ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶ್ ಕುಗ್ವೆ ಅವರ ಕಥೆ: ಆಲ್ ಎಡಿಷನ್ ಸುದ್ದಿ

Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಳಬೆಳಿಗ್ಗೆನೇ ಇಂಥ ವರಾತಗಳಿಗೆ ಕಿವಿಗೊಡುವುದು ಅವನಿಗೂ ಈಗೀಗ ಅಭ್ಯಾಸವಾಗಿದೆ. ನಮ್ಸುದ್ದಿ ಆಲ್ಎಡಿಷನ್‌ ಬರಬೇಕಿತ್ತು; ಬರೀ ಲೋಕಲ್‌ನಲ್ಲಿದೆ. ಸುದ್ದಿ ಬಂದಿದೆ; ಫೋಟೊ ಇಲ್ಲ. ವೇದಿಕೆಯಲ್ಲಿದ್ದೆ; ಸುದ್ದಿಯಲಿಲ್ಲ. ಹೀಗೆ ಹತ್ತೆಂಟು ಕರೆಗಳಿಗೆ ಪ್ರತಿನಿತ್ಯ ಅವನು ಓಗುಟ್ಟುತ್ತಲೇ ಇರಬೇಕಾಗಿತ್ತು. ಆದರೆ, ಅವತ್ತು ಲೋಕಲ್‌ ಪತ್ರಿಕೆ ಸಂಪಾದಕ, ಸಂಘಟಕನೂ ಆದ ರವಿಪ್ರಸಾದ್‌ ಕೇಳಿದ ಧಾಟಿ ಅವನನ್ನು ಕಸಿವಿಸಿಗೊಳಿಸಿತು.

ನೂತನ್‌ ಹೊದಲಕೊಪ್ಪ ರಾಜ್ಯಮಟ್ಟದ ಪತ್ರಿಕೆಯ ಜಿಲ್ಲಾ ವರದಿಗಾರ. ವೃತ್ತಿಯಲ್ಲಿ 15 ವರ್ಷ ಕಳೆದಿವೆ. ಇದು ಮೂರನೇ ವರ್ಗಾವಣೆ. ವೃತ್ತಿ ನಿಷ್ಠ, ಪ್ರಾಮಾಣಿಕ ಎಂಬೆಲ್ಲಾ ವಿಶೇಷಣಗಳಿದ್ದರೂ ಅವ್ಯಾವು ಅವನ ಹುದ್ದೆ ಏರಿಸಿಲ್ಲ; ಸಂಬಳ ಹೆಚ್ಚಿಸಿಲ್ಲ. ಕಚೇರಿ ಒತ್ತಡಗಳಿಂದ ಹಲವು ಬಾರಿ ವೃತ್ತಿಯೇ ಬೇಡ ಅನಿಸಿದಿದೆ. ಆದರೆ, ಬಿಟ್ಟು ಮಾಡುವುದಾದರೂ ಏನು? ಪೂರ್ತಿ ಪ್ರಪಂಚ ಅನೈತಿಕತೆ, ಅಪ್ರಾಮಾಣಿಕತೆಯ ಕೆಸರಲ್ಲಿ ಹೊರಳಾಡುತ್ತಿರುವಾಗ ತಾನೂ ಅದನ್ನು ಮೆತ್ತಿಕೊಳ್ಳಬೇಕೆ? ಕಾಡಿದ್ದಿದೆ ಅವನಿಗೆ.

“ನಮ್ಮ ಫಂಕ್ಷನ್ ಸುದ್ದಿ ಆಲ್ಎಡಿಷನ್‌ ಬರಬೇಕಿತ್ತು. ಬರೀ ಲೋಕಲ್‌ನಲ್ಲಿದೆ; ಅದೂ ಕೆಟ್ಟದಾಗಿ.., ಅವರೆಷ್ಟು ದೊಡ್ಡ ಸಾಹಿತಿ, ಎಷ್ಟು ಒಳ್ಳೆಯ ಮಾತಾಡಿದ್ರು; ಅದು ನಿಮಗೆ ಸುದ್ದಿ ಅಲ್ವಾ; ಯಾವಾಳಾರು ಬಿಚ್ಚಿಕೊಂಡು ಕುಣದ್ರೆ ಮಾತ್ರ ಸುದ್ದಿನಾ; ನೀವೂ ಎಲ್ಲಾರ ತರಹ ಆಗೋದ್ರಿ. ಛೇ...’’- ರವಿಪ್ರಸಾದನ ಚೂರಿ ಇರಿತದ ಮಾತು ಬೆಳಿಗ್ಗೆಯಿಂದ ಆತನನ್ನು ಚುಚ್ಚುತ್ತಲೇ ಇತ್ತು.

