ಮಂಗಳವಾರ, ಏಪ್ರಿಲ್ 7, 2020
19 °C

ಸೌರಭ–2020 ವಿದ್ಯಾರ್ಥಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತ ಯಾತ್ರಾ ಕೇಂದ್ರ ಹಾಗೂ ರಂಗಸೌರಭ ಸಹಯೋಗದಲ್ಲಿ ಫೆ.2ರಿಂದ 10ರವರೆಗೆ ‘ಸೌರಭ–2020 ವಿದ್ಯಾರ್ಥಿ ಉತ್ಸವ’ ನಡೆಯಲಿದೆ. ರವೀಂದ್ರ ಕಲಾಕ್ಷೇತ್ರ ಮತ್ತು ನಯನ ಸಭಾಂಗಣದಲ್ಲಿ ನಡೆಯಲಿರುವ ಈ ಉತ್ಸವದಲ್ಲಿ ಹತ್ತಾರು ಕಾಲೇಜುಗಳು ನೋಂದಣಿ ಮಾಡಿಕೊಂಡಿವೆ. ಆಯಾ ಕಾಲೇಜುಗಳು ಸಿದ್ಧಪಡಿಸಿದ ನಾಟಕ, ಮತ್ತಿತರ ಸಾಂಸ್ಕೃತಿಕ ಸ್ಪರ್ಧೆಗಳು ಇಲ್ಲಿ ನಡೆಯಲಿವೆ.

ಕಳೆದ ಮೂರು ದಶಕಗಳಿಂದ ಭಾರತ ಯಾತ್ರಾ ಕೇಂದ್ರ ‘ಜ್ಞಾನಭಾರತಿ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನಾಟಕ ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತ ಬಂದಿದೆ. ಒಂದೆರಡು ವರ್ಷಗಳ ಕಾಲ ನಿಂತಿದ್ದು ಬಿಟ್ಟರೆ ಉಳಿದ ಅಷ್ಟೂ ವರ್ಷಗಳ ಕಾಲ ಸಂಭ್ರಮದಿಂದ ನಡೆದಿವೆ. ‘ಸೌರಭ 2020 ವಿದ್ಯಾರ್ಥಿ ಉತ್ಸವ’ ಅದರ ಮುಂದುವರಿದ ಭಾಗ. ಪಾಲ್ಗೊಂಡ ಯುವ ರಂಗಕರ್ಮಿಗಳು ಈ ಮೂಲಕ ತಮ್ಮ ಭವಿಷ್ಯವನ್ನು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾಗಳಲ್ಲಿ ಕಂಡುಕೊಂಡಿದ್ದು ಇದರ ಹೆಗ್ಗಳಿಕೆ.

ಭಾರತ ಯಾತ್ರಾ ಕೇಂದ್ರ ಯುವಪ್ರತಿಭೆಗಳಿಗೆ ಇಂಥದೊಂದು ವೇದಿಕೆ ಒದಗಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ. ಬಿ.ಎಲ್‌. ಶಂಕರ್‌ ಅವರು ಶುರುವಿನಿಂದಲೇ ಇದರ ಅಧ್ಯಕ್ಷತೆ ವಹಿಸಿದವರು. ಇವರೊಂದಿಗೆ ಸಿಜಿಕೆ ಅವರಲ್ಲದೇ ಜಗದೀಶ ಜಾಲ, ನರೇಂದ್ರ ಬಾಬು, ವೇಣು ನೆಪೋಲಿಯನ್‌, ಸರ್ವೇಶ, ರಘು, ಧನಂಜಯ, ರಾಜಕುಮಾರ್‌ ಅವರಂಥ ಘಟಾನುಘಟಿ ರಂಗಕರ್ಮಿಗಳು ಮತ್ತಿತರರು ಜತೆಗಿದ್ದವರು.

ಉತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ರಂಗಪ್ರೇಕ್ಷಕರಾಗುವ ಪರಿಯೂ ಅದ್ಭುತ. ಸಕ್ರಿಯವಾಗಿ ಪಾಲ್ಗೊಂಡ ಎಷ್ಟೋ ಯುವಕರು ರಂಗಭೂಮಿಯಲ್ಲಿ ತಮ್ಮನ್ನು ಗಂಭೀರವಾಗಿ ತೊಡಗಿಸಿಕೊಂಡು ಹೆಸರಾಗಿದ್ದಾರೆ ಎಂದು ಭಾರತ ಯಾತ್ರಾ ಕೇಂದ್ರದ ಪ್ರಧಾನ ಕಾರ್ಯದರ್ಶಿ, ಕೆ.ವಿ. ನಾಗರಾಜ್‌ ಮೂರ್ತಿ ‘ಮೆಟ್ರೊ’ಗೆ ವಿವರಿಸಿದರು. 

ಇಲ್ಲಿ ಪ್ರದರ್ಶಿಸಿದ ನಾಟಕಗಳ ಮೂಲಕವೇ ಅಭಿನಯದ ಪಯಣ ಆರಂಭಿಸಿದ ಯುವಕ, ಯುವತಿಯರು ಕಿರುತೆರೆ ಮತ್ತು ಸಿನೆಮಾಗಳಲ್ಲಿಯೂ ಮಿಂಚುತ್ತಿದ್ದಾರೆ. ಕೆಲವು ಸಿನಿಮಾ ನಾಯಕ ನಟರು ಇದೇ ರಂಗ ಸ್ಪರ್ಧೆಯಿಂದ ಹೊರಹೊಮ್ಮಿದವರು. ಹೀಗಾಗಿ ಅನೇಕ ಯುವ ಪ್ರತಿಭೆಗಳಿಗೆ ಈ ವೇದಿಕೆ ಒಂದು ಚಿಮ್ಮುಹಲಗೆಯಂತೆ ಎಂದರೆ ತಪ್ಪಲ್ಲ ಎನ್ನುತ್ತಾರೆ ನಾಗರಾಜ್‌ ಮೂರ್ತಿ.

ಪ್ರಸಿದ್ಧ ನಾಟಕಕಾರರ ರಂಗಕೃತಿಗಳನ್ನು ಮತ್ತು ತಮ್ಮದೇ ಹೊಸ ಕಲ್ಪನೆಗಳನ್ನು ರಂಗಕ್ಕೆ ಅಳವಡಿಸಿ ಕ್ರಿಯಾಶೀಲತೆಯನ್ನು ಮೆರೆಯುವ ಕಾಲೇಜು ಯುವಕರು ಆ ಮೂಲಕ ತಮ್ಮೊಳಗಿನ ರಂಗಾಸಕ್ತಿಯನ್ನು ಉದ್ದೀಪನಗೊಳಿಸಿಕೊಳ್ಳುತ್ತಾರೆ. ಅವರೊಳಗಿನ ಕಲೆ ಮತ್ತು ಸಾಂಸ್ಕೃತಿಕ ಪ್ರಜ್ಞೆಯನ್ನು ಮತ್ತಷ್ಟು ಜಾಗೃತಗೊಳಿಸುವ ಪ್ರಯತ್ನ ಈ ಉತ್ಸವದ್ದು ಎನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದರು..

ನಾಟಕಗಳ ಸ್ಪರ್ಧೆಯ ಜೊತೆ ದೇಶದ ಜ್ವಲಂತ ಸಮಸ್ಯೆಗಳು ಮತ್ತು ಪ್ರಮುಖ ವಿಷಯಗಳ ಮೇಲೆ ಪ್ರಬಂಧ ಸ್ಪರ್ಧೆ ಕೂಡ ಹಮ್ಮಿಕೊಳ್ಳಲಾಗುತ್ತದೆ. ನಾಟಕ, ಪ್ರಬಂಧ, ರಂಗ ರಸಪ್ರಶ್ನಾವಳಿ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ ಮತ್ತಿತರ ಸ್ಪರ್ಧೆಗಳಿಗೆ ನಗದು ಸೇರಿದಂತೆ ಹಲವು ಪ್ರಶಸ್ತಿ, ಬಹುಮಾನ ಮತ್ತು ಪಾರಿತೋಷಕಗಳೂ ಇವೆ.

ಸರ್ವೋತ್ತಮ ಪಾರಿತೋಷಕ ಸೇರಿದಂತೆ ವೈಯಕ್ತಿಕ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ವಿಜೇತರಿಗೆ ನೀಡಲಾಗುತ್ತದೆ. ನಾಟಕದಲ್ಲಿ ಪ್ರಥಮ ಅತ್ಯುತ್ತಮ ನಾಟಕಕ್ಕೆ 25 ಸಾವಿರ ನಗದು, ದ್ವಿತಿಯ ಸ್ಥಾನಕ್ಕೆ 15 ಸಾವಿರ ಮತ್ತು ತೃತಿಯ ಉತ್ತಮ ನಾಟಕಕ್ಕೆ 10 ಸಾವಿರ ನಗದು ಬಹುಮಾನ ನೀಡಲಾಗುತ್ತದೆ.

ಇದು ಯುವರಂಗಕರ್ಮಿಗಳ ಮಟ್ಟಿಗೆ ಅತ್ಯಂತ ಪ್ರತಿಷ್ಠೆಯ ರಂಗಸ್ಪರ್ಧೆ. ಈ ಸ್ಪರ್ಧೆಯಲ್ಲಿ ಬಾಗವಹಿಸುವುದು ಮತ್ತು ಪ್ರಶಸ್ತಿಗೆ ಭಾಜನರಾಗುವುದು ಕಾಲೇಜು ವಿದ್ಯಾರ್ಥಿಗಳಿಗೆಲ್ಲ ಒಂದು ಪ್ರತಿಷ್ಠೆಯ ವಿಷಯವಾಗಿದೆ. ಪ್ರೇಕ್ಷಕರಾಗಿ ರಂಗಸಂಭ್ರಮವನ್ನು ಸವಿಯುವುದು ಕೂಡ ಯುವಕ, ಯುವತಿಯರಿಗೆ ಒಂದು ರೀತಿಯ ಹಬ್ಬದ ಖುಷಿ ಎನ್ನುತ್ತಾರೆ ನಾಗರಾಜ್‌ ಮೂರ್ತಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು