ಶುಕ್ರವಾರ, ಸೆಪ್ಟೆಂಬರ್ 17, 2021
22 °C

ಕಾಡಿನ ಅಮ್ಮಂದಿರ ಒಡಲ ಹಾಡು

ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

Prajavani

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಿದ್ದಿ, ಕುಣುಬಿ, ಗೌಳಿ, ಕುಂಬ್ರಿ ಮರಾಠಿಗಳ ಸಾವಿರಾರು ಕುಟುಂಬಗಳಿವೆ. ಕಾಡಿನ ಸಾಂಗತ್ಯದಲ್ಲಿ ಬದುಕು ಕಟ್ಟಿಕೊಂಡಿರುವ ಅವರದು ಬಡತನ ಹೊದ್ದ ಸವಾಲಿನ ಬದುಕು. ಒಗ್ಗರಣೆ ಡಬ್ಬಿ ಖಾಲಿಯಾದರೂ, ಘಮದ ಅಡುಗೆ ತಯಾರಿಸಿ ಕುಟುಂಬ ನಿರ್ವಹಣೆ ಮಾಡುವವರು ಮಹಿಳೆಯರು. ತಲ್ಲಣಗಳನ್ನು ಅವಿತಿಟ್ಟುಕೊಂಡು, ಮಕ್ಕಳಿಗೆ ವಾತ್ಸಲ್ಯದ ಹೊನಲು ಹರಿಸುವ ಕರುಣಾಮಯಿ ಈ ತಾಯಂದಿರು, ಸ್ವಾಭಿಮಾನ, ಸ್ವಾವಲಂಬನೆ ಕಲಿಸುವ ಜೀವನ ಕೌಶಲದ ಶಿಕ್ಷಕಿಯರು...

***

ಸದಾ ತೂಗುವ ತೊಟ್ಟಿಲುಗಳು, ಜೋಗುಳ ಹಾಡುವ ತಾಯಂದಿರು... ಆದರೆ, ಅಳುವ ಶಿಶುವಿನ ಸಾಂತ್ವನಕ್ಕೆ ತೊಟ್ಟಿಲ ಹಾಡನ್ನು ಇಲ್ಲಿನ ಎಲ್ಲ ತಾಯಂದಿರೂ ಪೂರ್ತಿ ಹಾಡುವುದಿಲ್ಲ. ಹಲಸಿನ ತೊಳೆಯಂತಹ ಶಿಶುಗಳು ಒಡಲು ಜಾರಿ ಮಡಿಲೇರಿದ ಬಳಿಕ ಸಾವಿನ ಮಡಿಲು ಸೇರುವ ಹೊತ್ತಿನಲ್ಲಿ ಹಾಡುಗಳಾದರೂ ಹೇಗೆ ಹುಟ್ಟುತ್ತವೆ?

ಉತ್ತರ ಕನ್ನಡ ಜಿಲ್ಲೆಯ ವನವಾಸಿಗಳಾದ ಗೌಳಿಗಳ ಬದುಕನ್ನು ಬಲು ಹತ್ತಿರದಿಂದ ಬಲ್ಲ ಶಿವಾನಂದ ಕಳವೆ ಮುಂದಿಡುವ ಪ್ರಶ್ನೆ ಇದು. ಹೌದು, ತೊಟ್ಟಿಲು ತೂಗುವುದು ನಿಂತ ಬಳಿಕ ಗುಡಿಸಲುಗಳಲ್ಲಿ ಅರ್ಧ ಹಾಡು ಸ್ತಬ್ಧ. ದುಃಖ ವಿರಾಮದ ಮಧ್ಯೆ ತಾಯಂದಿರು ಮತ್ತೆ ಹೆರಲು ಸಜ್ಜು. ಈ ಸಾರಿಯಾದರೂ ತೊಟ್ಟಿಲ ಹಾಡನ್ನು ಪೂರ್ತಿ ಹಾಡಬೇಕೆಂಬ ಕನಸು. ಈ ಆಟಕ್ಕೆ ಕೊನೆ ಮೊದಲೆನ್ನುವುದೇ ಇಲ್ಲ.

ಕ್ವಾಣಮಡ್ಡಿ ಎಂಬ ಊರಿನ ಬಾಗೂಬಾಯಿ ಒಂದಾದ ಮೇಲೊಂದರಂತೆ ಎಂಟು ಮಕ್ಕಳನ್ನು ಹೆತ್ತರೆ ಆರು ಮಕ್ಕಳು ಹುಟ್ಟಿದ ತಕ್ಷಣ ಸತ್ತಿವೆ. ಇಂತಹ ನೋವಿನ ಕಥೆಗಳು ಈ ಊರಿನ ಪ್ರತಿ ಗುಡಿಸಲಿನಲ್ಲೂ ಸಿಗುತ್ತವೆ. ಆದರೆ, ದಕ್ಕಿದ ಮಕ್ಕಳನ್ನು ಕಾಂಗರೂ ತನ್ನ ಮರಿಯನ್ನು ಎದೆಯ ಚೀಲದಲ್ಲಿ ಕೂರಿಸಿಕೊಳ್ಳುವಂತೆ 6–7 ಗಂಟೆಗಳವರೆಗೆ ಎದೆಗವಚಿ ಕಟ್ಟಿಕೊಂಡು ದುಡಿಮೆಯಲ್ಲಿ ತೊಡಗುವ ಈ ಅಮ್ಮಂದಿರ ವಾತ್ಸಲ್ಯಕ್ಕೆ ಬೇರೆ ಸಾಟಿಯುಂಟೆ?

ಈಗ ತುಸು ಇತ್ತ ಬನ್ನಿ. ‘ನನ್ನವ್ವ ಬದುಕಿದ್ದು ಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ’ ಎಂಬ ಲಂಕೇಶರ ‘ಅವ್ವ’ ಕವಿತೆಯ ಪುಟವನ್ನು ಕಣ್ಣಮುಂದೆ ತೆರೆದಿಟ್ಟ ಊರು ಇದು. ಅಲ್ಲಿನ ಕೊಂಚ ಗಡಸು ದನಿಯ ವಾತ್ಸಲ್ಯಮಯಿ ‘ಅಮ್ಮಂದಿರು’ ಲಂಕೇಶರ ಅವ್ವನ ಪಡಿಯಚ್ಚಿನಂತೆ. ಮನೆ, ಮಕ್ಕಳು, ಸಂಸಾರ, ದುಡಿಮೆಯ ಮಂದ್ರ ಹರಿವಿನ ಚೇತನ ಅವರು.

ಪಟ್ಟಣದ ಮಕ್ಕಳು ಬೇಸಿಗೆ ರಜೆಯಲ್ಲಿ ಶಿಬಿರಕ್ಕೆ ಹೋಗಿ ಕ್ರಾಫ್ಟ್, ಡಾನ್ಸ್, ಹಾಡು, ಚಿತ್ರಕಲೆ, ಭಾಷಣ ಕಲೆ, ವ್ಯಕ್ತಿತ್ವ ವಿಕಸನ ಇಂತಹ ರೆಡಿಮೇಡ್ ಸಂಗತಿಗಳನ್ನು ಕಲಿಯುತ್ತಾರೆ. ಈ ಊರಿನ ಮಕ್ಕಳು ರಜೆಯಲ್ಲಿ ತುಂಬಿದ ಕೊಡ ಹೊತ್ತು ತರುವ, ಸೆಗಣಿ ಹಾಕಿ ಅಂಗಳ ಸಾರಿಸುವ, ಬೆಂಕಿಒಲೆಯ ಹೊಗೆಗೆ ಕಣ್ಣನ್ನು ಹೊಂದಿಸಿಕೊಳ್ಳುವ, ಕೋಲು ಕಟ್ಟಿಗೆಯ ಭಾರಕ್ಕೆ ತಲೆಯನ್ನು ಒಗ್ಗಿಸಿಕೊಳ್ಳುವ, ಮರ ಹತ್ತಿ ಹಣ್ಣು ಕೊಯ್ಯುವುದನ್ನೆಲ್ಲ ಕಲಿಯುತ್ತಾರೆ. ಬೋರ್ಡ್ ಇಲ್ಲದ ಈ ‘ಜೀವನ ಕಲೆ’ಯ ಶಿಬಿರಕ್ಕೆ ಅಮ್ಮಂದಿರೇ ತರಬೇತುದಾರರು.

ಯಲ್ಲಾಪುರ ತಾಲ್ಲೂಕು ಉಮ್ಮಚಗಿಯಿಂದ ಒಳಗೆ ಅನತಿ ದೂರದಲ್ಲಿ ಕೋಟೆಮನೆಯೆಂಬ ಊರಿದೆ. ಕಾಡಿನ ಏಕತಾನತೆ ದಾರಿಯನ್ನು ದಾಟಿದರೆ ಧುತ್ತನೆ ಈ ಪುಟ್ಟ ಊರು ಎದುರಾಗುತ್ತದೆ. ರಸ್ತೆಬದಿಯ ಒಂದೋ ಎರಡೋ ಗುಂಟೆ ಜಾಗದಲ್ಲಿ ಸಿದ್ದಿಗರು ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಈ ಮನೆಗಳ ಸಾಲಿನಲ್ಲಿ ಲಕ್ಷ್ಮಿ ಸಿದ್ದಿ ಅವರದು ಬಹುಶಃ ಕೊನೆಯ ಮನೆ. ಜಗುಲಿ ಕಟ್ಟೆಗೆ ಬಂದು ಕುಳಿತ ಲಕ್ಷ್ಮಕ್ಕ ಅವರು, ‘ಹೆಂಗಸ್ರೆಲ್ಲ 8.30 ಅಂದ್ರೆ ಕೆಲ್ಸಕ್ಕೆ ಹೋಗಿ ಬಿಡ್ತಾರೆ. ಮತ್ ಸಂಜೆ ಬರುದು 5 ಗಂಟೆ ಮೇಲೇಯಾ. ಮಕ್ಳ್ ಇಲ್ಲೇ ಆಡ್ತಾ ಇರ್ತಾವೆ. ಬೆಟ್ಟದ ಮುಳ್ಳೆ ಹಣ್ಣು, ಸಂಪಿಗೆ ಹಣ್ಣು ಮುಗೀತು, ಈಗ ನುರುಕಲು ಹಣ್ಣು ಆಗ್ತದೆ. ಕಣ್ತಪ್ಪಿಸಿ ಕಾಡಿಗೆ ಹೋದ್ರೆ, ಎಷ್ಟೊತ್ತಿಗೆ ಬರ್ತಾವೊ ಗೊತ್ತಾಗುದಿಲ್ಲ. ಈ ಸಣ್ ಸಣ್ ಮಕ್ಕಳು ಮರ ಹತ್ತಿ ಬಿದ್ಕೊಂಡ್ರೆ ಅಂತ್ ಭಯ, ಅದಕ್ಕಾಗಿ ಕೆಲ್ಸ ಬಿಟ್ಕೊಂಡ್ ಕೂತ್ಕೊಂಡ್ರೆ ಹೆಂಗಸ್ರಿಗೆ ಆಗ್ತದಾ’ ಎಂದು ಪ್ರಶ್ನಿಸುತ್ತಲೇ ಮಾತಿಗಿಳಿದರು.

‘ಕಟ್ಟುಕೊಂಡವ ಚಲೊ ಇದ್ದರೆ ಅಡ್ಡಿಲ್ಲ. ಬಡತನದಲ್ಲಿ ಚಿಪ್ಪು ಗಂಜಿ ತಿನ್ನುವುದಾದ್ರೂ ಅಡ್ಡಿಲ್ಲ, ನೆಮ್ಮದಿ ಇದ್ರೆ ಸಾಕು. ದುಡಿದ ಹಣ ಪೂರಾ ಕುಡಿತಕ್ಕೇ ಹೋದ್ರೆ, ಗಂಡನೆಂಬ ಪೌರುಷ ಮನೆಗೆ ಬರುವಾಗಲೇ ಟೈಟ್ ಆಗಿ ಬಂದ್ರೆ ಏನ್ಮಾಡೋದು? ಮಣ್ಣಲ್ಲಿ ಬದುಕುವ ನಮ್ ಹೆಣ್ಮಕ್ಳಿಗೆ ಅದರದೇ ತೇವದ ಗುಣ. ಒರಟು ಮುಖವಾಡದ ನಮ್ ಹೆಂಗಸ್ರದ್ದು ಆರ್ದ್ರ ಮನಸ್ಸು. ಕೂಲಿ ಹಣ ಕಾಪಿಟ್ಟುಕೊಂಡು ಮನೆಗೆ ಕಾಳುಕಡಿ, ಮಕ್ಳಿಗೆ ಅಂಗಿ ಚಡ್ಡಿ, ಚಪ್ಪಲು, ಚಾಕೊಲೇಟು ತಂದು ನಿರುಮ್ಮಳವಾಗುತ್ತಾರೆ’ ಎಂದು ಲಕ್ಷ್ಮಕ್ಕ ನಿರ್ಭಾವುಕರಂತೆ ಮಾತನಾಡುತ್ತ ನಡೆದಾಗ, ಮತ್ತದೇ ಲಂಕೇಶರ ‘ಅವ್ವ’ನ ನೆನಪು.


ಕೋಟೆಮನೆ ಊರಿನ ಅಮ್ಮ ಮತ್ತು ಮಕ್ಕಳು

ಶ್ರಮ ಸಂಸ್ಕೃತಿಯ ಎಲ್ಲ ಸಮಯದಾಯಗಳಲ್ಲೂ ಮಹಿಳೆಯರದು ಇದೇ ಪಾತ್ರ. ಮೀಸೆಯಡಿಗಿನ ದರ್ಪವನ್ನು ಸಹಿಸಿಕೊಂಡು, ನೋವನ್ನೆಲ್ಲ ತನ್ನೊಳಗೇ ಕರಗಿಸಿಕೊಂಡು, ತಲ್ಲಣ, ತಳಮಳನ್ನೆಲ್ಲ ಮನದೊಳಗೆ ಮಡಚಿಟ್ಟು, ಬೆಳಗಾದರೆ ತೋಟ– ಗದ್ದೆ, ಕೂಲಿ ಕೆಲಸಕ್ಕೆ ಹೋಗಿ, ಮುಸ್ಸಂಜೆ ಮನೆಗೆ ಬಂದು ಒಲೆಗೆ ಬೆಂಕಿಯಿಟ್ಟು ಅಂಬಲಿ ಮಾಡಿ ಸಂಸಾರಕ್ಕೆ ಸಾಥಿಯಾಗುವರು. ಬೇರು, ಗಡ್ಡೆ, ಎಲೆ, ಕಾಯಿ, ಬೀಜದ ಮಹತ್ವ ಗುರ್ತಿಸಿರುವ ಈ ಕಾಡಿನ ಅಮ್ಮಂದಿರು, ಮಕ್ಕಳು ಕಾಯಿಲೆ ಇಲ್ಲದೆ ಬೆಳೆಯಲು ಯಾವ ಋತುಮಾನದಲ್ಲಿ ಏನನ್ನು ತಿನ್ನಿಸಬೇಕು ಎಂಬ ವಿದ್ಯೆಯನ್ನು ಕರಗತ ಮಾಡಿಕೊಂಡವರು. ಮಕ್ಕಳ ಒಳಿತಿಗಾಗಿ ಕಾಡಿನಲ್ಲಿ ದಿನವಿಡೀ ಅಲೆದಾಡಿ ಗಡ್ಡೆ–ಗೆಣಸು ಆಯ್ದು ತರಲು ಎಳ್ಳುಕಾಳಿನಷ್ಟೂ ಬೇಸರವಿಲ್ಲ.

ಕನ್ನಡ ಚಲನಚಿತ್ರ ನಟಿ, ಪುಗಡಿ ನೃತ್ಯ ಕಲಾವಿದೆ ಲಕ್ಷ್ಮಿ ಸಿದ್ದಿ ಬರೀ ಕೇರಿಯ ಕತೆ ಹೇಳುತ್ತಿರಲಿಲ್ಲ. ಸಮುದಾಯದ ಪ್ರತಿನಿಧಿಯಂತೆ ಮಾತನಾಡುತ್ತಿದ್ದರು. ‘ನಾವೆಲ್ಲ ಸಣ್ಣ ಇರುವಾಗ ಅಂಗನವಾಡಿ ಇರಲಿಲ್ಲ. ಕೆಲಸಕ್ಕೆ ಹೋಗುವ ಅಮ್ಮನ ಸೆರಗನ್ನು ಹಿಂಬಾಲಿಸುತ್ತಿದ್ದೆವು. ಕಾಲಿಗೆ ಚಪ್ಪಲೂ ಇಲ್ಲದ ನಾವು ಬಿಸಿಲನ್ನೇ ಕರಗಿಸುತ್ತಿದ್ದ ಅಮ್ಮನಿಗೆ ಸಹಾಯ ಮಾಡುತ್ತಿದ್ದೆವು. ಈಗ ಮೊಮ್ಮಕ್ಕಳೆಲ್ಲ ಶಾಲೆಗೆ ಹೋಗುತ್ತಾರೆ. ಆದರೆ, ರಜೆಯಿದ್ದಾಗ ಈ ಮಕ್ಕಳು ಅಮ್ಮನ ಅಡುಗೆಮನೆ, ಹಿತ್ತಲು, ತೋಟದ ಪಾಠಶಾಲೆಯ ವಿದ್ಯಾರ್ಥಿಗಳು. ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಗಂಡು ಮಕ್ಕಳಿಗೂ ನಾವು ಎಲ್ಲ ಕೆಲಸ ಕಲಿಸಿಬಿಡುತ್ತೇವೆ. ಬದುಕಲು ಇದಕ್ಕೂ ಮಿಕ್ಕಿ ಇನ್ನೇನು ಬೇಕು’ ಎಂದಾಗ ಅಲ್ಲಿ ವಾಸ್ತವವೇ ನಿರುತ್ತರ. 

ಅಲ್ಲೇ ಪಕ್ಕದಲ್ಲಿ ಪುಟ್ಟ ಬಾಲೆ ಗೊಂಬೆಗೆ ಟವೆಲ್ ಸುತ್ತಿಕೊಂಡು ತಾಯಿ–ಮಗುವಿನ ಆಟವಾಡುತ್ತಿದ್ದಳು. ಅವಳ ಅಮ್ಮ ಮಗುವನ್ನು ಜೋಪಾನವಾಗಿ ಎತ್ತಿಕೊಳ್ಳಲು ಕಲಿಸುತ್ತಿದ್ದರು. ‘ಈ ಹುಡುಗಿಗೆ ನೋಡಿ ಏಳು ವರ್ಸ. ಅಮ್ಮನಿಗೆ ಎಲ್ಲ ಕೆಲ್ಸ ಮಾಡಿ ಕೊಡ್ತದೆ. ನೆಲ ಸಾರಿಸ್ತಾಳೆ, ಪಾತ್ರೆ ತೊಳಿತಾಳೆ. ಮಧ್ಯಾಹ್ನ ಪುಟ್ಟ ತಂಗಿಗೆ ‘ಅಮ್ಮ’ನಾಗಿ ಊಟ ಬಡಿಸುತ್ತಾಳೆ’ ಎಂದು ರೇಣುಕಾ ಸಿದ್ದಿ ಮತ್ತು ಅವಳ ಮಗಳು ಮಮತಾಳನ್ನು ಪರಿಚಯಿಸಿದರು ಲಕ್ಷ್ಮಿ.

ಸಣ್ಣ ಗುಡಿಸಲಿನಲ್ಲಿ ನೆಲದ ಮಣ್ಣಿನ ವಾಸನೆಯಲ್ಲಿ ಬೆಳೆದ ಮಮತಾ ಮತ್ತು ಅವಳ ತಂಗಿ ಪ್ರೀತಿಗೆ ಅಮ್ಮನೇ ಜಗತ್ತಿನ ವಿಸ್ಮಯ. ಸದಾ ಚಲನಶೀಲವಾಗಿರುವ ಅಮ್ಮನನ್ನು ಅನುಸರಿಸುವ ಮಕ್ಕಳು, ಅಮ್ಮ ಮಾಡುವ ಕೆಲಸವನ್ನೆಲ್ಲ ಸಲೀಸಾಗಿ ಮಾಡುತ್ತಾರೆ. ‘ದೊಡ್ಡ ಮಗಳಿಗೆ ಬಟ್ಟೆಯನ್ನು ತೊಳೆದುಕೊಟ್ಟಿದ್ದೇ ನೆನಪಿಲ್ಲ. ತೊದಲು ಹೆಜ್ಜೆ ಹಾಕುವಾಗಲೇ ಕಸಬರಿಗೆ ಹಿಡಿದು ಅಂಗಳ ಗುಡಿಸುತ್ತಿದ್ದಳು’ ಎನ್ನುತ್ತ ರೇಣುಕಾ ಹೆಮ್ಮೆಯಿಂದ ಮಗಳ ತಲೆನೇವರಿಸಿದರು.

ಎರಡನೇ ಕ್ಲಾಸಿನ ಬಾಲೆಗೆ ಸ್ವತಂತ್ರವಾಗಿ ಬದುಕುವ, ಸವಾಲುಗಳನ್ನು ಮೆಟ್ಟಿನಿಲ್ಲುವ ಛಲ ಬೆಳೆಸಿದ್ದು ಆಕೆಯ ಅಮ್ಮ. ಸಮಸ್ಯೆಗಳಿಗೆಲ್ಲ ಆಕಾರ ಕೊಟ್ಟು, ಅದರ ಅಳತೆ ಮೀರಿ ಚಿಂತಿಸದ ಆಕೆ ಬದುಕನ್ನು ನೀರಿನಂತೆ ಸ್ವೀಕರಿಸಿದವರು. ಎಲ್ಲಿ ಸುರಿದರೂ ಅದಕ್ಕೆ ಹೊಂದಿಕೊಂಡು, ಮಕ್ಕಳಲ್ಲೂ ಮತ್ತದೇ ಗುಣವನ್ನು ಬಿತ್ತುವ ಪರಿ ಬಹುಶಃ ಅಮ್ಮನಿಗೆ ಮಾತ್ರ ಗೊತ್ತು. ಅಸ್ಮಿತೆಯ ಗೊಡವೆಯಿಲ್ಲದೇ, ಬದುಕಿನ ಓಟದ ನೊಗ ಹೊತ್ತ ಲಕ್ಷ್ಮಿ, ರೇಣುಕಾರಂತಹ ನೂರಾರು ಅಮ್ಮಂದಿರು ಸಮಾಜದ ನಡುವೆ ಇದ್ದಾರೆ.

‘ನಮ್ಮ ಸಂಪ್ರದಾಯವೇ ಹಾಗೆ. ಹೈಸ್ಕೂಲ್ ಮುಗಿಯುವುದರೊಳಗೆ ಮಕ್ಕಳಿಗೆ ಎಲ್ಲ ಕೆಲಸವನ್ನೂ ಕಲಿಸಿ ಬಿಡಬೇಕು. ಅದು ಗಂಡಿರಲಿ, ಹೆಣ್ಣಿರಲಿ, ಅನ್ನ ಬೇಯಿಸಿಕೊಳ್ಳಲಾದರೂ ಬರಬೇಕಲ್ಲ’ ಇದು ಲಕ್ಷ್ಮಿಯೊಬ್ಬರ ಮಾತಲ್ಲ, ಅಲ್ಲಿದ್ದ ಎಲ್ಲ ಅಮ್ಮಂದಿರ ಅಭಿಪ್ರಾಯವೂ ಇದೇ ಆಗಿತ್ತು.

‘ದುಡಿದು ಬಂದು ಮನೆಚಾಕರಿ ಮುಗಿಸುವ ಹೊತ್ತಿಗೆ ಕತ್ತಲು ಹೊದ್ದುಕೊಳ್ಳುತ್ತದೆ, ನಿದ್ದೆ ಎಳೆದುಕೊಳ್ಳುತ್ತದೆ. ಪೇಟೆ ಮಕ್ಕಳೆಲ್ಲ ಅದೇನೋ ಟ್ಯೂಷನ್ ಹೋಗ್ತಾರಂತೆ. ನಮ್ಮ ಮಕ್ಕಳಿಗೆ ಅದರ ಗಂಧವೂ ಗೊತ್ತಿಲ್ಲ. ಅವರು ಕಲಿತಷ್ಟು ಕಲಿಯಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ. ಪ್ರಕೃತಿ ಹಾಗೂ ಅಮ್ಮ ಕಲಿಸಿದ ಪಾಠಕ್ಕೆ ಬೇರೆ ಸಾಟಿಯುಂಟೇ’ ಎಂದ ರೇಣುಕಾ ಮಾತಿನಲ್ಲಿ ಬದುಕಿನ ಅಧ್ಯಾತ್ಮವಿತ್ತು.

ಅಲ್ಲೇ ಅಂಗಳದಲ್ಲಿ ಬಿದ್ದುಕೊಂಡಿದ್ದ ಕರಪತ್ರದಲ್ಲಿ ‘ಎಂಟು ದಿನಗಳಲ್ಲಿ ಇಂಗ್ಲಿಷ್ ಕಲಿಯಿರಿ’ ಎಂದು ಬರೆದಿತ್ತು. ಅಂಗಳ ಗುಡಿಸುತ್ತಿದ್ದ ಮಮತಾ, ಅದನ್ನು ಕಸದ ಮೂಲೆಗೆ ಸೇರಿಸಿ ಅಮ್ಮನ ಕರೆಯುತ್ತ ಮನೆಯೊಳಗೆ ಓಡಿದಾಗ, ಗೋಡೆಯ ಬಿರುಕಿನಲ್ಲಿ ತೂರಿ ಬರುತ್ತಿದ್ದ ಬೆಳಕಿನಲ್ಲಿ ಅಮ್ಮ–ಮಗಳ ಕೆನ್ನೆಯಲ್ಲಿ ಮುಗುಳ್ನಗು ಮಿನುಗುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು