವನ ಹೆಸರು ಜಾಯ್. ಅವನ ಹೆಂಡತಿಗೆ ಈಗ ಒಂಭತ್ತು ತಿಂಗಳು. ಅವಳು ತಮ್ಮ ಜೊತೆ ಇದ್ದಾಳೆಂದು ಹೆಣ್ಮಕ್ಕಳು ಹೇಳಿದರು. ಜಾಯ್ ಪ್ರೀತಿಸಿ ಮದುವೆಯಾಗಿದ್ದೆಂದು ಅವರು ನಮಗೆ ತಿಳಿಸಿದರು.
ಏನೇ ಕೇಳಿಸಿಕೊಂಡರು ಹಿರಣ್ಮಯಿಗೆ ಅದು ಗಮನಕ್ಕೆ ಬರಲೇ ಇಲ್ಲ. ಅವಳು ಜಾಯ್ ಎಂಬ ಯುವಕನನ್ನು ತನ್ನತ್ತ ಸೆಳೆಯುವ ಶ್ರಮವನ್ನು ಪ್ರಾರಂಭಿಸಿದ್ದಳು. ಅವನು ವಿಶ್ರಾಂತಿ ತೆಗೆದುಕೊಳ್ಳುವಾಗ ಆ ಮಂಚದ ಬಳಿಗೆ ಹೋಗಿ ನಿಂತಳು. ಮಲ್ಲಿಗೆ ಹೂವಿನ ಸರಗಳನ್ನು ಅವನಿಗೆ ಉಡುಗೊರೆಯಾಗಿ ನೀಡಿದಳು. ದೈಹಿಕಚೇಷ್ಟೆಗಳಿಂದ ತನ್ನ ಕಾಮಾವೇಶವನ್ನು ಪ್ರದರ್ಶಿಸಿದಳು.
"ನಿನ್ನ ಹೆಸರು ಹಾಳಾಗಿ ಹೋಗತ್ತೆ" ನಾನು ಭವಿಷ್ಯ ನುಡಿದೆ.
"ನಿನ್ನ ಗಂಡನನ್ನು ಇಂಡಿಯಾಕ್ಕೆ ಬರಲು ನಾನು ನಿನ್ನ ಅಪ್ಪನಿಗೆ ಹೇಳ್ತಿನಿ." ನಾನು ಅವಳಿಗೆ ಬೆದರಿಕೆ ಹಾಕಿದೆ.
"ಗಂಡ ಬರಲಿ, ಅವನ ಖರ್ಚಿನಲ್ಲಲ್ಲ ನಾನು ಬದುಕ್ತಾ ಇರೋದು" ಹಿರಣ್ಮಯಿ ಹೇಳಿದಳು. ಅವಳ ಹೃದಯದ ಕಠಿಣತೆ ನನಗೆ ಅಚ್ಚರಿಗೊಳಿಸಿತು. ಪ್ರೇಮ ಪ್ರೀತಿ ಎಂದರೆ ಏನೆಂದು ಅವಳಿಗೆ ತಿಳಿಯದು. ಅಪರಿಚಿತನಾದ ಗಂಡನ ಕಾಮ ಮಾತ್ರ ಅರಿತವಳಾಗಿದ್ದಳು. ಪುರುಷನನ್ನು ಶೋಷಕನಾಗಿ ಮಾತ್ರ ಅಂಗೀಕರಿಸಿದವಳು.
ನಾವು ಸರ್ಕಸ್ಸಿನ ಗುಡಾರದ ಸುತ್ತಲೂ ನಡೆಯುವಾಗ ಅನೇಕ ಸಲ ಚಾಟಿ ಕೋಲಿನವ ನಮ್ಮ ಬಳಿಗೆ ಬಂದಿದ್ದ. ಬಲಕ್ಕೆ ಸ್ವಲ್ಪ ಬಾಗಿದ ನಗುವಾಗಿತ್ತು ಅವನದು.
"ಆಟ ಮುಗಿದ ಮೇಲೆ ದೇವಸ್ಥಾನದ ಹಿಂದೆ ಬರುತ್ತೀರಾ?" ಆತ ಕೇಳಿದ.
"ನಿನ್ನನ್ನು ನೋಡಲು ನನ್ನ ನಾಯಿ ಬರುತ್ತೆ." ಹಿರಣ್ಮಯಿ ಹೇಳಿದಳು.
ಅನೇಕ ಸಲ ಸಂಸ್ಕಾರಶೂನ್ಯಳಾಗಿ ಹಿರಣ್ಮಯಿ ಬದಲಾಗುವುದನ್ನು ನೋಡಲು ಮಾತ್ರವೇ ನನಗೆ ಸಾಧ್ಯವಾಗಿದ್ದು. ಅವಳನ್ನು ಗೃಹಿಣಿಯನ್ನಾಗಿ ಮಾಡಿದ ಪ್ರಾಕೃತ ಶಕ್ತಿಗೆ ಭಯಪಟ್ಟೆ. ಅವಳ ಸ್ಪರ್ಶ ನನ್ನಲ್ಲಿ ಅಸಹ್ಯವನ್ನು ಹುಟ್ಟು ಹಾಕಿತು.
"ನೀನು ಆ ಸರ್ಕಸ್ಸಿನವನೊಂದಿಗೆ ರಹಸ್ಯ ಸಂಬಂಧವನ್ನಿಟ್ಟುಕೊಳ್ಳಲು ಇಚ್ಛಿಸುವೆಯಾ?" ನಾನು ಕೇಳಿದೆ.
"ನಿನಗೇನಿಸ್ತದೆ, ಕನ್ಯಾಮೇರಿಯೇ, ನಿನಗೇನಿಸ್ತದೆ..?" ಅವಳು ನನ್ಮೊಂದಿಗೆ ಅಪಹಾಸ್ಯದ ಭಾವದಲ್ಲಿ ವಿಚಾರಿಸಿದಳು.
"ನೀನು ನಿನ್ನ ದಾಂಪತ್ಯ ಸಂಬಂಧವನ್ನು ಒಡೆಯುವುದಕ್ಕೋಸ್ಕರ ತಯಾರಾಗುತ್ತಿದ್ದಿಯ. ಚೀಪಾಗಿರುವ ಒಬ್ಬನನ್ನು ವಶೀಕರಿಸಿ ನಿನ್ಮ ಭವಿಷ್ಯವನ್ನು ಇಲ್ಲದಂತೆ ಮಾಡಲು ಹೊರಟಿದ್ದಿಯಾ?" ನಾನು ಹೇಳಿದೆ.
"ನನಗೆ ಏನು ಭವಿಷ್ಯ ಇದೇಂತ ನೀನು ಅಂದ್ಕೊಡಿದಿಯಾ? ನಿವೃತ್ತಿಯ ಹಣ ಬರುವ ಒಬ್ಬ ವೃದ್ಧನಿಗೆ, ಹಾರ್ಲಿಕ್ಸ್, ಹಾಲುಗಂಜಿ ಮಾಡಿಕೊಡುವುದೇನು ನನ್ನ ಭವಿಷ್ಯ?" ಹಿರಣ್ಮಯಿ ಕೇಳಿದಳು.
ನಾನು ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಅವಳು ಸ್ವಯಂಪ್ರಜ್ಞೆ ನಶಿಸಿದವಳಂತೆ ನಡೆದುಕೊಂಡಳು. ಅವಳನ್ನು ಶರಣಾಗತಿಯನ್ನಾಗಿ ಮಾಡಿದ ಆ ಶಕ್ತಿ ಅವಳ ಪ್ರತಿಯೊಂದು ಚಲನವಲನಗಳನ್ನು ಬಾಧಿಸತೊಡಗಿದೆ. ನಡೆಯುವುದರಲ್ಲಿ ಬಂದ ಆ ವಿಶೇಷ ಲಾಸ್ಯ, ತಲೆಗೂದಲನ್ನು ಬಾಚುವುದರಲ್ಲಿ ಬಂದ ಅಶ್ರದ್ಧೆ ಮುಂತಾದ ಚಿಹ್ನೆಗಳು ನನ್ನ ಕಣ್ಣಿಗೆ ಬಿದ್ದವು. ಗಲ್ಫ್ ನಿಂದ ಗಂಡ ಕಳುಹಿಸಿ ಕೊಡುವ ಸುಗಂಧದ್ರವ್ಯಗಳದ್ದೂ ಅಲ್ಲದೆ ಒಂದು ವಿಶೇಷ ಗಂಧ ಅವಳ ಬೆವರಿನಲ್ಲಿ ಕಲೆತಂತೆ ನನಗನ್ನಿಸಿತು. ಪುನುಗು ಹುಳುವಿನ ವಾಸನೆಯೊಂದಿಗೆ ಸಾಮ್ಯತೆಯಿರುವ ಸುಗಂಧವೊಂದು ಹೊರಹೊಮ್ಮುತ್ತಿತ್ತು. ಅವಳ ಕಣ್ಣುಗಳ ಆಳ ಹೆಚ್ಚಾಯಿತೆ? ನಡೆಯುವುದರ ವೇಗ ಕಡಿಮೆಯಾಯಿತೆ?
"ನೀನು ತುಂಬಾ ಬದಲಾಗಿದ್ದೀಯಾ ಹಿರಣ್ಮಯಿ" ನಾನು ಹೇಳಿದೆ.
"ಹೌದು ನಾನು ಬದಲಾಗಿದ್ದೇನೆ" ಅವಳು ಹೇಳಿದಳು.
ಗಂಡನಿಗೆ ಪತ್ರ ಬರೆದು ತಕ್ಷಣ ಊರಿಗೆ ಬರುವಂತೆ ಹೇಳು ಎಂದು ನಾನು ಅವಳಿಗೆ ಹೇಳಿದೆ.
"ಗಂಡನಾ? ನಾನು ಅವನನ್ನು ಯಾವತ್ತೋ ಮರೆತಿದ್ದೇನೆ. ಆತನನ್ನು ನೋಡುವುದು ನನಗೆ ಬೇಕಾಗಿಲ್ಲ" ಹಿರಣ್ಮಯಿ ಹೇಳಿದಳು.
"ನೀನು ತಪ್ಪು ಮಾಡ್ತಿದಿಯಾ ಹಿರಣ್ಮಯಿ. ನೀನು ನಾಶದ ದಾರಿಯಲ್ಲಿ ಸಾಗುತ್ತಿದ್ದೀಯ" ನಾನು ಹೇಳಿದೆ.
"ನಾನು ವಿಧಿಯನ್ನು ನಂಬುತ್ತೇನೆ." ಅವಳು ಗೊಣಗಿದಳು.
ಸರ್ಕಸ್ ಕಂಪನಿಯಿಂದ ಹಿಂತಿರುಗುವ ದಾರಿಯಲ್ಲಿ ಅವಳು ಸಾವಿನ ಬಾವಿಯವನನ್ನು ದೇವಸ್ಥಾನದ ಹಿಂಬದಿಯಲ್ಲಿ ಭೇಟಿಯಾದಳು. ಅವರಿಬ್ಬರೂ ಪರಸ್ಪರ ಮಾತಿನಲ್ಲಿ ತೊಡಗಿದರು. ನಾನು ರಸ್ತೆಯಲ್ಲಿ ನಿಂತು ಅವರಿಗೆ ರಕ್ಷಣೆ ನೀಡಿದೆ. ಆ ನಾಟಕ ವೇಗವಾಗಿ ಮುಂದುವರಿಯುತ್ತಿರುವುದಾಗಿ ನನಗನ್ನಿಸಿತು. ಅವರು ರಾತ್ರಿಯಲ್ಲಿ ಗಟ್ಟಿಯಾಗಿ ಅಪ್ಪಿಕೊಂಡ ನೆರಳುಗಳಾದರು. ಬೆಳಂದಿಗಳ ಕಿರಣಗಳು ಆ ಜೋಡಿಯ ರೂಪುರೇಷೆಗಳನ್ನು ಅರ್ಧ ನಿಮಿಷದಲ್ಲಿ ಸ್ಪಷ್ಟವಾಗಿ ತೋರಿಸಿತು. ಅವರ ಪೇಲವಗೊಂಡ ಮುಖಗಳನ್ನು ನಾನು ಕಂಡೆ. ಅವರ ಏದುಸಿರುಗಳನ್ನು ನಾನು ಕೇಳಿಸಿಕೊಂಡೆ.
"ಅವನ ಹೆಂಡತಿ ಈಗ ಪೂರ್ಣ ಬಸುರಿ. ಇಂತಹ ಸಮಯದಲ್ಲಿ ನೀನು ಅವನನ್ನು ಭೇಟಿಯಾಗುವುದು ಒಳ್ಳೆಯದಲ್ಲ" ಎಂದು ನಾನು ನನ್ನ ಗೆಳತಿಗೆ ಹೇಳಿದೆ. ನನ್ನ ಮಾತಿಗೆ ಹಿರಣ್ಮಯಿ ಗಟ್ಟಿಯಾಗಿ ನಕ್ಕಳು.
"ಆತನನ್ನು ನನ್ನವನನ್ನಾಗಿ ಮಾಡಲು ನಾನು ಇಚ್ಛಿಸಲಾರೆ." ಅವಳು ಹೇಳಿದಳು.
ಹಿರಣ್ಮಯಿಯ ಹೊಸ ಮುಖ ನನ್ನನ್ನು ಇರಿಸುಮುರಿಸಾಗುವಂತೆ ಮಾಡಿತು. ಅಂತಹದೊಂದು ಗೆಳತಿಯನ್ನು ನೀಡಿದ್ದಕ್ಕೆ ನಾನು ದೇವರನ್ನು ನಿಂದಿಸಿದೆ. ದೇವಸ್ಥಾನದ ಹಿಂಬದಿಯಲ್ಲಿ ಅವರು ಭೇಟಿಯಾಗುತ್ತಾರೆಂದು ಸರ್ಕಸ್ಸಿನವರಿಗೆ ತಿಳಿಯಿತು.
ಕುದುರೆ ಸವಾರಿ ಮಾಡುವ ಒಬ್ಬಾಕೆ ಹಿರಣ್ಮಯಿಯ ಕುರಿತು ನನ್ನಲ್ಲಿ ವಿಚಾರಿಸಿದಳು.
ಸರ್ಕಸ್ ಕಂಪನಿಯ ಮೇನೇಜರ್ ಹಿರಣ್ಮಯಿಯ ಅಪ್ಪನಿಗೆ ದೂರು ನೀಡಲು ತಯಾರಾಗುತ್ತಿದ್ದಾರೆಂದು ಅವಳು ಹೇಳಿದಳು. ಅವಳಿಗೆ ಬೈಯಲು ಅಪ್ಪ ತಯಾರಾಗುವುದಿಲ್ಲ ಎಂದು ಅವಳಿಗೆ ಹೇಳಿದೆ. ಮುದ್ದಾಗಿ ಸಾಕಿದ ಏಕೈಕ ಪುತ್ರಿಗೆ ಸರ್ವ ಸ್ವಾತಂತ್ರ್ಯವನ್ನು ಜಮೀನ್ದಾರ ನೀಡಿದ್ದಾರೆ.
"ಅವಳನ್ನು ಬೈಯುವುದಿಲ್ಲವೆಂದಷ್ಟೆ ಅಲ್ಲ, ನಿಮ್ಮೆಲ್ಲರನ್ನು ಈ ನಿಮಿಷದಲ್ಲಿ ಈ ಊರಿನಿಂದ ಓಡಿಸಿ ಕೈತೊಳೆದುಕೊಳ್ಳುತ್ತಾರೆ." ನಾನು ಹೇಳಿದೆ.
"ಹೆರಿಗೆಯ ದಿನ ಹತ್ತಿರವಾಗುತ್ತಿದೆ. ಅವಳೂ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಿದ್ದಾಳೆ." ಒಬ್ಬ ಬಫೂನ್ ಹೇಳಿದ.
"ಸಂಕಟವಿರುವ ಮಹಿಳೆಯರಿಗೆ ಹೆರಿಗೆ ಸುಲಭವಲ್ಲ." ಎರಡನೇ ಬಫೂನ್ ತನ್ನ ಅಭಿಪ್ರಾಯವನ್ನು ಹೊರಗೆಡಹಿದ.
ಡಾಕ್ಟರ್ ಆದ ನಮ್ಮಪ್ಪ ಒಂದು ದಿನ ಹೊರಗಡೆ ಹೋಗುವಾಗ ಹೇಳಿದರು.

"ದಿನವೂ ನೀನು ಸರ್ಕಸ್ ನೋಡಲು ನಿನ್ನ ಗೆಳತಿಯೊಂದಿಗೆ ಹೋಗ್ತಿದ್ದೀಯಂತೆ. ನನ್ನ ರೋಗಿಗಳು ಹೇಳಿ ನನಗೆ ತಿಳಿಯಿತು. ಈಗ ವೈರಲ್ ಫ್ಲೂ ಎಲ್ಲಾ ಕಡೆಯಿದೆ. ಜನ ಸೇರುವಲ್ಲಿ ನೀನು ಹೋಗಿ ಅಪಾಯ ತಂದುಕೊಳ್ಳಬೇಡ."
"ಮನೆಯಲ್ಲಿ ಮುದುಡಿ ಕುಳಿತು ಕೊಳ್ಳಲು ಮನಸ್ಸು ಬರ್ತಿಲ್ಲ, ಪ್ಪ. ನೀವು ಒಪ್ಪಿದರೆ, ನಗರದಲ್ಲಿ ಒಂದು ಕೆಲಸಕ್ಕೆ ಸೇರ್ಕೊಳ್ತಿನಿ." ನಾನು ಹೇಳಿದೆ.
ನಾನು ಕೆಲಸ ಮಾಡುವುದು ಅಪ್ಪನಿಗೆ ಸುತಾರಾಂ ಇಷ್ಟವಿಲ್ಲ. ಓದುವ ಕಾಲದಲ್ಲಿ ಕ್ಷಯಿಸಿದ ಆರೋಗ್ಯ ಮನೆಯಲ್ಲಿ ವಿಶ್ರಾಂತಿ ಪಡೆದು ಆರೋಗ್ಯ ಪುನರ್ ಸಂಪಾದಿಸಬೇಕೆಂಬುದು ಅವರ ಇಚ್ಛೆ. ಆರೋಗ್ಯವಿರುವ ಮಕ್ಕಳನ್ನು ಪಡೆಯಲು, ಅವರನ್ನು ಬೆಳೆಸಲು ಆರೋಗ್ಯವಿರುವ ಒಬ್ಬಳಿಗೆ ಮಾತ್ರ ಸಾಧ್ಯ ಎಂದೆಲ್ಲ ಅಪ್ಪ ಹೇಳುತ್ತಿದ್ದರು.
"ನನ್ನ ನಂತರದ ಹಕ್ಕುದಾರರು, ಆರೋಗ್ಯವಿರುವವರು, ಬುದ್ಧಿವಂತರು ಆಗಬೇಕಾದರೆ, ನೀನು ಕೆಲವು ತ್ಯಾಗಗಳನ್ನು ಸಹಿಸಬೇಕಾಗುತ್ತದೆ." ಅಪ್ಪ ಹೇಳಿದರು. ಒಬ್ಬ ಜಿಪುಣ ತನ್ನ ಬ್ಯಾಂಕ್ ನಿಕ್ಷೇಪದ ಬಗ್ಗೆ ಚಿಂತಿಸುವಂತೆ ಅಪ್ಪ, ಹುಟ್ಟುವ ಮಕ್ಕಳ ಪರಿಪೂರ್ಣತೆಯ ಕುರಿತು ಚಿಂತಿಸುತ್ತಾರೆ. ವರನ ಹಣಕಾಸಿನ ಸ್ಥಿತಿಯ ಕುರಿತು ಅಪ್ಪ ಯೋಚಿಸಲೇ ಇಲ್ಲ. ಆದರೆ, ನನಗೆ ನನ್ನ ಗಂಡನಿಗೆ ಆಸ್ತಿ ಸಂಪತ್ತು ಇರಬೇಕೆಂಬ ಒತ್ತಾಯವಿತ್ತು. ಹಿರಣ್ಮಯಿ ಕೋಮಲರೂಪವೊಂದಕ್ಕೆ ಒತ್ತು ನೀಡಿದ್ದಳು. ಆದರೆ ನನಗೆ ಸೌಂದರ್ಯ ಪ್ರಮುಖ ಆಯ್ಕೆಯಾಗಿರಲಿಲ್ಲ.
ಒಂದು ದಿನ ಮಧ್ಯಾಹ್ನದ ಹೊತ್ತು ನಾನೂ ಹಿರಣ್ಮಯಿ ಅವಳ ಮನೆಯ ರೂಮಿನ ಮೆತ್ತೆಯ ಮೇಲೆ ಮಲಗಿದ್ದೆವು. ಅಂದು ಸರ್ಕಸ್ಸಿನವರಿಗೆ ಬಿಡುವಿನ ದಿನವಾಗಿತ್ತು. ದಿಢೀರನೆ ಸರ್ಕಸ್ಸಿನಲ್ಲಿ ಅಹಾರ ತಯಾರಿಸುವ ವೃದ್ಧ ಮಹಿಳೆ ಹುರಣ್ಮಯಿಯ ಕೆಲಸದವಳೊಂದಿಗೆ ಮಹಡಿಗೆ ಬಂದರು.
"ಮಗೂ ನನಗೆ ನಿಂಜೊತೆ ಸ್ವಲ್ಪ ಮಾತನಾಡಬೇಕಾಗಿದೆ." ಅವರು ಹಿರಣ್ಮಯಿಗೆ ಹೇಳಿದರು.
ಎಲ್ಲಾ ರಾತ್ರಿಗಳೂ ಸಾವಿನ ಬಾವಿಯಲ್ಲಿ ಬೈಕ್ ಓಡಿಸುವವನು ಹಾಗೂ ಆತನ ಹೆಂಡತಿ ಗಟ್ಟಿಯಾಗಿ ಜಗಳವಾಡುತ್ತಿರುತ್ತಾರೆ. ಅಸೂಯೆ ತೋರುವ ತನ್ನ ಹೆಂಡತಿಯನ್ನು ಹೊಡೆದು ಬಡಿದು ಹಿಂಸಿಸುತ್ತಿರುತ್ತಾನೆ. ಹಿರಣ್ಮಯಿ ಮತ್ತೆ ಆ ಯುವಕನನ್ನು ಭೇಟಿಯಾಗಬಾರದೆಂದು ಹೇಳಲು ತಾನು ಬಂದಿರುವುದಾಗಿ ಮುದುಕಿ ಹೇಳಿದಳು. ಅವರು ಅತ್ತ ತಿರುಗಿದ ಕೂಡಲೇ ಹಿರಣ್ಮಯಿ ತನ್ನತ್ತ ತಿರುಗಿ ಹೇಳಿದಳು,
"ನಿನಗೆ ಅವಳನ್ನು ಒದ್ದು ಹೊರಹಾಕಬಾರದಿತ್ತೇನು?" ಅವಳು ಕೇಳಿದಳು.
"ತನ್ನ ಮನೆಗೆ ಬಂದು ತನ್ನನ್ನು ಆಕ್ಷೇಪಿಸುವುದಕ್ಕೆ ಅದೆಷ್ಟು ಧೈರ್ಯ ಅವಳಿಗೆ?"
"ಅವರು ಹೇಳುವುದು ಸರಿಯಾಗಿಯೇ ಇದೆ. ಆ ಬಡಪಾಯಿ ಹೆಣ್ಣಿಗೆ ಹೆರಿಗೆಯ ಸಮಯ ಹತ್ತಿರವಾಗ್ತಿದೆ. ಈಗಲೂ ಅವಳನ್ನು ಹೊಡೆದು ಬಡಿದು ಹಿಂಸಿಸುತ್ತಿರುತ್ತಾನೆ? ಇದಕ್ಕೆಲ್ಲ ಮೂಲ ಕಾರಣ ನೀನು. ನಿನ್ನ ಕಾಮ ನಿನ್ನ ಪ್ರಾಕೃತವಾದ ಅಭಿನಿವೇಶ. ನೀನು ನನ್ನ ಸ್ನೇಹಿತೆ ಎಂದು ಹೇಳಲು ಕೂಡ ನನಗೆ ಲಜ್ಜೆಯೆನಿಸುತ್ತದೆ. ಇನ್ನೆಂದೂ ನಿನ್ನ ಜೊತೆ ಸರ್ಕಸ್ ನೋಡಲು ಬರಲಾರೆ" ನಾನು ಹೇಳಿದೆ.
ನಾನು ಮಧ್ಯಾಹ್ನದ ಬಿಸಿಲಿನಲ್ಲಿಯೇ ನನ್ನ ಮನೆಗೆ ಬಂದೆ. ಅವಳು ನನ್ನನ್ನು ಹಿಂದಿನಿಂದ ಕರೆದಿರಬಹುದು. ಆದರೆ ನನ್ನ ಕಿವಿಯಲ್ಲಿ ಗಾಳಿಯ ನಿಶ್ವಾಸ ಮಾತ್ರವೇ ಇದ್ದಿದ್ದು. ಹಿರಣ್ಮಯಿ ನನ್ನನ್ನು ಕರೆದುಕೊಂಡು ಹೋಗುವಂತೆ ಅವಳ ಕೆಲಸದವರನ್ನು ಕಳುಹಿಸಿದಳು. ಕೊನೆಗೆ ಅವಳೇ ನನ್ನ ಮನೆಗೆ ಬಂದಳು. ನಾನು ನನ್ನ ಮಲಗುವ ಕೋಣೆಯನ್ನು ಬಿಡಲು ತಯಾರಾಗಿರಲಿಲ್ಲ.
"ಅನ್ನಕರೀನ ಕೆಟ್ಟವಳೆಂದು ಏಕೆ ನೀನು ಹೇಳಿಕೊಡಲಿಲ್ಲ" ಹಿರಣ್ಮಯಿ ನನ್ನನ್ನು ಕೇಳಿದಳು. ಆ ಪ್ರಶ್ನೆ ನನ್ನನ್ನು ನಡುಗಿಸಿತು. ಒಂದು ವಾರದಷ್ಟೆ ಕಾಲ ನಾನು ಅವಳ ಸಹವಾಸವನ್ನು ತಿರಸ್ಕರಿಸಿ ನನ್ನ ಮನೆಯಲ್ಲಿಯೇ ಕಳೆದೆ. ಹಿಂದೆ ಓದಿದ್ದ ಪ್ರೇಮ ಕಥೆಗಳನ್ನು ಮತ್ತೆ ಓದಿದೆ. ಒಗಟುಗಳಿಗೆ ಉತ್ತರ ಲಭಿಸಲೂ ಇಲ್ಲ.
ಕೊನೆಗೆ ಹಿರಣ್ಮಯಿ ನನ್ನ ಬಳಿಗೆ ಬಂದು ತನ್ನ ತಪ್ಪುಗಳಿಗೆ ಕ್ಷಮೆ ಕೇಳಿದಳು. ತಾನು ಬುದ್ಧಿ ಇಲ್ಲದವಳೆಂದೂ ತನ್ನನ್ನು ನೇರ ದಾರಿಯಲ್ಲಿ ಕೊಂಡೊಯ್ಯಲು ನಾನಲ್ಲದೆ ಬೇರಾರು ಇಲ್ಲವೆಂದೂ ಅವಳು ಗದ್ಗದದಿಂದ ನನ್ನಲ್ಲಿ ಹೇಳಿಕೊಂಡಳು.
"ನೀನು ಕ್ಷಮೆ ಕೇಳಬೇಕಾದದ್ದು ನನ್ನಲ್ಲಲ್ಲ. ಸಾವಿನ ಬಾವಿಯಲ್ಲಿ ಬೈಕ್ ಓಡಿಸುವ ಜಾಯ್ ಮತ್ತು ಆತನ ಹೆಂಡತಿಯನ್ನು. ನೀನು ನಿನ್ನ ಸ್ವರ್ಗೀಯ ಸೌಂದರ್ಯವನ್ನು ಕಾಣಿಕೆಯಿಟ್ಟು ಅವಳ ಗಂಡನನ್ನು ಗುಲಾಮನನ್ನಾಗಿ ಮಾಡಿದೆ. ಅಲ್ಲಿಯವರೆಗೆ ಪರಸ್ಪರ ಪ್ರೀತಿಯಿಂದ ಬಾಳುತ್ತಿದ್ದ ಅವರನ್ನು ಬೇರ್ಪಡಿಸಿ ಶತ್ರುಗಳನ್ನಾಗಿ ಮಾಡಿದೆ. ನೀನು ಅವರಲ್ಲಿ ಕ್ಷಮೆ ಯಾಚಿಸು."
ನಾನು ಹೇಳಿದೆ. ಹಿರಣ್ಮಯಿ ತಲೆಯಾಡಿಸಿದಳು. ತಾನು ಒಂದು ವಾರ ಕಾಲ ಸರ್ಕಸ್ ಗುಡಾರದಿಂದ ದೂರ ನಿಂತೆನೆಂದು ನನಗೆ ಹೇಳಿದಳು. ದೇಗುಲದ ಹಿಂದೆ ಹೋಗಿ ಅವನನ್ನು ಭೇಟಿಯೂ ಆಗುತ್ತಿರಲಿಲ್ಲವಂತೆ. "ಅವೆಲ್ಲ ಮುಗಿಯಿತು" ಎಂದು ಮತ್ತೆ ಮತ್ತೆ ಹೇಳಿದಳು.
ಬಿಳಿಯ ವಸ್ತ್ರಗಳನ್ನು ಧರಿಸಿ, ತಲೆಗೂದಲಿನಲ್ಲಿ ಮಲ್ಲಿಗೆ ಮಾಲೆ ಮುಡಿದು, ಅವಳು ಸಂಜೆ ನನ್ನ ಜೋತೆ ದೇಗುಲದ ಬಳಿಗೆ ಬಂದಳು. ಸರ್ಕಸ್ ಸುರುವಾಗಲು ಅಬ್ಬಬ್ಬಾ ಅಂದರೆ ಒಂದು ಗಂಟೆ ಮಾತ್ರ ಬಾಕಿಯಿತ್ತು. ಜಾಯ್ ನ ಗುಡಾರಕ್ಕೆ ಹೋಗಿ ಅವನ ಹೆಂಡತಿಯನ್ನು ವಿಚಾರಿಸಿದೆವು. ಅವಳು ಅಲ್ಲೆಲ್ಲೂ ಇರಲಿಲ್ಲ. ಚಾಟಿ ಕೋಲಿನವನು ನಮ್ಮ ಬಳಿಗೆ ಬಂದು,
"ಐದು ದಿನಗಳ ನಂತರ ನಾನು ಇಲ್ಲಿಂದ ಹೊರಡುತ್ತೇನೆ. ನನ್ನನ್ನು ನೋಡಲು ರಾತ್ರಿ ಬರೋದಿಲ್ಲ ಅಲ್ವಾ?" ಆತ ಕೇಳಿದ. ಹಿರಣ್ಮಯಿ ಉತ್ತರಿಸಲಿಲ್ಲ. ಅವನು ಹೋದ ನಂತರವೂ ನಾವು ಒಂದು ಹೆಜ್ಜೆ ಮುಂದಿಡಲಿಲ್ಲ. ಬಫೂನ್ ಗಳಲ್ಲಿ ಒಬ್ಬಾತ ನಮ್ಮ ಮುಂದೆ ಬಂದು ನಿಂತು,
"ಅಕ್ಕಾ ನೀವು ಬರದೆ ಇರೋದ್ರಿಂದ, ಜಾಯ್ ಒಂದು ವಾರದಿಂದ ಊಟಾನೇ ಮಾಡಿರಲಿಲ್ಲ. ಸದಾ ಸಿಗರೇಟು ಎಳೆಯುತ್ತಾ ಆಕಾಶ ನೋಡುತ್ತಾ ಕುಳಿತಿರುತ್ತಿದ್ದ" ಎಂದ.
ಉಯ್ಯಾಲೆಯಲ್ಲಿ ತೂಗಾಡುವ ಹೆಣ್ಮಕ್ಕಳು ಹಿರಣ್ಮಯಿಯ ವಸ್ತ್ರಗಳನ್ನು ಕುತೂಹಲದಿಂದ ನೋಡಿದರು.
"ಇವತ್ತು ನೀವೊಂದು ಹಕ್ಕಿಯಂತೆ ಕಾಣಿಸುತ್ತಿದ್ದೀರಿ" ಅವರ ಪೈಕಿ ಒಬ್ಬಳು ಹೇಳಿದಳು. ಮಿಂದು ತಲೆ ಒರೆಸುತ್ತಾ ನಡೆದು ಬರುತ್ತಿದ್ದ ಜಾಯ್ ನಡಿಗೆಯನ್ನು ದಿಢೀರ್ ನಿಲ್ಲಿಸಿದ. ಅವನು ಹಿರಣ್ಮಯಿಯ ಸಮೀಪಕ್ಕೆ ಹೋಗಿ ಅವಳ ಕಿವಿಯಲ್ಲಿ ಏನೋ ಉಸುರಿದ.
"ನಾನು ಸತ್ತು ಹೋಗುತ್ತಿದ್ದೆ." ಆತ ಅವನಿಗೆ ತಿಳಿಸಿದ. ಅವಳ ಮುಖದಲ್ಲಿ ಯಾವುದೇ ರೀತಿಯ ಭಾವವ್ಯತ್ಯಾಸವನ್ನು ನಾನು ಕಾಣಲಿಲ್ಲ.
ನಾವಿಬ್ಬರೂ ಮುಂದಿನ ಸೀಟುಗಳಲ್ಲಿ ಕುಳಿತಿರುವಾಗ ಸರ್ಕಸ್ಸಿನ ಕೂಲಿ ಕೆಲಸದವರು ನಮ್ಮನ್ನು ಗಮನಿಸುತ್ತಿದ್ದರು. ಹಿರಣ್ಮಯಿಯ ಚಾಪಲ್ಯದ ಕಥೆ ಎಲ್ಲರೂ ಕೇಳಿಸಿಕೊಂಡಿರಬಹುದೇ? ಯಾರಾದರೂ ಈ ಕಥೆಯನ್ನು ಗಲ್ಫ್ ನಲ್ಲಿರುವ ಅವಳ ಗಂಡನಿಗೆ ತಿಳಿಸುತ್ತಾರೆಯೇ? ಅವಳ ಮುಖ ಶಾಂತವಾಗಿತ್ತು. ಯಾವುದೂ ಅವಳನ್ನು ಸೋಂಕುವುದಿಲ್ಲವೆಂಬ ಭಾವದಲ್ಲಿದ್ದಳು. ಅವಳ ಮಲ್ಲಿಗೆ ಹೂವಿನ ಸುವಾಸನೆ ಗಾಳಿಯಲ್ಲಿ ಪಸರಿಸಿತ್ತು.
"ಜಾಯ್ ನನ್ನೊಂದಿಗೆ ಮಾತನಾಡುವುದನ್ನು ಅವನ ಹೆಂಡತಿ ದೂರದಿಂದ ನೋಡಿದಳು. ಅವಳು ಆ ಬೇಲಿಯ ಸಮೀಪ ನಿಂತಿದ್ದಳು." ಹಿರಣ್ಮಯಿ ಗೊಣಗಿಕೊಂಡಳು.
"ನಾನು ಅವಳನ್ನು ನೋಡಲಿಲ್ಲ" ನಾನು ಹೇಳಿದೆ.
"ಈಗ ಅವಳು ಅವನೊಂದಿಗೆ ಜಗಳವಾಡುತ್ತಿರಬಹುದು." ಹಿರಣ್ಮಯಿ ಹೇಳಿದಳು.
ಇಂಟರ್ ವಲ್ ಬಂದಾಗ ಬಫೂನ್ ಗಳಲ್ಲಿ ಒಬ್ಬಾತ ಹೇಳಿದ.
"ಜಾಯ್ ಹೆಂಡತಿಗೆ ಹೆರಿಗೆ ನೋವು ಪ್ರಾರಂಭವಾಗಿದೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ."
ಜಾಯ್ ತನ್ನ "ಐಟಂ" ಮಾಡಿ ಮುಗಿಸಿದ ನಂತರ ಆಸ್ಪತ್ರೆಗೆ ಹೋಗುತ್ತಾನೆ. ಅದೇನೇ ಆದರೂ ಮರಣಬಾವಿಯಲ್ಲಿ ಬೈಕ್ ಓಡಿಸದೆ ಆತ ಅಲ್ಲಿಂದ ಹೋಗುವ ಪ್ರಶ್ನೆಯೇ ಇಲ್ಲ. ಸಾವಿನ ಬಾವಿಯಲ್ಲಿ ಇಳಿಯುವಾಗ ರೂಢಿಗೆ ಭಿನ್ನವಾಗಿ ಜಾಯ್ ಹಿರಣ್ಮಯಿಯ ಕಣ್ಣುಗಳತ್ತ ನೋಡಿದ. ಅವಳ ಕಣ್ಣುಗಳು ಜ್ವಲಿಸಿದವು. ಮೊರೆಯುತ್ತಾ ಬೈಕ್ ಬಾವಿಯ ಗೋಡೆಯ ಮೇಲಿನಿಂದ ಓಡತೊಡಗಿತು. ದಿಢೀರನೇ ಆಕಾಶದಲ್ಲೆಲ್ಲೋ ಸಿಡಿಲು ಬಡಿಯಿತು. ಒಂದು ಭೀಕರ ಧ್ವನಿಯಿಂದ ಬೈಕ್ ಭಿತ್ತಿಗೆ ಬಡಿದು ಸುತ್ತುತ್ತ ನೆಲಕಚ್ಚಿತು. ಬುಗುರಿಯಂತೆ ಹಲವಾರು ಸಲ ಸುತ್ತಿತು.
ಶವವನ್ನು ಹೊರತೆಗೆದು ಸರ್ಕಸ್ ಕೂಲಿಯವರು ಹುಲ್ಲಿನ ಚಾಪೆಯಲ್ಲಿ ಒಂದು ಬೆಡ್ ಶೀಟ್ ಹಾಸಿ ಮಲಗಿಸಿದರು. ತಲೆಗಾದ ಗಾಯದಿಂದ ರಕ್ತ ನೀರಿನಂತೆ ಹರಿಯ ತೊಡಗಿ ಚಾಪೆಯಲ್ಲಿ ಮಡುಗಟ್ಟಿ ನಿಂತಿತು.
"ನನಗೆ ಇದನ್ನು ನೋಡಲು ಸಾಧ್ಯವಿಲ್ಲ. ನಾನು ಮನೆಗೆ ಹೋಗ್ತಿನಿ" ನಾನು ಹೇಳಿದೆ. ನನ್ನ ಕಾಲುಗಳನ್ನು ನನಗೆ ನಿಯಂತ್ರಿಸಲಾಗಲಿಲ್ಲ. ಮುಂದಕ್ಕೆ ಸಾಗಲು ಅವು ತಯಾರಾಗಲಿಲ್ಲ.
ಹಿರಣ್ಮಯಿ ತಲೆಯೆತ್ತಿಕೊಂಡು ನಡೆದಳು. ಅವಳು ಬೇಲಿ ಬಳಿ ನಿಂತಿದ್ದ ಚಾಟಿಕೋಲಿನವನನ್ನು ನೋಡಿ ಮುಗುಳ್ನಕ್ಕಳು. ನಾನು ಬಹಳ ಕಷ್ಟದಿಂದ ಮುಂದಡಿಯಿಡುತ್ತಿದ್ದೆ. ನನ್ನ ಮಾಂಸಪೇಶಿಗಳು ಉರಿದು ಹೋಗುತ್ತಿದೆಯೆಂದೂ ನನ್ನ ಶ್ವಾಸೋಚ್ಛಾಸ ತಡೆಹಿಡಿಯಲಾಗುತ್ತಿದೆಯೆಂದೂ ನನಗನ್ನಿಸಿತು. ನನ್ನ ಕಣ್ಣುಗಳಿಗೆ ಕತ್ತಲೆ ಕವಿಯಿತು. ಬೀಳುತ್ತೆನೆನ್ನುವಷ್ಟರಲ್ಲಿ ನಾನು ಹಿರಣ್ಮಯಿಯ ಮಾತುಗಳನ್ನು ಕೇಳಿಸಿಕೊಂಡೆ.
"ನಾಳೆ ರಾತ್ರಿ ಒಂಭತ್ತಕ್ಕೆ ಬರುತ್ತೇನೆ. ದೇಗುಲದ ಹಿಂದಿರುವ ಕಲ್ಯಾಣಿಯ ದಡಕ್ಕೆ."
ಮತ್ತೆ ನಾನು ಎಚ್ಚರಗೊಂಡಿದ್ದು ಎಷ್ಟು ಗಂಟೆಗಳ ನಂತರವೆಂದು ಗೊತ್ತಿಲ್ಲ. ನನ್ನ ಅಪ್ಪ ಕೆಲಸ ಮಾಡುವ ಅಸ್ಪತ್ರೆಯ ಒಂದು ಕೋಣೆಯಲ್ಲಿ ನನ್ನ ಮುಂಗೈಗೆ ಡ್ರಿಪ್ ಕೊಡುವ ನಳಿಗೆ ಜೋಡಿಸಿಟ್ಟಿದ್ದರು.
ನರ್ಸ್ ಅಪ್ಪನನ್ನು ಕರೆಸಿದಳು. ಯುಗಗಳು ಮತ್ತೆಲ್ಲೋ ಬದುಕಿ ಈ ಲೋಕಕ್ಕೆ ಮರಳಿ ಬಂದಿದೆಯೆಂದು ಆ ನಿಮಿಷದಲ್ಲಿ ನನಗನ್ನಿಸಿತು. ಅಪ್ಪನ ಮುಖದಲ್ಲೂ ಒಂದು ಅಪರಿಚಿತತ್ವ ಪ್ರಕಟವಾಗಿತ್ತು.
ಏನೂ ಆಗಿಲ್ಲ. ಕತ್ತಲೆಯಲ್ಲಿ ಎಡವಿ ಬಿದ್ದಿದ್ದು ಅಷ್ಟೆ. ಇನ್ನೇನು ಹೆದರಬೇಕಿಲ್ಲ." ಅಪ್ಪ ಹೇಳಿದರು.
ಒಬ್ಬ ನರ್ಸ್ ಒಂದು ಕಪ್ ಹಾಲನ್ನು ತಂದು ಕುಡಿಯಲು ಕೊಟ್ಟಳು.
"ನಿನಗೆ ಪ್ರಜ್ಞೆ ಬಂತೂಂತ ತಕ್ಷಣ ನಾನು ಹಿರಣ್ಮಯಿಗೆ ತಿಳಿಸ್ತೀನಿ. ಅವಳು ಇಷ್ಟರವರೆಗೆ, ನಿನ್ನ ಮಂಚದ ಕಾಲ ಬಳಿ ಕುಳಿತಿದ್ದಳು." ಅಪ್ಪ ಹೇಳಿದರು.
"ನನಗೆ ಹಿರಣ್ಮಯಿಯನ್ನು ನೋಡಬೇಕೆಂದಿಲ್ಲ." ನಾನು ತಗ್ಗಿದ ಧ್ವನಿಯಲ್ಲಿ ಹೇಳಿದೆ.
ಅಚ್ಚರಿಯಿಂದಲೋ ಏನೋ, ಅದರ ನಂತರ ಅಪ್ಪ ಏನೂ ಮಾತನಾಡಲಿಲ್ಲ.
ಸರ್ಕಸ್ಸಿನ ಎರಡನೆಯ ಆಟ ಆರಂಭವಾಗುವುದರ ಸದ್ದು ಕೇಳಿಸಿತು. ಮಧ್ಯೆರಾತ್ರಿ ಆಗಿಲ್ಲವೆಂದು ಆಗ ನನಗೆ ತಿಳಿಯಿತು.

*****

ಮೂಲ: ಕಮಲಾದಾಸ್ ಕನ್ನಡಕ್ಕೆ ಅನುವಾದ: ಕೆ. ಕೆ. ಗಂಗಾಧರನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT