ಬುಧವಾರ, ಏಪ್ರಿಲ್ 8, 2020
19 °C

ಹಾಸ್ಯಕ್ಕೆ ನಿತ್ಯದ ಬದುಕಿನ ವಸ್ತುಗಳೇ ದ್ರವ್ಯ

ಸುಮನಾ ಕೆ. Updated:

ಅಕ್ಷರ ಗಾತ್ರ : | |

ಸುಮುಕ್ತಿ ಸುರೇಶ್‌

* ನೀವು ಈ ಕ್ಷೇತ್ರಕ್ಕೆ ಬಂದಿದ್ದು ಹೇಗೆ?
ನಾನು ಆಹಾರ ಲ್ಯಾಬೋರೇಟರಿಯಲ್ಲಿ ಕೆಲಸ ಮಾಡುತ್ತಿದ್ದೆ. ಐಟಿಸಿಯಲ್ಲಿ ಶೆಫ್‌ ಆಗಿಯೂ ಇದ್ದೆ. ಆಗ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ನನ್ನ ಹವ್ಯಾಸವಾಗಿತ್ತು. ಅವಕಾಶಗಳು, ಹೆಚ್ಚಾದಂತೆ ನನಗೆ ಕಾಮಿಡಿಯನ್‌ ಆಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಹೆಚ್ಚಾಯಿತು. ಈಗ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಕ್ಷೇತ್ರಕ್ಕೆ ತುಂಬಾ ಜನ ಮಹಿಳೆಯರು ಬರುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ.  ಇಲ್ಲಿ ತಮಾಷೆ, ಹೊಸ ಜೋಕ್‌ಗಳನ್ನು ನಾವು ಸೃಷ್ಟಿಸುತ್ತಿರಬೇಕು. ಪ್ರೇಕ್ಷಕರ ಮನಃಸ್ಥಿತಿ ಅರ್ಥ ಮಾಡಿಕೊಳ್ಳವಂತಹ ಸಾಮರ್ಥ್ಯ ಇರಬೇಕು. ಇದೆಲ್ಲಾ ನನ್ನಲ್ಲಿದೆ ಎಂದು ಅರಿವಾಯಿತು. 

* ಬರಹಗಾರ್ತಿ, ನಿರ್ದೇಶಕಿ ಎರಡರಲ್ಲಿ ಯಾವುದು ನಿಮಗಿಷ್ಟ?‌
ನಾನು ಬರಹಗಾರ್ತಿ, ನಟಿ ಹಾಗೂ ಹಾಸ್ಯಗಾರ್ತಿ. ಇದರಲ್ಲಿ ನನ್ನ ಇಷ್ಟದ ಕ್ಷೇತ್ರ ಹಾಸ್ಯವೇ. ಲೈವ್‌ ಷೋ ನನಗಿಷ್ಟ. ನಾನು ಪ್ರೇಕ್ಷಕರ ಜೊತೆ ನೇರ ಸಂಪರ್ಕ ದಲ್ಲಿರಬೇಕು. ಕಾರ್ಯಕ್ರಮ ನಡೆಸಲು ತುಂಬ ಎನರ್ಜಿ, ಧೈರ್ಯ ಬೇಕು. ಇಲ್ಲಿ ಜನರ ಜೊತೆ ನೇರ ಒಡನಾಟ, ಪ್ರಶ್ನೆ, ಉತ್ತರ, ನಗು ನಗು ಅಷ್ಟೇ. 

* ಹಾಸ್ಯ ಎಂದರೆ?
ಸತ್ಯ ಮತ್ತು ಪ್ರಾಮಾಣಿಕತೆ. ಎಲ್ಲಾ ವ್ಯಕ್ತಿಗಳ ಅಂತರಂಗದಲ್ಲಿ ಯಾವುದಾದರೂ ಒಂದು ಭಯವಿರುತ್ತದೆ. ಅದನ್ನೇ ಹಾಸ್ಯದ ರೂಪದಲ್ಲಿ ಹೇಳಿದರೆ ಅದು ಪ್ರೇಕ್ಷಕರ ಮನಸ್ಸು ಮುಟ್ಟುತ್ತದೆ. 

* ನಿಮ್ಮನ್ನು ಗುರುತಿಸುವಂತೆ ಮಾಡಿದ ಸುಮುಖಿ ಚಾವ್ಲಾ ಪಾತ್ರದ ಬಗ್ಗೆ ಹೇಳಿ. 
‘ಬೆಟರ್‌ ಲೈಫ್‌ ಫೌಂಡೇಷನ್‌’ ನನ್ನ ಮೊದಲ ವೆಬ್‌ ಸಿರೀಸ್‌. ಇದನ್ನು ನವೀನ್‌ ರಿಚರ್ಡ್‌ ನಿರ್ದೇಶನ ಮಾಡಿದ್ದರು. ಇದರಲ್ಲಿ ನಾನು ಸುಮುಖಿ ಚಾವ್ಲಾ ಎಂಬ ಪಾತ್ರ ಮಾಡಿದ್ದೆ.  ಆಗ ನನ್ನ ನಿಜ ವಯಸ್ಸು 30. ಆದರೆ ನಾನು 50 ವರ್ಷದ ಮಹಿಳೆ ಪಾತ್ರ ಮಾಡಿದ್ದೆ. ನನ್ನ ಬಹು ಇಷ್ಟದ ಪಾತ್ರ ಸಹ. ಆ ಮಹಿಳೆ ಎಲ್ಲಾ ವೇಳೆಯಲ್ಲಿಯೂ ಬೇರೆಯವರ ಮೇಲೆ ಸಿಡುಕುತ್ತಾ, ಕೋಪ ಮಾಡಿಕೊಳ್ಳುವ ಪಾತ್ರ. ನನ್ನ ವಯಸ್ಸಿಗೆ ಮೀರಿದ ಪಾತ್ರವನ್ನು ನಾನು ಖುಷಿಯಿಂದ ಮಾಡಿದ್ದೆ. 

* ನಿಮ್ಮ ಹಾಸ್ಯಕ್ಕೆ ವಸ್ತು ಏನು?
ನಾನು ಅಮೆರಿಕದ ಟೀನಾ ಫೇ, ಬಿಲ್‌ಬಾರ್‌ ಅವರ ಹಾಸ್ಯಪ್ರದರ್ಶನಗಳನ್ನು ಜಾಸ್ತಿ ನೋಡುತ್ತೇನೆ. ಅವರ ಷೋ ನೋಡುತ್ತಾ ನಮ್ಮ ಸುತ್ತ ಹಾಸ್ಯಕ್ಕೆ ಒದಗುವ ವಸ್ತುಗಳು, ಜನರ ಮನೋಭಾವ ಅರಿಯುವ ಪ್ರಯತ್ನಿಸುತ್ತೇನೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ರೋಲ್‌ ಪೇಜ್‌ ಇರುವುದರಿಂದ ರೆಡಿಮೇಡ್‌ ಜೋಕ್‌ಗಳನ್ನು ಹೇಳಲಾಗುವುದಿಲ್ಲ. ನಾನು ನನ್ನ ವೈಯಕ್ತಿಕ ಬದುಕಿನ ಸಂಗತಿಗಳನ್ನೇ ಹಾಸ್ಯದೊಂದಿಗೆ ಕನೆಕ್ಟ್‌ ಮಾಡುತ್ತೇನೆ. ನಾನು ತಮಿಳುನಾಡಿನವಳು. ಆದರೆ ನಾಗ್ಪುರದಲ್ಲಿ ಇದ್ದೇನೆ. ಎರಡರ ಸಂಸ್ಕೃತಿ, ಭಾಷೆ, ಆಹಾರ, ವಿಚಾರ ಬೇರೆ ಬೇರೆಯಾಗಿರುವುದರಿಂದ ಬೇಕಾದಷ್ಟು ವಿಷಯಗಳು ಹಾಸ್ಯಕ್ಕೆ ಸಿಗುತ್ತವೆ. ನನ್ನ ಅಮ್ಮ ತುಂಬಾ ಸ್ಟ್ರಿಕ್ಟ್‌. ಸ್ವತಂತ್ರ ವಾಗಿರಬೇಕೆಂದು ಬಯಸುವ ನಾನು ಅವಳ ಬಳಿ ನಡೆದುಕೊಳ್ಳುವ ವಿಷಯಗಳೇ ನನ್ನ ಹಾಸ್ಯಕ್ಕೆ ಒಗ್ಗುತ್ತವೆ.

* ಮಹಿಳೆಯರಿಗೆ ಈ ಕ್ಷೇತ್ರದ ಸವಾಲು?
ಈ ಕ್ಷೇತ್ರದಲ್ಲಿ ಮಹಿಳೆಯಾಗಿರುವುದೇ ದೊಡ್ಡ ಸವಾಲು. ಮೊದಲು ಎಲ್ಲರೂ ‘ಫಿಮೇಲ್‌ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌’ ಎಂದು ವಿಚಿತ್ರವಾಗಿ ನೋಡುತ್ತಿದ್ದರು. ಆದರೆ ಈಗ ತುಂಬ ಮಹಿಳೆಯರು ಈ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವುದು ಉತ್ತಮ ಬೆಳವಣಿಗೆ.  

‘ಹಂಬಲ್‌ ಪೊಲಿಟಿಷಿಯನ್‌ ನೊಗ್ರಾಜ್‌’ ಸಿನಿಮಾದಲ್ಲೂ ನಟಿಸಿದ್ದೀರಿ?
ಅದು ಪಿಕ್‌ನಿಕ್‌ ಅನುಭವದಂತಿತ್ತು. ನೊಗ್ರಾಜ್‌ ಪತ್ನಿ ಪಾತ್ರದಲ್ಲಿ ನಟಿಸಿದ್ದೆ. ಕಪಟ ರಾಜಕಾರಣಿ ಮೂಲಕ ಇಂದಿನ ರಾಜಕೀಯ ಸ್ಥಿತಿ ವಿಡಂಬನೆ ಮಾಡುವ ಹಾಸ್ಯಮಯ ಚಿತ್ರ. ದ್ಯಾನೀಶ್‌ ಸೇಠ್‌, ಸಾದ್‌ ಖಾನ್ ಹಾಗೂ ನಾನು ಅದಕ್ಕಿಂತ ಮುಂಚೆ ‘ದ ಇನ್‌ಫ್ರಾ’ ಹಾಸ್ಯ ಷೋನಲ್ಲಿ ಒಟ್ಟಿಗೆ ನಟಿಸಿದ್ದರಿಂದ ಆ ತಂಡದಲ್ಲಿ ಕೆಲಸ ಮಾಡುವುದು ನನಗೆ ಕಷ್ಟವೆನಿಸಲಿಲ್ಲ

***

‘ಪುಷ್ಪವಲ್ಲಿ’ ವೆಬ್‌ಸಿರೀಸ್‌ ಬಗ್ಗೆ ಹೇಳಿ

ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ‘ಪುಷ್ಪವಲ್ಲಿ’ ವೆಬ್‌ಸೀರಿಸ್‌ ನನ್ನ ಫೇವರಿಟ್‌ ಷೋ. ಇದನ್ನು ನಿರ್ದೇಶನ ಮಾಡಿದ್ದು ನಾನೇ. ಚಿತ್ರಕತೆ ಕೂಡ ನನ್ನದೇ. ಇದು ಇಂಗ್ಲಿಷ್‌, ಹಿಂದಿ, ಕನ್ನಡ, ತಮಿಳು ಭಾಷೆಯಲ್ಲಿ ಪ್ರಸಾರವಾಗಿತ್ತು. ಇದರಲ್ಲಿ ನನ್ನದು ಭೋಪಾಲ್‌ನಲ್ಲಿ ನೆಲೆಸಿರುವ ತಮಿಳು ಬ್ರಾಹ್ಮಣ ಮಹಿಳೆಯ ಪಾತ್ರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)