ರವಿಪ್ರಸಾದ ಸಂಪಾದಕನಾದರೂ ಒಂದೇ ಒಂದು ಲೈನ್‌ ಸುದ್ದಿ ಬರೆದು ಗೊತ್ತಿಲ್ಲ. ಬರೆಯುವ ಪ್ರಮೇಯೂ ಬಂದಿಲ್ಲ. ಕಚೇರಿ ಸಿಬ್ಬಂದಿಯದ್ದೇ ಪೂರ್ತಿ ಪತ್ರಿಕೆ ಜವಾಬ್ದಾರಿ. ಬೆಳಿಗ್ಗೆ ರಾತ್ರಿ ಕಚೇರಿ; ರಾತ್ರಿ ರಾಜಕಾರಣಿಗಳ ಪಾರ್ಟಿ ಎಂದಿಗೂ ತಪ್ಪಿಸಿಕೊಂಡವನಲ್ಲ. ಸಂಘಟನಾ ಚತುರ. ಕಾರ್ಯಕ್ರಮದ ಸ್ಥಳದಿಂದ ಹಿಡಿದು ಪ್ರಾಯೋಜಕರು, ಅತಿಥಿ-ಪ್ರೇಕ್ಷಕರನ್ನೂ ಕ್ಷಣಮಾತ್ರದಲ್ಲಿ ಹೊಂದಿಸಬಲ್ಲ ಚಾಣಾಕ್ಷ.

ಆತನ ಆಯೋಜನೆ ಎಂದರೆ ಅತಿಥಿಗಳಿಗೂ ಅಚ್ಚುಮೆಚ್ಚು. ಅವರು ಬಂದು-ತಿಂದುಂಡು, ಮಲಗಿ ಎದ್ದು ಹೋಗುವರೆಗೂ ಎಲ್ಲವನ್ನೂ ಅವನು ನಾಜೂಕಾಗಿ ನಿಭಾಯಿಸುತ್ತಿದ್ದ. ರಾಜ್ಯದ ಮೂಲೆಗಳಿಂದಷ್ಟೇ ಅಲ್ಲ; ದೆಹಲಿ-ಮುಂಬೈಯಿಂದಲೂ ಸಾಹಿತಿ-ಕಲಾವಿದರು-ಹೋರಾಟಗಾರರು ಇಲ್ಲಿಗೆ ಬರಲು ಹಾತೊರೆಯುತ್ತಿದ್ದರು. 

ಪತ್ರಿಕೆಗಳಲ್ಲಿ ಯಾವ ಸುದ್ದಿ, ಯಾರ ಸುದ್ದಿ, ಯಾವ ಕಾರಣಕ್ಕೆ ಆಲ್ ಎಡಿಷನ್‌ ಬರುತ್ತದೆ ಎಂಬುದು ತಿಳಿಯಲಾರದಷ್ಟು ಮುಗ್ಧನೇನೂ ಆತ ಅಲ್ಲ; ಅವನಿಗೆ ಬಹುತೇಕ ಪತ್ರಿಕೆಗಳ ಸಂಪಾದಕರು ಗೊತ್ತು; ಟಿ.ವಿ ವರದಿಗಾರರು, ಪತ್ರಿಕೆಗಳ ಬ್ಯೂರೋ ಮುಖ್ಯಸ್ಥರಂತೂ ಫೋನ್ನಲ್ಲೇ ಕುಶಲೋಪರಿ ಕೇಳುವಷ್ಟು ಸದರ.

ಈ ಉಪನ್ಯಾಸ ಕಾರ್ಯಕ್ರಮ ಅವನೇ ಸಂಘಟಿಸಿದ್ದು; ಸಂಶೋಧಕ-ಪ್ರಾಧ್ಯಾಪಕ ಮನೋಹರ ಕಂಗೇನಹಳ್ಳಿ ಅತಿಥಿಗಳು. ಬರೆದಿದ್ದಕ್ಕಿಂತ ಭಾಷಣ ಮಾಡಿದ್ದೇ ಹೆಚ್ಚು. ಸಬಾಲ್ಟನ್ಹಿಸ್ಟ್ರಿ ಅವರ ಈಗ ಸದ್ಯದ ನೆಚ್ಚಿನ ವಿಷಯ. ಸಮಾಜದ ಕಟ್ಟಕಡೆಯ ವ್ಯಕ್ತಿಯ ನೆಲೆಯಿಂದ ಇತಿಹಾಸ ಕಟ್ಟುವ ಕ್ರಮದಲ್ಲಿನ ಅವರ ಹೊಳಹುಗಳು ಸಾಕಷ್ಟು ಚರ್ಚೆಗೆ ಒಳಗಾಗಿವೆ; ವಿವಾದವನ್ನೂ ಹುಟ್ಟು ಹಾಕಿವೆ. ಅವರಿಗೀಗ ಹೋದಲ್ಲಿ-ಬಂದಲ್ಲಿ ಜನ ಮುತ್ತಿಕೊಳ್ಳುತ್ತಾರೆ. ಅಭಿಮಾನಿಗಳು ಹಲವರು; ವಿರೋಧಿಗಳು ಕೆಲವರು. ಮಾಧ್ಯಮಗಳಿಗೂ ಅವರನ್ನು ಹಿಂಬಾಲಿಸುವ ಅನಿವಾರ್ಯತೆ ಎದುರಾಗಿದೆ.   

ವೇದಿಕೆಯಲ್ಲಿ ಆಕ್ರೋಶ, ಉದ್ವೇಗಗಳಿಂದ ಮನೋಹರ ಮೈತುಂಬಿ ಮಾತನಾಡುತ್ತಿದ್ದರೆ, ನೂತನ್‌ ಕುಳಿತಲ್ಲೇ ಚಡಪಡಿಸುತ್ತಿದ್ದ. ಅವರ ಮಾತುಗಳಿಗೆ ತಾನೇಕೆ ರಕ್ತ ಕುದಿಸಿಕೊಳ್ಳಬೇಕು? ಮನಸ್ಸಲ್ಲೇ ಅಂದುಕೊಂಡ. ಆಗಲಿಲ್ಲ. ಒಮ್ಮೆ ದೀರ್ಘ ಉಸಿರೆಳೆದುಕೊಂಡ. ನಿರಾಳವಾಯಿತು. ಅಕ್ಕ-ಪಕ್ಕ ನೋಡಿದ, ಸಹೋದ್ಯೋಗಿಗಳು ಒಬ್ಬರೂ ಇಲ್ಲ. ಮೊಬೈಲ್‌ ಕಣ್ಣಾಡಿಸಿದ; ವಾಟ್ಸ್‌ ಆ್ಯಪ್‌ ಗ್ರೂಪಲ್ಲಿ “ನಮಗೆ ಸುದ್ದಿ ನೀನೇ ಕೊಡಬೇಕು’’ ಅವರೆಲ್ಲರ ಮೆಸೇಜ್‌ ಥಮ್ಸ್ಅಪ್‌ ಇಮೋಜಿ ಹಾಕಿದ.

ಮನೋಹರ ಕಂಗೇನಹಳ್ಳಿ ಅವರಿಗಾಗಿಯೇ ರವಿಪ್ರಸಾದ ರಾತ್ರಿ ಆಯೋಜಿಸಿದ್ದ ಔತಣಕೂಟಕ್ಕೆ ನೂತನ್‌ಗೂ ಆಹ್ವಾನವಿತ್ತು.

ಮನಸ್ಸು ವಿಹ್ವಲಗೊಂಡಿತ್ತು. ಸುದ್ದಿ ಬರೆಯುವುದರೊಳಗೆ ಸುಸ್ತಾಗಿ ಹೋದ. ಯಾವತ್ತೂ ಹೀಗೆ ಆಗಿದಿಲ್ಲ. ಸಹೋದ್ಯೋಗಿಳಿಂದ ಪಾರ್ಟಿಗೆ ಕರೆಗಳು ಬರುತ್ತಲೇ ಇದ್ದವು; ಸಬೂಬು ಹೇಳಿ ತಪ್ಪಿಸಿಕೊಂಡ.

--

ಈ ಸೆಮ್‌ ಫೀಕಟ್ಟಿಲ್ಲ- ಮಗಳು ಮೇದಿನಿ ಹೇಳಿದಾಗಲೇ ತಾನಿನ್ನೂ ರವಿಪ್ರಸಾದನ ಫೋನ್‌ ಗುಂಗಿನಲ್ಲಿದ್ದೇನೆಂಬ ಅರಿವಾಯಿತು ನೂತನ್‌ಗೆ. ಅವಳ ಡ್ಯಾನ್ಸ್‌ ಫೀಜ್‌ ಕೂಡ ಕಟ್ಟಿಲ್ಲ ಎಂದು ಹೆಂಡತಿ ಸಾಕಲ್ಯ ಆಗಲೇ ಎಚ್ಚರಿಸಿದಳು. ಈ ತಿಂಗಳ ಸಂಬಳ ತಡವಾಗುತ್ತೆ - ಕಚೇರಿಯ ಮೇಲ್ ಮೊನ್ನೆ ಬಂದಿದ್ದು ನೆನಪಿಗೆ ಬಂತು. ಮತ್ತಷ್ಟು ಒತ್ತಡಕ್ಕೆ ಒಳಗಾದ.

ಮೊಬೈಲ್‌ ರಿಂಗ್‌ ಆಯಿತು. ಎಂಎಲ್ಎ ಕೃಷ್ಣರಾಯಪ್ಪನ ಪಿಎ ವಿಷ್ಣುಮೂರ್ತಿ ಫೋನ್. “ಅದೇ ಸರ್‌ ಇವತ್ತು ನಿಮ್ಮ ಪೇಪರ್‌ನಲ್ಲಿ ಜಿಲ್ಲಾ ಆಸ್ಪತ್ರೆ ಸೋರುತ್ತಿದೆ ಅಂತ ಬಂದಿದೆಯಲ್ಲ; ಸಾಹೇಬ್ರು ಇನ್ನರ್ಧ ಗಂಟೆಯಲ್ಲಿ ಅಲ್ಲಿಗೆ ಭೇಟಿ ಕೊಡ್ತಾರೆ. ಅವರ ಮನೆ ಹತ್ತಿರವೇ ಬನ್ನಿ. ಇಲ್ಲಿಂದಲೇ ಎಲ್ಲಾ ಒಟ್ಟಿಗೆ ತಿಂಡಿ ತಿಂದುಕೊಂಡು ಹೋಗೋಣ’’

‘‘ಅಲ್ಲಿಗೆ ಬರಲ್ಲ. ನಮ್ಮ ಫೋಟೊಗ್ರಾಫರ್‌ ಕರೆದುಕೊಂಡು ನೇರವಾಗಿ ಆಸ್ಪತ್ರೆಗೆ ಬರುತ್ತೇನೆ’’ ನೂತನ್‌ ಅಂದ.

“ಇಲ್ಲ ಸರ್, ಸಾಹೇಬ್ರು ನಿಮ್ಮನ್ನು ಇಲ್ಲಿಗೇ ಬರಲು ಹೇಳಿದರು; ನಿಮ್ಮ ಫೋಟೊಗ್ರಾಫರ್‌ ಆಲ್ರೆಡಿ ಇಲ್ಲಿದ್ದಾರೆ…’’ ವಿಷ್ಣುಮೂರ್ತಿ ಮಾತು ಮುಗಿಸಿರಲಿಲ್ಲ.

“ನಿಮ್ಮ ಸಾಹೇಬ್ರಿಗೆ ಹೇಳ್ರಿ. ಆಸ್ಪತ್ರೆಯಲ್ಲೇ ಸಿಗುವೆ’’ ಫೋನ್ಇಟ್ಟ.

ಅದುವರೆಗೂ ವೇಯಿಟಿಂಗ್‌ನಲ್ಲಿದ್ದ ಸಂಶೋಧಕ ಮನೋಹರ ಫೋನ್‌ ರಿಂಗ್‌ ಆಯಿತು.

ಮನೋಹರ ಅವರು ನೂತನ್‌ಗೆ ಪರಿಚಯವೇ; ಕಾರ್ಯಕ್ರಮಕ್ಕಾಗಿ ಶಿವಮೊಗ್ಗಕ್ಕೆ ಬಂದಾಗಲೆಲ್ಲ ದೊಡ್ಡ-ದೊಡ್ಡ ಪತ್ರಿಕೆಗಳ ವರದಿಗಾರರನ್ನು ಹುಡುಕಿಕೊಂಡು ಭೇಟಿ ಮಾಡುವುದು ಅವರಿಗೆ ಖಯಾಲಿ. ಹೀಗೆ ಸಂಪರ್ಕಕ್ಕೆ ಬಂದಿದ್ದಷ್ಟೇ. ಕೇಂದ್ರ ಸರ್ಕಾರ ತನಗೆ ಫೆಲೋಶಿಪ್‌ನಡಿ ಹೊಸ ವಿಷಯದ ಸಂಶೋಧನೆಗೆ ದೆಹಲಿಗೆ ಕರೆಸಿಕೊಳ್ಳುತ್ತಿದೆ ಎಂತಲೂ ಕಳೆದ ಬಾರಿ ಭೇಟಿಯಾದಾಗ ಅವರು ಹೇಳಿದ್ದು ನೆನಪು.

‘‘ನಮ್ಮಂತಹವರ ಸುದ್ದಿ ಆಲ್ ಎಡಿಷನ್ನಲ್ಲಿ ಬಂದರೆ ನಿಮ್ಮ ಪತ್ರಿಕೆ ಮೈಲಿಗೆಯಾಗುತ್ತದೆಯೇ’’ ಛೇಡಿಸುತ್ತಲೇ ಶುರುವಿಟ್ಟರು ಮನೋಹರ.

‘‘ಹಾಗಲ್ಲ ಸರ್, ನೀವು ಮಂಡಿಸಿದ ವಿಷಯ ನನಗೆ ಸ್ಪಷ್ಟ ಆಗಲಿಲ್ಲ; ಹಾಗಾಗಿ, ಆಲ್ಎಡಿಷನ್‌ಗೆ ಕಳಿಸಲು ಹಿಂಜರಿದೆ’’ ಹೇಳುತ್ತಿದ್ದನಷ್ಟೇ.

‘‘ನೋಡಿ ನಾನು ಪುಳಚಾರ್‌ ಸಾಹಿತಿ ಅಲ್ಲ; ಒಳಗೊಂದು-ಹೊರಗೊಂದು ಗೊತ್ತಿಲ್ಲ. ನೀವಾದರೂ ಸರಿಯಾಗಿ ಗ್ರಹಿಸಿ ಬರಿತ್ತೀರಿ ಅಂದುಕೊಂಡಿದ್ದೆ. ಎಲ್ಲಾ ಪತ್ರಿಕೆಗಳಲ್ಲೂ ಒಂದೇ ರೀತಿ ಪ್ರಕಟವಾಗಿದೆ. ಬೇರೆಯವರಿಗೂ ನೀವೇ ಸುದ್ದಿ ಕೊಟ್ರಂತೆ. ಮಾಹಿತಿ ಬಂತು ನನಗೆ. ನನ್ನ ವಾದದಲ್ಲಿ ತಪ್ಪೇನಿದೆ? ಈ ಸುದ್ದಿ ಇವತ್ತು ನಿಮ್ಮ ಪೇಪರ್‌ನಲ್ಲಿ ಆಲ್ಎಡಿಷನ್‌ ಬಂದಿದ್ರೆ ರಾಜ್ಯದಾದ್ಯಂತ ದೊಡ್ಡ ಚರ್ಚೆ ಆಗುತ್ತಿತ್ತು. ನನ್ನ ಧ್ವನಿಗೆ ಇನ್ನಷ್ಟು ಧ್ವನಿಗಳು ಸೇರಿಕೊಳ್ಳುತ್ತಿದ್ದವು. ದೊಡ್ಡ ಆಂದೋಲನದ ರೂಪ ಪಡೆದುಕೊಳ್ಳುತ್ತಿತ್ತು. ದಲಿತ ಅಂತ ನನ್ನ ವಿರುದ್ಧ ನೀವು ಪಿತೂರಿ ಮಾಡಿದ್ರಿ; ಇದನ್ನು ನಾನು ಇಲ್ಲಿಗೆ ಬಿಡಲ್ಲ; ನಿಮ್ಮ ಎಡಿಟರ್‌ ಜತೆಗೆ ಮಾಲೀಕರ ಗಮನಕ್ಕೂ ತರುವೆ’’ ಮನೋಹರ ಕೋಪದಿಂದ ಕುದಿಯುತ್ತಿದ್ದರು.

‘‘ಪಿತೂರಿ-ಗಿತೂರಿ ಏನೂ ಇಲ್ಲ ಸರ್. ಬ್ಯೂರೋದಲ್ಲಿ ಏನಾಗಿದೆ ತಿಳಿದು ಮಾತಾಡುವೆ’’ ತಡಬಡಾಯಿಸಿ ಮುಖ್ಯಸ್ಥರಿಗೆ ಫೋನ್‌ ಹಚ್ಚಿದ.

ವಿಷಯ ಆಗಲೇ ಅವರಿಗೂ ತಲುಪಿತ್ತು. ಈತನ ಫೋನ್‌ಗಾಗಿಯೇ ಕಾಯುತ್ತಿರುವಂತೆ, ‘‘ಯಾಕ್ರಿ ಅದನ್ನು ಆಲ್ ಎಡಿಷನ್‌ಗೆ ಕಳಿಸಿಲ್ಲ’’ ದಬಾಯಿಸಿದರು.

‘‘ಸಾರ್, ಅದು ವಿಷಯ ಸ್ಪಷ್ಟತೆ ಇರಲಿಲ್ಲ; ಅವರು ಹೇಳಿದ ವಿಚಾರ ಹೊಸದೇನೂ ಅಲ್ಲ. ಹಾಗಾಗಿ..’’ ಎನ್ನುತ್ತಿದ್ದಂತೆ, ‘‘ಅದನ್ನು ನೀವು ನಿರ್ಧರಿಸುತ್ತೀರಾ? ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೀರಿ. ನನಗೊಂದು ಫೋನ್‌ ಮಾಡಬೇಕಿತಲ್ವ. ಎಲ್ಲಾ ಮುದ್ರಣಗಳಿಗೆ ಪರಿಶೀಲಿಸಲು ಅಂತ ಸುದ್ದಿ ಮೇಲ್ಗಡೆ ಷರಾ ಬರೆಯಬೇಕಾಗಿತಲ್ವ’’ ಆರ್ಭಟಿಸಿದರು.

“ಫೋನ್ಮಾಡಿದೆ; ತುಂಬಾ ಹೊತ್ತು ಬ್ಯುಸಿ ಬಂತು. ಡೆಸ್ಕ್‌ನವರು ತಮ್ಮ ಗಮನಕ್ಕೆ ತರುತ್ತಾರೆ ಅಂದುಕೊಂಡೆ...’’ ನೂತನ್‌ ನಿಧಾನಕ್ಕೆ ಹೇಳಿದ.‌

ಕೋಪ ನೆತ್ತಿಗೇರಿತು.

‘‘ಯಾವಳೋ ಜತೆ ಲಲ್ಲೆ ಹೊಡೆಯುತ್ತಿರಲಿಲ್ಲ; ಎಡಿಟರ್‌ ಫೋನ್‌ ಬಮದಿತ್ತು. ಆಮೇಲೆ ಪುಟ ನೋಡುವುದರಲ್ಲಿ ಬ್ಯುಸಿಯಾದೆ. ನೀವೂ ಬ್ಯೂರೋಕ್ಕೆ ಬನ್ನಿ, ಗೊತ್ತಾಗುತ್ತೆ; ಅಂಡು ತುರಿಸೋಕೂ ಆಗಲ್ಲ. ಆ ಸೆಕೆಂಡ್‌ ಪುರುಸೊತ್ತಿರಲ್ಲ; ಎಲ್ಲಾ ಕೆಲಸ ನನ್ನ ಮೇಲೇ; ಅದು ಬಿಡಿ; ನೀವು ಕಳಿಸಿದ ಸುದ್ದಿನೇ ಒಂಥರ ಇದೆ. ಅವರು ಸಭೆಯಲ್ಲಿ ಮಾತಾಡಿದ್ದೇ ಬೇರೆ ಇದೆ. ಅವರ ಆಡಿಯೋ ನನಗೆ ಸಿಕ್ಕಿದೆ. ನೀವೂ ಕೇಳ್ರಿ’’

“ಸಮಾಜದಲ್ಲಿ ಈಗ ಜಾತಿ ಶೇಷ್ಠತೆ-ಕೀಳರಿಮೆ ಭಾವಗಳೆಲ್ಲವೂ ಅಳಿಯುತ್ತಿವೆ. ಇದು ಸಮ ಸಮಾಜ ನಿರ್ಮಾಣಗೊಳ್ಳುವುದರ ಧ್ಯೋತಕ. ಹಿಂದೆ ಹಳ್ಳಿಗಳಲ್ಲಿ ಬ್ರಾಹ್ಮಣರ ಮನೆ-ತೋಟದ ಕೆಲಸಗಳಿಗೆ ದಲಿತರು ಹೋಗುತ್ತಿದ್ದರು. ಇವರ ಕಷ್ಟ-ನೋವುಗಳಿಗೆ ಅವರು ಸ್ಪಂದಿಸುತ್ತಿದ್ದರು. ಅವರಿಬ್ಬರಲ್ಲಿ ಎಷ್ಟೇ ಸಾಮಾಜಿಕ ಕಟ್ಟುಪಾಡುಗಳಿದ್ದರೂ ಅನ್ಯೋನ್ಯತೆ ಇತ್ತು. ಇದು ಬಹಳಷ್ಟು ಸಂದರ್ಭಗಳಲ್ಲಿ ಯಾಜಮಾನ-ಯಾಜಮಾನಿ-ಆಳು ಈ ರೀತಿಯ ಭೇದವನ್ನು ಮೀರಿ ಅವರು ಮನುಷ್ಯ ಸಹಜ ಪ್ರೀತಿಗೆ ಒಳಗಾಗುತ್ತಿದ್ದರು. ದೈಹಿಕ ಹಸಿವನ್ನೂ ನೀಗಿಸಿಕೊಳ್ಳುತ್ತಿದ್ದರು. ನಾವು ಇದನ್ನು ಪರಸ್ಪರರು ಬದುಕಿನ ಸಫಲತೆಗೆ ಕಂಡುಕೊಂಡ ಸಹಜ ಒಳದಾರಿಯಾಗಿಷ್ಟೇ ನೋಡಬೇಕು. ಪಕ್ಕದಲ್ಲಿ ಮಲಗುವಾಗ ಕಾಣದ ಜಾತಿ, ಎದ್ದಾಗ ಕಾಣುವುದು ಬೂಟಾಟಿಕೆ ಅಷ್ಟೆ.’’

‘‘ಅವರ ಸಂತಾನ ಇವರಲ್ಲಿ; ಇವರ ಸಂತಾನ ಅವರಲ್ಲಿ- ತಲತಲಾಂತರದಿಂದ ಬೆಳೆದು ಬಂದಿದ್ದು ನೋಡಿದ್ದೇವೆ. ಈ ರೀತಿ ಕಸಿಗೊಂಡ ಪೀಳಿಗೆ ಇವತ್ತು ಸಮಾಜದ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿದ್ದನ್ನು ಕಾಣುತ್ತಿದ್ದೇವೆ. ಈ ಕುರಿತಂತೆ ಅಧ್ಯಯನಗಳಾಗಿದ್ದು ತುಂಬಾ ಕಡಿಮೆ. ಇದೊಂದು ತುರ್ತಿನ ಕೆಲಸವೆಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಮ ಸಮಾಜದ ಕನಸು ಕಾಣುವಲ್ಲಿ ಇದು ಮುಖ್ಯ. ಬುದ್ಧ, ಬಸವ, ಯೇಸು, ಪೈಗಂಬರ್, ಅಂಬೇಡ್ಕರ್, ಗಾಂಧಿ ಎಲ್ಲರೂ ಇದೇ ಕನಸು ಕಂಡಿದ್ದರು’’.

- “ಇದರಲ್ಲಿ ಎಲ್ಲಿದೆ ಗೊಂದಲ? ಬ್ರಾಹ್ಮಣರು-ದಲಿತರು ಅನ್ಯೋನ್ಯವಾಗಿ ಬದುಕಿದ್ದರು ಅಂತ ಸಪ್ಪೆಯಾಗಿ ಬರೆದರೆ ಯಾರು ಓದ್ತಾರೆ? ‘‘ಬ್ರಾಹ್ಮಣ-ದಲಿತರ ಅಕ್ರಮ ಸಂಬಂಧ; ಕಸಿ ಸಂತಾನದ ಅಧ್ಯಯನ ಅಗತ್ಯ’’ ಅಂತ ಹೆಡ್ಡಿಂಗ್‌ನಲ್ಲಿ ಬಂದಿದ್ದರೆ ಎಷ್ಟೊಂದು ಪೇಪರ್‌ ಸೇಲ್‌ ಆಗುತ್ತಿತ್ತು. ಏಕೆ ಹೀಗೆ ಮಾಡಿದ್ರಿ?’’ ಮುಖ್ಯಸ್ಥರು ಪ್ರಶ್ನಾವಳಿಯನ್ನೇ ಮುಂದಿಟ್ಟರು.

‘‘ಇದು ಎಡಿಟರ್ ಗಮನಕ್ಕೆ ಬಂದರೆ ಸಮಸ್ಯೆ. ಆ ಯಪ್ಪ ಮೊದಲೇ ಕಿರಿಕ್‌ ‍ಪಾರ್ಟಿ. ರಾದ್ದಾಂತ ಆಗುವ ಮೊದಲು ಮನೋಹರಗೆ ಫೋನ್ಮಾಡಿ, ಸ್ವಾರಿ ಕೇಳ್ರಿ’’ ನೂತನ್‌ ಮಾತಿಗೂ ಕಾಯದೆ ಫೋನ್ ಕಟ್ ಮಾಡಿದರು.

---

ನೂತನ್‌ ಬಾಲ್ಯದಿಂದಲೂ ಒಬ್ಬಂಟಿ; ಒಡಹುಟ್ಟಿದವರು ಅಂತ ಯಾರೂ ಇಲ್ಲ. ಮುಸುಕಾದ ಮದುವೆ ಫೋಟೊದಲ್ಲಿ ಅಪ್ಪನ ನೋಡಿದ್ದು ಬಿಟ್ಟರೆ ಆತನ ಕುರುಹು ಮನಸ್ಸಿನಲ್ಲಿ ಇಲ್ಲವೇ ಇಲ್ಲ. ಅಜ್ಜಿ ಮನೆಯಲ್ಲೇ ಬೆಳೆದಿದ್ದರಿಂದ ಆರು ತಿಂಗಳಿಗೊ, ವರ್ಷಕ್ಕೊಮ್ಮೆ ಅಮ್ಮನ ಪ್ರೀತಿ. ಹೈಸ್ಕೂಲ್‌ ನಂತರದ ಓದೆಲ್ಲಾ ಜನಾಂಗದ ಹಾಸ್ಟೆಲ್‌ನಲ್ಲಿದ್ದೇ ಆಗಿದ್ದು. ಸಂಬಂಧಿಕರು-ಊರಿನ ನಂಟು ಎಲ್ಲವೂ ಅಷ್ಟಕ್ಕಷ್ಟೇ.

ಅವನಿಗೆ ಹಲವಾರು ಬಾರಿ ಕಾಡಿದ್ದಿದೆ. ಅಪ್ಪ ಏಕೆ ಅಮ್ಮನ ಒಂಟಿಯಾಗಿ ಬಿಟ್ಟು ದೇಶಾಂತರ ಹೋದ. ಚಿಕ್ಕ ಮಗುವಾಗಿರುವಾಗಲೇ ಅಮ್ಮ ನನ್ನನ್ನು ಏಕೆ ಅಜ್ಜಿ ಮನೆಯಲ್ಲಿ ಬಿಟ್ಟಳು. ಇವತ್ತಿಗೂ ಅಮ್ಮ ಊರಲ್ಲೇ ಉಳಿದು ತೋಟ-ಮನೆ ಅಂತ ಒದ್ದಾಡುತ್ತಿರುವುದೇಕೆ? ದಲಿತರ ಕೇರಿಯ ರಾಮಣ್ಣನ ಮಗ ಶಂಕರಂದು ತನ್ನದು ಒಂದೇ ರೂಪ; ಪಡಿಯಚ್ಚು ಅಂತೆಲ್ಲಾ ಈಗಲೂ ಊರಲ್ಲಿ ಗುಸುಗುಸು ಏಕೆ? ಈ ಅಪ್ಪ-ಮಕ್ಕಳಿಬ್ಬರಿಂದಲೂ ತಾನು ಬೇಕಂತಲೇ ತಪ್ಪಿಸಿಕೊಳ್ಳುವುದೇಕೆ?‌

ಈ ಶಂಕರ ತನಗಿಂತ ಎರಡು ವರ್ಷ ಚಿಕ್ಕವನು. ಗಟ್ಟಿಮುಟ್ಟು ಆಳತ್ತನ. ಬಿ.ಎ. ಓದು ಮುಗಿಯುತ್ತಿದ್ದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಮೆಸ್ಕಾಂನಲ್ಲಿ ನೌಕರಿ ಹಿಡಿದ; ಸಹೋದ್ಯೋಗಿಯನ್ನೇ ಪ್ರೀತಿಸಿದ; ಜಾತಿ ಅಡ್ಡ ಬರಲೇ ಇಲ್ಲ. ಇಬ್ಬರ ಕಡೆಯವರೂ ನಿಂತು ಮಂತ್ರ ಮಾಂಗಲ್ಯದಡಿ ಮದುವೆ ಮಾಡಿಸಿದ್ದರು. ಇಬ್ಬರು ಮಕ್ಕಳು; ಅವರಿಬ್ಬರದೂ ಈಗ ಎಂಜಿನಿಯರಿಂಗ್.

ಎಂಎಲ್ಎ ಪಿಎ ಫೋನ್‌ ರಿಂಗ್‌ ಆಗುತ್ತಲೇ ಇತ್ತು. ಈಗ ಹೊರಟೆ ಎನ್ನುತ್ತಲೇ ನೂತನ್ ಅವಸರದಿಂದ ವಾಶ್ರೂಂಗೆ ಹೊರಟ. ಹಾಲ್ನಲ್ಲಿ ಹೆಂಡತಿ, ಮಗಳಿಗೆ ಹೇಳುತ್ತಿದ್ದದ್ದು ಕೇಳಿಸಿತು.

ನಿನ್ನ ಅಪ್ಪನ ಊರಿನ ಹುಡುಗನೇ ಅಂತಿದ್ದೆಲ್ಲಾ ಆ ಎಂಜಿನಿಯರಿಂಗ್‌ ಫ್ರೆಂಡ್‌ನ ಒಮ್ಮೆ ಮನೆಗೆ ಕರೆದುಕೊಂಡು ಬಾ.

ಮೈ ಕಂಪಿಸಿತು. ಎದೆ ಬಡಿತ ಹೆಚ್ಚಾಯಿತು; ಉಸಿರು ಬಿಗಿಯಿತು. ವಾಶ್ರೂಂ ಹೊಕ್ಕನಷ್ಟೇ; ನಿರಾಳನಾಗಲಿಲ್ಲ. ಫ್ಲಶ್ ಜೋರು ಒತ್ತಿದ. ಕಿತ್ತು ಕೆಳಗೆ ಬಿತ್ತು. ಕಮಾಡಿಂದ ಸಿಡಿದ ನೀರು ಮುಖಕ್ಕೆ ರಪ್ಅಂತ ರಾಚಿತು. ಒರೆಸಿಕೊಳ್ಳುವುದೋ-ಬೇಡವೋ ಗೊಂದಲಕ್ಕೆ ಬಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT