ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಉರುಳಿ ಬಿದ್ದ ಮರ

Last Updated 22 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

‘ಜುಗಾರಿಕ್ರಾಸ್’ ಕಾದಂಬರಿ ಮುಖಪುಟ ಚಿತ್ರದಲ್ಲಿ ರೈಲು ಹಳಿಯೊಂದರ ಮೇಲೆ ಯುವತಿ ನಡದೊಳಗೆ ಯುವಕ ಕೈಯಿರಿಸಿಕೊಂಡು ಜೋಡಿ ಹಕ್ಕಿಯಂತೆ ಸಾಗುತ್ತಿದ್ದರು. ಆ ಮಾರ್ಗದ ಮುಂದೆ ಬೆಂಕಿಯ ಉರಿಜ್ವಾಲೆ ಹೊತ್ತುರಿಯುತ್ತಿದೆ. ಈ ಸಚಿತ್ರ ನೋಡುತ ಪರವಶಳಾದಳು ಸ್ಮಿತ. ಬಾವಿಯೊಳಗೆ ಹರಳು ಎಸೆದಂತೆ ಕದ ಕುಟ್ಟಿದ ಸದ್ದು ತೂಗಾಡುವ ಓಲೆ ಕಿವಿಯೊಳಗೆ ಬಿತ್ತು. ಮನ ತುಂಬಿ ಹರಿದಾಡುವ ಆನಂದ ಕದಡಿದ ನೀರಾಯಿತು. ಉದಾಸೀನತೆ ತಾಳಿ ಒಲ್ಲದ ಮನಸ್ಸಿನಿಂದ ಕೈಯೊಳಗಿದ್ದ ಪುಸ್ತಕ ಮೇಜಿನಲ್ಲಿರಿಸಿ ಕುಳಿತ ಕುರ್ಚಿ ಬಿಟ್ಟು ಶಪಿಸುತ ಹೋಗಿ ಬಾಗಿಲು ತೆರೆದಳು. ವೈಶಾಖದ ಚಮಕುವ ಉರಿ ಬಿಸಿಲ ಝಳ ತಾಗಿ ಒಳನುಗ್ಗಿತು. ದಿಟ್ಟಿಗೆ ಚಂದ್ರಕಂಡ. ಮುಖ ಬಾಡಿದ ಹೂವಾಗಿತ್ತು. ಕಣ್ಣಲ್ಲಿ ಕಿಚ್ಚಿನಂಥ ರೋಷವಿತ್ತು. ಸೋತ ತುಟಿಗಳಲ್ಲಿ ನಿರಾಶೆ ಮನೆ ಮಾಡಿತು. ದೇಹ ಆತಂಕದ ಉರಿನಾಲಿಗೆಯೊಳಗೆ ಸಿಲುಕಿ ಸುಟ್ಟ ಹಪ್ಪಳವಾಗಿತು. ನೋಟ ಇಳಿಜಾರುತಿದ್ದಂತೆ ಮನ ಮಂಜಿನಂತೆ ಕರಗಿತು. ಅದು ಕನಿಕರ ತುಂಬಿ ಕರೆಯೊಲೆಯಾಗಿ ಮನೆಯೊಳಗೆ ಕರೆ ತಂದು ಹಜಾರದಲ್ಲಿದ್ದ ಆಸನ ಮಂಚದಲ್ಲಿ ಕುಳಿಸಿತು.

ಹವಾನಿಯಂತ್ರಣ ಯಂತ್ರ ಉಗಿಯುವ ತಂಗಾಳಿ ನಡುಹಗಲ ಬಿರು ಬಿಸಿಲಿನಿಂದ ಬಸವಳಿದು ತತ್ತರಿಸುತ್ತಿರುವ ಜೀವಕ್ಕೆ ತಂಪಿಡುತ್ತಾ ಚೇತರಿಕೆಗೆ ಚೈತನ್ಯದಾಯಕವಾಯಿತು. ಪಾಕ ಕೋಣೆಯೊಳಗೆ ನುಸುಳಿ ಸ್ಟಿಲ್ ಗ್ಲಾಸ್‌ನೊಳಗೆ ನೀರು ತಂದು ಕೊಟ್ಟಳು. ಗುಟಕರಿಸಿದ, ಗಂಟಲಿಗೆ ತಣ್ಣಗಿತ್ತು. ಅರೆಗಳಿಗೆಯಲ್ಲಿ ಕುಂಡದ ತಟ್ಟೆಯೊಳಗೆ ನಾಲ್ಕು - ಐದು ಚಕ್ಲಿ ಇರಿಸಿ ತಂದು ಚಂದ್ರನ ಮುಂದಿರುವ ಕಿರು ಮೇಜಿನಲ್ಲಿರಿಸಿದಳು. ಕೈಗೂ ಬಾಯಿಗೂ ತಾಲೀಮು ಸುರುವಾಯಿತು. ಕೆಟ್ಟ ಬಾಯಿಗೆ ತುಂಬಾ ರುಚಿಕಟ್ಟಾಗಿತ್ತು. ಹರಿವಾಣದೊಳಗೆ ಎರಡು ಪಿಂಗಾಣಿ ಬಟ್ಟಲು ಇಟ್ಟು ಅದರೊಳಗೆ ಚಹಾ ಭರಿಸಿಕೊಂಡು ಬಂದು ವಿನಯವಂತಿಕೆಯಿಂದ ತಲೆಬಾಗಿ ಆತನೆದರು ಹಿಡಿದಳು. ಒಂದು ಬಟ್ಟಲು ಎತ್ತಿಕೊಂಡು ಕುಟುಕುತ್ತಿದ್ದ. ಅದು ಸವಿ ಸವಿಯಾಗಿಯೇ ಸವೆಯುತ್ತಾ ಹೋಯಿತು. ಚಂದ್ರನ ಪಕ್ಕ ಸ್ಮಿತ ಬಂದು ಕುಳಿತಳು. ಖಾಲಿ ಹೊಂಡದೊಳಗೆ ಹೊಸ ನೀರು ತುಂಬಿ ನಿಲ್ಲುವಂತೆ ಮೈಮನಗಳಲ್ಲಿ ಹೆಮ್ಮೆ ತುಂಬಿತು. ಅಮೃತಘಳಿಗೆ ಎಂದಾಡಿಕೊಂಡು ಹಸನ್ಮುಖಿಯಾಗಿಯೇ ಚಹಾ ಹೀರುತ್ತಿದ್ದಳು.

ಕಾಲ ನರಳಾಟದೊಡನೆ ನಂಟು ಇರಿಸಿಕೊಂಡು ಜೀವಿಗಳನ್ನು ನರಳಿಸದೆ ಬಿಡದು ಎಂಬ ಅನುಭಾವ ಹತ್ತು ವರುಷ ಗತಿಸಿದ ನಂತರ ಇದೇ ಮೊದಲ ಬಾರಿಗೆ ಕಂಡ ಆ ದಾರ್ಶನಿಕ ವದನದೊಳಗೆ ಎದ್ದು ಬೀಳುತಿತ್ತು. ಅಲ್ಲೊಂದು ಇಲ್ಲೊಂದು ಹನಿಮಳೆ ಉದುರಿದಂತೆ ಉದುರಿದ ಮಾತುಗಳಲ್ಲಿ ಒಂದೂ ಮಿಠಾಯಿ ಅಂಥ ಮಾತು ಇರಲಿಲ್ಲ. ಮರಳಿನಲ್ಲಿ ಬರೆದ ಅಕ್ಷರದಂಥ ನುಡಿ ನುಡಿಗಳಾಗಿಯೇ ಉಳಿದು ಬಿಟ್ಟವು.

ಬಂದ ಬೇಸರಿಕೆ ಹೋಗಲಾಡಿಸಿಕೊಳ್ಳಲು ಬೀಡಿ ಹಚ್ಚಿದ. ಅದನ್ನು ನಯವಾಗಿ ರಭಸದಿಂದ ಎಳೆದ. ಹೊಗೆ ಸುರಳಿ ಸುರಳಿ ಆಕಾರ ಧರಿಸಿ ಸುತ್ತುತ್ತಾ ಮೇಲ್ಲಾಡುತಿತ್ತು. ‘ಈ ಹಾಳು ಉಗಿಬಂಡಿ ಬಿಡುವ ಚಟ ನೀನಿನ್ನೂ ಬಿಟ್ಟಲ್ಲವೆ?’ ಮುಖದೊಳಗೆ ನಗೆಯಾಡಿತು. ‘ಬಿಡುವ ಮಾತು ಎಲ್ಲಿಯದು? ಚಟ, ಚಟ್ಟ ಹತ್ತಿಸಿ ವಿದಾಯ ಹೇಳುವವರೆಗೆ.’ ‘ತುಂಬಾ ಚನ್ನಾಗಿ ಮಾತಾಡುತ್ತೀ ಮಾರಾಯ. ಆದರೂ ಧೂಮಪಾನ ದೇಹಕ್ಕೆ ಒಳ್ಳೆದಲ್ಲ. ನಾ ಕಣ್ಣು ಹರಿಬಿಟ್ಟಂತೆ ನೀ ಕಾಲೇಜಿನಲ್ಲಿ ಓದುವಾಗ ಮೋಜಿಗಾಗಿ ಸಿನಿಮಾ - ನಾಟಕ ಅಂಥ ಅಲೆಯುತ್ತಾ ಬರಿಮೈಯಲ್ಲಿ ಕುಳಿತು ಮಾಸದ ನೆನಪುಗಳ ಪಳವಳಿಕೆ ನೆಮರುತ ಹಸಿ ಹಸಿಯಾದ ರಸಾಲಕಥೆ ಹಣೆಯುತ್ತಾ ಕದ್ದು-ಮುಚ್ಚಿ ಗಾಳಿಗೆ ಹೊಗೆ ತೂರಿ ಬಿಟ್ಟು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಸುಮ್ಮನಿದ್ದು ಬಿಡುತ್ತಿದ್ದೆ. ಈಗ ನೋಡಿದರೆ ತುಂಬಾನೆ ಬೆಳೆದು ನಿಂತಿರುವೆ. ನಿನಗಾರ ಭಯ? ಹೇಳುವರಂಥು ಕೇಳುವರಂಥೂ ಯಾರು ಇಲ್ಲ.’ ಕೆಂದುಟಿಯೊಳಗಿನಿಂದ ಬಿದ್ದ ಮಾತು ತಟ್ಟನೆ ಹಿಡಿದು ‘ನೀನಾದರೊಬ್ಬಳು ಇರುವೆಯಲ್ಲಾ.’ ಇರುಳ ಬಾನಿನಲ್ಲಿ ನಕ್ಷತ್ರ ಮಿನುಗಿದಂತೆ ಮನದಲ್ಲಿ ಹರ್ಷಮಿಂಚಿ ಮುಖ ಪೂರ್ಣಚಂದ್ರನಂಥಾಯಿತು. ಗಂಭೀರತೆ ತಾಳಿ ‘ನಾನೆಷ್ಟರ ದಿನದವಳು?’ ಖಡ್ಗದಂಥ ಕೊಂಕು ಮಾತು ಮನ ತಿವಿಯಿತು. ‘ಇರುವಷ್ಟು ದಿನ’ ಎಂದಾಡಿದ. ಪುಟಾಣಿ ಪುಟ್ಟ ಅಕ್ಕರೆಯ ಸಿಹಿ ಮುತ್ತಿಟ್ಟಂಥ ಅಭಿಮಾನ ಹಾಲು ತೊರೆಯಾಗಿ ಹರಿದು ಧನ್ಯವಾದದ ಅಲೆ ಕೇಳಿತು. ಮುಖ ಕಸಿವಿಸಿಯಾಯಿತು. ‘ಹೂವಿನೊಳಗೆ ಸುಗಂಧವಿರುವಂತೆ ಅದು ನಿನ್ನ ಬಳಿಯೇ ಇರಲಿ. ಖಂಡಿತ ಅದರ ಅವಶ್ಯಕತೆ ನನಗಿಲ್ಲ’. ಚಕಿತಳಾಗಿ ‘ಏಕೆ?.’ ದಮ್ಮು ಹೊಡೆದ. ತುಟಿಗಳ ನಡುವೆ ಕಿಡಿ ಹೊಮ್ಮಿ ಹೊಗೆ ಹೊರಾಡಿತು. ‘ಅದು ನಮ್ಮಿಬ್ಬರ ನಡುವಿನ ಸಲುಗೆ ದೂರ ತಳ್ಳಿ ಅಂತರ ಇರುಸುತ್ತಾ ಮುಂದೊಂದು ದಿನ ಸ್ನೇಹ ಸೇತುವೆಗೆ ಬಿರುಕು ತರಬಹುದು.’ ಮೆಲ್ಲನೆದ್ದು ಹೊರ ಬಂದ. ಕಸದ ತೊಟ್ಟಿಯೊಳಗೆ ಸುಟ್ಟಾರಿದ ಬೀಡಿ ತುಣುಕು ಬೀಸಾಡಿದ. ಎಲ್ಲೆಡೆ ಬಿಸಿಲಿನ ಪ್ರಖರತೆಯ ಚಾರಣವಿತ್ತು.

ಒಳ ಬಂದು ಕುಳಿತ. ಪಶ್ಚಿಮ ದಿಕ್ಕಿಗೆ ರೈಲು ಓಡುತ್ತಿರುವ ಸದ್ದು ಕಿವಿಗೆ ಅಪ್ಪಳಿಸಿ ಕ್ಷಣಗಣನೆಯಲ್ಲಿ ಇಲ್ಲವಾಯಿತು. ಗೋಡೆಗಿದ್ದ ಫೋಟೋ ಫ್ರೇಮ್‌ನಲ್ಲಿ ನಗುವ ಮಲ್ಲಿಗೆ ಕಣ್ ಸೆಳೆದು ಕಣ್ಣಾಲಿಯೊಳಗೆ ಕುಳಿತು ಬಿಟ್ಟಿತು. ‘ಸ್ಮಿತ, ಈ ಮಲ್ಲಿಗೆ ತುಂಬಾ ಅಂದವಾಗಿದೆ.’ ‘ಅದಾ ಮದುವೆಯಲ್ಲಿ ಅಮ್ಮ ಉಡುಗೊರೆಯಾಗಿ ನೀಡಿದು.’ ‘ದಿನ ಕಳೆದರೂ ಅದರ ಕಾಂತಿ ಎಳ್ಳಷ್ಟು ಕುಂದದು.’ ‘ಅಮ್ಮನ ಪ್ರೀತಿಯೇ ಅಂಥದ್ದು ಅಲ್ಲವೆ?’ ತಲೆದೂಗಿ ಮೆಲ್ಲುಸಿರಲ್ಲಿ ‘ಹೌದು, ಹೌದೆಂದ.’ ಬೆಟ್ಟದಂಥ ಮೌನ ಬಂದು ಎಸಗಿತು. ‘ಏಕೋ? ಏನಾಯಿತೋ? ಮಹಾಮೌನಿಯಾದೆ. ಚೆಂಡಿನಂತೆ ಪುಟಿಯುತ್ತಿದ್ದೆ. ಏಕಾಏಕೀ ತೂತುಬಿದ್ದ ಚೆಂಡಾದೆ.’ ‘ಹೂಂ ! ತೂತುಬಿದ್ದ ಚೆಂಡಲ್ಲ, ಒದ್ದವರ ಚೆಂಡಾದೆ.’

ಮಳೆನಿಂತು ಮತ್ತೆ ಹನಿಮಳೆ ಉದುರುವಂತೆ ಮಾತಿಗೆ ಮಾತು ಕಲೆಬೀಳುತ್ತಿದ್ದವು. ‘ನೀ ತುಂಬಾ ವಿಚಿತ್ರ ಮನುಷ್ಯ! ಯಾವಾಗ ಕೋಪಿಸಿಕೊಳ್ಳುತ್ತಿಯೋ? ಯಾವಾಗ ಶಾಂತವಾಗಿರುತ್ತಿಯೋ ನಾನರಿಯೆ. ಆದರೂ ನಿನ್ನದು; ಹಾಲಿನಂಥ ಮನಸ್ಸು.’ ತಲೆ ಬಾಗಿತು. ‘ಅದಕ್ಕೆ ಹುಳಿ ಹಿಂಡುವ ಜನರೇ ಜಾಸ್ತಿ’. ‘ಹಿಂಡುವರ ಕೆಲಸ ಹಿಂಡುವುದೇ, ಅದು ಬಿಟ್ಟು ಬೇರೇನು ಬಲ್ಲರು? ಮುರಿಯುವ ಗುಣವಿದ್ದವರ ಬಳಿ ಕೂಡಿಸುವ ಗುಣ ಎಲ್ಲಿಂದ ಆರಿಸುವುದು? ಈ ಕೂಳ್‌ರು ಸಂಬಂಧಗಳನ್ನು ಚುವುಟಿ ಮನ-ಮನೆಗೆ ಬೆಂಕಿ ಇಟ್ಟು ಅಟ್ಟಹಾಸದ ನಗೆ ಚೆಲ್ಲುತ್ತಾರೆ.’ ಕತ್ತಲೆ ಕಳೆಯಲು ದೀಪ ಹಚ್ಚುವಂತೆ ‘ಸಂಬಂಜ ಅನ್ನೋದು ದೊಡ್ಡದು ಕನಾ....!’ ಎಂಬ ನುಡಿದೀಪ ಹಚ್ಚಿದಳು. ದೇವನೂರ ಮಹಾದೇವರ ಪದ ಪುಂಜಗಳ ತೆಳು ಬೆಳಕು ಎದೆ ಗುಂಡಿಗೆ ತಾಕಿ ಮನ ಮಿದುವಾಯಿತು. ‘ಅದನಾಶ್ರಯಸಿ ಬಂದೆ.’ ಸ್ತಬ್ಧಳಾದಳು. ‘ಏನು ನಿನ್ನ ನಿಲುವು’. ಏರುಧನಿ ಇಳಿದಾಡಿ ‘ಕ್ಷಣ ಕಾಲ ತಾಳು. ಎಲ್ಲ ತಿಳಿಪಡಿಸುವೆ.’ ‘ಕೊರೆಯಬೇಡ, ಹೇಳುವುದು ಬೇಗ ಹೇಳಿಬಿಡು.’ ‘ನನ್ನ ಮಾತು ಇಷ್ಟು ಬೇಗ ಬೇಡವಾದವೆ?’ ಮೆತ್ತಗೆ ನಗು ಹೊರಬಿತ್ತು. ‘ಹಾಗೇನು ಇಲ್ಲ.’ ಒಳ ಒಳಗೆ ಧಗವಿಡುವ ದುಗುಡ ನುಂಗುತ ಹೊರ ಹಾರುವ ಮಾತು ಕಾದ ಕಬ್ಬಿಣ ಕುಡಿದ ನೀರಾತು. ‘ಬಿಸಿಲಿನ ಆರ್ಭಟ ಜೋರಾಗಿದೆ. ಏನಾದರು ಮಾತಾಡು.’ ಮತಿಗೆ ಏನು ತೋಚಲಿಲ್ಲ. ‘ಆಡಿದ ಮಾತು ಮಾಲೆಯಾಗಿಸಬೇಕಷ್ಟೆ.’ ‘ನುಡಿಹಾರ ಕಟ್ಟಬೇಕೆಂದಿರುವೆಯ್ಯಾ?’ ಉಳಿಪೆಟ್ಟು ಬಿದ್ದಂತಾಗಿ ‘ದೊಡ್ಡಮಾತು! ಅದೆನಿದ್ದರೂ; ರಸಋಷಿಗಳ ಕಜ್ಜ.’ ಮಾತಿನ ಉಯ್ಯಾಲೆ ತೂಗಾಡುತ್ತಿತ್ತು.

ಒಂದು ಇಳಿ ಸಂಜೆಯ ಬೆಳಕು ಹರಕು ಮುರಕು ಗುಡಿಸಲೊಳಗೆ ಇಣುಕಾಡುತ್ತಿತ್ತು. ಆ ಇಣುಕಾಟದೊಳಗಿನಿಂದ ಜೀವಸೆಲೆಯಾದ ಲಾಲಿಹಾಡು ನಿನದಗುಡುತ್ತಿದೆ. ಇತ್ತ ಮನೆಯಲ್ಲಿ ಅವ್ವ ನೀರು ಹಾಸಿಗೆ ಹಿಡಿದು ನರಳುತ್ತ ಮಲಗಿದ್ದಳು. ದೇಹ ಗೆದ್ದಲು ಹುಳುವಿನಂತೆ ರೋಗ ತಿನ್ನುತ್ತಿತ್ತು. ಮಾತು ಆರಿ ಹೋಗಿ ಕಣ್ಣಲ್ಲಿ ಜೀವವಿರಿಸಿಕೊಂಡು ಉಸಿರಾಡುತ್ತ, ಪಿಳಿ ಪಿಳಿ ರಪ್ಪೆ ಬಡೆಯುತ್ತಾ ದುರ ದುರನೆ ನನ್ನನು ನೋಡುತ್ತಿದ್ದಳು. ಅವಳ ತಲೆ ದಿಂಬಿನ ಬದಿಗೆ ಕುಳಿತ ನನಗೆ ಪ್ರಾಣ ಹಿಂಡಿದಂಥಾಗುತ್ತಿತ್ತು. ಸಲುಗೆಯ ಆಲಿಂಗನಕ್ಕಾಗಿ ಧಾವಿಸಿ ಬರುವ ಕಂದಮ್ಮಗಳು ಬಳಿ ಬಂದು ಒಣ ಮುಖ ಮಾಡಿಕೊಂಡು ಹಿಂದಿರುಗುತ್ತಿದ್ದರು. ಪ್ರತಿಕ್ಷಣ ಪ್ರತಿ ಗಳಿಗೆ ಪ್ರತಿ ದಿನ ಮೂರು ವರ್ಷಗಳಿಂದಲೂ ಅವ್ವನ ಉಳಿಸಿಕೊಳ್ಳಲು ಚಡಪಡಿಸುತ್ತಾ ಒದ್ದಾಡುತ್ತಿದ್ದೆ. ನಂಬಿದ ವೈದ್ಯ ಕೈಚೆಲ್ಲಿ ಬಿಟ್ಟ! ಬೆಳಗಿನ ಜಾವ ಕಣ್ಣಲ್ಲಿರುವ ಜೀವ ಕಳಚಿ ನಿಸ್ತೇಜವಾಗಿಯೇ ತೆರೆದುಕೊಂಡಿದ್ದವು. ನನ್ನ ಮೋಹ ಪದೆ ಪದೆ ಅವುಗಳನ್ನೇ ಹಿಂಬಾಲಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT